Sunday, 3rd November 2024

ಕಣ್ಣಿನಲ್ಲಿ ಕಾಣಿಸುವುದೇ ಏಡ್ಸ್‌ ಕಾಯಿಲೆ ?

ವೈದ್ಯ ವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌

drhsmohan@gmail.com

ಕೆಲವೊಮ್ಮೆ ಕಣ್ಣು ಗುಡ್ಡೆಯ ಹೊರ ಭಾಗದಲ್ಲಿ ಕ್ಯಾಪೊಸಿ ಸಾರ್ಕೋಮಾ ಎಂಬ ಹೆಸರಿನ ಸಣ್ಣ ಸಣ್ಣ ಗೆಡ್ಡೆಗಳು ಏಡ್ಸ್ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಒಂದು ರೀತಿಯ ಕ್ಯಾನ್ಸರ್ ಕಾಯಿಲೆ. ಕೆಲವೊಮ್ಮೆ ಇದಕ್ಕೆ ಶಸಕ್ರಿಯೆ ಮತ್ತು ಔಷಧ ಚಿಕಿತ್ಸೆಗಳನ್ನು (Chemotherapy) ಮಾಡಬೇಕಾಗುತ್ತದೆ.

ಕೆಲವು ವರ್ಷಗಳ ಮೊದಲು 32 ವರ್ಷದ ಮಹಿಳೆಯೊಬ್ಬರು ಕಣ್ಣು ಮಂಜಾಗುತ್ತಿದೆ ಅಥವಾ ದೃಷ್ಟಿ ಕಡಿಮೆಯಾಗುತ್ತದೆ ಎಂದು ಕಣ್ಣಿನ ಪರೀಕ್ಷೆಗೆ ನನ್ನ ಕ್ಲಿನಿಕ್‌ಗೆ
ಬಂದಿದ್ದರು. ಕಣ್ಣಿನ ಪರೀಕ್ಷೆ ಮಾಡಿದಾಗ ಮೇಲ್ನೋಟಕ್ಕೆ ಅದು ಕಣ್ಣಿನ ಕಾಯಿಲೆಯ ಹಾಗೆ ಅನಿಸಲಿಲ್ಲ. ಸುಮಾರು ಶೇಕಡಾ 35ರಷ್ಟು ಕಣ್ಣಿನ ದೃಷ್ಟಿ ಕಡಿಮೆ ಯಾಗಿದೆ ಎಂಬ ಅಂಶ ಹೊರತುಪಡಿಸಿ ಕಣ್ಣಿನಲ್ಲಿ ಬೇರಾವ ರೋಗ ಲಕ್ಷಣಗಳೂ ಇರಲಿಲ್ಲ. ಕಣ್ಣು ನೋವಿರಲಿಲ್ಲ.

ಕಣ್ಣೀರು ಬರ್ತಾ ಇರಲಿಲ್ಲ. ಕಣ್ಣು ಕೆಂಪಾಗಿರಲಿಲ್ಲ, ಕಣ್ಣಿನ ಕಡಿತವಿರಲಿಲ್ಲ. ಕಾಯಿಲೆಯ ಬಗ್ಗೆ ವಿವರವಾಗಿ ತಿಳಿ ಯಲು ಸೂಕ್ತ ಔಷಧ ಕಣ್ಣಿಗೆ ಬಿಟ್ಟು ಅರ್ಧ ಗಂಟೆಯ ನಂತರ ಅಕ್ಷಿಪಟಲ ಪುನಃ ಪರೀಕ್ಷೆ ಮಾಡಿದಾಗ ಅದು ಕಣ್ಣಿನ ಕಾಯಿಲೆ ಅಲ್ಲ, ದೈಹಿಕ ಕಾಯಿಲೆ ಎಂಬ ನನ್ನ ಅನುಮಾನ ನಿಜವಾಗಿತ್ತು. ಈ ರೀತಿಯ ಲಕ್ಷಣಗಳು ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದಾದರೆ ಲೈಂಗಿಕ ಕಾರ್ಯಕರ್ತೆಯರಲ್ಲಿ ಮಾತ್ರ. ಆಕೆಯನ್ನು ನೋಡುವಾಗ ಹಾಗೆ ಎನಿಸಲಿಲ್ಲ. ಅವರ ಕುಟುಂಬದ ಬಗ್ಗೆ ವಿಚಾರಿಸಿದೆ. ಸಾಮಾನ್ಯ ಕಣ್ಣಿನ ಚಿಕಿತ್ಸೆ ಕೊಟ್ಟು 4-5 ದಿನಗಳಲ್ಲಿ ಪತಿಯನ್ನು ಕರೆದು ಕೊಂಡು ಬರಲು ತಿಳಿಸಿದೆ.

