Monday, 16th September 2024

ವಿಮಾನ ಯಾನವೋ ? (ವಿ) ಮಾನ ಹಾನಿಯೋ ?

ವಿದೇಶ ವಾಸಿ

dhyapaa@gmail.com

ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗ ದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ಇಂತಹ ಘಟನೆಗಳು ನಡೆದುಹೋಗುತ್ತವೆ. ವಿಮಾನ ದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ.

ಇದು ಸುಮಾರು ಇಪ್ಪತ್ತೈದು ವರ್ಷದ ಹಿಂದೆ ನಡೆದ ಘಟನೆ. ಸೌದಿ ಅರೇಬಿ ಯಾದಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದೆ. ಅಂದು ನನ್ನೊಂದಿಗೆ ಜತೆಗೆ ಕೆಲಸ ಮಾಡುತ್ತಿದ್ದ ಇನ್ನೂ ಐದು ಜನ ಇದ್ದರು. ನಾವೆಲ್ಲ ಸೌದಿ ಅರೇಬಿಯಾದ ದಮಾಮ್‌ನಿಂದ ಬಹ್ರೈನ್‌ಗೆ ಬಂದು ಅಲ್ಲಿಂದ ಮುಂಬೈವರೆಗೆ ವಿಮಾನ, ನಂತರ ನಮ್ಮ ನಮ್ಮ ಊರಿಗೆ ಪ್ರಯಾಣ ಮಾಡಬೇಕಿತ್ತು.

ಗಲ್ಫ್ ಏರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದರಿಂದ ಬಹ್ರೈನ್‌ಗೆ ಹೋಗುವುದು ಅನಿವಾರ್ಯವಾಗಿತ್ತು. ದಮಾಮ್‌ನಿಂದ ಮುಂಬೈಗೆ ಹೋಗಲು ಸೌದಿಯಾ ಏರ್ಲೈ (ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನ ಸಂಸ್ಥೆ) ಇದ್ದರೂ ನಾವು ಗಲ್ಫ್ ಏರ್ ಆರಿಸಿಕೊಂಡಿದ್ದೆವು. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿದ್ದವು.

ಮೊದಲನೆಯದು, ದಮಾಮ್‌ನಿಂದ ಬಹ್ರೈನ್‌ಗೆ ಕಾರಿನಲ್ಲಿ ಹೋಗಬಹು ದಾಗಿದ್ದು, ಈ ನೆಪದಲ್ಲಿ ಬಹ್ರೈನ್ ದೇಶ ನೋಡಬಹುದು ಎಂದು. ಎರಡನೆ ಯದು, ಸೌದಿಯಾ ಏರ್‌ಲೈನ್ಸ್‌ನಲ್ಲಿ ದೊರಕದ ಗುಂಡು (ಮದ್ಯ) ಗಲ್ಫ್ ಏರ್‌ನಲ್ಲಿ ಸಿಗುತ್ತದೆ ಎಂಬುದಾಗಿತ್ತು.

ಈ ಏರ್‌ಲೈನ್ ವ್ಯವಹಾರಗಳು ಕೆಲವೊಮ್ಮೆ ನಮ್ಮ ಬಸ್‌ಗಳಂತೆಯೇ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಬಸ್‌ಗಳು ತಮ್ಮ ಊರಿನ ಡಿಪೋದಲ್ಲಿ ಒಮ್ಮೆ ನಿಂತು, ತಪಾಸಣೆಗೊಳಪಟ್ಟು, ಡೀಸೆಲ್ ತುಂಬಿಸಿಕೊಂಡು, ಚಾಲಕರು ಬದಲಾಗುವ ಅವಶ್ಯಕತೆ ಇದ್ದರೆ ಬದಲಾಯಿಸಿಕೊಂಡು ಮುಂದೆ ಹೋಗುತ್ತವಲ್ಲ (ಇತ್ತೀಚೆಗೆ ಕೆಲವು ರಾಜ್ಯಗಳು ಇದಕ್ಕೆ
ಹೊರತಾದರೂ, ಕೆಲವು ರಾಜ್ಯಗಳಲ್ಲಿ ಈ ಪರಿಪಾಠ ಇಂದಿಗೂ ಮುಂದುವರಿದಿದೆ) ಹಾಗೆ. ಮೂಲ ಸ್ಥಾನದಿಂದ ಹೊರಡುವ ನೇರ ವಿಮಾನ ಬಿಟ್ಟರೆ, ಬೇರೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕೆಂದರೆ, ಮೂಲ ಸ್ಥಾನಕ್ಕೆ ಹೋಗಿಯೇ ಮುಂದುವರಿಯಬೇಕು.

