ಶಶಾಂಕಣ
shashidhara.halady@gmail.com
ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್‌ಗಿರಿ ಬೆಟ್ಟಗಳ ಸಾಲು ನಿಜಕ್ಕೂ ಸುಂದರ. ಆ ಎರಡು ತಾಣಗಳನ್ನು ಸಂಪರ್ಕಿಸುವ ಒಂದು ಕಾಲುದಾರಿಯೂ ಇದೆ; ಚೊಕ್ಕವಾದ ಕಲ್ಲು ಗಳನ್ನು ಒಪ್ಪವಾಗಿ ಜೋಡಿಸಿ, ಒಂದೆರಡು ಕುದುರೆಗಳು ಸಾಗುವಂತೆ ನಿರ್ಮಿಸಿರುವ ಈ ದಾರಿಯಲ್ಲಿ ಚಾರಣ ಮಾಡುವು ದೆಂದರೆ, ಸಹ್ಯಾದ್ರಿಯ ತುದಿಯಲ್ಲಿ ನಡೆಯುವ ಅವಕಾಶ. ಇದನ್ನು ಮೈಸೂರು ಮಹಾರಾಜರ ಕಾಲದಲ್ಲೇ ನಿರ್ಮಿಸಲಾಗಿತ್ತು.
ಇದೇ ಸೆರಗಿನಲ್ಲಿರುವ ಕಲ್ಹತ್ತಗಿರಿಯ ಜಲಪಾತದ ಮೂಲವನ್ನು ಶೋಧಿಸುತ್ತಾ, ನಾವು ಗೆಳೆಯರು ಕೆಮ್ಮಣ್ಣುಗುಂಡಿಯ ಪರ್ವತದಲ್ಲಿ ಚಾರಣ ಮಾಡುತ್ತಿದ್ದೆವು. ೧೯೮೪ನೇ ಇಸವಿ ಇರಬಹುದು. ಅಲ್ಲಿ ಸುತ್ತಲೂ ಬೋಳುಬೋಳಾಗಿ ಕಾಣಿಸುತ್ತಿದ್ದ ಬೆಟ್ಟಗಳಲ್ಲಿ ಅರಣ್ಯ ಇಲಾಖೆಯವರು ಉದ್ದಕ್ಕೂ
ಪಾತಿ ತೋಡಿ ನೀಲಗಿರಿ ಗಿಡಗಳನ್ನು ನೆಡುತ್ತಿದ್ದರು; ಮಳೆ ಹನಿಯುತ್ತಿತ್ತು. ಸ್ವಲ್ಪ ಕೆಳಗೆ, ಬೆಟ್ಟದ ಕಣಿವೆ ಯಲ್ಲಿ, ಹುಲ್ಲುಗಾವಲು ಇಲ್ಲದ ಪ್ರದೇಶದಲ್ಲಿ
ಜೀವವೈವಿಧ್ಯದಿಂದ ತುಂಬಿದ ದಟ್ಟಕಾಡು, ಇನ್ನೊಂದೆಡೆ ಶೋಲಾಕಾಡು ಬೆಳೆದಿತ್ತು. ಆದರೂ, ಇಲ್ಲಿ ಸಾಕಷ್ಟು ಹಣ ವ್ಯಯಿಸಿ ನೀಲಗಿರಿ ಗಿಡಗಳನ್ನು
ಮತ್ತು ನಂತರದ ವರ್ಷಗಳಲ್ಲಿ ಅಕೇಶಿಯಾ ಗಿಡ ಗಳನ್ನು ಸರಕಾರವೇ ಏಕೆ ನೆಡಿಸುತ್ತಿದೆ ಎಂದು ನಮಗಚ್ಚರಿ.
