Sunday, 15th December 2024

ಆರು ದಶಕದ ಆಲಮಟ್ಟಿ ಯೋಜನೆ ಪೂರ್ಣಗೊಳಿಸಲು ಸಕಾಲ

ತನ್ನಿಮಿತ್ತ

ಸಂಗಮೇಶ ಆರ್‌.ನಿರಾಣಿ

ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ

ನೆಲ, ಜಲ ನೀರಾವರಿ ಯೋಜನೆಗಳ ಕುರಿತು ಅಪಾರ ಅನುಭವ ಹಾಗೂ ಆಸಕ್ತಿ ಇರುವ ಉತ್ತರ ಕರ್ನಾಟಕ ಮೂಲದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದಾರೆ. ಪ್ರತಿಬಾರಿಯೂ ಕಾವೇರಿಗೆ ಮೊದಲು ಬಾಗಿಣ ಅರ್ಪಣೆಯಾಗುತ್ತಿತ್ತು. ಆದರೆ ಈ ಬಾರಿ ಕೃಷ್ಣೆಗೆ ಬಾಗಿಣ ಅರ್ಪಣೆಯಲ್ಲಿ ಪ್ರಥಮ ಆದ್ಯತೆ ನೀಡಿದ ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

6 ದಶಕಗಳಿಂದ ಕುಂಟುತ್ತಾ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಮೂಲಕ ಕೃಷ್ಣಾ ತೀರದ ರೈತರ ಬದುಕಿಗೆ ಆಸರೆಯಾಗುವ ಮಹತ್ತರ ಜವಾಬ್ದಾರಿ ಬೊಮ್ಮಾಯಿಯವರ ಹೆಗಲಿಗಿದೆ. ಯುಕೆಪಿ ಸಂತ್ರಸ್ತ ಜಿಲ್ಲೆಗಳಲ್ಲಿ ಒಂದಾಗಿರುವ ಬಾಗಲಕೋಟೆ ಜಿಲ್ಲೆಯ ಗೋವಿಂದ ಕಾರಜೋಳರು ಜಲ ಸಂಪನ್ಮೂಲ ಸಚಿವರಾಗಿರುವುದರಿಂದ ಬಹುದಿನಗಳಿಂದ ಉಳಿದ ಬೃಹತ್ ಯೋಜನೆಗೆ ಮುಕ್ತಿ ದೊರೆಯಬಹುದೆಂಬ ಆಶಾಭಾವನೆ ಎಲ್ಲರಲ್ಲೂ ಮೂಡಿದೆ.

ಕೃಷ್ಣಾ ನದಿ ಪರಿಚಯ : ಭಾರತದಲ್ಲಿಯೇ 4ನೇ ಅತಿದೊಡ್ಡ ನದಿಯಾದ ಕೃಷ್ಣಾ ನದಿ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಜನಿಸಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 1392 ಕಿ.ಮೀ ಹರಿದು ಆಂದ್ರಪ್ರದೇಶದ ಹಂಸಲಾದೇವಿ ಎಂಬಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ ಕೃಷ್ಣೆಯ ಉದ್ದ 483 ಕಿ.ಮೀ. ವೀಣಾ, ಕೊಯ್ನಾ, ದೂಧಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಮೂಸಿ, ದಂಡಿ ಎಂಬ 75ಕ್ಕೂ ಅಧಿಕ ಉಪನದಿಗಳು ಕೃಷ್ಣೆಯನ್ನು ಸೇರಿಕೊಳ್ಳುತ್ತವೆ.

