Sunday, 24th November 2024

ಸಂಪಾದಕನಿಗೆ ’ಅಜಾತಶತ್ರು’ ವೆಂಬುದು ಹೊಗಳಿಕೆಯಲ್ಲ, ಶಾಪ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇಂಥವರು ಹೆಚ್ಚೆಂದರೆ, ಒಂಟಿಕೊಪ್ಪಲು, ಬಗ್ಗೋಣ ಪಂಚಾಂಗ, ‘ಚಂದಮಾಮ’, ‘ವನಿತಾ’ ಮತ್ತು ‘ರಾಗಸಂಗಮ’ದ ಸಂಪಾದಕರಾಗಬಹುದು. ದೈನಿಕದ ಸಂಪಾದಕರಾಗಲು ಲಾಯಕ್ಕು. ಪಂಚಾಂಗದ ಸಂಪಾದಕರಾದರೆ ಯಾರನ್ನೂ ಟೀಕಿಸಬೇಕಿಲ್ಲ. ಒಂದು ವೇಳೆ ಸೂರ್ಯ-ಚಂದ್ರನನ್ನು ಟೀಕಿಸಿದರೆ, ಅವರೇನು ಸಂಪಾದಕನ ವಿರುದ್ಧ ಕೇಸು ಹಾಕುವುದಿಲ್ಲ.

‘ಅಜಾತಶತ್ರು‘ ಎಂಬುದು ಒಂದು ಸುಂದರ ಪದ. ಹುಟ್ಟಿದಂದಿನಿಂದ ಎಲ್ಲರೊಂದಿಗೆ ಸ್ನೇಹಮಯಿಯಾಗಿರು ವವನನ್ನು, ಯಾರ ಜತೆಯೂ ಶತ್ರುತ್ವ ಅಥವಾ ವೈರತ್ವ ಇಲ್ಲದ ವ್ಯಕ್ತಿಯನ್ನು ಅಜಾತಶತ್ರು ಎಂದು ಬಣ್ಣಿಸುತ್ತಾರೆ. ಹಾಗೆಂದು ಕರೆಯಿಸಿಕೊಳ್ಳುವುದು ಕಷ್ಟ. ಕಾರಣ ಆತ ಎರಡೂ ಪರಸ್ಪರ ವಿರುದ್ಧ ಸಿದ್ಧಾಂತಗಳ ಬಣಗಳಿಗೂ ಆಪ್ತನಾಗಿರುತ್ತಾನೆ. ಆತ ಹುಟ್ಟಿದಂದಿನಿಂದ ಈ ಗುಣವನ್ನು ಬೆಳೆಸಿಕೊಂಡಿರಬೇಕು.

ಏಕಾಏಕಿ ಎಲ್ಲರಿಗೂ ಮಿತ್ರನಾದವನಿಗೆ ‘ಅಜಾತಶತ್ರು’ ಎಂದು ಹೇಳುವುದಿಲ್ಲ. ಆದ್ದರಿಂದ ಈ ಗುಣ ಜನ್ಮಜಾತ ವಾದುದು. ಅಂದಿನಿಂದ ಈ ಕ್ಷಣದವರೆಗೂ ಆ ಗುಣವನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಹೀಗಾಗಿ ಈ ದವನ್ನು ಎಲ್ಲರಿಗೂ ಬಳಸುವುದಿಲ್ಲ. ಪುರಾಣದಲ್ಲಿ ಜನಕ ಮಹಾರಾಜನಿಗೆ ಈ ಪದವನ್ನು ಬಳಸುತ್ತಿದ್ದರಂತೆ. ನಮ್ಮ ರಾಷ್ಟ್ರರಾಜಕಾರಣದ ಸಂದರ್ಭದಲ್ಲಿ, ‘ಅಜಾತ ಶತ್ರು’ ಎಂಬ ಪದವನ್ನು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಳಸಬ ಹುದು. ಅವರ ಹೊರತಾಗಿ, ಬೇರೆಯವರಿಗೆ ಬಳಸೋಣ ಅಂದ್ರೆ ಅಂಥ ವ್ಯಕ್ತಿಗಳು ಸಿಗುವುದಿಲ್ಲ. ದಿವಂಗತ ಪ್ರಧಾನಿ ಪಿ.ವಿ.ನರಸಿಂಹರಾಯರಿಗೆ ಈ ಪದವನ್ನು ಬಳಸಬಹುದಿತ್ತು. ರಾಯರಿಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದರು.

