ಸಂಗತ
ಡಾ.ವಿಜಯ್ ದರಡಾ
ನಿಜವಾಗಿಯೂ ಅನ್ಯಗ್ರಹ ಜೀವಿಗಳು (ಏಲಿಯನ್ ಗಳು) ಇವೆಯೇ? ಭೂಮಿಯಲ್ಲಿರುವಂತೆ ಬೇರೆ ಗ್ರಹಗಳಲ್ಲೂ ಜೀವಿಗಳಿರುವುದು ಹೌದಾದಲ್ಲಿ ಅವು
ಹೇಗಿರಬಹುದು? ಹೀಗೊಂದು ಚರ್ಚೆ ಮತ್ತೆ ಆರಂಭವಾಗಿದೆ. ಫ್ಲೈಯಿಂಗ್ ಸಾಸರ್ ಅಥವಾ ಹಾರುವ ತಟ್ಟೆಗಳು ಎನ್ನಲಾಗುವ ‘ಅನ್‌ಐಡೆಂಟಿ-ಡ್ ಫ್ಲೈಯಿಂಗ್ ಆಬ್ಜೆಕ್ಟ್ ಗಳು’ ವಿಶ್ವದಲ್ಲೆಲ್ಲಾದರೂ ಕಾಣಿಸಿಕೊಂಡಾಗ ಈ ಚರ್ಚೆ ಶುರುವಾಗುತ್ತದೆ. ಏಲಿಯನ್‌ಗಳು ಇವೆ ಎಂದು ಒಂದು ಗುಂಪು, ಇಲ್ಲ ಎಂದು ಒಂದು ಗುಂಪು, ಗೊತ್ತಿಲ್ಲ ಎಂದು ಇನ್ನೊಂದು ಗುಂಪು ವಾದಿಸುತ್ತದೆ.
ಆದರೆ ಈ ಬಾರಿ ಮೆಕ್ಸಿಕೋ ದೇಶದ ಸಂಸತ್ತಿನಲ್ಲಿ, ಏಲಿಯನ್‌ಗಳದ್ದು ಎನ್ನಲಾದ ೨ ಅಸ್ತಿಪಂಜರಗಳನ್ನು ಪ್ರದರ್ಶಿಸಲಾಗಿದೆ. ಯಾವುದೇ ದೇಶದ ಸಂಸತ್ತಿನಲ್ಲಿ ಇಂಥ ಪ್ರದರ್ಶನವಾಗಿರುವುದು ಇದೇ ಮೊದಲು. ಜೇಮಿ ಮೌಸನ್ ಎಂಬ ಹಾರುವ ತಟ್ಟೆಗಳ ತಜ್ಞ ಹಾಗೂ ಪತ್ರಕರ್ತ ಈ ಅಸ್ತಿಪಂಜರಗಳನ್ನು ಪ್ರದರ್ಶಿಸಿ, ಇವು ೧೦೦೦ ವರ್ಷ ಗಳಷ್ಟು ಹಳೆಯ ಮಮ್ಮಿಗಳೆಂದೂ, ಏಲಿಯನ್‌ಗಳ ಅವಶೇಷ ಗಳೆಂದೂ ಹೇಳಿದ್ದಾನೆ. ಅವು ಪೆರುವಿನ ಗಣಿಯೊಂದರಲ್ಲಿ ದೊರೆತವಂತೆ. ಸೂಕ್ಷ್ಮವಾಗಿ ನೋಡಿದರೆ ಅವು ಮನುಷ್ಯನ ಅಸ್ಥಿಪಂಜರಗಳಂತೆ ಕಾಣಿಸುವುದಿಲ್ಲ. ಉದಾಹರಣೆಗೆ, ಮನುಷ್ಯನ ಕೈ-ಕಾಲುಗಳಲ್ಲಿ ತಲಾ ಐದೈದು ಬೆರಳುಗಳಿದ್ದರೆ, ಈ ಅಸ್ಥಿಪಂಜರಗಳು ತಲಾ ಮೂರನ್ನು ಮಾತ್ರ ಹೊಂದಿದ್ದು, ಅವು ದುಪ್ಪಟ್ಟು ಗಾತ್ರದಲ್ಲಿವೆ. ಅವುಗಳ ಎದೆಗೂಡಿನ ವಿನ್ಯಾಸವೂ ಮನುಷ್ಯರಿಗಿಂತ
ಭಿನ್ನವಾಗಿವೆ.
