Sunday, 15th December 2024

ಆಕಾಶವಾಣಿಯ ಅಗೋಚರರೆಲ್ಲ ಇನ್ನಷ್ಟು ಆಪ್ತರಾದರು !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಇಂಥ ‘ವ್ಯಕ್ತಿಕೇಂದ್ರಿತ’ ಕಾರ್ಯಕ್ರಮಗಳನ್ನು, ಅದೂ ಸರಕಾರಿ ವ್ಯವಸ್ಥೆಯ ಪರಿಧಿಯೊಳಗೆ ನಿರ್ಮಿಸುವಾಗ ಎದುರಾಗುವ ಸವಾಲುಗಳು, ಅರಗಿಸಿಕೊಳ್ಳ ಬೇಕಾದ ಮುಜುಗರಗಳು, ಅನುಭವಿಸಬೇಕಾಗಿ ಬರುವ ಇಬ್ಬಂದಿತನಗಳು, ಇತಿಮಿತಿಗಳು- ಇವನ್ನೆಲ್ಲ ಸುಮತಿ ಮತ್ತು ತಂಡದವರಷ್ಟೇ ಬಲ್ಲರೋ ಏನೋ. ಆದರೆ ಶ್ರೋತೃಗಳಾಗಿ ನಮಗೆ ದಕ್ಕಿದ್ದು ಒಂದು ಅತ್ಯುತ್ಕೃಷ್ಟ ಮತ್ತು ಅತ್ಯಮೂಲ್ಯ ರೇಡಿಯೊ ಕಾರ್ಯಕ್ರಮ ಸರಣಿ.

ಅಗೋಚರರನ್ನು ಪ್ರತ್ಯಕ್ಷ ಪರಿಚಯಿಸುವ ತಮಾಷೆ ರೀತಿಯೊಂದನ್ನು ನನ್ನ ಅಣ್ಣ ಮಾಡುತ್ತಿದ್ದರು.ಅದೇನೆಂದು ವಿವರಿಸುತ್ತೇನೆ: ನಾನಿನ್ನೂ ಆಗ ಐದಾರು ವರ್ಷದವನಿರಬಹುದು. ನಮ್ಮ ಮನೆಯಲ್ಲಿ ದೊಡ್ಡದೊಂದು ಫಿಲಿಪ್ಸ್ ರೇಡಿಯೊ ಇತ್ತು. ಐದು ಬ್ಯಾಂಡ್‌ಗಳ ಆಲ್ ಟ್ರಾನ್ಸಿಸ್ಟರ್ ಮಾಡೆಲ್. ಅದಕ್ಕೆ ಒಂಬತ್ತು ವೋಲ್ಟ್‌ನ ಗಜಗಾತ್ರದ ಬ್ಯಾಟರಿ(ನಮ್ಮಲ್ಲಿ ಆಗಿನ್ನೂ ವಿದ್ಯುತ್ ಸೌಕರ್ಯ ಇರಲಿಲ್ಲ).

ಮಳೆಗಾಲದಲ್ಲಿ ಆ ರೇಡಿಯೊಕ್ಕೆ ಶೀತಬಾಧೆ ತಟ್ಟಿ ಗಂಟಲು ಕೆಡುತ್ತಿತ್ತು, ಕೆಲವೊಮ್ಮೆ ಕೋಮಾ ಸ್ಥಿತಿಗೇ ಹೋಗುತ್ತಿತ್ತು. ಜಿರಳೆ ಮತ್ತಿತರ ಹುಳಹುಪ್ಪಟೆ ಒಳಹೊಕ್ಕು ರೇಡಿಯೊದ ಆರೋಗ್ಯ ಕೆಡುತ್ತಿದ್ದದ್ದೂ ಇದೆ. ಆಗೆಲ್ಲ ಅದರ ಹಿಂಬದಿಯ ಜಾಲರಿಯನ್ನು ತೆಗೆದು ಒಂದು ಬ್ರಷ್‌ನಿಂದ ಸ್ವಚ್ಛಗೊಳಿಸುವುದು- ಕಸ, ಬಲೆ, ಗೆದ್ದಲು ತೆಗೆಯುವುದು- ಇತ್ತು. ಅಣ್ಣ ಹಾಗೆ ‘ಆಪರೇಷನ್ ರೇಡಿಯೊ ಕ್ಲೀನಿಂಗ್’ ಮಾಡುತ್ತಿರಬೇಕಾದರೆ ನಾವೆಲ್ಲ ಚಿಕ್ಕವರು ಕುತೂಹಲಿಗಳಾಗಿ ಸುತ್ತ ಕುಳಿತುಕೊಳ್ಳುತ್ತಿದ್ದೆವು.

ರೇಡಿಯೊದೊಳಗಿನ ಕೆಪ್ಯಾಸಿಟರ್, ರೆಸಿಸ್ಟರ್ ಮತ್ತಿತರ ಎಲೆಕ್ಟ್ರಾನಿಕ್ ಭಾಗಗಳನ್ನು ತೋರಿಸಿ ಅಣ್ಣ ಬೇಕಂತಲೇ ‘ಇವರು ಪಿ.ಬಿ. ಶ್ರೀನಿವಾಸ್, ಇಲ್ಲಿರುವವರು ಎಸ್.ಜಾನಕಿ. ಇದು ಗಂಡಸು ಎನೌನ್ಸರ್, ಇವರು ಹೆಂಗಸು ಎನೌನ್ಸರ್. ನಿಲಯದ ಕಲಾವಿದರು ಅಂದರೆ ಇವರೇ…’ ಅಂತೆಲ್ಲ ನಮಗೆ ವಿವರಿಸುತ್ತಿದ್ದರು. ನಾವು ಪಿಳಿಪಿಳಿ ಕಣ್ಣುಬಿಟ್ಟು, ಇದ್ದರೂ ಇರಬಹುದು ಎಂದು ಪ್ರಾಮಾಣಿಕವಾಗಿ ನಂಬುತ್ತಿದ್ದೆವು. ಹಾಗೆ ನಾವು ನಂಬುತ್ತಿದ್ದದ್ದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ಆಮೇಲೆ ಏಳನೆಯ ತರಗತಿಯಲ್ಲಿ ನಮಗೊಂದು ಇಂಗ್ಲಿಷ್ ಪಾಠ ಇತ್ತು- Melba on ಅಂತ. ಅದರಲ್ಲಿ ಮೆಲ್ಬಾ ಎಂಬ ಹುಡುಗಿ ರೇಡಿಯೊ ಸ್ಟೇಷನ್‌ಗೆ ಹಾಡಲಿಕ್ಕೆಂದು
ಹೋದವಳು ಹೊರಗೆ ದೊಡ್ಡ ಆಂಟೆನಾ ಮಾಸ್ಟ್‌ಅನ್ನು ನೋಡಿ ‘ಅಯ್ಯೋ! ನಾನು ಅದರ ಮೇಲೆ ಹತ್ತಿ ಅಲ್ಲಿಂದ ಹಾಡಬೇಕೇ!?’ ಎಂದು ಭಯಪಡುವ ಬಣ್ಣನೆ ಯಿತ್ತು.

