ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಆಕಾಶದ ನಡುವೆ ಭೂಮಿಯಿಂದ ಸುಮಾರು ಇಪ್ಪತ್ತನಾಲ್ಕು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು. ಇದ್ದಕ್ಕಿದ್ದಂತೆ ಛಾವಣಿಯ ಎಡಭಾಗ ದಿಂದ ದೊಡ್ಡ ಸದ್ದು ಕೇಳಿತು. ನೋಡ ನೋಡುತ್ತಿದ್ದಂತೆ ಛಾವಣಿಯ ಒಂದು ಭಾಗ ಹರಿಯಲಾರಂಭಿಸಿತು. ಛಾವಣಿ ಸಂಪೂರ್ಣ ಕಳಚಿ, ಯಾರಿಗೂ ಸಿಗದಂತೆ ಗಾಳಿಯಲ್ಲಿ ಹಾರಿಹೋಗಿತ್ತು.
ಮೊನ್ನೆ ಬೆಂಗಳೂರಿನಿಂದ ಬಹ್ರೈನ್‌ಗೆ ಪ್ರಯಾಣಿಸುತ್ತಿದ್ದೆ. ನಾನು ಕುಳಿತದ್ದು ಬೋಯಿಂಗ್ ಸಂಸ್ಥೆಯ ಡ್ರೀಮ್ ಲೈನರ್ ವಿಮಾನದಲ್ಲಿ. ಡ್ರೀಮ್‌ಲೈನರ್ ವಿಮಾನ ಸಾಧಾರಣ ವಿಮಾನಕ್ಕಿಂತ ಕಮ್ಮಿ ಎಂದರೂ ಇಪ್ಪತ್ತೈದು ವಿಭಾಗದಲ್ಲಿ ಉತ್ತಮ ಗುಣ ಹೊಂದಿದೆ ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. ಅದು ನಿಜವೂ ಹೌದು. ಮೂರು ನಾಲ್ಕು ತಾಸಿನ ಪ್ರಯಾಣದಲ್ಲಿ ಏನೆಲ್ಲ ಅನುಭವಕ್ಕೆ ಬರುತ್ತದೆ ಎನ್ನುವುದು ಅವರವರ ಅವಗಾಹನೆಗೆ ಬಿಟ್ಟಿದ್ದು.
ಆದರೆ, ಯಾವುದೇ ವಿಮಾನದ ಪ್ರಯಾಣವಿರಲಿ, ವಿಮಾನದಲ್ಲಿ ಕುಳಿತ ಕ್ಷಣದಲ್ಲಿ ಎರಡು ಸಂಗತಿಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸ್ನೇಹಿತ ಯಶವಂತ್ ಸರದೇಶಪಾಂಡೆ ಯವರ ಏಕವ್ಯಕ್ತಿ ನಾಟಕ ರಾಶಿಚಕ್ರ ನೋಡುವವರೆಗೆ ಮನಸ್ಸಿನಲ್ಲಿ ಎಂದೂ ಈ ವಿಚಾರ ಬರುತ್ತಿರಲಿಲ್ಲ. ಅದರಲ್ಲಿ ಒಂದು ರಾಶಿಯವರ ಕುರಿತು ಹೇಳುವಾಗ ಅವರು ವಿಮಾನಯಾನದ ಬಗ್ಗೆ ಎರಡು ಪ್ರಶ್ನೆ ಕೇಳುತ್ತಾರೆ. ಒಂದು, ವಿಮಾನ ಹಾರಾಡುತ್ತಿರುವಾಗ ಒಂದು ಯಂತ್ರ ಕೆಟ್ಟುಹೋದರೆ ಏನಾಗುತ್ತದೆ? ಅದಕ್ಕೆ ಉತ್ತರ, ವಿಮಾನದಲ್ಲಿ ಇನ್ನೊಂದು ಯಂತ್ರ ಇರುತ್ತದೆ. ಸರಿ, ಇನ್ನೊಂದು ಯಂತ್ರವೂ ಕೆಟ್ಟು ನಿಂತರೆ? ಉತ್ತರವಿಲ್ಲ, ಬಿಡಿ.
