Thursday, 12th December 2024

ಆಫ್ಘನ್ ಯು‌ದ್ದದಲ್ಲಿ ಗಾರ್ಸಿಯಾ ಸಂದೇಶ ತಂದಿದ್ದಕ್ಕಾಗಿ ವಂದನೆ ಅಂದ್ರೆ ಏನರ್ಥ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಕೆಲವು ದಿನಗಳ ಹಿಂದೆ, ಕನ್ನಡದ ಪ್ರಮುಖ ಪತ್ರಿಕೆಯೊಂದನ್ನು ಓದುವಾಗ, ಒಂದು ಪದ ಪ್ರಯೋಗ ಕೈ ಹಿಡಿದು ಜಗ್ಗಿ ನಿಲ್ಲಿಸಿತು. ಅದರ ಅರ್ಥ ತಿಳಿಯದೇ ಮುಂದೆ ಹೋಗುವಂತಿರಲಿಲ್ಲ. ಆದರೆ ಆ ಪದಪ್ರಯೋಗ ಏನೇ ಮಾಡಿದರೂ ಅಲ್ಲಿ ಸರಿ ಹೊಂದುವಂತಿರಲಿಲ್ಲ. ಇದು ಭಾಷಾಂತರದ ದೋಷವಿದ್ದಿರಬೇಕು ಎಂದು ನನಗೆ ತಕ್ಷಣ ಅನಿಸಿತು. ಅಮೆರಿಕದ ಅಧ್ಯಕ್ಷರಾದ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಮರಳಿದ ಸೈನಿಕರಿಗೆ, ‘ನೀವು ಅಫ್ಗನ್ ಯುದ್ಧದಲ್ಲಿ ಗಾರ್ಸಿಯಾ ಸಂದೇಶವನ್ನು ತಂದಿದ್ದಕ್ಕಾಗಿ ನಿಮಗೆ ಮನದಾಳ ದಿಂದ ಪ್ರಶಂಸೆ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು ಎಂದು ವರದಿಯಾಗಿತ್ತು.

ಈ ವಾಕ್ಯವನ್ನು ಎರಡೆರಡು ಸಲ ಓದಿದೆ, ಅರ್ಥವಾಗಲಿಲ್ಲ. ಅಫ್ಗನ್ ಯುದ್ಧದಲ್ಲಿ ಅಮೆರಿಕದ ಸೈನಿಕರು ಗಾರ್ಸಿಯಾ ಸಂದೇಶವನ್ನು ತರುವುದು ಎಂದರೇನು ಎಂಬ ವಾಕ್ಯಕ್ಕೆ ತಲೆಕೆಡಿಸಿಕೊಂಡೆ. ತಲೆಬುಡ ಅರ್ಥವಾಗಲಿಲ್ಲ. ಈ ವಾಕ್ಯವನ್ನು ಬರೆದ ಉಪಸಂಪಾದಕ ಅನುವಾದ ಮಾಡುವಾಗ ಯಡವಟ್ಟು ಮಾಡಿ ದ್ದಾನೆ ಎಂಬುದು ಖಾತ್ರಿಯಾಯಿತು.

ಇಂಗ್ಲಿಷಿನಲ್ಲಿ To take a message to Garcia ಎಂಬ ಉಕ್ತಿಯಿದೆ. ಹಾಗಂದರೆ, ಯಾವುದಾದರೂ ಕೆಲಸವನ್ನು ಧೈರ್ಯದಿಂದ, ಜಾಣ್ಮೆಯಿಂದ ಮಾಡಿ ಕೊನೆಯಲ್ಲಿ ಗೆಲುವನ್ನು ಸಾಧಿಸುವುದು ಎಂದರ್ಥ. ಇದು ಇನ್ನಷ್ಟು ಸ್ಪಷ್ಟವಾಗಬೇಕೆಂದರೆ, ಒಂದು ಸಣ್ಣ ಐತಿಹಾಸಿಕ ಪ್ರಸಂಗವನ್ನು ನೆನಪಿಸಿಕೊಳ್ಳಬೇಕು.
ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ, ಸ್ಪ್ಯಾನಿಷ್ ಮತ್ತು ಅಮೆರಿಕನ್ ಯುದ್ಧ ನಡೆಯುವಾಗ, ಲೆಫ್ಟಿನೆಂಟ್ ಜನರಲ್ ಆಂಡ್ರೂ ರೋವನ್ ಬಹಳ ಪ್ರಯಾಸ ಪಟ್ಟು, ಜೀವದ ಹಂಗು ತೊರೆದು ಧೈರ್ಯದಿಂದ ಕ್ಯೂಬಾವನ್ನು ಪ್ರವೇಶಿಸಿ, ಅಲ್ಲಿನ ಬಂಡುಕೋರರ ಮುಖ್ಯಸ್ಥನಾದ ಜನರಲ್ ಕ್ಯಾಲಿಕ್ಸ್ಟೊ ಗಾರ್ಸಿಯಾ ನನ್ನು ಭೇಟಿಯಾಗಿ, ಅವನ ಸಂದೇಶವನ್ನು ಅಮೆರಿಕ ಅಧ್ಯಕ್ಷರಿಗೆ ತಲುಪಿಸಿದ.

