Sunday, 15th December 2024

ಅಗಸ್ತ್ಯ ಪ್ರೋಕ್ತ ಆದಿತ್ಯ ಹೃದಯ ಇಂದಿಗೂ ಪ್ರಸ್ತುತ

ಅವಲೋಕನ

ಬೇಲೂರು ರಾಮಮೂರ್ತಿ

ಯುದ್ಧ ಸನ್ನದ್ಧನಾಗಿರುವ ಮತ್ತು ದೇವತೆಗಳಿಗೆ ಅವನ ರೀತಿ ಯಿಂದ ಅನುಮಾನ ಹುಟ್ಟಿಸುತ್ತಿದ್ದ ಶ್ರೀರಾಮನಿಗೆ ತನ್ನ ಕರ್ತವ್ಯದ ಅರಿವನ್ನುಂಟು ಮಾಡಲು ದೇವತೆಗಳು ಮಾಡಿದ ಪ್ರಯತ್ನದಂತೆ ಅಗಸ್ತ್ಯರು ಶ್ರೀರಾಮನಲ್ಲಿಗೆ ಬರುತ್ತಾರೆ.

ರಾಮಾಯಣದಲ್ಲಿ ಶ್ರೀರಾಮನನ್ನು ರಾವಣನೊಂದಿಗೆ ಯುದ್ಧ ಸನ್ನದ್ಧನನ್ನಾಗಿ ಮಾಡುವುದು ಅಗಸ್ತ್ಯರಿಗಿದ್ದ ಒಂದು ದೊಡ್ಡ ಕಾರ್ಯ. ಇದು ಹೇಗೆಂದು ಸ್ವಲ್ಪ ಗಮನ ಹರಿಸೋಣ. ರಾಮ ರಾವಣರ ಯುದ್ಧದ ಒಂದು ಹಂತದಲ್ಲಿ ರಾವಣನು ಶ್ರೀರಾಮನಿಂದ ಬಲವಾದ ಹೊಡೆತ ತಿಂದು ಮೂರ್ಛೆ ಹೋದಾಗ ಅವನ ಸಾರಥಿಯು ರಾವಣನನ್ನು ಒಂದು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ.

ಮೂರ್ಛೆಯಿಂದ ಎಚ್ಚೆತ್ತ ರಾವಣ ಸಾರಥಿಗೆ ಬೈದು ಮತ್ತೆ ಯುದ್ಧ ರಂಗಕ್ಕೆ ಬರುತ್ತಾನೆ. ಹಿಂದಿರುಗಿ ಬಂದ ರಾವಣನನ್ನು ಕಂಡ ಶ್ರೀರಾಮ
ಒಂದು ರೀತಿಯಲ್ಲಿ ಯುದ್ಧ ವಿಮುಖನಾಗಿರುತ್ತಾನೆ. ಅವರು ಶ್ರೀರಾಮನಿಗೆ ಉಪದೇಶ ಮಾಡಿದುದೇ ಆದಿತ್ಯ ಹೃದಯ. ಆದಿತ್ಯ ಹೃದಯದ ಉಪದೇಶಕ್ಕೆ ಮೊದಲು ಅದರ ಪ್ರಯೋಜನದ ಬಗೆಗೆ ಅಗಸ್ತ್ಯರು ಶ್ರೀರಾಮನಿಗೆ ಹೇಳುತ್ತಾರೆ.

ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ
ಸ್ಥಿತಮ್
ರಾವಣಂ ಜಾಗ್ರತೋ ದೃಷ್ಟ್ವಾ ಯುದ್ಧಾಯ
ಸಮುಪಸ್ತಿತಮ್
ಯುದ್ಧ ಪರಿಶ್ರಾಂತನೂ, ಯುದ್ಧಕ್ಕೆ ಸಮುಪಸ್ತಿತ
ನಾದವನೂ ಹಾಗೇ ಚಿಂತೆಯಿಂದ ಕೂಡಿದವನೂ ಶ್ರೀರಾಮನೇ. ಮತ್ತೆ ಮತ್ತೆ ಯುದ್ಧಕ್ಕೆ ಸನ್ನದ್ಧನಾಗಿ ಬರುತ್ತಿದ್ದವನು ರಾವಣನಾದರೆ ಸಮರೇ ಚಿಂತಯಾ ಸ್ಥಿತಮ್ ಎನ್ನುವುದು ರಾಮನಿಗೆ ಅನ್ವಯವಾಗುವಂಥದ್ದು. ಅದು ಹೇಗೆಂದರೆ ರಾವಣನನ್ನು ಘಾಸಿಗೊಳಿಸಿ ಅವನನ್ನು ಯುದ್ಧಮುಖನನ್ನಾಗಿ ಮಾಡಿ ಓಡಿಸಬೇಕೆಂಬುದು ಶ್ರೀರಾಮನ ಇಚ್ಚೆಯಾಗಿರುವಾಗ ರಾವಣ ಮತ್ತೆ ಮತ್ತೆ ಬೆಂಕಿಗೆ ಬೀಳುವ ಪತಂಗದಂತೆ ಶ್ರೀರಾಮನ ಎದುರಿಗೆ ಬರುತ್ತಿದ್ದಾನೆ.

ಆದರೆ ರಾವಣನನ್ನು ಸಂಹಾರ ಮಾಡಲೆಂದೇ ಜನ್ಮತಾಳಿರುವ ಶ್ರೀರಾಮನಿಗೆ ಈ ರೀತಿ ಅನಿಸಿದ್ದು ಏಕೆ ಎಂದರೆ ಶ್ರೀರಾಮ ತನ್ನ ಮಹಾವಿಷ್ಣು ಅವತಾರದ ದಿನಗಳನ್ನು ನೆನಪಿಸಿಕೊಂಡು ಈ ರಾವಣ ಕೂಡಾ ತನ್ನವನೇ, ತನ್ನ ದ್ವಾರಪಾಲಕನಾಗಿ ನನ್ನನ್ನು ಸದಾ ಸಂರಕ್ಷಣೆ ಮಾಡಿದವನು. ಸದಾ ನನ್ನ ರಕ್ಷಣೆಗೆ ನಿಂತವನನ್ನೇ ನಾನು ಸಂಹಾರ ಮಾಡುವುದು ಯಾವ ನ್ಯಾಯ ಎನ್ನುವ ಚಿಂತೆ ಅವನಲ್ಲಿ ಮೂಡಿದ್ದು.

ಕೃಷ್ಣಾವತಾರದಲ್ಲಿ ಕೃಷ್ಣ ನೂರಕ್ಕೆ ನೂರು ಭಗವಂತ. ಅವನಿಗೆ ಪ್ರತಿಕ್ಷಣ ಏನು ಆಗುತ್ತದೆ ಎನ್ನುವುದು ಗೊತ್ತು. ಹೀಗಾಗಿ ಅವನು ಎಲ್ಲದಕ್ಕೂ ನಿಮಿತ್ತ ಮಾತ್ರನಾಗಿ ಇರುತ್ತಾನೆ. ಆದರೆ ಶ್ರೀರಾಮಾವತಾರ ದಲ್ಲಿ ಶ್ರೀರಾಮ ಪ್ರತಿಶತ ಎಪ್ಪತ್ತೈದು ಮಾನವ. ಇನ್ನು ಪ್ರತಿಶತ ಇಪ್ಪತ್ತೈದು ಮಾತ್ರ ಭಗವಂತ. ಹೀಗಾಗಿ ರಾಮಾವತಾರದಲ್ಲಿ ಶ್ರೀರಾಮನ ಪ್ರತಿಯೊಂದು ಕೆಲಸಗಳಿಗೂ ದೇವತೆಗಳು ಬೆಂಗಾವಲಾಗಿ ನಿಂತು ಶ್ರೀರಾಮನಿಗೆ ಆದೇಶ ಕೊಡುತ್ತಿರುತ್ತಾರೆ.

