ಮುಹೂರ್ತ ವಿಶೇಷ
ಶ್ರೀ ಗಣೇಶ ಭಟ್ಟ
ಬೃಹತ್ಪರಾಶರ ಸಂಹಿತೆಯಲ್ಲಿ ದಾನಮೇಕಂ ಕಲೌಯುಗೇ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಽ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ-ಸಹಕಾರ-ಸೇವೆ ಮಾಡಿದರೇ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ.
ಬೇಸಿಗೆಯ ಪ್ರಖರವಾದ ಬೇಗೆ ಎಲ್ಲೆಲ್ಲೂ ವ್ಯಾಪಿಸಿರುವ ಸಮಯದಲ್ಲಿ ಪರಶುರಾಮ ಜಯಂತಿ, ಶಂಕರ ಜಯಂತಿ, ನರಸಿಂಹ ಜಯಂತಿ, ಕೂರ್ಮ ಜಯಂತಿ, ಶನೈಶ್ಚರ ಜಯಂತಿ ಮೊದಲಾದ ಧಾರ್ಮಿಕವಾಗಿ ಮಹತ್ವ ಪಡೆದ ಹಬ್ಬಗಳಲ್ಲಿ ಬಹುಮುಖ್ಯವಾಗಿ ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ದಂದು ಆಚರಿಸಲ್ಪಡುವ ಹಬ್ಬವೇ ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ. ಅಕ್ಷಯ ತೃತೀಯ ದಿನದ ವಿಶೇಷತೆ: ಅಕ್ಷಯ ತೃತೀಯೆ ಕೃತಯುಗದ ಆರಂಭದ ದಿನ.
ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ. ಅಂದರೆ ಪರಶುರಾಮ ಜಯಂತಿ. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನ. ಹಿಂದೂ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣ ಕ್ರಾಂತಿಯ ರೂವಾರಿ ಬಸವೇಶ್ವರರ
ಜನ್ಮದಿನವೂ ಹೌದು.
ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯೆಯು ವರ್ಷದ ಮೂರುವರೇ ಶುಭ ದಿನಗಳಾದ ಅಕ್ಷಯ ತೃತೀಯೆ, ವಿಜಯದಶಮಿ, ದೀಪಾವಳಿ ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಆ ಕಾರಣ ಕ್ಕಾಗಿ ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಬಹುದು.
ಅಕ್ಷಯ ತೃತೀಯ ಮಹತ್ವವೇನು?: ನಿರ್ಣಯ ಸಿಂಧುವಿನ ಪ್ರಕಾರ ವೈಶಾಖ ಶುಕ್ಲ ತೃತೀಯ ಅಕ್ಷಯ ತೃತೀಯೋಚ್ಯತೇ|| ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ದಿನವೇ ಅಕ್ಷಯ ತೃತೀಯ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯ(ನಾಶ)ವೇ ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ. ಭವಿಷ್ಯಪುರಾಣದಲ್ಲಿ-ಯತ್ಕಿಂಚಿತ್ ದೀಯತೇ ದಾನಂ ಸ್ವಲ್ಪಂ ವಾ ಯದಿ ವಾ ಬಹು| ತತ್ಸರ್ವಂ ಅಕ್ಷಯಂ ಯಸ್ಮಾತ್ ತೇನೇಯಂ ಅಕ್ಷಯಾ ಸ್ಮತಾ|| ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.
