Thursday, 12th December 2024

ಏರ್‌ ಇಂಡಿಯಾ ಮಾರಾಟ ಎಲ್ಲರ ಚಿತ್ತ ಟಾಟಾರತ್ತ !

ಅವಲೋಕನ

ರಮಾನಂದ ಶರ್ಮಾ

ಹೀಗೊಂದು ಚರ್ಚೆ ದೇಶದ ಏವಿಯೇಷನ್ ವಲಯದಲ್ಲಿ ಮತ್ತು ವಿಮಾನ ಪ್ರಯಾಣಿಕರಲ್ಲಿ ಸ್ವಲ್ಪ ಜೋರಾಗಿ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಷ್ಟ ಅನುಭವಿಸುತ್ತಿದ್ದು, ಸರಕಾರಕ್ಕೆ ಬಿಳಿಯಾನೆಯಾಗಿ ಸರಕಾರದ ಬೊಕ್ಕಸ
ವನ್ನು ಹೀರುತ್ತಿದ್ದ ಏರ್ ಇಂಡಿಯಾವನ್ನು ಮಾರಲು ಕೇಂದ್ರ ಸರಕಾರ ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದೆ.

2018ರಲ್ಲಿ ಮೊದಲು ಪ್ರಯತ್ನ ಮಾಡಿದ್ದು ಯಾರೊಬ್ಬರೂ ಖರೀದಿಗೆ ಅಸಕ್ತಿ ತೋರಿಸದಿರುವುದರಿಂದ ಈಗ ಪುನಃ ಖರೀದಿಗೆ ಬಿಡ್ ಕರೆದಿದೆ. 14.12.2020ರ ಬಿಡ್ ಸಲ್ಲಿಸಲು ಕೊನೆಯ ದಿನವಾಗಿತ್ತು. ಕೆಲವು ವಿದೇಶಿ ಕಂಪನಿಗಳು , ಏರ್ ಇಂಡಿಯಾದ 200 ಉದ್ಯೋಗಿಗಳು ಮತ್ತು ಟಾಟಾ ಸನ್ಸ್ ಸೇರಿ ಹಲವಾರು ಬಿಡ್‌ಗಳು ಬಂದಿದ್ದು, ಡಿಸೆಂಬರ್ ಅಂತ್ಯಕ್ಕೆ ಬಿಡ್ಡನ್ನು ತೆರೆಯಲಾಗು ವುದು. ಈಗ ಎಲ್ಲರ ಕಣ್ಣು ಟಾಟಾ ಸನ್ಸ್ ಮೇಲೆ ಇದ್ದು, ಏರ್ ಇಂಡಿಯಾ ಮರಳಿ ಮನೆಗೆ (ಟಾಟಾ ತೆಕ್ಕೆಗೆ) ಬರಬಹುದೇ ಎನ್ನುವ ಕಾತುರದಲ್ಲಿ ಕಾಯುತ್ತಿದ್ಧಾರೆ.

ಇದು ಬಹುಜನರ ಮುಖ್ಯವಾಗಿ ಏವಿಯೇಷನ್ ಅನುಭವಿಗಳ ಮತ್ತು ವಿಮಾನ ಪ್ರಯಾಣಿಕರ wishful thinking ಕೂಡಾ ಆಗಿರುತ್ತದೆ. ಈ ಬಿಡ್ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಏರ್
ಇಂಡಿಯಾ ಟಾಟಾ ತೆಕ್ಕೆಗೆ ಸೇರಲಿ ಎನ್ನುವಂತಿದೆ.

