Monday, 25th November 2024

ಈಕ್ವೆಟೋರಿಯಲ್‌ ಗಿನಿ ಎಂಬ ಆಫ್ರಿಕಾದ ನರಕ ಸದೃಶ ದೇಶದ ಕುರಿತು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಸೆಂಟ್ರಲ್ ಆಫ್ರಿಕಾದ ಪಶ್ಚಿಮ ಕರಾವಳಿಯ ಗಲ್ಫ್ ಆಫ್ ಗಿನಿಗೆ ತಾಕಿಕೊಂಡು ಒಂದು ಪುಟ್ಟ ದೇಶವಿದೆ. ಅದರ ಹೆಸರು ಈಕ್ವೆಟೋರಿಯಲ್
ಗಿನಿ ಅಂತ. ಅದರ ಜನಸಂಖ್ಯೆ ಸುಮಾರು ಹದಿನೈದು ಲಕ್ಷವಿರಬಹುದು. ಆ ದೇಶದ ರಾಜಧಾನಿ ಮಲಾಬೊ. ನೈಸರ್ಗಿಕ ಸಂಪತ್ತು ಸಮೃದ್ಧವಾಗಿರುವ ಈ ದೇಶ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿದೆ.

ಜಗತ್ತಿನಲ್ಲಿಯೇ ಮಾನವ ಹಕ್ಕುಗಳ ಪಾಲನೆ ಅತ್ಯಂತ ನಿಕೃಷ್ಟವಾಗಿದ್ದರೆ ಅದು ಈಕ್ವೆ ಟೋರಿಯಲ್ ಗಿನಿಯಲ್ಲಿ. ವಿಶ್ವದಲ್ಲಿಯೇ ಅತಿ ಕೆಟ್ಟ ಜೀವನ ಮಟ್ಟ, ಆಡಳಿತ, ಹೇಯ ವ್ಯವಸ್ಥೆಯಿದ್ದರೆ ಆ ದೇಶದಲ್ಲಿ ಎಂದು ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಳಿವೆ. ವೇಶ್ಯಾ ವೃತ್ತಿಯೇ ಈ ದೇಶದ ಮುಖ್ಯ ಕಸುಬುಗಳಂದು ಅಂದರೆ ಅಚ್ಚರಿಯಾಗುತ್ತದೆ. ಈ ದೇಶದಲ್ಲಿ ಕನಿಷ್ಠ ಜೀವನಮಟ್ಟವನ್ನು ನಿಭಾಯಿಸುವಂಥ ವಾತಾವರಣವೂ ಇಲ್ಲದಾಗಿದೆ.

ಈ ದೇಶ ಸ್ಪ್ಯಾನಿಷ್ ವಸಾಹತಾಗಿತ್ತು. 1968 ರಲ್ಲಿ ಸ್ವಾತಂತ್ರ್ಯಪಡೆಯಿತು. ಅದಕ್ಕಿಂತ ಮುಂಚೆ ಫ್ರೆಂಚರು, ಪೋರ್ಚುಗೀಸರ ಆಡಳಿತ ಕ್ಕೊಳಪಟ್ಟಿತ್ತು. ಅವರೆಲ್ಲರೂ ಈ ದೇಶವನ್ನು ಕೊಳ್ಳೆ ಹೊಡೆದರು. ಅಲ್ಲಿನ ನೈಸರ್ಗಿಕ ಸಂಪತ್ತನ್ನು ಬರಿದು ಮಾಡಿದರು. ಇಂದಿಗೂ ಈ ದೇಶದ ಅಧಿಕೃತ ಭಾಷೆ ಸ್ಪ್ಯಾನಿಷ್. ಆಫ್ರಿಕಾ ಖಂಡದಲ್ಲಿಯೇ ಸ್ಪ್ಯಾನಿಷ್ ಅಧಿಕೃತ ಭಾಷೆಯ ಮಾನ್ಯತೆ ಪಡೆದಿರುವುದು ಇಂದೇ. ಫ್ರೆಂಚ್ ಮತ್ತು ಪೋರ್ಚು ಗೀಸ್‌ಗೂ ಅಧಿಕೃತ ಭಾಷೆ ಮನ್ನಣೆಯನ್ನು ನೀಡಲಾಗಿದೆ.

ಈ ದೇಶವನ್ನು ಕಳೆದ 43 ವರ್ಷಗಳಿಂದ (1979 ರಿಂದ) ಒಬ್ಬನೇ ಆಳುತ್ತಿದ್ದಾನೆ. ಆತ ತನ್ನನ್ನು ಅಧ್ಯಕ್ಷ ಎಂದು ಕರೆದುಕೊಂಡರೂ ಸರ್ವಾಧಿಕಾರಿಯೇ. ಆತನ ಹೆಸರು – ಟೆಯೋದರೊ ಒಬಿಯಾಂಗ್ ನುಯೇಮ ಬಸೋಗೋ – ಅದನ್ನು ಹೇಳುವುದು ಅಥವಾ ನೆನಪಿಟ್ಟು ಕೊಳ್ಳುವುದು ಕಷ್ಟವೇ. ಇದಕ್ಕಿಂತ ಆತನ ಆಡಳಿತವನ್ನು ಸಹಿಸಿಕೊಳ್ಳುವುದೆಂದರೆ… ಅಬ್ಬಬ್ಬಾ.. ಇನ್ನೂ ಕಷ್ಟ ಕಷ್ಟ. ಈಕ್ವೆಟೋರಿಯಲ್ ಗಿನಿ ಪ್ರಥಮ ಅಧ್ಯಕ್ಷ ಮತ್ತು ತನ್ನ ಚಿಕ್ಕಪ್ಪನಾದ ಫ್ರಾನ್ಸಿಸ್ಕೋ ಮಸಿಯಸ್ ನುಯೇಮನನ್ನು ಮಿಲಿಟರಿ ಕ್ಷಿಪ್ರ ಕ್ರಾಂತಿಯಲ್ಲಿ ಪದಚ್ಯುತ ಗೊಳಿಸಿ, ಅಧ್ಯಕ್ಷನಾದ ಟೆಯೋದರೊ ಒಬಿಯಾಂಗ್ ನುಯೇಮ ಬಸೋಗೋ, 1979ರಿಂದ ಇಡೀ ದೇಶವನ್ನು ತನ್ನ ಆಡೊಂಬಲ ಮಾಡಿ ಕೊಂಡಿದ್ದಾನೆ.

