ಚಕ್ರವ್ಯೂಹ
ರಮಾನಂದ ಶರ್ಮಾ
ವಯಸ್ಸಾದವರಿಗೆ, ಗಂಭೀರ ಆರೋಗ್ಯ ಸಮಸ್ಯೆಯವರಿಗೆ, ಸದನದಲ್ಲಿ ಬಹುಕಾಲ ಇದ್ದವರಿಗೆ ಮತ್ತು ಮತದಾರರ ವಿಶ್ವಾಸ ಕಳೆದುಕೊಂಡವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿಯ ಟಿಕೆಟ್ ನಿರಾಕರಿಸಲಾಗುವುದು ಎಂಬ ವದಂತಿ ಸತ್ಯವಾಗಿದೆ. ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ, ಬಿಜೆಪಿಯ ಘೋಷಿತ ಅಭ್ಯರ್ಥಿಗಳ ಪಟ್ಟಿ ನೋಡಿದಾಗ ಈ
ವದಂತಿಗಳ ಹಿಂದೆ ಚಿಂತನೆ ಮತ್ತು ವಾಸ್ತವವಿತ್ತು, ಅದನ್ನು ಮಾಧ್ಯಮಗಳೂ ಸರಿಯಾಗಿ ಗ್ರಹಿಸಿದ್ದವು ಎನ್ನಬಹುದು.
ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿನ ಘಟನೆಗಳು ಮರುಕಳಿಸ ಬಹುದೇನೋ ಎಂಬ ಭಯ ರಾಜ್ಯದ ಬಿಜೆಪಿಗರನ್ನು ಆವರಿಸಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲರನ್ನೂ ಎಲ್ಲ ಕಾಲಕ್ಕೂ ತೃಪ್ತಿಪಡಿಸಲಾಗದು ಎಂಬುದು ಸತ್ಯ; ಆದರೆ, ಆಯ್ಕೆಯ ಮಾನದಂಡದ ಅಳವಡಿಕೆಯಲ್ಲಾದ ಕೆಲವು ಎಡವಟ್ಟುಗಳು ಬಿಜೆಪಿಗೆ ದುಬಾರಿಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ತಾರುಣ್ಯ ಮತ್ತು ಸಾಧನೆಯೇ ಅಳತೆ ಗೋಲಾಗಿದ್ದಿದ್ದರೆ ಪ್ರತಾಪಸಿಂಹರಿಗೆ ಟಿಕೆಟ್ ತಪ್ಪಬಾರದಿತ್ತು.
ವರದಿಗಳ ಪ್ರಕಾರ ಅವರು ತಮ್ಮ ಕ್ಷೇತ್ರಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರು ‘ಫೈರ್‌ಬ್ರ್ಯಾಂಡ್’ ಆಗಿದ್ದರೂ ಇತಿಮಿತಿಯಲ್ಲಿದ್ದರು; ಅನಂತ ಕುಮಾರ್ ಹೆಗಡೆ ಮತ್ತು ಯತ್ನಾಳರ ಧಾಟಿ ಅವರಲ್ಲಿ ಕಾಣಲಿಲ್ಲ. ವಿವಾದಾತ್ಮಕ ವಿಷಯಗಳನ್ನು ಚಾಕಚಕ್ಯತೆಯಿಂದ
ನಿಭಾಯಿಸುತ್ತಿದ್ದರು. ಆದರೆ ಅವರನ್ನು ದಿಢೀರ್ ಎಂದು ಬದಿಗೆ ಸರಿಸಿ ರಾಜವಂಶಸ್ಥ ಯದುವೀರರಿಗೆ ಟಿಕೆಟ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಯದುವೀರರ ಅರ್ಹತೆ ಬಗ್ಗೆ ಚಕಾರ ಎತ್ತಲಾಗದು. ಆದರೆ ದಿನಬೆಳಗಾಗುವುದರೊಳಗೆ ಅವರ ಹೆಸರು ಮುನ್ನೆಲೆಗೆ ಬಂದಿದ್ದು ರಾಜಕೀಯ ವೀಕ್ಷಕರು ಮತ್ತು ಮತದಾರರಲ್ಲಿ ಅಚ್ಚರಿ ಹುಟ್ಟಿಸಿದೆ. ವದಂತಿಗಳನ್ನು ನಂಬುವುದಾದರೆ, ಬಿಜೆಪಿ ಯಲ್ಲಿರುವ ರಾಜಸ್ಥಾನದ ರಾಜವಂಶಜರೊಬ್ಬರ ಪ್ರಭಾವ ಇದರ ಹಿಂದೆ ಕೆಲಸ ಮಾಡಿದೆ ಎನ್ನಲಾಗುತ್ತದೆ.