ಏರ್ ಇಂಡಿಯಾ ನಡೆದು ಬಂದ ದಾರಿ: 1932ರಲ್ಲಿ ದೇಶದ ಹಿರಿಯ ಮತ್ತು ಖ್ಯಾತ ಉದ್ಯಮಿ ಜೆ.ಆರ್.ಡಿ. ಟಾಟಾ ರವರು ಟಾಟಾ ಏರ್ ಲೈನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಭಾರತದಲ್ಲಿ ವಿಮಾನೋಡ್ಡಾಣಕ್ಕೆ ಶ್ರೀಕಾರ ಹಾಕಿದರು. ಅವರೇ ಸ್ವತಃ ಮುಂಬೈ – ಕರಾಚಿ ಮತ್ತು ಮುಂಬೈ – ಮದ್ರಾಸ್ (ವಾಯಾ ಬಳ್ಳಾರಿ) ಮಧ್ಯ ವಿಮಾನ ಹಾರಿಸಿ ಅಂಚೆ ಬ್ಯಾಗ್‌ಗಳ ಸಾಗಣೆ ಮಾಡಿದ್ದರು. ಈ
ಖಾಸಗಿ ಏರ್ ಲೈನ್ಸ್‌ನ್ನು 1946ರಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತಿಸ ಲಾಗಿದ್ದು, 1953ರಲ್ಲಿ ಏರ್ ಕಾರ್ಪೋ ರೇಷನ್ ಆಕ್ಟ್ ಅನ್ವಯ ಅದನ್ನು ರಾಷ್ಟ್ರೀಕರಿಸಲಾಯಿತು ಮತ್ತು ಏರ್ ಲೈನ್ಸನ್ನು ಏರ್ ಇಂಡಿಯಾ ಎಂದು ಹೆಸರಿಸ ಲಾಯಿತು.

ಹಾಗೆಯೇ ದೇಶದ ಅಂತರಿಕ ವಿಮಾನ ಸಾರಿಗೆಗೆ ಇಂಡಿಯನ್ ಏರ್ ಲೈನ್ಸ್ ಮತ್ತು ಅಂತಾರಾಷ್ಟ್ರೀಯ ಸೇವೆಗೆ ಏರ್ ಇಂಡಿಯಾ ವನ್ನು ಹುಟ್ಟು ಹಾಕಲಾಯಿತು. 1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಜೆ.ಆರ್.ಡಿ ಟಾಟಾರನ್ನು ಏರ್ ಇಂಡಿಯಾ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತು. ಇದರೊಂದಿಗೆ ಏರ್ ಇಂಡಿಯಾ ಸಂಗಡ ಅವರಿಗಿದ್ದ 24 ವರ್ಷಗಳ ಸಂಬಂಧ ಕಡಿದುಹೋಯಿತು. ಅವರು ತಮ್ಮ ಸೇವೆಗೆ ಒಂದು ರುಪಾಯಿ ಸಂಬಳವನ್ನೂ ಪಡೆದಿರಲಿಲ್ಲವಂತೆ.

ಇಂಗ್ಲೆಂಡ್‌ನ ದಿ ಟೆಲಿಗ್ರಾಫ್ ಪತ್ರಿಕೆ ಅವರ ನಿರ್ಗಮನವನ್ನು, unpaid Air India Chief removed by Desai ಎಂದು ಟೀಕಿಸಿತ್ತು.
ಮೊರಾರ್ಜಿಯವರ ಈ ನಿರ್ಣಯ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 1980ರಲ್ಲಿ ಮೂರು ವರ್ಷಗಳ ಅವಧಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಜೆ.ಆರ್.ಡಿ ಟಾಟಾರನ್ನು ಏರ್ ಇಂಡಿಯಾ ಬೊರ್ಡ್‌ಗೆ ನೇಮಿಸಿದ್ದರು. 1986 ರಲ್ಲಿ
ಜೆ.ಆರ್.ಡಿಯವರ ನಂತರ ರಾಜೀವ ಗಾಂಧಿಯವರು ರತನ್ ಟಾಟಾರನ್ನು ಏರ್ ಇಂಡಿಯಾ ಅಧ್ಯಕ್ಷರನ್ನಾಗಿ ನೇಮಿಸಿದ್ದು 1989 ರ ವರೆಗೆ ಕಾರ್ಯ ನಿರ್ವಹಿಸಿದ್ದರು.

