Saturday, 14th December 2024

ಆಲ್ಜೀಮರ್ಸ್‌‌ಗೆ ಕರುಳಿನ ಕಾಯಿಲೆಗಳು ಕಾರಣವೇ ?

ವೈದ್ಯ ವೈವಿಧ್ಯ

drhsmohan@gmail.com

ಲಂಡನ್ನಿನ ಇಂಪೀರಿಯಲ್ ಕಾಲೇಜಿನ ತಂಡವು ಎಂಆರ್‌ಐ ಉಪಯೋಗಿಸಿ ಹೊಸ ಮಶೀನ್ ಲರ್ನಿಂಗ್ ವ್ಯವಸ್ಥೆ ಕಂಡು ಹಿಡಿದಿದೆ. ಇದರಿಂದ ನಿಖರವಾಗಿ ಮತ್ತು ಕಡಿಮೆ ಸಮಯದಲ್ಲಿ ಆಲ್ಜೀಮರ್ಸ್ ಕಾಯಿಲೆ ಪತ್ತೆಹಚ್ಚಬಹುದು.

ಇಳಿ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಆಲ್ಜೀಮರ್ಸ್ ಕಾಯಿಲೆ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಮುಖ್ಯವಾಗಿ ಮೆದುಳಿ ನಲ್ಲಿರುವ ನೆನಪಿನ ಕೋಶಗಳು ತೊಂದರೆಗೆ ಒಳಗಾಗಿ ಅಂತಹಾ ವ್ಯಕ್ತಿಗೆ ತೀವ್ರ ರೀತಿಯ ಮರೆವು ಉಂಟಾಗುತ್ತದೆ. ವಯಸ್ಸಾದವರಲ್ಲಿ ಚಿತ್ತವಿಕಲತೆ (ಡಿಮೆನ್ಶಿಯಾ) ದ ಮುಖ್ಯ ಕಾರಣವೇ ಆಲ್ಜೀಮರ್ಸ್.

ಚಿತ್ತವಿಕಲತೆಯ ಶೇಕಡಾ ೬೦-೭೦ ರೋಗಿಗಳು ಆಲ್ಜೀಮರ್ಸ್ ಕಾಯಿಲೆ ಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜು ಮಾಡುತ್ತದೆ. ಪ್ರಪಂಚದಲ್ಲಿ ಮರಣಕ್ಕೆ ಕಾರಣವಾಗುವ ಕಾಯಿಲೆಯ ಪಟ್ಟಿಯಲ್ಲಿ ೭ ನೇ ಸ್ಥಾನದಲ್ಲಿ ಈ ಕಾಯಿಲೆ ಬರುತ್ತದೆ. ಆಲ್ಜೀಮರ್ಸ್‌ಗೆ ನಿಖರ ಚಿಕಿತ್ಸೆ ಈವರೆಗೆ ಇಲ್ಲ. ಆದರೆ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಲು ಹಾಗೂ ಕಾಯಿಲೆಯ ಗತಿಯನ್ನು ನಿಧಾನಿಸಲು ಸೂಕ್ತ ಚಿಕಿತ್ಸೆಗಳಿವೆ.

ಈ ರೀತಿಯ ಚಿಕಿತ್ಸೆ ಆದಷ್ಟು ಬೇಗ ಆರಂಭವಾದರೆ ಕಾಯಿಲೆಯ ಲಕ್ಷಣ ಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ದುರದೃಷ್ಟವೆಂದರೆ ಲಕ್ಷಣಗಳು ಆರಂಭವಾಗಿ ಎಷ್ಟೋ ತಿಂಗಳು, ವರ್ಷಗಳ ನಂತರ ಕಾಯಿಲೆ ಪತ್ತೆಯಾಗುತ್ತದೆ. ಈ ಮಧ್ಯದ ಅವಽಯಲ್ಲಿ ಕಾಯಿಲೆ ಬಹಳಷ್ಟು ಮುಂದುವರಿದಿರುತ್ತದೆ. ಇತ್ತೀಚಿನ ಅಧ್ಯಯನಗಳು ಕಾಯಿಲೆಯನ್ನು ಬೇಗ ಪತ್ತೆ ಹಚ್ಚುವ ಎರಡು ಹೊಸ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತವೆ.