ಮೊದಲು ಆಕೆ ಒಪ್ಪಲಿಲ್ಲ. ಇಬ್ಬರ ಕಣ್ಣನ್ನೂ ಪರೀಕ್ಷೆ ಮಾಡಿಯೇ ಈ ಕಾಯಿಲೆಗೆ ಚಿಕಿತ್ಸೆ ಮಾಡಬೇಕೆಂದು ಒತ್ತಿ ಹೇಳಿ ಆಕೆಯನ್ನು ಒಪ್ಪಿಸಿದೆ. ನಂತರ 5 ದಿನಗಳ ನಂತರ ಇಬ್ಬರೂ ಬಂದಾಗ ಆಕೆಯ ಪತಿಯ ಕೆಲಸ ಮತ್ತು ಆರೋಗ್ಯದ ಬಗ್ಗೆ ವಿವರವಾಗಿ ವಿಚಾರಿಸಿದೆ. ಆತ ಟ್ರಾನ್ಸ್‌ಪೋರ್ಟ್ ಕಂಪನಿಯ ಲಾರಿಯೊಂದರಲ್ಲಿ ಊರೂರು ತಿರುಗಾಡುವ ಡ್ರೈವರ್. 35 ವರ್ಷದವ. ಈ ದಿನ ಒಂದು ಊರಿನಲ್ಲಿದ್ದರೆ ಮರುದಿನ ಮತ್ತೊಂದು ಊರಿನಲ್ಲಿ ಠಿಕಾಣಿ. 4-5 ವಾರಗಳಿಗೊಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳ ಜತೆಗೆ ಒಂದೆರಡು ದಿನ ಇದ್ದು ನಂತರ ಪುನಃ ವೃತ್ತಿಗೆ ಮರಳುತ್ತಿದ್ದ.

ನಂತರ ನಿಧಾನವಾಗಿ ಆತನ ಕಾಯಿಲೆಯ ವಿವರಗಳನ್ನು ತೆಗೆದುಕೊಂಡೆ. ಕಳೆದ 6 ತಿಂಗಳುಗಳಿಂದ ಆಗಾಗ ಜ್ವರ, ಕೆಮ್ಮು ಕಾಣಿಸಿಕೊಂಡವು. ವೈದ್ಯರು ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಔಷಧ ಕೊಡುತ್ತಿದ್ದರು. ತಾತ್ಕಾಲಿಕವಾಗಿ ಕಾಯಿಲೆ ಕಡಿಮೆಯಾದ ಹಾಗೆ ತೋರುತ್ತಿತ್ತು. ನಂತರ ಇಬ್ಬರದ್ದೂ ವಿವರವಾದ ರಕ್ತ ಪರೀಕ್ಷೆ ಮಾಡಿಸಿದಾಗ ಇಬ್ಬರಲ್ಲೂ ಏಡ್ಸ್ ಕಾಯಿಲೆ ಇದೆಯೆಂಬ ನನ್ನ ಸಂದೇಹ ನಿಜವಾಗಿತ್ತು. ಆತನ ಮೂಲಕವೇ ಪತ್ನಿಗೆ ಬಂದಿದೆಯೆನ್ನಬಹುದು.

