Saturday, 14th December 2024

ಒಂಟಿ ಒಂಟಿಯಾಗಿರುವುದು ಬೋರೋ ಬೋರು !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಬಾರ್ಸಿಲೋನಾ ನಗರದಲ್ಲಿ ಪ್ರಥಮ ತಿಂಗಳುಗಳು ನನ್ನ ಪಾಡು ನನ್ನ ಶತ್ರುವಿಗೂ ಬೇಡ ಎನ್ನುವಂತಿತ್ತು. ಕೆಲಸಕ್ಕೆ ಸೇರಿದ ಸಂಸ್ಥೆಯವತಿ ಯಿಂದ ಮೂರುಕೋಣೆಯ ಸುಸಜ್ಜಿತ ಅಪಾರ್ಟ್‌ಮೆಂಟ್ ಸಿಕ್ಕಿತ್ತು. ಅಂದಿನ ದಿನದಲ್ಲಿ ನಾನು ಕನಸಿನಲ್ಲೂ ಎಣಿಸದ ಪಗಾರ ಸಿಗುತ್ತಿತ್ತು. ಲಕ್ಷಾಂತರ ಭಾರತೀಯರು ಬಯಸುವ ಬದುಕು ನಾನು ಬಯಸದೆ ಸಿಕ್ಕಿತ್ತು.

ಮನುಷ್ಯ ಸಂಘ ಜೀವಿ. ಈ ಮಾತನ್ನು ನಾನು ಇಂದು ಹೊಸದಾಗಿ ಹೇಳುತ್ತಿಲ್ಲ. ಶತಶತಮಾನಗಳ ಅನುಭವದಿಂದ ಈ ಮಾತು ಹುಟ್ಟಿದೆ. ಮನುಷ್ಯ ಪ್ರಾಣಿಗೆ ಇನ್ನೊಬ್ಬ ಮನುಷ್ಯ ಜೀವಿಯ ಸಂಘ ಬೇಕೇ ಬೇಕು. ತಾನು ಮಾಡಿದ ಕೆಲಸದ ಬಗ್ಗೆ ಹೇಳಿಕೊಳ್ಳುವುದಕ್ಕೆ, ಮಾಡಬೇಕಾಗಿರುವ ಕೆಲಸದ ಬಗ್ಗೆ ಚರ್ಚಿಸುವುದಕ್ಕೆ, ತನಗಿಷ್ಟವಾದವರ ಬಗ್ಗೆ ಹೊಗಳಲು, ಇಷ್ಟವಿಲ್ಲದವರ ಬಗ್ಗೆ ಇಲ್ಲದ ಗಾಸಿಪ್ ಮಾಡಲು, ಕೊನೆಗೆ ವಿಷಯ ಯಾವುದೇ ಇರಲಿ ಅದಕ್ಕೆ
ಸಹಮತ ಸೂಚಿಸದೆ ಕಿತ್ತಾಡಲು ಆದರೂ ಸರಿಯೇ, ಒಟ್ಟಿನಲ್ಲಿ ಮನುಷ್ಯನಿಗೆ ಮನುಷ್ಯನ ಸಂಘ ಬೇಕು.

 

ಲಾಗಾಯ್ತಿನಿಂದ ಮನುಷ್ಯನಿಗೆ ಒಂಟಿಯಾಗಿರುವುದು ಎಂದರೆ ಅದೊಂದು ಶಿಕ್ಷೆ. ಅಲ್ಲದೆ ಗಮನಿಸಿ ನೋಡಿ, ಒಂಟಿಯಾಗಿರುವುದು ಯಾರಿಗೂ ಇಷ್ಟ ವಿಲ್ಲ. ತುಂಬಾ ಜನರ ಮಧ್ಯೆ ಬದುಕನ್ನು ಕಟ್ಟಿಕೊಂಡ ಜನರಲ್ಲಿ ಪ್ರಥಮ ಒಂದಷ್ಟು ದಿನ ಒಂಟಿತನ ಒಂದಷ್ಟು ಖುಷಿ ಕೊಡಬಹುದು, ಆದರೆ ವಾರ ಎನ್ನುವಷ್ಟರಲ್ಲಿ ಒಂಟಿತನ ಎನ್ನುವುದು ಬೋರು ಹೊಡೆಸಲು ಶುರು ಮಾಡುತ್ತದೆ.

