ಇಂದಿಗೂ ಒಬ್ಬಂಟಿ ಹೆಣ್ಣಿನ ಕಥೆ ಚಿಂತಾಜನಕವೇ. ಬಸ್‌ಗಾಗಿ ಕಾಯುತ್ತ ನಿಂತಾಕೆಯನ್ನು ಶಾಲಾ ವಾಹನದಲ್ಲಿ ಡ್ರಾಪ್ ಮಾಡುತ್ತೇನೆಂದು ಕರೆದಾಗ, ನಂಬಿಕೆಯಿಂದ ಶಾಲಾ ಬಸ್ ಹತ್ತಿದ ಆಕೆಯ ಮೇಲೆ ಅತ್ಯಾಚಾರವೆಸಗಿದ ಡ್ರೈವರ್‌ನಿಂದಾಗಿ ಶಾಲೆಯ ಹೆಸರೇ ಮಣ್ಣುಪಾಲು. ಹೀಗಾದರೆ ಯಾವ ಪೋಷಕರು ಮಕ್ಕಳನ್ನು ಶಾಲೆಗೆ ಆ ವಾಹನದ ಮೂಲಕ ಕಳಿಸುವ ಧೈರ್ಯ ಮಾಡುತ್ತಾರೆ?
ಮನುಷ್ಯ ಸದಾ ಅತೃಪ್ತಜೀವಿ! ವೆಚ್ಚಕ್ಕೆ ಹೊನ್ನು, ಇಚ್ಛೆಯನರಿಯುವ ಸತಿ, ಸ್ವರ್ಗಕ್ಕೆ ಕಿಚ್ಚುಹಚ್ಚುವಂಥ ಕೀರ್ತಿ- ಹಣ-ಅಧಿಕಾರ…. ಎಲ್ಲವೂ ಇದ್ದರೂ, ಸದಾ ಇರದು ದರೆಡೆಗೇ ಮನಸ್ಸು ಸೆಳೆಯುವುದು- ಅಂದು ಇಂದಿಗಷ್ಟೇ ಅಲ್ಲ, ಎಂದೆಂದಿಗೂ ಸಲ್ಲುವಂಥ ಮಾತುಗಳೇ!
ಹೆಣ್ಣಿನ ಸೌಂದರ್ಯ ಎಂತೆಂಥ ಋಷಿ-ಮುನಿಗಳನ್ನೂ ಆಪೋಶನ ತೆಗೆದುಕೊಳ್ಳದೆ ಬಿಟ್ಟಿಲ್ಲ. ಇನ್ನು ಸಾಮಾನ್ಯ ಮನುಷ್ಯನದ್ಯಾವ ಲೆಕ್ಕ? ತನ್ನ ತಪೋಭಂಗಗೊಳಿಸಲು ಯತ್ನಿಸಿದ ಮನ್ಮಥನನ್ನು ಸುಟ್ಟುಹಾಕಿದ ಶಿವಂತೆಯೇ ಎಲ್ಲರೂ ಇರಲು ಸಾಧ್ಯವೇ? ಅವನಿಗಿದ್ದ ಅರಿವೆಂಬ ಮೂರನೇ ಕಣ್ಣು ಎಲ್ಲರಿಗೂ ಇರಬೇಕಲ್ಲ? ಇದೆಲ್ಲ ಆ ದಿನಗಳ ಮಾತಾದರೆ, ಇಂದಿನ ಆಧುನಿಕ ಯುಗದಲ್ಲಿ ಚಿತ್ತ ಕೆಡಿಸಲು ಎಂಥ ರತಿ-ಮನ್ಮಥರನ್ನೂ ಮೀರಿಸುವಂಥ ಚಿತ್ರಗಳಿರುವ ಕೈಯಲ್ಲಿನ ಒಂದು ಪುಟ್ಟ ಮೊಬೈಲು ಸಾಕು.