ಸರಕಾರದ ಆಯಕಟ್ಟಿನ ಜಾಗದಲ್ಲಿ ತನ್ನ ಕುಟುಂಬದವರನ್ನೇ ನೇಮಿಸಿ, ಮನಸೋ ಇಚ್ಛೆ ಆಡಳಿತ, ದರ್ಬಾರು ಮಾಡುತ್ತಿದ್ದಾನೆ. ಫ್ರಾನ್ಸಿಸ್ಕೋ ಮಸಿಯಸ್ ನುಯೇಮ ಕೂಡ ಸುಬಗನೇನಲ್ಲ. ಆತ 1968 ರಿಂದ  1979ರವರೆಗೆ ಆ ದೇಶವನ್ನಾಳಿದ. ನುಯೇಮನ ಆಡಳಿತವನ್ನು ಕಾಂಬೋಡಿಯಾದ ಪೋಲ್ ಪೋಟ್ ಆಡಳಿತಕ್ಕೆ ಹೋಲಿಸುವುದುಂಟು.

ಪೋಲ್ಪೋಟ್ ಆಡಳಿತ ಅವಧಿಯಲ್ಲಿ (1975 ರಿಂದ 1979 ರಲ್ಲಿ) ಹದಿನೈದರಿಂದ ಇಪ್ಪತ್ತು ಲಕ್ಷ ಮಂದಿ ಜನಾಂಗೀಯ ನರಮೇಧ ದಲ್ಲಿ ಸತ್ತಿದ್ದರು. ಆ ದಿನಗಳಲ್ಲಿ ಕಾಂಬೋಡಿಯಾದ ಜನಸಂಖ್ಯೆಯ ಕಾಲುಭಾಗದಷ್ಟು ಮಂದಿ ಈ ನರಮೇಧದಲ್ಲಿ ಸತ್ತಿದ್ದರು. ಆತ ತನ್ನ ದೇಶದಲ್ಲಿರುವ ಎಲ್ಲ ಚರ್ಚುಗಳನ್ನು ಧ್ವಂಸ ಮಾಡಿ ಎಲ್ಲ ಧರ್ಮಗಳನ್ನು ನಿಷೇಧಿಸಿದ್ದ. ಧರ್ಮಗುರುಗಳನ್ನು ದೇಶದಿಂದ ಓಡಿಸಿದ್ದ, ಇಲ್ಲವೇ ಬಂಧನದಲ್ಲಿಟ್ಟಿದ್ದ.

ನುಯೇಮ ಅವಧಿಯಲ್ಲಿ ಇಡೀ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತ್ತು. ಒಂದು ಹಂತದಲ್ಲಿ ದೇಶದಲ್ಲಿ ವಿದ್ಯುಚ್ಛಕ್ತಿ, ಸಾರಿಗೆ, ಸಂಪರ್ಕ, ಅಂಚೆ ವ್ಯವಸ್ಥೆ ಎಲ್ಲವೂ ಸ್ಥಗಿತವಾಗಿತ್ತು. ಸುಂದರ ತರುಣಿಯರನ್ನು ಕಂಡರೆ, ಅವರನ್ನು ಫ್ರಾನ್ಸಿಸ್ಕೋ ಮಸಿಯಸ್ ನುಯೇಮ ಬಯಸು ತ್ತಿದ್ದ. ಹೀಗಾಗಿ ಹೆಂಗಸರು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೂರು ಸಲ ಫೇಲಾಗಿದ್ದ ನುಯೇಮ, ಪದವೀಧರರನ್ನು ಕಂಡರೆ ಕರುಬುತ್ತಿದ್ದ. ಅವರಿಗೆ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದ.

Intellectual ಎಂಬ ಪದವನ್ನು ಬಳಸಕೂಡದೆಂದು ಆದೇಶ ಹೊರಡಿಸಿದ್ದ. ಕೊನೆಗೆ ಪದವೀಧರರ ಬಗ್ಗೆ ಆತನ ಅಸಹನೆ ಅದೆಷ್ಟು ಮಿತಿ
ಮೀರಿತೆಂದರೆ, ಇಡೀ ದೇಶದಲ್ಲಿ ಕೇವಲ ಇಬ್ಬರು ವೈದ್ಯರು ಮತ್ತು ಹತ್ತು-ಹನ್ನೆರಡು ತಾಂತ್ರಿಕ ಪದವೀಧರರಿದ್ದರು! ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿ ಅಥವಾ ಇಂಗ್ಲಿಷ್ ಔಷಧವನ್ನು ನಿಷೇಧಿಸಿ, ಎಲ್ಲರೂ ನಾಟಿ ವೈದ್ಯರ ಮೊರೆ ಹೋಗಬೇಕು ಎಂದು ಆದೇಶಿಸಿದ. ಆತನ ತಿಕ್ಕಲುತನ ಮತ್ತು ದುಷ್ಟತನಕ್ಕೆ ಪಾರವೇ ಇರಲಿಲ್ಲ.

ಇದನ್ನು ಸಹಿಸದ ಟೆಯೋದರೊ ಒಬಿಯಾಂಗ್ ನುಯೇಮ ಬಸೋಗೋ ತನ್ನ ಚಿಕ್ಕಪ್ಪನ ವಿರುದ್ಧವೇ ಬಂಡೆದ್ದು ಕ್ಷಿಪ್ರ ಕ್ರಾಂತಿಯಲ್ಲಿ
ಪದಚ್ಯುತಗೊಳಿಸಿದ. ಈತನಾದರೂ ಒಳ್ಳೆಯ ಆಡಳಿತ ನೀಡಬಹುದು ಎಂದು ಆ ದೇಶದ ಜನರ ಆಸೆ ಬಹುಬೇಗ ಮಣ್ಣುಪಾಲಾಯಿತು.
ಕಳೆದ ನಲವತ್ತಮೂರು ವರ್ಷಗಳಲ್ಲಿ ಬಸೋಗೋ ನಡೆಸಿದ ಅವ್ಯವಹಾರ, ಅನಾಚಾರ, ಭ್ರಷ್ಟಾಚಾರ ಒಂದೆರಡಲ್ಲ. 79 ವರ್ಷ ವಯಸ್ಸಿನ ಬಸೋಗೋ ಇಡೀ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾನೆ.

ತನ್ನನ್ನು ಪ್ರಶ್ನಿಸುವವರನ್ನು ಮುಲಾಜಿಲ್ಲದೇ ಸಾವಿನ ಕೂಪಕ್ಕೆ ತಳ್ಳುತ್ತಾನೆ. ಅಲ್ಲಿ ಅವನ ವಿರುದ್ಧ ಮಾತಾಡುವವರು ಯಾರಿದ್ದಾರೆ? ತನ್ನನ್ನು ದೇವರು ಎಂದು ಕರೆಯಬೇಕೆಂದು ಆದೇಶ ಹೊರಡಿಸುವಷ್ಟು ಆತನ ಬುದ್ಧಿಭ್ರಮಣೆಯಾಗಿದೆ. ಆದರೂ ಅವನಿಗೆ ಯಾರೂ
ಎದುರು ಮಾತಾಡುತ್ತಿಲ್ಲ. ಅವನ ಹುಚ್ಚಾಟಗಳನ್ನು ಯಾರೂ ಪ್ರಶ್ನಿಸುತ್ತಿಲ್ಲ. ಈತನ ವಿರುದ್ಧ ಚುನಾವಣೆಗೆ ನಿಲ್ಲಲೂ ಅಲ್ಲಿನ ಜನ ಹೆದರು ತ್ತಿದ್ದಾರೆ. ಆತನ ಸಾವಿನಿಂದ ಮಾತ್ರ ಆ ದೇಶ ದಾಸ್ಯತ್ವದ ಸಂಕೋಲೆಯಿಂದ ಬಿಡಿಸಿಕೊಳ್ಳಬಹುದು. ಅಲ್ಲಿ ತನಕ ಅಲ್ಲಿನ ಜನರ ಪಾಡು ಘನಘೋರ.

ಆಫ್ರಿಕಾದ ಹಲವು ದೇಶಗಳ ಬಗ್ಗೆ ಕಣ್ಣು ತೆರೆಯಿಸುವ ಕೃತಿಗಳನ್ನು ಬರೆದ ಬರ್ರ‍ಿಕ್ ಮೊಲೆ- ಬರೆದ Equatorial Guinea History of Politics, and Supremacy, untold History ಎಂಬ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ಈಕ್ವೆಟೋರಿಯಲ್ ಗಿನಿ ಎಂಬ ಶಾಪಗ್ರಸ್ತ ದೇಶ, ಸ್ವಾತಂತ್ರ್ಯ ಪಡೆದ ನಂತರ ಇಬ್ಬರು ಅಧ್ಯಕ್ಷರುಗಳ ದುರಾಡಳಿತಕ್ಕೆ ಸಿಕ್ಕು ಹೇಗೆ ನಲುಗಿ ಹೋಗುತ್ತಿದೆ ಎಂಬುದನ್ನು ಈ ಕೃತಿಯಲ್ಲಿ ಅತ್ಯಂತ ಮನಕಲಕುವಂತೆ ಪ್ರತಿಬಿಂಬಿತವಾಗಿದೆ. ಈ ಆಧುನಿಕ ಜಗತ್ತಿನಲ್ಲೂ, ವೈಯಕ್ತಿಕ ಸ್ವಾತಂತ್ರ್ಯದ ನಂಬಿಕೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಈ ದಿನಗಳಲ್ಲೂ ಈಕ್ವೆಟೋರಿಯಲ್ ಗಿನಿ ತಲುಪಿದ ನೈತಿಕ ಅಧಃಪತನ ಕಥೆ ಕರುಣಾಜನಕವಾಗಿದೆ.

ಒಬ್ಬ ಅಂಕಣಕಾರ್ತಿಯ ನಿರ್ಗಮನ ನಾನು ಹಲವು ವರ್ಷಗಳಿಂದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಆಸ್ಥೆಯಿಂದ ಓದುತಿದ್ದ ಅಂಕಣ ಕಾರ್ತಿ ಜೇನ್ ಬ್ರೊಡಿ ಮೊನ್ನೆ ತನ್ನ ಲೇಖನಿಗೆ ಮುಚ್ಚಳ ತೊಡಿಸಿದ್ದಾಳೆ. ಇನ್ನು ಮುಂದೆ ಅವಳ ಅಂಕಣಗಳಿರುವುದಿಲ್ಲ ಎಂಬ ಸಂಗತಿಯೇ ನನ್ನಲ್ಲಿ ವಿಷಾದ ಮಡುಗಟ್ಟುವಂತೆ ಮಾಡಿತು. ನಾನು ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಆರೋಗ್ಯಕ್ಕೆ ಸಂಬಂಧಿಸಿದ ಅಂಕಣಗಳನ್ನು ಹಠಕ್ಕೆ ಬಿದ್ದು ಓದುವುದಿಲ್ಲ. ಆದರೆ ಜೇನ್ ಬ್ರೊಡಿ ಅಂಕಣ (Personal Health) ಗಳನ್ನು ತಪ್ಪದೆ ಓದುತ್ತಿದ್ದೆ.

