Saturday, 14th December 2024

ಎರಡು ಕುಟುಂಬಗಳು ಹಂಚಿಕೊಂಡ ಜೀವಂತ ಮರ !

ಶಶಾಂಕಣ

shashidhara.halady@gmail.com

ತೋಟದ ಮಧ್ಯದಲ್ಲಿ ಆ ಬೃಹತ್ ಮರ ಇತ್ತು. ಆಸ್ತಿ ಭಾಗವಾಗುವಾಗ, ಆ ಮರ ನಮಗೇ ಬೇಕು ಎಂದು ಇಬ್ಬರಿಂದಲೂ ಬೇಡಿಕೆ! ಏಕೆಂದರೆ, ಪ್ರತಿವರ್ಷ ಆ ಮರದಲ್ಲಿ ಸಾವಿರಾರು ಪುಟಾಣಿ ಕಾಯಿಗಳು ಆಗುತ್ತವೆ, ಅವು ನೆಲಕ್ಕೆ ಬೀಳುತ್ತವೆ, ಅದನ್ನು ಆಯಲು ಪೈಪೋಟಿ. ಯಾವುದು ಆ ಮರ?

ನಮ್ಮ ಮನೆಯಲ್ಲಿ ಜೀವಂತ ಮರವೊಂದನ್ನು ಪಾಲು (ಭಾಗ) ಮಾಡಿ, ಎರಡೂ ಮನೆಯವರು ಅದರ ಉತ್ಪನ್ನಗಳನ್ನು ಬಳಸಿದ್ದು, ಅದಕ್ಕಾಗಿ ನಡೆದ ಜಗಳ ಎಲ್ಲವೂ ಸ್ವಾರಸ್ಯಕರವಾಗಿದೆ. ನಮ್ಮ ಮನೆಯ ಹಿಂದೆಯೇ ಒಂದು ತೋಟ. ಅದರಲ್ಲಿ ಕೆಲವು ಅಡಕೆ ಮರಗಳಿದ್ದರೂ, ಅವುಗಳ ಜತೆಯಲ್ಲೇ ನಾನಾ ರೀತಿಯ ಇತರ ಮರ, ಗಿಡ, ಬಳ್ಳಿಗಳಿದ್ದವು.

ಅದು ಅಡಕೆ ತೋಟ ಎನಿಸಿದ್ದರೂ, ಅದೇಕೋ ಅದರ ಉಸ್ತುವಾರಿಯನ್ನು ನಮ್ಮ ಹಿರಿಯರು ಮಾಡಿದ್ದು ಅಷ್ಟಕ್ಕಷ್ಟೇ. ಅಥವಾ ಪರಿಸರ ರಕ್ಷಣೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಸಸ್ಯವೈವಿಧ್ಯವನ್ನು ಉಳಿಸಿಕೊಂಡೇ, ಆ ಅಡಕೆ ತೋಟವನ್ನು ರೂಪಿಸಿದ್ದರು. ಅಲ್ಲೊಂದಿಷ್ಟು ಅಡಕೆ ಮರಗಳೇ ಪ್ರಧಾನವಾಗಿ ಬೆಳೆದಿದ್ದರೂ, ಅವುಗಳ ನಡುವೆ, ತೋಟದ ಅಂಚಿನಲ್ಲಿ ನಾನಾ ರೀತಿಯ ಕಾಡು ಮರಗಳಿದ್ದವು, ಇತರ ಸಸ್ಯಗಳೂ ಇದ್ದವು.