ಹೀಗಾಗಿ ಯುದ್ಧದ ನಡುವೆ ಶ್ರೀರಾಮನ ಈ ಭಾವನೆ ಸಕಲ ದೇವತೆಗಳ ಮನದಲ್ಲೂ ಗೊಂದಲ ಎಬ್ಬಿಸಿ ಎಲ್ಲಿ ಶ್ರೀ ರಾಮನು ರಾವಣನನ್ನು ಕೊಲ್ಲದೇ ಹೋಗುವನೋ ಎನ್ನುವ ಸಂಶಯದಿಂದ ಸಮರೇ ಚಿಂತಯಾ ಸ್ಥಿತಮ್ ಎನ್ನುವಂತಿದ್ದ ಶ್ರೀರಾಮನ ಮನ ಪರಿವರ್ತನೆ ಮಾಡಲು ಅಗಸ್ತ್ಯರನ್ನು ಕಳಿಸುತ್ತಾರೆ. ಕಳಿಸುತ್ತಾರೆ ಎಂದರೆ ರಾಮ ರಾವಣರ ಯುದ್ಧವನ್ನು ಸಕಲ ದೇವತೆಗಳೂ ಅಗಸ್ತ್ಯರ ಸಹಿತ ವೀಕ್ಷಿಸುತ್ತಿದ್ದರು.

ಈ ಸಂದರ್ಭದಲ್ಲಿ ಅಗಸ್ತ್ಯರು ಶ್ರೀರಾಮನ ಮುಂದೆ ಬರುತ್ತಾರೆ. ರಾಮಾಯಣದ ಯುದ್ಧಕಾಂಡದಲ್ಲಿ ಈ ಶ್ಲೋಕ ಅರ್ಥಪೂರ್ಣವಾದುದು
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ ಉಪಾಗಮ್ಯಾ ಬ್ರದ್ರಾಮಾ ಮಗಸ್ತ್ಯೋ ಭಗವಾಂಸ್ತದಾ ಅಂದರೆ – ದೇವತೆಗಳೊಂದಿಗೆ ಕೂಡಿಕೊಂಡು ಯುದ್ಧವನ್ನು ನೋಡಲು ಅಗಸ್ತ್ಯ ಭಗವಾನರು ಅಭ್ಯಾಗತರಾಗಿದ್ದರು.

ರಾಮನ ಬಳಿಗೆ ಬಂದು ಈ ರೀತಿ ನುಡಿದರು ಎಂದು ತಿಳಿಸುತ್ತದೆ. ರಾಮಾಯಣದಲ್ಲಿ ವಿಷ್ಣವಿನ ಅವತಾರದ ಶ್ರೀರಾಮನೇ ಸ್ವತಃ ಯುದ್ಧ ಮುಖನಾದಾಗ ಅಗಸ್ತ್ಯರು ರಾಮ ರಾವಣರ ಯುದ್ಧ ಸಂದರ್ಭದಲ್ಲಿ ಬಂದದ್ದು ಶ್ರೀರಾಮನಿಗೆ ತಾತ್ಕಾಲಿಕ ಪರಿಹಾರ ಸೂಚಿಸಲು ಅಲ್ಲ. ತಾವು ಶ್ರೀರಾಮನಿಗೆ ಉಪದೇಶಿಸುತ್ತಿರುವುದು, ಅದು ಶ್ರೀರಾಮನ ಮುಖಾಂತರ ಸಕಲ ಮಾನವರಿಗೂ ಆಪತ್ಕಾಲದಲ್ಲಿ ಆಸರೆ ನೀಡುವ
ಕಾಮಧೇನುವಾಗಿರಬೇಕು ಎಂದು ಅಗಸ್ತ್ಯರು ಭಾವಿಸಿದ್ದರು.