ಆಲ್ಜೀಮರ್ಸ್ – ಕರುಳು ಜೆನೆಟಿಕ್ ಲಿಂಕ್: ಆಸ್ಟ್ರೇಲಿಯಾದ ಒಂದು ವಿಜ್ಞಾನಿಗಳ ತಂಡ ಆಲ್ಜೀಮರ್ಸ್ ಬೇಗ ಪತ್ತೆಹಚ್ಚುವ ಮತ್ತು ಚಿಕಿತ್ಸೆ ಮಾಡುವ ಹೊಸ ವಿಧಾನವನ್ನು ಇತ್ತೀಚಿಗೆ ಸೂಚಿಸಿದೆ. ಕರುಳಿನ ಹಲವು ಕಾಯಿಲೆಗಳು ಮತ್ತು ಆಲ್ಜೀಮರ್ಸ್ ನಡುವೆ ಜೆನೆಟಿಕ್ ಲಿಂಕ್ ಇರುವುದನ್ನು ಈ ಸಂಶೋಧಕರು ಕಂಡುಕೊಂಡಿದ್ದಾರೆ. ಈ ವಿಧಾನವು ಆಲ್ಜೀಮರ್ಸ್ ಕಾಯಿಲೆ ಯನ್ನು ಬಹಳಷ್ಟು ಬೇಗ ಕಂಡು ಹಿಡಿಯುವುದು ಮಾತ್ರವಲ್ಲದೆ ಈ ಕಾಯಿಲೆ ಮತ್ತು ಕರುಳಿನ ಹಲವು ಕಾಯಿಲೆಗಳಿಗೆ ಚಿಕಿತ್ಸೆ ಕಂಡು ಹಿಡಿಯಬಲ್ಲದು ಎಂದು ಈ ಸಂಶೋಧನೆಯ ಮುಖ್ಯಸ್ಥ ಡಾ ಎಮಾನುಯೆಲ್ ಅಡೆವುಯಿ ಅಭಿಪ್ರಾಯ ಪಡುತ್ತಾರೆ.

ಇವರು ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನ ಎಡಿತ್ ಕೋವೆನ್ ವಿಶ್ವ ವಿದ್ಯಾನಿಲಯದವರು. ಈ ಅಧ್ಯಯನವು ಇತ್ತೀಚಿನ ಕಮ್ಯುನಿಕೇಶನ್ಸ್ ಬಯಾಲಜಿ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಕರುಳಿಗೆ ಸಂಬಂಧ : ಬಹಳ ಹಿಂದೆಯೇ ವೈದ್ಯಕೀಯದ ಪಿತಾಮಹ ಹಿಪ್ಪೊಕ್ರೇಟ್ಸ್ ( 460 – 377 ಕ್ರಿ ಪೂ ) ಎಲ್ಲಾ
ಕಾಯಿಲೆಗಳು ಕರುಳಿನಿಂದ ಆರಂಭವಾಗುತ್ತವೆ ಎಂಬ ಒಂದು ಸಾಮಾನ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಲವಾರು ಕಾಯಿಲೆಗಳ ವಿಷಯದಲ್ಲಿ ಗ್ರೀಕ್‌ನ ಈ ಪಿತಾಮಹ ವ್ಯಕ್ತಪಡಿಸಿದ ಅಭಿಪ್ರಾಯ ಸತ್ಯವೆಂದು ಸಂಶೋಧನೆಗಳು ನಮಗೆ ಸೂಚಿಸುತ್ತಿವೆ.