ಮೌಸನ್ ಪ್ರಕಾರ, ಮೆಕ್ಸಿಕೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೇಡಿಯೋ ಕಾರ್ಬನ್ ಡೇಟಿಂಗ್ ವ್ಯವಸ್ಥೆ ಬಳಸಿ ಇವುಗಳ ಅಧ್ಯಯನ ಮಾಡಿದ್ದಾರಂತೆ. ಅದರನ್ವಯ ಈ ಅಸ್ಥಿಪಂಜರಗಳ ಮೂಳೆಗಳು ಮನುಷ್ಯರಿಗಿಂತ ಬಹಳ ತೆಳು ಮತ್ತು ಹಗುರವಾಗಿದ್ದರೂ ಗಟ್ಟಿಮುಟ್ಟಾಗಿವೆ. ಈ ಅಸ್ಥಿಪಂಜರಗಳ ಬಗ್ಗೆ ಮೆಕ್ಸಿಕೋ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹಾರ್ವರ್ಡ್ ಖಗೋಳ ಇಲಾಖೆಯು ಏಲಿಯನ್‌ಗಳ ಅಧ್ಯಯನಕ್ಕೆ ತನಗೆ ಅನುಮತಿಸಬೇಕೆಂದು ಸರಕಾರವನ್ನು ಕೇಳಿದೆ. ಗಮನಾರ್ಹ ಸಂಗತಿಯೆಂದರೆ, ಈ ಅಸ್ಥಿಪಂಜರಗಳು ದೊರೆತ ಜಾಗದಲ್ಲಿ ಯಾವುದೇ ಕಳೆ, ಗಿಡಮರ ಬೆಳೆಯುತ್ತಿಲ್ಲ.
ಆ ಪ್ರದೇಶದ ಚಿತ್ರಗಳನ್ನು ಗಮನಿಸಿದರೆ ಅಲ್ಲಿ ಬೃಹತ್ ರೇಡಿಯೋ ಕಂಡಕ್ಟರ್ ಗಳು ಕಾಣುತ್ತವೆ. ಮನುಷ್ಯರಿಂದ ಅಷ್ಟು ದೊಡ್ಡ ರೇಡಿಯೋ ಕಂಡಕ್ಟರ್ ತಯಾರಿ ಸಾಧ್ಯವಿಲ್ಲ. ಹೀಗಾಗಿ ಆ ಪ್ರದೇಶದೊಂದಿಗೆ ಏಲಿಯನ್‌ಗಳಿಗೆ ಏನಾದರೂ ಸಂಪರ್ಕವಿದೆಯೇ ಎಂಬ ಪ್ರಶ್ನೆಯೇಳುತ್ತದೆ. ಏಲಿಯನ್‌ಗಳ ಬಗ್ಗೆ ಜಗತ್ತಿಗೆ ಕುತೂಹಲ ಮತ್ತು ಆಸಕ್ತಿಯಿರುವ ಕಾರಣ ಮೆಕ್ಸಿಕನ್ ಸಂಸತ್ತು ಈ ಚರ್ಚೆಯನ್ನು ಟಿವಿಯಲ್ಲಿ ನೇರಪ್ರಸಾರ ಮಾಡಿತ್ತು. ಚರ್ಚೆಯಲ್ಲಿ ಅಮೆರಿಕದ ನೌಕಾಪಡೆಯ ಮಾಜಿ ಪೈಲಟ್ ರ‍್ಯಾನ್ ಗ್ರೇವ್ಸ್ ಕೂಡ ಪಾಲ್ಗೊಂಡಿದ್ದರು. ಇವರು ತಮ್ಮ ಕಾರ್ಯನಿರ್ವಹಣೆಯ ವೇಳೆ ಏಲಿಯನ್‌ಗಳ ನೌಕೆಯ ಹಾರಾಟವನ್ನು ಕಂಡಿದ್ದಾಗಿ ಹಿಂದೊಮ್ಮೆ ಅಮೆರಿಕದ ಸಂಸತ್ತಿಗೆ ತಿಳಿಸಿದ್ದರು.