ಇದಕ್ಕೆ ಕಾರಣ ಆ ವಿಷಯದಲ್ಲಿ ಆಕೆ ಸಂಪಾದಿಸಿದ ಆಸಕ್ತಿ, ಜ್ಞಾನ ಮತ್ತು ಅವಳ ನವಿರಾದ ಭಾಷೆ. ಕಳೆದ ವಾರ (ಫೆಬ್ರವರಿ 21 ರಂದು) ಆಕೆಯ ಕೊನೆ ಅಂಕಣ ಪ್ರಕಟವಾದಾಗ, ನನ್ನ ಹಾಗೆ ಆ ಪತ್ರಿಕೆಯ ಅಸಂಖ್ಯ ಓದುಗರೂ ಬೇಸರಪಟ್ಟುಕೊಂಡಿರಲು ಸಾಕು. ಅದಾಗಿ ನಾಲ್ಕು ದಿನಗಳ ನಂತರ ‘ನ್ಯೂಯಾರ್ಕ್ ಟೈಮ್ಸ್’ ಅರೋಗ್ಯ ಅಂಕಣಕಾರ್ತಿ ತಾರಾ ಪಾರ್ಕರ್ ಪೋಪ್, ಜೇನ್ ಬ್ರೊಡಿ ಬಗ್ಗೆ ಒಂದು ಆಪ್ತ ಬರಹವನ್ನು ಓದಿ ಮುಗಿಸಿದಾಗ, ಆ ಕ್ಷಣ ಆ ಪತ್ರಿಕೆಯ ಪುಟಗಳೆಲ್ಲ ಖಾಲಿ ಖಾಲಿ ಎನಿಸಿದ್ದು ಸುಳ್ಳಲ್ಲ.

ಜೇನ್ ಬ್ರೊಡಿ ನಿರಂತರವಾಗಿ 46 ವರ್ಷಗಳವರೆಗೆ Personal Health ಅಂಕಣ ಬರೆದಳು! ‘ನ್ಯೂಯಾರ್ಕ್ ಟೈಮ್ಸ್’ನಂಥ ಪ್ರತಿಷ್ಠಿತ ಪತ್ರಿಕೆಯಲ್ಲಿ, ಅಂತಾರಾಷ್ಟ್ರೀಯ ಓದುಗರನ್ನು ಹೊಂದಿರುವ ದೈನಿಕದಲ್ಲಿ, ಒಂದು ಕ್ಷೇತ್ರದ ಬಗ್ಗೆ ಇಷ್ಟೊಂದು ಸುದೀರ್ಘ ಅವಧಿಯವರೆಗೆ
ಬರೆಯುವುದು ಸಣ್ಣ ಮಾತಲ್ಲ. ಅಂಕಣಕಾರ್ತಿಯಾಗುವ ಮುನ್ನ ಆಕೆ ಅರೋಗ್ಯ ವರದಿಗಾರ್ತಿಯಾಗಿದ್ದಳು. ಎಂಬತ್ತೊಂದು ವರ್ಷ ಪೂರೈ ಸಿರುವ ಬ್ರೊಡಿ, ಮನೆಯನ್ನು ಬಿಟ್ಟರೆ ಅತಿ ಹೆಚ್ಚು ಸಮಯ ಕಳೆದಿದ್ದು ಸುದ್ದಿಮನೆಯ. ಅರವತ್ತು ವರ್ಷಗಳ ಕಾಲ ಆಕೆ ಸುದ್ದಿಮನೆ ಯಲ್ಲಿ ಅಕ್ಷರ ಬದುಕು ಬೆಳಗಿದಳು. ಆ ಪೈಕಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯೊಂದರ ಐವತ್ತೇಳು ವರ್ಷಗಳನ್ನು ಕಳೆದಳು.

1965ರಲ್ಲಿ ಬ್ರೊಡಿ ಕೆಲಸ ಅರಸಿಕೊಂಡು ‘ನ್ಯೂಯಾರ್ಕ್ ಟೈಮ್ಸ್’ಗೆ ಬಂದಾಗ, ಆಗ ಸಂಪಾದಕರಾಗಿದ್ದ ಕ್ಲಿಫ್ಟನ್ ಡೇನಿಯಲ್ ಅವರಿಗೇ, ‘ನಿಮ್ಮ ಪತ್ರಿಕೆಯಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ಸುದ್ದಿಯನ್ನೇಕೆ ವರದಿಮಾಡುವುದಿಲ್ಲ? ಇದು ಟೈಮ್ಸ್ ಪತ್ರಿಕೆಯ ದೊಡ್ಡ ಕೊರತೆ’ ಎಂದು ನೇರವಾಗಿ ಹೇಳಿದ್ದಳು. ಆಕೆಯ ನಿರ್ಭೀತ ಅಭಿಪ್ರಾಯವನ್ನು ಕೇಳಿದ ಡೇನಿಯಲ್, ಬ್ರೊಡಿಯನ್ನು ಸೈ ರಿಪೋರ್ಟರ್ ಆಗಿ ನೇಮಿಸಿದರು.