ಬಾಲ್ಯದ ಮುಗ್ಧತನ- ‘ಭಲೇ ಛೀನ್‌ಲೋ ಮುಝ್‌ಸೇ ಮೇರೀ ಜವಾನಿ… ಮಗರ್ ಮುಝ್‌ಕೋ ಲೌಟಾ ದೋ ಬಚ್‌ಪನ್ ಕಾ ಸಾವನ್…’ ಎಲ್ಲರದೂ ಹಾಗೆಯೇ ತಾನೆ? ಮುಂದೆ ತಿಳಿವಳಿಕೆ ಬಂದಮೇಲೂ, ರೇಡಿಯೊದಿಂದ ವಿವಿಧ ಕಾರ್ಯಕ್ರಮಗಳನ್ನು ಕೇಳಿ ಸವಿಯುತ್ತಿದ್ದೆವೇ ಹೊರತು, ಪತ್ರೋತ್ತರ ಮತ್ತು ‘ನಿಮ್ಮ ಮೆಚ್ಚಿನ ಚಿತ್ರಗೀತೆ’ಗೆ ಪತ್ರ ಬರೆದು ರೇಡಿಯೊದಲ್ಲಿ ಹೆಸರು ಬರುವಂತೆ ಮಾಡುತ್ತಿದ್ದೆವೇ ಹೊರತು, ಆ ಕಾರ್ಯಕ್ರಮಗಳನ್ನೆಲ್ಲ ತಯಾರು ಮಾಡಿ ಪ್ರಸ್ತುತ ಪಡಿಸುವವರು ಯಾರು, ನೋಡಲಿಕ್ಕೆ ಅವರು ಹೇಗಿರುತ್ತಾರೆ, ಅವರ ಕಾರ್ಯವೈಖರಿಗಳೇನು ಎಂಬುದರ ಸ್ಪಷ್ಟ ಕಲ್ಪನೆ ಇರಲೇ ಇಲ್ಲ.

ಈಗಿನಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದರದೂ ಢಾಣಾಡಂಗುರವಾಗಲಿ ಸೆಲ್ ಫಿಸಂಭ್ರಮಗಳಾಗಲೀ ಇರಲಿಲ್ಲವಲ್ಲ, ಹಾಗಾಗಿ ರೇಡಿಯೊದಲ್ಲಿ
ಬರುವ ಧ್ವನಿಗಳ ಒಡೆಯರೆಲ್ಲ ಅಗೋಚರರಾಗಿಯೇ ಅಜ್ಞಾತರಾಗಿಯೇ ಉಳಿದಿದ್ದರು. ನಮಗೆಲ್ಲ ಅವರ ಬಗೆಗೊಂದು ವಿಶೇಷ ಕುತೂಹಲವಂತೂ ಇದ್ದೇ ಇರುತ್ತಿತ್ತು. ಆದ್ದರಿಂದಲೇ ಇರಬಹುದು- ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದ ನಾರಾಯಣಿ ದಾಮೋದರ್ ಆರೇಳು ವರ್ಷಗಳ ಹಿಂದೆ (ಆಗ ಅವರು ನಿವೃತ್ತಿ ಪಡೆದಾಗಿತ್ತು) ಧುತ್ತೆಂದು ಫೇಸ್‌ಬುಕ್‌ನಲ್ಲಿ ನನಗೆ ಭೇಟಿಯಾದಾಗ; ಬೆಂಗಳೂರು ವಿವಿಧಭಾರತಿಯ ಕೋಗಿಲೆಕಂಠ ಮಾಲತಿ ಶರ್ಮಾ
2005ರಲ್ಲಿ ನನಗಿಲ್ಲಿ ಅಮೆರಿಕದಲ್ಲಿ ಭೇಟಿಯಾಗಿ ಆಮೇಲೆ ಅದೇ ವರ್ಷ ಬೆಂಗಳೂರಲ್ಲಿ ನನ್ನ ಪುಸ್ತಕಬಿಡುಗಡೆ ಸಮಾರಂಭದ ನಿರೂಪಕಿಯಾಗಲು ಒಪ್ಪಿದಾಗ; ಚಂದ್ರನ ಮೇಲೆ ಮಾನವನ ಪದಾರ್ಪಣೆಗೆ 50 ವರ್ಷಗಳಾದ ಸಂದರ್ಭ ಉದಯವಾಣಿಯಲ್ಲಿ ಬಂದ ಒಂದು ನುಡಿಚಿತ್ರದಿಂದಾಗಿ, 1969ರಲ್ಲಿ ಆ ಸುದ್ದಿಯನ್ನು ಪ್ರದೇಶ ಸಮಾಚಾರದಲ್ಲಿ ಓದಿದ್ದ ಕೆ.ಎಸ್.ಪುರುಷೋತ್ತಮ್ ಅವರ ಭಾವಚಿತ್ರ ನೋಡಿದಾಗ; ಆಮೇಲೆ ಕೆಲ ದಿನಗಳಲ್ಲಿ ನಾಗೇಶ್ ಶಾನುಭಾಗ್ (ಧಾರವಾಡ ಕೇಂದ್ರದಿಂದ ಪ್ರದೇಶ ಸಮಾಚಾರ ಓದುತ್ತಿದ್ದವರು) ಪರಿಚಯವಾಗಿ ಆಮೇಲೆ ನಾನು ಅವರ ಬಗ್ಗೆ ಇದೇ ಅಂಕಣದಲ್ಲಿ ಲೇಖನವನ್ನೂ ಬರೆದಾಗ- ಹೀಗೆ ಆಕಾಶವಾಣಿಯ ‘ಅಗೋಚರ’ರು ಅನಿರೀಕ್ಷಿತವಾಗಿ ಪರಿಚಿತರಾದಾಗೆಲ್ಲ ನಾನು ವಿಶೇಷ ಪುಳಕ ಅನುಭವಿಸಿದ್ದೇನೆ.