ಇಂತಹ ಸಂದರ್ಭದಲ್ಲಿ ಹೆಚ್ಚಿನಾಂಶ ಬೇರೆ ವಿಮಾನದಲ್ಲಿ ಪ್ರಯಾಣ ಮುಂದುವರಿಸಬೇಕು. ಅಂದು ಬಹ್ರೈನ್‌ನಿಂದ ವಿಮಾನ ಅಕಾಶಕ್ಕೆ ಹಾರಿ ಒಂದು ಗಂಟೆಗಿಂತಲೂ ಸ್ವಲ್ಪ ಹೆಚ್ಚೇ ಆಗಿತ್ತು. ನನಗಿಂತ ಮೂರೋ ನಾಲ್ಕೋ ಸಾಲು ಹಿಂದೆ ಕುಳಿತವ ನೊಬ್ಬ ಇದ್ದಕ್ಕಿದ್ದಂತೆ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ. ನೋಡ ನೋಡುತ್ತಿದ್ದಂತೆ ಆತನ ಧ್ವನಿ ತಾರಕಕ್ಕೆ ಏರಿತ್ತು. ಎಲ್ಲರಿಗೂ ಕೇಳುವಂತೆ ಗಲ್ಫ್ ಏರ್ ಸಂಸ್ಥೆ, ಗಗನಸಖಿಯರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಅದು ಗಗನ ಸಖಿಯರಿಗಷ್ಟೇಅಲ್ಲ, ಉಳಿದ ಪ್ರಯಾಣಿಕರಿಗೂ ಕಿರಿಕಿರಿಯಾಗತೊಡಗಿತು.

ಗಗನಸಖಿಯೊಬ್ಬಳು ನನ್ನ ಬಳಿ ಬಂದಾಗ ಆತನ ಕಿರುಚುವಿಕೆಗೆ ಕಾರಣ ಏನೆಂದು ಕೇಳಿದೆ. ‘ಆತ ಈಗಾಗಲೇ ನಾವು ಉಚಿತವಾಗಿ ಕೊಡುವ ಎರಡು ಪೆಗ್ ಮುಗಿಸಿ, ಮೇಲಿಂದ ಎರಡು ಪೆಗ್ ಹಣಕೊಟ್ಟು ಕೊಂಡು, ಒಟ್ಟೂ ನಾಲ್ಕು ಸುತ್ತು
ಮುಗಿಸಿದ್ದಾನೆ, ಇನ್ನೂ ಬೇಕೆಂದು ಕೇಳುತ್ತಿದ್ದಾನೆ. ನಾವು ಕೊಡುವುದಿಲ್ಲ ಎಂದಿದ್ದಕ್ಕೆ ಈ ರಂಪಾಟ’ ಎಂದಳು. ಮನಸ್ಸಿನಲ್ಲಿಯೇ ‘ಇದ್ದಿದ್ದರಲ್ಲಿ ಈತ ವಾಸಿ, ದುಡ್ಡುಕೊಟ್ಟು ಖರೀದಿಸಿದ್ದಾನೆ, ಬದಿಗೆ ಕುಳಿತವರಲ್ಲಿ ಕೇಳಲಿಲ್ಲ’ ಅಂದುಕೊಂಡೆ (ಏಕೆ ಎಂದು ನಂತರ ಹೇಳುತ್ತೇನೆ). ‘ಹಣ ಕೊಟ್ಟು ಕುಡಿಯುವುದಾದರೆ ಕೊಡಬಹುದಲ್ಲ, ನಿಮಗೇನು ತೊಂದರೆ?’ ಎಂದೆ.