ಆ ಅಡಕೆ ತೋಟದಲ್ಲಿ ಬೆಳೆದಿದ್ದ ಇತರ ಮರ, ಗಿಡ, ಪ್ರಭೇದ ನೂರು ದಾಟಬಹುದೇನೊ – ತಕ್ಷಣ ನೆನಪಾಗುವುದೆಂದರೆ, ಅಮಟೆ ಮರ, ಹೆಬ್ಬಲಸಿನ ಮರ, ದಿಂಡಿನ ಕಾಯಿ ಮರ, ಕಾಟು ಮಾವಿನ ಮರ, ನಾಲ್ಕಾರು ಹಲಸಿನ ಮರ, ಧೂಪದ ಮರ, ಸಂಪಿಗೆ, ಬಾಗಾಳು ಮರ, ತೇಗ ಮರ, ಹಂಗಾರ ಮರ (ಇದರ ಚಕ್ಕೆ ಜ್ವರಕ್ಕೆ ಔಷಧ), ಕಸಿ ಮಾವಿನ ಮರ, ಭಟ್ಕಳ ಮಾವಿನ ನಾಲ್ಕಾರು ಮರಗಳು, ಬೃಹತ್ ಗಾತ್ರದ ಸೀಗೆಬಳ್ಳಿ, ಚಾರು ಮರ, ದಾಸವಾಳ, ರಥಪುಷ್ಪ, ಕಾಡು ಶುಂಠಿ, ಪೇರಳೆ ಮರ, ಅಂಚಿನಲ್ಲಿ ಬೋಗಿ ಮರ, ಸಳ್ಳೆ ಮರ, ನೇರಲ ಮರ, ಮುಂಡು ಕನ ಹಿಂಡಲುಗಳ ಸಾಲು, ಆಡು ಸೋಗೆ, ಆರೇಳು ತೆಂಗಿನ ಮರ, ನಾನಾ ವಿಧದ ಚಿಕ್ಕಪುಟ್ಟ ಗಿಡಗಳು, ಹುಲ್ಲು ಜಾತಿಯ ಸಸ್ಯಗಳು – ಈ ರೀತಿ, ಲೆಕ್ಕ ಮಾಡುತ್ತಾ ಹೋದರೆ, ಅಲ್ಲಿ ನೂರಕ್ಕೂ ಹೆಚ್ಚು ಇತರ ಮರಗಿಡಗಳೇ ಇದ್ದವು!

ಕೃಷಿ ತಜ್ಞರು ಹೇಳಿಯಾರು – ಅಡಕೆ ಇಳುವರಿ ಜಾಸ್ತಿಯಾಗಬೇಕಾದರೆ, ಈ ರೀತಿ ಆಳವಾಗಿ ಬೇರು ಬಿಡುವ ಮರಗಳ ತಂಟೆ ತಕರಾರು ಅವಕ್ಕೆ ಇರಬಾರದು ಎಂದು. ಆದರೆ, ನಮ್ಮ ಹಿರಿಯರ ಲೆಕ್ಕಾಚಾರವೆಂದರೆ, ಈ ರೀತಿ ಹತ್ತೆಂಟು ಇತರ ಮರ ಗಳಿದ್ದರೆ, ವರ್ಷಕ್ಕೊಮ್ಮೆ ಆ ಮರಗಳ ಎಲೆಗಳನ್ನು ಕಡಿದು, ಅಡಕೆ ಮರದ ಬುಡಕ್ಕೆ ಹಾಕಬಹುದು, ಅದೇ ಗೊಬ್ಬರ ವಾದೀತು ಎಂದು!

ನಮ್ಮ ಆ ಅಡಕೆ ತೋಟವು, ಕಾಡಿನ ಒಂದು ತುಣುಕನ್ನೇ ತನ್ನೊಳಗೆ ಸೇರಿಸಿಕೊಂಡಿದ್ದರಿಂದಲೋ ಏನೊ, ವಿವಿಧ ಪ್ರಭೇದ ಗಳ ಜೀವಿಗಳೂ ಅಲ್ಲಿದ್ದವು ಅಥವಾ ಆಗಾಗ ಭೇಟಿಕೊಡುತ್ತಿದ್ದವು. ಮೀನು ಗೂಬೆ, ದೊಡ್ಡ ಕೊಂಬಿನ ಗೂಬೆಗಳು ಒಂದೊಂದು ರಾತ್ರಿ ನಮ್ಮ ತೋಟಕ್ಕೆ ಬಂದು, ಮಾವಿನ ಮರದ ಮೇಲೋ ದಿಂಡಿನ ಕಾಯಿ ಮರದ ಮೇಲೋ ಕುಳಿತು, ನಡುರಾತ್ರಿಯ ನೀರವತೆಯನ್ನು ಭೇದಿಸುವಂತೆ ಕೂಗುವುದಿತ್ತು. ಆಗ ಮನೆಯಲ್ಲಿರುವ ಮಕ್ಕಳಿಗೆ ಭಯ!