ಕೃಷ್ಣಾ ನದಿಯ ಜಲಾನಯನ ಪ್ರದೇಶ 2, 58,948 ಚದರ ಕಿ.ಮೀ. ಇದ್ದು, ಭಾರತದ ಒಟ್ಟು ಭೂಪ್ರದೇಶದ ಶೇ. ಕ್ಕೆ ಭೂಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಕರ್ನಾಟಕದಲ್ಲಿ 1,13,271 ಚ.ಕಿ.ಮೀ, ಮಹಾ ರಾಷ್ಟ್ರದಲ್ಲಿ 69,425 ಚ.ಕಿ.ಮೀ ಮತ್ತು ಆಂದ್ರಪ್ರದೇಶ, ತೆಲಂಗಾಣದಲ್ಲಿ 76,252 ಚ. ಕಿ.ಮೀ. ವ್ಯಾಪಿಸಿದೆ. ನದಿ ಪಾತ್ರದಲ್ಲಿ ಒಟ್ಟು 2,03,000 ಚ. ಕಿ.ಮೀ ಕೃಷಿ ಯೋಗ್ಯ ಭೂಮಿ ಇದ್ದು, ಇದು ಭಾರತದ ಒಟ್ಟು ಕೃಷಿಯೋಗ್ಯ ಭೂಮಿ ಶೇ.10.4 ಪ್ರತಿಶತವಾಗಿದೆ.

ಕೃಷ್ಣೆಯಿಂದ ವಾರ್ಷಿಕ ದೊರೆಯುವ 2,758.08 ಟಿಎಂಸಿ ಅಡಿ ನೀರಿನಲ್ಲಿ 2,048.25 ಟಿಎಂಸಿ ಅಡಿ ನೀರು ಬಳಕೆ ಮಾಡಬಹುದು. ಕೃಷ್ಣೆಗೆ ಮಹಾರಾಷ್ಟ್ರದ ಧೂಮ್, ಕೊಯ್ನಾ, ವಾನಾರ್ ಕರ್ನಾಟಕದ ಹಿಪ್ಪರಗಿ, ಆಲಮಟ್ಟಿ, ನಾರಾಯಣಪೂರ ಆಂದ್ರಪ್ರದೇಶ ಮತ್ತು ತೆಲಂಗಾಣದ ಜುರಾಲಾ, ಶ್ರೀಶೈಲಂ, ನಾಗಾರ್ಜುನ ಸಾಗರ, ಪ್ರಕಾಶಂ ಬ್ಯಾರೇಜ್, ಪುಲಿಚಿಂತಲಾ ಎಂಬಲ್ಲಿ ಪ್ರಮುಖ ಆಣೆಕಟ್ಟುಗಳನ್ನು ಕಟ್ಟಿದ್ದಾರೆ.

ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪಿಸಿ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರಕಾರ ಸಲ್ಲಿಸಿದ ಪ್ರಸ್ತಾವಣೆಗೆ ಕೇಂದ್ರ 22-5-1959 ರಂದು ತಾತ್ವಿಕ ಒಪ್ಪಿಗೆ ನೀಡಿತು. ಈ ಯೋಜನೆ ಅಧಿಕೃತವಾಗಿ ಜನ್ಮತಾಳಿ 6 ದಶಕ ಕಳೆದರೂ ಪೂರ್ಣಪ್ರಮಾಣದಲ್ಲಿ ಯೋಜನೆ ಜಾರಿಯಾಗಿಲ್ಲ. ಕೃಷ್ಣಾ ನದಿಯ ಎಲ್ಲ ಉಪನದಿಗಳು ಸೇರಿ ಕರ್ನಾಟಕಕ್ಕೆ ಲಭಿಸುವ ಒಟ್ಟು 734 ಟಿ.ಎಂ.ಸಿ ಅಡಿ ನೀರಿನ ಪೈಕಿ 303 ಟಿಎಂಸಿ ಅಡಿ ಕೃಷ್ಣಾ ನದಿಯಿಂದ ದೊರೆಯುತ್ತದೆ. ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣದ ಬಚಾವತ್ ಆಯೋಗ ಸ್ಕೀಮ್’ನಲ್ಲಿ ನಿಗದಿಪಡಿಸಿದಂತೆ ಆಲಮಟ್ಟಿಯಲ್ಲಿ 123 ಟಿಎಂಸಿ ಅಡಿ (ಆರ್.ಎಲ್. 519.60 ಎತ್ತರದವರೆಗೆ), ಹಿಪ್ಪರಗಿಯಲ್ಲಿ 5 ಟಿಎಂಸಿ ಅಡಿ, ಹಾಗೂ ನಾರಾಯಣಪೂರದಲ್ಲಿ 37 ಟಿಎಂಸಿ ಅಡಿ ನೀರು ಸಂಗ್ರಹಿಸುವ ಮೂಲಕ ಪೂರ್ಣ 173 ಟಿಎಂಸಿ ಅಡಿ ನೀರು ಬಳಕೆಯೊಂದಿಗೆ 15,29,582.31 ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಿಂದ 201 ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು, 136 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.