ಇದು ಅದೆಷ್ಟು ಜೀವಗಳನ್ನು ಆಹುತಿ ತೆಗೆದುಕೊಂಡು ದಿನದಿಂದ ದಿನಕ್ಕೆ ಎಲ್ಲವನ್ನೂ ಎಲ್ಲರನ್ನೂ ಆಕ್ರಮಿಸಿ ಕೊಳ್ಳುತ್ತ ದೈತ್ಯಾಕಾರವಾಗಿ ಬೆಳೆಯುತ್ತಿದೆ ಎಂಬುದು ನಮ್ಮ ಊಹೆಗೂ ನಿಲುಕದಂತಾಗಿದೆ. ಮರ್ಕಟ ಮನಸ್ಸಿನ ತಾಕಲಾಟಗಳೆಲ್ಲ ಬೆರಳಂಚಿನ ಭಾವಗೀತೆಗಳಾಗಿ, ಸಂದೇಶಗಳಾಗಿ ಹೊತ್ತು-ಗೊತ್ತಿನ ನಿಯಮವಿಲ್ಲದೆ, ಸಂಯಮ ವಿಲ್ಲದೆ ಎಲ್ಲೆಂದರಲ್ಲಿ ಯಾರೆಂದರೆ ಅವರಿಗೆ ತಲುಪಿಸಿಬಿಡುವಂಥ ಸುಲಭಮಾರ್ಗವಾಗಿ, ಎಲ್ಲರ ನಿಲುಕಿಗೂ
ಸಿಗುವಂತಾಗಿಹೋಗಿದೆ. ಅದೇನೇ ದಿಗ್ಬಂಧನಗಳನ್ನು ಹೇರಿದರೂ ಎಲ್ಲರ ಕಣ್ತಪ್ಪಿಸಿ ಅದು ಹೇಗೋ ನುಸುಳಿಬರುವ ಚಾಣಾಕ್ಷಮತಿಯಾಗಿದೆ.
‘ಈಗಿತ್ತು, ಈಗಿಲ್ಲ’ ಎನ್ನುವಂತೆ ಕಳಿಸಿದ ಮೆಸೇಜೆಲ್ಲ ಒಂದೇ ಬಾರಿಗೆ ಸದ್ದಿಲ್ಲದೆ ಡಿಲೀಟ್ ಆಗಿ, ಏನೂ ನಡೆದೇ ಇಲ್ಲವೇನೋ ಎಂಬಂತೆ ನುಣುಚಿಕೊಳ್ಳುವ ಚತುರಮತಿಯೂ ಆಗಿದೆ. ಮಕ್ಕಳು-ವಯಸ್ಕರು ಎಂಬ ಭೇದಭಾವವಿಲ್ಲದೆ ಎಲ್ಲರ ಮೊಬೈಲುಗಳಿಗೂ ನಿಸ್ಸಂಕೋಚವಾಗಿ ಲಗ್ಗೆಯಿಡುವ ಪೋರ್ನೋ ದೃಶ್ಯಗಳು, ದೈಹಿಕವಾಗಿ ಮಾನಸಿಕವಾಗಿ ಸಂಪೂರ್ಣ ಬೆಳವಣಿಗೆ ಕಾಣದ ಹದಿಹರೆಯದವರಲ್ಲಿ ಕುತೂಹಲ ಕೆರಳಿಸುತ್ತವೆ. ಕುಟುಂಬ- ಕುಟುಂಬಗಳ ನಡುವೆ ವೈಮನಸ್ಸುಗಳನ್ನು ತಂದೊಡ್ಡುತ್ತವೆ. ಅದೊಂದು ಸುಂದರ ತುಂಬುಕುಟುಂಬ. ಗಂಡ- ಹೆಂಡತಿ ಸಾವಕಾಶವಾಗಿ ಮಾತನಾಡುತ್ತ ಕುಳಿತಿದ್ದಾರೆ. ಆ ಕ್ಷಣದಲ್ಲಿ ಮೊಬೈಲಿಗೆ ಮೆಸೇಜು ಬಂದ ಅರಿವಾಗುತ್ತದೆ.