ಅದರಲ್ಲೂ ಗ್ರೇಟ್ ಹಾರ್ನ್‌ಡ್ ಔಲ್ ಅಥವಾ ದೊಡ್ಡ ಕೊಂಬಿನ ಗೂಬೆಯೋ, ಬೇರಾವುದೋ ಗೂಬೆಯೋ ಮನೆ ಹಿಂದಿದ್ದ ಎತ್ತರವಾದ ತೇಗದ ಮರದ ತುದಿಯಲ್ಲಿ ಕುಳಿತು ಕೂಗಿದರೆ, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಭಯವಾಗುತ್ತಿತ್ತು! ಅದರ ‘ಹುಂ ಹೂಂ’ ಎಂಬ ಆಳವಾದ ದನಿ ಕೇಳಿದರೆ ಎಲ್ಲರಿಗೂ ಭಯ! ಇದಕ್ಕೊಂದು ಕಾರಣ ವೂ ಇದೆ – ಆ ಕೂಗನ್ನು ಕೇಳಿದ ಕೂಡಲೆ, ನಮ್ಮ ಅಮ್ಮಮ್ಮ ‘ಭೂತ ಹಕ್ಕಿ ಕೂಗತ್ ಕಾಣಿ’ ಎಂದು ಹೇಳಿ, ಮನೆಯವರಿಗೆಲ್ಲಾ ಭಯ ತಂದಿಡುತ್ತಿದ್ದರು.

ಮನೆ ಹತ್ತಿರ ಭೂತ ಹಕ್ಕಿ ಕೂಗಿದರೆ, ಅಪಶಕುನ ಎಂಬ ನಂಬಿಕೆ. ಈ ಅಡಕೆ ತೋಟದ ಕಾಡಿನ ರೀತಿಯ ವಾತಾವರಣವನ್ನು ಇಷ್ಟಪಟ್ಟು, ಇಲ್ಲೇ ವಾಸಿಸುತ್ತಿದ್ದ ಹಲವಾರು ಜೀವಿಗಳಲ್ಲಿ ಹಾರುವ ಓತಿಯೂ ಒಂದು. ಅಡಕೆ ಮರದಿಂದ ಅಡಕೆ ಮರಕ್ಕೆ ಹಾರುವ ಓತಿ ಹಾರುವುದನ್ನು ಅಲ್ಲಿ ನಾನು ಹಲವು ಬಾರಿ ಕಂಡಿದ್ದೆ. ವಿವಿಧ ಹಾವುಗಳು, ಕಪ್ಪೆಗಳು, ಅಳಿಲುಗಳು ಆ ತೋಟ ವನ್ನೇ ಮನೆಮಾಡಿಕೊಂಡಿದ್ದವು. ಅದೇನಿದ್ದರೂ, ತೋಟ ತೋಟವೇ; ಅದರಿಂದ ಬರುತ್ತಿದ್ದ ಅಲ್ಪ ಆದಾಯವು ಮನೆಯವರಿಗೆ ಆ ದಿನಗಳಲ್ಲಿ ಆರ್ಥಿಕ ಚೇತನ ನೀಡುತ್ತಿತ್ತು ಎಂಬುದು ಸ್ಪಷ್ಟ.

ಆದ್ದರಿಂದಲೇ ನಮ್ಮ ಮನೆಯಲ್ಲಿ ಭಾಗವಾದಾಗ, ಈ ತೋಟವನ್ನು ಸಮಭಾಗ ಮಾಡುವಾಗ, ಸಾಕಷ್ಟು ವಾದ ವಿವಾದಗಳು ಆಗಿದ್ದವಂತೆ. ಈ ವಿಭಾಗ ನಡೆದದ್ದು ನಮ್ಮ ಅಮ್ಮಮ್ಮನ ಕಾಲದಲ್ಲಿ. ತೋಟದಲ್ಲಿದ್ದ ತೆಂಗಿನ ಮರ, ಅಡಕೆ ಮರಗಳನ್ನು
ಲೆಕ್ಕಹಾಕಿ, ಎರಡೂ ಪಾಲಿನವರಿಗೆ ಹೆಚ್ಚು ನಷ್ಟವಾಗದಂತೆ ಭಾಗ ಮಾಡಿದ್ದರು. ಆದರೆ ಒಂದು ಸಮಸ್ಯೆ ಎದುರಾಗಿತ್ತು. ಎರಡೂ ಭಾಗದವರಿಗೆ ಅಗತ್ಯ ಎನಿಸುವ, ತೋಟದ ಮಧ್ಯೆ ತಲೆ ಎತ್ತಿದ್ದ, ಸಾವಿರಾರು ಧೂಪದ ಕಾಯಿಗಳನ್ನು ಬಿಡುವ ಆ
ಒಂದು ಧೂಪದ ಮರಕ್ಕಾಗಿ ಎರಡೂ ಕಡೆಯವರಿಂದ ಬೇಡಿಕೆ!