ಅಂತೆಯೇ ಅಗಸ್ತ್ಯರು ರಾಮಾವತಾರದಲ್ಲಿ ಶ್ರೀರಾಮನನ್ನು ನಿಮಿತ್ತ ಮಾಡಿಕೊಂಡು ಆದಿತ್ಯ ಹೃದಯವನ್ನು ಜಗತ್ತಿಗೆ ಸಾರುತ್ತಾರೆ.

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ
ಸನಾತನಂ
ಯೇನ ಸರ್ವಾನರೀನ್ ವತ್ಸಾ ಸಮರೇ
ಜಯಷ್ಟತೀ

ಈ ಶ್ಲೋಕದಲ್ಲಿ ಅಗಸ್ತ್ಯರ ಚಿಂತೆಯ ಒಂದು ಛಾಯೆ ಇದೆ. ಅದು ಶ್ರೀರಾಮನ ನಿರ್ಧಾರದ ಕುರಿತು. ಅದಕ್ಕೇ ಅವರು ಶ್ರೀರಾಮನನ್ನು ಏನಾದರೂ ಮಾಡಿ ಹುರಿದುಂಬಿಸಿ ಅವನ ಅನಾಸಕ್ತಿಯನ್ನು ದೂರ ಮಾಡುವ ಉದ್ಧೇಶದಿಂದ ಈ ಮಾತುಗಳನ್ನು ಹೇಳುತ್ತಾರೆ.

ಮೊದಲಿಗೆ ರಾಮನ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವ ಉದ್ಧೇಶದಿಂದ ಅವನ ಹೆಸರನ್ನು ಎರಡೆರಡು ಬಾರಿ ಉಚ್ಛರಿಸುತ್ತಾರೆ. ರಾಮ ರಾಮ
ಎಂದು. ನಂತರ ಅವನನ್ನು ಅವನ ಶೌರ್ಯ ವನ್ನೂ ಹೊಗಳಬೇಕು. ಅದಕ್ಕೆ ಮಹಾಬಾಹೋ ಎನ್ನುತ್ತಾರೆ.

ಬಲಶಾಲಿಯಾದ ಬಾಹುಗಳುಳ್ಳವನೇ ಎಂದು ಸಂಭೋಧಿಸಿ ನಂತರ ಚಿಕ್ಕ ಮಕ್ಕಳಿಗೆ ನೋಡು ಈಗ ನೀನು ನನ್ನ ಮಾತು ಕೇಳ್ತೀಯ ಅಲ್ವಾ ಅಂತ
ಮುದ್ದಿಸುವಂತೆ ಶೃಣು ಎನ್ನುತ್ತಾರೆ. ರಾಮನ ಗಮನವನ್ನು ತಮ್ಮತ್ತ ಸೆಳೆದುಕೊಂಡು ಈಗ ನಾನು ಹೇಳುವುದನ್ನು ಕೇಳು ಎಂದು ರಾಮನ ಸಂಪೂರ್ಣ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ನಂತರ ಗುಹ್ಯಂ ಸನಾತನಂ ಎನ್ನುತ್ತಾರೆ. ಅಂದರೆ ಇದು ಗೋಪ್ಯವಾದ ಮಂತ್ರವೂ ಹೌದು ಮತ್ತು ಸನಾತನ ವಾದುದೂ ಹೌದು. ಆದ್ದರಿಂದ ಇದನ್ನು ನಿನ್ನ ಹೃದಯವೆಂಬ ಗುಹೆಯಲ್ಲಿ ಭದ್ರವಾಗಿಟ್ಟುಕೋ ಎಂದು ಹೇಳುತ್ತಾರೆ. ರಾಮನಿಗೆ ತಂದೆಯ ಸ್ಥಾನದಲ್ಲಿದ್ದೀನಿ ಎಂದುಕೊಂಡು ವತ್ಸಾ ಎನ್ನುತ್ತಾರೆ.