ಒಂಟಿತನದಲ್ಲಿ ಕೂಡ ನಾನಾ ವಿಧಗಳಿವೆ. ಕೆಲಸದ ನಿಮಿತ್ತ ಪರ ಊರಿಗೆ ಅಥವಾ ದೇಶಕ್ಕೆ ಹೋದವರು ಅಲ್ಲಿ ಸ್ನೇಹಿತರು, ಬಂಧುಗಳು ಇಲ್ಲದೆ ಒಂಟಿ
ಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಬದುಕಿನ ಅನಿವಾರ್ಯತೆಗಳ ಕಾರಣದಿಂದ ಕುಟುಂಬದಿಂದ ಬೇರೆ ಇರಬೇಕಾದ ಒಂಟಿತನ ಕೆಲವರದ್ದು, ಇನ್ನೂ ಕೆಲವರು ಯಾರ ಸಹವಾಸವೂ ಬೇಡ ನಾನು ಒಂಟಿಯಾಗಿರುತ್ತೇನೆ ಎಂದು ಆಯ್ಕೆ ಮಾಡಿಕೊಂಡಿರುತ್ತಾರೆ. ಹೊರ ಜಗತ್ತಿಗೆ ನಾನು ಒಂಟಿ ಯಾಗಿರುವುದರಿಂದ ಬಹಳ ಖುಷಿಯಾಗಿ ದ್ದೇನೆ ಎನ್ನುವ ಪೋಸು ಕೂಡ ಕೊಡುತ್ತಿರುತ್ತಾರೆ.

ಒಟ್ಟಿನಲ್ಲಿ ಕಾರಣವೇನೇ ಇರಲಿ ಮನುಷ್ಯ ಬಹಳ ದಿನ ಒಂಟಿ ಇರಲಾರ. ತಾನು ನೆಲೆ ನಿಂತ ನೆಲದಲ್ಲಿ ಸ್ನೇಹಿತರನ್ನು ಹುಡುಕಿಕೊಳ್ಳುವ ಪ್ರಯತ್ನ ಶುರುವಾಗುತ್ತದೆ. ನಿಂತ ನೆಲದಲ್ಲಿ ಹೊಸ ಬದುಕು, ಹೊಸ ಸಂಬಂಧಗಳು ಬೆಸೆದುಕೊಳ್ಳುತ್ತವೆ. ಬಾರ್ಸಿಲೋನಾ ನಗರದಲ್ಲಿ ಪ್ರಥಮ ತಿಂಗಳುಗಳು ನನ್ನ ಪಾಡು ನನ್ನ ಶತ್ರುವಿಗೂ ಬೇಡ ಎನ್ನು ವಂತಿತ್ತು. ಕೆಲಸಕ್ಕೆ ಸೇರಿದ ಸಂಸ್ಥೆಯವತಿಯಿಂದ ಮೂರುಕೋಣೆಯ ಸುಸಜ್ಜಿತ ಅಪಾರ್ಟ್‌ಮೆಂಟ್ ಸಿಕ್ಕಿತ್ತು. ಅಂದಿನ ದಿನದಲ್ಲಿ ನಾನು ಕನಸಿನಲ್ಲೂ ಎಣಿಸದ ಪಗಾರ ಸಿಗುತ್ತಿತ್ತು. ಲಕ್ಷಾಂತರ ಭಾರತೀಯರು ಬಯಸುವ ಬದುಕು ನಾನು ಬಯಸದೆ ಸಿಕ್ಕಿತ್ತು.