ಇನ್ನೊಂದು ಪ್ರಶ್ನೆ, ವಿಮಾನ ಹಾರಿಸುವಾಗ ಪೈಲಟ್ ಅಥವಾ ಕ್ಯಾಪ್ಟನ್‌ಗೆ ಹೃದಯಾಘಾತವಾದರೆ? ಉತ್ತರ, ಅಲ್ಲಿ ಫಸ್ಟ್ ಆಫಿಸರ್ ಅಥವಾ ಸಹಾ ಯಕರು ಇರುತ್ತಾರೆ. ಸುಲಭವಾಗಿ ಹೇಳುವುದಾದರೆ, ಇನ್ನೊಬ್ಬ ಕೋ ಪೈಲಟ್ ಇರುತ್ತಾರೆ. ಅವರಿಗೂ ಹೃದಯಾಘಾತವಾದರೆ? ಎರಡೂ ಘಟನೆಗಳು ಕಾಲ್ಪನಿಕ ನಿಜ. ಆದರೆ ಎಂದೂ ಆಗಬಾರದು ಎಂದೇನೂ ಇಲ್ಲ. ಏಕಕಾಲದಲ್ಲಿ ಇಬ್ಬರೂ ಚಾಲಕರಿಗೆ ಹೃದಯಾಘಾತವಾಗದೇ ಇರಬಹುದು, ಈಗಾ ಗಲೇ ಎರಡೂ ಇಂಜಿನ್ ವಿಫಲವಾದ ಉದಾಹರಣೆ ಇದೆ. ಯಂತ್ರ ನಿಂತರೆ ವಿಮಾನ ಕೆಲ ಕಾಲ ತೇಲುತ್ತದೆ, ಅದನ್ನು ನಿಧಾನವಾಗಿ ಎಲ್ಲಾ ಒಂದು ಕಡೆ ಇಳಿಸಬಹುದು, ನಡೆಸುವವರ ಹೃದಯ ನಿಂತರೆ? ಹಾಗಾಗುವುದಿಲ್ಲ, ಆದ ಉದಾಹರಣೆಗಳೂ ಇಲ್ಲ ನಿಜ.
ಆದರೆ, ಆಗಲೇಬಾರದೆಂಬ ನಿಯಮ ಏನೂ ಇಲ್ಲವಲ್ಲ! ನಿಯಮಗಳನ್ನು ಮೀರಿ ಅಚಾನಕ್ ಆಗುವುದೇ ಅಪಘಾತ, ಅವಘಡ, ದುರಂತ ತಾನೆ? ಇಂತಹ ವಿಚಾರಗಳು ಬಂದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆಗ ಗೂಗಲ್‌ನಲ್ಲಿ ಹುಡುಕಾಟ ಆರಂಭವಾಗುತ್ತದೆ. ಮೊನ್ನೆಯ ಹುಡುಕಾಟದಲ್ಲಿ ಸಿಕ್ಕ ಒಂದು ಘಟನೆ ಇದು. ಮುಂದಿನ ಬಾರಿ ವಿಮಾನ ಪ್ರಯಾಣ ಮಾಡುವಾಗ ಎರಡರ ಜತೆ ಈ ವಿಷಯವೂ ತಲೆಯೊಳಗೆ ಹಾರಾಡುತ್ತಿರುತ್ತದೆ ಎನ್ನುವು ದರಲ್ಲಿ ಯಾವುದೇ ಅನುಮಾನವಿಲ್ಲ.
ಅಲೋಹ ಏರ್ಲೈನ್ಸ್ ಹೆಸರು ಎಷ್ಟು ಜನ ಕೇಳಿದ್ದೀರೋ ಗೊತ್ತಿಲ್ಲ. ಏಕೆಂದರೆ ನಮ್ಮ ಭಾಗದ ಆಕಾಶದಲ್ಲಿ ಅದು ಹಾರಾಡಿದ್ದು ಕಮ್ಮಿ ಎನ್ನುವುದ ಕ್ಕಿಂತಲೂ, ಹಾರಾಡಲೇ ಇಲ್ಲ ಎನ್ನುವುದೇ ಸರಿ. ಅಮೆರಿಕ ಮತ್ತು ಅದರ ಸುತ್ತಮುತ್ತಲಿನ ದ್ವೀಪಗಳು ಅದರ ಸೀಮೆಯಾಗಿತ್ತು. ಅಮೆರಿಕ ಮೂಲದ
ಈ ಸಂಸ್ಥೆ ಆರಂಭವಾದದ್ದು 1946ರಲ್ಲಿ. ನಂತರ 2008ರಲ್ಲಿ ಲ್ಯಾಂಡ್ ಆದ ಸಂಸ್ಥೆ ಮತ್ತೆ ಟೆಕ್‌ಆಫ್ ಆಗಲೇ ಇಲ್ಲ. ಆರು ದಶಕಗಳ ತನ್ನ ಹಾರಾಟದ
ಬದುಕಿನಲ್ಲಿ ಸಂಸ್ಥೆ ಹೆಸರಾದದ್ದು ಅಥವಾ ಹೆಸರು ಕೆಡಿಸಿಕೊಂಡದ್ದು ಒಂದು ಅವಘಡದಿಂದ. ಅದೂ ಎಂಥದ್ದು? ಅದುವರೆಗೆ ಯಾರೂ ಕಂಡು
ಕೇಳರಿಯದಂಥದ್ದು!
