Sunday, 15th December 2024

ಹೋಯ್..ಅದಾನಿ ಕಥೆ ಏನಾಯ್ತು ?

ವಿದೇಶವಾಸಿ

dhyapaa@gmail.com

ಅದಾನಿಯ ಮಾರುಕಟ್ಟೆಯ ಮೌಲ್ಯ ಐವತ್ತೈದು ಪ್ರತಿಶತ ಕಮ್ಮಿ ಆಯಿತು. ಮೂರು ಸಾವಿರದ ಮುನ್ನೂರರಲ್ಲಿದ್ದ ಅದಾನಿ ಷೇರುಗಳು ಒಂದು ಸಾವಿರದ ಒಂದುನೂರಕ್ಕೆ ಬಂದು ನಿಂತವು. ಅಲ್ಲಿಂದ ಪುನಃ ಚೇತರಿಸಿಕೊಂಡು, ಸದ್ಯ ಇದರ ಬೆಲೆ ಎರಡು ಸಾವಿರದ ಐದುನೂರರ ಆಸುಪಾಸು ನಡೆಯುತ್ತಿದೆ.

ಮೊದಲೇ ಸ್ಪಷ್ಠಪಡಿಸುತ್ತಿದ್ದೇನೆ, ಇದು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಇಲ್ಲಿ ನಾನು ಯಾರನ್ನೂ ಷೇರು ಮಾರುಕಟ್ಟೆಯಲ್ಲಿ, ಅದರಲ್ಲೂ ಅದಾನಿ ಸಂಸ್ಥೆಯಲ್ಲಿ ಹಣ ಹೂಡಲು ಅಥವಾ ಹೂಡದಿರಲು ಹೇಳುತ್ತಿಲ್ಲ.

ಕಾರಣ, ನಮ್ಮ ಊರಿನ ಒಂದು ಸಹಕಾರಿ ಸಂಘಕ್ಕೆ ಸದಸ್ಯತ್ವ ಪಡೆದಿದ್ದು (ಅದನ್ನೇ ಕೆಲವರು ಶೇರು ಎನ್ನುವುದಿದೆ) ಬಿಟ್ಟರೆ ಇದುವರೆಗೆ ಯಾವುದೇ ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್ಸಿ) ಅಥವಾ ಮುಂಬಯಿ ಷೇರು ವಿನಿಮಯ (ಬಿಎಸ್ಸಿ) ಯಲ್ಲಿ ನಾನು ವಹಿವಾಟು ನಡೆಸಲಿಲ್ಲ.

ಕೆಲವು ದಶಕಗಳ ಹಿಂದೆ ಷೇರಿನಲ್ಲಿ ಹಣ ತೊಡಗಿಸಬೇಕು ಎಂದುಕೊಳ್ಳು ವಾಗಲೇ ಹರ್ಷದ್ ಮೆಹ್ತಾ ನಡೆಸಿದ ಗೋಟಾವಳಿ ರಾಷ್ಟ್ರವ್ಯಾಪಿ ಸುದ್ದಿ ಯಾಗಿದ್ದರಿಂದ ಧೈರ್ಯ ಸಾಕಾಗಿರಲಿಲ್ಲ. ಅದೊಂದು ರೀತಿ ಬಿಸಿ ಹಾಲು ಕುಡಿದ ಬೆಕ್ಕಿನ ಕಥೆ ಅಂದುಕೊಂಡರೂ ಅಡ್ಡಿಯಿಲ್ಲ. ಆ ಪುಕ್ಕಲುತನ ಇನ್ನೂ ಇದೆ ಅಂದರೂ ತಪ್ಪಿಲ್ಲ.