ಡಯಾಬಿಟಿಸ್, ಬಿಪಿ ಮತ್ತು ಸಿಫಿಲಿಸ್ ಕಾಯಿಲೆಗಳನ್ನು ಕೇವಲ ಕಣ್ಣಿನ ಒಳಗಡೆ ಪರೀಕ್ಷಿಸಿ ಹೇಗೆ ನೇತ್ರ ವೈದ್ಯ ಮೊದಲ ಬಾರಿ ಆ ಎಲ್ಲ ಕಾಯಿಲೆಗಳನ್ನು ಪತ್ತೆ ಹಚ್ಚಬಲ್ಲನೋ, ಅದೇ ರೀತಿ ಏಡ್ಸ್ ಕಾಯಿಲೆಯನ್ನೂ ಮೊದಲ ಬಾರಿಗೆ ಕಣ್ಣಿನ ವೈದ್ಯನೇ ಪತ್ತೆ ಮಾಡಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಎಚ್‌ಐವಿ ವೈರಸ್‌ನಿಂದ ಬರುವ ಲೈಂಗಿಕ ಕಾಯಿಲೆ ಏಡ್ಸ್. ಇದರಲ್ಲಿ ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಂಡು ದೇಹವು ಹಲವು ರೀತಿಯ ಸೋಂಕಿಗೆ ಒಳಗಾಗಲು ಕಾರಣವಾಗುತ್ತದೆ.

ಎಚ್‌ಐವಿ ವೈರಸ್‌ಗಳು ಟಿ ಲಿಂಫೋಸೈಟ್ಸ್ ಎಂಬ ಜೀವಕೋಶಗಳನ್ನು ನಾಶಗೊಳಿಸಿ ಕಣ್ಣಿನೊಳಗೆ ಹಾಗೂ ಕಣ್ಣಿನ ಹೊರಗೆ ಹಲವು ರೀತಿಯ ಸೋಂಕುಗಳಿಗೆ ಕಾರಣವಾಗುವುದೇ ಅಲ್ಲದೆ, ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುವಂತೆಯೂ ಮಾಡುತ್ತವೆ. ಏಡ್ಸ್ ಪೀಡಿತ ಶೇ.70 ರೋಗಿಗಳಲ್ಲಿ ಕಣ್ಣಿನ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಮುಖ್ಯ ರೋಗ ಲಕ್ಷಣವೆಂದರೆ- ಕಣ್ಣಿನ ಅಕ್ಷಿಪಟಲದಲ್ಲಿ ಕಾಣಿಸಿಕೊಳ್ಳುವ ಎಚ್‌ಐವಿ ರೆಟಿನೋಪಥಿ. ಈ
ರೆಟಿನೋಪಥಿ ಮೇಲ್ನೋಟಕ್ಕೆ ಏರು ರಕ್ತದೊತ್ತ ಡದ ರೆಟಿನೋಪಥಿ (Hypertensive Retinopathy)ಯನ್ನೇ ಹೋಲುತ್ತದೆ.

ಅದರಂತೆಯೇ ಅಕ್ಷಿಪಟಲದ ತುಂಬಾ ವಿವಿಧ ರೀತಿಯ ರಕ್ತಸ್ರಾವಗಳು, ಒಸರುಗಳು (Exudates) ಹಾಗೂ ಸಣ್ಣ ಸಣ್ಣ ರಕ್ತಸ್ರಾವದ ತುಣುಕುಗಳು
(Hemorrhages) ಕಾಣಿಸಿ ಕೊಳ್ಳುತ್ತವೆ. ಈ ರೀತಿಯ ರಕ್ತಸ್ರಾವಗಳು ಮತ್ತು ಅಕ್ಷಿಪಟಲದ ತುಂಬಾ ವ್ಯಾಪಿಸಿದಂತೆ ಅದರಲ್ಲಿಯೂ ಅಕ್ಷಿಪಟಲದ ದೃಷ್ಟಿಯ ಮಧ್ಯಭಾಗ ಮ್ಯಾಕ್ಯುಲ ಭಾಗವನ್ನು ಆವರಿಸಿ ದಾಗ ದೃಷ್ಟಿ ಗಮನಾರ್ಹವಾಗಿ ಕುಂಠಿತ ಗೊಳ್ಳುತ್ತದೆ. ವ್ಯಕ್ತಿಗೆ ಏಡ್ಸ್ ಕಾಯಿಲೆ ಸ್ವಲ್ಪ ಮುಂದುವರಿದ ಹಂತದಲ್ಲಿ ದ್ದಾಗ ಈ ಮುಂದು ವರಿದ ಲಕ್ಷಣಗಳು ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ.