ಹೌದು ಎಲ್ಲವೂ ಇದ್ದು ಏನೂ ಇಲ್ಲದ ಖಾಲಿತನ, ಒಂಟಿತನ ಅಂದಿನ ದಿನಗಳಲ್ಲಿ ಬಹಳ ಕಾಡಿತ್ತು. ಜೀವನದಲ್ಲಿ ಪ್ರಥಮ ಬಾರಿಗೆ ನನ್ನ ಫ್ಯಾಮಿಲಿ
ತೊರೆದಿದ್ದರ ಪರಿಣಾಮ ಎನ್ನಿಸುತ್ತದೆ. ದುಃಖ ದುಃಖ ಮತ್ತು ದುಃಖ ಬಿಟ್ಟರೆ ಬೇರೇನೂ ಅಂದಿನ ದಿನದಲ್ಲಿ ಇರಲಿಲ್ಲ. ನನ್ನ ಸುತ್ತಮುತ್ತ ಜನರಿದ್ದಾರೆ
ಆದರೆ ಅವರನ್ನು ಮಾತನಾಡಿಸಲು ನನಗೆ ಭಾಷೆ ಬರುತ್ತಿರಲಿಲ್ಲ, ತಿನ್ನಲು ಬೇಕಾದ ಆಹಾರ ಪದಾರ್ಥಗಳ ಕೊರತೆ ಇನ್ನೊಂದು ಕಡೆಯಾದರೆ, ಕೊರೆವ
ಚಳಿಯನ್ನು ಸಂಭಾಳಿಸುವುದು ಇನ್ನೊಂದು ದೊಡ್ಡ ಸಮಸ್ಯೆಯಾಗಿತ್ತು. ಸಮುದ್ರದಲ್ಲಿ ಪ್ರಯಾಣ ಮಾಡುವಾಗ ಎಡೆ ನೀರು, ನೀರು ಮತ್ತು ನೀರು
ಅಲ್ಲವೇ, ಆದರೇನು ಆ ನೀರಿನಿಂದ ಪ್ರಯೋಜನವಿಲ್ಲ, ಅದು ಕುಡಿಯಲು ಬಾರದು.

ನನ್ನ ಸುತ್ತ ಮುತ್ತ ಜನರಿದ್ದರೂ ಅದು ಸಮುದ್ರದ ನೀರಿನಂತೆ ನನ್ನ ಮಟ್ಟಿಗೆ ಪ್ರಯೋಜನಕ್ಕೆ ಬಾರದಾಗಿತ್ತು. ನಾವು ಭಾರತೀಯರು ನಮ್ಮ ಮಕ್ಕಳನ್ನು ಬಹಳ ಪ್ರೀತಿ ಮತ್ತು ಅಕ್ಕರಾಸ್ಥೆಯಿಂದ ಸಾಕುತ್ತೇವೆ. ನಮ್ಮ ಬಳಿ ಹಣವಿರುತ್ತದೆಯೋ ಇಲ್ಲವೋ ಅದು ಬೇರೆ ವಿಷಯ, ಆದರೆ ಮಕ್ಕಳ ವಿಷಯ ಬಂದಾಗ ಮಾತ್ರ ಶಕ್ತಿ ಮೀರಿ ಅವರಿಗೆ ಉತ್ತಮವಾದದನ್ನ ನೀಡಲು ಪ್ರಯತ್ನ ಪಡುತ್ತೇವೆ. ಇದು ಭಾರತೀಯ ಪೋಷಕರ ಅತ್ಯಂತ ಸಾಮಾನ್ಯ ಗುಣ. ನಮ್ಮ ಮಕ್ಕಳ ಅತಿ ಸಣ್ಣ ಸಾಧನೆ ಕೂಡ ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ವಿಷಯ ಎನ್ನುವಂತೆ ಬಿಂಬಿಸಿಕೊಳ್ಳುವುದು ಕೂಡ ಇಲ್ಲಿ ಸಾಮಾನ್ಯ. ನಮ್ಮ ಮಕ್ಕಳು ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಅಥವಾ ನೌಕರಿ ಮಾಡಲು ಹೋಗಲಿ ಎನ್ನುವುದು ಕೂಡ ಬಹಳಷ್ಟು ಪೋಷಕರ ಕನಸು. ಅದು ತಪ್ಪು ಅಂತಲ್ಲ , ಆದರೆ ತಮ್ಮ ಮಕ್ಕಳಿಗೆ ಅದಕ್ಕೆ ಬೇಕಾದ ಸಿದ್ಧತೆಯನ್ನ ಮಾಡಿಕೊಳ್ಳಲು ಅವರನ್ನ ಅಣಿ ಮಾಡುವುದಿಲ್ಲ.