ಹಾಗಂತ ಪುಕ್ಕಲುತನ ಇನ್ನೂ ಮುಂದುವರಿಯುತ್ತದೆ ಎನ್ನುವುದೂ ಸರಿಯಲ್ಲ. ನಾನು ಷೇರು ಮಾರುವ ಮಧ್ಯವರ್ತಿಯೂ ಅಲ್ಲ, ನ್ಯಾಯ ಹೇಳುವ ನ್ಯಾಯಾಧೀಶನೂ ಅಲ್ಲ. ಒಂದಷ್ಟು ವಿಷಯ ಹೇಳುತ್ತೇನೆ. ಇದನ್ನು ಮಾಹಿತಿ ಅಂದುಕೊಳ್ಳಿ, ವರದಿ
ಅಂದುಕೊಳ್ಳಿ ಅಥವಾ ಕಥೆ ಅಂದುಕೊಳ್ಳಿ. ನಿರ್ಣಯ ನಿಮಗೆ ಬಿಟ್ಟದ್ದು. ನೇರವಾಗಿ ವಿಷಯಕ್ಕೆ ಬರೋಣ. ಗೌತಮ್ ಅದಾನಿ ಎಲ್ಲರೂ ಕೇಳಿರುವ ಹೆಸರು. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಎಂದೆನಿಸಿಕೊಂಡ ಮುಕೇಶ್ ಅಂಬಾನಿಯನ್ನೂ ಮೀರಿಸಿ, ಭಾರತದಲ್ಲಷ್ಟೇ ಅಲ್ಲ, ಏಷ್ಯಾದ ಅತಿ ಶ್ರೀಮಂತ ಎಂಬ ಹೆಸರಿಗೂ ಪಾತ್ರರಾದವರು ಅದಾನಿ. ಕಾಲೇಜ್ ಡ್ರಾಪ್‌ಔಟ್ ಅದಾನಿಯ ಹೆಸರು ಹೆಚ್ಚು ಚರ್ಚೆಯಾದದ್ದು ೨೦೧೬ ರಲ್ಲಿ.

ಆಗ ಮೊದಲ ಬಾರಿ ಫೋರ್ಬ್ಸ್ ಸಂಸ್ಥೆಯ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಹತ್ತನೆಯವರಾಗಿ ಅವರ ಹೆಸರು ಕಾಣಿಸಿ ಕೊಂಡಿತ್ತು. ತೀರಾ ಇತ್ತೀಚೆಗೆ ಅದಾನಿ ವಿಶ್ವದ ಎರಡನೆಯ ಶ್ರೀಮಂತ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಆಗಿಯೂ ಆ ಹೆಸರನ್ನು ಕೇಳದಿದ್ದವರೂ ಕೇಳದಂತಾದದ್ದು ಕಳೆದ ಜನವರಿಯಲ್ಲಿ. ಹಿಂಡನ್‌ಬರ್ಗ್ ರಿಸರ್ಚ್ ಎಂಬ ಹಣಕಾಸಿನ ಕುರಿತು ಸಂಶೋಧನೆ ನಡೆಸುವ ಒಂದು ಸಂಸ್ಥೆಯಿದೆ.

ಇದರ ಕೆಲಸ ಏನೆಂದರೆ, ಷೇರು ಮಾರುಕಟ್ಟೆಯಲ್ಲಿರುವ ಸಂಸ್ಥೆಗಳ ವಿಧಿವಿಜ್ಞಾನ (ಪೋಸ್ಟ್ ಮಾರ್ಟಮ್) ಮಾಡುವುದು, ಹಣ ಹೂಡಿಕೆಯ ವಿಷಯದಲ್ಲಿ ಸಹಾಯ ಮಾಡುವುದು, ಇತ್ಯಾದಿ, ಇತ್ಯಾದಿ. ಅಂಥ ಸಂಸ್ಥೆ ಕಳೆದ ಜನೆವರಿ ಕೊನೆಯ ವಾರದಲ್ಲಿ ಸಂಸ್ಥೆ ಒಂದು ಬಾಂಬ್ ಸಿಡಿಸಿತ್ತು. ಭಾರತೀಯ ಮೂಲದ ಅದಾನಿಗೆ ಸಂಬಂಧಪಟ್ಟ ಸಂಸ್ಥೆಯ ಕುರಿತು ಒಂದಷ್ಟು ಋಣಾತ್ಮಕ
ವಿಷಯಗಳನ್ನು ಹೊರಹಾಕಿತು.

ಹಿಂಡನ್‌ಬರ್ಗ್ ವರದಿಯ ಪ್ರಕಾರ, ಅದಾನಿ ಕೆಲವು ವರ್ಷಗಳಿಂದ ಜನರನ್ನು ವಂಚಿಸಿ ಸುಮಾರು ನೂರ ಇಪ್ಪತ್ತು ಶತಕೋಟಿ ಡಾಲರ್‌ನಷ್ಟು ನಿವ್ವಳ ಮೌಲ್ಯ ಸಂಗ್ರಹಿಸಿದ್ದಾರೆ. ಅದಾನಿ ಸಂಸ್ಥೆಗಳು ಷೇರಿನ ಬೆಲೆ ಏರಿಸುವುದರ ಮೂಲಕ ಕಳೆದ ಮೂರು
ವರ್ಷದಲ್ಲಿ ನೂರು ಶತಕೋಟಿ ಡಾಲನಷ್ಟು ಹಣ ಸಂಗ್ರಹಿಸಿವೆ, ಸಂಸ್ಥೆಯವರು ಷೇರಿನ ಬೆಲೆ ಹೆಚ್ಚಿಸಿ ಸಾಲ ಪಡೆದಿದ್ದಾರೆ.