ಸುಗಮ ನಿರ್ವಹಣೆ ಮತ್ತು ಅನವಶ್ಯಕ (unwanted expenses) ವೆಚ್ಚವನ್ನು ಕಡಿತಗೊಳಿಸಲು 2007ರಲ್ಲಿ ನ್ಯಾಯಮೂರ್ತಿ ಧರ್ಮಾಧಿಕಾರಿ ಸಮಿತಿ ವರದಿ ಅನ್ವಯ ಈ ಎರಡೂ ನಿಗಮಗಳನ್ನು ವಿಲೀನಗೊಳಿಸಿ ಏರ್ ಇಂಡಿಯಾ ಹೆಸರನ್ನು ಉಳಿಸಿಕೊಳ್ಳ ಲಾಯಿತು. ಆದರೂ ಪುನಶ್ಚೇತನ – ಮರು ಹುಟ್ಟು ಅಥವಾ ಪುರುಜ್ಜೀವನ ಪ್ರಯತ್ನ ಯಶಸ್ವಿ ಕಾಣಲಿಲ್ಲ. 2011-12ರ ವರೆಗೆ ಕೇಂದ್ರ ಸರಕಾರ 30520 ಕೋಟಿ ಇಕ್ವಿಟಿ ನೀಡಿದ್ದು, ಶೇಖರವಾಗಿರುವ ನಷ್ಟ (accumulated loss)) 69597 ಕೋಟಿ ಆದರೆ,
ಸಾಲ ಬಾಕಿ 58250 ಕೋಟಿಗಳು.

ಮಾರ್ಚ್ 2019ರಲ್ಲಿ ಸಿಬ್ಬಂದಿಗಳ ಸಂಖ್ಯೆ 28085 ಆಗಿದ್ದು, ಸಿಬ್ಬಂದಿ ವೆಚ್ಚ 3005 ಕೋಟಿಗಳು. ಇದು ಒಟ್ಟು ಆದಾಯದ ಶೇ.11.4 ಎಂದು ಹೇಳಲಾಗುತ್ತದೆ. ಸುಮಾರು 127 ವಿಮಾನಗಳಿರುವ ಏರ್ ಇಂಡಿಯಾದ ಆಸ್ತಿಯ ಮೌಲ್ಯ 52352 ಕೋಟಿ ಗಳು. ದೇಶದಲ್ಲಿ ಸುಮಾರು 26 ವಿಮಾನ ಸಾರಿಗೆ ಸಂಸ್ಥೆಗಳು ಇದ್ದರೂ 2018ರಲ್ಲಿ ಏರ್ ಇಂಡಿಯಾದ ಲೋಡ್ ಫ್ಯಾಕ್ಟರ್ ಶೇ.83.51 ಇದ್ದು ವಾರ್ಷಿಕ ಆದಾಯ 26000 ಕೋಟಿ ಇತ್ತು. ಆದರೂ ಈ ಸಂಸ್ಥೆ ನಿರಂತರ ನಷ್ಟ ಭರಿಸುವುದನ್ನು ನೋಡಿ, ತೆರಿಗೆದಾರನ ಹಣ ಪೋಲು ಆಗುವುದನ್ನು ತಪ್ಪಿಸಲು, ಇದನ್ನು ಪುನರುಜ್ಜೀವನ ಗೊಳಿಸುವ ಎಲ್ಲಾ ಕಸರತ್ತುಗಳು ಸಫಲವಾಗ ದಿರುವುದನ್ನು ನೋಡಿ ಸರಕಾರ 2012ರಲ್ಲಿಯೇ ಏರ್ ಇಂಡಿಯಾವನ್ನು ಖಾಸಗೀಕರಣ ಗೊಳಿಸಲು ಅಥವಾ ಮಾರಾಟ ಮಾಡಲು ಚಿಂತನೆ ನಡೆಸಿತ್ತು.

ಕಾರ್ಮಿಕ ಸಂಘಗಳ ತೀವ್ರ ವಿರೋಧದ ನಡುವೆ 2018ರಲ್ಲಿ ಮೊದಲ ಪ್ರಯತ್ನ ನಡೆಸಿತ್ತು. ವಿಶೇಷವೆಂದರೆ ಏರ್ ಇಂಡಿಯಾ ಖರೀದಿಗೆ ಯಾರೊಬ್ಬರೂ ಬಿಡ್ ಮಾಡಲಿಲ್ಲ. ಬಿಡ್ ಮಾಡಲು ಸರಕಾರವು ಹಲವು ಷರತ್ತುಗಳನ್ನು ಹಾಕಿದ್ದು, prospective
ಖರೀದಿದಾರರು ಬಿಡ್ ಹಾಕಲು ಹಿಂದೇಟು ಹಾಕಿದ್ದು, ಈಗ ಸರಕಾರವು ಹಲವು ಷರತ್ತುಗಳನ್ನು ಸಡಿಲಿಸಿದ್ದು ಪುನಃ ಖರೀದಿಗೆ ಬಿಡ್ ಆಹ್ವಾನಿಸಿದೆ.