ಇಂದಿನ ದಿನಗಳಲ್ಲಿ ಬೇರೆ ದೇಶಕ್ಕೆ ಹೋದ ನಂತರ ಅಲ್ಲಿನ ಭಾಷೆ, ಆಹಾರ ಪದ್ಧತಿ, ಅಥವಾ ಆಹಾರ ತಯಾರಿಸಿಕೊಳ್ಳುವುದು ಎಲ್ಲವನ್ನೂ ಕಲಿಯ ಬಹುದು, ಆದರೆ ಒಂದು ವಿಷಯದಲ್ಲಿ ಮಾತ್ರ ಮೊದಲಿಗೆ ಒಂದಷ್ಟು ಸಿದ್ಧತೆಯನ್ನ ಮಾಡಿಕೊಳ್ಳುವುದು ಒಳ್ಳೆಯದು. ಹೌದು ಇದು ಮಾನಸಿಕ ಸಿದ್ಧತೆ , ನಾಳೆ ದೈಹಿಕ ವಾಗಿ ಕುಸಿಯದಂತೆ ತಡೆಯಲು ಮೊದಲಿಗೆ ಮಾಡಿಕೊಳ್ಳಬೇಕಾದ ಮಾನಸಿಕ ಸಿದ್ಧತೆ. ವಿದೇಶಕ್ಕೆ ಹೋದ ನಂತರ ಎಲ್ಲವೂ ಸಿನಿಮಾದಲ್ಲಿ ತೋರಿಸಿದಂತೆ ಸುಂದರವಾಗಿರುವುದಿಲ್ಲ. ನಮ್ಮೋರಲ್ಲಿ ಅತ್ಯಂತ ಸರಳವಾಗಿ , ಸುಲಭವಾಗಿ ಮಾಡಿ ಮುಗಿಸುತ್ತಿದ್ದ ಕೆಲಸಕ್ಕೆ ನಮಗೆ ಹಲವು ಬಾರಿ ಇತರರ ಸಹಾಯ ಬೇಕಾಗಬಹುದು.