ಏನದು ನೋಡುವ ಎಂಬ ಕುತೂಹಲದೊಂದಿಗೆ ತೆರೆದರೆ, ತನ್ನ ಸಹೋದ್ಯೋಗಿಯ ಚಿತ್ರವಿಚಿತ್ರ ಭಂಗಿಯ ಚಿತ್ರಗಳು. ನೋಡಿಯೂ ನೋಡದಂತೆ, ಹೆಂಡತಿಗೇನಾದರೂ ತಿಳಿಯಿತಾ? ಎಂದು ಓರೆಗಣ್ಣಿನಲ್ಲೇ ನೋಡಿ, ಇಲ್ಲವೆಂದು ಖಾತ್ರಿಯಾದ ನಂತರ, ಬಿಡುವಾದಾಗ ಸಾವಕಾಶವಾಗಿ ನೋಡೋಣ ಎಂದು ಮೊಬೈಲನ್ನು ಸೈಲೆಂಟ್ ಮೋಡ್‌ಗೆ ಹಾಕಿ ಮಾತು ಮುಂದುವರಿಸುತ್ತಾನೆ. ಆದರೆ, ಹೇಳಿ-ಕೇಳಿ ಅವಳು ಹೆಂಡತಿ; ಇಂಥ ವಿಷಯಗಳಲ್ಲಿ ಯಾರೂ ಏನೂ ಹೇಳದಿದ್ದರೂ ಮೂಗಿಗೆ ವಾಸನೆ ಬಡಿಯತೊಡಗುತ್ತದೆ.
ಇರಲಿ ಅಂದುಕೊಳ್ಳುತ್ತ ಸಮಯಕ್ಕಾಗಿ ಕಾಯುತ್ತಾಳೆ. ಅಂದಿನಿಂದ ಶುರುವಾಗುತ್ತದೆ ಗುಪ್ತ್ ಗುಪ್ತ್ ಬಾತೆ…. ಪಡಸಾಲೆಯಲ್ಲಿ ಎಲ್ಲರ ನಡುವೆ ಆಡುತ್ತಿದ್ದ
ಮಾತುಗಳು ಕ್ರಮೇಣ ಬೆಡ್‌ರೂಮಿಗೆ, ಬಾತ್ ರೂಮಿಗೆ ಶಿಫ್ಟ್ ಆಗುತ್ತವೆ. ಮೊದಲಿನಂತೆ ಮೊಬೈಲನ್ನು ಮರೆತು ಎಲ್ಲೆಂದರಲ್ಲಿ ಇಡುವುದಿಲ್ಲ. ಸದಾ ಅದು ತನ್ನೊಡನೆ ಸುರಕ್ಷಿತವಾಗಿದೆಯಾ? ಎಂದು ಪ್ರತಿ ನಿಮಿಷಕ್ಕೊಮ್ಮೆ ಚೆಕ್ ಮಾಡಿಕೊಳ್ಳಲಾರಂ ಭಿಸುತ್ತಾನೆ. ಮೊದಲೆಲ್ಲ ಮಕ್ಕಳಿಗೆ ಗೇಮ್ಸ್ ಆಡಲು ಧಾರಾಳವಾಗಿ ಕೊಟ್ಟು ನಿರಾಳವಾಗುತ್ತಿದ್ದವನು, ನಂತರ ಮಕ್ಕಳು ಮೊಬೈಲೆಂದು ಹೆಸರೆತ್ತಿದರೆ ಸಾಕು ಸಿಡುಕಲಾರಂಭಿಸುತ್ತಾನೆ.
ಇದನ್ನೆಲ್ಲ ತುದಿಗಣ್ಣಲ್ಲೇ ಗಮನಿಸುವ ಗೃಹಿಣಿ ಅವಕಾಶಕ್ಕಾಗಿ ಕಾಯುತ್ತಿರುತ್ತಾಳೆ. ಅಕಸ್ಮಾತ್ ಆ ಮೊಬೈಲ್‌ನಲ್ಲಿರುವ ‘ಗುಪ್ತ್ ಗುಪ್ತ್’ ವಿಷಯ ಕಂಡು ‘ಏನಿದು?’ ಎಂದು ಕೇಳಿದರೆ, ಭಂಡನಾದ ಗಂಡಸು, ‘ಹೌದು, ಏನೀಗ?’ ಅಂದುಬಿಟ್ಟರೆ ಅಲ್ಲಿಗೆ ಸಂಸಾರ ಬೀದಿಗೆ ಬಿತ್ತೆಂದೇ ಅರ್ಥ. ಇಷ್ಟುದಿನ ‘ಗುಪ್ತ್ ಗುಪ್ತ್’ ಆಗಿದ್ದ ವಿಷಯಗಳು ‘ಖುಲ್ಲಂಖುಲ್ಲಾ’ ಆಗಿ ನಡೆಯತೊಡಗುತ್ತವೆ. ಅಸಹಾಯಕ ಗೃಹಿಣಿ, ಮನೆ-ಮಕ್ಕಳನ್ನು ಬಿಟ್ಟುಕೊಡಲಾಗದೆ, ಇಷ್ಟದ
ಪತಿಯನ್ನು ದೂರಮಾಡಲೂ ಆಗದೆ ಮನದಲ್ಲೇ ನೋವು ಣ್ಣುತ್ತಾ ಎಲ್ಲವನ್ನೂ ಸಹಿಸಿಕೊಂಡು ಮನೆ-ಮನೆತನದ ಗೌರವ ಕಾಪಾಡಿಕೊಂಡು ಸಂಸಾರ ತೂಗಿಸಿಕೊಂಡು ಹೋದರೆ, ಅವಳಂಥ ಹೆಂಡತಿಯೇ ಏಳೇಳು ಜನ್ಮಕ್ಕೂ ಸಿಗಲೆಂದು ಬಯಸುತ್ತಾರೆ ಪತಿಮಹಾಶಯರು!