ಕೆಲವೊಮ್ಮೆ ಕಣ್ಣು ಗುಡ್ಡೆಯ ಹೊರ ಭಾಗದಲ್ಲಿ ಕ್ಯಾಪೊಸಿ ಸಾರ್ಕೋಮಾ ಎಂಬ ಹೆಸರಿನ ಸಣ್ಣ ಸಣ್ಣ ಗೆಡ್ಡೆಗಳು ಏಡ್ಸ್ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಒಂದು ರೀತಿಯ ಕ್ಯಾನ್ಸರ್ ಕಾಯಿಲೆ. ಕೆಲವೊಮ್ಮೆ ಇದಕ್ಕೆ ಶಸ್ತ್ರಕ್ರಿಯೆ ಮತ್ತು ಔಷಧ ಚಿಕಿತ್ಸೆಗಳನ್ನು (Chemotherapy) ಮಾಡಬೇಕಾಗುತ್ತದೆ. ಕೆಲವೊಮ್ಮೆ ತೀವ್ರ ರೀತಿಯ ಹರ್ಪಿಸ್ ಕಾಯಿಲೆ- ಹರ್ಪಿಸ್ ಜೋಸ್ಟರ್ ಆಫ್ತಾಲ್ಮಿಕಸ್- ರೀತಿಯಲ್ಲೂ ಏಡ್ಸ್ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ: ಮೂಲ ಏಡ್ಸ್ ಕಾಯಿಲೆಗೆ ಕಾಯಿಲೆಯ ಹಂತವನ್ನು ಅನುಸರಿಸಿ ಚಿಕಿತ್ಸೆ ಕೈಗೊಳ್ಳಬೇಕು. ಈಗ ಏಡ್ಸ್ ಕಾಯಿಲೆಯ ಬಗೆಗೆ ಸ್ವಲ್ಪ ಅವಲೋಕಿಸೋಣ.

ಎಚ್‌ಐವಿ ಅಥವಾ ಏಡ್ಸ್ ಕಾಯಿಲೆ: ಹ್ಯೂಮನ್ ಇಮ್ಯುನೋಡಿಫಿಷಿಯನ್ಸ್ ವೈರಸ್ ಎಂಬುದು ಒಂದು ವೈರಾಣು ಅಥವಾ ವೈರಸ್. ಈ ವೈರಸ್ ಸೋಂಕಿಗೆ ತುತ್ತಾದ ಮನುಷ್ಯ ಜೀವಮಾನ ಪರ್ಯಂತ ಈ ಸೋಂಕಿಗೆ ತುತ್ತಾಗುತ್ತಾನೆ. ಅಲ್ಲದೆ ಆತ ಇತರರಿಗೂ ಈ ಸೋಂಕನ್ನು ಹರಡಬಲ್ಲ. ಅರ್ಕ್ವೈಡ್ ಇಮ್ಯುಮೋಡಿ ಫಿಷಿಯನ್ಸಿ ಸಿಂಡ್ರೋಮ್ – ಇದು ಮೇಲೆ ತಿಳಿಸಿದ ಎಚ್‌ಐವಿ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು 1980ರ ದಶಕದ ಹೊತ್ತಿಗೆ ಕಾಣಿಸಿಕೊಂಡ ಇತ್ತೀಚಿನ ಲೈಂಗಿಕ ಕಾಯಿಲೆ. ಏಡ್ಸ್ ಎಂಬುದರ ಅರ್ಥ – ದೇಹದಲ್ಲಿ ಅಲ್ಲಿಯವರೆಗೆ ಇಲ್ಲದ ಹೊರಗಿನಿಂದ ಬಂದ ಕಾಯಿಲೆ. ಇದು ದೇಹದ ಪ್ರತಿರೋಧ ಶಕ್ತಿಯನ್ನು ತೀವ್ರ ವಾಗಿ ಕುಂಠಿತ ಗೊಳಿಸಿ ಹೊರಗಿನ ಬೇರೆ ಬೇರೆ ರೀತಿಯ ಸೋಂಕುಗಳು ದೇಹಕ್ಕೆ ಬರುವಲ್ಲಿ ಸಹಾಯ ಮಾಡುತ್ತವೆ.