ಕರುಳಿಗೂ ಮತ್ತು ಮೆದುಳಿಗೂ ಇರುವ ಸಂಬಂಧದ ಬಗ್ಗೆ ಹಿಂದೆ ಒಂದು ಅಧ್ಯಯನ ಮಾಡಲಾಗಿತ್ತು. ಆಗ ಆಲ್ಜೀಮರ್ಸ್ ಕಾಯಿಲೆ ಬರುವುದರ ಬಗ್ಗೆ ಕರುಳಿನ ಪಾತ್ರವೂ ಇರಬಹುದು ಎಂಬ ಸೂಚನೆ ಕಂಡು ಬಂದಿತ್ತು. ಕರುಳಿನಲ್ಲಿರುವ ಸೂಕ್ಷ್ಮ
ಜೀವಿಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಉರಿಯೂತ (Inflammation) ಉಂಟುಮಾಡುವ ಸೈಟೋಕೈನ್‌ಗಳ ಉತ್ಪತ್ತಿಯ ಮೇಲೆ ಪರಿಣಾಮ ಹೊಂದಿವೆ ಎಂಬುದು ಹಿಂದಿನ ಅಧ್ಯಯನದಲ್ಲಿ ಗೊತ್ತಾಗಿದೆ. ಈ ರೀತಿಯ ಉರಿಯೂತದ ಸೈಟೋ ಕೈನ್‌ಗಳು (ಕೆಟ್ಟ ಪದಾರ್ಥಗಳು) ಆಲ್ಜೀಮರ್ಸ್ ಕಾಯಿಲೆ ಬರುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಇಳಿವಯಸ್ಸಿನವರ ಕರುಳಿನಲ್ಲಿ ಉಂಟಾಗುವ ಹಲವಾರು ಉರಿಯೂತದ ಕಾರಣಗಳು ಹಾಗೂ ವಯಸ್ಸಾಗುವಿಕೆ ಜತೆಯಲ್ಲಿ ಕಡಿಮೆ ಪೋಷಕಾಂಶ ಹೊಂದಿರುವ ಆಹಾರ – ಇವೆಲ್ಲವೂ ಅಲ್ಜೀಮರ್ಸ್ ಕಾಯಿಲೆ ಬರುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತವೆ
ಎನ್ನುವುದು ಆಲ್ಜೀಮರ್ಸ್ ಬಗೆಗಿನ ಹಲವಾರು ಅಧ್ಯಯನಗಳನ್ನು ಕ್ರೋಡೀಕರಣ ಮಾಡಿದಾಗ ಗೊತ್ತಾದ ಅಂಶ.

ಕರುಳಿನ ಮತ್ತು ಆಲ್ಜೀಮರ್ಸ್‌ಗೆ ಇರಬಹುದಾದ ಸಂಬಂಧದಲ್ಲಿ ತಳಿಶಾಸ್ತ್ರದ (Genetic) ಪಾತ್ರ ಏನಿದೆ ಎಂಬುದರ ಬಗ್ಗೆ ಈ ಹೊಸ ಸಂಶೋಧನೆಯಲ್ಲಿ ಸಂಶೋಧಕರು ಹುಡುಕಲು ಆರಂಭಿಸಿದರು. 15 ದೊಡ್ಡ ಜೆನಟಿಕ್ ಅಧ್ಯಯನಗಳಲ್ಲಿನ 4 ಲಕ್ಷಕ್ಕೂ ಹೆಚ್ಚು ಜನರ ಕರುಳು ಮತ್ತು ಆಲ್ಜೀಮರ್ಸ್‌ನಲ್ಲಿನ ಜೆನೆಟಿಕ್ ವಿವರಗಳನ್ನು ವಿಶ್ಲೇಷಿಸಿದರು. ಕರುಳಿನ ಕಾಯಿಲೆಗಳಾದ – ಗ್ಯಾಸ್ಟ್ರೋ ಈಸಫೇಜಿ ಯಲ್ ರಿಫ್ಲೆಕ್ಸ್ ಕಾಯಿಲೆ, ಪೆಪ್ಟಿಕ್ ಅಲ್ಸರ್ ಕಾಯಿಲೆ, ಜಠರ ಮತ್ತು ಕರುಳಿನ ಮೊದಲ ಭಾಗ ಡುಯೋಡಿ ನಂನ ಸೋಂಕು ಕಾಯಿಲೆಗಳು, ಇರಿಟಬಲ್ ಬವೆಲ್ ಸಿಂಡ್ರೋಮ್ ಮತ್ತು ಡೈವರ್ಟಿಕ್ಯುಲೋಸಿಸ್ – ಇವುಗಳು ಮತ್ತು ಆಲ್ಜೀಮರ್ಸ್ ಕಾಯಿಲೆ – ಈ ಎರಡು ಗುಂಪಿನ ಕಾಯಿಲೆಗಳಲ್ಲಿ ಕೆಲವು ಜೀನ್ ಗಳು ಸಂಬಂಧ ಹೊಂದಿರುವುದನ್ನು ಕಂಡು ಕೊಂಡರು.