ಕಥೆಯಲ್ಲಿ ಸ್ವಲ್ಪ ಟ್ವಿಸ್ಟ್ ಬೇಕಂದ್ರೆ, ಎಲ್ಲವನ್ನೂ ಗಮನಿಸುವ ಹೆಂಡತಿ ಒಂದಷ್ಟು ದಿನ ಮುಳುಮುಳು ಎಂದು ಅಳುತ್ತಾ, ತನ್ನ ಬಂಧು-ಬಾಂಧವರಿಗೆ ವಿಷಯ ತಿಳಿಸಿ, ‘ಅವರು ಮಾಡಿದ್ದು ಸರಿಯಾ?’ ಎಂದು ನ್ಯಾಯ ಒಪ್ಪಿಸುತ್ತಾಳೆ. ಇದರಿಂದ ತಲೆಚಿಟ್ಟು ಹಿಡಿದ ಗಂಡ, ‘ಆಯ್ತು ಮಾರಾಯ್ತೀ… ನಾನೇನು ಕಳಿಸು ಅಂತ ಕೇಳಿದ್ನಾ ಅವಳನ್ನ? ಅದು ಅವಳಾಗೇ ಕಳಿಸಿದ್ದು, ಇದರಲ್ಲಿ ನನ್ನ ತಪ್ಪೇನಿದೆ? ಇಷ್ಟಕ್ಕೂ, ಇಷ್ಟೆಲ್ಲ ರಾಮಾಯಣ ಮಾಡುವ ಬದಲು ಅವಳನ್ನೇ ನಿಲ್ಲಿಸಿ ಕೇಳಬಹುದಿತ್ತಲ್ವಾ? ಯಾಕೆ ನೀನು ಇಂಥ ವಿಡಿಯೋಗಳನ್ನು ನನ್ನ ಗಂಡನಿಗೆ ಕಳಿಸಿದೆ ಅಂತ? ಅಲ್ಲಿಗೆ ಸಮಸ್ಯೆ ಬಗೆಹರಿದು ಈ ಹಾದಿರಂಪ ಬೀದಿರಂಪಗಳೆಲ್ಲ ತಪ್ಪುತ್ತಿತ್ತಲ್ವಾ? ಈಗ ಎಲ್ಲರೆದುರು ನನ್ನನ್ನು ತಪ್ಪಿತಸ್ಥನನ್ನಾಗಿ ನಿಲ್ಲಿಸಿದ್ದರಿಂದ ನಿನಗೆ ಸಂತೋಷವಾಯ್ತಾ?
