Thursday, 12th December 2024

ಆಗ್ರಾದಲ್ಲೂ ನೆನಪಾದ ಬಹ್ರೈನ್‌ ಮಹಾ ಮರ

ವಿದೇಶವಾಸಿ

dhyapaa@gmail.com

ಅಷ್ಟಕ್ಕೂ ಈ ಸಸ್ಯ ಮೊದಲು ಹುಟ್ಟಿಕೊಂಡದ್ದು ಹೇಗೆ? ಯಾರಾದರೂ ನೆಟ್ಟಿರಬಹುದೇ? ಮನುಷ್ಯರೇ ನೆಟ್ಟಿದ್ದು ಹೌದಾಗಿದ್ದರೆ ಈ ಜಾತಿಯ ಸಸ್ಯ ನೀರಿಲ್ಲದೇ ಬದುಕಬಹುದು ಎಂದು ಅವರಿಗೆ ಆಗಲೇ ತಿಳಿದಿತ್ತೇ? ನೆಟ್ಟಿದ್ದೇ ಹೌದಾದರೆ ಅವರು ಒಂದನ್ನೇ ನೆಟ್ಟಿದ್ದೇಕೆ? ಅದರ ಜತೆಗಿರಲಿ ಎಂದಾದರೂ ಇನ್ನೊಂದನ್ನು ನೆಡಬಹುದಿತ್ತಲ್ಲ?

ವಿಶ್ವ ವಿಖ್ಯಾತ ತಾಜ್ ಮಹಲ್ ನೋಡಿಬರಲೆಂದು ಮೊನ್ನೆ ಆಗ್ರಾಕ್ಕೆ ಹೋಗಿದ್ದೆ. ಮೊದಲ ದಿನ ರಾತ್ರಿಯಿಂದ ಬೆಳಗಿನವರೆಗೆ ವಿಪುಲವಾಗಿ ಬಿದ್ದ ಮುಸಲಧಾರೆ ಮಳೆಯೂ ವಾತಾವರಣವನ್ನು ತಂಪಾ ಗಿಸುವಲ್ಲಿ ವಿಫಲವಾಗಿತ್ತು. ವಿಭಾಕರ ವಿಪುಲೆಯ ಮೇಲೆ ಯಾವ ಕಾರಣಕ್ಕೆ ಮುನಿಸಿಕೊಂಡಿದ್ದನೋ ಗೊತ್ತಿಲ್ಲ, ಕೇವಲ ಇಪ್ಪತ್ತೇಳು-ಇಪ್ಪತ್ತೆಂಟು ಡಿಗ್ರಿ ಉಷ್ಣಾಂಶವಿದ್ದರೂ ತಂದೂರಿ ಒಲೆಯಲ್ಲಿ ಹಾಕಿದ ಅನುಭವ.

ತಾಜ್ ಮಹಲ್ ಆವರಣದ ಒಳಗೆ ಕುಡಿಯಲು ನೀರು ಸಿಗುವುದಿಲ್ಲವೆಂದು ಹೇಳಿದ ಟೂರ್ ಗೈಡ್ ಮಾತನ್ನು ಕೇಳಿ ಖರೀದಿಸಿದ ನೀರಿನ ಬಾಟಲಿ ಮಹಲು ತಲುಪುವುದರ ಒಳಗೇ ಖಾಲಿಯಾಗಿತ್ತು. ಕೊಲ್ಲಿ ರಾಷ್ಟ್ರದಲ್ಲಿ ಅರ್ಧ ಆಯಸ್ಸು ಕಳೆದ ನಾನು, ನನ್ನಂಥವರಿಗೆ ಉಷ್ಣ, ಝಳ, ಸೆಖೆ, ಬೆವರು ಇತ್ಯಾದಿಗಳು ಒಂದು ಸಮಸ್ಯೆಯೇ ಅಲ್ಲ. ನಲವತ್ತೈದು-ಐವತ್ತು ಡಿಗ್ರಿ ತಾಪಮಾನದಲ್ಲೂ ಅರ್ಧ- ಮುಕ್ಕಾಲು ಗಂಟೆ ಆರಾಮದಲ್ಲಿ ಓಡಾಡಿ ಬರುವ ನನಗೆ, ಆಗ್ರಾದ ಬಿಸಿಲು ಕಾಲು ಗಂಟೆಗೂ ಮೊದಲೇ ಹುಚ್ಚು ಬಿಡಿಸಿತ್ತು. ತೊಟ್ಟ ಅಂಗಿಯಿಂದ ಸುರಿಯುತ್ತಿದ್ದ ಜಲಲ ಜಲಲ ಜಲ ಧಾರೆ ಪ್ಯಾಟನ್ನೂ ತೋಯಿಸಿತ್ತು.