ಈ ಎರಡು ಗುಂಪುಗಳ ವಂಶವಾಹಿಗಳಲ್ಲಿ ಹಲವು ರೀತಿಯ ಸಮಾನತೆ ಮತ್ತು ಸಂಬಂಧಗಳನ್ನು ಕಾಣುವಲ್ಲಿ ಯಶಸ್ವಿ ಯಾದರೂ ನಿರ್ದಿಷ್ಟ ಕಾರ್ಯಕಾರಣ ಸಂಬಂಧ ಹುಡುಕಲು ಸಾಧ್ಯವಾಗಲಿಲ್ಲ. ಕರುಳಿನ ಕಾಯಿಲೆಗಳು ಆಲ್ಜೀಮರ್ಸ್‌ಗೆ ಕಾರಣವೇ ಅಥವಾ ಆಲ್ಜೀಮರ್ಸ್ ಕರುಳಿನ ಕಾಯಿಲೆಗಳಿಗೆ ಕಾರಣವೇ ಎಂಬ ಅಂಶವನ್ನು ಈ ಅಧ್ಯಯನವು ಸ್ಪಷ್ಟಪಡಿಸ ಲಿಲ್ಲ.

ಆದರೂ ಇದು ತುಂಬಾ ಮುಖ್ಯವಾದ ಮಾಹಿತಿ ಎಂದು ಎಡಿತ್ ಕೋವನ್ ವಿಶ್ವವಿದ್ಯಾನಿಲಯದ ಈ ಅಧ್ಯಯನದ ಮತ್ತೊಬ್ಬ
ಮುಖ್ಯ ಸಂಶೋಧಕ ಪ್ರೊ. ಸೈಮನ್ ಲಾಸ್ ಅಭಿಪ್ರಾಯ ಪಡುತ್ತಾರೆ. ಈ ಬಹು ಮುಖ್ಯ ಮಾಹಿತಿಯು ಕರುಳು – ಮೆದುಳಿನ ಸಾಂಗತ್ಯವನ್ನು ವಿಷದೀಕರಿಸುತ್ತದೆ.

ಮೆದುಳಿನಲ್ಲಿರುವ ಎಚ್ಚರದ ಮತ್ತು ಸೂಕ್ಷ್ಮ ಭಾವನೆಗಳ ಕೇಂದ್ರಕ್ಕೂ ಮತ್ತು ಕರುಳಿನ ಕರ್ತವ್ಯಕ್ಕೂ ಎರಡೂ ರೀತಿಯ ಸಂಬಂಧವಿದೆ ಎಂಬ ಥಿಯರಿಯನ್ನು ಇದು ದೃಡಪಡಿಸುತ್ತದೆ. ಜೀರ್ಣಾಂಗವ್ಯೂಹದ ಹಲವು ಕಾಯಿಲೆಗಳು ಮತ್ತು ಕರುಳಿನ ಸೂಕ್ಷ್ಮ ಜೀವಿಗಳ ಜತೆ ಆಲ್ಜೀಮರ್ಸ್ ಕಾಯಿಲೆ ಜೆನೆಟಿಕ್ ಸಾಹಚರ್ಯ ಹೊಂದಿರುವುದನ್ನು ಈ ಅಧ್ಯಯನ ಎತ್ತಿ ತೋರಿಸು ತ್ತದೆ.

