ಹುಲಿ ಹೆಜ್ಜೆ
ಅಲೆಕ್ಸ್ ಫಾಕ್ಸ್
ಹುಲಿಗಳು ಬದುಕಲು ತುಂಬಾ ದೊಡ್ಡ ನೈಸರ್ಗಿಕ ಸ್ಥಳ, ಅರ್ಥಾತ್ ಕಾಡು ಬೇಕಾಗುತ್ತದೆ. ಹಾಗಂತ ಜಾಗ ಒಂದಿದ್ದರೆ ಸಾಲದು. ಆ ಜಾಗದಲ್ಲಿ ಬೇಟೆಗೆ ಬಲಿಯಾಗುವ ಪ್ರಾಣಿಗಳೂ ಸಾಕಷ್ಟಿರಬೇಕಾಗುತ್ತದೆ. ಆದರೆ ಕಳೆದೊಂದು ಶತಮಾನದಲ್ಲಿ ಭಾರತದಲ್ಲಿ ಅಪಾರ ಪ್ರಮಾಣದ ಕಾಡು ನಾಶವಾಗಿದೆ.
ನಾಲ್ಕು ದಶಕಗಳ ಕಾಲ ಹುಲಿಗಳನ್ನು ನೋಡುತ್ತಾ, ಅವುಗಳ ಸಂರಕ್ಷಣೆಗಾಗಿ ಕಾಡುಮೇಡುಗಳನ್ನು ಸುತ್ತಿದ ಉಲ್ಲಾಸ್ ಕಾರಂತರಿಗೆ ಈಗಲೂ ಕಾಡಿನಲ್ಲಿ ಹುಲಿ ಕಂಡರೆ ರೋಮಾಂಚನವಾಗುತ್ತದೆ. ‘ಯಾವ ಅತ್ಯದ್ಭುತ ಚಿತ್ರಕಲಾವಿದ ಅಥವಾ ಶಿಲ್ಪಿಯಿಂದಲೂ ಇಂಥ ಸುಂದರ ಪ್ರಾಣಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಉಲ್ಲಾಸ್ ಹುಲಿಗಳ ಬಗ್ಗೆ ತುಂಬಾ ಕಕ್ಕುಲಾತಿಯಿಂದ ಮಾತನಾಡುತ್ತಾರೆ. ಅವರು ವನ್ಯಜೀವಿಗಳ ಸಂರಕ್ಷಣೆಗೆಂದೇ ಭಾರತದಲ್ಲಿ ‘ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅದರ ಮೂಲಕ ೧೯೮೦ರ ದಶಕದಿಂದಲೂ ಹುಲಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಸರಿಯಾಗಿ ಬೆಳೆದ ವಯಸ್ಕ ಹುಲಿಗಳು ೬೦೦ ಪೌಂಡ್ ಗಿಂತ ಹೆಚ್ಚು ಭಾರವಿರುತ್ತವೆ. ಬರೋಬ್ಬರಿ ೨೦ ಅಡಿಗಳಷ್ಟು
ದೂರ ಜಿಗಿಯುತ್ತವೆ. ತಮ್ಮ ತೂಕಕ್ಕಿಂತ ಐದು ಪಟ್ಟು ಹೆಚ್ಚು ತೂಕವಿರುವ ದೈತ್ಯ ಪ್ರಾಣಿಯನ್ನು ಕೂಡ ಬೇಟೆ ಯಾಡುವಷ್ಟು ಶಕ್ತಿ ಅವುಗಳಿಗಿದೆ. ಆದರೆ, ಅವು ಎಷ್ಟೇ ಬಲಶಾಲಿ ಮತ್ತು ಕ್ರೂರ ಪ್ರಾಣಿಯಾಗಿದ್ದರೂ, ಆಹಾರ ಸರಪಳಿಯ ತುತ್ತತುದಿಯಲ್ಲಿ ಕುಳಿತಿರುವುದರಿಂದ ಅವುಗಳ ಬದುಕು ಅಷ್ಟೇ ಅಸ್ಥಿರವಾಗಿದೆ. ಅವುಗಳ ಆವಾಸಸ್ಥಾನ ಅಪಾಯದಲ್ಲಿದೆ. ಒಂದು ಹುಲಿ ಬದುಕಬೇಕು ಅಂದರೆ ವಾರಕ್ಕೆ ಸರಾಸರಿ ೧೦೦ ಪೌಂಡ್‌ಗಳಷ್ಟು ಮಾಂಸ ತಿನ್ನಬೇಕು. ಅಂದರೆ ಒಂದು ಹುಲಿಗೆ ಒಂದು ವರ್ಷಕ್ಕೆ ಜಿಂಕೆ ಅಥವಾ ಕಡವೆ ಗಾತ್ರದ ೫೦ ದೊಡ್ಡ ಪ್ರಾಣಿಗಳು ಬೇಕು. ‘ಇದರರ್ಥ ಹುಲಿಗಳು ಬದುಕಲು ತುಂಬಾ ದೊಡ್ಡ ನೈಸರ್ಗಿಕ ಸ್ಥಳ, ಅರ್ಥಾತ್ ಕಾಡು ಬೇಕಾಗುತ್ತದೆ. ಹಾಗಂತ ಜಾಗ ಒಂದಿದ್ದರೆ ಸಾಲದು.
ಆ ಜಾಗದಲ್ಲಿ ಬೇಟೆಗೆ ಬಲಿಯಾಗುವ ಪ್ರಾಣಿಗಳೂ ಸಾಕಷ್ಟಿರಬೇಕಾಗುತ್ತದೆ’ ಎನ್ನುತ್ತಾರೆ ಕಾರಂತ್. ಅಜಮಾಸು ಕಳೆದೊಂದು ಶತಮಾನದಲ್ಲಿ ಭಾರತದಲ್ಲಿ ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಜನರು ಕೃಷಿಗಾಗಿ, ಸಾಕು ಪ್ರಾಣಿಗಳ ಮೇವಿಗಾಗಿ, ವಾಸಕ್ಕಾಗಿ ಹಾಗೂ ದುರಾಸೆಯಿಂದ ದೊಡ್ಡ ಪ್ರಮಾಣದಲ್ಲಿ ಕಾಡು ನಾಶಪಡಿಸಿ ವನ್ಯ ಜೀವಿಗಳ ಹತ್ತಿರ ಹತ್ತಿರಕ್ಕೆ ಹೋಗಿದ್ದಾರೆ. ಬೇಟೆಯಿಂದಲೂ ಸಾಕಷ್ಟು ಪ್ರಾಣಿಗಳು ನಾಶವಾಗಿವೆ. ಹುಲಿಯಂಥ ಮಾಂಸಾಹಾರಿ ಪ್ರಾಣಿಗಳು ಬದುಕುವುದಕ್ಕೆ ಬೇಟೆಯಾಡುವ ಸಸ್ಯಾಹಾರಿ ಪ್ರಾಣಿಗಳು ಕೂಡ ಜನರ ಕಳ್ಳಬೇಟೆಯ ಚಟಕ್ಕೆ ಹೆಚ್ಚು ಬಲಿಯಾಗಿವೆ. ೧೯೦೦ನೇ ಇಸವಿಯ ವೇಳೆಗೆ ಏಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ
ಅಂದಾಜು ೧,೦೦,೦೦೦ ಹುಲಿಗಳಿದ್ದವು. ಇಂದು ಅವುಗಳ ಸಂಖ್ಯೆ ಯಃಕಶ್ಚಿತ್ ೪,೫೦೦ಕ್ಕೆ ಕುಸಿದಿದೆ. ಗಣತಿಯ ಪ್ರಕಾರ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಹೇಳುತ್ತಾರೆ.
