Monday, 14th October 2024

ಎಚ್ಚರಿಕೆ ವಹಿಸಿ, ಏಡ್ಸ್ ನಿಯಂತ್ರಿಸಿಕೊಂಡು ಜೀವಿಸಿ

ಸ್ವಾಸ್ಥ್ಯ ಸಂಪದ

yoganna55@gmail.com

ಏಡ್ಸ್ ಎಂದರೇನು?
ಏಡ್ಸ್ ಎಂಬುದು ಆಂಗ್ಲಭಾಷೆಯ ಅಕ್ವರ್ಯ್ಡ್ ಇಮ್ಯೂನೋ ಡಿಫಿಸಿಯನ್ಸಿ ಸಿಂಡ್ರೋಮ್‌ನ ಸಂಕ್ಷಿಪ್ತರೂಪವಾಗಿದ್ದು, ತಾವೇ ಗಳಿಸಿಕೊಳ್ಳುವ ಎಚ್‌ಐವಿ ಸೋಂಕಿನಿಂದ ಈ ಕಾಯಿಲೆ ಉಂಟಾಗುವುದರಿಂದ ಇದನ್ನು ‘ಗಳಿಕಾ ರೋಗನಿರೋಧಕ ಕೊರತೆಯ ಸಿಂಡ್ರೋಮ್’ ಎನ್ನಲಾಗುತ್ತದೆ. ಇದರಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಏಡ್ಸ್ ಮಾನವಕುಲಕ್ಕೆ ಮಾರಕವಾಗಿರುವ ಭಯಾನಕ ಸೋಂಕುರೋಗಗಳಲ್ಲೊಂದು. ೧೫-೪೯ರ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ರೋಗ ಆಫ್ರಿಕಾ ದೇಶದ ಮೂರರಲ್ಲಿ ಎರಡಷ್ಟು ಜನ ಈ ಕಾಯಿಲೆಗೆ ತುತ್ತಾಗುತ್ತಿದ್ದು, ಪ್ರಪಂಚದಲ್ಲಿ ಪ್ರತಿವರ್ಷ ೬.೫ಲಕ್ಷ ಜನ ಈ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಪ್ರತಿವರ್ಷ ಪ್ರಪಂಚದಲ್ಲಿ ಈ ಕಾಯಿಲೆಗೆ ತುತ್ತಾಗುತ್ತಿ ರುವವರ ಸಂಖ್ಯೆ ಹೆಚ್ಚುತ್ತಿದ್ದು, ಭಾರತದಲ್ಲಿ ಸುಮಾರು ೨೫ಲಕ್ಷ ಜನ ಈ ಕಾಯಿಲೆಗೀಡಾಗಿದ್ದಾರೆ.

ಭಾರತದಲ್ಲಿ ಈ ಕಾಯಿಲೆಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ಕುಗ್ಗುತ್ತಿರುವುದು ಸಂತಸದ ಸಂಗತಿ. ಏಡ್ಸ್, ಮನುಷ್ಯನ ಅತ್ಯವಶ್ಯಕ ಸಹಜ ಲೈಂಗಿಕ ಸುಖ ಮತ್ತು ಸಂತಾನಸುಖ ಕ್ರಿಯೆಯಾದ ಸಂಭೋಗ ಲೈಂಗಿಕ ಕ್ರಿಯೆಯಿಂದ ಒಬ್ಬರಿಂದೊಬ್ಬ ರಿಗೆ ಹರಡುವ ಸೋಂಕುರೋಗವಾದುದರಿಂದ ಎಚ್ಚರಿಕೆ ವಹಿಸದಿದ್ದಲ್ಲಿ, ಇದರ ನಿಯಂತ್ರಣವೂ ಕಷ್ಟ ಸಾಧ್ಯ. ಲೈಂಗಿಕಾಸಕ್ತಿ ಮನುಷ್ಯನ ಸಹಜ ಉತ್ಕಟ ಆಕಾಂಕ್ಷೆ ಯಾದುದರಿಂದ ಕಾಮಸುಖ ಪಡೆಯಲು ಯಾವ ವಿವೇಚನೆಯೂ ಇಲ್ಲದೆ ಅವನು ವರ್ತಿಸಿ ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