ಭಾಷೆ ಬಾರದ ದೇಶವಾಗಿದ್ದರೆ ಈ ಮಾತು ಇನ್ನೂ ಹೆಚ್ಚು ಅನ್ವಯ. ಅಂದರೆ ನಾವು ಅಂದುಕೊಂಡ ವೇಗದಲ್ಲಿ , ನಮ್ಮಿಚ್ಛೆಯಂತೆ ಕೆಲಸಗಳು ಸಾಗುವು ದಿಲ್ಲ , ಸಿನಿಮಾದಲ್ಲಿ ತೋರಿಸಿದಂತೆ ಯಾರೂ ನಿಮಗೆ ಕ್ಷಣ ಮಾತ್ರದಲ್ಲಿ ಸ್ನೇಹಿತರಾಗುವುದಿಲ್ಲ. ಅದರಲ್ಲೂ ದಕ್ಷಿಣ ಏಷ್ಯಾದ ನಮ್ಮಂತವರನ್ನು ಭಾರತ , ಬಾಂಗ್ಲಾ ಅಥವಾ ಪಾಕ್ ಯಾರಾದರೂ ಸರಿಯೇ ನೀವೆಲ್ಲ ಒಂದೇ ಎನ್ನುವಂತೆ ಕಾಣುವುದು ಕೂಡ ನೋವು ತರಿಸುತ್ತದೆ. ಹೀಗಾಗಿ ಆ ನೆಲದಲ್ಲಿ ನೆಲೆಯೂರುವ ಮುಂಚೆ ಪ್ರಥಮ ಒಂದಷ್ಟು ತಿಂಗಳುಗಳು ಒಂಟಿತನವನ್ನು ಅನುಭವಿಸುವುದು ಕಲಿಯಬೇಕಾಗುತ್ತದೆ. ನಾವು ಭಾರತೀಯರು ಒಂಟಿತನಕ್ಕೆ ಸಿದ್ಧರಿರುವುದಿಲ್ಲ. ಇಂದು ನಾವು ನಮ್ಮ ಮಕ್ಕಳಿಗೆ ಮೊದಲಿನಿಂದಲೇ ಹೇಳಿ ಮಾನಸಿಕವಾಗಿ ಸಿದ್ಧತೆ ಮಾಡಬೇಕಾಗಿರುವುದು ಒಂಟಿತನ ವನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ.

ಇಡೀ ಕೆಲವೊಬ್ಬರಿಗೆ ಬಾಲಿಶ ಎನ್ನಿಸಬಹುದು ಆದರೆ ಮುಂಬರುವ ದಿನಗಳಲ್ಲಿ ಒಂಟಿತನ ಎನ್ನುವುದು ಅತ್ಯಂತ ದೊಡ್ಡ ಜಾಗತಿಕ ಸಮಸ್ಯೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ನಾವು ಒಬ್ಬರಂತೆ ಒಬ್ಬರಿಲ್ಲ, ನಮ್ಮ ಬೇಕು ಬೇಡಗಳು, ಇಷ್ಟ ಅನಿಷ್ಟಗಳು ತೀರಾ ಭಿನ್ನ. ಹಿಂದಿನ ಕಾಲದಲ್ಲಿ ಅನುಸರಿ ಕೊಂಡು ಹೋಗುವುದು ಬದುಕಾಗಿತ್ತು. ಆದರೆ ಈಗ ಹಾಗಲ್ಲ ಪ್ರತಿಯೊಬ್ಬರು ಅವರ ಬೇಕುಗಳ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ ಇನ್ನೊಬ್ಬರ ಬೇಡ ಪ್ರಾಮುಖ್ಯತೆ ಪಡೆಯುವುದಿಲ್ಲ.