ಆಸ್ತಿ ಭಾಗ ಮಾಡಲು ಕುಳಿತಿದ್ದ ಹಿರಿಯರು, ಮಧ್ಯಮ ಮಾರ್ಗ ಸೂಚಿಸಿದರು. ಗಡಿಗುರುತಿನ ಹತ್ತಿರವೇ ಇದ್ದ ಆ ಬೃಹತ್ ಧೂಪದ ಮರದ ಕಾಲು ಭಾಗ ನಮ್ಮ ದಾಯಾದಿಗಳಿಗೂ, ಮುಕ್ಕಾಲು ಭಾಗ ನಮ್ಮ ಮನೆಯವರಿಗೂ ಸೇರಬೇಕು ಎಂದು ನಿರ್ಧರಿಸಿದರು. ಹತ್ತು ಅಡಿಗೂ ಹೆಚ್ಚಿನ ಸುತ್ತಳತೆ ಇದ್ದ ಆ ಮರದ ಕಾಂಡದ ಮೇಲೆ, ಅದೇ ರೀತಿ ಭಾಗವಾಗುವಂತೆ ಗಡಿ ರೇಖೆ ಹಾದು ಹೋಗಿತ್ತು.

ಇದರಿಂದ ಒಂದು ಸಹಜವಾಗಿ ಮತ್ತೊಂದು ಸಮಸ್ಯೆ ಎದುರಾಯಿತು. ಪ್ರತಿ ಮಳೆಗಾಲದಲ್ಲಿ ಆ ಬೃಹತ್ ಧೂಪದ ಮರ
ಸಾವಿರಾರು ಕಾಯಿಗಳನ್ನು ನೆಲಕ್ಕೆ ಬೀಳಿಸಿದಾಗ, ಎರಡೂ ಮನೆಯ ಮಕ್ಕಳು ಕಾಯಿ ಹೆಕ್ಕಲು ಹೋಗಿ, ಬೇಗ ಬೇಗನೆ
ಆಯುವಾಗ ತುಸು ಜಾಸ್ತಿ ಪ್ರಮಾಣದಲ್ಲಿ ಕಾಯಿ ಆಯುತ್ತಿದ್ದರು. ಅದನ್ನು ನೋಡಿದ ಮಕ್ಕಳಲ್ಲೇ ವಾದ ವಿವಾದ ‘ನೀನೇಕೆ ಜಾಸ್ತಿ ಆರಿಸಿದೆ? ನಮಗೆ ಜಾಸ್ತಿ ಕಾಯಿ ಬೇಕು! ಈ ಭಾಗದ ಕಾಯಿಗಳನ್ನು ನೀನು ಆರಿಸುವಂತಿಲ್ಲ!’ ಇಂಥದ್ದೇ ತಕರಾರು. ಮಕ್ಕಳ ನಡುವಿನ ಈ ಸಣ್ಣ ಪ್ರಮಾಣದ ಘರ್ಷಣೆಯು ಹಿರಿಯರ ಮಟ್ಟಕ್ಕೂ ತಲುಪಿ, ಜಗಳಗಳು ನಡೆದು, ನಮ್ಮ ಮನೆಗೆ ಆ ಸಮಯದಲ್ಲಿ ಬಂದಿದ್ದ ಬಂಧುಗಳಿಗೂ ನಮ್ಮ ದಾಯವಾದಿಗಳಿಗೂ ಭಾರೀ ಜಗಳವಾಗಿ, ಇಬ್ಬರೂ ಪರಸ್ಪರ 20 ವರ್ಷ ಮಾತು ಬಿಡುವಂತಾಗಿತ್ತು! ಹಾಗಿತ್ತು ಧೂಪದ ಕಾಯಿ ಮಹಿಮೆ.