ಹಾಗೆಯೇ ಇದೇ ರೀತಿಯ ಹಿಂದಿನ ಅಧ್ಯಯನಗಳ ಮಾಹಿತಿಯನ್ನು ಪುರಸ್ಕರಿಸುತ್ತದೆ. ಈ ಅಧ್ಯಯನವು ಆಲ್ಜಿಮರ್ಸ್ ಮತ್ತು ಕರುಳಿನ ಕಾಯಿಲೆಗಳ ಬಗೆಗೆ ಇರುವ ಜೆನೆಟಿಕ್ ಸಂಬಂಧವನ್ನು ಹೊರಗೆಡವುದಲ್ಲದೆ ಹಾಗೆಯೇ ಕರುಳು – ಮೆದುಳಿನ ಆಕ್ಸಿಸ್, ನರಗಳ ಡಿಜನರೇಟಿವ್ ಕಾಯಿಲೆಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬ ಅಂಶವನ್ನು ಪುಷ್ಟೀ ಕರಿಸುತ್ತದೆ ಎಂದು ಅಮೆರಿಕದ ಜೀರಿಯಾಟ್ರಿಕ್ ಸೊಸೈಟಿಯ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಕೊಬ್ಬು, ಪ್ರತಿರೋಧ ಶಕ್ತಿ: ಮೇಲಿನ ಎರಡೂ ರೀತಿಯ ಕಾಯಿಲೆಗಳಲ್ಲಿ – ಈ ಜೀನ್‌ಗಳು ಒಳಗೊಂಡ ಕಾಯಿಲೆಗಳ ಜೀವ ವಿಜ್ಞಾನದ ಪಥದ ಬಗ್ಗೆ ಸಂಶೋಧಕರು ಗಮನ ಹರಿಸಿದರು. ಆಗ ಅವರಿಗೆ ಕೊಬ್ಬಿಗೆ ಸಂಬಂಧಪಟ್ಟ ಹಾಗೂ ಪ್ರತಿರೋಧ ವ್ಯವಸ್ಥೆಗೆ ಸಂಬಂಧಪಟ್ಟ ಪಥಗಳಲ್ಲಿ ಹೆಚ್ಚಿನ ರೀತಿಯ ಗುರುತಿಸುವಿಕೆ ಕಂಡುಬಂದಿತು. ಕೊಬ್ಬಿನ ಅಂಶದ ಸಮತೋಲನದ ವ್ಯತ್ಯಯಕ್ಕೆ ಮತ್ತು ಆಲ್ಜೀಮರ್ಸ್‌ಗೂ ಇರುವ ಸಂಬಂಧದ ಬಗ್ಗೆ ಒಂದು ಹಿಂದಿನ ಅಧ್ಯಯನದಲ್ಲಿಕಂಡುಬಂದಿದೆ. ಈ ಎಲ್ಲ ಅಂಶಗಳು ಕೊಲೆಸ್ಟರಾಲ್ ಮೆಟಬಾಲಿಸಂ, ಅದರ ಸಾಗಾಟ ಇವೆಲ್ಲ ಕೊಲೆಸ್ಟರಾಲ್‌ನ ಏರು-ಪೇರು, ಕರುಳಿನ  ಕಾಯಿಲೆಗಳು ಮತ್ತು ಆಲ್ಜೀಮರ್ಸ್‌ಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ ಎಂದು ಡಾ.ಅಡೆವುಯಿ ಅಭಿಪ್ರಾಯ ಪಡುತ್ತಾರೆ.