1990-95ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಗಳು ನಡೆಯುತ್ತಿದ್ದಾಗಿನ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್.ಡಿ. ದೇವೇಗೌಡರು ಪ್ರಧಾನಿ ಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ 400 ಕೋಟಿ ಅನುದಾನವನ್ನು 700 ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ ರಾಜ್ಯಗಳು ಸಮರ್ಥ ವಾಗಿ ಉಪಯೋಗಿಸಿ ಕೊಂಡರೂ, ಕರ್ನಾಟಕದಲ್ಲಿ ಮಾತ್ರ ಯಾವುದೇ ಸರಕಾರಗಳು ಕೃಷ್ಣೆಗಾಗಿ ಈ ಸೌಲಭ್ಯ ವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿ ಕೊಳ್ಳದಿರುವುದು ದುರ್ದೈವದ ಸಂಗತಿ.

ನ್ಯಾ. ಬ್ರಿಜೇಶಕುಮಾರ ಆಯೋಗವು 30-12-2010 ರಂದು ಕೃಷ್ಣಾ ಜಲ ವಿವಾದ ನ್ಯಾಯಾಽಕರಣ-೨ರಲ್ಲಿ ನೀಡಿದ ತೀರ್ಪಿನಂತೆ ಕರ್ನಾಟಕದ ಪಾಲಿನ 177 ಟಿಎಂಸಿ ಅಡಿ ನೀರಿನಲ್ಲಿ 130 ಟಿಎಂಸಿ ಅಡಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ-೩ರಲ್ಲಿ ಬಳಕೆ ಮಾಡಲು ಕರ್ನಾಟಕ ಸರಕಾರ ತೀರ್ಮಾನಿಸಿ 24-01-2012 ರಂದು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರೂ ಇಂದಿನವರೆಗೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲ. ಇದರಿಂದಾಗಿ ಯೋಜನಾ ವೆಚ್ಚ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-೨ರ ತೀರ್ಪನ್ನು ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಪುರಸ್ಕರಿಸಿದ್ದು, ಆಂಧ್ರಪ್ರದೇಶ ಸರ್ಕಾರ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಯೋಜನೆ ಅನುಷ್ಠಾನಗೊಳ್ಳುವವರೆಗೆ ನೀರು ಸಂಗ್ರಹ ಸಾಧ್ಯವಿಲ್ಲದ್ದರಿಂದ ಆಂಧ್ರ-ತೆಲಂಗಾಣ ಸರ್ಕಾರಗಳು ಉದ್ದೇಶ ಪೂರ್ವಕವಾಗಿ ಕೋರ್ಟ್ ಮೂಲಕ ಕಾಲಹರಣ ಮಾಡುತ್ತಿವೆ. ಕರ್ನಾಟಕ ಮುತುವರ್ಜಿ ವಹಿಸಿ ನ್ಯಾ.ಬ್ರಿಜೇಶಕುಮಾರ ಆಯೋಗದ ಕೃ.ಜ.ವಿ.ನ್ಯಾ. ತೀರ್ಪನ್ನು
ಕೇಂದ್ರ ಸರಕಾರದಲ್ಲಿ ಗೆಜೆಟ್ ಹೊರಡಿಸಿ, ಯೋಜನೆ ಅನುಷ್ಠಾನ ಮಾಡಬೇಕಿದೆ.