ಇದು ನನ್ನೊಬ್ಬನ ಕಥೆಯಲ್ಲ. ಹುಚ್ಚು ಎನ್ನುವಷ್ಟರಮಟ್ಟಿಗೆ ರೇಡಿಯೊವನ್ನು ಹಚ್ಚಿಕೊಂಡವರೆಲ್ಲರದೂ ಇದೇ ಪುಳಕ. ರೇಡಿಯೊ ಅಥವಾ ಆಕಾಶವಾಣಿಗೆ
ಸಂಬಂಧಿಸಿದ ಲೇಖನವೋ, ನೆನಪುಗಳ ಲಹರಿಯೋ ಪತ್ರಿಕೆಗಳಲ್ಲಿ ಪ್ರಕಟವಾದರೆ ಕಣ್ಣರಳಿಸಿ ಓದಿ ಅನಿರ್ವಚನೀಯ ರೋಮಾಂಚನ ತಂದುಕೊಳ್ಳುವವರ ಸಂಖ್ಯೆ ಕಮ್ಮಿಯೇನಲ್ಲ. ಅಂಥಾದ್ರಲ್ಲಿ, ಆಕಾಶವಾಣಿಯದೇ ಹುಟ್ಟು ಮತ್ತು ಬಾಲ್ಯ ಹೇಗಿತ್ತು, ಅದು ಪ್ರೌಢಾವಸ್ಥೆಗೆ ಹೇಗೆ ತಲುಪಿತು, ಅದರ ಪಾಲನೆ ಪೋಷಣೆ ಮಾಡುತ್ತ ಕೈಹಿಡಿದು ನಡೆಸಿದವರು ಯಾರು, ಅವರ ಶ್ರಮ ಸಾಹಸಗಳು ಹೇಗಿದ್ದುವು ಎಂಬಿತ್ಯಾದಿ ಸ್ವಾರಸ್ಯಕರ ಸಂಗತಿಗಳನ್ನೊಳಗೊಂಡ ಕಾರ್ಯಕ್ರಮ,
ಆಕಾಶವಾಣಿಯಿಂದಲೇ ವಾರಕ್ಕೊಂದು ಕಂತಿನಂತೆ ಪ್ರಸಾರವಾದರೆ ರೋಮಾಂಚನಕ್ಕೆ ಎಣೆಯುಂಟೇ? ಕಳೆದ 52 ವಾರಗಳಲ್ಲಿ ತಲಾ 15 ನಿಮಿಷಗಳ ಕಂತುಗಳಲ್ಲಿ ಪ್ರಸಾರವಾದ ‘ನುಡಿತೇರನೆಳೆದವರು ಬಾನುಲಿ ಕಲಿಗಳು’ ಸರಣಿ ಅಂಥದೊಂದು ಅರ್ಥಪೂರ್ಣ ಕೆಲಸ ಮಾಡಿದೆ.

ನನ್ನಂಥ ಲಕ್ಷಾಂತರ ರೇಡಿಯೊಹುಚ್ಚರ ಮನತಣಿಸಿದೆ. ಮಾಹಿತಿ ಮನೋರಂಜನೆ, ಜ್ಞಾನ-ವಿಜ್ಞಾನ, ಸಾಹಿತ್ಯ-ಸಂಗೀತ, ನಾಟಕ, ಕೃಷಿ, ಕ್ರೀಡೆ, ಸುದ್ದಿ ಸಮಾಚಾರ… ಮುಂತಾಗಿ ಮೃಷ್ಟಾನ್ನ ಭೋಜನವನ್ನು ಆಕಾಶವಾಣಿ ನೀಡುತ್ತ ಬಂದಿದೆಯಾದರೂ ಆ ಮೃಷ್ಟಾನ್ನವನ್ನು ತಯಾರಿಸುವ ಅಡುಗೆಯವರು ಯಾರು,
ಶ್ರೋತೃಗಳಿಗೆ ಇಷ್ಟು ಸವಿಯಾದ ಹೂರಣವನ್ನು ಬಡಿಸಬೇಕಿದ್ದರೆ ಅವರೆಲ್ಲ ಪಟ್ಟ ಶ್ರಮ, ತೋರಿದ ಶ್ರದ್ಧೆ, ಕಾರ್ಯನಿಷ್ಠೆ ಅದೆಷ್ಟು ಶ್ರೇಷ್ಠ ಮಟ್ಟದ್ದು ಎಂದು ಇದುವರೆಗೆ ಇಷ್ಟು ಸಮಗ್ರವಾಗಿ ಪರಿಚಯಿಸಿದ್ದಿರಲಿಲ್ಲ. ಈ ಸರಣಿ ಅದನ್ನೆಲ್ಲ ಆಮೂಲಾಗ್ರವಾಗಿ ಮಾಡಿದೆ.