ವಾಯಪೇಯಿ ಮತ್ತು ನರಸಿಂಹರಾಯರ ಪೈಕಿ ಒಬ್ಬರಿಗೆ ಮಾತ್ರ, ಏಕಕಾಲದಲ್ಲಿ ಅಜಾತಶತ್ರು ಪದವನ್ನು ಬಳಸಿ ಅಂದ್ರೆ, ಆಗ ಆ ಪದ ಹೆಚ್ಚು ಸೂಕ್ತವಾಗು ತ್ತಿದ್ದುದು ವಾಜಪೇಯಿ ಅವರಿಗೇ. ಈ ಕಾರಣದಿಂದಲೇ, ನಾನು ವಾಜಪೇಯಿ ಕುರಿತು ಸುಮಾರು ಆರು ನೂರು ಪುಟಗಳ ಜೀವನ ಕಥೆ ಬರೆದಾಗ, ಹೆಸರಿ ಗಾಗಿ ಬಹಳ ಯೋಚಿಸಿ, ಕೊನೆಗೆ ‘ಅಜಾತಶತ್ರು’ ಎಂದು ಕರೆದಾಗ, ಅದಕ್ಕೆ ಬೆನ್ನುಡಿ ಬರೆದುಕೊಟ್ಟ ‘ಕನ್ನಡಪ್ರಭ’ದ ಅಂದಿನ ಸಂಪಾದಕರಾಗಿದ್ದ ವೈಎನ್ಕೆಯವರು, ಈ ಪದವನ್ನು ಮತ್ತೊಮ್ಮೆ ಯಾವ ಪುಸ್ತಕದ ಶೀರ್ಷಿಕೆಗೂ ಬಳಸಬೇಡಿ ಎಂದು ಮಾರ್ಮಿಕವಾಗಿ ಹೇಳಿದ್ದರು.

ಅಜಾತಶತ್ರುವಾಗಿ ಇರುವುದು ಕಷ್ಟವಾಗಿದ್ದರಿಂದ, ಆ ಪದವನ್ನು ಎಲ್ಲರ ವಿಷಯದಲ್ಲೂ ಬಳಸಲಾಗುವುದಿಲ್ಲ. ವಾಜಪೇಯಿ ಆ ಪದಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಯಾಗಿದ್ದರು. ಅವರ ರಾಜಕೀಯ ನಿಲುವುಗಳನ್ನು ವಿರೋಧಿಸುವವರೂ ಅವರನ್ನು ಇಷ್ಟಪಡುತ್ತಿದ್ದರು. ಬಿಜೆಪಿಗೆ ವಿರುದ್ಧವಾದ ಕಮ್ಯುನಿಷ್ಟ್ ಸಿದ್ಧಾಂತವನ್ನು ನಂಬಿದವರು ಸಹ ವಾಜಪೇಯಿ ಸ್ನೇಹವನ್ನು ಬಯಸುತ್ತಿದ್ದರು. ಕಮ್ಯುನಿಷ್ಟರು ಮತ್ತು ಕಾಂಗ್ರೆಸಿಗರು ಅವರನ್ನು ಮನಸಾರೆ ಇಷ್ಟಪಡುತ್ತಾ Right man in the
wrong party ಎಂದು ಹೇಳುತ್ತಿದ್ದರು.