ಅದೇನೇ ಇರಲಿ, ಮೋದಿಯವರ ಅನುಯಾಯಿಯಾಗಿರುವ ಪ್ರತಾಪಸಿಂಹರು ಪಕ್ಷಕ್ಕೆ ದ್ರೋಹ ಬಗೆಯಲಾರರು. ಅವರು ಈ ನಿಟ್ಟಿನಲ್ಲಿ ಈವರೆಗೆ ತಮ್ಮ ಬದ್ಧತೆಯನ್ನು ತೋರಿದ್ದಾರೆ ಮತ್ತು ಇದೇ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ರಾಜಕೀಯದಲ್ಲಿ ಏನನ್ನೂ ದೃಢವಾಗಿ ಹೇಳಲಾಗದು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್‌ರನ್ನು ಚುನಾವಣಾ ರಾಜಕೀಯ ದಿಂದ ನಯವಾಗಿ ಬದಿಗೆ ಸರಿಸಲಾಗಿತ್ತು. ಈ ಸಲದ ಲೋಕಸಭಾ ಚುನಾವಣೆಗೆ ಈಶ್ವರಪ್ಪರ ಮಗನಿಗೆ ಹಾವೇರಿ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತಂತೆ; ಆದರೆ ಅದು ದಕ್ಕಿದ್ದು ಬಸವರಾಜ ಬೊಮ್ಮಾಯಿಯವರಿಗೆ.
ಜತೆಗೆ ಶಿವಮೊಗ್ಗದ ಟಿಕೆಟ್ ಯಡಿಯೂರಪ್ಪನವರ ಮಗ ರಾಘವೇಂದ್ರರ ಪಾಲಾಗಿದೆ. ಈ ಬೆಳವಣಿಗೆಗಳಿಂದಾಗಿ ಕೆಂಡಾಮಂಡಲ ರಾಗಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಕುಟುಂಬ ರಾಜಕೀಯವನ್ನು ಯದ್ವಾತದ್ವಾ ಟೀಕಿಸುತ್ತಿದ್ದಾರೆ ಮತ್ತು ಈ ವೇಳೆ ಯತ್ನಾಳರಂತೆ ಮಾತನಾಡುತ್ತಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವ ಹಠ ತೊಟ್ಟಿರುವ ಈಶ್ವರಪ್ಪ ಅವರು, ಗೆದ್ದ ನಂತರ ಮತ್ತೆ ಬಿಜೆಪಿಯ ಮಡಿಲು ಸೇರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯ ವೇಳೆ ಇಂಥದೇ ಬೆಳವಣಿಗೆ ಯಲ್ಲಿ ಜಗದೀಶ ಶೆಟ್ಟರ್‌ರನ್ನು ಟೀಕಿಸಿದ್ದ ಮತ್ತು ಅವರಿಗೆ ಬುದ್ಧಿ ಹೇಳಿದ್ದ ಈಶ್ವರಪ್ಪನವರು, ತಮಗೇ ಅಂಥ ಪರಿಸ್ಥಿತಿ ಒದಗಬಹುದೆಂದು ಕನಸಿನಲ್ಲೂ ಯೋಚಿಸಿರಲಾರರು.