ಕಳೆದ ವರ್ಷ ಅಮೆರಿಕದ ಸಂಸತ್ತು ಕೂಡ ಈ ಜೀವಿಗಳ ಬಗ್ಗೆ ಚರ್ಚೆ ನಡೆಸಿದಾಗ, ಅಲ್ಲಿನ ನೌಕಾಪಡೆಯ ನಿವೃತ್ತ ಗುಪ್ತಚರ ಅಧಿಕಾರಿ ಮೇಜರ್ ಡೇವಿಡ್ ಗ್ರಶ್, ‘ನಮ್ಮ ದೇಶ ಹಾರುವ ತಟ್ಟೆಗಳು ಮತ್ತು ಏಲಿಯನ್‌ಗಳ ಬಗ್ಗೆ ರಹಸ್ಯವಾಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿಟ್ಟಿದೆ. ಕೆಲ ಏಲಿಯನ್‌ಗಳು ಮತ್ತು ಹಾರುವ ತಟ್ಟೆಗಳನ್ನು ಹಿಡಿದಿಟ್ಟುಕೊಂಡಿರುವ ಅಮೆರಿಕ ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಿ ಮೂಲವನ್ನು ಪತ್ತೆಹಚ್ಚಲು ಯತ್ನಿಸಿದೆ’ ಎನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆದರೆ ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ ಈ ಹೇಳಿಕೆ ನಿರಾಕರಿಸಿ, ‘ಅಮೆರಿಕ ಏಲಿಯನ್‌ಗಳನ್ನೊಳಗೊಂಡ ಕಾರ್ಯಾಚರಣೆಯನ್ನು ಯಾವತ್ತೂ ನಡೆಸಿಲ್ಲ’ ಎಂದಿತ್ತು.
ಅಮೆರಿಕದವರು ಏಲಿಯನ್‌ಗಳು ಮತ್ತು ಹಾರುವ ತಟ್ಟೆಗಳ ಬಗ್ಗೆ ಅಧ್ಯಯನ ನಡೆಸಿರುವುದರ ಕುರಿತು ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿವೆ. ಉದಾಹರಣೆಗೆ ಅಲ್ಲಿನ ನೆವಡಾ ರಾಜ್ಯದ ‘ಏರಿಯಾ ೫೧’ ಪ್ರದೇಶದಲ್ಲಿ ಏಲಿಯನ್‌ಗಳ ಅಧ್ಯಯಕ್ಕೆಂದೇ ಪ್ರತ್ಯೇಕ ಕೇಂದ್ರದ ಸ್ಥಾಪನೆಯಾಗಿದೆ ಎಂಬ ವದಂತಿಗಳಿವೆ. ಬಹಳ ಹಿಂದೆ ಅಮೆರಿಕದ ನ್ಯೂಮೆಕ್ಸಿಕೋ ರಾಜ್ಯಕ್ಕೆ ಗಂಟೆಗೆ ೨೭೦೦೦ ಮೈಲು ವೇಗದಲ್ಲಿ ಹಾರುವ ತಟ್ಟೆ ಯೊಂದು ಬಂದು ಅಪ್ಪಳಿಸಿತಂತೆ. ಅದರ ಅವಶೇಷಗಳನ್ನು ೧೯೫೧ರಲ್ಲಿ ನೆವಡಾದ ಆ ಕೇಂದ್ರಕ್ಕೆ ಸಾಗಿಸಿದ್ದರಿಂದಲೇ ಅದನ್ನು ‘ಏರಿಯಾ ೫೧’ ಎಂದೇ ಕರೆಯಲಾಗುತ್ತದೆಯಂತೆ. ಏಲಿಯನ್‌ಗಳ ಅಸ್ಥಿಪಂಜರವೂ ಅಮೆರಿಕದ ಬಳಿ ಇದೆ ಎನ್ನಲಾಗು ತ್ತದೆ.