ಸಂಸ್ಥೆಯ ಏಳು ಅಂಗ ಸಂಸ್ಥಗಳ ಷೇರು ದರವನ್ನು ಸುಮಾರು ಎಂಬತ್ತೈದು ಪ್ರತಿಶತ ಏರಿಸಿ ತೋರಿಸಲಾಗಿದೆ. ಸಂಸ್ಥೆ ಎರಡು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದು, ಇದು ಸಂಸ್ಥೆಯ ಸ್ಥಿತಿ ಗತಿಗೆ ಸಿಗಬೇಕಾಗಿದ್ದಕ್ಕಿಂತ ಹೆಚ್ಚಾಗಿದೆ. ಮನಿ ಲಾಂಡರಿಂಗ್ ಅಥವಾ ಹವಾಲಾ ಮೂಲಕ ಹೈಗೈ ನಡೆಸಿದ್ದಾರೆ. ಕಳೆದ ಎಂಟು ವರ್ಷದಲ್ಲಿ ಐದು ಮುಖ್ಯ ಹಣಕಾಸು ಅಧಿಕಾರಿ ಬದಲಾಗಿ ದ್ದಾರೆ.

ಸಂಸ್ಥೆಯ ಇಪ್ಪತ್ತೆರಡು ಪ್ರಮುಖ ಹುದ್ದೆಯಲ್ಲಿರು ವವರ ಪೈಕಿ ಎಂಟು ಮಂದಿ ಅವರ ಕುಟುಂಬದವರೇ ಆಗಿದ್ದಾರೆ, ವಗೈರೆ, ವಗೈರೆ… ಈ ವಿಷಯ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಯಿತು. ಎರಡನೆಯ ಸ್ಥಾನದಲ್ಲಿದ್ದ ಅದಾನಿಯ ಶ್ರೀಮಂತಿಕೆ ರಾತ್ರೋ ರಾತ್ರಿ ಕುಸಿದುಹೋಯಿತು. ಅಷ್ಟೇ ಅಲ್ಲ, ಇದರ ಕುರಿತು ತನಿಖೆಯಾಗಬೇಕು ಎಂದಾಯಿತು. ವಿಷಯ ಸುಪ್ರೀಂ ಕೋರ್ಟ್ ತಲುಪಿತು. ಸ್ವತಃ ಅದಾನಿಯೇ ಇದನ್ನು ಸ್ವಾಗತಿಸಿದರು.

ಸರ್ವೋಚ್ಛ ನ್ಯಾಯಾಲಯ ಈ ವಿಷಯದ ಕುರಿತು ತನಿಖೆ ನಡೆಸಲು ಆರು ಜನ ಸದಸ್ಯರ ಪೀಠ ರಚಿಸಿತು. ಕೇಂದ್ರ ಸರಕಾರ ತಾನು ತಯಾರಿಸಿದ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಲು ಮುಂದಾದಾಗ ನ್ಯಾಯಾಲಯ ಅದಕ್ಕೆ ಸೊಪ್ಪುಹಾಕಲಿಲ್ಲ. ತನಿಖಾ ಪೀಠದಲ್ಲಿ ಪೂರ್ವ ನ್ಯಾಯಾಧೀಶರಾದ ಎ. ಎಮ. ಸಪ್ರೆ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ಒಎನ್‌ಜಿಸಿ, ಟಾಟಾ ಮೋಟರ್ಸ್, ಹಿಂದೂಸ್ತಾನ್ ಲಿವರ್, ಟಿಸಿಎಸ್ ಸಂಸ್ಥೆಗಳಲ್ಲಿ ನಿರ್ದೇಶಕರಾಗಿರುವ ಒ.ಪಿ.ಭಟ, ಮುಂಬೈ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜೆ.ಪಿ. ದೇವಧರ್, ಇನೋಸಿಸ್ ಸ್ಥಾಪಕರಬ್ಬರಾದ, ಯುಐಡಿಎಐ ಮುಖ್ಯಸ್ಥ ರಾಗಿ ಆಧಾರ್ ಕಾರ್ಡ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್
ಅಭ್ಯರ್ಥಿ ಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದ ನಂದನ್ ನೀಲೇಕಣಿ, ಬ್ರಿP ದೇಶದ ನ್ಯೂ ಡೆವಲಪ್ಮೆಂಟ್ ಬ್ಯಾಂಕ್‌ನ ಪ್ರಮುಖರೂ, ಐಸಿಐಸಿಐ ಬ್ಯಾಂಕ್ ಸ್ಥಪಾಕರೂ, ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ಆಗಿದ್ದ ಕೆ. ವಿ ಕಾಮತ್, ಸೆಬಿಯ ವಿಷಗಳ ತಜ್ಞ,
ವಕೀಲರಾದ ಸೋಮಶೇಖರನ್ ಸುಂದರೇಶನ್ರನ್ನು ಸೇರಿಸಿಕೊಂಡಿತು.