ಬಿಡ್‌ನಲ್ಲಿ ಕಂಪನಿಯನ್ನು ಪಡೆದವರಿಗೆ ಅದನ್ನು ನಡೆಸುವ ನಿಟ್ಟಿನಲ್ಲಿ ಪೂರ್ಣ free hand ಇಲ್ಲ ಎನ್ನುವ ಗೊಣಗು ಇತ್ತು.
ಬಿಡ್ ಮಾಡಲು ಹಿಂಜರಿಕೆ ಏಕೆ? ವಿಮಾನ ಸಾರಿಗೆ ಉದ್ಯಮ ಮಕ್ಕಳಾಟವಲ್ಲ. ಇದು ಒಂದು ರೀತಿಯಲ್ಲಿ ಬಿಳಿ ಆನೆ ಸಾಕಿದಂತೆ. ಸದಾ ಉತ್ತರಮುಖಿಯಾಗಿಯೇ ಇರುವ ನಿರ್ವಹಣಾ ವೆಚ್ಚ ಉದ್ಯಮಶೀಲರನ್ನು ಹಿಂಜರಿಯುವಂತೆ ಮಾಡುತ್ತದೆ. ಇಂಧನಕ್ಕೆ ಶೇ.23.5 ಹೋದರೆ, ಸಿಬ್ಬಂದಿಗಳ ಸಂಬಳ ಮತ್ತು ಗ್ರೌಂಡ್ ಆಪರೇಷನ್ ಚಾರ್ಜ್ ಶೇ.30ರಷ್ಟು ಕಬಳಿಸುತ್ತದೆ. ಪೈಲಟ್‌ಗಳ
ಸಂಬಳ 135000 ಡಾಲರ್‌ವರೆಗೂ ಇದ್ದು ಇದು ಆಡಳಿತವರ್ಗವನ್ನು ಬೆದರಿಸುತ್ತದೆ.

ವಿಮಾನ ನಿಲ್ದಾಣ ಬಳಕೆ ಶುಲ್ಕ, ಸರಕಾರಕ್ಕೆ ನೀಡುವ ಫೀಜು ಮತ್ತು ಟ್ರಾವೆಲ್ ಏಜೆಂಟ್‌ಗೆ ನೀಡುವ ಕಮೀಷನ್ ಮುಂತಾದ ವೆಚ್ಚಗಳು ಅಧಾಯವನ್ನು ಸಂಪೂರ್ಣ ವಾಗಿ ಹೀರುತ್ತವೆ. ವಿಮಾನವನ್ನು ಸ್ವಂತಕ್ಕೆ ಖರೀದಿಸುವುದು ದುಬಾರಿ ಯಾಗುತ್ತಿದ್ದು , ಒಂದು ಸಣ್ಣ ಗಾತ್ರದ ಬೋಯಿಂಗ್ ಖರೀದಿಸಿದರೆ ಸುಮಾರು 50 ಮಿಲಿಯ ಕನಿಷ್ಠ break even ಕೂಡಾ ಇರದ ಮಾರ್ಗದಲ್ಲಿ ವಿಮಾನ ಹಾರಿಸುವ ರಾಜಕೀಯ ಒತ್ತಡ ಮತ್ತು ಪ್ರಯಾಣಿಕರಿಗೆ ವಿವಿಧ ರೀತಿಯ ರಿಯಾಯಿತಿ ನೀಡುವ ಅನಿವಾರ್ಯತೆ
ಹಲವರು ಹಿಂದೆ ಸರಿಯುವಂತೆ ಮಾಡಿದೆ ಎಂದು ಹೇಳಲಾಗುತ್ತದೆ.