ಆತ ಕ್ಯೂಬಾವನ್ನು ಪ್ರವೇಶಿಸಿದ್ದು ಮತ್ತು ಗಾರ್ಸಿಯಾನನ್ನು ಭೇಟಿಯಾಗಿದ್ದು ಪರಮಸಾಹಸವೇ. ಆಂಡ್ರೂ ರೋವನ್‌ನ ಈ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಯಿತು. ಅಂದಿನಿಂದ ಅಲಂಕಾರಿಕವಾಗಿ To take a message to Garcia ಎಂಬ ಪದಪ್ರಯೋಗ ಜಾರಿಗೆ ಬಂದಿತು. ಇದನ್ನೇ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಾಯ್ನಾಡಿಗೆ ಮರಳಿದ ಸೈನಿಕರನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾ, I sincerely appreciate the efforts in tha Afghan war by our American soldiers who took the message to Garcia ಎಂದು ಹೇಳಿದರು. ಇದನ್ನೇ ಉಪಸಂಪಾದಕ ತಪ್ಪಾಗಿ ಭಾವಿಸಿ, ಹಾಗೆ ಅನುವಾದಿಸಿದ್ದ. ಈ ಪದಪ್ರಯೋಗ ಜಾರಿಗೆ ಬಂದಿದ್ದರ ಹಿಂದಿನ ಈ ಕಥೆ ಗೊತ್ತಿದ್ದಿದ್ದರೆ, ಈ ಅಚಾತುರ್ಯ ಆಗುತ್ತಿರಲಿಲ್ಲ. ಒಮ್ಮೊಮ್ಮೆ ಹೀಗೆ ಆಗುತ್ತದೆ, ಏನೂ ಮಾಡಲಾಗುವುದಿಲ್ಲ.

ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸದಸ್ಯ ಶಶಿ ತರೂರ್ ಅವರು ದಿಲ್ಲಿಯಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ್ದನ್ನು ಕನ್ನಡ ಪತ್ರಿಕೆಯೊಂದು ವರದಿ ಮಾಡಿತ್ತು. ಆಗಲೂ ಒಂದು ಪದ ಮುಂದಕ್ಕೆ ಹೋಗ  ಬಿಡದೇ ಕೈಜಗ್ಗಿತು. ‘ಉತ್ತರಪ್ರದೇಶದಲ್ಲಿ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ
ಸೇರಲಿ ದ್ದಾರೆ ಎಂದು ಸಣ್ಣ ಹಕ್ಕಿಯೊಂದು ಹೇಳಿದೆ’ ಎಂದು ಶಶಿ ತರೂರ್ ಹೇಳಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿ ಓದಿ, ಒಮ್ಮೆಗೆ ತಲೆ ಽಮ್ ಎಂದಿತು. ತರೂರ್ ಅವರಿಗೆ ಸಣ್ಣ ಹಕ್ಕಿ ಹೇಳುವುದು ಹೇಗೆ ಸಾಧ್ಯ? ಇಂಥ ವಿಷಯ ಹಕ್ಕಿಗೆ ಹೇಗೆ ತಿಳಿಯುತ್ತದೆ? ಯಾವುದೂ ಅರ್ಥವಾಗಲಿಲ್ಲ.