ಯಾ ಮನ್ವಾದ್ಯಾ ಯುಗಾದ್ಯಾಶ್ಚ ತಿಥಿಯಸ್ತಾಸು ಮಾನವಃ| ಸ್ನಾತ್ವಾ ಹುತ್ವಾ ಚ ದತ್ವಾ ಚ ಜಪ್ತ್ವಾನಂತ ಫಲಂ ಲಭೇತ್|| ಉದಕುಂಭಾನ್ಸಕನಕಾನ್ ಸಾನ್ನಾನ್ ಸರ್ವರಸೈಃ ಸಹ| ಯವಗೋಧೂಮ ಚಣಕಾನ್ ಸಕ್ತುದಧ್ಯೋದನಂ ತಥಾ| ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂ ದಾನೇ ಪ್ರಶಸ್ಯತೇ|| ಅಕ್ಷಯ
ಫಲದಾಯಿನಿಯಾದ ಈ ದಿನ ದೇವ-ಪಿತೃಪೂಜೆಗೆ ಪ್ರಶಸ್ತವಾಗಿದು, ಗಂಗಾದಿ ಪುಣ್ಯನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನ್ನು ಉದ್ದೇಶಿಸಿ ಹೋಮ, ಬೇಸಿಗೆ ಕಾಲದಲ್ಲಿ ಹೇಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ
ನೀಗಿಸುವ ಕಬ್ಬಿನರಸ ಮುಂತಾದ ಪಾನೀಯಗಳು, ಅಕ್ಕಿ, ಗೋಧಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮ ಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆ ದಾನ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ, ಅನಂತ-ಲ
ದೊರಕುವುದು ಎಂದು ಮಹಾಭಾರತ-ಭವಿಷ್ಯ ಪುರಾಣವೇ ಮೊದಲಾದ ಪುರಾಣಗಳಲ್ಲಿ ಹೇಳಿದೆ.
ಬೃಹತ್ಪರಾಶರ ಸಂಹಿತೆಯಲ್ಲಿ ದಾನಮೇಕಂ ಕಲೌಯುಗೇ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ
ಅವಶ್ಯಕತೆಯಿದೆಯೋ ಅವರಿಗೆ ತನು- ಮನ-ಧನಗಳ ಸಹಾಯ- ಸಹಕಾರ-ಸೇವೆ ಮಾಡಿದರೇ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ. ದಾನದಿಂದಲೇ ಮನಸ್ಸಂತೋಷ, ಚಿತ್ತಶ್ಶುದ್ಧಿ ದೊರಕುವುದು, ಅಕ್ಷಯ ಮೋಕ್ಷಸ್ಯ ಕಾರಣಮ್ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷಕ್ಕೂ ಕಾರಣವಾಗುವುದು ಎಂದು ಪುರಾಣಗಳೂ ಸಾರಿವೆ.
ಅಕ್ಷಯ ತೃತೀಯದ ಪುರಾಣಕಥೆ : ಅಕ್ಷಯ ತೃತೀಯ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದು ಹೀಗಿದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಅತ್ಯಂತ ಸದಾಚಾರಿಯಾದ ಆತ ದೇವತೆಗಳನ್ನು, ವಿಪ್ರರನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಷಯ ತೃತೀಯ ವ್ರತದ ಮಹತ್ವ
ಅರಿತ ಆತ, ಅಕ್ಷಯ ತೃತೀಯ ಹಬ್ಬದ ದಿನದಂದು ಗಂಗಾನದಿಯಲ್ಲಿ ಸ್ನಾನ ಮಾಡಿ, ವಿಽಪೂರ್ವಕ ಭಗವಂತನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ, ವಸ, ಆಹಾರ ಧಾನ್ಯಗಳನ್ನು ದಾನ ಮಾಡಿದ. ವರ್ಷ ಕಳೆದಂತೆ ಅಶಕ್ತನಾಗಿಯೂ, ವೃದ್ಧನಾಗಿಯೂ ಈ ದಿನ ಉಪವಾಸ-ದಾನ-ಧರ್ಮಗಳನ್ನು ಕೈಗೊಂಡನು.
ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದನು. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ ತೃತೀಯ ವ್ರತವನ್ನು ಆಚರಿಸಿದ. ಅಂದು ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿದ. ಸಾಕ್ಷಾತ್ ದೇವೆಂದ್ರನೇ ವೇಷ ಮರೆಸಿ ವಿಪ್ರ ವೇಷ ತೊಟ್ಟು ಅಕ್ಷಯ ತೃತೀಯದಂದು ರಾಜನ ದಾನಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ. ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯ ಕುರಿತಾಗಿ ಸ್ವಲ್ಪವೂ ಅಹಂಕಾರವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿಯಾಗಿ ರಾಜ್ಯವಾಳಿದರೂ ಧರ್ಮ ಮಾರ್ಗದಿಂದ ವಿಚಲಿತ ನಾಗಿರಲಿಲ್ಲ. ಅಕ್ಷಯ ತೃತೀಯ ದಿನದಂದು ರಾಜ ನಡೆಸಿದ ದೇವಪೂಜನ ಹಾಗೂ ಸತ್ಪಾತ್ರರಿಗೆ ಸುವಸ್ತುಗಳನ್ನು ನೀಡಿದ ಫಲವಾಗಿ ಧನವಂತ- ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.
ಆಚರಣೆ ಹೇಗೆ ಮಾಡಬೇಕು?: ಎಲ್ಲಾ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ ಮಂಗಲಸ್ನಾನ, ನವವಸಧಾರಣೆ ಮಾಡಿ, ಲಕ್ಷ್ಮೀನಾರಾ ಯಣನನ್ನು ಸಂದರ್ಶಿಸಿ, ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮ ಕಾಲದಲ್ಲಿ ವಸ್ತುಗಳನ್ನು ದಾನ ಮಾಡಿ, ಅಥವಾ ದಾನ ಮಾಡುವೆ ಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯದ ಮಹತ್ವ ಸಾರುವ ಪುರಾಣ ಕಥೆ ಶ್ರವಣ ಮಾಡಬೇಕು.
ಪುರಾಣಗಳಲ್ಲಿ ಅಕ್ಷಯ ತೃತೀಯದಂದು ಬಂಗಾರ ಖರೀದಿಸಿ ಎಂದು ಹೇಳಿದ್ದಾರೆಯೇ? : ಪದ್ಮಪುರಾಣದ ೬೪ನೇ ಅಧ್ಯಾಯದಲ್ಲಿ, ವೈಶಾಖ ಶುಕ್ಲಪಕ್ಷೇ ತು ತೃತೀಯ ಯೈರುಪೋಷಿತಾ| ಅಕ್ಷಯಂ ಫಲಮಾಪ್ರೋತಿ ಸರ್ವಸ್ಯ ಸುಕೃತಸ್ಯ ಚ|| ಸಾ ತಥಾ ಕೃತ್ತಿ ಕೋಪೇತಾ ವಿಶೇಷೇಣ ಸುಪೂಜಿತಾ| ತತ್ರ ದತ್ತಂ ಹುತಂ ಜಪ್ತಂ ಸರ್ವಮಕ್ಷಯಮುಚ್ಯತೇ|| ಯಾರು ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ದಿನ ವ್ರತೋಪವಾಸಾದಿಗಳನ್ನು ಮಾಡುವರೋ ಅವರು ತಮ್ಮ ಸಮಸ್ತ ಸತ್ಕರ್ಮಗಳಿಗೆ ಅಕ್ಷಯವಾದ (ಎಂದಿಗೂ ನಾಶವಾಗದ, ಬರಿದಾಗದ) ಪುಣ್ಯ-ಲವನ್ನು ಪಡೆಯುವರು. ಈ ದಿನ ಕೃತ್ತಿಕಾ ನಕ್ಷತ್ರದಿಂದ ಕೂಡಿದರೆ ಇನ್ನೂ ವಿಶೇಷ ಪೂಣ್ಯದಿನ.