ವಿಪಕ್ಷಗಳು ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಪಟ್ಟು ಹಿಡಿದವು. ಸರಕಾರ ಒಪ್ಪಲಿಲ್ಲ. ಈ ಗಲಾಟೆಯ ನಡುವೆ ಒಂದು ಅಧಿವೇಶನವೇ ಯಾವುದೇ ಕೆಲಸಕ್ಕೆ ಬಾರದಂತೆ ಮುಗಿದುಹೋಯಿತು. ದೇಶದಲ್ಲಿ ಮತ್ಯಾವ ವಿಷಯವೂ
ಇದರಷ್ಟು ಪ್ರಮುಖವಲ್ಲ, ಈ ವಿಷಯವೇ ಸರ್ವಸ್ವ ಎನ್ನುವ ಮಟ್ಟಿಗೆ ಇದು ಚರ್ಚೆಯಾಯಿತು. ಖಂಡಿತವಾಗಿಯೂ ಇದು ಚರ್ಚೆಯಾಗಬೇಕಾದ ವಿಷಯವೇ. ಇವರನ್ನು ನಂಬಿ ಅದೆಷ್ಟೋ ಜನ ಕಷ್ಟ ಪಟ್ಟು ದುಡಿದ ತಮ್ಮ ಹಣವನ್ನು ತೊಡಗಿಸಿರು ತ್ತಾರೆ.

ಅವರಿಗೆಲ್ಲ ಇದು ಹಣಕಾಸಿನ ಭದ್ರತೆಯ ಪ್ರಶ್ನೆ. ಹಾಗಾಗಿ, ಎಲ್ಲಿಯೇ ಆದರೂ, ಯಾವುದೇ ರೀತಿಯ ಏರು-ಪೇರು ಕಂಡು ಬಂದರೂ ಸಂಬಂಧಪಟ್ಟವರು ಪ್ರಶ್ನಿಸುವುದು ಸರಿಯೇ. ಅಂತೆಯೇ ಆ ವಿಷಯದಲ್ಲಿ ಯಾವುದೇ ರೀತಿಯ ಬೆಳವಣಿಗೆ ಯಾದಾಗ ಅದನ್ನು ಜನರಿಗೆ ತಲುಪಿಸುವುದೂ ಅವರ ಜವಾಬ್ದಾರಿ. ಇದನ್ನು ಹೇಳಲು ಕಾರಣವಿದೆ. ಮೊನ್ನೆ ಇದೇ ವಿಷದ ಕುರಿತು ಭಾರತದ ಸರ್ವೋಚ್ಛ ನ್ಯಾಯಾಲಯ ತನ್ನ ಅನಿಸಿಕೆಯನ್ನು ಪ್ರಕಟಿಸಿದೆ. ಅದರಲ್ಲಿ, ಮೇಲ್ನೋಟಕ್ಕೆ ಅದಾನಿ ಸಂಸ್ಥೆ ಯಾವುದೇ ರೀತಿಯ ತಪ್ಪು ಮಾಡಿದಂತೆ ಕಂಡು ಬಂದಿರುವುದಿಲ್ಲ, ಸೆಕ್ಯೂರಿಟಿ ಎಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್
ಇಂಡಿಯಾ (SEBI) ಇದರ ಕುರಿತಂತೆ ಇನ್ನಷ್ಟು ಮಾಹಿತಿ ನೀಡಬೇಕು ಎಂದು ಹೇಳಿದೆ.