ಮೈಸೂರಿನಲ್ಲಿ ಮೊತ್ತಮೊದಲ ಖಾಸಗಿ ರೇಡಿಯೊ ಸ್ಟೇಷನ್‌ನ ಚರಿತ್ರೆಯಿಂದ ಹಿಡಿದು ಇಂದಿನ NewsOnAir App ವರೆಗೆ, ಕರ್ನಾಟಕ-ಕನ್ನಡದ ಸಂದರ್ಭ ದಲ್ಲಿ ಆಕಾಶವಾಣಿ ನಡೆದು ಬಂದ ದಾರಿಯ ಸ್ಥೂಲ ನೋಟವನ್ನು ರಸದೂಟವಾಗಿಸಿ ಉಣಬಡಿಸಿದೆ. ಇದು ಎಲ್ಲ ವಿಧಗಳಲ್ಲೂ ಒಂದು ಚರಿತ್ರಾರ್ಹ, ದಾಖಲೆಗೆ ಸೇರಬೇಕಾದ ಮೌಲ್ಯಯುತ ಕಾರ್ಯಕ್ರಮ. ಇದರ ನಿರ್ಮಾಣದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಅಭಿನಂದನಾರ್ಹರು. ಸರಣಿಯ ಪ್ರಾಯೋಜಕತ್ವ ವಹಿಸಿ, ಕನ್ನಡ ಕಾಯಕ ವರ್ಷಕ್ಕೆ ಇದನ್ನೊಂದು ಸಾರ್ಥಕ ಕೊಡುಗೆಯಾಗಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಕೃತಜ್ಞತೆ ಸಲ್ಲಲೇಬೇಕು.

ಕಳೆದ ವರ್ಷ ಈ ಸರಣಿ ಆರಂಭವಾಗಿ 8-10 ವಾರಗಳಾಗಿದ್ದಾಗ ಇದೇ ಅಂಕಣದಲ್ಲಿ ನಾನೊಮ್ಮೆ ಬರೆದಿದ್ದೆ. ಅಷ್ಟರವರೆಗಿನ ಸಂಚಿಕೆಗಳ ಕೆಲ ಪ್ರಮುಖ ಅಂಶಗಳನ್ನೂ ಉಲ್ಲೇಖಿಸಿದ್ದೆ. ಆಮೇಲೆ ಪ್ರತಿವಾರವೂ ಕಾದು ಕುಳಿತು ಎಂಬಂತೆ ನಾನಿದರ ಕಂತುಗಳನ್ನು ಕೇಳಿ ಆನಂದಿಸಿದ್ದೇನೆ. ಆಕಾಶವಾಣಿಯನ್ನು
ಸಮೃದ್ಧಗೊಳಿಸಿದ ಮೇರು ವ್ಯಕ್ತಿತ್ವಗಳನ್ನೆಲ್ಲ ಮನಸ್ಸಿನಲ್ಲೇ ವಂದಿಸಿದ್ದೇನೆ. ಕ್ಯಾಲಿಫೋರ್ನಿಯಾದಲ್ಲಿರುವ ಸರಸ್ವತಿ ವಟ್ಟಂ ಅವರಿಗೂ ಇದರ ರುಚಿ ಹತ್ತಿದ್ದರಿಂದ ಅವರೂ ನಾನೂ ಪ್ರತಿ ವಾರದ ಸಂಚಿಕೆಯ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡದ್ದೂ ಇದೆ.

ಕೆಲವು ಪ್ರಸಾರಕರ ಬಗೆಗಿನ ವಿವರಗಳು, ಅನುಭವದ ಮಾತುಗಳು 15 ನಿಮಿಷಗಳಿಗೇ ಸೀಮಿತವಾದುವಲ್ಲ ಕನಿಷ್ಠ ಅರ್ಧ ಗಂಟೆಯಾದರೂ ಇರಬಾರದಿತ್ತೇ ಎಂದು ನಮಗೆ ಅನಿಸಿದ್ದೂ ಇದೆ. ‘ಕಾರ್ಯಕ್ರಮ ಪರಿಕಲ್ಪನೆ, ನಿರೂಪಣಾ ಸಾಹಿತ್ಯ, ನಿರ್ಮಾಣ: ಬಿ.ಕೆ.ಸುಮತಿ’ ಎಂದು ಪ್ರತಿ ಕಂತಿನ ಕೊನೆಯಲ್ಲಿ ಕೇಳಿ ಬಂದಾಗೆಲ್ಲ ಹೆಮ್ಮೆಪಟ್ಟದ್ದೂ ಇದೆ. ಮನಸ್ಸು ಮತ್ತು ಹೃದಯವನ್ನು ಸಂಪೂರ್ಣವಾಗಿ ತೊಡಗಿಸಿ, ಸ್ಮರಣೀಯ ಪ್ರಸಾರಕರೆಲ್ಲರ ವಿವರಗಳನ್ನು ಕಲೆಹಾಕಿ,
ಸಾಧ್ಯವಿದ್ದಲ್ಲೆಲ್ಲ ಅವರ ಧ್ವನಿತುಣುಕುಗಳನ್ನೂ ಪೋಣಿಸಿ, ಸುಮಧುರ ಕನ್ನಡ ಭಾಷೆಯಲ್ಲಿ ಸುಂದರವಾಗಿ ಸಿಂಗರಿಸಿ ಪ್ರಸ್ತುತಪಡಿಸಿದ ಸುಮತಿಯವರ ಶ್ರಮ ಮತ್ತು ಶ್ರದ್ಧೆಗಳಿಗೆ ಯಾರಾದರೂ ಮನಸೋಲಬೇಕಾದ್ದೇ. ಇಂಗ್ಲೇಂಡ್‌ನಲ್ಲಿರುವ ಹಿರಿಯ ಕನ್ನಡಿಗ ಡಾ.ಶ್ರೀವತ್ಸ ದೇಸಾಯಿಯವರೂ ಈ ಸರಣಿಯ ಮತ್ತು ತನ್ಮೂಲಕ ಸುಮತಿಯವರ ಹಿತೈಷಿ ಅಭಿಮಾನಿಯಾಗಿ ಬಿಟ್ಟರು.