ಮಳೆಗಾಲದ ಹೀಗಾದರೆ ಇನ್ನು ಎಪ್ರಿಲ್-ಮೇ ತಿಂಗಳಲ್ಲಿ ಹೇಗಿದ್ದೀತು ಎಂದು ಯೋಚಿಸುವ ಹೊತ್ತಿಗೆ ಮನಸ್ಸು ಮರದ
ನೆರಳಿನ ಹುಡುಕಾಟದಲ್ಲಿತ್ತು. ಪ್ರಧಾನ ದ್ವಾರದಿಂದ ಒಳಗೆ ಹೊಕ್ಕು, ಮಿರಿ ಮಿರಿ ಮಿಂಚುವ ಸಂಗಮರಿಯ ಮಹಲನ್ನು ತಲುಪುವುದರ ಒಳಗೆ ಏನಿಲ್ಲವೆಂದರೂ ಆರು-ಏಳು ಸಲ ನೆನಪಾದದ್ದು ಬಹ್ರೈನ್ ದೇಶದ ಅಜರಾ‘ಮರ’.

ದಿಲ್ಮನ್ ನಾಗರಿಕತೆಯ ತವರೂರಾದ ಬಹ್ರೈನ್ ದೇಶ ಒಂದು ಕಾಲದಲ್ಲಿ ’’Land of million palm trees'(ದಶ ಲಕ್ಷ ಖರ್ಜೂರದ ಗಿಡಗಳನ್ನು ಹೊಂದಿದ ಭೂಮಿ) ಎಂದೇ ಹೆಸರಾಗಿತ್ತು. ಹಳ್ಳಿಗಳೆಲ್ಲ ಪಟ್ಟಣಗಳು, ಪಟ್ಟಣಗಳೆಲ್ಲ ನಗರಗಳಾಗಿ
ಬದಲಾಗುತ್ತಿರುವ ಕಾಲದಲ್ಲಿ ಸಾಕಷ್ಟು ಮರಗಳು ಧರೆಗುರುಳಿ ಮಣ್ಣು ಪಾಲಾದವು. ಖರ್ಜೂರದ ಮರ ಗಟ್ಟಿ ಎಂಬ ಕಾರಣಕ್ಕೆ ಕೆಲವು ಮರಗಳು ಮನೆಯ ಚಾವಣಿ ಸೇರಿಕೊಂಡವು.

ಇವೆಲ್ಲದರ ನಡುವೆಯೂ ಒಂದು ಮರ ಮಾತ್ರ ಇಂದಿಗೂ ಅಜರಾಮರವಾಗಿ ನಿಂತಿದೆ. ಏಕಾಂಗಿಯಾಗಿ, ಯಾವ ಜೊತೆ ಯಿಲ್ಲದೆ, ಯಾರ ಹಂಗಿಲ್ಲದೆ. ಬಹ್ರೈನ್ ರಾಜಧಾನಿ ಮನಾಮಾದಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದ
ಜಬಲ್ ಅಲ್ ದುಖಾನ್ ಪ್ರದೇಶದಲ್ಲಿ ಒಂದೇ ಒಂದು ಮನೆ ಇಲ್ಲ. ಶುಷ್ಕ ಮರುಭೂಮಿ ಪ್ರದೇಶ ಅದು. ಕೊಲ್ಲಿ ರಾಷ್ಟ್ರಗಳ ಮೊದಲು ತೈಲ ನಿಕ್ಷೇಪ ಸಿಕ್ಕಿದ್ದು ಈ ಪ್ರದೇಶದ. ಮೊದಲ ತೈಲ ಬಾವಿಯ ಸ್ಮಾರಕವೂ, ತೈಲಕ್ಕೆ ಸಂಬಂಽಸಿದ ಇತಿಹಾಸ ಮತ್ತು ಮಾಹಿತಿ ನೀಡುವ ಚಿಕ್ಕದೊಂದು ವಸ್ತು ಸಂಗ್ರಹಾಲಯವೂ ಈ ಪ್ರದೇಶದಲ್ಲಿದೆ.