೨೦೧೦ರಲ್ಲಿ ೩,೨೦೦ ಇದ್ದ ಹುಲಿಗಳ ಸಂಖ್ಯೆ ಈಗ ೪,೫೦೦ಕ್ಕೆ ಏರಿದೆಯಂತೆ. ಆದರೆ, ‘ಪ್ಯಾಂಥೆರಾ’ ಎಂಬ ವನ್ಯಜೀವಿ
ಸಂರಕ್ಷಣಾ ಸಂಸ್ಥೆಯ ಸಂಶೋಧಕ ಅಭಿಷೇಕ್ ಹರಿಹರ ಅವರ ಪ್ರಕಾರ, ೨೦೧೦ರ ಲೆಕ್ಕವೇ ಬಹುಶಃ ತಪ್ಪಾಗಿತ್ತು.
ಆಗಿನಿಂದ ಈಗಿನವರೆಗೆ ಏರಿಕೆಯಾದ ಸಂಖ್ಯೆಯು ಹುಲಿಗಳ ಗಣತಿಯಲ್ಲಿ ಬಳಸುತ್ತಿರುವ ಸುಧಾರಿತ ಪದ್ಧತಿಯ ಫಲವಾಗಿರುವ ಸಾಧ್ಯತೆಯೇ ಹೆಚ್ಚಿದೆ. ಅಂದರೆ, ನಿಜವಾಗಿಯೂ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದಕ್ಕಿಂತ
ಹೆಚ್ಚಾಗಿ ನಮಗೆ ಅವುಗಳ ಲೆಕ್ಕ ಈಗ ಸರಿಯಾಗಿ ಸಿಕ್ಕಿರುವ ಸಾಧ್ಯತೆಯೇ ಕಂಡುಬರುತ್ತಿದೆ. ಅದೇನಾದರೂ ಆಗಿರಲಿ,
ಗಮನಾರ್ಹ ಸಂಗತಿ ಏನೆಂದರೆ, ಐತಿಹಾಸಿಕವಾಗಿ ಈ ಭೂಮಿಯಲ್ಲಿ ಎಷ್ಟು ಹುಲಿಗಳು ಓಡಾಡಿಕೊಂಡಿದ್ದವೋ
ಅದರ ಪೈಕಿ ಶೇ.೭ಕ್ಕಿಂತ ಕಡಿಮೆ ಹುಲಿಗಳು ಇಂದು ಜೀವಂತವಾಗಿವೆ.
ಹುಲಿಗಳು ಜೀವ ಉಳಿಸಿಕೊಳ್ಳಲು ಮನುಷ್ಯರ ಜತೆಗೆ ನೇರವಾಗಿ ನಡೆಸಿದ ಸಂಘರ್ಷವು ಅವುಗಳ ನೆರವಿಗೆ
ಬಂದಿಲ್ಲ. ಜಗತ್ತಿನ ಶೇ.೭೦ರಷ್ಟು ಹುಲಿಗಳನ್ನು ಹೊಂದಿರುವ ಭಾರತದಲ್ಲಿ ಮನುಷ್ಯರ ಸಂಖ್ಯೆಯಲ್ಲಿ ಆಗುತ್ತಿರುವ ಅಗಾಧ ಏರಿಕೆ ಮತ್ತು ಅಭಿವೃದ್ಧಿಯ ಪರಿಣಾಮವಾಗಿ ಜನರು ಹಾಗೂ ಹುಲಿಗಳು ದಿನೇದಿನೆ ಹೆಚ್ಚೆಚ್ಚು ಹತ್ತಿರಕ್ಕೆ
ಬರುವಂತಾಗಿದೆ. ಇಂದು ಲಕ್ಷಾಂತರ ಜನರು ಹುಲಿ ಸಂರಕ್ಷಿತ ಅರಣ್ಯಗಳ ‘ಬಫರ್ ಜೋನ್’ನಲ್ಲಿ ಬದುಕುತ್ತಿದ್ದಾರೆ.