ಅಂದು ಎಪ್ರಿಲ್ 28, 1988. ಅಲೋಹ ಏರ್ಲೈನ್ಸ್ ಫ್ಲೈಟ್ 243, ಹವಾಯಿಯ ಹಿಲೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನಲುಲುಗೆ ಹೊರಟಿತ್ತು. ಹಿಲೊದಿಂದ ಹೊನಲುಲುಗೆ ಹಾರಾಟದ ಸಮಯ ಒಂದು ತಾಸಿಗಿಂತಲೂ ಕಡಿಮೆ. ತಾಪಮಾನ, ವಾತಾವರಣ ಎಲ್ಲವೂ ಪರಿಪೂರ್ಣ ವಾಗಿದ್ದು, ವಿಮಾನದ ಹಾರಾಟಕ್ಕೆ ಹೇಳಿ ಮಾಡಿಸಿದಂತಿತ್ತು. ಸಾಲದು ಎಂಬಂತೆ, ನಲವತ್ತ ನಾಲ್ಕು ವರ್ಷದ ಕ್ಯಾಪ್ಟನ್ ರಾಬರ್ಟ್ ಸ್ಕಾರ್ನ್ ಸ್ಥೈಮರ್ ಹಾರಾಟದ ಉಸ್ತುವಾರಿ ವಹಿಸಿದ್ದರು.
ಅವರಿಗೆ ಸಹಾಯಕಳಾಗಿ ಫಸ್ಟ್ ಆಫಿಸರ್ಮೆಡಲಿನ್ ಟೊಂಪ್ಕಿನ್ಸ್ ಇದ್ದಳು. ಅದುವರೆಗೂ ರಾಬರ್ಟ್‌ಗೆ ಸುಮಾರು ಎಂಟೂವರೆ ಸಾವಿರ ಗಂಟೆಗಳಷ್ಟು
ವಿಮಾನ ಹಾರಿಸಿದ ಅನುಭವವಿತ್ತು. ಅದರಲ್ಲಿ ಸುಮಾರು ಆರೂವರೆ ಸಾವಿರಕ್ಕೂ ಹೆಚ್ಚು ಗಂಟೆಗಳ, ಅಂದು ಅವರು ಹಾರಿಸಬೇಕಿದ್ದ ಬೋಯಿಂಗ 737 ವಿಮಾನ ಹಾರಿಸಿದ ಅನುಭವವೇ ಇತ್ತು. ಮೆಡಲಿನ್‌ಗೂ ಮೂರೂವರೆ ಸಾವಿರ ಗಂಟೆಗಳ ಚಾಲನೆಯ ಅನುಭವವಿದ್ದು, ಇಬ್ಬರೂ ಸೇರಿ ಹನ್ನೆರಡು ಸಾವಿರ ಗಂಟೆಗಳ ಅನುಭವ ಹೊಂದಿದ್ದರು.