ಬೋಳುಬೆಟ್ಟದಲ್ಲಿ ಗಿಡ ನೆಡುವ ಬದಲು ಅಲ್ಲಿರುವ ದಟ್ಟಕಾಡನ್ನು, ಶೋಲಾಕಾಡನ್ನು ರಕ್ಷಿಸಬಹುದಲ್ಲಾ, ಅತಿಕ್ರಮಣ ಕೃಷಿಗೆ ಒಳಗಾಗುತ್ತಿರುವ ಕಾಡನ್ನು ರಕ್ಷಿಸಿ, ಸಹಜ ವನವನ್ನೇ ರೂಪಿಸಬಹುದಲ್ಲಾ ಎಂಬುದು ನಮ್ಮ ತರ್ಕ. ಆ ಭಾಗದಲ್ಲಿ ನೀಲಗಿರಿ, ಅಕೇಶಿಯಾ ನೆಡುತೋಪು ನಿರ್ಮಿಸು
ವುದು ಅವೈಜ್ಞಾನಿಕ ಎಂದು ನಮ್ಮ ಅಲ್ಪಮತಿಗೆ ಅಂದೇ ಹೊಳೆದಿತ್ತು. ‘ಇದು ಅರಣ್ಯ ಇಲಾಖೆಯ ಹೊಸ ಸಾಹಸ’ ಎಂದು ನಾವು ಹಾಸ್ಯ ಮಾಡುತ್ತಾ,
ಜಲಪಾತದ ತುದಿಗೆ ಸಾಗಿದ್ದೆವು. ಆ ಬೆಟ್ಟಗಳಲ್ಲಿ, ಹುಲ್ಲುಗಾವಲಷ್ಟೇ ಬೆಳೆವಂಥ ಜಾಗದಲ್ಲಿ ಸರಕಾರ ಮರಗಳನ್ನೇಕೆ ಬೆಳೆಸುತ್ತಿದೆ ಎಂಬ ಪ್ರಶ್ನೆಗೆ ಅಂದು ನಮಗೆ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ.
ಆದರೆ ರಾಜ್ಯದ ಉದ್ದಗಲಕ್ಕೂ ನೀಲಗಿರಿ, ಅಕೇಶಿಯಾದಂಥ ವಿದೇಶಿ ಮೂಲದ ಮರಗಳನ್ನು ಬೃಹತ್ ಪ್ರಮಾಣದಲ್ಲಿ ನಾಟಿ ಮಾಡುವ ಕಾಮ
ಗಾರಿ ಕಳೆದ ನಾಲ್ಕಾರು ದಶಕಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ನೀಲಗಿರಿ ತೋಪು ಬೆಳೆಸಿದಲ್ಲಿ ಅಂತರ್ಜಲ ಕುಸಿಯುತ್ತದೆ ಎಂಬ ಅಧ್ಯಯನ ಹಳೆ ಯದು. ಅಕೇಶಿಯಾ ನೆಟ್ಟ ಜಾಗದಲ್ಲಿ ಅಂತರ್ಜಲ ಕುಸಿಯುವುದು ಮಾತ್ರವಲ್ಲ, ಬೇರಾವ ಸ್ಥಳೀಯ ಮರಗಿಡಗಳು ಚಿಗುರೊಡೆಯಲಾರವು ಎಂಬ ಅಧ್ಯಯನವೂ ನಡೆದಿದೆ. ಆದರೆ, ಕಾಗದ ತಯಾರಿಕೆ ಮೊದಲಾದ ಕಾರಣ ನೀಡುತ್ತಾ, ಈ ಮರಗಳನ್ನು ಭಾರಿ ಪ್ರಮಾಣದಲ್ಲಿ ನಾಟಿ
ಮಾಡುವ, ಆ ತೋಪುಗಳನ್ನು ರಕ್ಷಿಸುವ ಕೆಲಸ ಮುಂದುವರಿದಿದೆ.