ಅಂದರೆ ಅವರು ಹುಲಿಯ ವಾಸಸ್ಥಾನದ ಸುತ್ತ ಬಹಳ ಸಮೀಪದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ
ಭಾರತದಲ್ಲಿ ೫೦ರಿಂದ ೬೦ ಜನರು ಹುಲಿ ದಾಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ನೂರಾರು ಸಾಕು ಪ್ರಾಣಿಗಳು ಹುಲಿ ದಾಳಿಗೆ ಬಲಿಯಾಗುತ್ತಿವೆ. ಇದರ ಪರಿಣಾಮವಾಗಿ ಜನರಿಗೂ ಹುಲಿಗಳ ಬಗ್ಗೆ ದ್ವೇಷ ಹೆಚ್ಚಾಗಿ, ಅವುಗಳನ್ನು ಸೇಡಿನಿಂದ ಕೊಲ್ಲುವ ಪ್ರಮಾಣ ಹೆಚ್ಚುತ್ತಿರಬಹುದು. ಉಲ್ಲಾಸ್ ಕಾರಂತರ ಮಗಳು ಕೃತಿ ಕಾರಂತ್ ಕೂಡ ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ವನ್ಯಜೀವಿ ಸಂಶೋಧನೆಯಲ್ಲಿ ಅವರು ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಅವರೀಗ ಸೆಂಟರ್ ಫಾರ್ ವೈಲ್ಡ್‌ಲೈಫ್
ಸ್ಟಡೀಸ್‌ನ ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಾ, ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಾಕಷ್ಟು ಸಮಯ ಹಾಗೂ ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿದ್ದಾರೆ. ಅವರ ಸಂಸ್ಥೆಯ ಒಂದು ಯೋಜನೆಯಡಿ, ಸರಕಾರವು ವನ್ಯಜೀವಿ ದಾಳಿಯಿಂದ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೆಂದು ತೆಗೆದಿರಿಸಿದ ಹಣವನ್ನು ಪಡೆಯಲು ೨೦೦೦ಕ್ಕೂ ಹೆಚ್ಚು ಗ್ರಾಮೀಣ ಸಮುದಾಯಗಳಿಗೆ ನೆರವು ನೀಡಲಾಗುತ್ತಿದೆ. ವನ್ಯಜೀವಿ ದಾಳಿಯಿಂದ ಸಾಕುಪ್ರಾಣಿಗಳನ್ನು ಕಳೆದುಕೊಂಡವರಿಗೂ ಸರಕಾರದಿಂದ
ಪರಿಹಾರ ಲಭಿಸುವಂತೆ ಮಾಡಲು ಈ ಸಂಸ್ಥೆ ಯತ್ನಿಸುತ್ತದೆ.
‘ಈ ಹಣದಿಂದ ಜನರಿಗೆ ಆದ ನಷ್ಟ ಸಂಪೂರ್ಣ ಭರ್ತಿಯಾಗುವುದಿಲ್ಲ. ಅವರಿಗಾದ ಭಾವನಾತ್ಮಕ ಅಥವಾ
ಆರ್ಥಿಕ ನಷ್ಟವನ್ನು ಸಂಪೂರ್ಣ ತುಂಬಿಕೊಡಲು ಸಾಧ್ಯವೂ ಇಲ್ಲ. ಆದರೆ ಕನಿಷ್ಠ ಪಕ್ಷ ತಮಗೆ ಎದುರಾದ ಕಷ್ಟವನ್ನು ಎದುರಿಸುವುದಕ್ಕಾದರೂ ಅವರಿಗೆ ಒಂದಷ್ಟು ಸಹಾಯವಾಗುತ್ತಿದೆ. ಸರಕಾರದ ಈ ಪರಿಹಾರದ ಹಣ ತ್ವರಿತವಾಗಿ ಅವರನ್ನು ತಲುಪದೆ ಇದ್ದರೆ ಅವರು ವನ್ಯಜೀವಿಗಳ ಮೇಲೆ ಸೇಡಿನ ದಾಳಿ ನಡೆಸುವ ಅಥವಾ ಹುಲಿಗಳ ಬಗ್ಗೆ ಇನ್ನಷ್ಟು ದ್ವೇಷ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುತ್ತಾರೆ ಕೃತಿ ಕಾರಂತ್.