ಟಾಟಾ ಏಕೆ ಮಂಚೂಣಿಯಲ್ಲಿ?
ಸಾಲ್ಟ್‌ನಿಂದ ಸಾಫ್ಟ್ವೇರ್ (salt to software)ವರೆಗೆ ಬಿಜಿನೆಸ್ ಹೊಂದಿರುವ, ವಾರ್ಷಿಕ 113 ಬಿಲಿಯನ್ ಡಾಲರ್ ಆದಾಯ ಇರುವ (2019-20), 750000 ಸಿಬ್ಬಂದಿಗಳಿರುವ ಟಾಟಾ ಸಮೂಹಕ್ಕೆ ವಿಮಾನಯಾನ ಹೊಸಬಿಜಿನೆಸ್ ಆಗಿರುವುದಿಲ್ಲ.
ಟಾಟಾ ಸಮೂಹ ನಾಗರಿಕ ವಿಮಾನಯಾನದಲ್ಲಿ ಅತಿ ಹಳೆಯ ಮತ್ತು ಹಿರಿಯ ಹುಲಿ. ಸ್ವತಃ ಪೈಲಟ್ ಆಗಿರುವ ಜೆ.ಆರ್.ಡಿ ಟಾಟಾ ಮತ್ತು ರತನ್ ಟಾಟಾರಿಗೆ ಈ ಉದ್ಯಮದ ಉದ್ದ – ಅಗಲ ಮತ್ತು ಆಳ ಇಂಚಿಂಚು ತಿಳಿದಿದೆ. ಒಂದು ರೀತಿಯಲ್ಲಿ ಈ
ಉದ್ಯಮ ಅವರಿಗೆ ರಕ್ತಗತವಾಗಿ ಬಂದಿದೆ.

ಈಗಾಗಲೇ ಟಾಟಾ ಸಮೂಹದ ಬಳಿ ಸಿಂಗಾಪೂರ್ ಏರ್‌ಲೈನ್ಸ್ ಪಾಲುದಾರಿಕೆಯೊಂದಿಗೆ full pledged service carrier  ವಿಸ್ತಾರ ಮತ್ತು ಮಲೇಷ್ಯಾದ ಏರ್ ಏಷ್ಯಾ ಸಮೂಹದೊಂದಿಗೆ ಏರ್ ಏಷ್ಯಾ ಇಂಡಿಯಾ ಎನ್ನುವ ಬಜೆಟ್ ಏರ್ ಲೈನ್ಸ್ ಕಾರ್ಯ
ನಿರ್ವಹಿಸುತ್ತಿವೆ. ಪಾಲುಗಾರಿಕೆ ಬಿಜಿನೆಸ್‌ಗಿಂತ ಪೂರ್ಣ ಮಾಲಿಕತ್ವದ ಬಿಜಿನೆಸ್ ನಡೆಸುವ ಇರಾದೆ ಅವರನ್ನು ಬಿಡ್ ಮಾಡಲು ಪ್ರೇರೇಪಿಸಿರ ಬಹದು.

ಇನ್ನೊಬ್ಬರ ಜತೆ ಸೇರುವ ಅನಿವಾರ್ಯತೆ ಅವರಿಗಿಲ್ಲ. ಆಕಸ್ಮಾತ್ ಬಿಡ್‌ನಲ್ಲಿ ಸಫಲರಾದರೆ ಅವರು ಒಬ್ಬರೇ ಕಂಪನಿ ನಡೆಸುವ ಶಕ್ತಿ ಮತ್ತು ಚೈತನ್ಯ ಅವರಲ್ಲಿ ಇದೆ. ಸದೃಢ ನಾಯಕತ್ವ , ಆಡಳಿತ ನಿರ್ವಹಣಾ ಕೌಶಲ್ಯ, ಹಣಕಾಸು ಶಕ್ತಿ, ಅಗತ್ಯ ಬಂಡವಾಳ ಸಂಗ್ರಹಿಸುವ ಚಾಕ್ಯತೆ, ಏರ್‌ಲೈನ್ ನಡೆಸುವ ನಿಟ್ಟಿನಲ್ಲಿ ಅಪಾರ ಅನುಭವ, ಲಿಲ್ಲಿ ವೈಟ್ ಬಿಜಿನೆಸ್ ಇಮೇಜ್, ಕಾರ್ಪೋರೇಟ್ ಶಿಸ್ತು, ಅನುಭವಿ ಮಾನವ ಸಂಪನ್ಮೂಲದ ಬೆಟಾಲಿಯನ್ ಇರುವ ಟಾಟಾ ಕಂಪನಿಗೆ ಏರ್ ಇಂಡಿಯಾ ಖರೀದಿಸುವ ಬಿಡ್‌ನಲ್ಲಿ ಬೇರೆ ಯಾರಾದರೂ ಸಾಟಿಯಾಗುವುದು ಸಂದೇಹ. ಇವುಗಳೇ ಮಾನದಂಡವಾದರೆ ಏರ್ ಇಂಡಿಯಾ ಟಾಟಾ ತೆಕ್ಕೆಗೆ
ಬೀಳುವುದು ಖಚಿತ.