ಜತೆಗೆ, ಅಕೇಶಿಯಾದ ವಿಚಿತ್ರ ಗುಣದಿಂದಾಗಿ, ಒಮ್ಮೆ ಅದರೆ ನೆಡುತೋಪು ನಿರ್ಮಾಣಗೊಂಡ ನಂತರ, ಅಲ್ಲಿ ಬೇರಾವುದೇ ಯತ್ನವಿಲ್ಲದೆ ಅವು ಭಾರಿ ಪ್ರಮಾಣದಲ್ಲಿ ಮರು ಹುಟ್ಟು ಪಡೆದು, ತಂತಾನಾಗಿಯೇ ಅಕೇಶಿಯಾ ಕಾಡು ಬೆಳೆಯುವುದು ಸಾಮಾನ್ಯವಾಗಿದೆ. ಪಶ್ಚಿಮ ಘಟ್ಟ, ಮಲೆನಾಡು, ಸಹ್ಯಾದ್ರಿಯ ನಿಬಿಡಾರಣ್ಯದ ಅಂಚು, ಹುಲ್ಲು ಮಾತ್ರ ಬೆಳೆಯು ವಂಥ ಪರ್ವತ ತುದಿಗಳು ಮತ್ತು ಶೋಲಾ ಕಾಡಿನಲ್ಲಿ, ನೀಲಗಿರಿ, ಅಕೇಶಿಯಾ ನೆಡುವ ಮೂಲಕ ಸರಕಾರಿ ಇಲಾಖೆಗಳು ೧೯೭೦-೮೦ರ ದಶಕದಲ್ಲಿ ಒಂದು ಅಪಾಯಕಾರಿ ಪರಿಸರ ವಿರೋಧಿ ಕಾಮಗಾರಿಯನ್ನು ಆರಂಭಿಸಿವೆ.
ಅಂದು ರೂಪುಗೊಂಡ ಏಕಸಸ್ಯ ನೆಡುತೋಪುಗಳು, ಅಕೇಶಿಯಾ ಕಾಡುಗಳು, ಕ್ರಮೇಣ ಸಹ್ಯಾದ್ರಿಯ ಕೆಲ ಭಾಗ ಮತ್ತು ಆ ತಪ್ಪಲಿನ ಕಾಡುಗಳ ನಾಶ, ಜೀವವೈವಿಧ್ಯದ ನಿರ್ನಾಮದಲ್ಲಿ ಬಹುತೇಕ ಯಶಸ್ವಿಯಾಗಿವೆ. ಸರಕಾರಿ ಇಲಾಖೆಗಳಿಗಾಗಲಿ, ಆರ್ಥಿಕ ಲಾಭ ಬಯಸುವ ಕೃಷಿಕರಿಗಾಗಲಿ, ಬೇಗ ಬೆಳೆವ ಮರಗಳನ್ನು ಬೆಳೆದು ಲಾಭ ಗಳಿಸ ಬಯಸುವ ಸಂಸ್ಥೆ/ವ್ಯಕ್ತಿಗಳಿಗಾಗಲಿ, ನಾಡಿನ ಸಹಜ ಕಾಡನ್ನು ರಕ್ಷಿಸುವ ಆಸಕ್ತಿಯೇ ಇಲ್ಲವೆನ್ನಬಹುದು.
ಇದಕ್ಕೆ ಕೃಷಿಕರು ಕೊಡುವ ಕಾರಣವೆಂದರೆ, ನೆಡುತೋಪುಗಳನ್ನು ಒಂದೆರಡು ದಶಕಗಳಲ್ಲಿ ಕಟಾವು ಮಾಡಿ ಮಾರಬಹುದು, ಆದರೆ ಸಹಜ
ಕಾಡಿನ ಮರಗಳನ್ನು ಕಡಿದು ಮಾರಲು ನಾಲ್ಕಾರು ದಶಕ ಕಾಯಬೇಕು. ಆರ್ಥಿಕ ದೃಷ್ಟಿಯಲ್ಲಿ ಲೆಕ್ಕ ಹಾಕಿದರೆ ಇದು ನಿಜವಿರಬಹುದು; ಆದರೆ ಇದೇ