‘ಆತ ತನ್ನ ವಿವರದಲ್ಲಿ ಸಕ್ಕರೆ ಕಾಯಿಲೆ ಇದೆಯೆಂದೂ, ಡಯಾಬೆಟಿಕ್ ತಿನಿಸು ನೀಡಬೇಕೆಂದೂ ಕೇಳಿಕೊಂಡಿದ್ದಾನೆ.
ಅಲ್ಲದೆ, ವಿಮಾನದ ಒಳಗೆ ಬರುವುದಕ್ಕಿಂತ ಮೊದಲೇ ಮದ್ಯಪಾನ ಮಾಡಿ ಬಂದಿದ್ದಾನೆ ಎಂಬ ಅನುಮಾನವಿದೆ. ಏನಾದರೂ ಹೆಚ್ಚು ಕಮ್ಮಿ ಆದರೆ ನಾವು ಜವಾಬುದಾರರಾಗುತ್ತೇವೆ, ಆದ್ದರಿಂದ ಇನ್ನೂ ಹೆಚ್ಚು ನೀಡಲು ಸಾಧ್ಯವಿಲ್ಲ, ಇದನ್ನು ಹೇಳಿದರೆ ಆತ ಕೇಳುತ್ತಿಲ್ಲ, ಏನು ಮಾಡೋಣ?’ ಎಂದು ಮುಂದೆ ನಡೆದಳು.

ನನಗೆ ಪರಿಸ್ಥಿತಿ ಅರ್ಥವಾಗಿತ್ತು. ನನ್ನ ಜತೆಗೆ ಇನ್ನೂ ಐದು ಜನ ಇದ್ದ ಧೈರ್ಯ ಬೇರೆ ಇತ್ತಲ್ಲ, ಎದ್ದು ನಿಂತುಅವನೆಡೆಗೆ ತಿರುಗಿ, ‘ನಮಗೆಲ್ಲ ಬಹಳ ಕಿರಿಕಿರಿಯಾಗುತ್ತಿದೆ, ಬಾಯಿ ಮುಚ್ಚಿ ಸುಮ್ಮನೆ ಕುಳಿತುಕೊಳ್ಳದಿದ್ದರೆ ನಿನ್ನನ್ನು ವಿಮಾನದಿಂದ ಕೆಳಗೆ
ಎಸೆಯುತ್ತೇವೆ’ ಎಂದು ಏರಿದ ದನಿಯಲ್ಲಿಯೇ ಹೇಳಿದೆ. ಮುಂಬೈ ಬರುವವರೆಗೂ ಆಸಾಮಿ ಗಪ್ಚುಪ್!

ಅದಾಗಿ ಮೂರು-ನಾಲ್ಕು ವರ್ಷವಾಗಿರಬೇಕು, ಎಮರೈಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನನ್ನ ಪಕ್ಕದಲ್ಲಿ ಒಬ್ಬ ಬಂದು ಕುಳಿತ. ಆಗಲೇ ಮದ್ಯೋನ್ಮತ್ತನಾಗಿದ್ದುದರಿಂದ, ಕುಳಿತವನೇ ನಿದ್ರಿಸಲು ಆರಂಭಿಸಿದ. ಅರ್ಧಗಂಟೆಯ ನಂತರ ವಿಮಾನ ಹೊರಡಲು ಸಿದ್ಧವಾಯಿತು. ಆ ಕ್ಷಣಕ್ಕೆ ಸರಿಯಾಗಿ ನನ್ನ ಪಕ್ಕದಲ್ಲಿದ್ದವನಿಗೆ ಎಚ್ಚರವಾಯಿತು. ಆತ ಕಣ್ಣು ಬಿಡುವಾಗ ವಿಮಾನ ನೋಸ್ -ಇನ್ ಪಾರ್ಕಿಂಗ್ (ವಿಮಾನ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವ ಸ್ಥಳ) ನಿಂದ ರನ್ವೇಗೆ ಹೋಗುವುದಕ್ಕಾಗಿ ಹಿಂದೆ ಚಲಿಸಲು (ಪುಶ್ಬ್ಯಾಕ್) ಆರಂಭಿಸಿತು. ಕೂಡಲೇ ನನ್ನ ಪಕ್ಕದಲ್ಲಿದ್ದವ ಎದ್ದು ನಿಂತು ‘ವಿಮಾನ ಹಿಂದಕ್ಕೆ ಹೋಗುತ್ತಿದೆ, ಪೈಲಟ್‌ಗೆ ಹೇಳಿ, ಯಾರಾದರೂ ನಿಲ್ಲಿಸಿ’ ಎದು ಕೂಗಾಡಲು ಆರಂಭಿಸಿದ.