‘ಕಾಮಾತುರಾಣಾಂ ನಭಯಂ ನಲಜ್ಜಾ’ (ಲೈಂಗಿಕಾಸಕ್ತಿ ಉಗಮಿಸಿದಾಗ ಭಯ ಮತ್ತು ನಾಚಿಕೆ ಇರುವುದಿಲ್ಲ) ಈ ಕಾಯಿಲೆ ಒಮ್ಮೆ ತಗುಲಿದಲ್ಲಿ ವಾಸಿಯಾಗುವುದಿಲ್ಲ. ದೇಹದ ಎಲ್ಲ ಅಂಗಾಂಗಗಳನ್ನು ಹಂತಹಂತವಾಗಿ ದೀರ್ಘಾವಧಿಯಲ್ಲಿ ರೋಗಗ್ರಸ್ತ ವನ್ನಾಗಿಸಿ ಮನುಷ್ಯನನ್ನು ಬಲಿ ತೆಗೆದುಕೊಳ್ಳುತ್ತದೆ. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದಲ್ಲಿ ಬಾರದ ಕಾಯಿಲೆಯಿದು. ಒಂದು ಪಕ್ಷ ತಗುಲಿದರೂ ಜೀವನವಿಡೀ ಚಿಕಿತ್ಸೆಯಿಂದ ನಿಯಂತ್ರಿಸಬಹುದಾದ ಕಾಯಿಲೆಯಿದು. ಈ ಕಾರಣಗಳಿಂದಾಗಿ ಈ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕ.

ವಿಶ್ವ ಆರೋಗ್ಯ ಸಂಸ್ಥೆ ೧೯೮೮ ರಿಂದ ಪ್ರತಿವರ್ಷ ಡಿಸೆಂಬರ್ ೧ರಂದು ಪ್ರಪಂಚಾದ್ಯಂತ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಕರೆನೀಡಲಾಗಿದ್ದು, ಜನಸಾಮಾನ್ಯರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಸರಕಾರಗಳು ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಲೇಖನವಿದು.

ಜೀವಿ ಜಗತ್ತು: ಪರಿಸರದಲ್ಲಿ ಜೀವಿ ಮತ್ತು ನಿರ್ಜೀವಿ ಜಗತ್ತುಗಳೆಂಬ ೨ ಜಗತ್ತುಗಳಿವೆ. ಸೃಷ್ಟಿಯಲ್ಲಿ ಕಣ್ಣಿಗೆ ಕಾಣುವ
ದೊಡ್ಡ ಜೀವಿಗಳು (ಮ್ಯಾಕ್ರೋ ಆರ್ಗ್ಯಾನಿಸಮ್ಸ್) ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮದರ್ಶಕದಿಂದ ವೀಕ್ಷಿಸಬಹುದಾದ ಸೂಕ್ಷ್ಮ ಜೀವಿಗಳು (ಮೈಕ್ರೋ ಆರ್ಗ್ಯಾನಿಸಮ್ಸ್) ಎಂಬ ಎರಡು ಬಗೆಯ ಜೀವಿಗಳಿವೆ. ಇವೆರಡನ್ನೂ ಸೃಷ್ಟಿಸಿದ ಸೃಷ್ಟಿಕರ್ತ
ಪ್ರತಿ ಯೊಂದು ಜೀವಿಯೂ ತನ್ನ ವಂಶಾಭಿವೃದ್ಧಿಗೋಸ್ಕರ ಒಂದನ್ನೊಂದನ್ನು ಅವಲಂಬಿಸುವ ವ್ಯವಸ್ಥೆಯನ್ನೂ ಸೃಷ್ಟಿಸಿದ.

