ಪ್ರಚಲಿತ
ಮಹದೇವ ಪ್ರಸಾದ್ ಎಚ್.ಆರ್
ಭಾರತ ಶಾಂತಿಪ್ರಿಯ ದೇಶ ಆದರೆ ತನ್ನ ಸುತ್ತೆ ಇದಕ್ಕೆ ತದ್ವಿರುದ್ಧವಾದ ದೇಶಗಳನ್ನೇ ಹೊಂದಿದೆ. ಭಾರತ ತನ್ನ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸ್ವಾತಂತ್ರ್ಯ ಪಡೆದಾಗಿನಿಂದ ತನ್ನ ಧೈರ್ಯ, ಬಲಿದಾನಗಳನ್ನು ಪ್ರದರ್ಶಿಸುತ್ತಲೇ ಬಂದಿದೆ.
ದೇಶದ ಶಾಂತಿಯನ್ನು ಹಾಳು ಮಾಡಲು ಯತ್ನಿಸುವ ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವ ಹಾಗೇ ತಿರುಗೇಟು ಗಳನ್ನು ಸಹ ನೀಡಿದೆ. ಲಕ್ಷಾಂತರ ಸೈನಿಕರು ದೇಶವನ್ನು ಕಾಯುತ್ತಿzರೆ. ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ಗಡಿಗಳು ಅತಿಸೂಕ್ಷ್ಮವಾಗಿದ್ದು ಅತ್ಯಂತ ಎಚ್ಚರಿಕೆಯಿಂದ ಕಾಯಬೇಕಾದ ಅನಿವಾರ್ಯತೆ ದೇಶಕ್ಕಿದೆ. ಇದೀಗ ಈ ಸಾಲಿಗೆ ಅಫ್ಘಾನಿಸ್ತಾನ ಸೇರಿದೆ. ಕಳೆದ ೨೦ ವರ್ಷಗಳಿಂದ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಇದ್ದುಕೊಂಡು ತಾಲಿಬಾನಿಗಳ ದಮನಮಾಡುವ ಕಾರ್ಯ ಮಾಡಿತ್ತು.
ಸುದೀರ್ಘ ೨೦ ವರ್ಷ ಕಳೆದರೂ ತಾಲಿಬಾನಿಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಅಮೆರಿಕಕ್ಕೂ ಸಾಧ್ಯ ವಾಗದೇ ಇದೀಗ ದೇಶ ರಕ್ಷಣೆಯನ್ನು ಅಫ್ಘಾನಿಸ್ತಾನ ಸರಕಾರಕ್ಕೆ ಬಿಡುವ ನಿರ್ಧಾರವನ್ನು ಕೈಗೊಂಡ ದಿನದಿಂದ ಮತ್ತೆ ಅಡಗಿಕೊಂಡಿದ್ದ ತಾಲಿಬಾನಿಗಳ ಬಲ ಹೆಚ್ಚಿ ಇಡೀ ದೇಶ ವಶಪಡಿಸಿಕೊಂಡಿದೆ. ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಸರಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ಪಾಕಿಸ್ತಾನ ಹಾಗೂ ಕುತಂತ್ರಿ ಚೀನಾ ಒಳಗೊಳಗೇ ಖುಷಿ ಪಡುತ್ತಿವೆ.
ಇಷ್ಟು ದಿನ ತನ್ನ ಸಹಾಯವನ್ನು ಪಡೆದ ತಾಲಿಬಾನಿಗಳು ತಾನು ಹೇಳುವ ಮಾತು ಕೇಳುತ್ತಾರೆ ಎನ್ನುವುದು ಪಾಕಿಸ್ತಾನದ ಖುಷಿಗೆ ಒಂದು ಕಾರಣವಾದರೇ, ಈ ಅಸ್ತ್ರವನ್ನು ಭಾರತದ ಮೇಲೆ ಬಳಸಬಹುದು ಎನ್ನುವುದು ಮತ್ತೊಂದು ಕಾರಣ. ಭಾರತವನ್ನು ಹೇಗಾದರೂ ಸರಿ ಮಣಿಸಲೇ ಬೇಕು ಎಂದು ಹವಣಿಸುವ ಈ ದೇಶಗಳು ಈಗ ತಾಲಿಬಾನಿಗಳನ್ನುಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿವೆ. ಇದು ಭಾರತಕ್ಕೆ ಬಹಳ ಅಪಾಯಕಾರಿ ನಡೆ.