ಹನ್ನೊಂದು ವರ್ಷಗಳ ಕಾಲ ಆಕೆ ಸೈ ರಿಪೋರ್ಟರ್ ಆಗಿ ಒಳ್ಳೆಯ ಹೆಸರು ಮಾಡಿದಳು. 1976 ರಲ್ಲಿ ಅಂದಿನ ಸಂಪಾದಕರ ಪ್ರೇರಣೆ ಮೇರೆಗೆ, ಆಕೆ Personal Health ಅಂಕಣ ಆರಂಭಿಸಿದಳು. ಆರಂಭವಾದ ಒಂದೆರಡು ವಾರಗಳ ಅದು ಓದುಗರ ಪ್ರಶಂಸೆಗೆ ಪಾತ್ರ ವಾಯಿತು. ಆಸ್ಪತ್ರೆಗಳಲ್ಲಿ ಅಥವಾ ಡಾಕ್ಟರುಗಳ ದವಾಖಾನೆಯಲ್ಲಿ ಉತ್ತಮ ಆರೋಗ್ಯ ಅರಳುವುದಿಲ್ಲ, ಅದು ಅರಳುವುದು ಆರೋಗ್ಯ ವಂತ ಮನಸ್ಸುಗಳಲ್ಲಿ ಎಂಬುದನ್ನು ಬ್ರೊಡಿ ಅರ್ಥ ಮಾಡಿಕೊಂಡಿದ್ದಳು. ನಾವು ಎಂಥ ಆಹಾರ ಸೇವಿಸುತ್ತೇವೆ, ಎಷ್ಟು ಸೇವಿಸುತ್ತೇವೆ, ಎಷ್ಟು ಹೊತ್ತು ಮಲಗುತ್ತೇವೆ, ಎಂಥ ಯೋಚನೆ ಮಾಡುತ್ತೇವೆ, ಇಡೀ ದಿನವನ್ನು ಹೇಗೆ ಕಳೆಯುತ್ತೇವೆ ಮುಂತಾದ ಸಣ್ಣ ಸಣ್ಣ ಸಂಗತಿ ಗಳಿಂದ ಒಬ್ಬ ವ್ಯಕ್ತಿಯ ಆರೋಗ್ಯ ನಿರ್ಧರಿತವಾಗುತ್ತದೆ.

ಇಂಥ ಸಂಗತಿಗಳು ಬ್ರೊಡಿ ಅಂಕಣಕ್ಕೆ ವಸ್ತುವಾಗುತ್ತಿದ್ದವು. ಆರೋಗ್ಯ ಅಂಕಣವನ್ನು ಅವಳು ವೈದ್ಯರ ಸುಪರ್ದಿಗೆ ಬಿಟ್ಟುಕೊಡಲಿಲ್ಲ. ಅದನ್ನು ಆದಷ್ಟು ಆಪ್ತವಾಗಿಸಿದಳು, ವೈಯಕ್ತಿಕ ಸ್ಪರ್ಶ ನೀಡಿದಳು. ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸರಳ ಉಪಾಯಗಳನ್ನು ಹೇಳಿದಳು. ಹಾಗಂತ ಉಪದೇಶ ಕೊಡಲು ಹೋಗಲಿಲ್ಲ. ತಾನು ಕಂಡುಕೊಂಡ ಪರಿಹಾರವೇ ಪರಮಸತ್ಯ ಎಂದು ವಾದಿಸಲಿಲ್ಲ. ತನ್ನ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರಲಿಲ್ಲ. ಬೇರೆಯವರ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳನ್ನೂ ಬರೆದಳು. ಕ್ರಮೇಣ ಈ ಅಂಕಣ ಸರ್ವವ್ಯಾಪಿಯಾಯಿತು.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಕೆಲವು ವಿಷಯಗಳಲ್ಲಿ ಮಡಿವಂತಿಕೆಯನ್ನು ಬಿಟ್ಟಿಲ್ಲ. ತನ್ನ ಓದುಗರಿಗೆ ಅಪಥ್ಯವೆನಿಸಬಹುದು ಎಂದು ಅನಿಸಿದರೆ, ಅದು ಇಂದಿಗೂ ತಾನೇ ಹಾಕಿದ ಗಡಿಯನ್ನು ದಾಟುವುದಿಲ್ಲ. ‘ನ್ಯೂಯಾರ್ಕ್ ಟೈಮ್ಸ್’ ನಂಥ ಪತ್ರಿಕೆ ಏನೇ ಮಾಡಿದರೂ ಅದು ಪತ್ರಿಕೋದ್ಯಮದಲ್ಲಿ ಒಂದು ಬೆಂಚ್ ಮಾರ್ಕ್ ಎಂದು ಕರೆಯಿಸಿಕೊಳ್ಳುತ್ತದೆ. ಹೀಗಾಗಿ ಅದು ಏನೇ ಮಾಡಿದರೂ ಬಹಳ ಎಚ್ಚರದಿಂದ ಮಾಡುತ್ತದೆ. ಒಮ್ಮೆ ಬ್ರೊಡಿ ಆರಂಭದ ದಿನಗಳಲ್ಲಿ, ನಪುಂಸಕತ್ವದ ಬಗ್ಗೆ ಬರೆದಾಗ, ಆ ಪತ್ರಿಕೆ ಪ್ರಕಟಿಸಿರಲಿಲ್ಲ. ತಾರಾ ಪಾರ್ಕರ್ ಪೋಪ್ ಪ್ರಕಾರ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಮುಖಪುಟದಲ್ಲಿ ಮೊದಲ ಬಾರಿಗೆ sexual intercourse ಎಂಬ ಪದವನ್ನು  ಬರೆದಿದ್ದರೆ, ಅದು ಬ್ರೊಡಿ.

ಒಮ್ಮೆ ತಮ್ಮ ಅಂಕಣದಲ್ಲಿ, ‘ಶಿಶ್ನ’ (penis) ಎಂಬ ಪದವನ್ನು ಬಳಸಿದಾಗ, ಸಂಪಾದಕರು ಆ ಪದವನ್ನು ಎಡಿಟ್ ಮಾಡಿ, ಪುರುಷ ಜನನಾಂಗ (male sexual organ) ಎಂದು ಬದಲಿಸಿದರು. ಆದರೆ ಬ್ರೊಡಿ ಸಂಪಾದಕರ ಜತೆ ಜಗಳ ಮಾಡಿ, ಶಿಶ್ನ ಎಂದೇ ಪ್ರಕಟ ವಾಗಲಿ ಎಂದು ಹಠ ಮಾಡಿದರು. ಇಂಥ ಪದ ಬಳಕೆ ಬಗ್ಗೆಯೇ ಸಹಮತವಿಲ್ಲದಿದ್ದರೆ ಅಥವಾ ಮಡಿವಂತಿಕೆ ಇದ್ದರೆ ‘ವೈಯಕ್ತಿಕ ಆರೋಗ್ಯ’ ಅಂಕಣವನ್ನು ಬರೆದು ಪ್ರಯೋಜನವಿಲ್ಲ ಎಂದು ಖಂಡುತುಂಡು ಹೇಳಿದ್ದರು.