ಕಾಯಿಲೆಯ ಆರಂಭದ ಲಕ್ಷಣಗಳು: ಈ ಕಾಯಿಲೆಗೆ ತುತ್ತಾದ ಹಲವರಲ್ಲಿ ಆರಂಭದಲ್ಲಿ ನಿರ್ದಿಷ್ಟ ರೋಗ ಲಕ್ಷಣಗಳೇ ಇರುವುದಿಲ್ಲ. ಇನ್ನು ಕೆಲವರಲ್ಲಿ ಬೇರೆ ಇತರ ಕಾಯಿಲೆಗಳ ಲಕ್ಷಣಗಳು ಇರುತ್ತವೆ. ಆರಂಭದ ನಿಜವಾದ ರೋಗ ಲಕ್ಷಣಗಳೆಂದರೆ- ತಲೆನೋವು, ಆಗಾಗ ಜ್ವರ ಬರುವುದು, ದೇಹದ ವಿವಿಧ ಮಾಂಸಖಂಡ ಗಳಲ್ಲಿ ತೀವ್ರ ರೀತಿಯ ನೋವು, ವಾಂತಿ ಬರುವ ಹಾಗೆ ಆಗುವುದು, ಕೆಲವೊಮ್ಮೆ ಭೇದಿ, ಸಣ್ಣ ಪ್ರಮಾಣದ ವಿವಿಧ ರೀತಿಯ ಸೋಂಕಿನ ಲಕ್ಷಣಗಳು, ಎಲ್ಲಕ್ಕಿಂತ ಹೆಚ್ಚಾಗಿ ಪದೇ ಪದೇ ಸುಸ್ತಾಗುವುದು. ಸಾಮಾನ್ಯ ಆರೋಗ್ಯವಂತ ಮನುಷ್ಯನಿಗಿಂತ ತೀವ್ರ ರೀತಿಯ ಸುಸ್ತು ಆಗಾಗ ಕಾಣಿಸಿಕೊಂಡರೆ ಎಚ್‌ಐವಿಯ ಆರಂಭದ ಲಕ್ಷಣಗಳೇನೋ ಎಂದು ಅನುಮಾನಿಸ ಬೇಕಾಗುತ್ತದೆ.

ಕಾಯಿಲೆ ತೀವ್ರವಾದಾಗ ಲಕ್ಷಣಗಳು: ಕಾಯಿಲೆ ತೀವ್ರ ರೀತಿಯzದಾಗ ಇದನ್ನು ಏಡ್ಸ್ ಕಾಯಿಲೆ ಎಂದೇ ಕರೆಯುತ್ತೇವೆ. ಆಗ ದೇಹದ ಪ್ರತಿರೋಧ ಶಕ್ತಿ ತೀವ್ರ ವಾಗಿ ಕುಂಠಿತಗೊಂಡು ತೀವ್ರ ರೀತಿಯ ಸೋಂಕಿನ ಕಾಯಿಲೆಗಳಾದ ಕ್ಷಯ ಅಥವಾ ನ್ಯುಮೋನಿಯಾ ಕಾಯಿಲೆಯ ರೀತಿ ಕಾಣಿಸಿಕೊಳ್ಳುತ್ತದೆ. ಈ ರೀತಿಯ ತೀವ್ರ ಪ್ರಮಾಣದ ಕಾಯಿಲೆ ವ್ಯಕ್ತಿಯಲ್ಲಿ ಸೋಂಕು ಆರಂಭವಾಗಿ ಎಷ್ಟು ವರ್ಷಗಳ ನಂತರ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗುವುದಿಲ್ಲ.
ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸೋಂಕಿಗೆ ಒಳಗಾದ ವ್ಯಕ್ತಿಯ ದೈಹಿಕ ಪ್ರತಿರೋಧ ಶಕ್ತಿಯನ್ನು ಇದು ಅವಲಂಬಿಸಿದೆ. ಈ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಎಷ್ಟೋ ಬಾರಿ 8-10 ವರ್ಷಗಳವರೆಗೂ ಮೇಲೆ ತಿಳಿಸಿದ ತೀವ್ರ ರೀತಿಯ ಕಾಯಿಲೆಯ ಲಕ್ಷಣಗಳೇ ಕಾಣಿಸುವುದಿಲ್ಲ.