ಜಬಲ್ ಅಲ್ ದುಖಾನ್ ಅಂದರೆ ಹೊಗೆಯ ಪರ್ವತ ಎಂದು ಅರ್ಥ. ತೈಲ ನಿಕ್ಷೇಪ, ಕೆಲವು ತೈಲ ಬಾವಿಗಳನ್ನು ಬಿಟ್ಟರೆ ಒಂದೆರಡು ಅನಿಲ ಮತ್ತು ತೈಲವನ್ನು ಬೇರ್ಪಡಿಸುವ ಸ್ಥಾವರ ಇರುವ ಪ್ರದೇಶಕ್ಕೆ ಆ ಹೆಸರು ಯಾಕೆ ಬಂತೋ ಗೊತ್ತಿಲ್ಲ. ಅಲ್ಲಿರುವ ಅತಿ ಎತ್ತರದ ಪರ್ವತದ ಮೇಲೆ ನಿಂತರೆ, ದೇಶದ ತುತ್ತ ತುದಿಯಲ್ಲಿ ನಿಂತಂತೆಯೇ. ಆ ಪರ್ವತದ ತುದಿ ಸಮುದ್ರ ಮಟ್ಟದಿಂದ ಕೇವಲ ೧೩೪ ಮೀಟರ್ ಎತ್ತರದಲ್ಲಿದೆ. ಇದರ ಸುತ್ತ ಇರುವ ಅನೇಕ ಸಣ್ಣ ಸಣ್ಣ ದಿಣ್ಣೆಗಳ ಪೈಕಿ ಒಂದರ ತುದಿ ಯಲ್ಲಿ ಜಗ ಗಟ್ಟಿಯಾಗಿ ಬೇರೂರಿ ನಂತ ಒಂದು ಮರವಿದೆ.

ಅದು ಹೆಸರಿಗೆ ತಕ್ಕಂತೆ ’Sಛಿಛಿ ಟ್ಛ ಔಜ್ಛಿಛಿ’. ಪಕ್ಕನೆ ನೋಡಿದರೆ ನಮ್ಮೂರಿನ ಬನ್ನಿ ಮರದಂತೆ ಕಾಣುವ ‘ಪ್ರೊಸೊಪಿಸ್ ಸಿನೆರಿಯಾ’ ಜಾತಿಗೆ ಸೇರಿದ ಈ ಮರ ಕಾಡಿಲ್ಲದ ಮರಳುಗಾಡಿನಲ್ಲಿ ಕಳೆದ ನಾಲ್ಕುನೂರಾ ನಲವತ್ತು ವರ್ಷಗಳಿಂದ ಜೀವಿಸುತ್ತಿರುವ ಒಂಟಿ ಜೀವ. ಅದರ ಬುಡದಲ್ಲಿ ನಿಂತು ಸುತ್ತ ಕಣ್ಣು ಹಾಯಿಸಿದರೆ ಇನ್ಯಾವ ಸಸ್ಯ ಸಂತಾನವೂ ಕಾಣುವುದಿಲ್ಲ.