ಹೊಸ ಮಾರ್ಗದಲ್ಲಿ ಹಣಕಾಸು ಕ್ರೋಢೀಕರಿಸಿ: ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ಮಾದರಿ ಯಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬಹುದು. ಇಲ್ಲವಾದಲ್ಲಿ ರಾಜ್ಯ ಸರಕಾರವೇ ವಿಶೇಷ ಕಾಳಜಿ ವಹಿಸಿ ಮುಂಬರುವ 2-3 ಬಜೆಟ್‌ನಲ್ಲಿ ವಾರ್ಷಿಕ 20-30 ಸಾವಿರ ಕೋಟಿ ಹಣವನ್ನು ನೀಡುವ ಯೋಜನೆ ಪೂರ್ಣಗೊಳಿಸಬಹುದು. ಇಲ್ಲವೇ ತೆಲಂಗಾಣದ ಚಂದ್ರಶೇಖರ್‌ರಾವ್‌ರಂತೆ ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದು. ಜತೆಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೃಷ್ಣಾ ಬಾಂಡ್ ಮೂಲಕ ಹಣ ಸಂಗ್ರಹಿಸಿ ಆರ್ಥಿಕ ಹೊರೆ ತಗ್ಗಿಸಿಕೊಳ್ಳಬಹುದು. ಸಾಲ ಪಡೆದು ಯೋಜನೆ ಪೂರ್ಣಗೊಳಿಸಿದರೂ, ಅಚ್ಚುಕಟ್ಟು ಪ್ರದೇಶ ಸಮೃದ್ದವಾಗಿ ಕೃಷಿ ಹಾಗೂ ಸ್ಥಳೀಯ ಉದ್ಯಮ ವಿಕಾಸವಾಗಿ ಭವಿಷ್ಯದಲ್ಲಿ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸಕ್ಕೆ ಮರುಸಂದಾಯವಾಗುತ್ತದೆ.

ಅನುಷ್ಠಾನಕ್ಕೆ ಹೊಸ ಮಾರ್ಗೋಪಾಯಗಳು: ಎಲ್ಲಾ ನೀರನ್ನು ಒಂದೇ ಕಡೆ ಜಲಾಶಯ ನಿರ್ಮಿಸಿ ಸಂಗ್ರಹಿಸುವುದು ಸ್ವಾತಂತ್ರ್ಯ ಪೂರ್ವಕ್ಕೂ ಹಳೆಯದಾದ ವ್ಯವಸ್ಥೆ. ಇಂದು ಕಾಲ ಬದಲಾಗಿದೆ. ತಂತ್ರಜ್ಞಾನ, ಹೊಸತನ ನಮ್ಮನ್ನು ಆವರಿಸಿವೆ. ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ದೃಷ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಜಗತ್ತಿಲ್ಲಿಯೇ ಅತಿದೊಡ್ಡ ಜನವಸತಿ ಸ್ಥಳಾಂತರ ಯೋಜನೆಯಾಗಿದೆ. ಈಗ ಮತ್ತೊಂದು ಪುನರ್ ವಸತಿಗೆ ಸಜ್ಜಾಗಬೇಕಿರುವುದು ಕಳವಳದ ಸಂಗತಿ. ಬದಲಾಗಿ ಕೆಲವು ಅವಶ್ಯಕ ಹಳ್ಳಿಗಳಿಗೆ ನಾರ್ವೆ ಮಾದರಿ ತಡೆಗೋಡೆಯನ್ನು ನಿರ್ಮಿಸಿ ಮುಳುಗಡೆಯ ಪ್ರಮಾಣ ತಗ್ಗಿಸಬಹುದು.