ಕೆಲವು ಸೂಕ್ಷ್ಮಜೀವಿಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾದರೆ, ಮತ್ತೆ ಕೆಲವು ಮಾರಕವಾಗಿವೆ. ಸೂಕ್ಷ್ಮಜೀವಿಗಳಲ್ಲಿ
ಬ್ಯಾಕ್ಟೀರಿಯಂಗಳು, ವೈರಸ್‌ಗಳು, ಫಂಗಸ್‌ಗಳು, ಪ್ರೋಟೋಜೋವಾಗಳು ಎಂಬ ವಿವಿಧ ಬಗೆಯ ಜೀವಿಗಳಿದ್ದು, ವೈರಸ್
ಗಳು ಇವುಗಳಲ್ಲಿ ಅತ್ಯಂತ ಸೂಕ್ಷ್ಮವಾದವುಗಳು. ಕೆಲವು ವೈರಸ್ ಗಳು ಕೆಲಕಾಲ ಪರಿಸರದಲ್ಲೂ, ಮತ್ತೆ ಕೆಲವು ಮನುಷ್ಯ
ಮತ್ತಿತರ ಜೀವಿಗಳನ್ನು ತಮ್ಮ ಬದುಕಿಗಾಗಿ ಮತ್ತು ವಂಶಾಭಿವೃದ್ಧಿಗಾಗಿ ಆಶ್ರಯಿಸುತ್ತವೆ.

ಪ್ರತಿಯೊಂದು ಸೂಕ್ಷ್ಮಜೀವಿಯು ಮನುಷ್ಯನ ದೇಹದ ಯಾವುದಾದರೊಂದು ಅಂಗಾಂಗದ ಮೇಲೆ ಅತೀವ ಆಸಕ್ತಿಯನ್ನು ಹೊಂದಿರುತ್ತದೆ. ಮನುಷ್ಯನನ್ನು ಪ್ರವೇಶಿಸಿದ ವೈರಸ್‌ಗಳು ತಮ ತಮಗೆ ಆಸಕ್ತಿ ಇರುವ ಅಂಗಾಂಗಗಳಲ್ಲಿ ಮನೆಮಾಡಿ, ಆ ಜೀವಕೋಶಗಳ ಆಹಾರಾಂಶಗಳನ್ನು ತಾವು ಉಪಯೋಗಿಸಿಕೊಂಡು ಆಶ್ರಯ ಜೀವಕೋಶಗಳನ್ನೇ ಕೊಂದು ತಾವು ವೃದ್ಧಿಯಾಗಿ ಕಾಯಿಲೆಗಳ ಉತ್ಪತ್ತಿಗೆ ನಾಂದಿಯಾಗುತ್ತವೆ.

ಸೂಕ್ಷ್ಮ ಜೀವಿಗಳು ಉದ್ದೇಶಪೂರ್ವಕವಾಗಿ ಮನುಷ್ಯನನ್ನು ಕಾಯಿಲೆಗೀಡು ಮಾಡುವ ದೃಷ್ಟಿಯಿಂದ ದೇಹವನ್ನು ಪ್ರವೇಶಿಸಿ ಕಾಯಿಲೆಯನ್ನುಂಟು ಮಾಡುವುದಿಲ್ಲ. ಅವುಗಳ ವಂಶಾಭಿವೃದ್ಧಿಗಾಗಿ ಸೃಷ್ಟಿಕರ್ತನ ಅಪೇಕ್ಷೆಯ ಮೇರೆಗೆ ದೇಹವನ್ನು ಪ್ರವೇಶಿ ಸುತ್ತವೆ. ಅವುಗಳ ವಂಶಾಭಿವೃದ್ಧಿಯ ಕ್ರಿಯೆಯಲ್ಲಿ ಮನುಷ್ಯ ರೋಗಗ್ರಸ್ತನಾಗುತ್ತಾನಷ್ಟೇ. ಏಡ್ಸ್ ಮಾನವ ನಿರೋಧಕ ವೈರಸ್(ಎಚ್‌ಐವಿ)ನಿಂದ ಉಂಟಾಗುವ ಸೋಂಕುರೋಗ.