ಲೆಕ್ಕಾಚಾರವನ್ನು ಅರಣ್ಯ ಇಲಾಖೆಯೂ ಮಾಡುತ್ತಿದೆ, ನೆಡುತೋಪು ನೆಟ್ಟು ಆರ್ಥಿಕಲಾಭ ಗಳಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಹಾಗಾದರೆ, ಪರಿಸರ
ರಕ್ಷಣೆಯ ಘೋಷಣೆಗೆ ಏನರ್ಥ? ಏಕಸಸ್ಯ ನೆಡುತೋಪಿನ ಅನಾಹುತದ ಕುರಿತು ಹೀಗೆಂದರೆ, ಅದು ಊಹಾಪೋಹವಲ್ಲ, ಪರಿಸರ ಪ್ರೇಮಿಗಳ ಬಡಬಡಿಕೆಯೂ ಅಲ್ಲ. ಇಂಥ ಅನಾಹುತಗಳು ನಡೆದಿದ್ದಕ್ಕೆ ಅದಾಗಲೇ ಪುರಾವೆ ಗಳಿವೆ. ಸುಮಾರು ಒಂದು ಶತಮಾನದಿಂದಲೂ ಇಂಥ ನೆಡುತೋಪು ಕಾಮಗಾರಿ ನಡೆದಿರುವ ಕೊಡೈಕೆನಾಲ್ ಸುತ್ತಮುತ್ತಲ ಬೆಟ್ಟ ಪ್ರದೇಶದಲ್ಲಿ, ಹಲವು ಸಸ್ಯಗಳು, ಪ್ರಾಣಿ-ಪಕ್ಷಿಗಳು ಗಣನೀಯ
ವಾಗಿ ಕಮ್ಮಿಯಾಗಿವೆ.
ಕೆಲವೇ ದಶಕಗಳ ಹಿಂದೆ ಅಲ್ಲಿ ಸಾಮಾನ್ಯ ಎನಿಸಿದ್ದ ನೀಲಗಿರಿ ಪಿಪಿಟ್ ಎಂಬ ಹಕ್ಕಿಯಿಂದು ವಿರಳವಾಗಿದೆ. ಇತರ ಕೆಲ ಹಕ್ಕಿ, ಕೀಟ ಗಳು ಕಣ್ಮರೆಯಾಗುವ ಹಂತದಲ್ಲಿವೆ. ಭವಿಷ್ಯದಲ್ಲಿ ಎರಗಬಹುದಾದ ಇಂಥದ್ದೇ ಅನಾಹುತಕ್ಕೆ ರಾಜ್ಯದ ಕಾಡು, ಕುರುಚಲು ಕಾಡು, ಹುಲ್ಲುಗಾವಲುಗಳನ್ನು
ಹದಗೊಳಿಸಿವೆ ನಮ್ಮ ಸರಕಾರಿ ಇಲಾಖೆಗಳು. ಇತ್ತೀಚೆಗೆ ಗೋಪಾಲಸ್ವಾಮಿ ಬೆಟ್ಟ ನೋಡುವ ಅವಕಾಶ ದೊರಕಿತ್ತು. ಗುಂಡ್ಲುಪೇಟೆಯಿಂದ ಈ
ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಬೋಳು ಬಯಲಿನಂಥ ಜಾಗ, ಕೃಷಿಭೂಮಿ; ಅರಣ್ಯ ಇಲಾಖೆಯ ರಕ್ಷಣೆಯಲ್ಲಿರುವ ಆರಂಭದ ಭಾಗದ
ಕುರುಚಲು ಕಾಡು ಇರುವ ಜಾಗದಲ್ಲಿ ಸಹಜವಾಗಿ ಬೆಳೆಯುವ ಮರಗಿಡಗಳು ಬಹುತೇಕ ನಾಶವಾಗಿದ್ದವು.