ಹೀಗಾದಾಗ ಸಹಜವಾಗಿಯೇ ನನ್ನ ದಾರಿ ನನ್ನದು ಎಂದು ಅವರವರ ದಾರಿ ಹಿಡಿದು ಹೊರಟು ಬಿಡುತ್ತಾರೆ. ಹೀಗಾಗಿ ಒಂಟಿತನ ಎನ್ನುವುದು ಬದುಕಿನ ಯಾವುದೇ ಹಂತದಲ್ಲಿ ಆಗಲಿ ಒಂದಲ್ಲ ಒಂದು ಬಾರಿ ಅದು ನಮ್ಮ ಸಂಗತಿಯಾಗುತ್ತದೆ. ಇದು ಕೇವಲ ವಿದೇಶ ಪ್ರಯಾಣ ಮಾಡಿದಾಗ ಆಗುತ್ತದೆ ಎನ್ನುವುದು ಕೂಡ ದಶಕ ಹಳೆಯ ಮಾತಾಯಿತು. ಇಂದಿಗೆ ಭಾರತದಲ್ಲಿ ಇದ್ದೂ ಕೂಡ ಒಂಟಿತನದ ಕರಾಳ ಛಾಯೆ ಬಹಳಷ್ಟು ಜನರನ್ನ ಆವರಿಸಿದೆ.
ಇತ್ತೀಚೆಗೆ ಮದುವೆಯಾಗದೆ ಉಳಿದವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಹೀಗೆ ಅನೇಕ ಕಾರಣಗಳಿಂದ ಒಂಟಿ ಜೀವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಹಿರಿಯ ನಾಗರಿಕರ ವಿಷಯ ಹೇಳುವುದು ಬೇಡ. ಈ ವಿಷಯದಲ್ಲಿ ಭಾರತ, ಯೂರೋಪು, ಅಮೆರಿಕ ಎಲ್ಲವೂ ಒಂದೇ ಎನ್ನಬಹುದೇನೋ? ಈ
ಮಾತು ಹೇಳಲು ಪ್ರಮುಖ ಕಾರಣ, ಯಾರಿಗೂ ಇಂದು ಹಿರಿಯ ನಾಗರಿಕರು ಬೇಡ. ಮಕ್ಕಳು ತಮ್ಮ ಪೋಷಕರ ಜವಾಬ್ದಾರಿಯನ್ನು ಹಂಚಿಕೊಳ್ಳುವುದು
, ನೋಡಿಕೊಳ್ಳದೆ ಬಿಟ್ಟು ಬಿಡುವುದು , ನೋಡಿಕೊಂಡರೂ ನೆಪ ಮಾತ್ರಕ್ಕೆ ಜೊತೆಯಲ್ಲಿರುವುದು , ಹೀಗೆ ಇದು ಕೂಡ ಜಾಗತಿಕ . ಪೋಷಕರು ಒಂದಷ್ಟು
ಹಣವನ್ನೂ, ಆಸ್ತಿಯನ್ನೋ ಇಟ್ಟಿದ್ದರೆ ಅದಕ್ಕಾಗಿ ಬಡಿದಾಡುವುದು ಕೂಡ ಜಾಗತಿಕ. ಭಾಷೆ ತಕ್ಕ ಮಟ್ಟಿಗೆ ಕಲಿಯುವ ತನಕ ಒಂಟಿತನ ಎನ್ನುವುದು
ಕೊಟ್ಟ ಕಾಟವನ್ನು ವರ್ಣಿಸುವುದು ಅಷ್ಟು ಸುಲಭವಲ್ಲ.

ಅಂದಿನ ದಿನಗಳಲ್ಲಿ ಇಷ್ಟಪಟ್ಟು ಕೇಳುತ್ತಿದ್ದ ಹಾಡುಗಳನ್ನು ನಾನು ಇಂದಿಗೆ ಕೇಳಲಾರೆ, ಅಂದಿನ ದಿನಗಳಲ್ಲಿ ಇಷ್ಟಪಟ್ಟ ಪುಸ್ತಕವನ್ನ ಇಂದಿಗೆ ಕೈಯಲ್ಲಿ ಮುಟ್ಟಲೂ ಆಗದು. ಒಟ್ಟಿನಲ್ಲಿ ಆ ದಿನಗಳ ನೆನಪು ತರುವ ಯಾವುದೇ ವಸ್ತು ಅಥವಾ ವಿಷಯ ನನ್ನ ಮನಸ್ಸನ್ನ ಖಿನ್ನತೆಗೆ ಒಯ್ಯುತ್ತದೆ. ಅಂದಿನ ದಿನಗಳಲ್ಲಿ ಪ್ರತಿ ಕಾಸಿಗೂ ಪರದಾಡುವ ಸ್ಥಿತಿ, ಟೆಕ್ನಾಲಜಿ ಇಂದಿನಷ್ಟು ಮುಂದುವರಿದಿರಲಿಲ್ಲ, ವಾರ ಪೂರ್ತಿ ಕಾದು ಫೋನ್ ಮಾಡಿ ಅಮ್ಮನೊಂದಿಗೆ ಒಂದಷ್ಟು ವೇಳೆ ಮಾತನಾಡಿ ಮುಗಿಸಿದ ಮರುಕ್ಷಣ ಅದೇ ಒಂಟಿತನ.