ಪತ್ರಕರ್ತೆ ಆನಿ ಜೇಕಬ್ಸನ್‌ರ ‘ಏರಿಯಾ ೫೧: ಆನ್ ಅನ್ ಸೆನ್ಸಾರ್ಡ್ ಹಿಸ್ಟರಿ ಆಫ್ ಅಮೆರಿಕಾಸ್ ಟಾಪ್ ಸೀಕ್ರೆಟ್ ಮಿಲಿಟರಿ ಬೇಸ್’ ಪುಸ್ತಕದಲ್ಲಿ ಇಂಥ ಸಾಕಷ್ಟು ಕುತೂಹಲಕರ ಸಂಗತಿಗಳನ್ನು ಚರ್ಚಿಸಲಾಗಿದ್ದು, ಅದರಲ್ಲಿ ಆನಿ ಜತೆ ಮಾತಾಡಿರುವ ಒಬ್ಬರು, ‘ಮಗುವಿನ ಗಾತ್ರದ ಅನ್ಯಗ್ರಹ ಜೀವಿಗಳನ್ನು ಅಮೆರಿಕ ಸೆರೆ ಹಿಡಿದಿದೆ’ ಎಂದಿದ್ದಾರೆ. ಆದರೆ ಅದಕ್ಕೆಲ್ಲ ನಮ್ಮಲ್ಲಿ ಸಾಕ್ಷ್ಯವಿಲ್ಲ. ಹೀಗಾಗಿ ನಿಜಕ್ಕೂ ಏಲಿಯನ್ ಗಳ ಬಗ್ಗೆ ಮನುಷ್ಯರಿಗೆ ಮಾಹಿತಿಯಿದೆಯೇ, ಹಾರುವ ತಟ್ಟೆಗಳನ್ನು ಹಿಡಿದಿಡಲಾಗಿದೆಯೇ ಎಂಬುದಕ್ಕೆ ಖಾತ್ರಿಯಿಲ್ಲ.
ಆದರೂ ಆಗಾಗ ಯಾರೋ ಹಾರುವ ತಟ್ಟೆಗಳನ್ನು ನೋಡಿದ ಮಾಹಿತಿ ಮಾತ್ರ ವಿಶ್ವದ ವಿವಿಧೆಡೆಯಿಂದ ಬರುತ್ತಲೇ ಇರುತ್ತವೆ. ಭಾರತ-ಚೀನಾ ಗಡಿಯಲ್ಲಿ ಅವು ಅನೇಕ ಸಲ ಕಾಣಿಸಿವೆ. ಆಗೆಲ್ಲ ಮೊದಲಿಗೆ ಚೀನಾದವರು ಯಾವುದೋ ಡ್ರೋನ್ ಹಾರಿಸಿರಬಹುದು ಎಂದು ಅನುಮಾನಿಸಲಾಗುತ್ತಿತ್ತು, ಆದರೆ ಅವು ರಾಡಾರ್‌ಗಳಿಗೆ ಸಿಗುತ್ತಿರಲಿಲ್ಲ. ಡ್ರೋನ್ ಆಗಿದ್ದರೆ ರಾಡಾರ್‌ಗೆ ಅದರ ಸಿಗ್ನಲ್ ಸಿಗಬೇಕಿತ್ತು. ಹೀಗಾಗಿ ಅವು ನಮ್ಮಲ್ಲಿನ ರಾಡಾರ್‌ಗಳನ್ನೂ ಮೀರಿದ ಅನ್ಯಗ್ರಹ ಯಂತ್ರಗಳಿರಬಹುದು ಎಂದು ಊಹಿಸಲು ಅಡ್ಡಿಯಿಲ್ಲ. ಹಾಗೆಯೇ, ಟ್ರೆಷರ್ ಹಂಟರ್ ಆಸ್ಕರ್ ಮ್ಯೂನೋ ಎಂಬಾತನಿಗೆ ೨೦೦೩ರಲ್ಲಿ ಚಿಲಿಯ ಮರುಭೂಮಿ
ಯಲ್ಲಿ ೬ ಇಂಚು ಉದ್ದದ ಶಿಶುವಿನ ದೇಹ ಸಿಕ್ಕಿತ್ತು. ಅದರ ಎದೆಯಲ್ಲಿ ಕೇವಲ ೧೦ ಮೂಳೆಗಳಿದ್ದವು (ಸಾಮಾನ್ಯ ಮನುಷ್ಯನ ಎದೆಗೂಡಿನಲ್ಲಿ ೧೨ ಜೊತೆ ಮೂಳೆಗಳಿರುತ್ತವೆ).