ನಂತರ ಗೊತ್ತಾಗಿದ್ದೇನೆಂದರೆ, ತರೂರ್ ಮಾತಾಡುವಾಗ, A little bird told me…ಎಂದು ಹೇಳಿದ್ದನ್ನು ಪತ್ರಕರ್ತ ಅನುವಾದ ಮಾಡುವಾಗ ಯಥಾ ವತ್ತು ಅನುವಾದಿಸಿ ಯಡವಟ್ಟು ಮಾಡಿದ್ದ. ಇಂಗ್ಲಿಷಿನಲ್ಲಿ A little bird told me… ಎಂಬ ಪ್ರಯೋಗವಿದೆ. ನಿಮಗೆ ಯಾರೋ, ಏನೋ ಒಂದು ಮುಖ್ಯ ವಿಷಯ ಹೇಳುತ್ತಾರೆ, ಆದರೆ ನಿಮಗೆ ಅವರ ಹೆಸರನ್ನು ಬಹಿರಂಗಪಡಿಸುವ ಇಚ್ಛೆ ಇರುವುದಿಲ್ಲ. ಆಗ A little bird told me… ಎಂದು ಹೇಳುವುದುಂಟು.

ಅದೇ ಅರ್ಥದಲ್ಲಿ ತರೂರ್ ಹಾಗೆ ಹೇಳಿದ್ದರು. ಅದನ್ನು ಇಂಗ್ಲಿಷ್ ಪತ್ರಕರ್ತ ಹಾಗೆ ಬರೆದಿದ್ದ. ಆದರೆ ಡೆಸ್ಕಿನಲ್ಲಿದ್ದ ಕನ್ನಡದ ಉಪಸಂಪಾದಕ ಯಥಾವತ್ತು ಅನುವಾದಿಸಿದ್ದ. ಈ ರೀತಿ ಅನುವಾದಿಸುವಾಗ, ಅನುಮಾನ ಬಂದರೆ, ಈ ರೀತಿಯ ಅಪಸವ್ಯಗಳಾಗುವುದಿಲ್ಲ. ಆದರೆ ಕೆಲವರು ಯಾಂತ್ರಿಕವಾಗಿ ಅನುವಾ ದಿಸಿದಾಗ, ಇಂತಹ ಪ್ರಮಾದಗಳಾಗುತ್ತವೆ.

sorry ಎಂದಾಗ ಏನು ಹೇಳಬೇಕು?

ಕೆಲವು ವರ್ಷಗಳ ಹಿಂದೆ, Know Your English ಅಂಕಣದಲ್ಲಿ ಓದುಗರೊಬ್ಬರು, ‘ಯಾರಾದರೂ sorry  ಎಂದು ಹೇಳಿದಾಗ, ನಮ್ಮ ಪ್ರತಿಕ್ರಿಯೆ ಅಥವಾ ಉತ್ತರ ಹೇಗಿರಬೇಕು?’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಕೆ.ಸುಬ್ರಮಣಿಯನ್ ನೀಡಿದ ಉತ್ತರ ನೆನಪಾಗುತ್ತಿದೆ. ಯಾರಾದರೂ sorry ಎಂದು ಹೇಳಿದರೆ, ನಿಮ್ಮ ಪ್ರತಿಕ್ರಿಯೆ ವ್ಯಕ್ತಿ, ಸಂದರ್ಭ, ಸನ್ನಿವೇಶವನ್ನು ಅವಲಂಬಿಸಿರುತ್ತವೆ. ಉದಾಹರಣೆಗೆ, ನಿಮ್ಮ ಕಾಲನ್ನು ತುಳಿದಿದ್ದಕ್ಕಾಗಿ ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ  sorry ಎಂದು ಹೇಳಿದಾಗ, ನೀವು  it doesn’t matter, dont worry, It’s ok  (ಪರವಾಗಿಲ್ಲ, ಚಿಂತೆ ಬೇಡ, ಆಯ್ತು ಬಿಡಿ) ಎಂದು ಹೇಳಬಹುದು.’