ವಾಜಪೇಯಿ ನಿಧನರಾದಾಗ, ಕಮ್ಯುನಿಷ್ಟ್ ಪಕ್ಷದ ನಾಯಕ ಪ್ರಕಾಶ್ ಕಾರಟ, ‘ಇನ್ನು ಮುಂದೆ ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತ್ರು ಎಂಬ ಪದವನ್ನು ಯಾರಿಗೆ ಬಳಸುವುದು?’ ಎಂದು ಕೇಳಿದ್ದರು. ವಾಜಪೇಯಿ ನಂತರ ಆ ಪದವನ್ನು ಅಲಂಕರಿಸುವ ಮತ್ತೊಬ್ಬ ನಾಯಕ ಸಿಕ್ಕಿಲ್ಲ. ಸದ್ಯೋಭವಿಷ್ಯದಲ್ಲಿ ಆ ಪದವನ್ನು
ರಾಜಕಾರಣಿಗಳಷ್ಟೇ ಅಲ್ಲ, ಬೇರೆಯವರಿಗೂ ಪ್ರಯೋಗಿಸುವುದು ಕಷ್ಟ. ಅಂಥ ವ್ಯಕ್ತಿಗಳು ಸಿಗುವುದು ವಿರಳವೇ. ಸಭೆ-ಸಮಾರಂಭಗಳಲ್ಲಿ, ಪರಿಚಯ ಮಾಡಿ ಕೊಡುವಾಗ, ಸ್ನೇಹಪರ ವ್ಯಕ್ತಿಗಳನ್ನು ಅಭಿಮಾನದಿಂದ ‘ಅಜಾತಶತ್ರು’ ಎಂಬ ಪದದಿಂದ ಕರೆಯುವುದು, ಸಂಬೋಧಿಸುವುದು ಸಾಮಾನ್ಯ.

‘ಪದಾರ್ಥ ಚಿಂತಾಮಣಿ’ ಖ್ಯಾತಿಯ ಪತ್ರಕರ್ತ ಪಾವೆಂ ಆಚಾರ್ಯರು ಹೇಳಿದ್ದು ನೆನಪಾಗುತ್ತಿದೆ- ‘ಅಜಾತ ಶತ್ರು’ ಎಂಬ ಪದವನ್ನು ಕೇಳಿದಾಗ, ಅಕ್ಷರಶಃ ಅರ್ಥ ವನ್ನು ಸ್ವೀಕರಿಸಬಾರದು, ಅತ್ಯಂತ ಸ್ನೇಹಮಯಿ ವ್ಯಕ್ತಿಗಳಿಗೆ ತಪ್ಪಾಗಿ ಅಜಾತಶತ್ರು ಎಂದು ಬಳಸುವುದು ರೂಢಿಯಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅಜಾತಶತ್ರು ಪದವನ್ನು ಬಳಸುವ ವರಿಗೆ ಆ ಪದದ ಸರಿಯಾದ ಅರ್ಥ ಗೊತ್ತಿರುವುದಿಲ್ಲ. ಎಲ್ಲರಿಗೂ ಎಗ್ಗಿಲ್ಲದೇ ಆ ಪದವನ್ನು ಬಳಸುತ್ತಾರೆ.’ ಇಲ್ಲಿ ಆ ಪದದ ಅರ್ಥ ಗೊತ್ತಿದೆಯೋ, ಇಲ್ಲವೋ ಎಂಬುದಕ್ಕಿಂತ ಆಶಯವಷ್ಟೇ ಮುಖ್ಯ ಎಂಬು ದನ್ನು ಪರಿಗಣಿಸಬಹುದು.

ಸ್ನೇಹಪರತಾ ಭಾವನೆಯೂ ಅಜಾತಶತ್ರು ಎಂದು ಕರೆಯಿಸಿಕೊಳ್ಳಲು ಅವಶ್ಯಕ. ಆದರೆ ಸ್ನೇಹಪರ ಭಾವವಿರುವ ವರೆಲ್ಲ ಅಜಾತಶತ್ರುಗಳಾಗುವುದು ಸಾಧ್ಯವಿಲ್ಲ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ, ನಿರೂಪಕಿಯೊಬ್ಬರು ನನ್ನನ್ನು ಸಹ ‘ಅಜಾತಶತ್ರು’ ಎಂದು ಸಂಬೋಧಿಸಿದರು. ವೇದಿಕೆಯಲ್ಲಿದ್ದ ಐವರ ಪೈಕಿ ಮೂವರಿಗೂ ಆ ಪದವನ್ನು ಪ್ರಯೋಗಿಸಿದರು. ಒಂದು ಸಲ ಆಗಿದ್ದರೆ, ನಿರ್ಲಕ್ಷಿಸುತ್ತಿದ್ದೆ.