ಸರ್ವಾನರೀನ್ (ಸರ್ವಾನ್ ಅರೀನ್) ಎಂದರೆ ಆದಿತ್ಯ ಹೃದಯಂ ಪುಣ್ಯಂ ಸರ್ವ ಶತೃನಾಶನಮ್ ಜಯಾವಹಂ ಜಪಂ ನಿತ್ಯಮಕ್ಷಯಂ ಪರಮೋ
ಶಿವಂ ಸರ್ವಮಂಗಲ ಮಾಂಗಲ್ಯಂ ಸರ್ವಪಾಪ
ಪ್ರಣಾಶನಮ್ ಚಿಂತಾಲೋಕ ಪ್ರಶಮನ ಮಾಯುರ್ವದ್ಧನ
ಮುತ್ತಮಮ್

ಹೇ ರಾಮ, ಈ ಆದಿತ್ಯ ಹೃದಯವು ಪುಣ್ಯ ವಾದುದು. ಶತ್ರುಗಳನ್ಲೆಲ್ಲಾ ನಾಶ ಮಾಡಿಬಿಡುವುದು. ಇದು ಜಯವನ್ನು ತಂದುಕೊಡುತ್ತದೆ. ಜಪಿಸಲು
ಯೋಗ್ಯವಾದುದು. ಎಂದೆಂದಿಗೂ ಕರಗಿ ಹೋಗದಂಥದ್ದು. ಚಿಂತೆಯಿಂದ ಉಂಟಾಗುವ ಶೋಕವನ್ನು ಕಳೆಯುತ್ತದೆ. ಆಯುಷ್ಯವನ್ನೂ ವೃದ್ಧಿಸುತ್ತದೆ. ಹೀಗಾಗಿ ಇದು ಎಲ್ಲರಿಗೂ ಉತ್ತಮ ವಾದುದು.

ಆದಿತ್ಯ ಹೃದಯದಲ್ಲಿ ಅಗಸ್ತ್ಯರು ಶ್ರೀರಾಮನಿಗೆ ನೀನು ಆದಿತ್ಯನನ್ನು ಆರಾಧಿಸು ಎನ್ನುವಂತೆ ರಶ್ಮಿಮಂತಂ ಸಮುದ್ಯನ್ತಂ ದೇವಾಸುರ
ನಮಸ್ಕೃತಮ್
ಪೂಜಯಸ್ವ ವಸ್ವನ್ತಂ ಭಾಸ್ಕರಂ ಭುವನೇಶ್ವರಮ್

ರಾಮನೇ, ರಶ್ಮಿಮಂತನೂ ಚನ್ನಾಗಿ ಉದಯಿಸುತ್ತಿರುವವನೂ ದೇವತೆಗಳಿಗೂ, ಅಸುರರಿಗೂ ಪೂಜ್ಯನಾದವನು. ವಸ್ವಂತನೂ, ಭುವನೇಶ್ವರನೂ ಆದ ಭಾಸ್ಕರನನ್ನು ಆರಾಧಿಸು ಎಂದು ಹೇಳುತ್ತಾರೆ. ಭಾಸ್ಕರನಿಗೆ ಇಡೀ ಜಗತ್ತಿನ ತಾಪವನ್ನು ನಾಶಗೊಳಿಸುವ ಶಕ್ತಿ ಇದೆ.