ಒಮ್ಮೆ ಬ್ರೊಡಿ ಹಸ್ತಮೈಥುನದ (masturbation) ಬಗ್ಗೆ ಬರೆದಾಗ, ’ಟೈಮ್ಸ್’ ಪತ್ರಿಕೆ ಸಂಪಾದಕರು ಅದನ್ನು ಪ್ರಕಟಿಸಲಿಲ್ಲ. ಸಂಪಾ ದಕರ ಜತೆ ಜಗಳವಾಡಿ ಪ್ರಯೋಜನವಿಲ್ಲ ಎಂದು ಬ್ರೊಡಿ ಸುಮ್ಮನಾದರು. ನಾಲ್ಕು ವರ್ಷಗಳ ನಂತರ, ಆ ಸಂಪಾದಕರು ನಿರ್ಗಮಿಸಿದ ಬಳಿಕ, ಆ ಅಂಕಣವನ್ನು ಪ್ರಕಟಿಸಿದ್ದರು. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಬಹುಮಹಡಿ ಕಟ್ಟಡವನ್ನು ಏರಿಳಿಯಲು ಬ್ರೊಡಿ ಎಂದೂ ಲಿಫ್ಟ್ ಬಳಸಿದ್ದು ಇಲ್ಲವೇ ಇಲ್ಲ. ಕೆಲವೊಮ್ಮೆ ನಲವತ್ತು – ಐವತ್ತು ಮಹಡಿಗಳಿರುವ ಕಟ್ಟಡವನ್ನು ಸಹ ಮೆಟ್ಟಿಲು ಬಳಸಿಯೇ ಹತ್ತುತ್ತಿದ್ದಳು.

ಎಂಬತ್ತು ವರ್ಷವಾದರೂ ಆಕೆ ‘ಟೈಮ್ಸ್’ ಕಚೇರಿಯನ್ನು ಮೆಟ್ಟಿಲು ಬಳಸಿಯೇ ಏರುತ್ತಿದ್ದಳು ಮತ್ತು ಇಳಿಯುತ್ತಿದ್ದಳು. ಯಾರಾದರೂ ಈ ವಿಷಯದ ಬಗ್ಗೆ ಕೇಳಿದರೆ, ನನಗೆ ಯಾವತ್ತು ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುವುದಿಲ್ಲವೋ, ಅವತ್ತು ನಾನು ಈ ಅಂಕಣ ಬರೆಯುವು ದನ್ನು ನಿಲ್ಲಿಸುತ್ತೇನೆ’ ಎಂದು ಹೇಳಿದ್ದಳು. ಆದರೆ ಆಕೆ ಅದಕ್ಕಿಂತ ಮುನ್ನವೇ ಅಂಕಣ ಬರಹಗಳಿಗೆ ಗುಡ್ ಬೈ ಹೇಳಿದ್ದಾರೆ. ಸಂಪಾದಕ ಮತ್ತು ವಿನ್ಯಾಸಕಾರ ಮೊದಲೆ ಸಂಪಾದಕರೇ ಪತ್ರಿಕೆಯ ವಿನ್ಯಾಸಕಾರರೂ ಆಗಿರುತ್ತಿದ್ದರು. ಅದು ಅಪೇಕ್ಷಣೀಯವೂ ಹೌದು. ಯಾವ ಸಂಪಾದಕ ಮೂಲತಃ ವಿನ್ಯಾಸಕಾರನ ಮನಸ್ಸನ್ನೂ ಹೊಂದಿರುತ್ತಾನೋ, ಆತ ತನ್ನ ಪತ್ರಿಕೆಗೆ ಕಲಾತ್ಮಕತೆಯ ಸ್ಪರ್ಶ ನೀಡುತ್ತಾನೆ.

ವಿನ್ಯಾಸದ ಗಂಧ-ಗಾಳಿಯೇ ಇಲ್ಲದ ಸಂಪಾದಕ, ಕೋಣ ಉಚ್ಚೆ ಹೊಯ್ದಂತೆ, ಪತ್ರಿಕೆಯನ್ನು ತರುತ್ತಾನೆ. ಈ ಮಾತು ಅರ್ಥವಾಗಲು ಮೂವತ್ತು ವರ್ಷಗಳ ಹಿಂದಿನ ಪತ್ರಿಕೆಗಳನ್ನು ನೋಡ ಬೇಕು. ಆಗ ಪತ್ರಿಕೆಯಲ್ಲಿ ಡಿಸೈನ್‌ಗೆ ಮಹತ್ವವನ್ನೇ ನೀಡುತ್ತಿರಲಿಲ್ಲ. ಹೆಡ್ ಲೈನ್ ಇಲ್ಲದೇ, ಫೋಟೋಗಳಿಲ್ಲದೇ ಪುಟಕಟ್ಟುತ್ತಿದ್ದರು. ಬೆಂಗಳೂರು ನಗರಕ್ಕೆ ಕಬ್ಬನ್ ಪಾರ್ಕ್ ಅಥವಾ ಲಾಲಬಾಗ್ ಇದ್ದಂತೆ ಪತ್ರಿಕೆಯ ಪುಟಗಳಿಗೆ ಬಿಳಿ ಜಾಗ (White Space). ಈ ಬಿಳಿಜಾಗವನ್ನು ಬಿಟ್ಟಷ್ಟೂ ಪುಟಗಳಲ್ಲಿರುವ ವರದಿಗಳು ನಿರಾಳವಾಗಿ ಉಸಿರಾ ಡುತ್ತವೆ.