ಆದರೆ ಎರಡು-ಮೂರು ಸಲ ಆ ಪದವನ್ನು ಬಳಸಿದರು. ಯಾಕೋ ನನಗೆ ಆ ಸಂಬೋಧನೆ ಅತೀವ ಕಿರಿಕಿರಿಯೆನಿಸಿತು. ಆಕೆ ನನ್ನನ್ನು ಅವಮಾನಿಸುತ್ತಿದ್ದಾಳೆ ಎಂದು ಅನಿಸಿತು. ಆಕೆಯನ್ನು ಕರೆದು, ಆ ಪದದ ಅರ್ಥ ಗೊತ್ತಿದೆಯಾ ಎಂದು ವೇದಿಕೆಯ ಮೇಲೆಯೇ ಕೇಳಿದೆ. ‘ಸಾರ್, friendly natured ವ್ಯಕ್ತಿಗಳಿಗೆ ಆ ಪದ ಬಳಸುತ್ತಾರಲ್ಲವಾ? ನೀವೂ ನನಗೆ ಹಾಗೆ ಕಂಡಿದ್ದರಿಂದ ಆ ಪದ ಬಳಸಿದೆ’ ಎಂದು ಆಕೆ ಸಮರ್ಥಿಸಿ ಕೊಂಡಳು. ಅವಳ ಹತ್ತಿರ ಚರ್ಚಿಸಿ ಫಲವಿಲ್ಲ ಎಂದು, ನಾನು ನನ್ನ ಭಾಷಣದಲ್ಲಿ ಆ ಪದದ ಅರ್ಥವನ್ನು ಹೇಳಿದೆ. ಅಷ್ಟೇ ಅಲ್ಲ, ಆ ಪದವನ್ನು ಯಾರಿಗೆ ಬಳಸಬೇಕು ಎಂಬುದನ್ನೂ ವಿವರಿಸಿದೆ.

ನನ್ನ ದೃಷ್ಟಿಯಲ್ಲಿ, ‘ಅಜಾತಶತ್ರು’ಎಂಬ ಪದವನ್ನು ಯಾವ ಪತ್ರಕರ್ತರಿಗಾಗಲಿ, ಸಂಪಾದಕರಿಗಾಗಲಿ ಬಳಸಲೇಕೂಡದು. ಈ ಪದದಿಂದ ಜನ ತಮ್ಮನ್ನು ಕರೆಯ ಬೇಕು ಎಂದು ಪತ್ರಕರ್ತರಾಗಲಿ, ಸಂಪಾದಕರಾಗಲಿ ಬಯಸಬಾರದು. ಕಾರಣ ಅದು ಪ್ರಶಂಸೆಯಲ್ಲ. ಪದವಿಯೂ ಅಲ್ಲ, ಉತ್ತಮ ಗುಣವೂ ಅಲ್ಲ. ಸಂಪಾದಕ ನಿಗೆ ಯಾರಾದರೂ ‘ಅಜಾತಶತ್ರು’ ಎಂದು ಕರೆದರೆ, ಅದು ಶಾಪ, ಮೂದಲಿಕೆ, ಅದು ಅವಮಾನ, ಅಪಚಾರ. ಸಂಪಾದಕನನ್ನು ಹೊಗಳಲು ಇನ್ನಿತರ ಅನೇಕ ಗುಣಗಳಿವೆ, ಗುಣಸಂಪನ್ನತೆಗಳಿವೆ, ಗುಣಕಥನಗಳಿವೆ. ಆದರೆ ಖಂಡಿತವಾಗಿಯೂ ಅಜಾತಶತ್ರು ಅಲ್ಲ.