ಜನವರಿ ಕೊನೆಯ ವಾರದಿಂದ ಸುಮಾರು ಎರಡು-ಮೂರು ತಿಂಗಳಿನವರೆಗೂ ದೇಶದಲ್ಲಿ ಬೇರೆ ಎಲ್ಲ ವಿಷಯಗಳನ್ನೂ ಬಿಟ್ಟು, ಇದನ್ನೇ ಏಕಮೇವ ಚರ್ಚಾ ವಿಷಯವನ್ನಾಗಿಸಿದ ಮಾಧ್ಯಮಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಈಗ ಅದರ ಕುರಿತಂತೆ ಸೊಲ್ಲನ್ನೇ ಎತ್ತುತ್ತಿಲ್ಲ. ಇವರೆಲ್ಲ ಈಗ ಬೇರೆ ವಿಷಯಗಳಲ್ಲಿ ವ್ಯಸ್ಥ. ಸದ್ಯಕ್ಕೆ ನೂತನ ರಾಜಭವನದ ಉದ್ಘಾಟನೆ ಯತ್ತ ಎಲ್ಲರ ಚಿತ್ತ!

ಇರಲಿ, ಹಿಂಡನ್‌ಬರ್ಗ್ ವರದಿಯಿಂದ ಈ ವಿಷಯ ಚರ್ಚೆಯಾಗುತ್ತಿದ್ದಂತೆ, ಅದಾನಿಯ ಮಾರುಕಟ್ಟೆಯ ಮೌಲ್ಯ ಐವತ್ತೈದು ಪ್ರತಿಶತ ಕಮ್ಮಿ ಆಯಿತು. ಮೂರು ಸಾವಿರದ ಮುನ್ನೂರರಲ್ಲಿದ್ದ ಅದಾನಿ ಷೇರುಗಳು ಒಂದು ಸಾವಿರದ ಒಂದು ನೂರಕ್ಕೆ ಬಂದು ನಿಂತವು. ಅಲ್ಲಿಂದ ಪುನಃ ಚೇತರಿಸಿಕೊಂಡು, ಸದ್ಯ ಇದರ ಬೆಲೆ ಎರಡು ಸಾವಿರದ ಐದುನೂರರ ಆಸುಪಾಸು ನಡೆಯುತ್ತಿದೆ.

ಕೆಲವೊಮ್ಮೆ ಷೇರುಗಳು ಮಕಾಡೆ ಮಲಗಿದರೆ ಮತ್ತೆ ಎದ್ದೇಳಲು ವರ್ಷಗಟ್ಟಲೆ ಬೇಕಾಗುತ್ತದೆ. ಕೆಲವೊಮ್ಮೆ ಬಿದ್ದ ಷೇರುಗಳು ಏಳಲಾಗದೇ ಮಣ್ಣು ಮುಕ್ಕುತ್ತವೆ. ಅಂಥದ್ದರಲ್ಲಿ ಅದಾನಿಯ ಷೇರುಗಳು ಒಂದೆರಡು ತಿಂಗಳಿನ ಒಳಗೆ ಪುಟಿದು ಹಿಂತಿರುಗಿ ಬರುತ್ತಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದು ಇಲ್ಲಿ ಕುತೂಹಲಕರ ವಿಷಯ.

ಅದಾನಿಯ ಸಂಸ್ಥೆಯ ಷೇರು ಕುಸಿಯುತ್ತಿದ್ದಂತೆ ಕೆಲವು ವಿದೇಶಿ ಸಂಸ್ಥೆಗಳು ಅದಾನಿ ಷೇರನ್ನು ಖರೀದಿಸಲು ಮುಂದೆ ಬಂದವು. ಅದರಲ್ಲೂ ಅದಾನಿಗೆ ವರವಾಗಿ ಬಂದದ್ದು ಅಮೆರಿಕ ಮೂಲದ, ಸುಮಾರು ಏಳೂವರೆ ಲಕ್ಷ ಕೋಟಿ ರುಪಾಯಿಯ
ವಹಿವಾಟು ನಡೆಸುವ GQG Partners ಸಂಸ್ಥೆ. ಈ ಸಂಸ್ಥೆ ಅದಾನಿಯ ನಾಲ್ಕು ಬೇರೆ ಬೇರೆ ಸಂಸ್ಥೆಗಳಲ್ಲಿ ಹದಿನೈದು ಸಾವಿರ ಕೋಟಿ ರುಪಾಯಿ ತೊಡಗಿಸಿ ಅದಾನಿ ವಿರೋಽಗಳಿಗೆ ಶಾಕ್ ನೀಡಿತು.