ಇವರ ಸಂಸ್ಥೆಯ ಇನ್ನೊಂದು ಕಾರ್ಯಕ್ರಮವು ಸುಮಾರು ೧೦೦೦ ಗ್ರಾಮೀಣ ಶಾಲೆಗಳಲ್ಲಿ ಚಾಲ್ತಿಯಲ್ಲಿದೆ. ಅಲ್ಲಿ
ಸ್ಥಳೀಯ ಜೀವಿ ಪರಿಸರ ವ್ಯವಸ್ಥೆಯಲ್ಲಿ ಹುಲಿ ಹಾಗೂ ಇನ್ನಿತರ ಪ್ರಾಣಿಗಳ ಮಹತ್ವ ಏನು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಕೃತಿ ಕಾರಂತ್ ಹೇಳುವಂತೆ, ‘ಮಕ್ಕಳಿಗೆ ವನ್ಯಜೀವಿಗಳ ಮಹತ್ವವನ್ನು ತಿಳಿಸಿಕೊಡದೆ ಇದ್ದರೆ ಅವರು ಕಾಡುಪ್ರಾಣಿಗಳ ಬಗ್ಗೆ ಭಯ ಅಥವಾ ದ್ವೇಷ ಬೆಳೆಸಿಕೊಳ್ಳುತ್ತಾರೆ.
ಇದು ವನ್ಯಜೀವಿಗಳ ಸಂರಕ್ಷಣೆಗೆ ಮಾರಕ’. ವನ್ಯಜೀವಿ ದಾಳಿಯಿಂದ ರಕ್ಷಿಸಿಕೊಳ್ಳುವ ಉಪಾಯಗಳನ್ನು ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನವರು ಹಳ್ಳಿಗಳ ಶಾಲೆಯಲ್ಲಿನ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಉದಾಹರಣೆಗೆ, ಸಂಜೆಯ ನಂತರ ಓಡಾಡುವಾಗ ಪ್ರಖರ ಬೆಳಕಿನ ಟಾರ್ಚ್‌ಗಳನ್ನು ಹಿಡಿದುಕೊಂಡು ಹೋಗುವುದು, ಒಬ್ಬೊಬ್ಬರೇ ಸಂಚರಿಸದೆ ಮೂರ್ನಾಲ್ಕು ಜನರು ಒಟ್ಟಿಗೇ ಹೋಗುವುದು, ಕಾಡಿನ ದಾರಿಯಲ್ಲಿ ಸಂಚರಿಸುವಾಗ ಜೋರಾಗಿ ಮಾತನಾಡುತ್ತಾ ಹೋಗುವುದು ಹೀಗೆ ನಾನಾ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. ಹೀಗೆ ಮಾಡುವುದರಿಂದ ಕಾಡುಪ್ರಾಣಿಗಳು ಮನುಷ್ಯರ ಸಮೀಕ್ಕೆ ಬರುವುದಿಲ್ಲ.
‘ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ, ಎಲ್ಲಾ ಜೀವಜಂತುಗಳಿಗೂ ಮಹತ್ವವಿದೆ ಎಂಬ ಕರುಣೆಯ ಭಾವನೆಯನ್ನು
ಮಕ್ಕಳಿಗೆ ಕಲಿಸುವಲ್ಲಿ ನಾವು ಯಶಸ್ವಿಯಾದರೆ ಅದು ಮನುಷ್ಯರಿಗೂ ಒಳ್ಳೆಯದು, ಹುಲಿಗಳಿಗೂ ಒಳ್ಳೆಯದು.
ಆಗ ಇಬ್ಬರೂ ಸುರಕ್ಷಿತವಾಗಿರುತ್ತಾರೆ’ ಎನ್ನುತ್ತಾರೆ ಕೃತಿ ಕಾರಂತ್.
(ಲೇಖಕರು ಫ್ರೀಲ್ಯಾನ್ಸ್ ವಿಜ್ಞಾನ ಪತ್ರಕರ್ತರು,
ಕ್ಯಾಲಿಫೋರ್ನಿಯಾ)