ಈ ಮೇಲಿನ ಎಲ್ಲ ವಿವಿಧ ತಾಂತ್ರಿಕತೆಗಳ ಬಗ್ಗೆ ವಿವರವಾದ ಅಧ್ಯಯನದ ಅವಶ್ಯಕತೆ ಇದೆ. ರಕ್ತ ದಲ್ಲಿನ ಅಧಿಕ ಕೊಲೆಸ್ಟರಾಲ್ ಮಟ್ಟ ಕೇಂದ್ರೀಯ ನರವ್ಯವಸ್ಥೆಗೆ ಸಾಗಿಸಲ್ಪಪಡುತ್ತದೆ. ಪರಿಣಾಮ ಎಂದರೆ ಮೆದುಳಿನಲ್ಲಿ ಅಸಹಜವಾದ ಕೊಲೆಸ್ಟರಾಲ್
ಮೆಟಬಾಲಿಸಂ ಘಟಿಸುತ್ತದೆ. ಮೆದುಳಿನಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟರಾಲ್ ಶೇಖರಣೆ ಹೊಂದಿದಾಗ ಮೆದುಳಿನ ಮುಖ್ಯ ಭಾಗಗಳು ಸವಕಳಿ ಹೊಂದುತ್ತವೆ.

ಪರಿಣಾಮ ಎಂದರೆ ಮೆದುಳಿನ ಎಚ್ಚರದ ಮತ್ತು ಸೂಕ್ಷ್ಮ ಕ್ರಿಯೆಗಳು ನಿಧಾನವಾಗಿ ಕುಂಠಿತಗೊಳ್ಳುತ್ತವೆ. ಹಾಗಾಗಿ ಕೊಬ್ಬಿನ ಅಂಶಗಳನ್ನು ಮತ್ತು ಉರಿಯೂತವನ್ನು ನಿಯಂತ್ರಿಸುವ ಔಷಧಗಳು ಆಲ್ಜೀಮರ್ಸ್ ಕಾಯಿಲೆಗೆ ಚಿಕಿತ್ಸೆಯಾಗಬಹುದು ಎಂಬು ದನ್ನು ಇದು ಸೂಚಿಸುತ್ತದೆ.

ಆದ್ದರಿಂದ ಕೊಲೆಸ್ಟರಾಲ್ ನಿಯಂತ್ರಿಸುವ ಔಷಧ ಗಳಾದ, ಈಗ ಬಳಕೆಯಲ್ಲಿರುವ ಆಂಟಿ ಕೊಲೆಸ್ಟರಾಲ್ ಔಷಧಗಳು ಅಥವಾ ಸ್ಯಾಟಿನ್‌ಗಳು ಎರಡೂ ರೀತಿಯ ಕಾಯಿಲೆಗಳನ್ನು ಚಿಕಿತ್ಸೆ ಮಾಡುವಲ್ಲಿ ಉಪಯೋಗವಾಗಬಹುದು ಎಂದು ಮೇಲಿನ
ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಈ ಮೇಲಿನ ಅಧ್ಯಯನದ ಒಟ್ಟೂ ಸಾರಾಂಶ ಎಂದರೆ ಜೀರ್ಣಾಂಗವ್ಯೂಹದ ಅದರಲ್ಲಿಯೂ ಕರುಳಿನ ನಾನಾ ಕಾಯಿಲೆಗಳು ಇದ್ದವರಲ್ಲಿ ಅಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ. ಅಲ್ಲದೆ ಈ ಎರಡೂ ರೀತಿಯ ಕಾಯಿಲೆಗಳು ಒಂದೇ ರೀತಿಯ ಜೆನೆಟಿಕ್ ರಿಸ್ಕ ಅಂಶಗಳನ್ನು ಹೊಂದಿವೆ.