ಬೆಟ್ಟವೇರುತ್ತಾ ಹೋದಂತೆ, ದುರ್ಗಮ ಎನಿಸಬಹುದಾದ ಇಳಿಜಾರು ಪ್ರದೇಶದಲ್ಲಿ ನಿಧಾನ ವಾಗಿ ಸಹಜಕಾಡು ಕಾಣತೊಡಗಿತು. ಹುಲ್ಲು
ಗಾವಲು ಮತ್ತು ಕುರುಚಲು ಕಾಡು ಬೆಳೆದಿದ್ದ ಆ ಪ್ರದೇಶ ಜಿಂಕೆ, ಆನೆಗಳಿಗೆ ಬಹಳ ಇಷ್ಟ. ಅವು ಒಮ್ಮೊಮ್ಮೆ ಧೈರ್ಯವಾಗಿ, ಹಂಗಳ ಗ್ರಾಮದ
ತನಕವೂ ಬಂದು ಬೆಟ್ಟದ ಇಳಿಜಾರಿನಲ್ಲಿನ ಹುಲ್ಲು, ಗಿಡದ ಚಿಗುರನ್ನು ತಿನ್ನುತ್ತವೆ. ಮನುಷ್ಯನ ವಸತಿಗೆ ಇಷ್ಟೊಂದು ಸಮೀಪಕ್ಕೆ ಈ ವನ್ಯಜೀವಿಗಳು ಅದೇಕೆ ಬರುತ್ತವೆ ಎಂದು ಹೊಸಬರಿಗೆ ಅಚ್ಚರಿಯಾಗ ಬಹುದು; ಆದರೆ, ಇದು ಅವುಗಳ ಪುರಾತನ ವಾಸಸ್ಥಳ. ಮನುಷ್ಯ ನಿಧಾನವಾಗಿ ಅತಿಕ್ರಮಿಸುತ್ತಾ ಬಂದು, ಕೆಲವೇ ಜಾಗವನ್ನು ಆ ವನ್ಯಜೀವಿಗಳಿಗೆ ಉಳಿಸಿದ್ದಾನೆ. ಅವು ಅಭ್ಯಾಸ ಬಲದಿಂದ ಅಲ್ಲಿಗೆ ಬರುತ್ತವೆ.
ಈ ಬೆಟ್ಟದಲ್ಲಿ ಹೊರನೋಟಕ್ಕೆ ಅರಣ್ಯ ಸಂರಕ್ಷಣೆಯ ಕೆಲಸ ನಡೆದಿದೆ. ಬೆಟ್ಟದ ತಳದಲ್ಲಿರುವ ಗೇಟಿನಿಂದ ಮುಂದೆ ಯಾವುದೇ ಖಾಸಗಿ ವಾಹನ ಚಲಿಸುವಂತಿಲ್ಲ. ಸರಕಾರಿ ಬಸ್ಸಿನಲ್ಲಿ, ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿ ಮಾತ್ರ ಚಲಿಸಬಹುದು. ಆ ಬಸ್ ಏರುವ ಪ್ರಯಾಣಿಕರನ್ನು ಇಲಾಖಾ ಸಿಬ್ಬಂದಿ ತಪಾಸಿಸಿ ಒಳಗೆ ಬಿಡುತ್ತಾರೆ. ಪ್ಲಾಸ್ಟಿಕ್ ಬಾಟಲಿಗಳನ್ನು ಬೆಟ್ಟದ ಮೇಲಕ್ಕೆ ಒಯ್ಯುವಂತಿಲ್ಲ ಎಂಬ ನಿಯಮ ಮಾಡಿದ್ದು, ಇದರಿಂದಾಗಿ ಸಣ್ಣ ಮಟ್ಟದ ಪರಿಸರ ರಕ್ಷಣೆ ನಡೆದಿದೆ. ಬಸ್ ನಿಧಾನವಾಗಿ ಮೇಲೇರ ತೊಡಗಿದಂತೆ, ಬೋಳುಜಾಗ, ಬೆಟ್ಟಗಳಲ್ಲಿ ಹಸಿರು ಗಿಡಮರ ಕಾಣತೊಡಗಿದವು. ತುಸು ದೂರದ ಬೆಟ್ಟದ ಇಳಿಜಾರಿನಲ್ಲಿ ಒಂಟಿಸಲಗ ನಿಂತಿದ್ದನ್ನು ಚಾಲಕ ತೋರಿಸಿದರು.