ಇನ್ನು, ಬಿಜೆಪಿಯ ಕಟ್ಟಾಳು ಯುವನಾಯಕ ಸಿ.ಟಿ. ರವಿ ಇಂದು ಭಿನ್ನಮತೀಯರಲ್ಲದಿದ್ದರೂ, ಈ ಸಾಲಿನಲ್ಲಿ ಅವರು ಕಾಣು ತ್ತಿದ್ದಾರೆ. ಚಿಕ್ಕಮಗಳೂರು-ಉಡುಪಿ ಟಿಕೆಟ್‌ಗಾಗಿ ರವಿ ಮತ್ತು ಶೋಭಾ ಕರಂದ್ಲಾಜೆ ನಡುವೆ ಪೈಪೋಟಿಯಿತ್ತು; ಈ ಪೈಕಿ ಶೋಭಾ ರಿಗೆ ಚಿಕ್ಕಮಗಳೂರು ತಪ್ಪಿದರೂ ಬೆಂಗಳೂರು ಉತ್ತರದಲ್ಲಿ ಟಿಕೆಟ್ ದಕ್ಕಿದೆ. ಆದರೆ ರವಿಯವರಿಗೆ ಒಟ್ಟಾರೆಯಾಗಿ ‘ಕೊಕ್’ ನೀಡಲಾಗಿದೆ. ಪಕ್ಷದಲ್ಲಿ ಸಾಕಷ್ಟು ನೋವನ್ನು ನುಂಗಿರುವ ತಾವು ಚುನಾವಣೆಯ ನಂತರ ಎಲ್ಲವನ್ನೂ ಹೊರಹಾಕುವುದಾಗಿ ಹೇಳುವ ಮೂಲಕ ರವಿ ಒಂಥರಾ ‘ಟೈಂ ಬಾಂಬ್’ ಇಟ್ಟಿದ್ದಾರೆ; ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಎಲ್ಲೋ ಏನೋ ಎಡವಟ್ಟಾಗಿದೆ ಎಂಬುದರ ದ್ಯೋತಕವಿದು. ಹೀಗಾಗಿ ಅವರ ಮುಂದಿನ ನಡೆಯ ಬಗ್ಗೆ ಸಹಜವಾಗೇ ಕುತೂಹಲ ಹುಟ್ಟಿಕೊಂಡಿದೆ.
ತವರಿಗೆ ಮರಳಿದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು, ಆದರೆ ಅದು ಪ್ರಲ್ಹಾದ್ ಜೋಷಿ ಯವರ ಮಡಿಲು ಸೇರಿತು. ಹೀಗಾಗಿ ಶೆಟ್ಟರ್ ಅವರಿಗೆ ಬೆಳಗಾವಿಗೆ ಟಿಕೆಟ್ ನೀಡಲಾಗಿದೆ. ಆದರೆ ಅಲ್ಲಿ ತಮ್ಮ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿರುವುದರಿಂದ ಶೆಟ್ಟರ್ ಆತಂಕದಲ್ಲಿರುವಂತೆ ತೋರುತ್ತಿದೆ. ತುಮಕೂರಿನಲ್ಲಿ ಮಾಧುಸ್ವಾಮಿಯವರ ಬಂಡಾಯವು ಸೋಮಣ್ಣನವರ ನಿದ್ರೆಗೆ ಭಂಗ ತರುತ್ತಿದೆ.
‘ಪ್ರತಿಬಾರಿಯೂ ತುಮಕೂರಿನಲ್ಲಿ ಹೊರಗಿನವರಿಗೆ ಮಣೆಹಾಕುತ್ತಿರುವುದೇಕೆ?’ ಎಂದು ಕೇಳುತ್ತಿರುವ ಮಾಧುಸ್ವಾಮಿಯವರು ಸೋಮಣ್ಣನವರ ಪರ ಪರಿಣಾಮಕಾರಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರಾ? ಎಂಬುದು ಸದ್ಯದ ಪ್ರಶ್ನೆ. ಹೀಗಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ತಮ್ಮನ್ನು ನಿಲ್ಲಿಸಿ ಸೋಲಿಸಲಾಗಿದೆ ಎಂಬ ಬೇಸರದಲ್ಲಿರುವ ಸೋಮಣ್ಣ ನವರ ಗೆಲುವಿಗೆ ಈ ಬಾರಿ ಮಾಧುಸ್ವಾಮಿಯವರು ಮುಳ್ಳಾಗಬಹುದೇ ಎಂಬ ಚರ್ಚೆ ನಡೆಯುತ್ತಿದೆ.