ಈಗ ನಿಮಗೆ ಸ್ವಲ್ಪವಾದರೂ ಕುತೂಹಲ ಮೂಡಿರಲೇಬೇಕು. ಮನೆಯ ಹಿರಿಯರು ಜಗಳವಾಡಲು ಪ್ರೇರೇಪಿಸಿದ ಆ ಧೂಪದ ಕಾಯಿಗಳಿಗೆ ಅದೇಕೆ ಅಷ್ಟೊಂದು ಪ್ರಾಮುಖ್ಯತೆ? ಅದೇನು ಬೆಲೆ ಬಾಳುವ ಕಾಯಿಯೆ? ಇದನ್ನು ತಿಳಿಯಲು ಧೂಪದ ಮರದ ಸ್ವರೂಪ, ಕಾಯಿಗಳ ಸ್ವರೂಪ, ಆಯ್ದುಕೊಳ್ಳಲು ಪೈಪೋಟಿ, ಅದರ ಉಪಯೋಗ ಎಲ್ಲವನ್ನೂ ಗಮನಿಸಬೇಕಾಗುತ್ತದೆ.

ಧೂಪದ ಮರ (ವೆಟೇರಿಯಾ ಇಂಡಿಕಾ ಅಥವಾ ವೆಟೇರಿಯಾ ಮಲಬಾರಿಕಾ) ನಮ್ಮ ನಾಡಿನಲ್ಲಿ ಮಾತ್ರ ಬೆಳೆಯುವ ದೊಡ್ಡ ಗಾತ್ರದ ಮರ. ಪಶ್ಚಿಮ ಘಟ್ಟಗಳುದ್ದಕ್ಕೂ, ಕರ್ನಾಟಕ, ಕೇರಳ, ತಮಿಳು ನಾಡು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ
ಈ ಮರಗಳನ್ನು ನೋಡಬಹುದು. ದಪ್ಪನೆಯ, ದಟ್ಟ ಹಸಿರು ಎಲೆಗಳನ್ನು ತುಂಬಿಕೊಂಡು ಬೆಳೆಯುತ್ತಿದ್ದ ಈ ದೊಡ್ಡ ಗಾತ್ರದ ಮರದ ನೆರಳಿನಲ್ಲಿ ನಿಂತರೆ, ಬಿಸಿಲಿನ ಚಿಕ್ಕ ಕಣವೂ ಮೈ ಸೋಕದು; ಸಣ್ಣ ಮಳೆಯಿಂದಲೂ ಈ ಪರ್ಣರಾಶಿ ರಕ್ಷಣ ನೀಡಲ್ಲದು.
ದಪ್ಪ ಗಾತ್ರದ ಮರದ ಕಾಂಡಕ್ಕೆ ಗಾಯ ಮಾಡಿದರೆ ಹೊರಸೂಸುವ ರಸದಿಂದ ರಾಳ ತಯಾರಿಸಬಹುದು.

ಕಾಂಡವು ತೀರ ಗಟ್ಟಿಯಲ್ಲ; ನಾಟಾವಾಗಿ ಉಪಯೋಗವಿಲ್ಲ. ಆದರೆ ದೋಣಿ ತಯಾರಿಸಲು ಉಪಯೋಗಿಸುವುದುಂಟು. ಧೂಪದ ಎಲೆಗಳನ್ನು ಬೇಯಿಸಿ, ಒಣಗಿಸಿ, ಮಳೆ ತಡೆಯುವ ಗೊರಬಿಗೆ ಸಾಲಾಗಿ ಹಚ್ಚುವ ಪದ್ಧತಿ ಇತ್ತು. ಈ ಮರದ ಕಾಯಿಗಳ ಸ್ವರೂಪ ಮತ್ತು ಉಪಯೋಗ ನಿಜಕ್ಕೂ ವಿಶೇಷ. ಅಡಕೆ ಗಾತ್ರದ ಕಾಯಿಗಳು, ಮಳೆ ಬಂದ ಒಂದೆರಡು ವಾರ ಗಳಲ್ಲಿ ಮರದಿಂದ ಉದುರಲು ಆರಂಭಿಸುತ್ತವೆ. ದೊಡ್ಡ ಗಾತ್ರದ ಧೂಪದ ಮರದ ಅಡಿ, ಪ್ರತಿದಿನ ಸಾವಿರಾರು ಧೂಪದ ಕಾಯಿಗಳು ಬೀಳುತ್ತವೆ; ಹತ್ತರಿಂದ ಹದಿನೈದು ದಿನಗಳ ತನಕ ಇದನ್ನು ನೋಡಬಹುದು.