ತೆಲಂಗಾಣದ ಕಾಲೇಶ್ವರಂ ಯೋಜನೆಯಲ್ಲಿ ಗೋದಾವರಿ ನದಿ ನೀರನ್ನು ಬಳಸಿ 45 ಲಕ್ಷ ಎಕರೆಗೆ ನೀರಾವರಿ ಹಾಗೂ ಹೈದ್ರಾಬಾದ್, ಸಿಕಂದರಾಬಾದ್ ಸೇರಿ ತೆಲಂಗಾಣದ ಶೇ.70ರಷ್ಟು ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಸುವ ಬೃಹತ್ ಯೋಜನೆ ರೂಪಿಸಿದ್ದರೂ ಒಂದು ಹಳ್ಳಿಯೂ ಮುಳುಗಡೆಯಾಗಿಲ್ಲ. ಕಾಲುವೆ, ಬ್ಯಾರೇಜ್‌ಗೆ ಅತಿ ಕಡಿಮೆ ಪ್ರಮಾಣದಲ್ಲಿ ಭೂ-ಸ್ವಾಧೀನಪಡಿಸಿಕೊಳ್ಳಲಾಗಿದೆ. ನದಿಯಲ್ಲಿಯೇ ನೀರು ಸಂಗ್ರಹಿಸುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇಂತಹ ಅವಕಾಶಗಳನ್ನು ಇಲ್ಲಿಯೂ ಬಳಸಿಕೊಳ್ಳಬಹುದು.

ದೀಪದ ಕೆಳಗೆ ಕತ್ತಲು ಎಂಬಂತೆ 3-4 ಜಿಲ್ಲೆಗಳಿಗೆ ನೀರು ಕೊಡಲು ಭೂಮಿ ಕಳೆದುಕೊಂಡು ಬಾಗಲಕೋಟ ಜಿಲ್ಲೆಯ ಬರಡು ಭೂಮಿಗಳಿಗೆ ನೀರು ಇಲ್ಲದಂತಾ ಗಿದೆ. ಭೂಮಿ ಕಳೆದುಕೊಂಡ ನಮಗೆ ತ್ಯಾಗಜೀವಿಗಳು ಎಂಬ ಪಟ್ಟ ಬಿಟ್ಟರೆ ಮತ್ತೆನೂ ದಕ್ಕಿಲ್ಲ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಬರಡು ಭೂಮಿಗೆ ಆದ್ಯತೆಯ ಮೇರೆಗೆ ನೀರು ಕೊಡಬೇಕು. ಚಿಕ್ಕೋಡಿ ಬಳಿ ಕೃಷ್ಣಾ ನದಿ ಪ್ರವಾಹದ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತಿ ಹಿಡಕಲ್ ಮತ್ತು ನವೀಲುತೀರ್ಥ
ಜಲಾಶಯಗಳಿಗೆ ಹರಿಸಿದರೆ ಸಂಪರ್ಕ ಕಾಲುವೆ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ ಅಚ್ಚಕಟ್ಟು ಪ್ರದೇಶದಲ್ಲಿ ಸಮೃದ್ಧ ಕೃಷಿ ಮಾಡಬಹುದು.

ಯುಕೆಪಿ-3ರಲ್ಲಿ 9 ಉಪನೀರಾವರಿ ಯೋಜನೆಗಳಿವೆ. ಭೀಮಾ ನದಿ ತಿರುವು ಯೋಜನೆ ಹೊರತುಪಡಿಸಿ ಉಳಿದೆಲ್ಲ ಏತ ನೀರಾವರಿ ಯೋಜನೆಗಳಿಗೆ ಆಲಮಟ್ಟಿ
ಜಲಾಶಯದಿಂದಲೇ ನೀರು ಪೂರೈಸಬೇಕು. ಬದಲಾಗಿ ಸದರಿ ಯೋಜನೆಗಳಿಗೆ ಸಮೀಪವಿರುವ ದೊಡ್ಡ ಕೆರೆ, ಗುಡ್ಡ, ಕಣಿವೆ, ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಿಸಿ ಬಳಸಿಕೊಳ್ಳಬಹುದು. ಇದರಿಂದ ಪುನರ್‌ವಸತಿ ಯೋಜನಾ ವೆಚ್ಚ ಕಡಿಮೆಯಾಗುತ್ತದೆ. ಕಾಲೇಶ್ವರಂ ಹಾಗೂ ಗುಜರಾತ್‌ನ ಸುಜಲಾಂ ಸುಫಲಾಂ
ಯೋಜನೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ.