ಹೀಗೆ ಅಮ್ಮನ ಜತೆಗೆ ಅಥವಾ ತಮ್ಮ ಕಾಂತನ ಜತೆಗೆ ಮಾತನಾಡುವಾಗೆ ನನ್ನದು ಒಂದೇ ವರಾತ ‘ನನಗಿಲ್ಲಿ ಸೆಟ್ ಆಗುತ್ತಿಲ್ಲ , ನಾನು ವಾಪಸ್ಸು ಬರುತ್ತೇನೆ ’ ಎನ್ನುವುದು. ಅಂದಿನ ದಿನದಲ್ಲಿ ಅಮ್ಮ ಮತ್ತು ಕಾಂತ ನೀಡಿದ ಮಾನಸಿಕ ಸ್ಥೈರ್ಯ, ಭಾಷೆ ಕಲಿಯಲು, ಸ್ಪೇನ್ ನೆಲದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಹಾಯ ಮಾಡಿತು. ಇಂತಹ ಒಂಟಿತನ ಎದುರಿಸಲು ಒಂದಷ್ಟು ಮಾನಸಿಕ ಸಿದ್ಧತೆ ಮೊದಲೇ ಮಾಡಿಕೊಂಡಿದ್ದರೆ ನಾನು ತಿಂದ ನೋವಿನಲ್ಲಿ ಒಂದಷ್ಟು ಕಡಿತವಾಗುತ್ತಿತ್ತು. ಹೀಗಾಗಿ ಯಾವುದೇ ದೇಶಕ್ಕೆ ಹೋಗುವರು ಅದರಲ್ಲೂ ಭಾಷೆ ಬಾರದ ಯೂರೋಪಿನ ದೇಶಗಳಿಗೆ ಹೋಗುವವರು ಒಂಟಿತನಕ್ಕೆ ಸಿದ್ಧರಾಗುವುದು ಬಹಳ ಉತ್ತಮ.

ಇಲ್ಲಿ ಹಿರಿಯ ನಾಗರಿಕರನ್ನು ಮನೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳುವ ಪರಿಪಾಠ ಇಲ್ಲವಾಗಿದೆ. ಇದಕ್ಕಾಗಿ ಇಲ್ಲಿ ಹೇರಳವಾಗಿ ಸಂಸ್ಥೆಗಳು ಹುಟ್ಟಿ ಕೊಂಡಿವೆ. ಇವುಗಳನ್ನು ಇಲ್ಲಿ ಸಾಮಾನ್ಯವಾಗಿ ‘ತರ್ಸರ ಎದಾದ್’ ಎನ್ನಲಾಗುತ್ತಿದೆ. ಅಂದರೆ ಜೀವನದ ಮೂರನೇ ಘಟ್ಟ ಅಥವಾ ಹಂತ ಎನ್ನುವ
ಅರ್ಥ. ಬಾಲ್ಯ ಮತ್ತು ಯೌವನ ಒಂದು ಹಂತವಾದರೆ, ಗೃಹಸ್ಥಾಶ್ರಮ ಇನ್ನೊಂದು ಹಂತ , ವಾನಪ್ರಸ್ಥ ಅಥವಾ ವೃದ್ಯಾಪ್ಯ ಮೂರನೆಯ ಮತ್ತು ಕೊನೆಯ ಹಂತ ಎಂದು ಇಲ್ಲಿ ಪರಿಗಣಿಸಲಾಗುತ್ತದೆ. ೬೫ರ ವಯೋಮಾನದವರನ್ನು ಮೂರನೆಯ ಗುಂಪಿನಲ್ಲಿ ಗುರುತಿಸಲಾಗುತ್ತದೆ. ಯೌವನದಲ್ಲಿ ಕೆಲಸ ಮಾಡಿ ಸೋಶಿಯಲ್ ಸೆಕ್ಯುರಿಟಿ ಕಟ್ಟಿದ ಪ್ರತಿಯೊಬ್ಬರಿಗೂ ಇಲ್ಲಿ ಪಿಂಚಣಿ ಸಿಗುತ್ತದೆ.