ಒಂದು ವೇಳೆ, ನಿಮ್ಮ ಕಾಲನ್ನು ತುಳಿದ ವ್ಯಕ್ತಿ ನಿಮ್ಮ ಬಾಸ್ ಆಗಿದ್ದರೆ, ಮಂತ್ರಿಯಾಗಿದ್ದರೆ, ಆಗ ನಿಮ್ಮ ಉತ್ತರ ಭಿನ್ನವಾಗಿರುತ್ತದೆ. ಆಗ ನೀವು ‘that’s all right, it doesn’t matter at all’ ಎಂದು ಹೇಳುತ್ತೀರಿ. ಬಾಸ್ ಮತ್ತು ಮಂತ್ರಿಯನ್ನು ನೀವೇ ಸಂತೈಸುವ ರೀತಿಯಲ್ಲಿ ನಿಮ್ಮ ಉತ್ತರವಿರುತ್ತದೆ. ಬಾಸ್ ಅಥವಾ ಮಂತ್ರಿ ನಿಮ್ಮ ಕಾಲು ತುಳಿಯಲು, ನೀವು ಸ್ವಲ್ಪ ಕಾರಣರಾದರೆ, ಆಗ ನೀವು ಸಹ ‘sorry’ ಎಂದು ಹೇಳುತ್ತೀರಿ.

ನೀವು ರೆಸ್ಟೋರೆಂಟ್‌ಗೆ ನಿಮ್ಮ ಸ್ನೇಹಿತನನ್ನು ಊಟಕ್ಕೆ ಕರೆಯುತ್ತೀರಿ, ಆತ ತಡವಾಗಿ ಬಂದು, ‘sorry’ ಎಂದು ಹೇಳಿದರೆ, ನೀವು forget it ಎಂದು ಹೇಳುತ್ತೀರಿ. ಅದೇ ನಿಮ್ಮ ಬಾಸ್ ತಡವಾಗಿ ಬಂದು sorry ಎಂದು ಹೇಳಿದರೆ, You are not really late, don’t worry, no need to apologise, Its ok sir, Its ok madam, Its not an issue (ನೀವು ಅಷ್ಟೇನೂ ತಡವಾಗಿ ಬಂದಿಲ್ಲ, ಪರವಾಗಿಲ್ಲ ಬಿಡಿ, ಚಿಂತೆ ಬೇಡ, ನಾನು ಈಗ ತಾನೇ ಬಂದೆ, ಅದೇನು ಮಹಾನ್ ವಿಷಯವಲ್ಲ ಬಿಡಿ) ಎಂದು ಹೇಳಬಹುದು.

ಯಾರಾದರೂ sorry ಎಂದು ಹೇಳಿದಾಗ, ಅದಕ್ಕೆ ನಿಶ್ಚಿತವಾದ ಉತ್ತರ ಎಂಬುದಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ, ಸಂದರ್ಭಕ್ಕೆ ಬದಲಾಗುತ್ತವೆ.

ಇಂಗ್ಲಿಷಿನಲ್ಲಿ ನಗದವರಿಗೆ ಏನಂತಾರೆ?

‘ದಿ ಹಿಂದು’ ಪತ್ರಿಕೆಯಲ್ಲಿ ಬಹಳ ವರ್ಷಗಳಿಂದ Know Your English ಎಂಬ ಅಂಕಣ ಪ್ರಕಟವಾಗುತ್ತಿರುವುದನ್ನು ಗಮನಿಸಿರ ಬಹುದು. ನಾನು ಕಳೆದ ಮೂವತ್ತು ವರ್ಷಗಳಿಂದ ಇದನ್ನು ತಪ್ಪದೆ ಓದುತ್ತಿದ್ದೇನೆ. ಮೊದಲು ಓದುಗರ ಪ್ರಶ್ನೆಗಳಿಗೆ ಕೆ.ಸುಬ್ರಮಣಿಯನ್ ಎಂಬುವವರು ಉತ್ತರಿಸು ತ್ತಿದ್ದರು. ಈಗ ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಎಸ್.ಉಪೇಂದ್ರನ್ ಉತ್ತರಿಸುತ್ತಾರೆ.

