Thursday, 22nd February 2024

ಅಗ್ನಿವೀರರಾಗಲು ಯುವಕರ ತವಕ

ಯುವಶಕ್ತಿ

ಕುಮಾರಸ್ವಾಮಿ ವಿರಕ್ತಮಢ

ಇಂದು ಕಾಲ ಬದಲಾಗಿದೆ. ಗ್ರಾಮೀಣ ಭಾಗದ ಹೆಚ್ಚೆಚ್ಚು ಯುವಕರು ಸೇನೆ ಸೇರಲು ಅತ್ಯುತ್ಸಾಹವನ್ನು ಹೊಂದಿದ್ದಾರೆ. ಬೆಳಗಾದರೆ ಸಾಕು ಇಂಥ ಯುವಕರೆಲ್ಲ ದಂಡು ಕಟ್ಟಿಕೊಂಡು, ಅರ್ಹತೆ ಪಡೆಯಲು ಬೇಕಾಗಿರುವ ಆಟೋಟ, ದೈಹಿಕ ತಾಲೀಮುಗಳನ್ನು ನಡೆಸುವುದು ವಾಡಿಕೆಯ ದೃಶ್ಯವಾಗಿದೆ.

‘ಸೇನೆ’ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ದೇಶದ ಗಡಿಯಲ್ಲಿ ಬಂದೂಕು ಹಿಡಿದು ನಿಂತಿರುವ ಯೋಧನ ಚಿತ್ರ, ಅಲ್ಲವೇ? ಇಲ್ಲ, ಕೇವಲ ಅದು ಮಾತ್ರವಲ್ಲ. ಅವನ ಹಿಂದೆ ದೊಡ್ಡ ಪ್ರಪಂಚವೇ ಇದೆ. ‘ಜವಾನ್’ ಮತ್ತು ‘ಕಿಸಾನ್’ ನಮ್ಮ ದೇಶದ ಎರಡು ಕಣ್ಣುಗಳು. ಜಾತಿ, ಮತ, ಧರ್ಮದ ಎಲ್ಲೆಕಟ್ಟಿನಾಚೆ, ಕೇವಲ ದೈಹಿಕ, ವೈದ್ಯಕೀಯ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆಯೇ ರಕ್ಷಣಾ ಪಡೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಇದು ಅಭಿಮಾನ,
ಶೌರ್ಯ ಮತ್ತು ಕೆಚ್ಚೆದೆಯ ಸೇವೆ. ಅವರವರ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಸೇನೆಯಲ್ಲಿ ಹುದ್ದೆಗಳು ದೊರೆಯುತ್ತವೆ.

ಸೇನೆ ಸೇರುವುದು, ದೇಶಸೇವೆ ಮಾಡುವುದು ಎಂದಿಗೂ ಹೆಮ್ಮೆಯ ವಿಷಯವೇ ಆಗಿದೆ. ಮೊದಲೆಲ್ಲ, ಸೇನೆಗೆ ಸೇರುವವರೆಂದರೆ ಗ್ರಾಮೀಣ ಪ್ರದೇಶದ ಯುವಕರು ಮತ್ತು ಬಡಮಕ್ಕಳು ಎಂಬ ಗ್ರಹಿಕೆಯಿತ್ತು. ಆದರೀಗ ಅದು ಬದಲಾಗಿದೆ. ಈಗ ಸಿರಿವಂತರ ಮಕ್ಕಳೂ ಸೇನೆಯನ್ನು ಸೇರಿ ದೇಶಸೇವೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಮೊದಲೆಲ್ಲ, ಸೇನೆ ಸೇರುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಮಕ್ಕಳನ್ನು ಸೇನೆಗೆ ಸೇರಿಸಲು ಗ್ರಾಮೀಣ ಪ್ರದೇಶಗಳಲ್ಲಿನ ಪೋಷಕರು ಅಷ್ಟು ಸುಲಭವಾಗಿ ಒಪ್ಪುತ್ತಿರಲಿಲ್ಲ. ಇಬ್ಬರು-ಮೂವರು ಮಕ್ಕಳಿರುವಂಥವರು ಗಟ್ಟಿಮನಸ್ಸು ಮಾಡಿ, ‘ಒಬ್ಬನು ದೇಶಸೇವೆಗೆ’ ಎಂದು ಸೇನೆಗೆ ಸೇರಲು ಒಪ್ಪಿಗೆ ನೀಡುತ್ತಿದ್ದರು.