ಎಲ್ಲರೆದುರಿಗೆ ನನ್ನ ಮಾನ ಹರಾಜು ಹಾಕಿದ್ದರಿಂದ ನೀನು ಗ್ರೇಟ್ ಅನ್ನೋ ಫೀಲಿಂಗ್ ಎಂಜಾಯ್ ಮಾಡ್ತಿದ್ದೀಯಾ? ಹೋಗಿದ್ದು ನಿನ್ನದೇ ಮನೆಯ ಮರ್ಯಾದೆಯಲ್ಲವಾ? ಅದನ್ನು ನಾನು-ನೀನು ಕುಳಿತು ಕೂಡ ಬಗೆಹರಿಸಿಕೊಂಡು ಬಿಡಬಹುದಾಗಿತ್ತು ಅಂತ ಒಂದು ಸಲಕ್ಕೂ ಅನ್ನಿಸಲಿಲ್ಲವಾ
ನಿನಗೆ?’ ಅನ್ನುತ್ತ ಅವಳನ್ನೇ ತಪ್ಪಿನ ಇಕ್ಕಟ್ಟಿನಲ್ಲಿ ಸಿಲುಕಿಹಾಕಿಸುವ ಪ್ರಯತ್ನವೂ ನಡೆದುಹೋಗುತ್ತದೆ.
ಇದೆಲ್ಲ ಇಚ್ಛೆಯನರಿಯುವ ಸತಿಯ ಮಾತಾದರೆ, ಇಂದಿನ ಕಲಿತ ನಾರಿಯರು ಯಾರಿಗೇನು ಕಮ್ಮಿ? ವ್ಯವಹಾರದಲ್ಲಿ ನುರಿತ ಹೆಣ್ಣು ಯಾರ ಮಾತಿಗೂ
ಜಗ್ಗುವವಳಲ್ಲ. ತನ್ನ ಸೌಂದರ್ಯದಿಂದ ಎಂಥವರನ್ನೂ ಮರುಳು ಮಾಡಬಲ್ಲೆನೆಂಬ ಹುಂಬತನದ ಹುಟ್ಟಡಗಿಸಿಯೇ ಬಿಡುತ್ತೇನೆ ಎಂದು ಕಾನೂನಿನ ಹೋರಾಟ ಆರಂಭಿಸುತ್ತಾಳೆ. ಅವಳಿಗೆ ಈ ದೇಶದ ಕಾನೂನು ವ್ಯವಸ್ಥೆಯ ಅರಿವು ಸಾಕಷ್ಟಿದೆ. ಎಲ್ಲಿ ಯಾವ ಪಾಯಿಂಟು ಹಾಕಿದರೆ ಯಾರ ಬಾಯಿ ಮುಚ್ಚಿಸಬಹುದು ಎಂಬ ತಿಳಿವಳಿಕೆಯೂ ಚೆನ್ನಾಗಿಯೇ ಇದೆ. ಅಲ್ಲಿ ಆವೇಶಕ್ಕೆ ಅವಕಾಶವಿಲ್ಲ. ಎಲ್ಲವನ್ನೂ ತಣ್ಣಗಿನ ಕ್ರೌರ್ಯದಲ್ಲೇ ಮುಚ್ಚಿಹಾಕುವ ಜೀನಿಯಸ್ ಆಕೆ.
ಇದು ಮನೆ-ಮಡದಿಯರ ಕಥೆಯಾದರೆ, ಎಷ್ಟೆಲ್ಲ ಮುಂದುವರಿದ ದೇಶವೆಂಬ ಹೆಗ್ಗಳಿಕೆಯಿದ್ದರೂ ಇಂದಿಗೂ ಒಬ್ಬಂಟಿ ಹೆಣ್ಣಿನ ಕಥೆ ಚಿಂತಾಜನಕವೇ. ಸಿಟಿ ಬಸ್‌ಗಾಗಿ ಕಾಯುತ್ತ ನಿಂತ ಮಹಿಳೆಯನ್ನು ಶಾಲಾ ವಾಹನದಲ್ಲಿ ಡ್ರಾಪ್ ಮಾಡುತ್ತೇನೆಂದು ಕರೆದಾಗ, ಏನೋ ಪರಿಚಯಸ್ಥನಲ್ಲ? ಎಂಬ ನಂಬಿಕೆಯಿಂದ ಶಾಲಾ ಬಸ್ ಹತ್ತಿದ ಆಕೆಯ ಮೇಲೆ ಅತ್ಯಾಚಾರವೆಸಗಿದ ಡ್ರೈವರ್‌ನಿಂದಾಗಿ ಇಡೀ ಶಾಲೆಯ ಹೆಸರೇ ಮಣ್ಣುಪಾಲಾಗಿಹೋಗುತ್ತದೆ. ಆ