ಜೊತೆಗೆ ವಿಜ್ಞಾನಿಗಳಿಗೆ ಈ ಎರಡೂ ಬಗೆಯ ಕಾಯಿಲೆಗಳಿಗೆ ಹೊಸ ರೀತಿಯ ಚಿಕಿತ್ಸೆ ಹುಡುಕುವಲ್ಲಿ ಈ ಸಂಶೋಧನೆ ಸಹಕಾರಿ. ಗಮನಿಸಬೇಕಾದ ವಿಚಾರ ಎಂದರೆ ಆಲ್ಜೀಮರ್ಸ್ ಮತ್ತು ಕರುಳು ಸಂಬಂಧಿ ಕಾಯಿಲೆಗಳು ಯಾವಾಗಲೂ ಒಂದೇ ವ್ಯಕ್ತಿಯಲ್ಲಿ ಇರುತ್ತವೆ ಎಂಬುದಲ್ಲ, ಆದರೆ ಅವೆರಡರ ಮಧ್ಯೆ ಒಂದು ರೀತಿಯ ಜೀವಶಾಸ್ತ್ರದ ಕೊಂಡಿ ಇದೆ.

ಹಾಗಾಗಿ ಆಲ್ಜೀಮರ್ಸ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಲು ಸಾಧ್ಯವಾದರೆ ಕರುಳಿಗೆ ಸಂಬಂಧಪಟ್ಟ ಕಾಯಿಲೆಗಳಲ್ಲಿ ಮೆದುಳಿನ ಅಥವಾ ಮನಸ್ಸಿನ ಸೂಕ್ಷ್ಮತೆ ಕಡಿಮೆ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬಹುದು. ಈ ರೀತಿಯ
ತಳಿಶಾಸದ ಸಂಬಂಧ ಗೊತ್ತಾಗಿದ್ದರಿಂದ ವೈದ್ಯರಿಗೆ ಕರುಳು ಸಂಬಂಧಿ ಕಾಯಿಲೆ ಮತ್ತು ಮೆದುಳಿನ ಸೂಕ್ಷ್ಮತೆ ಕಡಿಮೆ ಆದವರಲ್ಲಿ ಆಲ್ಜೀಮರ್ಸ್ ಕಾಯಿಲೆಯನ್ನು ಬೇಗ ಪತ್ತೆಹಚ್ಚಬಹುದು.

ಎಂಆರ್‌ಐ ಸ್ಕ್ಯಾನ್‌ನಿಂದ; ಮೊದಲು ತಿಳಿಸಿದಂತೆ ಆಲ್ಜೀಮರ್ಸ್ ಕಾಯಿಲೆ ಎಷ್ಟು ಬೇಗ ಪತ್ತೆಯಾದರೆ ಅಷ್ಟೂ ಒಳ್ಳೆಯದು.
ಪ್ರಸ್ತುತ ಕಾಯಿಲೆ ಪತ್ತೆ ಹಚ್ಚುವ ವಿಧಾನ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಲಂಡನ್ನಿನ ಇಂಪೀರಿಯಲ್ ಕಾಲೇಜಿನ ತಂಡವು ಎಂಆರ್‌ಐ ಉಪಯೋಗಿಸಿ ಹೊಸ ಮಶೀನ್ ಲರ್ನಿಂಗ್ ವ್ಯವಸ್ಥೆ ಕಂಡುಹಿಡಿದಿದೆ.

ಇದರಿಂದ ನಿಖರವಾಗಿ ಮತ್ತು ಕಡಿಮೆ ಸಮಯದಲ್ಲಿ ಆಲ್ಜೀಮರ್ಸ್ ಕಾಯಿಲೆ ಪತ್ತೆಹಚ್ಚಬಹುದು. ಈ ಸಂಶೋಧಕರು ಕ್ಯಾನ್ಸರ್
ಗಡ್ಡೆಗಳನ್ನು ವರ್ಗೀಕರಿಸುವ ರೀತಿಯ ಆಲ್ಗಾರಿದಂಗಳನ್ನು ಅಭಿವೃದ್ಧಿಪಡಿಸಿದರು. ಮೆದುಳನ್ನು 115 ಭಾಗವಾಗಿ ವಿಂಗಡಿಸಿ ಆಕಾರ, ಅಳತೆ, ಮೆದುಳಿನ ಅಂಗಾಂಶದ ರೀತಿ ಹೀಗೆ ಭಾಗಗಳ 660 ಗುಣಾಂಶಗಳನ್ನು ಮಾಡಿಕೊಂಡರು.