ಅಂದು ಹಾರಿದ ಬೋಯಿಂಗ ವಿಮಾನಕ್ಕೆ ಸುಮಾರು ಹತ್ತೊಂಬತ್ತು ವರ್ಷ (1969ರಲ್ಲಿ ತಯಾರಿಸಿದ ವಿಮಾನ) ವಯಸ್ಸಾಗಿತ್ತು. ಒಂದು
ವಿಮಾನದ ಆಯುಷ್ಯ ಸುಮಾರು ಮೂವತ್ತು ವರ್ಷ ಎಂದು ಪರಿಗಣಿಸಲಾಗುತ್ತದೆ. ಅಂದರೆ ತೀರಾ ವಯಸ್ಸೇನೂ ಆಗಿರದೇ, ತನ್ನ ಮಧ್ಯ
ವಯಸ್ಸನ್ನು ಮಾತ್ರ ಕಳೆದು ಇನ್ನೂ ಹತ್ತು ವರ್ಷಗಳ ಹಾರಾಟದ ಆಯಸ್ಸು ಅದಕ್ಕೆ ಬಾಕಿ ಇತ್ತು. ಆ ದಿನ ಅದೇ ವಿ i ಹೊನಲುಲುವಿನಿಂದ ಹಿಲೊ,
ಮಾಯಿ ಮತ್ತು ಕೌಯೈಗೆ ಮೂರು ಸುತ್ತು ಹಾಕಿತ್ತು. ಆ ಸಂದರ್ಭದಲ್ಲಿ ಇಬ್ಬರು ಬೇರೆ ಬೇರೆ ಇನ್ಸ್‌ಪೆಕ್ಟರಗಳು ಬೇರೆ ಬೇರೆ ಸ್ಥಳದಲ್ಲಿ ವಿಮಾನದ
ತಪಾಸಣೆ ನಡೆಸಿ ವಿಮಾನದಲ್ಲಿ ಯಾವುದೇ ದೋಷವಿಲ್ಲ, ಅದು ಹಾರಾಟಕ್ಕೆ ಯೋಗ್ಯ ಎಂದು ಪ್ರಮಾಣಪತ್ರವನ್ನೂ ನೀಡಿದ್ದರು.
ಮಧ್ಯಾಹ್ನದ ವೇಳೆಗೆ ಪ್ರಯಾಣಿಕರೆಲ್ಲ ಒಬ್ಬೊಬ್ಬರಾಗಿ ವಿಮಾನದ ಒಳಗೆ ಬಂದು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆರಂಭಿಸಿದ್ದರು. ಒಟ್ಟೂ
ಎಂಬತ್ತೊಂಬತ್ತು ಜನ ಪ್ರಯಾಣಿಕರ ಸೇವೆಗೆ, ಸಹಕಾರಕ್ಕೆ ಗಗನ ಸಖಿಯರೂ ಸೇರಿದಂತೆ ಆರು ಮಂದಿ ಸಹಾಯಕರಿದ್ದರು. ಅವರಲ್ಲಿ ಒಬ್ಬಳು ಐವತ್ತೆಂಟು ವರ್ಷ ವಯಸ್ಸಿನ ಕ್ಲಾರಾಬೆ ಲಾನ್ಸಿಂಗ್. ತನ್ನ ಪ್ರೌಢ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿಕೊಂಡ ಆಕೆಗೆ ಈ ಕ್ಷೇತ್ರದಲ್ಲಿ ಮೂವತ್ತೇಳು ವರ್ಷಗಳ
ಅಪಾರ ಅನುಭವವಿತ್ತು. ಅವಳ ಜತೆಯಲ್ಲಿದ್ದ ಇನ್ನೊಬ್ಬ ಸಹಾಯಕಿ ಮಿಶೆಲ್ ಹೊಂಡ.
ಉಳಿದ ನಾಲ್ವರ ಹೆಸರು ಇಲ್ಲಿ ಅಪ್ರಸ್ತುತ. ಇವರನ್ನೆಲ್ಲ ಹೊತ್ತ ವಿಮಾನ ನಡುಹಗಲು ಒಂದು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಭೂಮಿ ಬಿಟ್ಟು ಆಕಾಶಕ್ಕೆ ನೆಗೆದಿತ್ತು. ವಿಮಾನ ಹಾರಿ, ಇಪ್ಪತ್ತೈದು ನಿಮಿಷದಲ್ಲಿ ಅರ್ಧ ದಾರಿ ಕ್ರಮಿಸಿತ್ತು. ಆಕಾಶದ ನಡುವೆ ಭೂಮಿಯಿಂದ ಸುಮಾರು ಇಪ್ಪತ್ತನಾಲ್ಕು ಸಾವಿರ ಅಡಿ (ಏಳು ಸಾವಿರದ ಮುನ್ನೂರು ಮೀಟರ್) ಎತ್ತರದಲ್ಲಿ ಹಾರುತ್ತಿತ್ತು. ಇದ್ದಕ್ಕಿದ್ದಂತೆ ಛಾವಣಿಯ ಎಡಭಾಗದಿಂದ ದೊಡ್ಡ ಸದ್ದು ಕೇಳಿತು. ನೋಡ
ನೋಡುತ್ತಿದ್ದಂತೆ ಛಾವಣಿಯ ಒಂದು ಭಾಗ ಹರಿಯಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ಕ್ಯಾಪ್ಟನ್ ಮತ್ತು ಸಹಾಯಕಿ ಕುಳಿತುಕೊಂಡ ಕಾಕ್ಪಿಟ್ ಮತ್ತು ಮೊದಲನೆಯ ದರ್ಜೆಯ ಆಸನದ ಮೇಲಿನ ಸುಮಾರು ಐದುವರೆ ಮೀಟರ್ (ಹದಿನೆಂಟು ಅಡಿ) ಛಾವಣಿ ಸಂಪೂರ್ಣ ಕಳಚಿ, ಯಾರಿಗೂ ಸಿಗದಂತೆ ಗಾಳಿಯಲ್ಲಿ ಹಾರಿಹೋಗಿತ್ತು.