ಮಳೆಯ ನೀರಿನಿಂದಾಗಿ, ಆ ಕಾಯಿಗಳು ಮರದಲ್ಲಿರುವಾಗಲೇ ಮೊಳಕೆ ಬರಲು ಆರಂಭಿಸುತ್ತವೆ. ನೆಲಕ್ಕೆ ಬಿದ್ದು ಒಂದೆರಡು
ದಿನಗಳಲ್ಲಿ ಒಂದಿಂಚು ಉದ್ದದ ಮೊಳಕೆ ಸಾಮಾನ್ಯ; ಗಣಪತಿಯ ಸೊಂಡಿಲನ್ನು ಹೋಲುವ ಆ ಮೊಳಕೆಯಿಂದಾಗಿ, ಇದನ್ನು ಸೊಂಡಿಲು ಕಾಯಿ ಎಂದು ತಮಾಷೆಗೆ ಹೇಳುವುದುಂಟು. ಈ ಆ ಕಾಯಿಯ ಹೊರಭಾಗವನ್ನು ಒಡೆದು ತೆಗೆದರೆ, ನಸು ಹಳದಿಯ ಒಳಭಾಗಕ್ಕೆ ವಾಣಿಜ್ಯಕ ಮೌಲ್ಯವಿದೆ. ಈಚಿನ ದಶಕಗಳಲ್ಲಿ ಅದನ್ನು ಆಯ್ದು, ಪುಡಿ ಮಾಡಿ, ಮಾರಿದರೆ ಕಿಲೋಗೆ ಇಂತಿಷ್ಟು ಎಂದು ವ್ಯಾಪಾರಿಗಳು ಖರೀದಿಸುತ್ತಾರೆ.

ಅದರಲ್ಲಿ ಕೊಬ್ಬಿನ ಅಂಶವಿದೆ. ಆದ್ದರಿಂದ, ಸೋಪು, ಶಾಂಪೂ ತಯಾರಿಗೆ ಬಳಕೆ. 1980ರ ದಶಕದಲ್ಲಿ ಕೆಲವು ಮಕ್ಕಳಿಗೆ, ಮನೆಯವರಿಗೆ ಇದೇ ಕೆಲಸ. ಮಳೆಯಲ್ಲಿ ನೆನೆಯುತ್ತಾ, ಧೂಪದ ಕಾಯಿಗಳನ್ನು ಆರಿಸಿ, ಕಲ್ಲಿನಿಂದ ಜಜ್ಜಿ ಅದರ ಕವಚ ಹೊರತೆಗೆದು, ಪುಡಿ ಮಾಡಿ ಅಂಗಡಿಗೆ ಮಾರಿ, ಅದರಿಂದ ಬಂದ ಹಣದಿಂದ ಶಾಲೆಯ ಖರ್ಚನ್ನು, ಮನೆಯ ಖರ್ಚನ್ನು ಸರಿದೂಗಿಸಿದವರೂ ಇದ್ದರು.