ಉತ್ತರ ಕರ್ನಾಟಕದ ಕುರಿತು ಕಾಳಜಿ ವಹಿಸಿ: ನೆರೆಹೊರೆಯ ರಾಜ್ಯಗಳು ನೀರಾವರಿಯಲ್ಲಿ ಪ್ರಗತಿ ಸಾಧಿಸಿವೆ. ಆಂಧ್ರದಲ್ಲಿ ಪಟ್ಟೆಸೀಮಾ ಯೋಜನೆ, ತೆಲಂಗಾಣ ದಲ್ಲಿ ಕಾಲೇಶ್ವರಂದಂತಹ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಮಹಾರಾಷ್ಟ್ರ ಕೃಷ್ಣಾ ಹಾಗೂ ಗೋದಾವರಿ ಕೊಳ್ಳದ ನೀರನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡಿದೆ. ದಕ್ಷಿಣ ಕರ್ನಾಟಕದಲ್ಲಿ ಕಾವೇರಿ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು ದಶಕಗಳಾಗಿವೆ. ದಕ್ಷಿಣದ ಬಯಲು ಸೀಮೆಗಾಗಿ ಎತ್ತಿನಹೊಳೆ ಯೋಜನೆ ಜಾರಿಗೊಳ್ಳುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಲಭ್ಯವಿರುವ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗು ತ್ತಿಲ್ಲ.

ಆಂದ್ರಪ್ರದೇಶ ರಾಜ್ಯ ವಿಭಜನೆಗೆ ರಾಜಕೀಯವಾಗಿ ನಾನಾ ಕಾರಣಗಳಿರಬಹುದು ಆದರೆ ತೆಲಂಗಾಣ ಪ್ರಾಂತ್ಯಗಳಲ್ಲಿಯ ನೀರಾವರಿ ಯೋಜನೆಗಳ ಬಗ್ಗೆ ಅಸಡ್ಡೆ ತೋರಿದ್ದು ಪ್ರಮುಖ ಕಾರಣವಾಗಿದೆ. ಅದ್ದರಿಂದಲೇ ಚಂದ್ರಶೇಖರರು ನೀರಾವರಿಗೆ ಪ್ರಾತಿನಿಧ್ಯ ನೀಡಿದರು. ಬಜೇಟ್‌ನ ಶೇ. 60ರಷ್ಟು ಹಣವನ್ನು ನೀರಾವರಿ ಯೋಜನೆಗಳಿಗಾಗಿ ತೆಗೆದಿಟ್ಟರು. ಕೇವಲ ನಾಲ್ಕೇ ವರ್ಷಗಳಲ್ಲಿ ಕಾಲೇಶ್ವರಂದಂತಹ ದೊಡ್ಡ ಯೋಜನೆಯನ್ನು ನಾಡಿಗೆ ಸಮರ್ಪಿಸಿದರು.

ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಿದ್ದಾರೆ. ಇಬ್ಬರು ಪ್ರತಿಪಕ್ಷದ ನಾಯಕರಿದ್ದಾರೆ. ಜಲಸಂಪನ್ಮೂಲ ಇಲಾಖೆಯೇ ಜಿಲ್ಲೆಯ ಬಳಿ ಇದೆ. ರಾಜಕೀಯ ಇಚ್ಚಾಶಕ್ತಿ ಪ್ರಕಟಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ಪ್ರಾದೇಶಿಕ ಅಸಮತೋಲನ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಲ್ಲ ದೂರುಗಳನ್ನು ಕಳಚಿ ಏಕ ಚಿತ್ತದಿಂದ ಸಮಗ್ರ ಕರ್ನಾಟಕವನ್ನು ವಿಕಾಸದತ್ತ
ಕೊಂಡೊಯ್ಯುವ ಕಾರ್ಯದಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಲಿ ಎಂದು ಆಶಿಸೋಣ.