ಕೆಲವೊಮ್ಮೆ ಅವರ ಪಿಂಚಣಿ ಇಂತಹ ವೃzಶ್ರಮಗಳ ಖರ್ಚಿಗೆ ಸಾಕಾಗುವುದಿಲ್ಲ , ಆಗ ಮಕ್ಕಳು ಇಂತಹ ಹಣವನ್ನು ಭಾಗ ಮಾಡಿಕೊಂಡು ಕಟ್ಟುತ್ತಾರೆ. ಯಾರೂ ಇಲ್ಲದವರಿಗೆ ಸರಕಾರದಿಂದ ಅನುದಾನ ಪಡೆದ ಆಶ್ರಮಗಳಲ್ಲಿ ಸೇರಿಸಲಾಗುತ್ತದೆ. ಎಷ್ಟೋ ಜನ ಮಕ್ಕಳು ತಿಂಗಳಿಗೊಮ್ಮೆ ಕೂಡ ತಮ್ಮ ಹೆತ್ತವರನ್ನು ನೋಡಲು ಸಮಯಾಭಾವ ಎನ್ನುತ್ತಾರೆ. ಇದು ಆಧುನಿಕ ಜೀವನದ ಸೈಡ್ ಎಫೆಕ್ಟ್. ಹೀಗಾಗಿ ಇಂತಹ ಹಿರಿಯ ನಾಗರಿಕರನ್ನು ಕಂಡು ಸುಮ್ಮನೆ ಲೋಕಾಭಿರಾಮಾವಾಗಿ ಹರಟೆ ಹೊಡೆದು ಅವರೊಂದಿಗೆ ಒಂದಷ್ಟು ಸಮಯ ಕೆಳೆಯಲು ಒಂದಷ್ಟು ಜನ ಸಮಾಜ ಸೇವೆಯ ಹೆಸರಿನಲ್ಲಿ ಸೇವಾ ಸಂಸ್ಥೆಗಳನ್ನು ಕೂಡ ತೆರೆದಿದ್ದಾರೆ. ಹೆತ್ತ ಮಕ್ಕಳು ನೀಡಲಾಗದ ಸಮಯವನ್ನ ಇನ್ನ್ಯಾರೋ ಬಂದು ನೀಡುತ್ತಾರೆ. ಅವರು ನೀಡದ ಆತ್ಮೀಯ ಭಾವ ಇವರು ನೀಡುತ್ತಾರೆ. ಆದರೂ ಆಂತರ್ಯದಲ್ಲಿ ಒಂಟಿತನ ಬಿಟ್ಟಿತೇ? ನಾಳಿನ ಬದುಕು ನಮ್ಮೆಲ್ಲರನ್ನೂ ಒಂದಲ್ಲ ಒಂದು ಹಂತದಲ್ಲಿ ಒಂದಲ್ಲ ಒಂದು ದರ್ಜೆಗೆ ಒಂಟಿತನಕ್ಕೆ ನೂಕುತ್ತದೆ. ಕೆಲವೊಂದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ . ಆದರೆ ಸಿದ್ಧತೆ ? ಖಂಡಿತ ಸಿದ್ದತೆಯ ಅವಶ್ಯಕತೆ ಎಲ್ಲರಿಗೂ ಇದೆ.