ಇದಕ್ಕೆ ಒಂದೆಡೆ ಬಡತನ ಕಾರಣವಾಗಿದ್ದರೆ, ಮತ್ತೊಂದೆಡೆ ಅವರ ದೇಶಪ್ರೇಮ ಮತ್ತು ಮಗ ದೇಶಸೇವೆಗೆ ತೆರಳುತ್ತಿದ್ದಾನೆಂಬ ಹೆಮ್ಮೆ. ಇದೇ ಅವರನ್ನು
ಮತ್ತಷ್ಟು ಗಟ್ಟಿಗೊಳಿಸುತ್ತಿತ್ತು. ಸೇನೆಗೆ ಪ್ರವೇಶ ಪಡೆಯಲು ಇರುವ ಕಠಿಣ ನಿಯಮಗಳೆಲ್ಲವನ್ನೂ ದಾಟಿ ಸೇನೆ ಸೇರುವುದು ಬಹಳ ಕಷ್ಟದ ಕೆಲಸವೂ ಆಗಿತ್ತು.
ಆದರೆ ಇಂದು ಕಾಲ ಬದಲಾಗಿದೆ. ಇಂದು ಯುವತಿಯರಿಗೂ ಸೇನೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಹೆಚ್ಚೆಚ್ಚು ಯುವಕರು ಸೇನೆ ಸೇರಲು
ಅತ್ಯುತ್ಸಾಹವನ್ನು ಹೊಂದಿದ್ದಾರೆ. ಬೆಳಗಾದರೆ ಸಾಕು ಇಂಥ ಯುವಕರೆಲ್ಲ ದಂಡು ಕಟ್ಟಿಕೊಂಡು, ಅರ್ಹತೆ ಪಡೆಯಲು ಬೇಕಾಗಿರುವ ಆಟೋಟ, ದೈಹಿಕ ತಾಲೀಮುಗಳನ್ನು ನಡೆಸುವುದು ವಾಡಿಕೆಯ ದೃಶ್ಯವಾಗಿದೆ.

ಮುಖ್ಯವಾಗಿ, ಸ್ವತಃ ಪೋಷಕರೇ ಮಕ್ಕಳಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಇರುವ ಒಬ್ಬ ಮಗನನ್ನೂ ದೇಶಸೇವೆಗೆ ಸೇರಿಸಲು ಹೆಮ್ಮೆ ಪಡುತ್ತಿದ್ದಾರೆ. ಸೇನಾ ರ‍್ಯಾಲಿಗೆ ಹೋಗುವ ತಮ್ಮ ಮಕ್ಕಳು ಎಲ್ಲ ಪರೀಕ್ಷೆಗಳಲ್ಲೂ ತೇರ್ಗಡೆ ಹೊಂದಿ ಆಯ್ಕೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆಯ್ಕೆಯಾದರೆ
ಮನೆಯಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ, ವಿಫಲನಾದರೆ ಬೇಸರಿಸಿಕೊಳ್ಳುತ್ತಿದ್ದಾರೆ. ಈಚೆಗೆ ನಮ್ಮೂರಿನಲ್ಲಿ ೨೦-೩೦ ಯುವಕರು ಇಂಥ ಸೇನಾ ರ‍್ಯಾಲಿಗೆ ಹೋಗಿದ್ದರು. ಆದರೆ ಅಲ್ಲಿನ ಕಠಿಣ ಪರೀಕ್ಷೆಗಳನ್ನು ಜಯಿಸಿ ಆಯ್ಕೆಯಾಗಿದ್ದು ಒಬ್ಬ ಮಾತ್ರ. ಸೇನೆ ಸೇರಲು ಬೇಕಾದ ಸೂಕ್ತ ತಿಳಿವಳಿಕೆ ಮತ್ತು ತರಬೇತಿಯ ಕೊರತೆಯೂ ಇದಕ್ಕೆ ಕಾರಣವಾಗಿದ್ದಿರಬಹುದು.