ಅದು ಏಕಾಂಗಿಯಾಗಿ ನಿಂತು, ದೂರದಲ್ಲಿ ಚಲಿಸುತ್ತಿದ್ದ ನಮ್ಮ ಬಸ್‌ನ್ನೇ ನೋಡುತ್ತಿದ್ದ ರೀತಿ ಮಾತ್ರ, ಮನುಷ್ಯನ ವಿರುದ್ಧ ಪ್ರಕೃತಿ ಮಾತೆಗೆ ಅದು ದೂರು ನೀಡುವಂತಿತ್ತು. ಬೆಟ್ಟದ ತುದಿಗೆ ಹೋದಾಗ, ಅಲ್ಲಿ ಅರಣ್ಯ ಇಲಾಖೆಯವರು ನೀಲಗಿರಿ ಬೆಳೆಸಲು ಮಾಡಿದ ಯತ್ನ ಮಾತ್ರ ದಂಗುಬಡಿಸಿತು. ಬಹುಶಃ ಈ ಮಾತು ಕೆಲವರಿಗೆ ಕಹಿ ಎನಿಸಬಹುದು: ಗೋಪಾಲ ಸ್ವಾಮಿ ಬೆಟ್ಟದಂಥ ರಕ್ಷಿತ ಪ್ರದೇಶದಲ್ಲಿ ನೀಲಗಿರಿ ಯನ್ನೇಕೆ ನೆಡಬೇಕು? ಅಲ್ಲೇನು ನೆಡುತೋಪು ಮಾಡಿ, ಮರ ಕಡಿದು ಸಾಗಿಸಿ, ಕಾಗದದ ಕಾರ್ಖಾನೆಗೆ ಕಳುಹಿಸಬೇಕೆ? ವನ್ಯಜೀವಿಗಳ ರಕ್ಷಣೆ ಗೆಂದು ವಿವಿಧ ನಿರ್ಬಂಧಗಳನ್ನು ಹೇರಿದ್ದು ಸರಿ; ಆದರೆ ಅಲ್ಲಿ ಸಹಜ ಕಾಡನ್ನು ಬೆಳೆಯಗೊಡಬೇಕಲ್ಲವೇ? ಸಾವಿರಾರು ವರ್ಷಗಳಿಂದ ಬೆಳೆದಿರುವ ಆ ಕಾಡು ಒಂದೊಮ್ಮೆ ನಾಶವಾಗಿದ್ದರೂ, ಆ ಜಾಗಕ್ಕೆ ಬೇಲಿ ಹಾಕಿಯೋ, ರಕ್ಷಣೆ ನೀಡಿಯೋ ಸುಮ್ಮನಿದ್ದರೆ ಸಾಕು, ಹತ್ತಾರು ವರ್ಷಗಳಲ್ಲಿ ಮೊದಲಿನ ಕಾಡು ಬೆಳೆಯುತ್ತದೆ!
ಸಹಜ ಕಾಡನ್ನು ಬೆಳೆಸುವ ಬಗೆಯನ್ನು ನಾವ್ಯಾರೂ ಅರಣ್ಯ ಇಲಾಖೆಗೆ ಹೇಳಿಕೊಡ ಬೇಕಾಗಿಲ್ಲ.