ಮಾನವ ನಿರೋಧಕ ವೈರಸ್ (ಹ್ಯೂಮನ್ ಇಮ್ಯೂನೋ ವೈರಸ್- ಎಚ್‌ಐವಿ): ಮಾನವ ನಿರೋಧಕ ವೈರಸ್ ಆರ್
ಎನ್‌ಎ ಗುಂಪಿನ ವೈರಸ್ ಆಗಿದ್ದು, ಇದರಲ್ಲಿ ಎಚ್‌ಐವಿ-೧ ಮತ್ತು ಎಚ್‌ಐವಿ-೨ ಎಂಬ ೨ ವಿಧಗಳ ವೈರಸ್ ಇದ್ದು, ಎಚ್
ಐವಿ-೧ ವೈರಸ್ ಭಾರತ ಮತ್ತಿತರ ದೇಶಗಳಲ್ಲಿ ಹೆಚ್ಚಾಗಿ ಏಡ್ಸ್ ಉಂಟುಮಾಡುತ್ತಿರುವ ವೈರಸ್. ಈ ವೈರಸ್ ಯೋನಿರಸ,
ವೀರ್ಯ, ಜೊಲ್ಲು, ಮೂತ್ರ, ಕೀವು, ರಕ್ತ ಮತ್ತು ರಕ್ತದ ಘಟಕಗಳು, ಸ್ತನದ ಹಾಲು ದೇಹದ ಮತ್ತಿತರ ದ್ರವಗಳಲ್ಲಿ ಹೆಚ್ಚಾಗಿ ಕಂಡು ಬಂದು ಅವುಗಳಲ್ಲಿ ವೃದ್ಧಿಯಾಗುತ್ತವೆ. ಈ ವೈರಸ್ ಪ್ರಧಾನವಾಗಿ ಬಿಳಿ ರಕ್ತಕಣಗಳೊಳಗೆ ಮನೆಮಾಡಿ ಅವುಗಳನ್ನು ನಾಶ ಮಾಡುತ್ತದೆ. ಈ ಕಾರಣದಿಂದಾಗಿ ರಕ್ತದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗಿ, ಹಲವಾರು ಬಗೆಯ ಸೋಂಕುರೋಗಗಳಿಗೆ ನಾಂದಿಯಾಗುತ್ತದೆ.

ರೋಗ ಹರಡುವ ರೀತಿ: ಯೋನಿಯ ಸಂಭೋಗ, ಗುದ ಸಂಭೋಗ, ರಕ್ತ ನೀಡಿಕೆ, ಇಂಜಕ್ಷನ್‌ಗಳು, ಮಾದಕವಸ್ತುಗಳನ್ನು
ಇಂಜಕ್ಷನ್ ಮುಖಾಂತರ ತೆಗೆದುಕೊಳ್ಳುವಿಕೆ, ಸಲಿಂಗಕಾಮ, ಗರ್ಭಕೂಸಿಗೆ ತಾಯಿಯಿಂದ ಈ ವೈರಸ್ ಇನ್ನಿತರರಿಗೆ ಹರಡುತ್ತದೆ. ಸಲಿಂಗಕಾಮಿಗಳ ಗುದ ಸಂಭೋಗದಿಂದ ಕಾಯಿಲೆ ಬಹುಬೇಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ಯೋನಿದ್ರವದಲ್ಲಿರುವ ವೈರಾಣುಗಳು ಸಂಭೋಗದ ಸಮಯದಲ್ಲಿ ಗಂಡಸಿಗೂ, ವೀರ್ಯದಲ್ಲಿರುವ ವೈರಾಣುಗಳು
ಹೆಂಗಸಿಗೂ ಪರಸ್ಪರ ಹರಡುತ್ತವೆ. ಎಚ್‌ಐವಿ ಸೋಂಕಿತ ರಕ್ತವನ್ನು ಇನ್ನಿತರರಿಗೆ ನೀಡುವುದರಿಂದ ಮತ್ತು ಎಚ್‌ಐವಿ
ಸೋಂಕಿತರಿಗೆ ನೀಡಿದ ಸೂಜಿಯಲ್ಲಿಯೇ ಮತ್ತೊಬ್ಬರಿಗೆ ಚುಚ್ಚುಮದ್ದನ್ನು ನೀಡುವುದರಿಂದ ಹರಡುತ್ತದೆ. ಗರ್ಭಿಣಿಯರ ರಕ್ತದಲ್ಲಿರುವ ಎಚ್‌ಐವಿ ವೈರಸ್ ಪ್ಲಾಸೆಂಟಾ ಮುಖಾಂತರ ಗರ್ಭಕೂಸಿಗೆ ಹರಡುತ್ತದೆ. ಈ ವಿಧಾನಗಳನ್ನು ಹೊರತು
ಪಡಿಸಿ ಚುಂಬನ, ಆಲಿಂಗನ, ಸ್ಪರ್ಶ, ಗಾಳಿ, ನೀರು ಇತ್ಯಾದಿ ಇನ್ನಿತರ ಯಾವುದೇ ಮೂಲಕ ಈ ಕಾಯಿಲೆ ಹರಡುವುದಿಲ್ಲ.