ಮರುಭೂಮಿಯಲ್ಲಿ ಒಂದೆರಡು ಮಳೆ ಬಿದ್ದಾಗ ಆಗಾಗ ಹುಟ್ಟಿ, ಕೆಲವು ದಿನಗಳಲ್ಲಿಯೇ ಸಾಯುವ ಕೆಲವು ಜಾತಿಯ ಹುಲ್ಲು, ಸಣ್ಣ ಕುರುಚಲು ಪೊದೆಯನ್ನು ಮಾತ್ರ ಈ ಪ್ರದೇಶದಲ್ಲಿ ಕಾಣಲು ಸಾಧ್ಯ. ಬಿಟ್ಟರೆ, ಇಪ್ಪತ್ತೈದರಿಂದ ಮುವತ್ತು ಮೀಟರ್ ಉದ್ದ, ಅಗಲದಲ್ಲಿ, ಕೆಲವು ಭಾಗದಲ್ಲಿ ಭೂಮಿಗೆ ಅಂಟಿಕೊಂಡಿರುವಂತೆಯೇ ಭಾಸವಾಗುವ, ಹತ್ತು ಮೀಟರ್ (ಸುಮಾರು ಮುವತ್ತೈದು ಅಡಿ) ಎತ್ತರಕ್ಕೆ ಬೆಳೆದು ನಿಂತ ಈ ‘ಜೀವ ವೃಕ್ಷ’ ಇಷ್ಟೂ ವರ್ಷಗಳಿಂದ ಏಕಾಂಗಿ.

ಎಲ್ಲಕ್ಕಿಂತ ವಿಶೇಷವೆಂದರೆ ಈ ಮರಕ್ಕೆ ಯಾರೂ ನೀರೆರೆಯುವುದಿಲ್ಲ, ಗೊಬ್ಬರ ಉಣಿಸುವುದಿಲ್ಲ. ರಣ ಬಿಸಿಲ ಬೇಗೆ ಯಲ್ಲಿಯೂ ನಾಲ್ಕು ಶತಮಾನಗಳಿಂದ ಯಾರ ಸಹಾಯವೂ ಇಲ್ಲದೇ ಪ್ರಕೃತಿದತ್ತವಾದದನ್ನೇ ಸ್ವೀಕರಿಸಿ, ಅದೇ ಪ್ರಕೃತಿಯಲ್ಲಿ ಲೀನವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ನಿಂತಿದೆ. ಜೀವ ವೃಕ್ಷವನ್ನು ನೋಡುವುದಕ್ಕಿಂತ ಮೊದಲು ‘ನಮ್ಮ ಬೆಂಗಳೂರಿ ನಲ್ಲಿರುವ ದೊಡ್ಡ ಆಲದ ಮರಕ್ಕಿಂತಲೂ ಬೃಹದಾಕಾರವಾಗಿ ಇರಲಿಕ್ಕಿಲ್ಲ’ ಎಂದು ಊಹಿಸಿದವರೂ ಈ ವೃಕ್ಷವನ್ನು ಕಂಡಾಗ ದಂಗಾಗಿ, ಕ್ಷಣಾರ್ಧದಲ್ಲಿ ಈ ಮರಕ್ಕೆ ಆಪ್ತವಾಗುವುದೂ ಬಹುಶಃ ಇದೇ ಕಾರಣಕ್ಕೆ.

ಮರುಭೂಮಿಯಲ್ಲಿ ಬೇಸಿಗೆಯ ತಾಪಮಾನ ನಲವತ್ತೊಂಭತ್ತರಿಂದ ಐವತ್ತು ಡಿಗ್ರಿಗೆ ತಲುಪುತ್ತದೆ. ಚಳಿಗಾಲದಲ್ಲಿ ಇದೇ
ತಾಪಮಾನ ಎಂಟರಿಂದ ಆರರವರೆಗೂ ಇಳಿಯುತ್ತದೆ. ಎರಡೂ ಕಾಲದಲ್ಲಿ ಅಗಾಗ ಬೀಸುವ ವಿನಾಶಕಾರಿ ಮರಳಿನ ಚಂಡಮಾರುತದ ಅಬ್ಬರ ಬೇರೆ. ಅಬ್ಬಬ್ಬಾ ಎಂದರೆ ವರ್ಷಕ್ಕೆ ಒಂದೋ ಎರಡೋ ಮಳೆ.