ಕಾಯಿಲೆ ಹರಡುವ ವಿಧಾನಗಳು: ಈ ಕಾಯಿಲೆ ಸೋಂಕಿಗೆ ಒಳಗಾದ ವ್ಯಕ್ತಿಯಿಂದ ಆರೋಗ್ಯ ವಂತ ವ್ಯಕ್ತಿಗೆ ಮುಖ್ಯವಾಗಿ ರಕ್ತ, ವೀರ್ಯ, ಯೋನಿಯಲ್ಲಿನ ಚೋದಕ ದ್ರವಗಳು ಹಾಗೂ ಎದೆ ಹಾಲಿನ ಮುಖಾಂತರ ಹರಡುತ್ತದೆ. ಮುಖ್ಯವಾಗಿ ಸೋಂಕಿಗೆ ಒಳಗಾದ ವ್ಯಕ್ತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವು ದರಿಂದ ಬರುತ್ತದೆ. ಈ ಲೈಂಗಿಕ ಕ್ರಿಯೆ ಯೋನಿ, ಗುದದ್ವಾರ ಅಥವಾ ಬಾಯಿಯ ಮೂಲಕ ಲಿಂಗಚೀಲ ಅಥವಾ ಕಾಂಡೋಮ್ ಉಪಯೋಗಿಸದೆ ಮಾಡಿರುವ ಲೈಂಗಿಕ ಕ್ರಿಯೆಯಾದರೆ ಏಡ್ಸ್ ಬರುತ್ತದೆ.

ಹೆಣ್ಣು ಮತ್ತು ಗಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಬರುವುದಲ್ಲದೆ, ಗಂಡು ಮತ್ತು ಗಂಡು ತೊಡಗುವ ಸಲಿಂಗ ಕಾಮಿಗಳಲ್ಲಿ ಬರುವ ಸಾಧ್ಯತೆ ಜಾಸ್ತಿ. ಏಡ್ಸ್ ನ ಆರಂಭದ ದಿನಗಳಲ್ಲಿ ಅಂದರೆ 1980 ಮತ್ತು 1990ರ ದಶಕದ ಆದಿ ಭಾಗದಲ್ಲಿ ಏಡ್ಸ್‌ಗೆ ಒಳಗಾಗುವವರು ಸಲಿಂಗಕಾಮಿಗಳೇ ಜಾಸ್ತಿ ಎಂದು ತಿಳಿಯ ಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸತ್ಯವಲ್ಲ, ವಿಭಿನ್ನ ಲಿಂಗದವರಲ್ಲಿ ಬರುವುದು ಜಾಸ್ತಿ ಎಂದು ಸ್ಪಷ್ಟವಾಯಿತು.

ಲೈಂಗಿಕ ಕ್ರಿಯೆ ಅಲ್ಲದೆ ಇನ್ನೂ ಹಲವು ವಿಧಗಳಲ್ಲಿ ಏಡ್ಸ್ ಬರಬಹುದು. ಎಚ್‌ಐವಿ ಸೋಂಕಿಗೆ ಒಳಗಾದ ವ್ಯಕ್ತಿಯ ಸೂಜಿ, ರೇಜರ್, ಬ್ಲೇಡ್ ಅಥವಾ ಶಸಕ್ರಿಯಾ ಉಪಕರಣಗಳನ್ನು (ಅಂತಹ ಉಪಕರಣಗಳು ಆಗಷ್ಟೇ ಹೊರಬಂದ ರಕ್ತದೊಡನೆ ಕಲುಷಿತಗೊಂಡಿದ್ದರೆ ಈ ಸಾಧ್ಯತೆ ಜಾಸ್ತಿ). ಉಪಯೋಗಿಸುವುದರಿಂದ ಬರುವ
ಸಾಧ್ಯತೆ ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ಔಷಧ ವ್ಯಸನ (Drug Addicts) ಗಳಿಗೆ ತುತ್ತಾದ ವ್ಯಕ್ತಿಗಳಲ್ಲಿ ಈ ರೀತಿಯ ಸಾಧ್ಯತೆ ಜಾಸ್ತಿ. ಈ ರೀತಿಯ ವ್ಯಸನಿ ಗಳು ಒಬ್ಬರಿಂದ ಮತ್ತೊಬ್ಬರು ಸೂಜಿ ಮತ್ತು ಸಿರಿಂಜ್ ಗಳನ್ನು ತಾವು ಉಪಯೋಗಿಸಿ ಪಕ್ಕದ ಸ್ನೇಹಿತರಿಗೆ ಅದನ್ನೇ ರವಾನಿಸುತ್ತಾರೆ.