ಇದಕ್ಕೂ ಮುಂಚೆ, ಅಂದರೆ 1970ರ ದಶಕದ ತನಕ, ಧೂಪದ ಕಾಯಿಯಿಂದ ಧೂಪದ ಎಣ್ಣೆಯನ್ನು ತಯಾರಿಸುವ ಪದ್ಧತಿ ನಮ್ಮ ಮಲೆನಾಡು ಮತ್ತು ಕರಾವಳಿಯ ಕೆಲವೇ ಕೆಲವು ಭಾಗದಲ್ಲಿತ್ತು ಎಂಬ ವಿಚಾರವು ಈಗ ಬಹುಪಾಲು ಮರೆತು
ಹೋಗಿದೆ. ಕಾಡಿನಲ್ಲಿ ಬೆಳೆವ ಈ ಮರದಿಂದ, ಖಾದ್ಯ ತೈಲ ತಯಾರಿಸಬಹುದು ಎಂಬ ವಿಚಾರವೇ ವಿಸ್ಮಯ. ಜತೆಗೆ, ಆ ಖಾದ್ಯ ತೈಲದಲ್ಲಿನ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣದಿಂದಾಗಿ, ಅದು ಉಂಡೆಯ ರೂಪ ತಾಳುತ್ತಿತ್ತು. ಕ್ರಿಕೆಟ್ ಬಾಲ್
ನಂತಿರುವ ಅವುಗಳನ್ನು ಬಿಸಿ ಮಾಡಿದರೆ, ಎಣ್ಣೆಯಾಗುತ್ತಿತ್ತು. ಮಳೆಗಾಲದಲ್ಲಿ ಹಲಸಿನ ಮುಳುಕ ಮಾಡಲು ಅಥವಾ ಹಪ್ಪಳ ಹುರಿಯಲು, ಒಂದು ಉಂಡೆ ಧೂಪದ ಎಣ್ಣೆಯನ್ನು ಬಾಣಲಿಗೆ ಹಾಕಿದರೆ ಸಾಕು, ಅರ್ಧ ಬಾಣಲೆ ಖಾದ್ಯ ತೈಲ ಸಿದ್ಧ!

ಹಣ ಕೊಟ್ಟು ಅಂಗಡಿಯಿಂದ ಖರೀದಿಸುವ ಪ್ರಮೇಯವಿರಲಿಲ್ಲ. ಧೂಪದ ಕಾಯಿಯಿಂದ ಧೂಪದ ಎಣ್ಣೆ ಮಾಡಲು ಇದ್ದ ಒಂದೇ ತೊಡಕೆಂದರೆ, ಅಪಾರ ಶ್ರಮ. ನಮ್ಮ ತೋಟದಲ್ಲಿದ್ದ ಧೂಪದ ಮರದ ರೀತಿ, ಸುತ್ತಲಿನ ಹಾಡಿ, ಹಕ್ಕಲುಗಳಲ್ಲಿ ಹತ್ತಾರು
ಧೂಪದ ಮರಗಳಿದ್ದವು. ಸುರಿಯುವ ಮಳೆಯ ನಡುವೆಯೇ, ಆ ಮರಗಳತ್ತ ಸಾಗಿ, ಧೂಪದ ಕಾಯಿಗಳನ್ನು ಆರಿಸಿ ತಂದು, ಕಲ್ಲಿನಿಂದ ಜಜ್ಜಿ ಅದರ ಹೊರ ಭಾಗದ ಸಿಪ್ಪೆಯನ್ನು ಪತ್ಯೇಕಿಸಿ, ನಸು ಹಳದಿ ಬಣ್ಣದ ಒಳಗಿನ ತಿರುಳನ್ನು ಪುಡಿ ಮಾಡಿ
ರಾಶಿ ಹಾಕುವುದು ಮೊದಲ ಹಂತದ ಶ್ರಮ. ಆ ತಿರುಳನ್ನು ಅರೆಯುವ ಕಲ್ಲಿಗೆ ಹಾಕಿ ಅರೆಯುವುದು ಎರಡನೆಯ ಹಂತದ ಶ್ರಮ.

ಅದನ್ನು ಒಂದು ದೊಡ್ಡ ಪಾತ್ರೆಗೋ, ತೆರೆದ ಬಾಯಿಯ ದೊಡ್ಡ ಡಬ್ಬಿಗೋ ಹಾಕಿ, ನಾಲ್ಕಾರು ಗಂಟೆ ಕುದಿಸುವುದು ಮೂರನೆ ಯ ಹಂತದ ಶ್ರಮ. ಅಷ್ಟಾದ ನಂತರ, ಅದನ್ನು ಆರಲು ಬಿಟ್ಟರೆ, ಸುಮಾರು ಒಂದು ಲೀಟರ್ ಧೂಪದ ಎಣ್ಣೆಯು ಮೇಲ್ಭಾಗದಲ್ಲಿ ತೇಲುತ್ತದೆ. ಸೌಟಿನಿಂದ ಅದನ್ನು ಸಂಗ್ರಹಿಸಿ, ಬೇರೊಂದು ಪಾತ್ರೆಗೆ ಹಾಕಿ, ಅದು ಗಟ್ಟಿಯಾಗುತ್ತಾ ಬಂದಂತೆಲ್ಲಾ, ಕ್ರಿಕೆಟ್ ಬಾಲ್ ಗಾತ್ರಕ್ಕೆ ಉಂಡೆ ಕಟ್ಟಿ, ಡಬ್ಬಿಗೆ ಹಾಕಿಟ್ಟು ಸಂಗ್ರಹಿಸಿದರೆ, ಆರೆಂಟು ತಿಂಗಳುಗಳ ಕಾಲ ಖಾದ್ಯ ತೈಲವಾಗಿ ಉಪಯೋ ಗಿಸಬಹುದು.