ಇಲ್ಲದಿದ್ದರೆ ಓದುಗನಿಗೆ ಕಲಾಸಿಪಾಳ್ಯದಲ್ಲಿ ಹೆಜ್ಜೆಹಾಕಿದ ಅನುಭವ. ಆಗ ಓದು ಸಲೀಸಾಗದು, ಸರಾಗವಾಗದು. ಪತ್ರಿಕೆಯೆಂದರೆ
ಹತ್ತಿಮೂಟೆಯಲ್ಲ, ಎಲ್ಲಾ ಸುದ್ದಿಯನ್ನು ಹಿಡಿದು, ಗಿಡಿದುತುರುಕಲು. ಅದು ಸಂಪೂರ್ಣವಾಗಿ ಮನುಷ್ಯರ ಭಾವನೆಗಳಿಂದ, ಮನುಷ್ಯರಿಗಾಗಿ ಸಿದ್ಧವಾಗುವ ಸರಕು. ಅದು ನೂರಕ್ಕೆ ನೂರು human product. ಹಾಗೆಂದ ಮೇಲೆ, ಅಲ್ಲಿ ಅಂದ, ಚೆಂದ, ಸೌಂದರ್ಯ, ಕಲೆ, ಕಲಾತ್ಮಕತೆ, ಸೃಜನಶೀಲತೆ, ಸೃಷ್ಟಿಶೀಲತೆ, ಉಪಾಸನೆ, ಮೌನ, ಧೇನಿಸುವಿಕೆ, ರಸಗ್ರಹಣಕ್ಕೆ ಪ್ರಾಧಾನ್ಯ ಇರಲೇಬೇಕು. ಹೀಗಾಗಿ ಒಂದು ಒಳ್ಳೆಯ ಪತ್ರಿಕೆ ನೋಡಿದಾಗ ಒಂದು ಕಲಾಕೃತಿ ನೋಡಿದ, ಪೇಂಟಿಂಗ್‌ಆಸ್ವಾದಿಸಿದ, ಸಂಗೀತ ಆಲಿಸಿದ, ಹಾಡನ್ನು ಕೇಳಿದ, ಯಕ್ಷಗಾನ ನೋಡಿದ, ಒಳ್ಳೆಯ ಭೋಜನ ಸವಿದ, ಬಾಯ್ತುಂಬಾ ಹರಟೆ ಹೊಡೆದ, ಆಪ್ತಸಂಗಾತಿ ಜತೆ ನಿರುಮ್ಮಳವಾಗಿ ಕಳೆದ ಅನುಭವ ವಾಗಬೇಕು.

ಅಷ್ಟಕ್ಕೂ ಪತ್ರಿಕೆಯೆಂದರೆ, ಪತ್ರಕರ್ತರ ಕಸಾಯಿಖಾನೆಯಲ್ಲ. ನಾವೆ ಸೇರಿಪತ್ರಿಕೆ ಎಂಬ ಮೃಷ್ಟಾನ್ನ ಭೋಜನವನ್ನು ಮಾಡಿ ಓದುಗನಿಗೆ ಬಡಿಸುತ್ತಿದ್ದೇವೆ, ಎದೆಗವಚಿಕೊಂಡು ಬಿಡಿಸಿದ ಚಿತ್ರವನ್ನು ಓದುಗನಿಗೆ ಸಮರ್ಪಿಸುತ್ತಿದ್ದೇವೆ ಎಂಬ ಪವಿತ್ರ ಭಾವ ಇರಬೇಕು. ಇದು ಒಂದು ದಿನ ಮಾತ್ರ ಮೂಡಿಸಿಕೊಳ್ಳಬೇಕಾದ ಭಾವವಲ್ಲ. ಪ್ರತಿನಿತ್ಯ ಏಳುವಾಗಲೇ ಈ ಭಾವದಿಂದ ಸಿಂಗಾರಗೊಳ್ಳಬೇಕು. ಅಷ್ಟಕ್ಕೂ ಪತ್ರಿಕೆ ಯೆಂದರೆ ಪಂಚಾಂಗದಂತೆ predictable ಅಲ್ಲ.

ಈ ಕಾರಣದಿಂದ ಪತ್ರಿಕೆ ವಿನ್ಯಾಸಕನ ಕೈಚಳಕವನ್ನು ಬಯಸುತ್ತದೆ. ಅಂದಗಾರನ ಸೊಗಸುಗಾರಿಕೆ, ಸೃಜನಶೀಲತೆಯನ್ನು ಅಪೇಕ್ಷಿಸು ತ್ತದೆ. ಕೆತ್ತಿದ ಅಕ್ಷರಗಳನ್ನು ಅಂದವಾಗಿ ಪೋಣಿಸುವ ವಿನ್ಯಾಸಕಾರ ಮತ್ತು ಕಲೆಗಾರನೂ ಅಷ್ಟೇ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ಆತಪತ್ರಿಕೆಯ ಓದಿಗೆ ಕಲಾ ಸ್ಪರ್ಶವನ್ನು ನೀಡುತ್ತಾನೆ. ಓದಿದ ನಂತರವೂ ಸುದ್ದಿಯಲ್ಲದ ಸಂಗತಿಗಳಿಂದ ಪತ್ರಿಕೆಯೊಂದು ಮನಸ್ಸಿ ನಲ್ಲಿರುವುದು, ವೃತ್ತಿ ಶ್ರೇಯಸ್ಸು, ಶ್ರೇಷ್ಠತೆ ಪಡೆಯುವುದು ಈ ಕಾರಣಗಳಿಗೆ.