ಯಾರಾದರೂ ಸಂಪಾದಕನನ್ನು ‘ಅಜಾತಶತ್ರು’ ಎಂದು ಕರೆದರೆ, ಆತ ಮಾಡಿದ್ದು ಪತ್ರಿಕೋದ್ಯಮ ಅಲ್ಲ ಎಂದು ಭಾವಿಸಬೇಕು. ಆತ ತನ್ನ ಜೀವನದಲ್ಲಿ ಬೇರೆ ಯವರನ್ನು ಖುಷಿಪಡಿಸುವುದಕ್ಕಾಗಿ ಪತ್ರಿಕೋದ್ಯಮವನ್ನು ಒಂದು ಉದ್ಯೋಗವನ್ನಾಗಿ, ದಂಧೆಯನ್ನಾಗಿ ಮಾಡಿಕೊಂಡಿದ್ದಾನೆ ಎಂದು ಭಾವಿಸಬೇಕು. ಆತ ತನ್ನ ಜೀವನದಲ್ಲಿ ಬಹಳ ಸಲ ರಾಜಿ (Compramise) ಮಾಡಿಕೊಂಡಿದ್ದಾನೆ ಎಂದು ತಿಳಿಯಬೇಕು. ಅದು ಸಂಪಾದಕನಿಗೆ ಭೂಷಣವಲ್ಲ. ಸಂಪಾದಕನಾಗಿ ಯಾರು ಮೇಲಿಂದ ಮೇಲೆ ರಾಜಿ ಮಾಡಿಕೊಳ್ಳುತ್ತಾರೋ, ಎಲ್ಲರನ್ನೂ ಸಂಪ್ರೀತಗೊಳಿಸಲು ಬಯಸುತ್ತಾರೋ, ತಮ್ಮ ವೃತ್ತಿಯಲ್ಲಿ ನಡುಬಾಗಿಸದ ಕಡೆಗಳಲ್ಲ ಶಿರ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೋ, ಅವರು ‘ಅಜಾತಶತ್ರು’ ಎಂದು ಕರೆಯಿಸಿಕೊಳ್ಳುತ್ತಾರೆ.

ನನ್ನ ಪ್ರಕಾರ, ಸಂಪಾದಕರ ಕೋಶದಲ್ಲಿ ಅಜಾತಶತ್ರು ಅಂದ್ರೆ ಬೆನ್ನುಮೂಳೆ ಇಲ್ಲದವ, ಛಾತಿ ಇಲ್ಲದವ, ರಾಜಿ ಮಾಡಿಕೊಳ್ಳುವವ, Please all ಸ್ವಭಾವದವ ಎಂದರ್ಥ. ಅಂಥವರು ಪತ್ರಿಕೋದ್ಯಮಕ್ಕೆ ಬರಬಾರದು. ಅಂಥವರಿಗಾಗಿಯೇ ಬೇರೆ ಕ್ಷೇತ್ರಗಳಿವೆ. ಅಲ್ಲಿ ಅವರು ಸ್ವಚ್ಛಂದವಾಗಿರಬಹುದು. ಅವರಿಗೆ ಪತ್ರಿಕೋ ದ್ಯಮ ಹೇಳಿ ಮಾಡಿಸಿದ ಕ್ಷೇತ್ರವಲ್ಲ. ಅಜಾತಶತ್ರು ಎಂದು ಕರೆಯಿಸಿಕೊಳ್ಳುವ ಹಂಬಲವಿದ್ದವರಂತೂ ಪತ್ರಿಕೋದ್ಯಮಕ್ಕೆ ಬರಲೇಬಾರದು. ಅವರು ತಮಗೆ ಮತ್ತು ವೃತ್ತಿಗೆ ಶೋಭೆ ತರುವುದಿಲ್ಲ. ಅಂಥವರು ವೃತ್ತಿಗೇ ಕಳಂಕ. ಅಂಥವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು, ನಿರೀಕ್ಷಿಸಲೂಬಾರದು. ಕಾರಣ ಅವರು ಹೆಜ್ಜೆ ಹೆಜ್ಜೆಗೆ ರಾಜಿ ಮಾಡಿಕೊಂಡಿರುತ್ತಾರೆ.