ಕಾಕ್ಪಿಟ್ನ ಬಾಗಿಲು ಗಾಳಿಯ ರಭಸಕ್ಕೆ ಛಿದ್ರವಾಗಿತ್ತು. ಸುಮಾರು ಐದು ನೂರು ಕಿಲೋಮೀಟರ್ ರಭಸದ ಗಾಳಿಯ ಹೊಡೆತಕ್ಕೆ ಸಿಕ್ಕರೆ ಇನ್ನೇನಾಗಲು ಸಾಧ್ಯ? ಕ್ಯಾಪ್ಟನ್ ಮತ್ತು ಸಹಾಯಕಿ ಹಿಂತಿರುಗಿ ನೋಡಿದಾಗ, ನೀಲಿ ಬಣ್ಣದ ಆಕಾಶ ಕಂಡು ಕಂಗಾಲಾದರು. ಪ್ರಯಾಣಿಕರಿಗೆ ಆಗಷ್ಟೇ ತಿನಿಸು,
ಪಾನೀಯ ನೀಡಿ ಬಂದು ಕುಳಿತಿದ್ದ ಸಹಾಯಕಿ ಮಿಶೆಲ್ ತನ್ನ ಆಸನದಿಂದ ನೂಕಲ್ಪಟ್ಟಿದ್ದಳು. ಹೇಗೋ ಅಂಪಾಯಿಸಿಕೊಂಡು ತೆವಳುತ್ತ ತನ್ನ
(ಇಲ್ಲದ) ಆಸನದ ಕಡೆ ಬರಲು ಪ್ರಯತ್ನಿಸುತ್ತಿದ್ದಳು. ಈ ನಡುವೆ ಗಾಳಿಯ ಹೊಡೆತಕ್ಕೆ ವಿಮಾನವೂ ನಿಯಂತ್ರಣ ಕಳೆದುಕೊಂಡು ಅತ್ತ ಇತ್ತ ವಾಲುತ್ತಿತ್ತು. ಎಮರ್ಜನ್ಸಿ ಲ್ಯಾಂಡಿಂಗಿಗಾಗಿ ಪೈಲಟ್‌ಗಳಿಬ್ಬರೂ ಹತ್ತಿರದ ಕಹಲೂಯಿ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿ ಸಂಪರ್ಕಿಸುವ
ಪ್ರಯತ್ನ ಮಾಡಿದರು.
ಜೋರಾಗಿ ಬೀಸುವ ಗಾಳಿಯ ಶಬ್ದದಿಂದ ಕಂಟ್ರೋಲ್ ರೂಮ್ ದೂರ, ಒಬ್ಬರು ಆಡಿದ ಮಾತು ಇನ್ನೊಬ್ಬರಿಗೇ ಕೇಳುತ್ತಿರಲಿಲ್ಲ. ತಮಗೆ ತೋಚಿದಂತೆ ಮಾಡಲು ಕೈ ಸನ್ನೆಯಿಂದಲೇ ಪ್ರಯತ್ನಿಸಿದ ಇಬ್ಬರೂ, ವಿಮಾನವನ್ನು ಕೆಳಗೆ ಇಳಿಸುವ ಸಾಹಸಕ್ಕೆ ಮುಂದಾದರು. ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ ಮೂರು ಸಾವಿರ ಅಡಿ ಕೆಳಗೆ ಇಳಿಸಬೇಕಾದ ವಿಮಾನವನ್ನು ಅಂದು ಪೈಲಟ್‌ಗಳಿಬ್ಬರೂ ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ಅಡಿ ಕೆಳಗೆ ಇಳಿಸಿದ್ದರು. ಮೂರು ನಿಮಿಷದಲ್ಲಿ ವಿಮಾನ ಹದಿನಾಲ್ಕು ಸಾವಿರ ಅಡಿ ಕೆಳಗೆ ಇಳಿದಿತ್ತು. ಹೇಗೋ ಹತ್ತಿರದ ನಿಲ್ದಾಣದ ಸಂಪರ್ಕ ಸಾಧಿಸಿ ವಿಮಾನ ಇಳಿಸಬೇಕೆಂದು ನಿರ್ಧರಿಸಿದರು.