ಕಾಡು ಪ್ರದೇಶಕ್ಕೆ ರಕ್ಷಣೆಯಿತ್ತು, ಮೇಕೆಗಳು ಗಿಡಗಳ ಕುಡಿ ತಿನ್ನದಂತೆ, ಮನುಷ್ಯರು ಗಿಡ ಕಡಿಯದಂತೆ ನೋಡಿಕೊಂಡರೆ ಸಾಕು, ಕಾಡು
ತನ್ನಷ್ಟಕ್ಕೆ ಬೆಳೆಯುತ್ತದೆ. ಆದರೆ, ಗೋಪಾಲಸ್ವಾಮಿ ಬೆಟ್ಟದಂಥ ಸುಂದರ, ರಕ್ಷಿತ ಪ್ರದೇಶದಲ್ಲಿ ನೀಲಗಿರಿ ಗಳನ್ನು ಕಂಡು ಅಚ್ಚರಿಯೆನಿಸಿತು. ಬಹುಶಃ
ಹಿಂದೊಮ್ಮೆ ನೆಟ್ಟ ಆ ಗಿಡಗಳು ಇಂದು ಎತ್ತರಕ್ಕೆ ಬೆಳೆದಿವೆ. ನಂತರದ ವರ್ಷಗಳಲ್ಲಿ ಅಲ್ಲಿ ನೀಲಗಿರಿ/ ಅಕೇಶಿಯಾದಂಥ ಪರಿಸರ-ವಿರೋಧಿ ಗಿಡಗಳನ್ನು ಬೆಳೆಸಿದಂತಿಲ್ಲ. ಮುಂದೆ ಇಂಥ ಏಕಸಸ್ಯದ ನೆಡುತೋಪನ್ನು ದಯವಿಟ್ಟು ಇಲ್ಲಿ ಬೆಳೆಸಬೇಡಿ ಎಂಬುದು ಕಳಕಳಿಯ ಮನವಿ. ಆದರೆ ಇಂಥ ಮನವಿಯನ್ನು ರಾಜ್ಯದ ಮಲೆನಾಡಿನ ಜನರು ಈಗ ಮಾಡಿದರೆ, ಅದು ಅರಣ್ಯರೋದನವೇ ಆದೀತು!
ಇಂದು ಶಿವಮೊಗ್ಗ, ಉಡುಪಿ ಜಿಲ್ಲೆಗಳು, ಉತ್ತರ ಕನ್ನಡದ ಕರಾವಳಿ ಪ್ರದೇಶ ಇಲ್ಲೆಲ್ಲಾ ಅಕೇಶಿಯಾ ಕಾಡು ಬೆಳೆದಿದೆ. ಕೆಲವೆಡೆಯಂತೂ ಎತ್ತ ನೋಡಿದರೂ ಅಕೇಶಿಯಾ. ಶಿವಮೊಗ್ಗ ಜಿಲ್ಲೆಯ ವಿಶಾಲ ಪ್ರದೇಶವನ್ನು ಅಕೇಶಿಯಾ ಬೆಳೆಯಲು ಕಂಪನಿಗಳಿಗೆ ಗುತ್ತಿಗೆ ಕೊಡಲಾಗಿತ್ತು; ಕಾಗದದ ಕಾರ್ಖಾನೆ ಮುಚ್ಚಿ ಹೋಗಿದ್ದರೂ, ಅಕೇಶಿಯಾ ಬೆಳೆಯುವ ‘ಉದ್ಯಮ’ ಚಾಲೂ ಇರುವಂತೆ ನೋಡಿಕೊಳ್ಳುವ ಯತ್ನಗಳೂ ಆಗಿದ್ದವು. ಅಂದರೆ, ಪರಿಸರದ ರಕ್ಷಣೆ ಯಾಗಲಿ ಬಿಡಲಿ, ಅಕೇಶಿಯಾದಂಥ ಕಳೆ ಸ್ವರೂಪಿಯು ದಟ್ಟವಾಗಿ ಬೆಳೆದು ನೆಲ, ಅಂತರ್ಜಲ ವನ್ನು ಹಾಳುಮಾಡಿಬಿಡಲಿ, ಸ್ಥಳೀಯ ಗಿಡಮರ ಗಳು ನಾಶವಾಗಿಬಿಡಲಿ ಎಂದಂತಾಯಿತು.