ನಂತರ ಎಲ್ಲ ಲಕ್ಷಣಗಳನ್ನು ಎಂಆರ್‌ಐ ಮಷೀನ್‌ಗೆ ಫೀಡ್ ಮಾಡಿ, ಒಂದೇ ಸ್ಟ್ಯಾಂಡರ್ಡ್ ಎಂಆರ್‌ಐ ಸ್ಕ್ಯಾನ್‌ನಿಂದ ಆಲ್ಜೀಮರ್ಸ್‌ನ ಬದಲಾವಣೆಗಳನ್ನು ಕಂಡು ಹಿಡಿಯುವಂತೆ ಆಲ್ಗಾರಿದಂ ಅನ್ನು ಸೂಕ್ತವಾಗಿ ತರಬೇತಿಗೊಳಿಸಿದರು. ಇವರು 400 ಕ್ಕೂ ಅಧಿಕ ರೋಗಿಗಳಲ್ಲಿ ಮೆದುಳಿನ ಎಂಆರ್‌ಐ ಸ್ಕ್ಯಾನ್ ಗಳ ಪರೀಕ್ಷೆ ನಡೆಸಿದರು.

ಇವರುಗಳಲ್ಲಿ ಆರಂಭದ ಅಥವಾ ಮುಂದಿನ ಹಂತದ ಆಲ್ಜೀಮರ್ಸ್ ಕಾಯಿಲೆ ಇತ್ತು. ಇವರನ್ನು ಆರೋಗ್ಯವಂತ ವ್ಯಕ್ತಿಗಳ ಕಂಟ್ರೋಲ್ ಗ್ರೂಪ್ ನೊಂದಿಗೆ ಹಾಗೂ ನರಗಳ ಬೇರೆ ಕಾಯಿಲೆಗಳು ಇರುವ ರೋಗಿಗಳೊಂದಿಗೆ ಹೋಲಿಸಲಾಯಿತು. ಈ ಆರಂಭಿಕ ಪರೀಕ್ಷೆಯಲ್ಲಿ ಈ ವ್ಯವಸ್ಥೆಯಿಂದ ಆಲ್ಜೀಮರ್ಸ್ ಅನ್ನು ಶೇ.98ರಷ್ಟು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಯಿತು. ಅಲ್ಲದೆ ಇದು ಆರಂಭದ ಮತ್ತು ನಂತರದ ಹಂತಗಳ ವ್ಯತ್ಯಾಸವನ್ನು ಸಹಿತ ಶೇ.79 ಸಂದರ್ಭಗಳಲ್ಲಿ ಕಂಡುಹಿಡಿಯಲು ಸಾಧ್ಯವಾಯಿತು.

ಹಾಗಾಗಿ ಈ ವಿಧಾನವನ್ನು ಇನ್ನೂ ಸರಿಯಾಗಿ ಪರಿಷ್ಕರಿಸಿ ಕಾರ್ಯರೂಪಕ್ಕೆ ತಂದರೆ ಆಲ್ಜೀಮರ್ಸ್ ಅನ್ನು ಬೇಗ ಪತ್ತೆಹಚ್ಚ ಬಹುದು ಹಾಗೆಯೇ ಆರಂಭಿಕ ಚಿಕಿತ್ಸೆಯನ್ನು ಸಹಿತ ಶೀಘ್ರದಲ್ಲಿ ಆರಂಭಿಸಬಹುದು.