ಮೊನ್ನೆ ಪ್ರಸಾರವಾದ ಕೊನೆಯ ಕಂತಿನಲ್ಲಿ ಸರಣಿಯ ಬಗೆಗೆ ಅನಿಸಿಕೆ ವ್ಯಕ್ತಪಡಿಸಿದ ಶ್ರೋತೃಗಳಲ್ಲಿ ನಾವು ಮೂವರೂ ಇದ್ದೆವು ಅಂತ ಚಿಕ್ಕದೊಂದು ಖುಷಿ.
ತಂತ್ರeನವು ಕಲ್ಪಿಸಿರುವ ಸೌಕರ್ಯದಿಂದಾಗಿ ಈಗ ಆಕಾಶವಾಣಿ ವಿಶ್ವವ್ಯಾಪಿ. ಬೆಂಗಳೂರು ಮುಖ್ಯವಾಹಿನಿಯ ಕಾರ್ಯಕ್ರಮಗಳು ಯುಟ್ಯೂಬ್ ಲೈವ್‌ನಲ್ಲೂ
ತೇಲಿಬರುವುದರಿಂದ ಮತ್ತಷ್ಟು ಅನುಕೂಲ. ಅಲ್ಲದೇ ಈ ಸರಣಿಯ ಪ್ರತಿಯೊಂದು ಕಂತನ್ನೂ ಯುಟ್ಯೂಬ್‌ನಲ್ಲಿ ಒಂದು ಪ್ಲೇ-ಲಿಸ್ಟ್ ಮಾಡಿಟ್ಟಿರುವುದರಿಂದ ಕೆಲವೊಂದು ಕಂತುಗಳನ್ನು ನಾನು ಮತ್ತೆಮತ್ತೆ ಕೇಳಿ ಆನಂದಿಸಿದ್ದೇನೆ.

ನಮ್ಮ ಮಂಗಳೂರು ಆಕಾಶವಾಣಿಯ ಪ್ರಸಾರಕರನ್ನು ಕುರಿತ ಕಂತನ್ನಂತೂ ತುಸು ಹೆಚ್ಚೇ ಸಂಭ್ರಮಿಸಿ ನನ್ನ ಕುಟುಂಬದವರಿಗೆಲ್ಲ ಊರವರಿಗೆಲ್ಲ ಆಪ್ತ ವಾದದ್ದೆಂದು ಹಂಚಿದ್ದೇನೆ. ಅದೇನೋ ಒಂಥರ ಮಮಕಾರ. ಹಾಗಂತ ಬೇರೆ ನಿಲಯಗಳಿಗೆ ಸಂಬಂಧಿಸಿದ್ದನ್ನು ಕಡೆಗಣಿಸಿದೆನೆಂದಲ್ಲ. ಬೆಂಗಳೂರಿನ ‘ಕೃಷಿರಂಗ’ದ ಬೆನ್ನೆಲುಬಿನಂತಿದ್ದ ಎಂ.ಟಿ.ಜಯಣ್ಣ – ಜಿ.ಆರ್ ಗುಂಡಪ್ಪ ಜೋಡಿಯ ಬಗೆಗಿನ ವಿವರಗಳು, ಕೃಷಿ ಪಾಠಶಾಲೆ ಸರಣಿ ಕಾರ್ಯಕ್ರಮ ಮೊದಲು ಕನ್ನಡದಲ್ಲಿ ರೂಪುಗೊಂಡು ಕರ್ನಾಟಕದ ರೈತರಿಗೆ ಪ್ರಯೋಜನಕಾರಿಯಾಗಿ ಆಮೇಲೆ ಭಾರತೀಯ ಭಾಷೆಗಳಿಗೆಲ್ಲ ತರ್ಜುಮೆಯಾಗಿ ದೇಶಾದ್ಯಂತ
ಪ್ರಸಾರ ವಾಗಿತ್ತೆಂಬ ವಿಚಾರ, ‘ಅರಳೀಕಟ್ಟೆ’ ಕಾರ್ಯಕ್ರಮವನ್ನು ಕೇಳಲಿಕ್ಕೆ ರೈತರಷ್ಟೇ ಅಲ್ಲ, ರಾಜಕಾರಣಿಗಳೂ ಕಲಾವಿದರೂ ವಿದ್ಯಾವಂತರೂ ಕಾದು ಕುಳಿತಿರುತ್ತಿದ್ದರೆಂಬ ಸಂಗತಿ, ಬಾನುಲಿಯ ಮೂಲಕ ವಿeನ ಕಾರ್ಯಕ್ರಮಗಳ ಪ್ರಸಾರಕ್ಕೆ ಹೊಸ ಭಾಷ್ಯವನ್ನೇ ಬರೆದ ಎಚ್.ಆರ್. ಕೃಷ್ಣಮೂರ್ತಿ, ಅವರ
ಕಲ್ಪನೆಯ ಕೂಸಾದ ‘ನಿಸರ್ಗ ಸಂಪದ’ ಸರಣಿ ಸಹ ಮೊದಲು ಕನ್ನಡದಲ್ಲಿ ಅತಿಜನಪ್ರಿಯವಾಗಿ ಆಮೇಲೆ ಬೇರೆ ಭಾಷೆಗಳಲ್ಲಿ ದೇಶಾದ್ಯಂತ ಪ್ರಸಾರವಾಯ್ತೆಂಬ ವಿಚಾರ, ನಕ್ಷತ್ರವೀಕ್ಷಣೆಯ ಲೈವ್ ಕಾರ್ಯಕ್ರಮವಿದೆಯೆಂದು ಪ್ರಕಟಣೆ ಮಾಡಿ ಅದು ನಡೆಯಬೇಕಿದ್ದ ರಾತ್ರಿ ಬೆಂಗಳೂರು ಸುತ್ತಮುತ್ತ ಮೋಡ ಕವಿದಿದ್ದರಿಂದ ಜಿ.ಟಿ.ನಾರಾಯಣ ರಾವ್ ಮತ್ತು ಎಚ್‌ಆರ್‌ಕೆ ನಿಜವಾದ ಆಕಾಶವನ್ನು ನೋಡುತ್ತ ಕಾಮೆಂಟರಿ ಹೇಳುವ ಬದಲಿಗೆ ತಮ್ಮ ಆಕಾಶಜ್ಞಾನದಿಂದಲೇ ವಿವರಣೆ ಕೊಟ್ಟದ್ದು, ನಾಡಿನೆಲ್ಲೆಡೆ ಶುಭ್ರ ಆಗಸದ ಕೆಳಗೆ ಟ್ರಾನ್ಸಿಸ್ಟರ್ ಕಿವಿಗಾನಿಸಿಕೊಂಡು ನಿಂತು ನಿಜವಾಗಿಯೂ ನಕ್ಷತ್ರಗಳನ್ನು ನೋಡುತ್ತ ಶ್ರೋತೃಗಳು ತಿಳಿ ದುಕೊಂಡದ್ದು… ಇದನ್ನೆಲ್ಲ ಕೇಳುವಾಗ ಏನೋ ರೋಮಾಂಚನ. ಅದಕ್ಕೆ ಕಾರಣವೂ ಇದೆ.