ಕೆಲವು ದಿನಗಳ ಹಿಂದೆ, ಓದುಗರೊಬ್ಬರು, ಎಂದೂ ನಗದಿರುವ ವ್ಯಕ್ತಿಗೆ ಇಂಗ್ಲೀಷಿನಲ್ಲಿ ಏನೆಂದು ಹೇಳುತ್ತಾರೆ?’ ಎಂದು ಕೇಳಿದ್ದರು. (ಈ ಪ್ರಶ್ನೆಗೆ ತಮಾಷೆಗೆ, ‘ಯಡಿಯೂರಪ್ಪ’  ಥವಾ ‘ದೇವೇಗೌಡ’ ಎಂದು ಉತ್ತರಿಸಬಹುದು) ಉಪೇಂದ್ರನ್ ಪ್ರಕಾರ, ಇಂಗ್ಲಿಷಿನಲ್ಲಿ ಅದಕ್ಕೆ ಪದವಿದೆ. ಅದು Agelast. (ಅದನ್ನು ಅಜಿಲ್ಹಾಸ್ಟ್ ಎಂದು ಉಚ್ಚರಿಸುತ್ತಾರೆ) ಈ ಪದ ಗ್ರೀಕಿನ agelostos ದಿಂದ ಬಂದಿದೆ. ಹಾಗೆಂದರೆ ಸ್ವಲ್ಪವೂ ನಗದವನು, ಸದಾ ಮುಖ ಸಿಂಡರಿಸಿಕೊಂಡಿರು ವವನು, ಕೆಟ್ಟ ಮುಖ ಹಾಕಿಕೊಂಡಿರುವವನು, ಮುಶಂಡಿಯಂತಿರುವವನು ಎಂದರ್ಥ.

ಆದರೆ ಈ ಪದ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲ. ಇದಕ್ಕೆ ಕಾರಣ ಹಾಗಿರುವವರು ಇಲ್ಲ ಎಂದಲ್ಲ. ಮುಖ ಗಂಟಿಕ್ಕಿಕೊಂಡುವವರು ನಮ್ಮ ಸುತ್ತ ಯಾರಾದರೂ ಸಿಕ್ಕೇ ಸಿಗುತ್ತಾರೆ. ಆದರೂ Agelast ಪದ ಅಷ್ಟೊಂದು ಬಳಕೆಯಲ್ಲಿ ಇಲ್ಲ. ಅದರ ಬದಲು joyless, unsmiling, gloomy, glum ಪದಗಳನ್ನು ಬಳಸುತ್ತಾರೆ.
ಕೆಲವು ಪದಗಳಿದ್ದರೂ ಇದೇ ಅಂತರಂಗ ಸುದ್ದಿ ಅವುಗಳನ್ನು ಬಳಸುವುದಿಲ್ಲ. ಹೀಗಾಗಿ ಅವು ಪದಕೋಶಗಳಲ್ಲೇ ಉಳಿದು ಬಿಟ್ಟಿವೆ.

ನಾಳೆಯಿಂದ agelast ಪದ ಬಳಸಿದರೂ, ಅದನ್ನು ನಿತ್ಯ ಬಳಕೆಗೆ ತರುವುದು ಕಷ್ಟ. ಶಶಿ ತರೂರ್ ಒಂದೆರಡು ಸಲ ಹೇಳಿದರೆ, ಚಾಲ್ತಿಗೆ ಬಂದೀತು.

ಟಾಮ್, ಡಿಕ್ ಮತ್ತು ಹ್ಯಾರಿ

ಈ ಪದ ಆಗಾಗ ಬಳಕೆಯಾಗುವುದನ್ನು ಕೇಳಿರುತ್ತೀರಿ. ಸಾಮಾನ್ಯವಾಗಿ ಇಂಗ್ಲಿಷ್ ಮಾತಾಡುವವರು, ಇಂಗ್ಲಿಷ್ ಶೋಕಿಯಿರುವ ಕನ್ನಡಿಗರು ಇದನ್ನು ಬಳಸು ತ್ತಾರೆ. ಯಕಃಶ್ಚಿತ ವ್ಯಕ್ತಿ, ಪರಿಗಣನೆಗೆ ಯೋಗ್ಯರಲ್ಲದ, ಅರ್ಹರಲ್ಲದ ವ್ಯಕ್ತಿ (people unworthy of notice) ಎಂದು ಹೇಳುವಾಗ, ಟಾಮ್, ಡಿಕ್ ಮತ್ತು ಹ್ಯಾರಿ ಎಂದು ಹೇಳುವುದುಂಟು.