ರೋಗೋತ್ಪತ್ತಿ: ಎಚ್‌ಐವಿ ವೈರಾಣುಗಳು ದೇಹವನ್ನು ತಲುಪಿದ ೭೨ ಗಂಟೆಗಳ ನಂತರ ಬಿಳಿ ರಕ್ತಜೀವಕೋಶದೊಳಗೆ
ರವಾನೆಯಾಗಿ ೨ ರಿಂದ ೪ ವಾರಗಳಲ್ಲಿ ಬಿಳಿರಕ್ತಕಣಗಳನ್ನು ಗಣನೀಯ ಮಟ್ಟದಲ್ಲಿ ನಾಶಮಾಡಿ ರೋಗ ತೊಂದರೆ ಗಳುಂಟಾಗುತ್ತವೆ. ಬಿಳಿ ರಕ್ತಕಣಗಳು ದೇಹದ ರಕ್ಷಣಾ ವ್ಯವಸ್ಥೆಯ ಪ್ರಮುಖ ಘಟಕಗಳಾಗಿದ್ದು, ಸೋಂಕಾಣುಗಳು ದೇಹವನ್ನು ಪ್ರವೇಶಿಸಿದಾಕ್ಷಣ ಅವುಗಳನ್ನು ನಾಶಮಾಡಿ ಸೋಂಕುರೋಗಗಳುಂಟಾಗುವುದನ್ನು ತಡೆಗಟ್ಟುತ್ತವೆ.

ಎಚ್‌ಐವಿ ವೈರಾಣುಗಳು ಬಿಳಿರಕ್ತಕಣಗಳನ್ನು ನಾಶಮಾಡುವುದರಿಂದ ದೇಹದ ರಕ್ಷಣಾ ವ್ಯವಸ್ಥೆ ಶಾಶ್ವತವಾಗಿ ಕುಸಿದು ದೇಹ ಹಲವಾರು ಬಗೆಯ ಸೋಂಕಾಣುಗಳ ದಾಳಿಗೀಡಾಗಿ ದೇಹದ ಎಲ್ಲ ಅಂಗಾಂಗಗಳು ವಿವಿಧ ಬಗೆಯ ಸೋಂಕುರೋಗಗಳಿಗೆ ಒಳಗಾಗುತ್ತವೆ. ಎಚ್ ಐವಿ ವೈರಾಣುಗಳು ಸಿಡಿ-೪ ಬಿಳಿರಕ್ತಕಣಗಳನ್ನು ಪ್ರಧಾನವಾಗಿ ನಾಶಮಾಡುವುದರಿಂದ ರಕ್ತದಲ್ಲಿ
ಇವು ಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತದೆ.