ಬಗ್ಗಬಾರದ ಸಂದರ್ಭದಲ್ಲ ಬಾಗಿರುತ್ತಾರೆ, ತೆವಳಿರುತ್ತಾರೆ. ಯಾರ ಮುಂದೆ ಬಾಗಿರುತ್ತಾರೋ, ತೆವಳಿರುತ್ತಾರೋ, ಅವರು ಅಜಾತಶತ್ರು ಎಂದು ಅನಿಸಿಕೊಳ್ಳು ತ್ತಾರೆ, ಕರೆಯಿಸಿಕೊಳ್ಳುತ್ತಾರೆ. ಇಂಥವರು ಹೆಚ್ಚೆಂದರೆ, ಒಂಟಿಕೊಪ್ಪಲು, ಬಗ್ಗೋಣ ಪಂಚಾಂಗ, ‘ಚಂದಮಾಮ’, ‘ವನಿತಾ’ ಮತ್ತು ‘ರಾಗಸಂಗಮ’ದ ಸಂಪಾದಕ ರಾಗಬಹುದು. ದೈನಿಕದ ಸಂಪಾದಕರಾಗಲು ಲಾಯಕ್ಕು. ಪಂಚಾಂಗದ ಸಂಪಾದಕರಾದರೆ ಯಾರನ್ನೂ ಟೀಕಿಸಬೇಕಿಲ್ಲ. ಒಂದು ವೇಳೆ ಸೂರ್ಯ-ಚಂದ್ರನನ್ನು ಟೀಕಿಸಿದರೆ, ಅವರೇನು ಸಂಪಾದಕನ ವಿರುದ್ಧ ಕೇಸು ಹಾಕುವುದಿಲ್ಲ ಅಥವಾ ಫೇಸ್ ಬುಕ್‌ನಲ್ಲಿ ತಮ್ಮ ಬೆಂಬಲಿಗರಿಂದ ಕೆಟ್ಟದಾಗಿ ಬರೆಯಿಸುವು ದಿಲ್ಲ.

ಹಾಗೇ ‘ಚಂದಮಾಮ’, ‘ವನಿತಾ’ ಮತ್ತು ‘ರಾಗಸಂಗಮ’ ಸಂಪಾದಕರಾದರೂ. ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಅವರು ಯಾರ ವಿರುದ್ಧ ವೂ ಬರೆಯುವುದಿಲ್ಲ ಮತ್ತು ಅವರಿಗೆ ಹಾಗೆ ಬರೆಯುವ ಅವಕಾಶವೂ ಬರುವುದಿಲ್ಲ. ಇಂಥವರನ್ನು ಅಜಾತಶತ್ರು ಎಂದು ಧಾರಾಳವಾಗಿ ಕರೆಯಬಹುದು. ‘ಚಂದಮಾಮ’ ಮತ್ತು ‘ವನಿತಾ’ ಸಂಪಾದಕ ನಿಜಕ್ಕೂ ಅಜಾತಶತ್ರುವೇ. ದಿನಪತ್ರಿಕೆ ಸಂಪಾದಕನಾದವನು ಯಾವ ಕಾರಣಕ್ಕೂ ‘ಅಜಾತಶತ್ರು’ ಎಂದು ಕರೆಯಿಸಿಕೊಳ್ಳಬಾರದು. ಅದು
ಘನತೆಯಲ್ಲ, ಪ್ರಶಂಸೆಯಲ್ಲ, ಬಿರುದಲ್ಲ. ಅದೊಂದು ಅಪಸವ್ಯ. ಯಾರಾದರೂ ಪತ್ರಕರ್ತನನ್ನು ಅಜಾತಶತ್ರು ಎಂದು ಕರೆದರೆ ಅದು ಟೀಕೆ, ಬೈಗುಳ, ವ್ಯಂಗ್ಯ, ಅಣಕ.

ಸಂಪಾದಕನಾದವನು ಆಗಾಗ ಟೀಕೆಗೆ ಗುರಿಯಾಗಬೇಕು. ತನ್ನ ಖಚಿತ ನಿಲುವುಗಳಿಂದ ಒಂದಷ್ಟು ಟೀಕಾಕಾರರನ್ನು ಗಳಿಸಿಕೊಳ್ಳಬೇಕು, ಆಗಾಗ unpopular ಆಗಬೇಕು. ಒಂದಷ್ಟು ವೈರಿಗಳ ಜತೆ ಕಾದಾಡಬೇಕು, ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಂತೆ ಟೀಕಾಕಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗಬೇಕು, ಪ್ರತಿ ಇಪ್ಪತ್ತೈದು ಅಭಿಮಾನಿಗಳಿಗೆ ಕನಿಷ್ಠ ಐವರು ಟೀಕಾಕಾರರು ಮತ್ತು ಒಬ್ಬ ವೈರಿಯನ್ನಾದರೂ ಸ್ವಯಾರ್ಜಿತ ಆಸ್ತಿಯಂತೆ ಗಳಿಸಿಕೊಳ್ಳಬೇಕು. ಅದು ಒಬ್ಬ ಸಂಪಾದಕನಿಗೆ ಭೂಷಣಪ್ರಾಯ.