ಈ ದಿನ ಮಾಡುವ ದಾನ, ಹವನ ಹಾಗೂ ಜಪ ಇವೆಲ್ಲವೂ ಉಳಿದ ದಿನಗಳಿಗಿಂತ ವಿಶೇಷ ಪುಣ್ಯಫಲ ನೀಡುವುದಾಗಿದೆ ಎಂದು. ಈ ದಿನ ದಾನಾದಿಗಳನ್ನು ಮಾಡಲು ಪುರಾಣಗಳಲ್ಲಿ ಹೇಳಿದ್ದಾರೆಯೇ ಹೊರತೂ ಬಂಗಾರ ಇತ್ಯಾದಿ ಸಂಗ್ರಹಿಸಲು ಎಲ್ಲಿಯೂ ಹೇಳಿಲ್ಲ. ಬಂಗಾರ ಅಥವಾ ಯಾವುದೇ ಅಮೂಲ್ಯವಾದ ವಸ್ತುಗಳನ್ನು ಅವಶ್ಯಕತೆ ಇದ್ದಾಗ ಯಾವಾಗ ಬೇಕಾದರೂ ಖರೀದಿಸಬಹುದು. ನಮ್ಮ ಸನಾತನ ಗ್ರಂಥಗಳಲ್ಲಿ ಈ ದಿನದಂದು ಬಂಗಾರ
ಇತ್ಯಾದಿ ಸುವಸ್ತುಗಳನ್ನು ದಾನ ಮಾಡಲು ಹೇಳಿದ್ದಾರೆಯೇ ಹೊರತೂ, ಎಲ್ಲಿಯೂ ಬಂಗಾರ, ಭೂಮಿ, ಮನೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಕುರಿತಾಗಲಿ, ಸಂಗ್ರಹಿಸುವುದರ ಕುರಿತಾಗಿ ಹೇಳಿಲ್ಲ.
ಈ ದಿನ, ಸುವಸ್ತುಗಳನ್ನು ಸತ್ಪಾತ್ರರಿಗೆ ದಾನ ಮಾಡಿ ಪುಣ್ಯಸಂಗ್ರಹಣೆ ಮಾಡುವ ದಿನವಾಗಿದ್ದು, ಚಿನ್ನ ಮುಂತಾದವುಗಳ ಖರೀದಿಸುವ ಅಥವಾ
ಸಂಗ್ರಹಣೆಯ ದಿನವಲ್ಲ. ಕೊಟ್ಟರೆ ಕೊಟ್ಟಪುಣ್ಯ ಅಕ್ಷಯವಾಗುವುದು ಎಂದು ಹೇಳಲಾಗಿದೆಯೇ ಹೊರತೂ ಖರೀದಿಸಿದ, ಸಂಗ್ರಹಿಸಿದ ವಸ್ತು ಅಕ್ಷಯ ವಾಗುವುದು ಎಂಬುದಕ್ಕೆ ಯಾವುದೇ ಪ್ರಾಚೀನ ಗ್ರಂಥಗಳ ಆಧಾರವಿಲ್ಲ. ಚಿನ್ನ ಖರೀದಿಸುವ ಪರಿಪಾಠ ಬಂದದ್ದು ತೀರಾ ಇತ್ತೀಚಿಗೆ.
ಮೌಲ್ಯವರ್ಧನೆ ವಸ್ತುಗಳನ್ನುಖರೀದಿಸುವುದು, ಸಂಗ್ರಹಿಸುವುದು ಕಾಲಾಂತರದಲ್ಲಿ ಆರ್ಥಿಕವಾಗಿ ಲಾಭದ ದೃಷ್ಟಿಯಿಂದ, ಆ ದೃಷ್ಟಿಯಿಂದ ಬೇಕಾದರೆ ಖರೀದಿಸಬಹುದು. ಎಲ್ಲಾ ಹಬ್ಬಗಳೂ ನಮ್ಮ ಜೀವನಕ್ಕೆ ಅಮೂಲ್ಯ ಸಂದೇಶ-ಪಾಠಗಳನ್ನು ಸಾರುತ್ತವೆ. ಅಕ್ಷಯ ತೃತೀಯ ಕೂಡ ಸಂಕಷ್ಟ ದಲ್ಲಿರು ವವರಿಗೆ ಕೈಲಾದ ಸಹಾಯ ಮಾಡಿ ಎನ್ನುವ ಬಹುದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನೆಲೆಯಲ್ಲಿ ಹಬ್ಬವನ್ನು ಅರಿತು ಆಚರಿಸಿದಲ್ಲಿ ಇಹ-ಪರಕ್ಕೆ ಕ್ಷೇಮವಾಗುವುದು.