ಸಿಡಿ-೪ ಬಿಳಿರಕ್ತಕಣಗಳ ಸಂಖ್ಯೆಯನ್ನು ರಕ್ತದಲ್ಲಿ ಅಳೆಯುವುದರಿಂದ ಕಾಯಿಲೆಯ ತೀವ್ರತೆಯನ್ನು ಕಂಡುಕೊಳ್ಳಲಾಗುತ್ತದೆ. ರಕ್ತದಲ್ಲಿ ಎಚ್‌ಐವಿ ವೈರಾಣುಗಳ ಪ್ರಮಾಣ(ವೈರಲ್ ಲೋಡ್)ಹೆಚ್ಚಿದಂತೆಲ್ಲಾ ಸಿಡಿ-೪ ಬಿಳಿರಕ್ತಕಣಗಳ ಸಂಖ್ಯೆಯೂ ಸಹ
ಅನುಗುಣವಾಗಿ ಕಡಿಮೆಯಾಗಿ, ದೇಹದ ರೋಗನಿರೋಧಕ ಶಕ್ತಿ ಗಂಭೀರವಾಗಿ ಕುಗ್ಗಿ ಮಾರಣಾಂತಿಕ ಸೋಂಕುರೋಗಗಳಿಗೆ
ನಾಂದಿಯಾಗುತ್ತದೆ. ಎಚ್‌ಐವಿ ವೈರಸ್ ದೇಹವನ್ನು ಪ್ರವೇಶಿಸಿದ ೨-೪ ವಾರಗಳಲ್ಲಿ ಅವುಗಳಿಗೆ ವಿರುದ್ಧವಾದ ನಿರೋಧ ಕವಸ್ತುಗಳು (ಆಂಟಿಬಾಡೀಸ್) ಉತ್ಪತ್ತಿಯಾಗುತ್ತವೆ. ಇವುಗಳನ್ನು ಪತ್ತೆಹಚ್ಚಿ ಎಚ್‌ಐವಿ ಸೋಂಕನ್ನು ದೃಢೀಕರಿಸಿ ಕೊಳ್ಳಲಾಗು ತ್ತದೆ. ಸಕ್ಕರೆ ಕಾಯಿಲೆಯವರಲ್ಲಿ, ಮಾದಕವಸ್ತುಗಳನ್ನು ಸೇವಿಸುವವರಲ್ಲಿ, ವೃದ್ಧರಲ್ಲಿ, ರೋಗನಿರೋಧಕ ಶಕ್ತಿಗಳ ದಮನ ಮತ್ತಷ್ಟು ತೀವ್ರವಾಗುತ್ತದೆ. ಇವರುಗಳಲ್ಲಿ ಕ್ಯಾನ್ಸರ್ ಮತ್ತು ಕ್ಷಯರೋಗ(ಟಿಬಿ) ಬಹುಬೇಗ ಕಾಣಿಸಿಕೊಳ್ಳುತ್ತದೆ.

ರೋಗಲಕ್ಷಣಗಳು: ಎಚ್‌ಐವಿ ಸೋಂಕಿನ ರೋಗಿಯ ಸ್ಥಿತಿ ಬೇಲಿಯೇ ಇಲ್ಲದ ಹೊಲದಂತಾಗುತ್ತದೆ. ಹೊರಜಗತ್ತಿನ ಎಲ್ಲ
ರೋಗಾಣುಗಳ ದಾಳಿಗೆ ದೇಹ ಈಡಾಗುತ್ತದೆ. ಸಹಜ ಮನುಷ್ಯರಲ್ಲಿ ಕಾಯಿಲೆಯನ್ನುಂಟುಮಾಡದ ಅಲ್ಪ ರೋಗಜನಕ
ಸಾಮರ್ಥ್ಯದ ಸೋಂಕಾಣುಗಳೂ ಸಹ ಇವರುಗಳಲ್ಲಿ ಗಂಭೀರ ಸ್ವರೂಪದ ಸೋಂಕನ್ನುಂಟುಮಾಡುತ್ತವೆ. ದೇಹದ ಎಲ್ಲ
ಅಂಗಾಂಗಗಳು ವಿವಿಧ ಬಗೆಯ ಸೋಂಕಿಗೀಡಾಗುತ್ತವೆ. ಎಚ್ ಐವಿ ಸೋಂಕಿನ ದೇಹ ‘ಬಹುಸೋಂಕು ರೋಗಗಳ
ಉಗಮ ಕೋಶ’.