ದೇಶದಲ್ಲಿ 102 ವಿಮಾನ ನಿಲ್ದಾಣಗಳಿದ್ದು ದಿನಾಲು ಸುಮಾರು 600 ವಿಮಾನಗಳು ಹಾರಾಡುತ್ತಿದ್ದು, ವಾರ್ಷಿಕ 14 ಕೋಟಿ
ಜನರು ಪ್ರಯಾಣ ಮಾಡುತ್ತಾರೆ. ಇಂಥ ಬೃಹತ್ ವ್ಯವಸ್ಥೆಯನ್ನು ನಿರ್ವಹಿಸಲು ಟಾಟಾ ಸರಿಯಾದ ಕಂಪನಿ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಸ್ವತಃ ಪೈಲಟ್ ಆಗಿರುವುದರಿಂದ ಮತ್ತು ಈ ಕಂಪನಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವುದರಿಂದ ಈ ಸಂಸ್ಥೆಯನ್ನು ನಿರ್ವಹಿಸುವುದು ಅವರಿಗೆ ಎಡಗೈ ಕೆಲಸ ಎನ್ನುವ ಪ್ರಜ್ಞಾವಂತರ ಅನಿಸಿಕೆಯಲ್ಲಿ ಅರ್ಥವಿದೆ.

ಅವರು ಏರ್ ಇಂಡಿಯಾದ 4400 ಅಂತರಿಕ ಮತ್ತು 1800 ಅಂತಾರಾಷ್ಟ್ರೀಯ landing ಮತ್ತು parking slotsನ್ನು ಮತ್ತು ವಿದೇಶದಲ್ಲಿರುವ 900 ಸ್ಲೋಟ್ಸಗಳನ್ನು ಕಣ್ಣಾರೆ ನೋಡಿರಬಹುದು ಮತ್ತು ಅನುಭವಿಸಿರಬಹುದು. ಅಕಸ್ಮಾತ್ ಬಿಡ್‌ನಲ್ಲಿ ಟಾಟಾ ಸಫಲರಾದರೆ, ಏರ್ ಇಂಡಿಯಾ ಹೆಸರನ್ನು ಉಳಿಸಿಕೊಳ್ಳುತ್ತಾರೋ ಅಥವಾ ಟಾಟಾ ಬ್ರ್ಯಾಂಡ್ ನೇಮ್‌ಗೆ ಒಲಿದು
ಟಾಟಾ ಏರ್ ಲೈನ್ಸ್ ಎನ್ನುವ ಮೂಲ ಹೆಸರಿಗೆ ಮರಳುತ್ತಾರೋ ತಿಳಿಯದು. ಆದರೆ, ವಿಮಾನ ಪ್ರಯಾಣಿಕರಿಗೆ ತಾವು ಪ್ರಯಾ ಣಿಸುವ ವಿಮಾನದ ಹಿಂದೆ ಟಾಟಾ ಇzರೆ ಎನ್ನುವುದು ಒಂದು ರೀತಿ ಸಂಚಲನ ಮೂಡಿಸುತ್ತದೆ ಎಂದು ಹಳೆಯ ತಲೆಮಾರಿ ನವರು ಅನುಭವದಿಂದ ಹೇಳುತ್ತಾರೆ.