Thursday, 12th December 2024

ಅಂಬಾನಿ, ಅದಾನಿಯನ್ನೇಕೆ ಎಳೆದು ತರುತ್ತಿದ್ದೀರಿ ?

ಸಂಗತ

ಡಾ.ವಿಜಯ್ ದರಡಾ

ದೇಶವನ್ನು ಆಳುವ ನಾಯಕರ ದೂರದೃಷ್ಟಿಯು ಉದ್ದಿಮೆಗಳನ್ನು ಪ್ರೋತ್ಸಾಹಿಸುವತ್ತ ಇರಬೇಕೇ ಹೊರತು ಉದ್ಯಮಪತಿಗಳನ್ನು ಹೀಯಾಳಿಸುವತ್ತ ಅಲ್ಲ. ವ್ಯಾಪಾರಿಗಳು, ಉದ್ದಿಮೆಗಳನ್ನು ನಡೆಸುವವರು ಹಾಗೂ ಬೃಹತ್ ಉದ್ದಿಮೆಗಳ ಸ್ಥಾಪಕರು ದೇಶದ ಅಭಿವೃದ್ಧಿ ಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.

ಚರ್ಚೆ ಆರಂಭಿಸುವುದಕ್ಕೂ ಮೊದಲು ಒಂದು ಐತಿಹಾಸಿಕ ದಂತಕತೆ ಹೇಳುತ್ತೇನೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಜಾಜ್ ಮತ್ತು ಬಿರ್ಲಾ
ಕುಟುಂಬಗಳು ಸಾಕಷ್ಟು ಕೊಡುಗೆ ನೀಡಿವೆ. ಇದಕ್ಕೆ ಇತಿಹಾಸವೇ ಸಾಕ್ಷಿ. ಹಿರಿಯ ಪತ್ರಿಕೋದ್ಯಮಿ ರಾಮನಾಥ್ ಗೋಯಂಕಾ ಒಮ್ಮೆ ಮಹಾತ್ಮ ಗಾಂಽಜಿ ಬಳಿ, ‘ಬಾಪೂಜಿ, ಈ ಬಜಾಜ್ ಮತ್ತು ಬಿರ್ಲಾಗಳು ನಿಮ್ಮನ್ನು ಶೋಷಣೆ ಮಾಡುತ್ತಿದ್ದಾರೆಂದು ನಿಮಗೆ ಅನ್ನಿಸುತ್ತಿಲ್ಲವೇ?’ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಬಾಪು, ‘ಇಲ್ಲ. ನನಗೇನೂ ಹಾಗನ್ನಿಸುವುದಿಲ್ಲ. ಅದರ ಬದಲು, ನಾನೇ ಅವರನ್ನು ಶೋಷಿಸುತ್ತಿದ್ದೇನೆ ಎಂದು ನನಗನ್ನಿಸುತ್ತದೆ’ ಎಂದು
ಹೇಳಿದ್ದರು.

ಗಾಂಧೀಜಿ ಹಾಗೆ ಹೇಳಿದ್ದಕ್ಕೂ ಕಾರಣವಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಹೋರಾಟಗಾರರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವುದು, ಅವರ ವಸತಿ, ಊಟ ತಿಂಡಿಯ ಖರ್ಚು, ಹೋರಾಟಗಳನ್ನು ಆಯೋಜಿಸುವುದಕ್ಕೆ ಖರ್ಚು ಹೀಗೆ ತುಂಬಾ ಹಣ ವ್ಯಯವಾಗುತ್ತಿತ್ತು. ಅದಕ್ಕೆಲ್ಲ ಈ ಎರಡು ಉದ್ಯಮಿ ಕುಟುಂಬಗಳು ಕೈಬಿಚ್ಚಿ ಧನಸಹಾಯ ಮಾಡುತ್ತಿದ್ದವು. ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಇಂತಹ
ಶ್ರೀಮಂತ ಉದ್ಯಮಿಗಳ ಕೊಡುಗೆಯೂ ಬೇಕಾದಷ್ಟಿದೆ.