ಸಂಪಾದಕ ಇರಬೇಕಾದುದೇ ಹಾಗೆ. ಸಂಪಾದಕರಾದವರು ಒಂಥರಾ ಅಂಪೈರುಗಳಿದ್ದ ಹಾಗೆ, ನ್ಯಾಯಾಧೀಶರಿದ್ದ ಹಾಗೆ. ಅಂಪೈರುಗಳು, ಜಡ್ಜುಗಳು ಆಟದ ನಿಯಮಗಳನ್ನು ರೂಪಿಸುವುದಿಲ್ಲ. ಆದರೆ ಅವರು ಎಲ್ಲ ನಿಯಮಗಳನ್ನು apply ಮಾಡುತ್ತಾರೆ. ಅಂಪೈರುಗಳು ಮತ್ತು ನ್ಯಾಯಾಧೀಶರುಗಳು
ನಿಯಮದಂತೆ ನಡೆದುಕೊಳ್ಳುತ್ತಾರೆ. ಇವರ ತೀರ್ಪುಗಳನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಅದನ್ನು ಸಂಪಾದಕನಾದ ವನು ಒಪ್ಪಿಕೊಳ್ಳಬೇಕಿಲ್ಲ. ಆತ ಮಾತ್ರ ಅದನ್ನು ಪ್ರಶ್ನಿಸ ಬಹುದು ಮತ್ತು ಸಮಷ್ಟಿಯ ಒಳಿತಿಗಾಗಿ ಪ್ರಶ್ನಿಸಬೇಕು.

ಯಾರು ಎಲ್ಲವನ್ನೂ ಪ್ರಶ್ನಿಸುತ್ತಾರೋ, ಸಹಜವಾಗಿ ವಿರೋಧ, ಟೀಕೆ, ನಿಂದನೆ ಬರುವುದು ಸಹಜ. ಆಗ ಜನ ಸಂಪಾದಕನಾದವನ ಹಣೆಗೆ ಲೇಬಲ್ ಅಂಟಿಸುತ್ತಾರೆ. ಕೆಟ್ಟ ಕೆಟ್ಟ ಪದಗಳಿಂದ ಬೈಯುತ್ತಾರೆ. ಕ್ಷಮಾಪಣೆಗೆ ಆಗ್ರಹಿಸುತ್ತಾರೆ. ಅದಕ್ಕೆಲ್ಲ ಸಂಪಾದಕನಾದವನು ಜಗ್ಗಬಾರದು. ಇವೆಲ್ಲ ಇದ್ದಿದ್ದೇ. ಯಾರೂ ಹೊಗಳಿಕೆಯನ್ನು ಬಿಟ್ಟು ಬೇರೇನನ್ನೂ ಕೇಳಲು ಇಷ್ಟಪಡುವುದಿಲ್ಲ. ಅದರಲ್ಲೂ ಸಮಾಜದಲ್ಲಿರುವ ಕೆಲವರು ತಮ್ಮನ್ನು ಟೀಕಿಸಲೇಬಾರದು ಎಂದು ಭಾವಿಸಿರು ತ್ತಾರೆ.

ಅಂಥವರು ತಮ್ಮನ್ನು ಟೀಕಾತೀತರು, ಪ್ರಶ್ನಾತೀತರು ಎಂದು ಭಾವಿಸಿರುತ್ತಾರೆ. ಸಂಪಾದಕನಾದವನು ಇವರನ್ನಷ್ಟೇ ಅಲ್ಲ, ನಮ್ಮ ಸಂವಿಧಾನ ರಕ್ಷಕರಾದ
ರಾಷ್ಟ್ರಪತಿಯನ್ನೂ ಬಿಡಬಾರದು. ಅವನನ್ನೇ ಪ್ರಶ್ನಿಸಿದ ಮೇಲೆ ಬೇರೆಯವರನ್ನು ಬಿಡುವುದುಂಟಾ? ಇವೆಲ್ಲವನ್ನೂ ಒಬ್ಬ ಸಂಪಾದಕ ತನ್ನ ತಲೆ ಮೇಲೆ
ಸುರಿವಿಕೊಂಡು ನಿತ್ಯವೂ ಮಾಡುತ್ತಲೇ ಇರಬೇಕು. ಪತ್ರಿಕೆಯ ಒಂದು ಪುಟದಲ್ಲಿ ಒಬ್ಬನ ಬಗ್ಗೆ ಪ್ರಶಂಸೆ ಪ್ರಕಟವಾದರೆ, ಇನ್ನೊಂದೆಡೆ ಟೀಕಾತ್ಮಕ ವರದಿಯೂ ಪ್ರಕಟವಾಗಬೇಕು. ನಮ್ಮ ರಾಜ್ಯ ಸುಭಿಕ್ಷವಾಗಿದೆ, ಇಲ್ಲಿ ಎಲ್ಲವೂ ಚೆನ್ನಾಗಿದೆ, ಎಲ್ಲರೂ ಒಳ್ಳೆಯವರು, ಜೀವನ ಸುಂದರವಾಗಿದೆ ಎಂದು ಬರೆದಿದ್ದನ್ನು ಪ್ರಕಟಿಸುವವರು ಪತ್ರಿಕಾ ಸಂಪಾದಕರಾಗಬಾರದು.