ನಮ್ಮನೆಯ ಅಂಗಳದಲ್ಲಿ ಟ್ರಾನ್ಸಿಸ್ಟರ್ ಹಿಡಿದುಕೊಂಡು ನಿಂತು ವಿವರಣೆ ಕೇಳುತ್ತ ನಕ್ಷತ್ರವೀಕ್ಷಣೆ ಮಾಡಿದ್ದವರಲ್ಲಿ ನಾನೂ ಒಬ್ಬ! ‘ಮೈಸೂರು ಆಕಾಶವಾಣಿ 1955ರಲ್ಲಿ ಬೆಂಗಳೂರಿಗೆ ಸ್ಥಳಾಂತರವಾದಾಗ ಬೆಂಗಳೂರಿನಿಂದ ಮೊಳಗಿದ ಮೊದಲ ಧ್ವನಿ ಎಂ.ಆರ್.ಲಕ್ಷ್ಮೀಬಾಯಿ. ಬೆಂಗಳೂರು ವಿವಿಧ ಭಾರತಿ ಆರಂಭ ವಾದಾಗ ಅಲ್ಲಿಂದಲೂ ಮೊದಲ ಧ್ವನಿ ಅವರದೇ. ‘ಆಗಿನ ವಿವಿಧ ಭಾರತಿ ಸ್ಟುಡಿಯೊ ಸ್ಟುಡಿಯೊನೇ ಅಲ್ಲ ಅದು. ಆಕಡೆ ಈಕಡೆ ಜನರಲ್ ಸ್ಟುಡಿಯೊಗಳು. ಮಧ್ಯ ಕಾರಿಡಾರ್. ಅದರ ಒಂದು ಮೂಲೆಯಲ್ಲಿ ಹತ್ತಡಿ ಜಾಗಕ್ಕೆ ಒಂದು ಸ್ಕ್ರೀನ್ ಹಾಕಿಸಿಬಿಟ್ರು. ಆ ಪರದೆ ಒಳಗೆ ಒಂದು ಮೂಲೇಲಿ ವಿವಿಧಭಾರತಿ ಅಂತ ಒಂದು ಸ್ಟುಡಿಯೊ ಮಾಡಿದ್ರು. ಏರ್ ಕಂಡೀಷನರ್ ಇಲ್ಲ, ಫ್ಯಾನ್ ಇಟ್ಕೊಂಡು ನಾವು ಕೆಲ್ಸ ಮಾಡ್ಬೇಕಾಗ್ತಿತ್ತು.

ನಾವು ಎನೌನ್ಸ್ ಮಾಡುವಾಗ ಫ್ಯಾನ್ ಆಫ್ ಮಾಡ್ಬೇಕಾಗ್ತಿತ್ತು. ಮತ್ತೆ ನಾವು ಏನೌನ್ಸ್ ಮಾಡ್ಬೇಕಾದ್ರೆ ಮುಂಚೆ ಒಮ್ಮೆ ಆಚೆ ಓಡ್ಹೋಗಿ ಒಬ್ರನ್ನು ಕರ್ಕೊಂಡ್ಬಂದು ಇಲ್ಲಿ ಕಾರಿಡಾರಲ್ಲಿ ಯಾರೂ ಗಲಾಟೆ ಮಾಡದಹಾಗೆ ನೋಡ್ಕೊಳ್ಳಿ ಅಂತಹೇಳಿ ಆಮೇಲೆ ನಾವು ಎನೌನ್ಸ್ ಮಾಡ್ತಿದ್ವಿ. ಆ ಥರದಲ್ಲಿ ಇತ್ತು ಸ್ಟುಡಿಯೊ’ ಎಂದು ಲಕ್ಷ್ಮೀಬಾಯಿಯವರ ಮಾತಿನಲ್ಲೇ ಅನುಭವಕಥನ. ಟ್ರಾನ್ಸ್‌ಮಿಷನ್ ಆದಮೇಲೆ ರಾತ್ರಿ ಹೊತ್ತು ಮನೆಗೆ ಐದಾರು ಕಿ.ಮೀ ದೂರ ನಡೆದುಕೊಂಡೇ
ಹೋಗುತ್ತಿದ್ದ ರಂತೆ. ಬೆಳಗ್ಗೆ ಎದ್ದು ಮತ್ತೆ ನಡೆದುಕೊಂಡು ಸ್ಟುಡಿಯೊಗೆ ಬರುತ್ತಿದ್ದರಂತೆ. ಅವರ ಕಾರ್ಯವೈಖರಿಯನ್ನು ಮೆಚ್ಚಿದ ಆಗಿನ ಆಕಾಶವಾಣಿ ನಿರ್ದೇಶಕರು ಬಂಗಾರದ ಲೇಪ ಹೊದಿಸಿದ ಲೇಖನಿಯನ್ನು ಉಡುಗೊರೆಯಾಗಿ ನೀಡಿದ್ದರಂತೆ.