ದಾವಣಗೆರೆಯಲ್ಲಿ ಸಿದ್ದೇಶ್ವರರಿಗೆ ಟಿಕೆಟ್ ತಪ್ಪಿದರೂ ಅವರ ಪತ್ನಿಗೆ ನೀಡಿದ್ದು ಹಲವು ಶಾಸಕರು ಸಿಡಿದೇಳುವುದಕ್ಕೆ ಕಾರಣವಾಗಿದೆ. ಟಿಕೆಟ್ ಆಕಾಂಕ್ಷಿಗಳ ಪೈಕಿ ಮುಂಚೂಣಿಯಲ್ಲಿದ್ದ ರೇಣುಕಾಚಾರ್ಯ ಭಿನ್ನಮತೀಯ ನಾಯಕರಾಗಿ ಹೊರಹೊಮ್ಮಿ, ‘ಕುಟುಂಬ ರಾಜಕಾರಣವನ್ನು ಸಹಿಸಲಾಗದು’ ಎಂದು ಬೊಬ್ಬಿಡುತ್ತಿದ್ದಾರೆ. ಹೀಗೆಯೇ ಭಿನ್ನಮತದ ಬಾವುಟ ಹಾರಿಸಿರುವ ಮತ್ತೋರ್ವ ನಾಯಕ ಕರಡಿ ಸಂಗಣ್ಣ. ಚುನಾವಣೆಯ ಹೊತ್ತಿಗೆ ಈ ಭಿನ್ನಮತ ಯಾವ ತಿರುವು ತೆಗೆದುಕೊಳ್ಳತ್ತದೆ ಎಂಬುದನ್ನು ಹೇಳಲಾಗದು. ಕೇಂದ್ರದ ಮಾಜಿ ಮಂತ್ರಿ ಸದಾನಂದ ಗೌಡರದು ಒಂದು ರೀತಿಯ ಸ್ವಯಂಕೃತಾಪರಾಧ ಎನ್ನಬಹುದು. ಟಿಕೆಟ್ ನಿರಾಕರಿಸಲ್ಪಡುವ ಸಂಭಾವ್ಯ ಸಂಸದರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಅವರು ಹಿಂದೊಮ್ಮೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ, ಪುನಃ ಅಖಾಡಕ್ಕೆ ಇಳಿಯಲು ಹೊರಟವರು; ಈ ಗೊಂದಲ ಮತ್ತು ಗಡಿಬಿಡಿಯಲ್ಲೇ ಅವರು ಬಸ್ ತಪ್ಪಿಸಿಕೊಂಡರೇ ಅಥವಾ ಬೇರಾವುದಾದರೂ ಕಾರಣ ಇದೆಯೇ ಎಂಬುದು ತಿಳಿಯದು. ಅವರು ಕೇಂದ್ರ ಸಂಪುಟ ಸೇರಿದ್ದು, ತರುವಾಯದಲ್ಲಿ ಸಂಪುಟದಿಂದ ಅವರನ್ನು ಬಿಟ್ಟಿದ್ದು ಮತ್ತು ಈಗ ಅವರಿಗೆ ಟಿಕೆಟ್ ನಿರಾಕರಿಸಿದ್ದು
ಈ ಎಲ್ಲವೂ ಒಂದು ರೀತಿಯಲ್ಲಿ ನಿಗೂಢ ಮತ್ತು ವಿಚಿತ್ರ ಎನಿಸುತ್ತದೆ.
ವರಿಷ್ಠರು ಕರೆದು ಮಾತನಾಡಿದ ನಂತರ ಮೆತ್ತಗಾಗಿರುವ ಅವರು ‘ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ’ ಎಂದು ದೃಢವಾಗಿ ಹೇಳಿದ್ದಾರೆ. ಮತ್ತೊಂದೆಡೆ, ಜಗದೀಶ್ ಶೆಟ್ಟರ್ ಅವರಿಂದಾದ ಕಹಿ ಅನುಭವದ ನಂತರ ಯಾರನ್ನಾ ದರೂ ಪಕ್ಷಕ್ಕೆ ಸೇರಿಸಿಕೊಳ್ಳು ವಾಗ ಎಚ್ಚರಿಕೆ ವಹಿಸುವಂತೆ ಕಾಂಗ್ರೆಸ್ ಹೊರಡಿಸಿದ ಫರ್ಮಾನಿನಿಂದಾಗಿ ಅವರ ‘ಬೇಲಿಜಿಗಿತ’ ಆಗಿಲ್ಲ ಎನ್ನಲಾಗುತ್ತದೆ. ಮುಂದಿನ ದಿನಗಳಲ್ಲಿ ಸದಾನಂದ ಗೌಡರಿಗೆ ರಾಜ್ಯಪಾಲರ ಹುದ್ದೆ ನೀಡುವ ಭರವಸೆ ಬಿಜೆಪಿ ವರಿಷ್ಠರಿಂದ ಸಿಕ್ಕಿದೆ ಎಂಬ ಸುದ್ದಿ ಹರಡಿದೆ. ಅನಂತಕುಮಾರ್ ಹೆಗಡೆಯವರಿಗೆ ಉತ್ತರ ಕನ್ನಡದ ಟಿಕೆಟ್ ನೀಡುವ ಸಾಧ್ಯತೆಯು, ಜಿಲ್ಲೆಗೆ ಪ್ರಧಾನಿ ಬಂದಾಗ ಹೆಗಡೆಯವರು ಸ್ವಾಗತಿಸಲು ಮುಂದಾಗದೆ ನುಣುಚಿಕೊಂಡಾಗಲೇ ಕಮರಿತ್ತು ಎಂಬ ವಿಶ್ಲೇಷಕರ ಮಾತು ಸತ್ಯವಾಗಿದೆ.