ಆದ್ದರಿಂದ, ಇಂಥವರಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸೇನೆಯ ಬಗೆಗಿನ ಸೂಕ್ತ ಮಾಹಿತಿ ಮತ್ತು ತರಬೇತಿಯನ್ನು ನೀಡುವ ಕೆಲಸವಾಗಬೇಕಿದೆ. ಆದರೆ ಸೇನೆಗೆ ಆಯ್ಕೆಯಾ ದವರನ್ನು ಕನಿಷ್ಠಪಕ್ಷ ಗುರುತಿಸಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಊರಿನ ಆಳುಗರು ಮಾಡುತ್ತಿಲ್ಲ. ಗ್ರಾಮ ಪಂಚಾಯತಿ ಯವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ರಸ್ತೆಗೆ ಟಾರು ಹಾಕಿಸುವುದು, ನಲ್ಲಿ ಸಂಪರ್ಕ ನೀಡುವುದು, ನೀರು ಬಿಡುವುದರ ಜತೆಜತೆಗೆ, ಯುವಜನರನ್ನು ಉತ್ತೇಜಿಸುವ ಕಡೆಗೂ ಅವರು ಸಂಕಲ್ಪಿಸಬೇಕಿದೆ. ಅಂದರೆ ಯುವಜನರು ದೈಹಿಕವಾಗಿ ಬಲಿಷ್ಠರಾಗಲು ಸೂಕ್ತ ವ್ಯಾಯಾಮದ ಸಲಕರಣೆ ಗಳನ್ನು ಒದಗಿಸುವಿಕೆ, ಶಾಲಾ ಮೈದಾನದ ಬಳಕೆಗೆ ಅವಕಾಶ ನೀಡುವಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ಪುಸ್ತಕಗಳನ್ನು ಪಂಚಾಯತಿಯ ಗ್ರಂಥಾಲಯಗಳಲ್ಲಿ ಒದಗಿಸುವಿಕೆ, ಊರಿನ/ಆಸುಪಾಸಿನ ಮಾಜಿ ಯೋಧರುಗಳಿಂದ ಸೇನೆಯ ಬಗ್ಗೆ ಮಾಹಿತಿ ಕೊಡಿಸುವಿಕೆ ಇವೆಲ್ಲವನ್ನೂ ಮಾಡಬೇಕಿದೆ.
ಜತೆಗೆ, ದೇಶಪ್ರೇಮ ಹುಟ್ಟುಹಾಕುವ, ಸೇವಾ ಮನೋಭಾವ ಬೆಳೆಸುವ ಎನ್‌ಸಿಸಿಯಂಥ ಘಟಕಗಳನ್ನು ಶಾಲಾ ಮಟ್ಟದಲ್ಲೇ ಪ್ರಾರಂಭಿಸಬೇಕಿದೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಜೀವನವೂ ಆದರ್ಶಮಯ ವಾಗಿದೆ. ದೇಶಪ್ರೇಮ ಎಂಬುದು ಬಡತನ ಮತ್ತು ಸಿರಿತನ ವನ್ನೂ ಮೀರಿದ್ದು ಎಂಬುದನ್ನು ಅವರ ಕುಟುಂಬದವರು ಸಾಬೀತುಪಡಿಸಿದರು. ಕಾರಣ, ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವರ ತಂದೆ, ಮಗನಿಗೆ ಎಂಜಿನಿಯರಿಂಗ್ ಸೀಟು ಸಿಕ್ಕಿದ್ದರೂ ಅವನ ದೇಶಪ್ರೇಮ ವನ್ನು ಕಂಡು ಸೂಕ್ತ ತರಬೇತಿ ಕೊಡಿಸಿ ಸೇನೆಗೆ ಸೇರಲು ಪ್ರೋತ್ಸಾಹಿಸಿದರು. ಆದರೆ ಮಗ ಹುತಾತ್ಮನಾದಾಗ, ಮನ
ದೊಳಗೆ ಸಾಕಷ್ಟು ನೋವಿದ್ದರೂ ಅದನ್ನು ತೋರ್ಪಡಿಸದೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದರು. ಅವರ ಪತ್ನಿ ನಗು ನಗುತ್ತಲೇ ದೇಶದ ಧ್ವಜವನ್ನು ಸ್ವೀಕರಿಸಿದರು. ದೇಶಪ್ರೇಮದ ಹೆಮ್ಮೆಯು ಅವರ ದುಃಖವನ್ನು ತಡೆದು ನಿಲ್ಲಿಸಿತ್ತು. ಇವೆಲ್ಲ ಮಾದರಿಯಾದ ಘಟನೆಗಳು.