ಜಿಕ್ಯೂಜಿಯಂತಹ ಸಂಸ್ಥೆ ಹಣ ತೊಡಗಿಸಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಜನ ಪುನಃ ಅದಾನಿ ಷೇರು ಖರೀದಿ ಮಾಡಲು ಆರಂಭಿಸಿದರು. ಇದರಿಂದಾಗಿ ಎರಡೇ ದಿನದಲ್ಲಿ ತಾನು ತೊಡಗಿಸಿದ ಹದಿನೈದು ಸಾವಿರ ಕೋಟಿಗೆ ಮೂರು ಸಾವಿರ ಕೋಟಿ ಲಾಭ ಪಡೆಯಿತು ಜಿಕ್ಯೂಜಿ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಇಪ್ಪತ್ನಾಲ್ಕನೆಯ ಸ್ಥಾನಕ್ಕೆ ಜಿಗಿದರು. ಅಂದಹಾಗೆ ಈ ಜಿಕ್ಯೂಜಿ ಸಂಸ್ಥೆಯ ಅಧ್ಯಕ್ಷ ಯಾರು ಗೊತ್ತಾ? ಜಿಕ್ಯೂಜಿ ಸಂಸ್ಥೆಯ ಸುಮಾರು ಎಪ್ಪತ್ತು ಪ್ರತಿಶತ ಷೇರು ಹೊಂದಿರುವ, ಹೆಚ್ಚು-ಕಮ್ಮಿ ಹದಿನಾರು ಸಾವಿರ ಕೋಟಿಯ ಒಡೆಯ, ಭಾರತೀಯ ಮೂಲದ ರಾಜೀವ್ ಜೈನ್.

ರಾಜೀವ್ ಜೈನ್ ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದಾರೆ. ಜಿಕ್ಯೂಜಿ ಸಂಸ್ಥೆಯ ಪ್ರಮುಖ ಹನಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವುದು ಇವರೇ. ನಿಮಗೆ ಆಶ್ಚರ್ಯವಾಗಬಹುದು, ಇಂದಿನ ಕಾಲದಲ್ಲೂ ಇವರದ್ದೊಂದು ಟ್ವಿಟರ್ ಖಾತೆ ಇಲ್ಲ. ಅದು ಬಿಡಿ, ಇವರು ಟಿವಿ ನೋಡುವುದೂ ಕಮ್ಮಿ. ಇಂದಿಗೂ ಓದುವುದರ ಹೆಚ್ಚು ಆಸಕ್ತಿ ಇಟ್ಟುಕೊಂಡಿರುವ
ಮನುಷ್ಯ ರಾಜೀವ್ ಜೈನ್.

ಇರಲಿ, ಇನ್ನೊಂದೆಡೆ ಅದಾನಿ ಖುದ್ದು ವಿದೇಶ ಪ್ರವಾಸ ಮಾಡಿ ಕಂಪನಿಯ ಸ್ಥಿತಿಗತಿಗಳನ್ನು ಹೂಡಿಕೆದಾರರಿಗೆ ತಿಳಿಸಲು ಮುಂದಾದರು. ಹಾಂಗ್ ಕಾಂಗ್, ಸಿಂಗಾಪುರ್, ಅಮೆರಿಕ, ಲಂಡನ್, ದುಬೈಗೆ ಹೋಗಿ ವಿಷಯ ತಿಳಿಸಿದರು. ನಿಜ, ಅದಾನಿ
ಸಂಸ್ಥೆಗಳಿಗೆ ಆ ಪ್ರದೇಶಗಳಿಂದಲೂ ಹೆಚ್ಚು ಜನ ಹೂಡಿಕೆದಾರರಿದ್ದಾರೆ. ಈ ಜಗತ್ತು ನಡೆಯುವುದೇ ಭರವಸೆಯ ಮೇಲಂತೆ.
ಎಷ್ಟು ಸತ್ಯವೋ ಗೊತ್ತಿಲ್ಲ, ಷೇರು ಮಾರುಕಟ್ಟೆ ನಡೆಯುವುದಂತೂ ಭರವಸೆಯ ಮೇಲೆಯೇ ಹೌದು.

ಇನ್ನೊಂದು ವಿಷಯ, ಅದಾನಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಗಣಿ ಖರೀದಿಸಿದ್ದಾರೆ. ಅದರಿಂದ ಅಲ್ಲಿಯ ಕಲ್ಲಿದ್ದಲು ಭಾರತಕ್ಕೆ ಬರುವುದಷ್ಟೇ ಅಲ್ಲದೆ, ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದೆ. ಅಂಥ ಆಸ್ಟ್ರೇಲಿಯಾದ ಮಾಜಿ ಪ್ರಧಾನ ಮಂತ್ರಿ ಟೋನಿ ಅಬೊಟ್ ಅದಾನಿ ಒಡೆತನದ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಎಲ್ಲಿಯವರೆಗೆ ಅಪರಾಧ ಸಾಬೀತಾ ಗುವುದಿಲ್ಲವೋ ಅಲ್ಲಿಯವರೆಗೆ ಅದಾನಿಯನ್ನು ಅಪರಾಧಿ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು.

ಒಂದು ಸಂಸ್ಥೆ ಸರಿಯೋ ತಪ್ಪೋ ಎಂಬುದನ್ನು ಇನ್ನೊಂದು ಸಂಸ್ಥೆ ನಿರ್ಣಯಿಸುವುದಕ್ಕಿಂತ ನ್ಯಾಯಾಲಯ ನಿರ್ಣಯಿಸುವುದು ಸೂಕ್ತ ಎಂದಿದ್ದರು ಅಬೋಟ. ಷೇರು ಮಾರುಕಟ್ಟೆಯಲ್ಲಿ ಹಿಂಡನ್ಬರ್ಗ್ ವರದಿ ಋಣಾತ್ಮಕವಾದರೆ, ಅಬೊಟ್ ಮಾತು
ಧನಾತ್ಮಕವಾಗಿ ಪರಿಣಮಿಸಿತು. ಆಗಲೇ ಹೇಳಿದಂತೆ, ಸದ್ಯ ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆಯ ಷೇರಿನ ಬೆಲೆ ಪುನಃ ಮೇಲ್ಮುಖವಾಗಿದೆ. ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎಂದು ಗೊತ್ತಿಲ್ಲ. ಅದಾನಿಗೆ ಈ ರೀತಿಯ ಬೀಳು-ಏಳುಗಳು ಹೊಸತೇನೂ ಅಲ್ಲ. ಈ ಮೊದಲೂ ಅದಾನಿ ಬಿದ್ದಿದ್ದೂ ಇದೆ, ಪುನಃ ಎದ್ದಿದ್ದೂ ಇದೆ. ಆ ನಿಟ್ಟಿನಲ್ಲಿ ಅವರನ್ನು ಮೆಚ್ಚಲೇಬೇಕು. ಇದು ಇನ್ನೊಂದು
ಪರೀಕ್ಷೆ ಅಷ್ಟೇ.

ಫಲಿತಾಂಶವನ್ನು ಕಾದು ನೋಡೋಣ. ಮತ್ತೊಮ್ಮೆ ಹೇಳುತ್ತಿದ್ದೇನೆ, ನಾನು ವರದಿ ಒಪ್ಪಿಸಿದ್ದು ಮಾತ್ರ ವಿನಃ ಯಾರ ಪರವೂ
ಅಲ್ಲ. ಆಡಳಿತ ಪಕ್ಷದ ಪರವೂ ಅಲ್ಲ, ವಿರೋಧ ಪಕ್ಷದ ಪರವೂ ಅಲ್ಲ. ಮಾಧ್ಯಮದ ಪರವೂ ಅಲ್ಲ, ಹಿಂಡೆನ್‌ಬರ್ಗ್‌ನಂತಹ ಸಂಸ್ಥೆಯ ಪರವೂ ಅಲ್ಲ, ಅದಾನಿಯ ಪರವೂ ಅಲ್ಲ. ಭಾರತದ ಸರ್ವೋಚ್ಛ ನ್ಯಾಯಾಲಯದ ಪರ, ಷೇರು ಮಾರುಕಟ್ಟೆಯಲ್ಲಿ
ಬಂಡವಾಳ ಹೂಡುವವನ ಪರ.