ಘಟನೆಯ ಬಳಿಕ ಯಾವ ಪೋಷಕರು ತಾನೇ ತಮ್ಮ ಮಕ್ಕಳನ್ನು ಶಾಲೆಗೆ ಆ ವಾಹನದ ಮೂಲಕ ಕಳಿಸುವ ಧೈರ್ಯ ಮಾಡುತ್ತಾರೆ? ಇನ್ನು ರಾತ್ರಿಹೊತ್ತು ಅನಿವಾರ್ಯವಾಗಿ ಟ್ಯಾಕ್ಸಿ ಹಿಡಿಯುವ ಸಂದರ್ಭ ಎದುರಾದರೆ ಒಂಟಿ ಮಹಿಳೆಯರು ಅದ್ಯಾವ ಧೈರ್ಯದ ಮೇಲೆ ಟ್ಯಾಕ್ಸಿ ಹತ್ತಬೇಕೋ ಒಮ್ಮೆ ಯೋಚಿಸಿ. ಅವರ ಗ್ರಹಚಾರ ಕೆಟ್ಟು, ಬಂದ ಟ್ಯಾಕ್ಸಿ ಡ್ರೈವರ್‌ನಿಂದ ಅಪಾಯಕ್ಕೊಳಗಾದರೆ ಯಾರನ್ನು ದೂಷಿಸುವುದು? ಬಂದೊದಗಿದ ಪರಿಸ್ಥಿತಿಯನ್ನೋ? ಕಂಟಕನಾದ ಟ್ಯಾಕ್ಸಿ ಡ್ರೈವರ್‌ನನ್ನೋ? ಅಥವಾ ಹೆಣ್ಣಾಗಿ ಹುಟ್ಟಿದ ಆಕೆಯ ತಪ್ಪನ್ನೋ? ಹಾಗಂತ ಯಾರೋ ಕೆಲವರ
ಅಚಾತುರ್ಯಕ್ಕೆ ಎಲ್ಲ ಡ್ರೈವರುಗಳನ್ನೂ ಹೀಗೇ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲಿಕ್ಕಾಗುತ್ತದಾ? ಇನ್ನು, ರಾತ್ರಿ ಕುಡಿದು ಬಂದ ಗಂಡನಿಂದ ಒದೆ
ತಿನ್ನುವ ಹೆಣ್ಣುಮಕ್ಕಳು, ಪ್ರೀತಿಸಲಿಲ್ಲವೆಂಬ ಕಾರಣಕ್ಕೆ ಮುಖವೆಲ್ಲ ಬೆಂದುಹೋಗುವಂತೆ ಆಸಿಡ್ ಎರಚುವ ಕ್ರೂರನಡೆ, ಚಾಕು ಇರಿತಗಳು ದಿನರಾತ್ರಿ
ಬೆಳಗಾದರೆ ಸುದ್ದಿಯಾಗುತ್ತಲೇ ಇರುತ್ತವೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕಾರಣದ ಹಗರಣಗಳೂ ಕಾವೇರತೊಡಗುತ್ತವೆ. ತಪ್ಪಿತಸ್ಥನನ್ನಾಗಿ ನಿಲ್ಲಿಸುವ ಅವಕಾಶಕ್ಕಾಗಿ ಎದುರಾಳಿಗಳು ಸಮಯ ಕಾಯುತ್ತಿರುತ್ತಾರೆ. ಇಷ್ಟೆಲ್ಲ ಅರಿವಿದ್ದರೂ ಮೊಬೈಲಿನ ತುಂಬ ಹರಿದಾಡುವ ಸುದ್ದಿಗಳಿಗೇನೂ ಕಮ್ಮಿಯಿಲ್ಲ. ಆದರೆ ಸಮಾಜದ ಹಿತ ಕಾಪಾಡುವ ಅಧಿಕಾರಿಗಳು ತಮ್ಮದೇ ಜಗಳಗಳನ್ನು ಬಗೆಹರಿಸಿಕೊಳ್ಳಲಾಗದೆ ಜನತೆಯೆದುರು ನಿಂತರೆ, ‘ಕಾಪಾಡು ರಾಮಾ’ ಎಂದು ಮೊರೆಯಿಟ್ಟ
ಮಂಡೂಕನ ಕಥೆಯಂತಾಗುತ್ತದೆ ಜನಸಾಮಾನ್ಯನದು!
Read E-Paper click here