ಗಗನಸಖಿಯರು ಅವನ ಬಳಿ ಬಂದು ಅವನಿಗೆ ಸಾಂತ್ವನ ಹೇಳಿ ವಿವರಿಸಿದ ನಂತರವೇ ಆತ ಶಾಂತನಾಗಿದ್ದ. ಅದಕ್ಕಿಂತ
ಮೊದಲು ಗಾಬರಿಗೊಂಡ ಆತ ಐದು-ಆರು ಸಲ ಕೂಗಿ ಆಗಿತ್ತು. ಅದರಿಂದಾಗಿ ವಿಮಾನದಲ್ಲಿ ಉಚಿತವಾಗಿ ಸಿಗಬೇಕಾಗಿದ್ದ ಮದ್ಯವನ್ನು ಕಳೆದುಕೊಂಡಿದ್ದ. ಆತನೇನೂ ಬಹಳ ತಲೆಕೆಡಿಸಿಕೊಳ್ಳಲಿಲ್ಲ, ಐದೇ ನಿಮಿಷದಲ್ಲಿ ಪುನಃ ನಿದ್ರೆಗೆ ಜಾರಿದ್ದ. ಅದು ಆತನ ಮೊದಲ ವಿಮಾನ ಪ್ರಯಾಣವಾಗಿತ್ತು ಎಂದು ನಂತರ ತಿಳಿಯಿತು.

ಮೊದಲೆಲ್ಲ ಒಂದು ವರ್ಗದ ಜನ ಸಿಗುತ್ತಿದ್ದರು. ಬಂದು ಕುಳಿತುಕೊಳ್ಳುತ್ತಿದ್ದಂತೆ ಪರಿಚಯ ಮಾಡಿಕೊಂಡು, ‘ನೀವು ಕುಡಿಯುತ್ತೀರಾ?’ ಎಂದು ಕೇಳುತ್ತಿದ್ದರು. ಇಲ್ಲ ಎಂದರೆ ಸಾಕು, ‘ನಿಮಗೆ ಉಚಿತವಾಗಿ ಸಿಗುವುದನ್ನು ಪಡೆದು ನನಗೆ
ಕೊಡಿ’ ಎಂದು ಕೇಳುತ್ತಿದ್ದರು. ಹಾಗೆ ಕೇಳಿದವರಿಗೆಲ್ಲ ನಾನು ಕೊಟ್ಟಿದ್ದೂ ಇದೆ. ಒಂದೆರಡು ಬಾರಿ ಹೆಂಡತಿಯ ಜತೆ
ಪ್ರಯಾಣಿಸುವಾಗ ಆಕೆಯ ಪಾಲಿನದ್ದನ್ನೂ ಕೇಳಿ ಪಡೆದವರಿದ್ದಾರೆ.