ಅವರ ಮುಂದಿನ ಹಾದಿ ಸದ್ಯಕ್ಕೆ ಅಸ್ಪಷ್ಟ. ಆದರೆ ರಾಜಕೀಯದಲ್ಲಿ ಅವರನ್ನು ಹಗುರವಾಗಿ ಪರಿಗಣಿಸುವಂತೇನೂ ಇಲ್ಲ. ವರಿಷ್ಠರ ಮಾತನ್ನು ಯಾರೂ ಮೀರುವು ದಿಲ್ಲ ಎಂಬ ವಿಶ್ವಾಸವು ಬಿಜೆಪಿಯಲ್ಲಿ ಮೊದಲ ಬಾರಿಗೆ ಸುಳ್ಳಾಗಿದೆ. ಕಾರಣ ರಾಜ್ಯ ದಲ್ಲಿ ಟಿಕೆಟ್ ಘೋಷಣೆಯಾದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಭಿನ್ನದನಿ ಹೊರಡಿಸು ತ್ತಿರುವ ಎಲ್ಲರೂ ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಸಣ್ಣ ಅಪಸ್ವರ ಕೇಳಿಬಂದಿದ್ದು ಹೌದಾದರೂ, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ದಳಕ್ಕೆ ನೀಡಿ ಅಪಸ್ವರವನ್ನು
ನಿವಾರಿಸಲಾಗಿದೆ. ಆದರೆ ಸುಮಲತಾರ ಮುಂದಿನ ಹೆಜ್ಜೆ ‘ಮೈತ್ರಿ’ಯನ್ನು ಕಾಡಬಹುದು ಎಂಬ ಮಾತು ಕೇಳಿಬರುತ್ತಿದೆ.
ಈ ಹಂತದಲ್ಲಿ ಭಿನ್ನಮತೀಯ ಚಟುವಟಿಕೆಗಳನ್ನು ಹತ್ತಿಕ್ಕುವುದು ಕಷ್ಟ, ಏನಾದರೂ ತೇಪೆಹಚ್ಚಿ ಸುಮ್ಮನಾಗಿಸಬಹುದಷ್ಟೇ. ಆದರೆ ಒಳ ಏಟನ್ನು ಎದುರಿಸುವುದು ಕಷ್ಟ. ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಇನ್ನೂ ಪಾರದರ್ಶಕತೆಯನ್ನು ತೋರಿಸಿ ದ್ದಿದ್ದರೆ, ಇಂಥ ಬೆಳವಣಿಗೆಯನ್ನು ನಿಯಂತ್ರಿಸಬಹುದಿತ್ತು ಎನ್ನುತ್ತಾರೆ ವಿಶ್ಲೇಷಕರು. ಒಟ್ಟಾರೆ ಹೇಳುವುದಾದರೆ, ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ಹಾದಿ ಸಲೀಸಾಗಿಲ್ಲ; ಭುಗಿಲೆದ್ದಿರುವ ಅಸಮಾಧಾನ, ಭಿನ್ನಮತದಿಂದಾಗಿ ನಿರಾಳತೆ ನಲುಗುತ್ತಿದೆ. ಅದೇ ಬಿಜೆಪಿಯ ಪಾಲಿಗೆ ದುಬಾರಿಯಾಗಬಹುದು.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)