ಬಹ್ರೈನ್‌ನ ಈ ಮಹಾ ಮರ ಹೇಗೆ ಬದುಕುತ್ತಿದೆ ಎನ್ನುವುದಕ್ಕೆ ಇದುವರೆಗೂ ಯಾವುದೇ ಒಂದು ನಿಖರ ಕಾರಣ ಹೇಳುವುದು ಕಷ್ಟ. ಈ ಮರದ ಬೇರು ಸುಮಾರು ಐವತ್ತು ಮೀಟರ್ ಭೂಮಿಯ ಒಳಕ್ಕೆ ಇಳಿದಿದೆ, ಅಲ್ಲಿ ನೀರಿನ ಸೆಲೆ ಸಿಕ್ಕಿರುವ ಸಾಧ್ಯತೆ ಇದೆ ಎನ್ನುವುದು ಒಂದು ವಾದ. ಮರದ ಬೇರು ಮರಳಿನ ಕಣಗಳಲ್ಲಿರುವ ತೇವಾಂಶವನ್ನೇ ತನ್ನ ಬದುಕಿಗೆ ಬಳಸಿಕೊಳ್ಳುತ್ತಿದೆ ಎನ್ನುವುದು ಇನ್ನೊಂದು ತರ್ಕ.

ಭೂಮಿಯ ಒಳಗಿರುವ ಮರದ ಬೇರಿನಲ್ಲಿ ಒಂದು ರೀತಿಯ ಶಿಲೀಂಧ್ರ ಇದ್ದು ಅದೇ ಈ ಮರಕ್ಕೆ ಆಹಾರ ಒದಗಿಸಿಕೊಡುತ್ತದೆ ಎನ್ನುವುದು ಕೆಲವರ ನಂಬಿಕೆಯಾದರೆ, ಪುರಾತನ ದಕ್ಷಿಣ ಮೆಸ ಪೊಟಾಮಿಯಾ ನಾಗರಿಕತೆಯ ಸಂದರ್ಭದಲ್ಲಿ (ಈಗಿನ ದಕ್ಷಿಣ ಇರಾಕ್ ಮತ್ತು ಕುವೈತ್ ಪ್ರದೇಶ) ಸುಮೇರಿಯಾ ಸಂಸ್ಕೃತಿಯನ್ನು ಪಾಲಿಸುತ್ತಿದ್ದ ಜನರು ನಂಬಿದ್ದ ನೀರಿಗೆ ಅಧಿಪತಿ ಯಾದ ‘ಎಂಕಿ’ (ನಮ್ಮಲ್ಲಿಯ ವರುಣ!) ಎಂಬ ದೈವದ ಪವಾಡದಿಂದ ಇದು ಬದುಕುತ್ತಿರಬಹುದು ಎನ್ನುವುದು ಕೆಲವರ ನಂಬಿಕೆ. ಹತ್ತು ವರ್ಷಗಳ ಹಿಂದೆ ಪುರಾತತ್ತ್ವ ಇಲಾಖೆಯವರು ಈ ಮರದ ಪಕ್ಕದಲ್ಲಿ ಐದು ನೂರು ವರ್ಷಗಳ ಹಿಂದಿನದು ಎನ್ನಬಹುದಾದ ವಾಸ್ತವ್ಯದ ಕುರುಹನ್ನು ಗುರುತಿಸಿದರು.

ಮಡಿಕೆ ಮತ್ತು ಇತರ ಕಲಾಕೃತಿಗಳು ಪತ್ತೆಯಾದವು. ಹಾಗಾದರೆ ಆ ಕಾಲದಲ್ಲಿ ಯಾರಾದರೂ ಈ ಜೀವ ತರುವನ್ನು ನೆಟ್ಟು ಪೋಷಿಸಿರಬಹುದೇ? ಸುಮಾರು ಮುವತ್ತು ವರ್ಷಗಳ ಹಿಂದೆ ನಡೆಸಿದ ‘ವೃಕ್ಷ ವಲಯ ಕಾಲಕ್ರಮ’ (ಡೆಂಡ್ರೊಕ್ರೊನಾಲಜಿ) ಪ್ರಕಾರ 1582 ರಲ್ಲಿ ಜೀವ ತಳೆದ ಅಕೇಶಿಯಾ ಜಾತಿಯ ಸಸ್ಯ ಇಂದು 440 ವರ್ಷದ ಮರವಾಗಿ ನಿಂತಿದೆ ಎಂಬ
ವರದಿ ಇದೆ. ಇದನ್ನು ಅಗೆದೋ, ಸಿಗಿದೋ ಪತ್ತೆ ಮಾಡೋಣವೆಂದರೆ, ಇಡೀ ದೇಶಕ್ಕೆ ಇದೊಂದೇ ಮರ! ಗೊಬ್ಬರ ನೀರಿನ ಪ್ರಯೋಗವನ್ನೂ ಮಾಡುವಂತಿಲ್ಲ.