ತ್ರಾಸು ಯಾವಾಗ ಎಂದರೆ, ಅವರು ಕಿಡಕಿಯಬಳಿ ಕುಳಿತಿದ್ದು, ನಾವು ಪಕ್ಕದಲ್ಲಿದ್ದರೆ. ಅವರು ಮೂತ್ರ ವಿಸರ್ಜನೆಗೆ
ಹೋಗುವಾಗಲೆಲ್ಲ ನಾವೂ ಏಳಬೇಕು. ಆ ಕಾರಣಕ್ಕಾದರೂ ‘ವಿಂಡೋ ಸೀಟ್’ ಪಡೆಯುವುದು ಅನಿವಾರ್ಯವಾಗಿತ್ತು! ನಂತರದ ದಿನಗಳಲ್ಲಿ ನಾನು ಕುಡಿಯುವುದೂ ಇಲ್ಲ, ಕೊಡುವುದೂ ಇಲ್ಲ ಎಂದು ಖಡಾಖಡಿ ಹೇಳುತ್ತಿದ್ದೆ. ಈಗ ಊಟದ ಜತೆಗೇ ಪಾನೀಯವನ್ನೂ ಕೊಡುವುದರಿಂದ, ಮದ್ಯದ ಬದಲಿಗೆ ಟೀ-ಕಾಫಿ ಅಥವಾ ಹಣ್ಣಿನ ರಸವನ್ನು ಆಯ್ದುಕೊಳ್ಳುವ ಅವಕಾಶವೂ ಇರುವುದರಿಂದ ಆ ಪ್ರಮೇಯ ಎದುರಾಗುತ್ತಿಲ್ಲ.

ಈ ಹಳೆಯ ವಿಷಯಗಳೆಲ್ಲ ಈಗ ನೆನಪಾಗುವ್ದಕ್ಕೆ ಕಾರಣ ಏನೆಂದು ಕೇಳಿ. ಈ ಮೊದಲು ಹೇಳಿದ ಘಟನೆಗಳನ್ನೆಲ್ಲ ಸಹಿಸಿ ಕೊಳ್ಳಬಹುದು. ಕೆಲವೊಮ್ಮೆ ಅರಗಿಸಿಕೊಳ್ಳಲಾಗದ ಘಟನೆಗಳು ವಿಮಾನದಲ್ಲಿ ಘಟಿಸುತ್ತವೆ. ಇತ್ತೀಚೆಗೆ ಏರ್ ಇಂಡಿಯಾದಲ್ಲಿ
ನಡೆದ ಒಂದು ಘಟನೆ ದೇಶದಾದ್ಯಂತ ಸುದ್ದಿ ಮಾಡುತ್ತಿದೆ. ಘಟನೆ ನಡೆದದ್ದು ನವೆಂಬರ್ ತಿಂಗಳಿನದರೂ, ಅದು ಈಗ
ಸುದ್ದಿಯಾಗುತ್ತಿದೆ.

ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ, ಅದೂ ಬಿಜಿನೆಸ್ ಕ್ಲಾಸ್ (ವ್ಯಾಪಾರ ದರ್ಜೆ) ನಲ್ಲಿ. ಆದರೆ ಆತ ಮಾಡಿದ ಕೆಲಸ ಮಾತ್ರ ಥರ್ಡ್ ಕ್ಲಾಸ್‌ನದ್ದು. ಎಪ್ಪತ್ತನಾಲ್ಕು ವರ್ಷದ ವೃದ್ಧೆಯ ಮೈಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದ.

ಅಂದಿನ ಮಟ್ಟಿಗೆ ಆತ ‘ಪೀ’-ಮ್ಯಾನ್ ಆಗಿದ್ದ. ಇದನ್ನು ನೀವು ಹಿಂದಿ ಭಾಷೆಯ ಪೀ (ಕುಡಿಯುವುದು) ಎಂದಾದರೂ ತಿಳಿಯಿಯಿರಿ ಅಥವಾ ಇಂಗ್ಲೀಷ್ ಭಾಷೆಯ ಪೀ (ಮೂತ್ರ ವಿಸರ್ಜನೆ) ಎಂದಾದರೂ ತಿಳಿಯಿರಿ, ಅದು ನಿಮಗೆ ಬಿಟ್ಟಿದ್ದು. ಆತ ಮಾಡಿದ ‘ದ್ರವ’ ಕಾರ್ಯದಿಂದ ವೃದ್ಧೆಯ ಬಟ್ಟೆ, ಪಾದರಕ್ಷೆ, ಸಣ್ಣ ಚೀಲ ಎಲ್ಲವೂ ಮೂತ್ರಮಯವಾಗಿತ್ತು. ಅಷ್ಟೇ ಅಲ್ಲ, ಇಡೀ ಬಿಜಿನೆಸ್ ಕ್ಲಾಸ್ ಮೂತ್ರದ ವಾಸನೆಯಿಂದ ತುಂಬಿಹೋಗಿತ್ತು.