ಭಾಸ್ಕರನನ್ನು ಧ್ಯಾನಿಸಿದರೆ ತನ್ನ ವಿಮುಖತೆಯಿಂದ ಹೊರಬಂದು ತಾನು ಅವತರಿಸಿರುವ ಜವಾಬ್ದಾರಿ ಅರಿವಾಗಿ ಮತ್ತೆ ಯುದ್ಧ ಸನ್ನದ್ಧನಾಗುವೆ ಎನ್ನುತ್ತಾರೆ. ಆದಿತ್ಯ ಹೃದಯವನ್ನು ಪಠಿಸಿದವರಿಗೂ ಸಹ ತಮ್ಮ ಜೀವನದ ವಿಮುಖತೆ ಯಿಂದ ಹೊರಬರಲು ಮತ್ತು ನಮ್ಮೊಳಗಿರುವ ಶತೃಗಳನ್ನು ನಾಶಮಾಡಲು ಸಹಾಯಕ ವಾಗುತ್ತದೆ. ಹೀಗಾಗಿ ಆದಿತ್ಯ ಹೃದಯವನ್ನು ಭಗವದ್ಗೀತೆಯನ್ನು ಆದಿ ಭಗವದ್ಗೀತೆ ಎಂದೂ ಹೇಳುತ್ತಾರೆ.

ಇದೇ ರೀತಿ ಸೂರ್ಯನ ಶಕ್ತಿಯನ್ನೂ, ಅವನ ಉಪಯೋಗವನ್ನೂ ಜಗತ್ತಿಗೆ ಸಾರುವ ಒಟ್ಟು ೩೨ ಶ್ಲೋಕಗಳು ಶ್ರೀಮನ್ ರಾಮಾಯಣದ ಯುದ್ಧಕಾಂಡದಲ್ಲಿ ಇದೆ.

ಆದಿತ್ಯ ಹೃದಯವನ್ನು ಕೇಳಿದ ನಂತರ ಶ್ರೀರಾಮನ ಮನೋಸ್ಥಿತಿ ಹೇಗಿತ್ತು ಎಂದರೆ: ಏತತ್ ಶೃತ್ವಾ ಮಹಾತೇಜಾ ನಷ್ಟಶೋಕೋ
ಭವತ್ ತದಾ
ಧಾರಯಾಮಾಸ ಸುಪ್ರೀತೋ ರಾಘವ:
ಪ್ರಯತಾತ್ಮವನ್

ಶ್ರೀ ರಾಮಚಂದ್ರನು ಆದಿತ್ಯ ಹೃದಯವನ್ನು ಕೇಳಿ, ಮಹಾತೇಜಸ್ವಿಯಾಗಿ, ವಿಶೇಷವಾದ ಪ್ರೀತಿಯಿಂದ ಆದಿತ್ಯ ಹೃದಯವನ್ನು ತನ್ನ ಹೃದಯದಲ್ಲಿರಿಸಿಕೊಂಡು ಪ್ರಯತಾತ್ಮವಂತನಾದ.

ಒಂದು ಹಂತದಲ್ಲಿ ಮತ್ತೆ ಮತ್ತೆ ಎದುರಾಗುತ್ತಿದ್ದ ರಾವಣನನ್ನು ಕಂಡ ಶ್ರೀರಾಮನು ಚಿಂತಾಶೋಪ ಪರವಶನಾಗುತ್ತಿದ್ದವನು ಆದಿತ್ಯ ಹೃದಯವನ್ನು

ಪಠಿಸಿದ ನಂತರ ಶೋಕವನ್ನು ಕಳೆದುಕೊಂಡನು. ಯುದ್ಧದ ನಡುವೆ ಚಿಂತೆ ಹೊತ್ತು ನಿಂತವನು ಈಗ ಆ ಅಂದಿನ ಶೋಕದ ನೆನಪೂ ಇಲ್ಲದಂತಾದನು. ಅಲ್ಲಿಂದ ಮುಂದೆ ರಾಮನಿಂದ ರಾವಣ ಸಂಹಾರದ ಕೆಲಸ ಸುಲಭವಾಯಿತು. ಹೀಗಾಗಿ ಆದಿ ಭಗವದ್ಗೀತೆಯೆಂದು
ಪ್ರತಿಪಾದಿತವಾಗಿರುವ ಅಗಸ್ತ್ಯ ಪ್ರೋಕ್ತ ಆದಿತ್ಯ ಹೃದಯ ಇಂದಿಗೂ ಪ್ರಸ್ತುತವಾಗಿವೆ.