ಪ್ರಯೋಗದ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಇದ್ದ ಒಂದು ಮರವನ್ನೂ ಕಳೆದುಕೊಳ್ಳಬೇಕಾದೀತು ಎಂಬ ಭಯ! ಇದೇ ಕಾರಣಕ್ಕಾಗಿಯೋ ಏನೋ, ಈ ಮರದಿಂದ ಒಸರುವ ದ್ರವ್ಯವನ್ನು ಮೇಣ ಮತ್ತು ಅಂಟು ತಯಾರಿಸಲು ಬಳಸಬಹುದು, ಬೀಜವನ್ನು ಜಾಮ್ ಮತ್ತು ವೈನ್ ತಯಾರಿಸಲು ಉಪಯೋಗಿಸಬಹುದು ಎಂದು ತಿಳಿದಿದ್ದರೂ ಅದನ್ನು ಮುಟ್ಟುತ್ತಿಲ್ಲ. ಅಷ್ಟಕ್ಕೂ ಈ ಸಸ್ಯ ಮೊದಲು ಹುಟ್ಟಿಕೊಂಡದ್ದು ಹೇಗೆ? ಯಾರಾದರೂ ನೆಟ್ಟಿರಬಹುದೇ? ಮನುಷ್ಯರೇ ನೆಟ್ಟಿದ್ದು ಹೌದಾಗಿದ್ದರೆ ಈ ಜಾತಿಯ ಸಸ್ಯ ನೀರಿಲ್ಲದೇ ಬದುಕಬಹುದು ಎಂದು ಅವರಿಗೆ ಆಗಲೇ ತಿಳಿದಿತ್ತೇ? ನೆಟ್ಟಿದ್ದೇ ಹೌದಾದರೆ ಅವರು ಒಂದನ್ನೇ ನೆಟ್ಟಿದ್ದೇಕೆ? ಅದರ ಜೊತೆಗಿರಲಿ ಎಂದಾದರೂ ಇನ್ನೊಂದನ್ನು ನೆಡಬಹುದಿತ್ತಲ್ಲ? ಅಥವಾ ವಲಸೆ ಹೋಗುವ ಯಾವುದಾದರೂ ಹಕ್ಕಿ ಈ ಸಸ್ಯದ ಜನನಕ್ಕೆ ಕಾರಣವಾಗಿರಬಹುದೇ? ಅದೇ ಹೌದು ಎಂದಾದರೆ ಆ ಜಾತಿಯ ಹಕ್ಕಿ ಕಳೆದ ನಾಲ್ಕೂವರೆ ದಶಕದಲ್ಲಿ ಮತ್ತೆ ಒಮ್ಮೆಯೂ ಈ ದೇಶದ ಮೂಲಕ ಹಾದು ಹೋಗಿಲ್ಲವೇ? ಆ ವೃಕ್ಷದ ಬಳಿ
ಹೋದಾಗೆಲ್ಲ ಈ ಪ್ರಶ್ನೆಗಳು ಸಹಜ.

ಬಹ್ರೈನ್ ಬಿಟ್ಟರೆ ಕೆನಡಾ, ಶ್ರೀಲಂಕಾ, ಆಸ್ಟ್ರೇಲಿಯಾ ಸೇರಿದಂತೆ ಒಟ್ಟೂ ಏಳು ರಾಷ್ಟ್ರಗಳಲ್ಲಿ ಈ ತಳಿಯ ವೃಕ್ಷಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲಿರುವ ವೃಕ್ಷ ಇದರಷ್ಟು ಚರ್ಚೆಯಲ್ಲಿಲ್ಲ, ಇದರಷ್ಟು ಮಹತ್ವನ್ನೂ ಪಡೆದಿಲ್ಲ. ಅದಕ್ಕೆ ಕಾರಣ ಆಯಾ
ದೇಶದ ವಾತಾವರಣ ಬಿಟ್ಟರೆ ಬೇರೇನೂ ಅಲ್ಲ. ಉಳಿದ ಎಲ್ಲಾ ದೇಶಗಳಲ್ಲೂ ಸಾಕಷ್ಟು ಮಳೆಯಾಗುತ್ತದೆ. ಬಹ್ರೈನ್ ಹಾಗಲ್ಲ. ವರ್ಷಕ್ಕೆ ಮೂರು- ನಾಲ್ಕು ಮಳೆ. ಅದೂ ಕೆಲವು ಗಂಟೆಗಳ ಕಾಲ ಸಣ್ಣಗೆ ಹೊಯ್ದು ತಣ್ಣಗಾಗುತ್ತದೆ. ಅದಕ್ಕಾಗಿಯೇ ಅದು ಮರುಭೂಮಿಯ ಮ(ಹತ್ತ)ರ.