ಧಾರವಾಡ, ಭದ್ರಾವತಿ, ಮಂಗಳೂರು ನಿಲಯಗಳು ಆರಂಭವಾದಾಗ ಅಲ್ಲಿ ಉದ್ಘೋಷಕರಿಗೆ ತರಬೇತಿಯೂ ಲಕ್ಷ್ಮೀಬಾಯಿಯವರಿಂದಲೇ…’ – ಹೀಗೆ ಒಬ್ಬ ಹಿರಿಯ ಪ್ರಸಾರಕಿಯನ್ನು ಕುರಿತಾದರೆ… ‘ಎನ್ಕೆ ಕುಲಕರ್ಣಿ ಕಾರ್ಯಕ್ರಮಗಳನ್ನು ಹೇಗೆ ರೂಪಿಸ್ತಾ ಇದ್ರು, ಮಾಹಿತಿಗಳನ್ನು ಹೇಗೆ ಕಲೆಹಾಕ್ತಾ ಇದ್ರು ಅನ್ನೋದಕ್ಕೆ
ಒಂದು ನಿದರ್ಶನ: ‘ಇದುವರೆಗೆ ಶ್ರೀಶಂಕರಾಚಾರ್ಯರ ಜೀವನ ಹಾಗೂ ವೇದಾಂತದರ್ಶನವನ್ನು ಕುರಿತ ಸಾಕ್ಷ್ಯಚಿತ್ರ ಕೇಳುತ್ತಿದ್ದಿರಿ. ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು ಬರೆದ ಈ ಶಬ್ದಚಿತ್ರದಲ್ಲಿ ಕಾಲಟಿಯಿಂದ ಮಂತ್ರಘೋಷ ವೇದಪಾಠಗಳನ್ನು ಆಕಾಶವಾಣಿಯ ಕೋಳಿಕ್ಕೋಡ್ ನಿಲಯದ ಮೂಲಕ ಧ್ವನಿಮುದ್ರಿಸಿ ಪಡೆಯಲಾಗಿತ್ತು. ದ್ವಾರಕಾಪೀಠದ ಸ್ವಾಮಿಗಳವರ ಉಪನ್ಯಾಸವನ್ನು ನಮ್ಮ ರಾಜಕೋಟ್ ನಿಲಯದಿಂದ, ಪುರಿಯಲ್ಲಿ ಯೋಗೇಶ್ವರಾನಂದ ತೀರ್ಥರೊಡನೆ ಸಂದರ್ಶನವನ್ನು ಕಟಕ್ ಕೇಂದ್ರದಿಂದ, ಕಾಶ್ಮೀರದ ಶಂಕರಾಚಾರ್ಯರ ಬೆಟ್ಟದ ವಿಷಯವಾಗಿ ಸಂಶೋಧನಾಶಾಖೆಯ ಸಹನಿರ್ದೇಶಕರ ಸಂದರ್ಶನವನ್ನು
ಆಕಾಶವಾಣಿಯ ಶ್ರೀನಗರ ಕೇಂದ್ರದಿಂದ ಪಡೆದುಕೊಳ್ಳಲಾಗಿದೆ.

ಶೃಂಗೇರಿಯ ಶಾರದಾದೇವಾಲಯದ ಮಂತ್ರಘೋಷವನ್ನು ನಮ್ಮ ಧ್ವನಿಮುದ್ರಣ ವರ್ಗದವರು ಆ ಸ್ಥಳಕ್ಕೆ ಭೇಟಿ ಕೊಟ್ಟಾಗ ರಚಿಸಿಕೊಂಡುದು. ಬೆಟಗೇರಿ
ಕೃಷ್ಣಶರ್ಮ ಬರೆದ ಬಾಲಶಂಕರ ನಾಟಕೀಯ ದೃಶ್ಯವನ್ನು ಆಕಾಶವಾಣಿ ಧಾರವಾಡ ಕೇಂದ್ರದಿಂದ ಪಡೆದುದು. ಶೃಂಗೇರಿ ಶಾರದಾಪೀಠಸ್ಥ ಶ್ರೀಗಳಿಂದ ಶ್ರೀಶಂಕರ ಭಗವತ್ಪಾದರ ಸಿದ್ಧಾಂತಸಾರದ ಧ್ವನಿಮುದ್ರಣ ಮಾಡಿದ್ದು ಬೆಂಗಳೂರಿನ ಶಂಕರಮಠದಲ್ಲಿ’. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಪದಾರ್ಪಣೆ ಮಾಡಿದ ಸುದ್ದಿ ಬಂದ ಕೆಲವೇ ನಿಮಿಷಗಳಲ್ಲಿ ‘ತಿಂಗಳ ಲೋಕದ ಅಂಗಳಕ್ಕೇರಿ’ ಪ್ರಸಾರ.