ಹಿಂದಿನ ದಿನಗಳಲ್ಲಿ ಮದುವೆ ಮುಂಜಿ ಇದ್ದರೆ, ಆ ವರ್ಷ ಹೆಚ್ಚು ಹೆಚ್ಚು ಧೂಪದ ಎಣ್ಣೆ ಮಾಡಿ ಇಟ್ಟುಕೊಳ್ಳುತ್ತಿದ್ದರಂತೆ.
ಈ ಎಣ್ಣೆ ಯನ್ನು ಕೈ ಕಾಲುಗಳಿಗೆ ಹಚ್ಚಿಕೊಂಡರೆ, ಗಂಟು ನೋವು, ಕೀಲು ನೋವು, ವಾತದ ನೋವು ಎಲ್ಲವೂ ಉಪಶಮನ ವಾಗುತ್ತದೆ! ಆ ಉದ್ದೇಶಕ್ಕೆಂದೇ ಒಂದೆರಡು ಉಂಡೆ ಧೂಪದ ಎಣ್ಣೆಯನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದರು. ಹಾಗಿದ್ದರೆ ಧೂಪದ ಎಣ್ಣೆಯಲ್ಲಿ ಔಷಧಿಯ ಗುಣಗಳಿವೆಯೆ? ಇದರ ಬೀಜದಲ್ಲಿ ಶೇ.೧೯ರಷ್ಟು ಕೊಬ್ಬಿನ ಅಂಶವಿದೆ. ಅದರಲ್ಲಿ ಶೇ.೪೮ರಷ್ಟು ಓಲಿಇಕ್ ಆಮ್ಲ ಮತ್ತು ಶೇ.೪೩ ಸ್ಟಿಯಾರಿಕ್ ಆಮ್ಲವಿದೆ.

ಧೂಪದ ಎಣ್ಣೆಯನ್ನು ದೀರ್ಘಕಾಲ ಸೇವಿಸಿದರೆ, ಮನುಷ್ಯನ ದೇಹದ ಕೊಲೆಸ್ಟರಾಲ್ ಮಟ್ಟದ ಕುರಿತು ಹೆಚ್ಚು ಅಧ್ಯಯನಗಳು ನಡೆದೇ ಇಲ್ಲ. ಅಷ್ಟರೊಳಗೇ, ಸುಮಾರು 1980ರ ದಶಕದಿಂದ ಇದರ ಎಣ್ಣೆ ಮಾಡುವ ಪದ್ಧತಿಯೇ ನಿಂತು ಹೋಗಿದೆ. ಅದರ ಬೀಜವನ್ನು ಕಾಡಿನಿಂದ ಸಂಗ್ರಹಿಸಿದ ಮಾರುವ ಪದ್ಧತಿ ಚಾಲ್ತಿಯಲ್ಲಿದೆ. ಈಗ ನೋಡಿದರೆ, ಧೂಪದ ಮರವು ವಿನಾಶದ
ಅಂಚಿನಲ್ಲಿರುವ ಸಸ್ಯಗಳ ಪಟ್ಟಿಗೆ ಸೇರಿ ಹೋಗಿದೆ! ಖಾದ್ಯ ತೈಲ ತಯಾರಿಸಬಹುದಾದ ಈ ಮರದ ಆ ಒಂದು ಉಪಯೋಗ ನಮ್ಮ ನೆನಪಿನಿಂದಲೇ ಮರೆಯಾಗಿರುವುದು ಒಂದು ದುರಂತ.