೨೦೦೯ ರಲ್ಲಿ ಈ ಜೀವ ವೃಕ್ಷ ವಿಶ್ವದ ಏಳು ಅದ್ಭುತಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ನಾಮ ನಿರ್ದೇಶನಗೊಂಡಿತ್ತು. 1991 ರಲ್ಲಿ ಬಿಡುಗಡೆಯಾದ ಸ್ಟೀವ್ ಮಾರ್ಟಿನ್ ಚಿತ್ರ ಎಲ್. ಎ. ಸ್ಟೋರಿ ಯಲ್ಲಿ ಈ ಮರ ಮತ್ತು ಮರ ಇರುವ ಸ್ಥಳವನ್ನು ಮಾಂತ್ರಿಕ ಸ್ಥಳ ಎಂದು ಉಲ್ಲೇಖಿಸಲಾಗಿದೆ. ದುರಂತವೆಂದರೆ, ಮನುಷ್ಯ ಆ ಮರವನ್ನೂ ಬಿಟ್ಟಿಲ್ಲ. ತನ್ನ ಇಡೀ ಸಂಸಾರವನ್ನೇ ಮರದ ಟೊಂಗೆಯ ಮೇಲೆ ಹತ್ತಿ ಕುಳ್ಳಿರಿಸಿ ಫೋಟೋ ತೆಗೆಯುವುದರಿಂದ ಹಿಡಿದು, ಕಾಂಡದ ಮೇಲೆ ಹೆಸರು ಕೆತ್ತುವುದರವರೆಗೂ ತನ್ನ ಪರಾಕ್ರಮ ಮೆರೆದಿ‌ದ್ದಾನೆ.

ಮನುಷ್ಯನಿಂದ ಘಾಸಿಗೊಳಗಾಗಿ, ಅನುಭವಿಸುತ್ತಿರುವ ವೇದನೆ, ಆತನನ್ನು ಎದುರಿಸಲಾಗದ ನೋವು ಆ ಮರದಲ್ಲಿ ಈಗ
ಕಾಣುತ್ತಿದೆ. ನಾನು ಕಳೆದ ಎರಡೂವರೆ ದಶಕದ ಹಿಂದೆ ಮೊದಲಬಾರಿ ನೋಡಿದ ಮರಕ್ಕೆ ಈಗ ಮುಪ್ಪು ಆವರಿಸಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ, ಮನುಷ್ಯನ ಹಸ್ತಕ್ಷೇಪ ಇಲ್ಲವಾದರೆ ಮರುಭೂಮಿಯಲ್ಲಿರುವ ಒಂಟಿ ಮರವೂ ನೂರಾರು ವರ್ಷ
ಬದುಕಬಹುದು ಎನ್ನುವುದಕ್ಕೆ ಈ ಮರ ಉತ್ತಮ ಉದಾಹರಣೆ.