ಕೇಂದ್ರ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಅಲ್ಪಾವಽಯ ಸೇನಾ ನೇಮಕಾತಿ ಯೋಜನೆಯಂತೂ ಕ್ರಾಂತಿಕಾರಿ ಬದಲಾವಣೆಯನ್ನೇ ತಂದಿದೆ. ಹದಿನೇಳೂವರೆ ವರ್ಷದಿಂದ ೨೧ ವರ್ಷದೊಳಗಿನ ಯುವಕರು ಈ ಯೋಜನೆ ಯಡಿ ಸಶಸ ಪಡೆಗಳನ್ನು ಸೇರಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ. ಭೂಸೇನೆ, ವಾಯಪಡೆ, ನೌಕಾದಳ ಹೀಗೆ ಭಾರತೀಯ ಸೇನೆಯ ೩ ಪಡೆಗಳಲ್ಲಿ ಯಾವುದಕ್ಕಾದರೂ ‘ಅಗ್ನಿವೀರರಾಗಿ’ ಸೇರಿ ೪ ವರ್ಷಗಳ ಅವಽಯ ಸೇವೆಯನ್ನು ಸಲ್ಲಿಸಬಹುದಾಗಿದೆ.

ಸಾಹಸ ಮನೋಭಾವದ, ದೇಶಸೇವೆಯ ಹಂಬಲವಿರುವ ಬಹುತೇಕ ಯುವಕ-ಯುವತಿಯರ ಕನಸು ಸೇನೆಯನ್ನು ಸೇರಬೇಕೆನ್ನುವುದೇ ಆಗಿರುತ್ತದೆ. ಆದರೆ ಕೇವಲ ಉದ್ಯೋಗಕ್ಕಾಗಿ ಎಂದೂ ಸೇನೆಯನ್ನು ಸೇರಲು ಇಚ್ಛಿಸ ಬಾರದು. ಇದು ಶಿಸ್ತುಬದ್ಧ ಜೀವನದ ನಿಯಮಬದ್ಧ ವೃತ್ತಿ ಯಾಗಿದೆ. ಸೇನಾಧಿಕಾರಿಯ ಹುದ್ದೆಯು ಸಮಾಜದಲ್ಲಿ ಘನತೆ-ಗಾಂಭೀರ್ಯ-ಗೌರವಗಳನ್ನು ದೊರಕಿಸುತ್ತದೆ. ನಮ್ಮ ಯೋಧರು, ನಮ್ಮ ಹೆಮ್ಮೆ! ಭೂಸೇನೆ, ವಾಯುಪಡೆ ಮತ್ತು ನೌಕಾದಳದ ಸಹಸ್ರಾರು ಯೋಧರು ತಮ್ಮ ಸ್ವಂತ ಹಿತಾಸಕ್ತಿಗಳನ್ನೆಲ್ಲ ಮರೆತು ದೇಶದ ರಕ್ಷಣೆಗಾಗಿ ನಿಂತಿದ್ದಾರೆ, ಪ್ರಾಣತ್ಯಾಗ ಮಾಡಿದ್ದಾರೆ. ಇಂಥ ಯೋಧರ ತ್ಯಾಗ-
ಬಲಿದಾನಗಳನ್ನು ನಾವೆಲ್ಲಾ ನೆನೆಯಬೇಕಿದೆ, ಇತರರಿಗೂ ತಿಳಿಸಬೇಕಿದೆ. ಮನೆಗೊಬ್ಬ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಕ್ಯಾಪ್ಟನ್ ಪ್ರಾಂಜಲ್, ಲ್ಯಾನ್ಸ್‌ ನಾಯಕ್ ಹನುಮಂತಪ್ಪರಂಥವರು ಉದಯಿಸಬೇಕಿದೆ. ದೇಶಕ್ಕಾಗಿ ಬಲಿದಾನ ಮಾಡಿದ ಇಂಥವರ ಕುಟುಂಬಕ್ಕೆ ಶಿರಸಾಷ್ಟಾಂ  ನಮನ ಅರ್ಪಿಸೋಣ.
(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!