ಅದು ಕೂಡ ಎನ್ಕೆಯವರದೇ ಅದ್ಭುತ ಪ್ರಯೋಗ. ಭಾರತದಲ್ಲಿ ಮೊತ್ತಮೊದಲ ಹಾರ್ಟ್ ಟ್ರಾನ್ಸ್‌ಪ್ಲಾಂಟೇಷನ್ ಆದಾಗ ಅದನ್ನಾಧರಿಸಿ ಒಂದು ರೂಪಕ ಇಡೀ ಭಾರತದಲ್ಲಿ ಏಕೈಕ ಎಂಬಂತೆ, ಧಾರವಾಡದಿಂದ ಪ್ರಸಾರ, ರಾಷ್ಟೀಯ ಮಟ್ಟದಲ್ಲಿ!’ ಅಂತ ಇನ್ನೊಂದು. ಇವು ಒಂದೆರಡು ಸ್ಯಾಂಪಲ್‌ಗಳಷ್ಟೇ. ಹೀಗೆಯೇ
ಪ್ರತಿವಾರದ ಪ್ರತಿ ಕಂತಿನಲ್ಲೂ ಅಪ್ರತಿಮ ಅಸದೃಶ ‘ಬಾನುಲಿ ಕಲಿ’ಗಳ ಬಗೆಗೆ ಅನನ್ಯ, ಅಪರೂಪದ, ಮತ್ತು ಆಪ್ತವೆನಿಸುವ ಮಾಹಿತಿ. ಕೆಲವು ಹೀಗೂ ಇತ್ತೇ!? ಎಂದು ಆಶ್ಚರ್ಯ ತರಿಸಿದರೆ, ಕೆಲವು ನಮ್ಮ ನಾಡು ನಮ್ಮ ನುಡಿ ಬಗ್ಗೆ ಹೆಮ್ಮೆ ತರಿಸಿದವು.

ಶ್ರೋತೃಗಳನ್ನು ದೇವರೆಂದು ತಿಳಿದು ಅವರಿಗೆ ಭಕ್ತಿಯ ಅರ್ಪಣೆಯೆಂದು ಎಂಥೆಂಥ ಕಷ್ಟಗಳನ್ನೆದುರಿಸಿ ಅದೆಷ್ಟು ತಾದಾತ್ಮ್ಯದಿಂದ ಈ ‘ಕಲಿ’ಗಳು ದುಡಿದರು ಎಂಬುದನ್ನು ಮನಗಂಡಾಗ ಭಾವುಕರನ್ನಾಗಿಸುವ ಅಂಶಗಳು ಅದೆಷ್ಟೋ ಬಂದುಹೋದವು ಈ ಸರಣಿಯಲ್ಲಿ. ಹೆಚ್ಚಾಗಿ ಉದ್ಘೋಷಕ/ಕಿಯರನ್ನಷ್ಟೇ ರೇಡಿಯೊ ಧ್ವನಿಗಳೆಂದು ಪರಿಗಣಿಸುವ ನಾವು ತೆರೆಮರೆಯಲ್ಲಿ ಕಾರ್ಯವೆಸಗುವ ನೂರಾರು ಸಿಬ್ಬಂದಿಯ ಬಗ್ಗೆ ಯೋಚಿಸಿರುವುದೂ ಇಲ್ಲ. ಪ್ರಶಂಸಾರ್ಹ ಅಂಶವೆಂದರೆ
ಅಧಿಕಾರ ಶ್ರೇಢಿಯದಾಗಲಿ ಪ್ರತಿಭೆ ಸಾಮರ್ಥ್ಯಗಳದಾಗಲಿ ಯಾವ ತಾರತಮ್ಯವಿಲ್ಲದೆ ಸಮಷ್ಟಿಯಾಗಿ, ನಿಲಯ ನಿರ್ದೇಶಕರಿಂದ ಹಿಡಿದು ಕಾರಕೂನ ಜವಾನರವರೆಗೆ ಎಲ್ಲರ ಪ್ರಸ್ತಾವ ಉಲ್ಲೇಖ ಬಂದಿರುವುದು.

ಆಕಾಶವಾಣಿಯ ಈ ಅಗೋಚರರೆಲ್ಲರೂ ನಮಗೆ ಇನ್ನಷ್ಟು ಆಪ್ತರೆನಿಸಿರುವುದು. ಇಂಥ ‘ವ್ಯಕ್ತಿಕೇಂದ್ರಿತ’ ಕಾರ್ಯಕ್ರಮಗಳನ್ನು, ಅದೂ ಸರಕಾರಿ ವ್ಯವಸ್ಥೆಯ ಪರಿಽಯೊಳಗೆ ನಿರ್ಮಿಸುವಾಗ ಎದುರಾಗುವ ಸವಾಲುಗಳು, ಅರಗಿಸಿಕೊಳ್ಳಬೇಕಾದ ಮುಜುಗರಗಳು, ಅನುಭವಿಸಬೇಕಾಗಿ ಬರುವ ಇಬ್ಬಂದಿತನಗಳು, ಇತಿಮಿತಿಗಳು- ಇವನ್ನೆಲ್ಲ ಸುಮತಿ ಮತ್ತು ತಂಡದವರಷ್ಟೇ ಬಲ್ಲರೋ ಏನೋ. ಆದರೆ ಶ್ರೋತೃಗಳಾಗಿ ನಮಗೆ ದಕ್ಕಿದ್ದು ಒಂದು ಅತ್ಯುತ್ಕೃಷ್ಟ ಮತ್ತು ಅತ್ಯಮೂಲ್ಯ ರೇಡಿಯೊ ಕಾರ್ಯಕ್ರಮ ಸರಣಿ. ಎಲ್ಲ ಕಂತುಗಳ ಯುಟ್ಯೂಬ್ ಪ್ಲೇ-ಲಿಸ್ಟ್ ಇದೆ ಎಂದಿದ್ದೆನಷ್ಟೆ? ನೀವು ಈ ಸರಣಿಯನ್ನು ಕೇಳಿಲ್ಲವಾದರೆ, ಅಥವಾ ಮತ್ತೊಮ್ಮೆ
ಮಗದೊಮ್ಮೆ ಕೇಳಬಯಸುತ್ತೀರಾದರೆ ಪ್ಲೇ-ಲಿಸ್ಟ್‌ನ ಕೊಂಡಿ ಇಲ್ಲಿದೆ: bit.ly/nutebaaka