ವ್ಯಾಪಾರ ಹಾಗೂ ದೇಶ ರಕ್ಷಣೆಯ ದೃಷ್ಟಿಯಿಂದ ಭಾರತ ಕೈಗೊಂಡಿದ್ದ ಚಾಬಹಾರ್ ಬಂದರಿನ ಅಭಿವೃದ್ಧಿಗೆ ತಾಲಿಬಾನಿಗಳಿಂದ ಅಡ್ಡಿಯುಂಟಾಗುವ ಆತಂಕ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿಗೆ ತೆರೆದುಕೊಂಡಿದ್ದ ಅಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ಹಿಡಿತದಲ್ಲಿ ಅಭಿವೃದ್ಧಿ ವಂಚಿತವಾಗಿ ಜನರು ನಲುಗುವುದು ಒಂದೆಡೆಯಾದರೆ, ಕಟ್ಟರ್ ಇಸ್ಲಾಂ ನೀತಿಗಳಿಂದ ಅಲ್ಲಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಿತಿಮೀರುತ್ತವೆ. ತಾಲಿಬಾನಿಗಳಿಗೆ ದೇಶದ ಅಭಿವೃದ್ಧಿ ಗಿಂತ ಇಸ್ಲಾಂ ನೀತಿಯ ಹೆಚ್ಚು ನಂಬಿಕೆ ಇರುವುದರಿಂದ ಫತ್ವಾ ಎನ್ನುವ ಹೆಸರಿನಲ್ಲಿ ಮನಬಂದಂತೆ ನೂರಾರು ಕಾನೂನುಗಳನ್ನು ಮಾಡಿ ಇಡೀ ದೇಶವನ್ನು ನರಕದ ಕೂಪವಾಗಿ ಮಾಡುತ್ತಾರೆ. ದೇಹಕ್ಕೆ ಅಂಟುವಂತೆ ಬುರ್ಖಾ ಧರಿಸಿ ಒಬ್ಬಳೇ ನಿಂತಿದ್ದಳು ಎನ್ನುವ ಒಂದೇ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ಹೆಣ್ಣು ಮಗಳನ್ನು ನಡುಬೀದಿಯಲ್ಲಿ ಕೊಂದುಹಾಕಿದರು, ಇಸ್ಲಾಂ ನೀತಿಗಳಿಗೆ ಅನುಗುಣವಾಗಿ ಜೀವನ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ತನ್ನ ತಾಯಿಯನ್ನೇ ಬರ್ಬರ ವಾಗಿ ಕೊಂದ ತಾಲಿಬಾನಿ. ಈ ಘಟನೆಗಳು ಮುಂದಾಗುವ ಚಿಂತಾಜನಕ ಸ್ಥಿತಿಯನ್ನು ಕಣ್ಣಮುಂದೆ ತರುತ್ತಿವೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಉಗ್ರ ತರಬೇತಿಗೆ ಬಳಸಿಕೊಳ್ಳುತ್ತಿದ್ದ ಪಾಕಿಸ್ತಾನ ಇನ್ನು ಮುಂದೆ ಈ ದೇಶವನ್ನು ಬಳಸಿಕೊಂಡು ಭಾರತದ ಶಾಂತಿಗೆ ಭಂಗ ತರುವ ನಿರಂತರ ಪ್ರಯತ್ನ ಎಸಗುತ್ತದೆ ಹಾಗೂ ತಾಲಿಬಾನಿಗಳ ಹಿಡಿತದಿಂದ ತಪ್ಪಿಸಿಕೊಂಡು ಭಾರತದಂತಹ ಸುರಕ್ಷಿತ ದೇಶಗಳಿಗೆ ಅಕ್ರಮವಾಗಿ ನುಸುಳಲು ಯತ್ನಿಸುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿ ಭಾರತಕ್ಕೆ ಮತ್ತೊಂದು ಕಂಟಕವಾಗಿ ಕಾಡುತ್ತದೆ. ಈಗಾಗಲೇ ರೋಹಿಂಗ್ಯಾ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಂದ ನಲುಗಿರುವ ಭಾರತಕ್ಕೆ ಅಫ್ಘಾನಿಸ್ತಾನ ಹೆಚ್ಚುವರಿ ಹೊರೆಯಾಗುವುದು ನಿಜ. ಇದನ್ನೆ ನೋಡುತ್ತಿದ್ದರೆ ಅಫ್ಘಾನಿಸ್ತಾನ ಭಾರತಕ್ಕೆ ಮಗ್ಗುಲ ಮುಳ್ಳು ಆಗುವುದರಲ್ಲಿ ಸಂದೇಹವೇನೂ ಕಾಣುತ್ತಿಲ್ಲ.
ತನ್ನ ಒಂದು ಕೂದಲು ಸಹ ಕೊಂಕದಂತೆ ಎದೆಯುಬ್ಬಿಸಿ ನಿಲ್ಲುವ ಇಸ್ರೇಲ್‌ನಂತೆ ಭಾರತವು ತನ್ನ ಸಾಮರ್ಥ್ಯವನ್ನು ವೈರಿದೇಶಗಳಿಗೆ ಪರಿಚಯಿಸಲು ಹೆಚ್ಚು ಯೋಚಿಸಬಾರದು. ಭಾರತದ ಶಕ್ತಿಯ ಮೇಲೆ ದೇಶವಾಸಿಗಳಿಗೆ ನಂಬಿಕೆ ಇದೆ.