ಇಂಥ ತುರ್ತು ಸನ್ನಿವೇಶದಲ್ಲೂ ಅಕೇಶಿಯಾ ಬೆಳೆಸಲು ಸರಕಾರ ಸೇರಿದಂತೆ ನಾನಾ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಇದರಿಂದಾಗಿ, ಉಡುಪಿ, ಶಿವಮೊಗ್ಗ ಜಿಲ್ಲೆ ಗಳ ಕೆಲ ಭಾಗಗಳಲ್ಲಿ, ಸಹಜಕಾಡು ನಾಮಾವಶೇಷ ವಾಗುವುದರಲ್ಲಿದೆ; ಆ ಪ್ರದೇಶದ ಇತರೆಲ್ಲಾ ಸಸ್ಯಪ್ರಭೇದಗಳು ಸ್ಥಳೀಯವಾಗಿ ಕಣ್ಮರೆಯಾಗುವ ಹಂತದಲ್ಲಿವೆ. ಆ ಸ್ಥಳೀಯ ಗಿಡ ಮರ ಬಳ್ಳಿ ಮತ್ತು ಇಕೋಸಿಸ್ಟಂನ್ನು ನಂಬಿ, ಅದೆಷ್ಟೋ ವರ್ಷಗಳಿಂದ ಬದುಕು ಸಾಗಿಸುತ್ತಿದ್ದ ಹಕ್ಕಿ, ಕೀಟ, ಓತಿ, ಹಾರುವ ಓತಿ, ಆಮೆ, ಹಾವು, ಮೀನು, ಏಡಿಯಂಥ ಜೀವಿಗಳು ಸ್ಥಳೀಯವಾಗಿ ತಮ್ಮ ನೆಲೆಯನ್ನೇ ಕಳೆದುಕೊಳ್ಳುವ ಅಪಾಯದಲ್ಲಿವೆ. ಈಗಾಗಲೇ ಕೆಲವು ಪ್ರದೇಶಗಳಿಂದ ಹಕ್ಕಿ, ಕೀಟ, ಪತಂಗ, ಚಿಟ್ಟೆಗಳು ಕಣ್ಮರೆಯಾಗಿವೆ.
ದುರಂತವೆಂದರೆ, ಕಳೆದ ನಾಲ್ಕಾರು ದಶಕಗಳಿಂದ ನಡೆದಿರುವ ಈ ಜೀವವೈವಿಧ್ಯದ ನಾಶ/ಕಣ್ಮರೆಯ ವಿಸ್ತೃತ ಅಧ್ಯಯನ ನಡೆದಂತಿಲ್ಲ; ಅಕಸ್ಮಾತ್ ನಡೆದಿದ್ದರೆ ಅದರ ವಿವರ ಜನಕ್ಕೆ ತಲುಪಿಲ್ಲ. ವಿಶ್ವವಿದ್ಯಾಲಯಗಳ ಸಸ್ಯಶಾಸ ವಿಭಾಗಗಳು ಇಂಥ ಅಧ್ಯಯನ ನಡೆಸಿದರೆ, ಅಕೇಶಿಯಾದಿಂದ ಆದ
ಹಾನಿ ತಿಳಿಯಬಹುದು. ದಶಕವಾರು/ಪ್ರದೇಶ ವಾರು ಹಾನಿ, ಸಹ್ಯಾದ್ರಿ ತಪ್ಪಲು/ಎತ್ತರದ ಪ್ರದೇಶ ದಲ್ಲಿನ ಹಾನಿ, ಗದ್ದೆಗಳಲ್ಲಿ, ಖಾಸಗಿ ಅರಣ್ಯದಲ್ಲಿ
ಅಕೇಶಿಯಾ ಬೆಳೆಯಿಂದ ಆದ ಪರಿಸರ ಹಾನಿ ಇಂಥ ಹಲವು ಆಯಾಮದ ಅಧ್ಯಯನ ಇನ್ನಾದರೂ ನಡೆಯಬೇಕು ಮತ್ತು ಅದರ ವಿವರಗಳನ್ನು
ಜನರಿಗೆ ತಲುಪಿಸಬೇಕೆಂದು ಕೋರುವೆ. ಹಾನಿಯ ವಿವರ ತಿಳಿದಾಗ, ಮುಂದಿನ ವರ್ಷಗಳಲ್ಲಾದರೂ ಅದನ್ನು ಸರಿಪಡಿಸುವ ಕೆಲಸ ಮಾಡಬಹುದು.
ಪರಿಸರ ಸಂರಕ್ಷಣೆಗೆ ಈಗಲಾದರೂ ಕಟಿಬದ್ಧರಾಗ ದಿದ್ದರೆ, ಮುಂದಿನ ದಿನಗಳಲ್ಲಿ ಮನುಷ್ಯನ ಬದುಕಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗುವುದು
ಖಚಿತ.