ಹೀಗಾಗಿ ಅದು ಏಲಿಯನ್‌ನ ದೇಹವಿರಬಹುದು ಎಂದು ಅನುಮಾನಿಸಿ ಜೆನೆಟಿಕ್ ಪರೀಕ್ಷೆ ನಡೆಸಿದಾಗ, ಅದು ವಂಶವಾಹಿಯಲ್ಲಿನ ತೊಂದರೆಯಿಂದ ಅಂಗವೈಕಲ್ಯಕ್ಕೆ ತುತ್ತಾಗಿ ಹುಟ್ಟಿದ ಶಿಶು ಎಂಬುದು ತಿಳಿದುಬಂತು! ಹೀಗೆ ಈ ಹಿಂದೆ ಏಲಿಯನ್‌ಗಳ ವಿಷಯದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳಾಗಿವೆ.
ಆದರೆ ವಿಜ್ಞಾನದಲ್ಲಿ ಊಹಾಪೋಹಕ್ಕೆ, ದೇಶಾವರಿ ಚರ್ಚೆಗೆ ಜಾಗವಿಲ್ಲ. ವಿಜ್ಞಾನಕ್ಕೆ ಸಾಕ್ಷ್ಯ ಬೇಕು, ಅದು ಇಲ್ಲಿಯವರೆಗೆ ಸಿಕ್ಕಿಲ್ಲ. ಹಾಗಂತ ವಿಜ್ಞಾನಿಗಳು ಏಲಿಯನ್‌ಗಳ ಅಸ್ತಿತ್ವವನ್ನು ಎಂದೂ ಅಲ್ಲಗಳೆದಿಲ್ಲ. ಬೇರಾ ವುದೋ ನಕ್ಷತ್ರ ವನ್ನು ಸುತ್ತುವ ಗ್ರಹಗಳಲ್ಲಿ ಜೀವಿಗಳಿದ್ದರೆ ಅದರಲ್ಲೇನೂ ಅಚ್ಚರಿಯಿಲ್ಲ ಎನ್ನುವ
ಅವರು ನಭೋ ಮಂಡಲದ ಎಲ್ಲ ನಕ್ಷತ್ರಮಂಡಲಗಳನ್ನೂ ಜಾಲಾಡಲು ಯತ್ನಿಸುತ್ತಿದ್ದಾರೆ. ಮೊದಲಿಗೆ ನಮ್ಮದೇ ಕ್ಷೀರಪಥ ಗ್ಯಾಲಕ್ಸಿ ಯಲ್ಲಿನ ಗ್ರಹಗಳನ್ನು ಶೋಧಿಸಲು ಯತ್ನಿಸಿದ್ದಾರೆ.