ಕೆಲವೊಮ್ಮೆ ಪ್ರಮಾದವಶಾತ್ ಆಸ್ಪತ್ರೆಗಳಲ್ಲಿ ಅಥವಾ ವೈದ್ಯರ ಕ್ಲಿನಿಕ್‌ಗಳಲ್ಲಿ ಈ ರೀತಿಯ ಪ್ರಮಾದ ಘಟಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಎಲ್ಲ ವೈದ್ಯರೂ ಉಪಯೋಗಿಸಿ ಬಿಸಾಡುವ ಸೂಜಿ ಮತ್ತು ಸಿರಿಂಜ್‌ಗಳನ್ನು ಇಂಜೆಕ್ಷನ್ ಕೊಡಲು ಉಪಯೋಗಿಸುವುದ ರಿಂದ ಇಂತಹ ಅವಘಡ ಈ ದಿನಗಳಲ್ಲಿ ಬಹಳ ಕಡಿಮೆ. ಕೆಲವೊಮ್ಮೆ ರಕ್ತದಾನ ಮತ್ತು ರಕ್ತದ ಬ್ಯಾಂಕುಗಳಿಂದ ಈ ಕಾಯಿಲೆ ಬರಬಹುದು. ಸೋಂಕಿಗೆ ಒಳಗಾದ ವ್ಯಕ್ತಿಯ ರಕ್ತವನ್ನು ಸೂಕ್ತವಾಗಿ ಪರೀಕ್ಷೆ ಮಾಡದೆ
ಬೇರೆಯವರಿಗೆ ಕೊಟ್ಟಾಗ ಮತ್ತು ದಾನ ಮಾಡಿದ ದೇಹದ ಬೇರೆ ಬೇರೆ ಅಂಗಗಳನ್ನು ಕಸಿ ಮಾಡಿದಾಗಲೂ ಈ ಕಾಯಿಲೆ ಬರಬಹುದು.

ಎಚ್‌ಐವಿ ಕೆಲವು ರೀತಿಗಳಿಂದ ಹರಡುವುದಿಲ್ಲ. ಎಚ್‌ಐವಿ ಪೀಡಿತ ವ್ಯಕ್ತಿಯೊಡನೆ ಒಡನಾಟ ಮಾಡುವುದರಿಂದಲೇ ಹರಡುವುದಿಲ್ಲ. ಉದಾಹರಣೆಗೆ ಆತನ ಕೈ ಕುಲುಕುವುದರಿಂದ, ಆತನ ಜತೆಗೆ ಒಂದೇ ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುವುದರಿಂದ, ಅಪ್ಪಿಕೊಳ್ಳುವುದರಿಂದ – ಈ ಯಾವುದರಿಂದಲೂ ಕಾಯಿಲೆ
ಹರಡುವುದಿಲ್ಲ. ಸೊಳ್ಳೆಗಳು, ಕ್ರಿಮಿ ಕೀಟಗಳು ವೈರಸ್ ಹರಡುವುದಿಲ್ಲ. ನೀರಿನಿಂದ ಅಥವಾ ಗಾಳಿಯ ಮೂಲದಿಂದ ಈ ಕಾಯಿಲೆ ಬರುವುದಿಲ್ಲ.

ಏಡ್ಸ್ ಕಾಯಿಲೆ ಖಚಿತಪಡಿಸುವ ಹಲವು ಪರೀಕ್ಷೆಗಳು ನಿಖರವಾಗಿ ಏಡ್ಸ್ ಪತ್ತೆ ಮಾಡಬಲ್ಲವು. ಹಾಗೆಯೇ ಉತ್ತಮ ರೀತಿಯ ಆಂಟಿ ರಿಟ್ರೋ ವೈರಲ್ ಔಷಧಗಳು ಈಗ ಚಿಕಿತ್ಸೆಗೆ ಲಭ್ಯವಿವೆ.