ವೃದ್ಧೆ ವಿಮಾನದಲ್ಲಿರುವ ಕರ್ಮಚಾರಿಗಳ ಬಳಿ ಬದಲಿ ಆಸನ ಕೊಡುವಂತೆ ಕೇಳಿಕೊಂಡಳು. ಪ್ರಥಮ ದರ್ಜೆ ಯಲ್ಲಿ (- ಕ್ಲಾಸ್) ಆಸನಗಳು ಖಾಲಿ ಇದ್ದರೂ ಅಲ್ಲಿ ಪೈಲಟ್ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂಬ ಕಾರಣ ನೀಡಿ, ಆಕೆ ಕುಳಿತಿದ್ದ ಆಸನದ ಮೇಲೆಯೇ ಕಂಬಳಿ ಹಾಸಿ ಆಕೆಯನ್ನು ಕೂರಿಸಲಾಯಿತು. ಸಾಲದು ಎಂಬಂತೆ, ಸಹ ಪ್ರಯಾಣಿಕರು ಲಿಖಿತ ದೂರು ನೀಡಿದರೂ ಮೂತ್ರ ವಿಸರ್ಜಿಸಿದವನನ್ನು ವಿಚಾರಣೆಗೆ ಒಳಪಡಿಸದೇ ಬಿಟ್ಟು ಕಳುಹಿಸಲಾಯಿತು.

ಪ್ರಕರಣ ದೊಡ್ಡದಾಗಿ ದೆಹಲಿ ಪೋಲೀಸರು ಆತನನ್ನು ಹುಡುಕಲು ಆರಂಭಿಸಿ, ಮೊನ್ನೆ ಬೆಂಗಳೂರಿನಲ್ಲಿ ಆತನನ್ನು
ಬಂಽಸಲಾಯಿತು. ಆತನನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಆತ ಕೆಲಸ ಮಾಡುತ್ತಿದ್ದ ಸಂಸ್ಥೆ ಹೇಳಿತು. ಇದಿಷ್ಟು ವಿಷಯ. ಇನ್ನು ಮುಂದೆ ತನಿಖೆ, ಕೋರ್ಟು, ಕಚೇರಿ ಇದ್ದದ್ದೇ. ಅದು ಯಾವರೀತಿ ಮುಂದುವರಿಯುತ್ತದೆ, ಎಷ್ಟು ದಿನ
ಮುಂದುವರಿಯುತ್ತದೆ ಎಂಬುದೆಲ್ಲ ಇಲ್ಲಿ ಬೇಡ. ಹಾಗಂತ ಈ ರೀತಿಯ ಘಟನೆ ಇದೇ ಮೊದಲಲ್ಲ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬ್ರಿಟಿಷ್ ಏರ್ ವೇಯ್ಸ್‌ನಲ್ಲಿ ವ್ಯಕ್ತಿಯೊಬ್ಬ ವಿಮಾನದ ತುಂಬೆಲ್ಲ ಮಲವಿಸರ್ಜನೆ ಮಾಡಿಕೊಂಡು ಓಡಾಡಿದ್ದ ಎನ್ನುವುದನ್ನೂ ನೆನಪಿಸಿಕೊಳ್ಳಬಹುದು. ಇಂತಹ ಕೆಲವು ತೀರಾ ಅತಿರೇಕವಲ್ಲದ ಘಟನೆಗಳನ್ನು ನಾನು ವಿಮಾನ ಪ್ರಯಾಣದಲ್ಲಿ ಕಂಡಿದ್ದೇನೆ. ಕೆಲವು ವಿಮಾನದ ಸಿಬ್ಬಂದಿಗಳೊಂದಿಗೆ ಮಾತನಾಡಿ, ಅವರ ಅನುಭವ ಕೇಳಿದ್ದೇನೆ. ಅವರ ಪ್ರಕಾರ, ಇಂತಹ ಘಟನೆಗಳು ಪ್ರತಿನಿತ್ಯ ನಡೆಯುವಂಥದ್ದಲ್ಲ.