ನಮ್ಮ ಲ್ಲಿಂದು ಬಾಹ್ಯಾಕಾಶ ವಿಜ್ಞಾನ ಕ್ಷಿಪ್ರವಾಗಿ ಅಭಿವೃದ್ಧಿ ಯಾಗುತ್ತಿದ್ದು, ನಭೋ ಮಂಡಲಕ್ಕೆ ನಿರಂತರವಾಗಿ ಸಂದೇಶ ಕಳಿಸುತ್ತಿದ್ದೇವೆ. ಹಾಗೆಯೇ ಅಲ್ಲಿಂದ ಬಂದ ಕುತೂಹಲಕರ ಶಬ್ದಗಳನ್ನು ವಿಶ್ಲೇಷಿಸಿ, ಅವು ಏಲಿಯನ್‌ಗಳು ಕಳುಹಿಸಿದ ಸಂದೇಶವೇ ಎಂದು ಪರೀಕ್ಷಿಸುತ್ತಿದ್ದೇವೆ. ಸಂದೇಶಗಳ ಭಾಷೆಯೇ ಸಿಗ್ನಲ್‌ಗಳು. ಕಳೆದ ವರ್ಷ ಕೇವಲ ೮೨ ತಾಸಿನಲ್ಲಿ ೧೮೬೩ ರೇಡಿಯೋ ಸಿಗ್ನಲ್‌ಗಳನ್ನು ಅಂತರಿಕ್ಷ ವಿಜ್ಞಾನಿಗಳು ಸ್ವೀಕರಿಸಿದ್ದಾರೆ.
ಇವನ್ನು ಅಧ್ಯಯನಕ್ಕೊಳಪಡಿಸಿದ್ದ ಚೀನಾ ಬಾಹ್ಯಾಕಾಶ ವಿಜ್ಞಾನಿ ಹೆಂಗ್ ಶು, ‘ಪ್ರಬಲ ಅಯಸ್ಕಾಂತೀಯ ಶಕ್ತಿಯಿರುವ ನ್ಯೂಟ್ರಾನ್ ನಕ್ಷತ್ರದಿಂದ ಬಂದ ರೇಡಿಯೋ ಅಲೆಗಳಿವು’ ಎಂದಿದ್ದಾರೆ. ಹಾಗಾದರೆ ಅವನ್ನು ಯಾರಾದರೂ ನಮಗೆ ಕಳುಹಿಸುತ್ತಿದ್ದಾರೆಯೇ? ಏಕೆಂದರೆ ಈ ಹಿಂದೆಯೇ ವಿವಿಧ ದೇಶದ ವಿಜ್ಞಾನಿಗಳೂ ಅಂತರಿಕ್ಷಕ್ಕೆ ಅನೇಕ ರೇಡಿಯೋ ಸಿಗ್ನಲ್ ಗಳನ್ನು ಕಳುಹಿಸಿದ್ದು, ಅವಕ್ಕೆ ಉತ್ತರವಾಗಿ ಅಥವಾ ಸ್ವಯಂ ಪ್ರೇರಿತವಾಗಿ ಬೇರಾವುದೋ ಗ್ರಹದಿಂದ ನಮಗೆ ಈ ಸಂದೇಶ ಗಳು ಬಂದಿರಬಹುದು. ೧೯೭೭ರ ಆಗಸ್ಟ್ ೧೫ರಂದು ಅಮೆರಿಕದ ಒಹಾಯೋದಲ್ಲಿನ ಬಿಗ್ ಇಯರ್ ಟೆಲಿಸ್ಕೋಪ್ ೨೦೦ ಜ್ಯೋತಿರ್ವರ್ಷಗಳಷ್ಟು ದೂರದಿಂದ ಬಂದ ಸಂದೇಶ ವೊಂದನ್ನು ಸ್ವೀಕರಿಸಿತ್ತು. ಅದನ್ನು ಬೆಳಕಿನ ವೇಗಕ್ಕೆ ಪರಿವರ್ತಿಸಿದರೆ ಪ್ರತಿ ಸೆಕೆಂಡ್‌ಗೆ ೩ ಲಕ್ಷ ಕಿ.ಮೀ. ವೇಗವಾಗುತ್ತದೆ!