ಉದಾಹರಣೆಗೆ, I am not answerable to every Tom, Dick and Harry, Do not expect me to listen to every Tom, Dick and Harry ಎಂದು ಹೇಳುವುದನ್ನು ಕೇಳಿರುತ್ತೀರಿ. ಈ ಪದ ಇಂದು ನಿನ್ನೆಯದಲ್ಲ. ೧೬೫೭ ರಲ್ಲಿ ಮೊದಲ ಬಾರಿಗೆ ಇಂಗ್ಲೀಷಿನಲ್ಲಿ ಬಳಸಿದ್ದರಂತೆ. ಬ್ರಿಟನ್‌ನಲ್ಲಿ ಕೆಲವರು ಆಗಾಗ ಟಾಮ್, ಡಿಕ್ ಮತ್ತು ಹ್ಯಾರಿ ಬದಲು ಟಾಮ್, ಡಿಕ್ ಮತ್ತು ಫ್ರಾನ್ಸಿಸ್ ಎಂದೂ ಹೇಳುವುದುಂಟು. ಆದರೂ ಟಾಮ್, ಡಿಕ್ ಮತ್ತು ಹ್ಯಾರಿಯೇ ಹೆಚ್ಚು ಜನಪ್ರಿಯ.

ಜಗತ್ತಿನಲ್ಲಿ ಎಲ್ಲಿಯೇ ಬಳಸಿದರೂ, ಅದನ್ನು ಎಲ್ಲರೂ ಒಂದೇ ರೀತಿ ಅರ್ಥ ಮಾಡಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ, ಹಿಂದಿಯಲ್ಲಿ ದೀಪಕ್ ತಿಜೋರಿ
ನಿರ್ದೇಶನದ ‘ಟಾಮ್, ಡಿಕ್ ಮತ್ತು ಹ್ಯಾರಿ’ ಎಂಬ ಹೆಸರಿನ ಸಿನಿಮಾ ಸಹ ಬಂದಿತ್ತು. ಸುಮಾರು ಎಪ್ಪತ್ತು ವರ್ಷಗಳ ಹಿಂದೆಯೇ, ಅಮೆರಿಕದಲ್ಲಿ ಅದೇ ಹೆಸರಿನ ಸಿನಿಮಾ ಕೂಡ ಜನಪ್ರಿಯವಾಗಿತ್ತು.

ಪ್ರತಿ ಭಾಷೆಯಲ್ಲೂ ಟಾಮ್, ಡಿಕ್ ಮತ್ತು ಹ್ಯಾರಿಗೆ ಹೋಲುವ ಪದಗಳಿರುವುದು ವಿಶೇಷ. ಕನ್ನಡದಲ್ಲಿ ಯಂಕ, ಶೀನ ಮತ್ತು ನಾಣಿ ಎಂದು ಹೇಳುವುದುಂಟು. ಇನ್ನು ಕೆಲವು ಕಡೆಗಳಲ್ಲಿ ಕಾಳಪ್ಪ, ಬೋಳಪ್ಪ, ಚೋಳಪ್ಪ ಎಂದೂ ಹೇಳುತ್ತಾರೆ. ತೆಲುಗಿನಲ್ಲಿ ಅಪ್ಪಾರಾವ್, ಸುಬ್ಬಾರಾವ್ ಮತ್ತು ಚೆಂಗರಾವ್ ಎಂದು ಹೇಳುವು ದುಂಟು. ಫ್ರೆಂಚ್ ಭಾಷೆಯಲ್ಲಿ ಪಿಯರೆ, ಪಾಲ್ ಮತ್ತು ಜಕಾಸ್ (Pierre, Paul ou Jacques) ಎಂಬ ಪ್ರಯೋಗ ಚಾಲ್ತಿಯಲ್ಲಿದೆ. ಹಾಗೆಯೇ, ಇಟಾಲಿಯನ್ ಭಾಷೆಯಲ್ಲಿ Tizio, Caio e Sempronio ಎಂದು ಹೇಳುತ್ತಾರೆಂದು ಕೇಳಿದ್ದೇನೆ. ಡಚ್ ಭಾಷೆಯಲ್ಲಿ ಜಾನ್, ಪೀಟರ್ ಮತ್ತು ನಿಕೊಲಸ್ ಎಂದು ಹೇಳುತ್ತಾರೆ.