ಎಚ್‌ಐವಿ ರೋಗಾಣುಗಳು ದೇಹವನ್ನು ಪ್ರವೇಶಿಸಿದ ೨ ರಿಂದ ೪ವಾರಗಳಲ್ಲಿ ಜ್ವರ, ಕೆಮ್ಮು, ಸುಸ್ತು, ಸಂಕಟ, ಗಂಟಲು ನೋವು, ಚರ್ಮಗಂಧೆ, ತಲೆನೋವು, ತೂಕನಷ್ಟ, ಬೇಧಿ, ಲಿಂ- ಗೆಡ್ಡೆಗಳ ಊತ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಸಣ್ಣಪುಟ್ಟ ಸೋಂಕುರೋಗಗಳಲ್ಲೂ ಕಾಣಿಸಿಕೊಳ್ಳಬಹುದಾದ ತೊಂದರೆಗಳಾಗಿದ್ದು, ಇವು ಸಾಮಾನ್ಯ ಚಿಕಿತ್ಸೆಗೆ ಸ್ಪಂದಿಸದೆ ದೀರ್ಘಕಾಲ ಉಳಿದಲ್ಲಿ ಎಚ್‌ಐವಿ ಸೋಂಕನ್ನು ಶಂಕಿಸಬೇಕು. ಮೆದುಳು ಮತ್ತು ನರಮಂಡಲ, ಉಸಿರಾಟ ವ್ಯವಸ್ಥೆ, ಮೂತ್ರಾಂಗ ವ್ಯವಸ್ಥೆ, ಚರ್ಮ, ಜೀರ್ಣಾಂಗ ವ್ಯವಸ್ಥೆ ಇತ್ಯಾದಿಗಳ ಸೋಂಕುಕಾಯಿಲೆಗಳ ರೋಗಲಕ್ಷಣ ಗಳು ಉಂಟಾಗ ಬಹುದು. ಕೆಲವೊಮ್ಮೆ ಯಾವ ತೊಂದರೆಗಳೂ ಕಾಣಿಸಿಕೊಳ್ಳದೆ ವರ್ಷಾನುಗಟ್ಟಲೆ ಕಾಯಿಲೆ ಮೌನವಾಗಿರಬಹುದು.

ರೋಗ ದೃಢೀಕರಣ: ರೋಗಾಣುಗಳು ದೇಹ ಪ್ರವೇಶಿಸಿದ ೧೮ರಿಂದ ೪೫ದಿನಗಳ ನಂತರ ರಕ್ತದಲ್ಲಿ ಅಥವಾ ಜೊಲ್ಲು ರಸದಲ್ಲಿ ಎಚ್‌ಐವಿ ರೋಗಾಣುಗಳ ವಿರುದ್ಧದ ನಿರೋಧಕ ವಸ ಗಳು(ಆಂಟಿಬಾಡಿ)/ನಿರೋಧಜನಕ ವಸ್ತು(ಆಂಟಿಜನ್) ಗಳನ್ನು ಪತ್ತೆಮಾಡುವುದರಿಂದ ಕಾಯಿಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಒಮ್ಮೆ ಎಚ್‌ಐವಿ ಪರೀಕ್ಷೆ ಸಕಾರಾತ್ಮಕವಾದಲ್ಲಿ ಚಿಕಿತ್ಸೆಯ ನಂತರವೂ ಇದು ಸಕಾರಾತ್ಮಕವಾಗಿಯೇ ಇರುತ್ತದೆ.

ರಕ್ತದಲ್ಲಿ ಎಚ್‌ಐವಿ ವೈರಾಣುಗಳ ಪ್ರಮಾಣವನ್ನು ಅಳೆದು ಕಾಯಿಲೆಯ ತೀವ್ರತೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ.
ಚಿಕಿತ್ಸೆ: ಎಚ್‌ಐವಿ ಸೋಂಕು ಒಮ್ಮೆ ತಗುಲಿದಲ್ಲಿ ವಾಸಿಯಾಗುವುದಿಲ್ಲ. ಎಚ್‌ಐವಿ ವೈರಾಣುಗಳ ವೃದ್ಧಿಯನ್ನು ದಮನ ಮಾಡುವ ರೆಟ್ರೋ ವೈರಸ್ ದಮನಕಾರಿ ಔಷಧಗಳನ್ನು (ಜೀಡೋವ್ಯೂಡಿನ್, ಲಾಮಿವ್ಯೂಡಿನ್, ಅಜಿಡೋಥೈಮಿಡಿನ್, ಇಂಡಿನವೇರ್ ಇತ್ಯಾದಿ) ಪ್ರತಿನಿತ್ಯ ಜೀವನವಿಡಿ ಸೇವಿಸುವುದರಿಂದ ಕಾಯಿಲೆಯನ್ನು ಸಮರ್ಥವಾಗಿ ನಿಯಂತ್ರಿಸಬಹುದು.