ಎಲ್ಲಾ ಅಪರೂಪಕ್ಕೊಮ್ಮೆ ಈ ರೀತಿಯ ಘಟನೆಗಳು ನಡೆದಾಗ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನೂ ಅವರಿಗೆ
ತಿಳಿಸಿಕೊಡಲಾಗಿರುತ್ತದೆ. ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ಇಂತಹ ಘಟನೆಗಳು
ನಡೆದುಹೋಗುತ್ತವೆ. ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ.

ಹಾಗೇನಾದರೂ ಇದ್ದಿದ್ದರೆ ಅದನ್ನು ವಿಮಾನದಲ್ಲಿ ಪೂರೈಸುತ್ತಲೂ ಇರಲಿಲ್ಲ, ಅಥವಾ ಅಂಥವರನ್ನು ಒಳಗೆ ಬಿಟ್ಟುಕೊಳ್ಳು ತ್ತಲೂ ಇರಲಿಲ್ಲ. ಆದರೆ ಏರ್ ಇಂಡಿಯಾ ವಿ ( ಪಿ ) ಮಾನದ ಘಟನೆಯಲ್ಲಿ ಪೀ-ಮ್ಯಾನ್ ಎಷ್ಟು ತಪ್ಪಿತಸ್ಥನೋ, ಅಷ್ಟೇ ತಪ್ಪು ಕರ್ಮಚಾರಿಗಳದ್ದೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅಂದಿನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ಏರ್ ಇಂಡಿಯಾ ವಿಫಲವಾಗಿದೆ. ಮೊದಲೇ ಏರ್ ಇಂಡಿಯಾ ವಿಮಾನ ಎಂದರೆ ಅಷ್ಟಕ್ಕಷ್ಟೇ ಎನ್ನುವ ಅಭಿಪ್ರಾಯ ಇರುವಾಗ, ಇಂತಹ ಘಟನೆಗಳಿಂದ ಸಂಸ್ಥೆಯ ಹೆಸರು ಇನ್ನಷ್ಟು ಕುಲಗೆಡುವುದರಲ್ಲಿ
ಯಾವ ಅನುಮಾನವೂ ಇಲ್ಲ. ಕೊನೆಯದಾಗಿ, ಯಾವ ಕಾರಣಕ್ಕೂ ಪ್ರಯಾಣಿಕ ತನ್ನ ಜವಾಬ್ದಾರಿಯನ್ನು ಮರೆಯಬಾರದು. ಅಸಭ್ಯವಾಗಿ ವರ್ತಿಸಬಾರದು.

ಅದರಲ್ಲೂ ಆಕಾಶದಲ್ಲಿದಲ್ಲಿ ಇಂತಹ ಘಟನೆ ನಡೆದರೆ ವಿಮಾನ ಯಾನದಲ್ಲಿ ಮಾನ ಹಾನಿಯಾಗುವುದಕ್ಕೆ ಎಷ್ಟು ಹೊತ್ತೂ ಬೇಡ. ಅದು ರಾಷ್ಟ್ರೀಯ, ಕೆಲವೊಮ್ಮೆ ಅಂತಾರಾಷ್ಟ್ರೀಯ ಸುದ್ದಿಯೂ ಆಗುತ್ತದೆ. ಇದು ವಿಮಾನ ಪ್ರಯಾಣಕ್ಕೆ ಮಾತ್ರ
ಸೀಮಿತವಲ್ಲ. ಯಾವ ಪ್ರಯಾಣವಾದರೂ ಸರಿ, ಸುರಕ್ಷತೆಯ ಜತೆ ಪ್ರಯಾಣ ಸುಖಕರವೂ ಆಗಿರಬೇಕು. ಪ್ರಯಾಣದಲ್ಲಿ ನಮ್ಮ ಸುರಕ್ಷತೆ ವಾಹನ ನಡೆಸುವವನ ಕೈಯಲ್ಲಿದ್ದರೆ, ನಮ್ಮ ಸುಖ ಸಹಪ್ರಯಾಣಿಕರನ್ನು ಅವಲಂಬಿಸಿರುತ್ತದೆ.