ಹೀಗೊಂದು ಪತ್ರ
ಕೆಲವು ವರ್ಷಗಳ ಹಿಂದೆ, ಇಂಗ್ಲಿಷ್ ಪತ್ರಿಕೆಯೊಂದು, ಸ್ಥಳೀಯ ಭಾಷಿಕರು ಇಂಗ್ಲೀಷಿನಲ್ಲಿ ತಮ್ಮ ಮಗನಿಗೆ ಹೇಗೆ ಪತ್ರವನ್ನು ಬರೆಯುತ್ತಾರೆ ಎಂಬುದನ್ನು ತಿಳಿಸಲು ಕೆಲವು ಪತ್ರಗಳನ್ನು ಪ್ರಕಟಿಸಿತ್ತು. ಅದರಲ್ಲಿ ನನಗೆ ಇಷ್ಟವಾದ ಪತ್ರವಿದು. (ಇಂಗ್ಲಿಷ್ ಪತ್ರದ ಭಾಷಾಂತರವನ್ನು ನಂತರ ಕನ್ನಡದಲ್ಲಿ ನೀಡಿದ್ದೇನೆ.)
Dear Ambi, All well here, hope all well there. I am glad to inform you that after rotating in many places, I have found a boy for our Ammu. The boy is a super boy. His people are all gold people. No dowry. Enough if we put something on the ear, nose and neck. Simple reception with SKC, Sweet, Khara, Coffee. The astrologer says, all these days
insufficient time for Ammu. Hereafter good time only. Come soon for help whatever be the headgoing work.

Appaಪ್ರಿಯ ಅಂಬಿ, ನಾವು ಇಲ್ಲಿ ಕ್ಷೇಮ. ನೀವು ಅಲ್ಲಿ ಕ್ಷೇಮ ಎಂದು ಭಾವಿಸಿದ್ದೇನೆ. ಒಂದು ಸಂತೋಷದ ವಿಷಯ. ಸಾಕಷ್ಟು ಸುತ್ತಾಡಿದ ನಂತರ, ಅಮ್ಮುಗೆ ಒಳ್ಳೆಯ ಹುಡುಗನನ್ನು ಹುಡುಕಿದ್ದೇನೆ. ಹುಡುಗ ಅಂದ್ರೆ ಬಹಳ ಒಳ್ಳೆಯ ಹುಡುಗ. ಹುಡುಗನ ಮನೆಯವರೆಲ್ಲ ಬಂಗಾರದಂಥವರು. ವರದಕ್ಷಿಣೆ ಇಲ್ಲ. ನಮ್ಮವಳ ಕತ್ತು, ಮೂಗು, ಕಿವಿಗೆ ಎಷ್ಟು ಬೇಕೋ ಅಷ್ಟು ಬಂಗಾರ ಹಾಕಿದರಾಯಿತು.

ಸಿಹಿ, ಖಾರ, ಕಾಫಿ ಜತೆಗೆ ಸರಳ ಮದುವೆ ಮಾಡಿಕೊಟ್ಟರಾಯಿತು. ನಮ್ಮ ಜ್ಯೋತಿಷಿ ಪ್ರಕಾರ ಇಷ್ಟು ದಿನ ಅಮ್ಮುಗೆ ಒಳ್ಳೆಯ ದಿನ ಬಂದಿರಲಿಲ್ಲವಂತೆ. ಇನ್ನು
ಮುಂದೆ ಅವಳಿಗೆ ಬರೀ ಒಳ್ಳೆಯ ಗಳಿಗೆಯಂತೆ. ನಿನಗೆ ಎಂಥ ತಲೆಹೋಗುವ ಕೆಲಸವಿದ್ದರೂ ಸಹಾಯಕ್ಕೆ ಬೇಗ ಬಾ.
– ನಿನ್ನ ಅಪ್ಪ