ಆದರೆ ಸಾಮಾನ್ಯವಾಗಿ ವಿಮಾನ ಇಳಿಸಲು ಇರಬೇಕಾದ ನೂರಮೂವತ್ತು ಮೈಲಿಗಿಂತಲೂ ಸುಮಾರು ಐವತ್ತು ಮೈಲು ಹೆಚ್ಚಾಗಿತ್ತು ವಿಮಾನದ
ವೇಗ. ಅದರೊಂದಿಗೆ, ತಾಂತ್ರಿಕ ದೋಷದಿಂದಾಗಿ ವಿಮಾನದ ಮುಂದಿನ ಚಕ್ರ ಹೊರಬಂದದ್ದು ಕೂಡ ಕಾಣುತ್ತಿರಲಿಲ್ಲ. ಎಲ್ಲದರ ನಡುವೆಯೂ ಧೈರ್ಯ
ಮಾಡಿ ವಿಮಾನವನ್ನು ಭೂಮಿಗೆ ಇಳಿಸಲು ಇಬ್ಬರೂ ಪೈಲಟ್‌ಗಳು ಯಶಸ್ವಿಯಾದರು. ಅದೃಷ್ಟವೆಂದರೆ, ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದ ರಿಂದ ತಮ್ಮ ತಮ್ಮ ಆಸನಕ್ಕೆ ಅಂಟುಕೊಂಡಿದ್ದರು. ಆದರೂ ಅರವತ್ತೈದು ಜನರು ಗಾಯಗೊಂಡಿದ್ದರು. ದುರಾದೃಷ್ಟವೆಂದರೆ ಪ್ರಮುಖ ಗಗನಸಖಿ ಕ್ಲಾರಾಬೆ ಲಾನ್ಸಿಂಗ್ ಬಲೂನಿನಂತೆ ಗಾಳಿಯಲ್ಲಿ ಹಾರಿಹೋಗಿದ್ದಳು.
ಜೋರಾದ ಗಾಳಿ ಬೀಸಿದಾಗ, ಮನೆಯ ಛಾವಣಿ ಹಾರಿದಾಗಲೇ ಕಂಗಾಲಾಗುತ್ತೇವಂತೆ, ಇನ್ನು ಆಕಾಶ ಮಧ್ಯದಲ್ಲಿ ಚಲಿಸುತ್ತಿರುವ ವಿಮಾನದ ಛಾವಣಿ ಹಾರುತ್ತದೆ ಎಂದರೆ ಹೆದರುವುದು ಬಿಡಿ, ನಂಬುವುದಾದರೂ ಹೇಗೆ? ಇದು ವಿಚಿತ್ರವಾದರೂ ಸತ್ಯ! ನಂತರ, ಯು.ಎಸ್ ನ್ಯಾಷನಲ್ ಟ್ರಾನ್ಸ
ಪೋರ್ಟೇಶನ್ ಸೇಫ್ಟಿ ಬೋರ್ಡ್ ನಡೆಸಿದ ತನಿಖೆಯ ಪ್ರಕಾರ, ವಿಮಾನ ಸಮುದ್ರದ ಮೇಲೆ, ಕರಾವಳಿ ಪ್ರದೇಶದ ಆಕಾಶದಲ್ಲಿ ಹೆಚ್ಚು ಹಾರಾಟ
ನಡೆಸುತ್ತಿದ್ದುದರಿಂದ ಉಪ್ಪು ಮತ್ತು ತೇವಾಂಶಕ್ಕೆ ಹೆಚ್ಚು ತೆರೆದುಕೊಳ್ಳುವುದರಿಂದ, ತುಕ್ಕು ಹಿಡಿದದ್ದು ಇದಕ್ಕೆ ಕಾರಣ ಎಂಬ ಸಮಜಾಯಿಷಿ ನೀಡಿತು.