ಇದೇ ಕಾರಣಗಳಿಗೆ ಕೆಲವರು ಪತ್ರಿಕೆಯ ಪುಟಗಳಿಗೆ ಫ್ರೇಮ್ ತೊಡಿಸಿ, ಗೋಡೆಗೆ ನೇತು ಹಾಕಿರುತ್ತಾರೆ. ಪತ್ರಿಕೆಯ ಅಂದವಾದ ಪುಟ
ಉತ್ತಮ ಕಲಾವಿದನ ಪೇಂಟಿಂಗ್‌ಗೆ ಸಮ. ‘ಇಂದಿನ ಸುದ್ದಿ, ಳೆಗೆ ರದ್ದಿ’ ಎಂಬುದು ಗೊತ್ತಿದ್ದರೂ ಕೆಲವರು ಪತ್ರಿಕೆಗಳನ್ನು ಜೋಪಾನವಾಗಿ ಕಾಪಿಡುವುದು ಅದಕ್ಕಿರುವ ಈ ಎಲ್ಲಾ ಗುಣಕಥನಗಳಿಂದಾಗಿ. ಹೀಗಾಗಿಪತ್ರಿಕೆಯನ್ನು ರೂಪಿಸುವಾಗ, ತಾನೊಂದು ಶಾಶ್ವತ ಕಲಾಕೃತಿ ಯನ್ನು ಕೆತ್ತುತ್ತಿದ್ದೇನೆ, ರೂಪಿಸುತ್ತಿದ್ದೇನೆ ಎಂಬ ಶ್ರದ್ಧೆಯಿಂದಲೇ ಅಣಿಯಾಗಬೇಕು. ಈ ಮನಸ್ಥಿತಿ ಸಾಕಾರಕ್ಕೆ ವಿನ್ಯಾಸ, ಒಪ್ಪ-ಓರಣ, ಅಂದ-ಚೆಂದಗಳೆ ಬೇಕು.

ಒಬ್ಬ ಸಂಪಾದಕನ ಯಶಸ್ಸಿಗೆ ಒಳ್ಳೆಯ, ಪಕ್ಕಾ ಕಸುಬಿಗಳಂತೆ, ವೃತ್ತಿನಿಷ್ಠ ಪತ್ರಕರ್ತರಂತೆ, ಒಳ್ಳೆಯ ಡಿಸೈನರ್‌ಗಳು ಬೇಕು. ಪತ್ರಿಕೆಗೆ ಮಾಂತ್ರಿಕ ಸ್ಪರ್ಶ ನೀಡುವ ಸೊಬಗುಗಾರರು ಬೇಕು. ಪತ್ರಿಕೆಯನ್ನು ಯಾವತ್ತೂ ಸುಂದರ ನೆನಪಾಗಿಸುವ ಕನಸುಗಾರರು ಬೇಕು. ಕನಸನ್ನು ಮಾರಾಟಮಾಡುವ ಸಗಟುದಾರರು ಬೇಕು. ಅವೆಲ್ಲವುಗಳನ್ನು ಪಳಗಿದ ವಿನ್ಯಾಸಕಾರ ಮಾಡಬಲ್ಲ. ‘ನೋಟವೇ ಪತ್ರಿಕೆಯ ಮಾಟ’ ಎಂದು ಸಂಪಾದಕನನ್ನು ನಂಬಿಸುವ, ಆತನ ಮನಪರಿವರ್ತನೆ ಮಾಡುವ ಪಾಂಗಿತ ಡಿಸೈನರ್ ಮಾಡಬಲ್ಲ. ಆತ ಸಿನಿಮಾ ನಿರ್ದೇಶಕನಿಗೆ ಆರ್ಟ್ ಡೈರೆಕ್ಟರ್ ಇದ್ದಂತೆ. ನಿರ್ದೇಶಕನ ಕಲ್ಪನೆಗಳನ್ನು ಇನ್ನಷ್ಟು ಅರಳಿಸಿ, ಕೊನೆಯಲ್ಲಿ ಅವನಲ್ಲಿಯೇ ಬೆರಗು ಮೂಡಿ ಸುವ ಚೆಲುವನಾತ.

ಡಿಸೈನ್‌ಗಳಿಂದ ಆಕರ್ಷಿತವಾಗಿ ಗೆದ್ದ ಎಲ್ಲ ಪತ್ರಿಕೆಗಳ ಸಂಪಾದಕರ ಕೋಟಿನೊಳಗೆ ಇಂಥ ಒಬ್ಬ ವಿನ್ಯಾಸಕಾರ ಇದ್ದೇ ಇರುತ್ತಾನೆ.
ಖ್ಯಾತ ಸಂಪಾದಕ ವಿನೋದ ಮೆಹತಾ ಜತೆ ಮೊಯುದ್ದೀನ್ ಇದ್ದ. ಮೆಹತಾ ಯಾವುದೇ ಪತ್ರಿಕೆ ಅಥವಾ ಮ್ಯಾಗಜಿನ್‌ಗೆ ಹೋಗಲಿ, ಮೊಯುದ್ದೀನ್ ಅವರನ್ನು ಜತೆಯ ಕರೆದುಕೊಂಡು ಹೋಗುತ್ತಿದ್ದರು. ಮೊಯುದ್ದೀನ್‌ಗೆ ಕಿವಿ ಕೇಳುತ್ತಿರಲಿಲ್ಲ. ಆದರೆ ಆತನಿಗೆ ಅದ್ಭುತ ಕಣ್ಣುಗಳು (ಸೌಂದರ್ಯ ದೃಷ್ಟಿ) ಇದ್ದವು. ಆತನ ಕಣ್ಣುಗಳ ಮೂಲಕವೇ ಮೆಹತಾ ಪತ್ರಿಕೆಯನ್ನು ರೂಪಿಸಿದರು. ತಮ್ಮ ಯಶಸ್ಸಿನಲ್ಲಿ ಒಂದಷ್ಟು ಪಾಲನ್ನು ಅವರು ಮೊಯುದ್ದೀನ್‌ಗೆ ನೀಡಿದ್ದಾರೆ.