ಪುನಃ ತಾಜ್ ಮಹಲ್ ವಿಷಯಕ್ಕೆ ಬರೋಣ. ತಾಜ್ ಮಹಲ್ ಆವರಣದಲ್ಲಿ ಒಟ್ಟೂ ಹದಿನಾರು ವಿಭಿನ್ನ ತೋಟಗಳಿವೆ. ಒಂದೊಂದು ತೋಟದಲ್ಲೂ ಒಂದೇ ಜಾತಿಯ ಮರಗಳು. ಐವತ್ಮೂರು ಕಾರಂಜಿಗಳಿವೆ. ‘ಹದಿನಾರು ಮತ್ತು ಐವತ್ಮೂರು ಮಹತ್ವದ್ದು ಏಕೆಂದರೆ, ತಾಜ್ ಮಹಲ್ ಕಟ್ಟುವ ಕೆಲಸ ಪೂರ್ಣಗೊಂಡದ್ದು 1653 ರಲ್ಲಿ’ ಎಂದು ಪ್ರವಾಸ ಮಾರ್ಗದರ್ಶಿ ವಿವರಿಸುತ್ತಿದ್ದ. ಇನ್ನೂ ಒಂದು ವಿಶೇಷವೆಂದರೆ ತಾಜ್ ಮಹಲ್ ನಿಂತದ್ದು ಮರದ ಫೌಂಡೇಶನ್ ಮೇಲೆ. ಪಕ್ಕದಕ್ಕೇ ಯಮುನಾ ನದಿ ಹರಿಯುತ್ತಿದ್ದು, ಅದರ ನೀರು ಕುಡಿದಷ್ಟೂ ಬಲವಾಗುವ ಕಟ್ಟಿಗೆಯನ್ನು ಅದಕ್ಕೆ ಬಳಸಲಾಗಿತ್ತು.

ಮುಂದೊಂದುದಿನ ಯಮುನೆ ಬರಡಾಗಬಹುದು ಎಂದು ಆ ಕಾಲದಲ್ಲಿ ಯಾರೂ ಯೋಚಿಸಿರಲಿಲ್ಲ ಎನ್ನುವುದು ಬೇರೆ ವಿಷಯ). ಆ ಧಗೆಯಲ್ಲಿ ಗೈಡ್ ತಂಪು ಸಂಗಮರಿ ಕಲ್ಲಿನ ವರ್ಣನೆ ಮಾಡುತ್ತಿದ್ದರೆ, ದೃಷ್ಟಿ ಆಗಾಗ ಹತ್ತಿರದ ಮರದ ಕಡೆಗೇ ಹೋಗು ತ್ತಿತ್ತು. ಸಾಕಷ್ಟು ಹಸಿರು ತುಂಬಿದ ಆ ಆವರಣದಲ್ಲಿ, ಮುನ್ನೂರ ಎಪ್ಪತ್ತು ವರ್ಷಗಳ ಹಿಂದೆ ನೆಟ್ಟ ಒಂದು ಮರವೂ ಕಾಣಲಿಲ್ಲ. ಆ ಕಾಲದಲ್ಲಿ ಬಹುಕಾಲ ಮರವಾಗಿ ಬಾಳುವ ಸಸಿಯನ್ನು ನೆಡಲಿಲ್ಲವಾ ಎಂಬುದು ಒಂದು ಪ್ರಶ್ನೆ. ಒಂದು ವೇಳೆ ನೆಟ್ಟಿದ್ದರೂ
ಅದನ್ನು ನಾವು ಉಳಿಸಿಕೊಂಡಿದ್ದಾವಾ ಎಂಬುದು ಇನ್ನೊಂದು ಪ್ರಶ್ನೆ.

ಐದು ನಿಮಿಷ ಸೂರ್ಯನ ಹೊಡೆತ ತಡೆಯಲಾಗದೇ ನೆರಳು ಹುಡುಕುವ ಮನುಷ್ಯ ಇಡೀ ಜೀವಮಾನದಲ್ಲಿ ಒಮ್ಮೆಯೂ ಮರಕ್ಕೆ ನೆರಳಾಗಲು ಸಾಧ್ಯವಿಲ್ಲ. ಹುಟ್ಟಿನಿಂದ ಸಾಯುವತನಕ ತನ್ನ ಮಂಡೆ ಕಾಯಿಸಿಕೊಂಡು ನಮಗೆ ನೆರಳಾಗುವ
ಮರದ ಮಹತ್ವ ಮತ್ತೊಮ್ಮೆ ಅರಿವಾದದ್ದು ತಾಜ್ ಮಹಲ್‌ನ ಮಡಿಲಲ್ಲಿ.