ಅಂಥವರು ಸರಕಾರ ಅಥವಾ ಮಠ-ಮಾನ್ಯಗಳ ನಿರೂಪ, ಕೈಫಿಯತ್ತು ಬರೆದುಕೊಂಡಿರಬಹುದು. ಪತ್ರಿಕಾ ಸಂಪಾದಕರು ಕೆಲವರಿಗೆ ಅಪಥ್ಯವಾಗುವ ಕಹಿ ಸತ್ಯವನ್ನು ಹೇಳಲೇಬೇಕು. ಅದರಿಂದ ಬರಬಹುದಾದ ಕೂರಂಬುಗಳಿಗೆ ಎದೆಯೊಡ್ಡಲೇಬೇಕು. ಇದನ್ನು ಕೆಲವರು ಧೀಮಾಕು, ಕೊಬ್ಬು (audacity) ಎಂದು
ಭಾವಿಸಿದರೂ ಪರವಾಗಿಲ್ಲ. ಕಾರಣ ಅದರಲ್ಲಿ ಸಂಪಾದಕನ ಸ್ವಾರ್ಥವೇನೂ ಇರುವುದಿಲ್ಲ. ಆತ ಸಮಾಜದ ವಕ್ತಾರನಾಗಿ, ಪ್ರತಿನಿಧಿಯಾಗಿ ಹೇಳಿರುತ್ತಾನೆ. ಎಲ್ಲರೂ ತನ್ನನ್ನು ಹೊಗಳಬೇಕು ಎಂದು ಬಯಸುವವನು ಪತ್ರಿಕಾ ಸಂಪಾದಕನಾಗುವ ಬದಲು, ಅಭಿನಂದನಾ ಪತ್ರ ಬರೆದುಕೊಡುವ ಬಾಡಿಗೆ ಲೇಖಕನಾಗ ಬಹುದು.

ಹೀಗಾಗಿ ನನ್ನ ಪತ್ರಿಕೆಯ ಲೇಖನಗಳಿಂದ ಕೆಲವರಿಗೆ ಅಪಥ್ಯವಾದರೆ, ಅದಕ್ಕೆ ಟೀಕೆಗಳು ಬಂದರೆ, ಸಂಪಾದಕನಾಗಿ ಸರಿಯಾದ ಹಾದಿಯಲ್ಲಿ ಹೋಗುತ್ತಿದ್ದೇನೆ ಎಂದು ಭಾವಿಸುವವನು ನಾನು. ನಮ್ಮ ಬರಹಗಳಿಂದ ಕೆಲವರಿಗಾದರೂ ಅಪಥ್ಯವಾಗದಿದ್ದರೆ, ನಾವು ಕೋಡುಬಳೆ, ಚಕ್ಕುಲಿ ಸುತ್ತಿಕೊಂಡಿರುವುದು ವಾಸಿ. ಅದು ನನ್ನಿಂದ ಆಗದ ಕೆಲಸ. ಅಷ್ಟಕ್ಕೂ ನಾನು ಇಷ್ಟೆಲ್ಲ ನಿಮ್ಮ ಮುಂದೆ ಏಕೆ ಹೇಳಿದೆ ಎಂಬುದು ನಿಮಗೆ ಗೊತ್ತು.