ಅಂದರೆ ಬೆಳಕು ೨೦೦ ವರ್ಷಗಳಲ್ಲಿ ಸಾಗುವಷ್ಟು ದೂರದಿಂದ ಆ ಸಿಗ್ನಲ್ ನಮಗೆ ಬಂದಿದೆ. ‘ನಿಜವಾಗಿಯೂ ಏಲಿಯನ್‌ಗಳಿವೆಯೇ?’ ಎಂದು ನಾನೊಮ್ಮೆ ಮಾಜಿ ರಾಷ್ಟ್ರಪತಿ ಹಾಗೂ ಪ್ರಸಿದ್ಧ ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂರನ್ನು ಕೇಳಿದ್ದೆ. ಅದಕ್ಕವರು ಗಂಭೀರವಾಗಿ, ‘ಭೂಮಿಗಿಂತ ದೊಡ್ಡ ನಕ್ಷತ್ರಗಳು ಮತ್ತು
ಗ್ರಹಗಳು ಈ ಬ್ರಹ್ಮಾಂಡದಲ್ಲಿ ಬೇಕಾದಷ್ಟಿವೆ. ಹೀಗಾಗಿ ಅನ್ಯಗ್ರಹಗಳಲ್ಲಿ ಜೀವಿಗಳಿರುವುದನ್ನು ಅಲ್ಲಗಳೆಯಲಾಗದು’ ಎಂದಿದ್ದರು.
ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನ್ ಕೂಡ ಒಮ್ಮೆ, “ನಾವಿಲ್ಲಿ ಕುಳಿತು ‘ಈ ಬ್ರಹ್ಮಾಂಡದಲ್ಲಿ ಏಲಿಯನ್‌ಗಳಿಲ್ಲ’ ಎನ್ನುವುದು ಸಮುದ್ರದಿಂದ ೧ ಚಮಚ ನೀರು ತೆಗೆದು ಕೊಂಡು ಪರಿಶೀಲಿಸಿ, ‘ಈ ನೀರಿನಲ್ಲಿ ತಿಮಿಂಗಿಲಗಳಿಲ್ಲ, ಹೀಗಾಗಿ ಸಮುದ್ರದಲ್ಲೂ ಅವು ಇಲ್ಲ’ ಎಂದು ಹೇಳಿದಂತಾ ಗುತ್ತದೆ” ಎಂದಿದ್ದರು! ನಮ್ಮ ಬಾಹ್ಯಾಕಾಶ ವಿಜ್ಞಾನವಿಂದು ಅಭಿವೃದ್ಧಿ ಹೊಂದುತ್ತಿರುವ ವೇಗ ನೋಡಿದರೆ, ಒಂದಲ್ಲಾ ಒಂದು ದಿನ ನಾವು ನಿಸ್ಸಂಶಯವಾಗಿ ಏಲಿಯನ್‌ಗಳ ಸಂಪರ್ಕಕ್ಕೆ ಬರುತ್ತೇವೆ. ಆದರೆ, ನಿಜವಾದ ಪ್ರಶ್ನೆಯೆಂದರೆ, ಆಗ ಏನು ಮಾಡುತ್ತೇವೆ? ಏಲಿಯನ್‌ಗಳೇ ಇಲ್ಲಿಗೆ ಬಂದು ಬಾಗಿಲು ಬಡಿದರೆ ಮುಂದೇನು ಕತೆ? ನಾವು ಅವಕ್ಕೇನಾದರೂ ಮಾಡುತ್ತೇವಾ ಅಥವಾ ಅವೇ ನಮಗೇನಾ ದರೂ ಮಾಡುತ್ತವಾ? ಅವುಗಳ ಭಾಷೆ ಯಾವುದು, ಹೇಗೆ ವರ್ತಿಸುತ್ತವೆ? ನಾವೀಗ ಸಿನಿಮಾ ಗಳಲ್ಲಿ ನೋಡುವಂತೆಯೇ ಅವು ಇರು ತ್ತವಾ? ಅಂಥದ್ದೊಂದು ಮುಖಾಮುಖಿಗಾಗಿ ಕಾಯೋಣ!
(ಲೇಖಕರು ಹಿರಿಯ ಪತ್ರಕರ್ತರು)