ಉದ್ಯಮಿಗಳು ಅಂದರೆ ಬಂಡವಾಳಶಾಹಿಗಳು, ಉದ್ಯಮಿಗಳು ಅಂದರೆ ಜನರನ್ನು ಶೋಷಿಸುವವರು, ಉದ್ಯಮಿಗಳು ಅಂದರೆ ದುಡ್ಡು ಮಾಡುವವರು ಹೀಗೆ ಸಾಕಷ್ಟು ನಕಾರಾತ್ಮಕ ಸಂಗತಿಗಳನ್ನೇ ನಾವು ಹೊಸ ತಲೆಮಾರಿನ ಯುವಕರ ತಲೆಗೆ ತುಂಬಿಬಿಟ್ಟಿದ್ದೇವೆ. ಮೇಲಿನ ಘಟನೆಯನ್ನು ನಾನೇಕೆ ಇಲ್ಲಿ ಪ್ರಸ್ತಾಪಿಸಿದೆ ಗೊತ್ತಾ? ಸ್ವಾತಂತ್ರ್ಯ ಹೋರಾಟದ ಯಶಸ್ಸಿನಲ್ಲಿ ಉದ್ಯಮಿಗಳ ಪಾಲೂ ಇದೆ ಎಂಬುದು ನಮ್ಮ ದೇಶದ ಯುವಜನರಿಗೆ ಗೊತ್ತಿರಬೇಕು. ನಿಜವಾಗಿಯೂ ಸ್ವಾತಂತ್ರ್ಯ ಚಳವಳಿ ಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.

ಸ್ವಾತಂತ್ರ್ಯ ಲಭಿಸಿದ ಮೇಲೂ ಉದ್ಯಮಿಗಳು ನಮ್ಮ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂಬುದನ್ನು ಕೂಡ ನಾವು ಗುರುತಿಸಬೇಕು. ಆದರೆ, ಕೆಲ ರಾಜಕಾರಣಿಗಳು ಉದ್ಯಮಪತಿಗಳನ್ನು ಟೀಕಿಸುವುದನ್ನೂ ಹಿಯಾಳಿಸುವುದನ್ನೂ ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಈಗಂತೂ ಅಂಬಾನಿ ಮತ್ತು ಅದಾನಿ ಸಮೂಹಗಳ ಮೇಲೆ ವಾಗ್ದಾಳಿ ನಡೆಸುವುದು ಫ್ಯಾಷನ್ ಆಗಿಬಿಟ್ಟಿದೆ. ಅವರೇನೋ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ ಎಂಬಂತೆ ಅವರನ್ನು ದೂಷಿಸಲಾಗುತ್ತಿದೆ.

ಅವರ ಮೇಲೆ ಮಾಡುತ್ತಿರುವ ಆರೋಪಗಳು ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ನನಗೆ ಗೊತ್ತಿಲ್ಲ. ಒಂದು ವೇಳೆ ಈ ಆರೋಪಗಳು ನಿಜವೇ ಆಗಿದ್ದರೂ ಅದನ್ನು ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸಬೇಕೇ ಹೊರತು ರಾಜಕೀಯದ ವೇದಿಕೆಯಲ್ಲಿ ಅಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಂಬಾನಿ ಮತ್ತು ಅದಾನಿ ಸಮೂಹಗಳಿಗೆ ಪ್ರಧಾನಿ ಜತೆಗೆ ತುಂಬಾ ಆಪ್ತ ಸಂಬಂಧವಿದೆ ಎಂದು ಪದೇಪದೆ ಆರೋಪಿಸುತ್ತಾ ಬಂದಿದ್ದಾರೆ. ಅವರ ಪ್ರಕಾರ, ಈ ಎರಡೂ ಕಂಪನಿಗಳ ಬೆಳವಣಿಗೆಗೆ ಕೇಂದ್ರ ಸರಕಾರವೇ ