Monday, 16th September 2024

ಆದರ್ಶಗಳ ಆಗರ ರಾಮ

ರಾಮ ರಥ

ವಿದ್ಯಾ ಶಂಕರ‍್ ಶರ್ಮಾ

ಈಗ ದೇಶದ ಉದ್ದಗಲಕ್ಕೂ ರಾಮಮಂದಿರದ ಉದ್ಘಾಟನೆಯ ಸಂಭ್ರಮ. ಭಕ್ತರಲ್ಲಿ ಒಂದು ಪುಳಕ, ಶ್ರೀ ರಾಮನ ದರ್ಶನಕ್ಕೆ ಕಾತುರಗೊಂಡ ಹೃದಯಗಳು ಹರುಷದಿಂದ ನಲಿಯುವ ಸಮಯ ಇದು. ಮಹಾ ವಿಷ್ಣುವಿನ ಹತ್ತು ಅವತಾರಗಳಲ್ಲಿ ಶ್ರೀ ರಾಮನ ಅವತಾರ ಮನುಜ ಕುಲಕ್ಕೆ ಅತಿ ಆಪ್ತವಾದ ರೂಪ. ಮನುಷ್ಯ ರೂಪದಲ್ಲಿ ಬಂದ ಭಗವಂತನ ಏಳನೇ ಅವತಾರ ಜೀವನದ ಪರಮ ಮೌಲ್ಯಗಳನ್ನು ಎತ್ತಿ ಹಿಡಿದು ನಮಗೆ ಮಾರ್ಗದರ್ಶನ ನೀಡುವ ಒಂದು ದೊಡ್ಡ ವಿಶ್ವವಿದ್ಯಾನಿ ಲಯ ಎನ್ನಬಹುದು.

ಬಾಲ್ಯದಲ್ಲಿ ಗುರು ಹಿರಿಯರ ಮಾತಿಗೆ ಗೌರವ ಕೊಟ್ಟು ಗುರುಕುಲ ಶಿಕ್ಷಣ ಪಡೆಯುವ ರಾಮನ ಮೌಲ್ಯಾಧಾರಿತ ಬದುಕು ಮುಂದೆ ಜೀವನದ ಮಹತ್ವ ಘಟ್ಟಗಳಲ್ಲಿ ಇನ್ನೂ ಎತ್ತರದ ಸ್ತರಕ್ಕೆ ಸಾಗುವುದನ್ನು ರಾಮಾಯಣದಲ್ಲಿ ನಾವು ಕಾಣಬಹುದು. ತಂದೆ ತಾಯಿಯರಲ್ಲಿಯ ಭಕ್ತಿಯ ಅತ್ಯುನ್ನತ ಮಜಲನ್ನು ರಾಮನಲ್ಲಿ
ಕಾಣಬಹುದಾದ ಸನ್ನಿವೇಶ ರಾಮನ ಪಟ್ಟಾಭಿಷೇಕದ ಸಮಯ. ಕೈಕೇಯಿಗೆ ಕೊಟ್ಟ ಭಾಷೆಗೆ ಕಟ್ಟುಬಿದ್ದು ದಶರಥನು ರಾಮನನ್ನು ಕಾಡಿಗೆ ಹೋಗಲು ಕೇಳಿದಾಗ, ಸ್ವಲ್ಪವೂ ವಿಚಲಿತನಾಗದ ರಾಮನ ನಡೆ, ಶಾಂತವಾಗಿ ಎಲ್ಲರನ್ನೂ ಸಮಾಧಾನಿಸುತ್ತ ತಂದೆಯ ವಾಕ್ಯ ಪರಿಪಾಲನೆಯೇ ಪರಮ ಧ್ಯೇಯವೆಂದು ತಿಳಿದು ವನವಾಸಕ್ಕೆ ತೆರಳುವ ರಾಮ ಜೀವನಾದರ್ಶಗಳ ಹೊಸ ಪರಿಕಲ್ಪನೆಯನ್ನು ನಮಗೆ ಪರಿಚಯಿಸುತ್ತಾನೆ.

ಎಲ್ಲರೂ ಕೈಕೇಯಿಯ ವರ್ತನೆಯನ್ನು ಖಂಡಿಸಿದರೂ, ರಾಮ ಮಾತೃಗೌರವಕ್ಕೆ ಚ್ಯುತಿ ಬಾರದಂತೆ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವ ಪರಿ ಅವನಲ್ಲಿ ಅದಮ್ಯ ಗೌರವವನ್ನು ತಂದು ಬಿಡುತ್ತದೆ. ಮುಂದೆ ಭರತ ಮತ್ತು ಶತ್ರುಘ್ನರು ತನ್ನನ್ನು ಕಾಣಲು ಬಂದಾಗ, ಕೈಕೇಯಿಯ ಬಗ್ಗೆ ಭರತ ಮತ್ತು ಶತ್ರುಘ್ನರು ಬೇಸರ ಹೊಂದಬಾರದು ಎನ್ನುವ ರಾಮನ ನುಡಿ ಅವನ ಮಾತೃಗೌರವದ ಗುಣವನ್ನು ತೋರಿಸುತ್ತದೆ. ಶ್ರೀ ರಾಮನ ಏಕಪತ್ನಿವ್ರತವೂ ಬಹಳ ಆದರ್ಶದಾಯಕ. ಸೀತಾಪಹರಣದ ನಂತರ ರಾಮನು ಭ್ರಾಂತನಾಗಿ ಪಶು ಪಕ್ಷಿಗಳಲ್ಲಿ, ತರು ಲತೆಗಳಲ್ಲಿ ಸೀತೆಯ ಬಗೆಗೆ ವಿಚಾರಿಸುತ್ತಾನೆ.

ಸೀತೆಯ ವಿಯೋಗದಿಂದ ಬಹಳವಾಗಿ ನೊಂದ ರಾಮನು, ಲಕ್ಷ್ಮಣ ಮತ್ತು ಹನುಮಂತರಲ್ಲಿ ತನ್ನ ನೋವನ್ನು ತೋಡಿಕೊಳ್ಳುವ ಪರಿ ಅವನಿಗೆ ಸೀತಾಮಾತೆ ಯಲ್ಲಿನ ಅಪರಿಮಿತ ಒಲವನ್ನು ಬಿಂಬಿಸುತ್ತದೆ. ಭಾತೃಪ್ರೇಮ ಶ್ರೀ ರಾಮ ನಮಗೆ ತಿಳಿಹೇಳುವ ಇನ್ನೊಂದು ಜೀವನ ಆದರ್ಶ. ಚಿಕ್ಕಂದಿನಿಂದಲೂ ತನ್ನ ಸಹೋ ದರರನ್ನು ಬಹು ನಲುಮೆಯಿಂದ ಕಾಣುವ ರಾಮ, ತಿನ್ನಲು ಯಾವುದೇ ವಿಶೇಷ ವಸ್ತು ಸಿಕ್ಕಿದರೂ, ಮೊದಲು ತನ್ನ ಸಹೋದರರಿಗೆ ಕೊಟ್ಟು ನಂತರ ತಾನು ತಿನ್ನುತ್ತಿದ್ದನು. ಲಕ್ಷಣನಲ್ಲಿ ರಾಮನಿಗೆ ಬಹು ಸಲಿಗೆ ಮತ್ತು ಪ್ರೀತಿ ಇತ್ತು. ಮುಂದೆ ವನವಾಸಕ್ಕೆ ಹೊರಟಾಗ ಲಕ್ಷ್ಮಣನು ತಾನೂ ರಾಮನ ಜತೆ ಬರಲು ಇಚ್ಛಿಸಿದಾಗ ರಾಮನು ಅವನಿಗೆ ಅಯೋಧ್ಯೆಯಲ್ಲಿಯೇ ಇರುವಂತೆ ಬಹಳ ಕಕ್ಕುಲತೆಯಿಂದ ಹೇಳುವ ಮಾತುಗಳು ರಾಮನಿಗೆ ಲಕ್ಷ್ಮಣನ ಬಗ್ಗೆ ಇರುವ ಅಪಾರ ವಾತ್ಸಲ್ಯವನ್ನು ತೋರಿಸುತ್ತದೆ.

ತನ್ನನ್ನು ನಂಬಿ ಬಂದವರಿಗೆ ಅಭಯ ಹಸ್ತ ನೀಡುವುದು ಶ್ರೀ ರಾಮನಲ್ಲಿ ಕಾಣಬಹುದಾದ ಇನ್ನೊಂದು ಉತ್ತಮ ಗುಣ. ವಿಭೀಷಣನು ರಾಮನಲ್ಲಿ ಸ್ನೇಹವನ್ನು ಬಯಸಿ ಬಂದಾಗ, ಸುಗ್ರೀವ ಮುಂತಾದವರು ವಿಭೀಷಣನ ಉದ್ದೇಶವನ್ನು ಶಂಕಿಸಿದಾಗ, ಶ್ರೀ ರಾಮನು ಮಿತ್ರ ಭಾವದಿಂದ ಬಂದಿರುವ ವಿಭೀಷಣನನ್ನು ತಾನು ಕೈ ಬಿಡಲಾರೆ, ಒಂದು ವೇಳೆ ವಿಭೀಷಣನಲ್ಲಿ ದೋಷವಿದ್ದರೂ ಅವನಿಗೆ ಆಶ್ರಯ ನೀಡುವುದು ಸಜ್ಜನರಿಗೆ ದೋಷವೆನಿಸುವುದಿಲ್ಲ ಎಂದು ಹೇಳುತ್ತಾನೆ.

ಶ್ರೀ ರಾಮನು ಪ್ರಜಾರಂಜಕ ಗುಣ ಆಡಳಿತಗಾರರಿಗೆ ಅನುಕರಣೀಯ. ಅವನು ತನ್ನ ಪ್ರಜೆಗಳನ್ನು ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದನು.
ಶ್ರೀ ರಾಮನು ವನವಾಸಕ್ಕೆ ತೆರೆಳುವಾಗ ಅಯೋಧ್ಯೆಯ ಜನರು ತಾವು ಕೂಡ ಶ್ರೀ ರಾಮನ ಜತೆ ಕಾಡಿಗೆ ಬರಲು ಇಚ್ಛಿಸುತ್ತಾರೆ. ನಂತರ ಶ್ರೀ ರಾಮನು ರಾತ್ರಿಯಲ್ಲಿ ಎಲ್ಲರೂ ಮಲಗಿರುವಾಗ ವನವಾಸಕ್ಕೆ ಹೋಗಬೇಕಾಯಿತು. ಭರತನ ಜತೆ ರಾಮನನ್ನು ಕಾಣಲು ಬಂದ ಪ್ರಜೆಗಳ ಜತೆಗಿನ ಸಂಗಮದ ವರ್ಣನೆ ಪ್ರಜೆಗಳ ಬಗೆಗೆ ರಾಮನ ಪ್ರೇಮವನ್ನು ತಿಳಿಯಪಡಿಸುತ್ತದೆ. ಪರಾಕ್ರಮ, ಧೈರ್ಯ, ಕೃತಜ್ಞತೆ, ಕ್ಷಮಾಗುಣ ಇವೆಲ್ಲ ರಾಮನ ವ್ಯಕ್ತಿತ್ವದ ಭಾಗವೇ ಆಗಿದ್ದವು. ರಾಮಾಯಣದಲ್ಲಿ ಶ್ರೀರಾಮನ ಗುಣಗಳ ಅಸಂಖ್ಯಾತ ದೃಷ್ಟಾಂತಗಳನ್ನು ನಾವು ಕಾಣಬಹುದು.

Leave a Reply

Your email address will not be published. Required fields are marked *