ಈ ಔಷಧಗಳನ್ನು ಪ್ರಾರಂಭಿಸಿದ ೬ ತಿಂಗಳಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಈ ಔಷಧಗಳಲ್ಲದೆ ಜೊತೆಗೂಡಿದ ಸೋಂಕು ರೋಗಗಳಿಗೆ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಚಿಕಿತ್ಸೆ ಅತ್ಯವಶ್ಯಕ. ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಶುಚಿತ್ವ ಕಾಪಾಡುವಿಕೆ, ನೆಮ್ಮದಿಯ ಬದುಕು ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

ತಡೆಗಟ್ಟುವುದು ಹೇಗೆ?: ಅಪರಿಚಿತರೊಂದಿಗೆ ಸಂಭೋಗ ಮಾಡದಿರುವುದು, ಮಾಡಿದರೂ ಕಾಂಡೋಮ್ ಉಪಯೋಗಿಸುವುದು, ಎಚ್‌ಐವಿ ಸೋಂಕುರಹಿತ ರಕ್ತಪಡೆಯುವುದು, ಒಮ್ಮೆ ಉಪಯೋಗಿಸಿ ಬಿಸಾಡುವ ಸಿರಂಜುಗಳನ್ನು ಚುಚ್ಚುಮದ್ದಿಗಾಗಿ ಉಪಯೋಗಿಸುವುದು. ಮತ್ತು ಗರ್ಭಿಣಿಯರ ಎಚ್‌ಐವಿ ಸೋಂಕನ್ನು ಔಷಧಗಳಿಂದ ಸಮರ್ಥವಾಗಿ ನಿಯಂತ್ರಿಸುವುದು(ಗರ್ಭಕೂಸಿಗೆ ಹರಡದಂತೆ ತಡೆಯಲು) ಈ ವಿಧಾನಗಳಿಂದ ಎಚ್‌ಐವಿ ಸೋಂಕನ್ನು ತಡೆಯಬಹುದು.

ಎಚ್‌ಐವಿ ತಡೆಗಟ್ಟುವಿಕೆಗೆ ಮತ್ತು ನಿಯಂತ್ರಣಕ್ಕೆ ಲಸಿಕೆಯನ್ನು ಕಂಡುಹಿಡಿಯುವ ದಿಕ್ಕಿನಲ್ಲಿ ಸಂಶೋಧನೆಗಳು ಜರುಗುತ್ತಿದ್ದು,
ಮುಂದಿನ ದಿನಗಳಲ್ಲಿ ಲಭಿಸುವ ಆಶಯವಿದೆ. ಎಚ್‌ಐವಿ ಸೋಂಕಿಗೆ ಒಳಗಾದುದನ್ನು ಶಂಕಿಸಿದ ೧ರಿಂದ ೨ಗಂಟೆಯ ಒಳಗೆ ಗರಿಷ್ಠ ೭೨ಗಂಟೆಯ ಒಳಗೆ ಎಚ್‌ಐವಿ ನಿರೋಧಕ ಔಷಧಗಳನ್ನು ಪ್ರಾರಂಭಿಸಿ ೨೮ದಿನಗಳ ಕಾಲ ಉಪಯೋಗಿಸಿದಲ್ಲಿ ಬಾರದಂತೆ ತಡೆಯಬಹುದು. ಸಮರ್ಥ ಚಿಕಿತ್ಸೆಯಿಂದ ದೇಹದಲ್ಲಿ ವೈರಾಣುಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡವರು ಇನ್ನಿತರರಿಗೆ ಸೋಂಕನ್ನು ಹರಡುವುದಿಲ್ಲ.

ಅಂತಹವರು ಸಂಗಾತಿಯೊಡನೆ ಸಹಜ ಲೈಂಗಿಕ ಕ್ರಿಯೆಯನ್ನು ಕೈಗೊಳ್ಳಬಹುದು. ಏಡ್ಸ್ ಮನುಷ್ಯ ಸ್ವಯಂಕೃತ ಅಪರಾಧದಿಂದ ಗಳಿಸುವ ಕಾಯಿಲೆಯಾದುದರಿಂದ ಅವನು ಬೇಡವೆಂದು ನಿರ್ಧರಿಸಿದರೆ ಅದಾಗಿಯೇ ಬರುವ ಕಾಯಿಲೆಯಲ್ಲ. ಅದನ್ನು ಸ್ವಾಗತಿಸುವ ಅಥವಾ ತಿರಸ್ಕರಿಸುವ ಆಯ್ಕೆ ನಿಮ್ಮದಲ್ಲವೇ?