ಅವಘಡ ಸಂಭವಿಸಿದ ನಂತರ ಯಾವ ಸಮಾಜಿಯಿಷಿ ಸಿಕ್ಕರೆ ಏನು ಫಲ? ಆದರೆ, ಒಂದು ಕಡೆ ಒಬ್ಬ ಕ್ಯಾಬಿನ್ ಸಿಬ್ಬಂದಿಯ ನಷ್ಟದಿಂದ ಆದ ಗಣ
ನೀಯ ಹಾನಿ ಮತ್ತು ಇನ್ನೊಂದು ಕಡೆ ವಿಮಾನದ ಸುರಕ್ಷಿತ ಲ್ಯಾಂಡಿಂಗ್, ವಾಯುಯಾನದ ಇತಿಹಾಸದ ಮಹತ್ವದ ಘಟನೆಯಾಯಿತು. ಇದು
ವಿಮಾನ ಯಾನದ ನೀತಿ, ಸುರಕ್ಷತೆ ಮತ್ತು ಕಾರ್ಯವಿಧಾನಗಳ ಮೇಲೆ ದೂರಗಾಮಿ ಪರಿಣಾಮ ಬೀರಿತು. ಈ ಲೋಹದ ಹಕ್ಕಿಯ ಲೋಹದ ಗೋಡೆ (body) ಅಥವಾ ಹೊರ ಕವಚ ಮೊದಲು ಒಂದರಿಂದ ಒಂದೂವರೆ ಮಿಲಿಮೀಟರ್ ದಪ್ಪ ಇರುತ್ತಿತ್ತು ಎಂದರೆ ಆಶ್ಚರ್ಯ ಪಡಬೇಡಿ. ಈ ಘಟನೆಯ ನಂತರ ದಪ್ಪ ಸ್ವಲ್ಪ ಹೆಚ್ಚಾಗಿ ಎರಡು ಎಟಿಎಮ್ ಕಾರ್ಡ್ ಸೇರಿಸಿದಷ್ಟಾಯಿತು.
ಜತೆಗೆ ಲೋಹದ ಶೀಟ್ ಸಂಧಿಸುವ ಜಾಗದಲ್ಲಿ ಇನ್ನೊಂದು ತೆಳುವಾದ ತಗಡನ್ನು ಆಧಾರವಾಗಿ ನೀಡುವ ಪರಿಪಾಠ ಆರಂಭವಾಯಿತು. 1990ರಲ್ಲಿ ಈ ಘಟನೆಯನ್ನು ಆಧರಿಸಿ Miracle Landing ಚಿತ್ರ ತಯಾರಾಯಿತು. ಅಂದು ವಿಮಾನದಿಂದ ಆಚೆ ಹಾರಿಹೋದ ಕ್ಲಾರಾಬೆ ನೆನಪಿಗಾಗಿ ಹೊನಲುಲು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಉದ್ಯಾನವನ ನಿರ್ಮಿಸಲಾಯಿತು. ವಿಮಾನ ಯಾನದ ದುರಂತಗಳೇ ಹಾಗೆ, ಅಲ್ಲಿಯ ಬಹುತೇಕ ದುರಂತಗಳು ಮೊದಲ ಬಾರಿ ಮತ್ತು ಅದೇ ಕಡೆಯ ಸಲವೂ ಆಗಿರುತ್ತದೆ. ರಸ್ತೆ ದುರಂತಗಳಂತೆ ಒಂದೇ ತಿರುವಿನಲ್ಲಿ ಅಥವಾ ಒಂದೇ ರೀತಿಯ ಅಪಘಾತ ಗಳು ತೀರಾ ಎಂದರೆ ತೀರಾ ವಿರಳ. ಆ ಭರವಸೆಯೇ ಇಂದಿಗೂ ವಿಮಾನ ಪ್ರಯಾಣವನ್ನು ಜೀವಂತವಾಗಿ ಇಟ್ಟಿದೆ. ಇಲ್ಲವಾದರೆ, ಯಾವ ಆಧಾರವೂ ಇಲ್ಲದೇ ಆಕಾಶದಲ್ಲಿ ಹಾರಾಡುವ ದೈತ್ಯ ಲೋಹದ ಹಕ್ಕಿಯ ಮೇಲೆ ಅಷ್ಟು ಭರವಸೆ ಇರುತ್ತಿರಲಿಲ್ಲ.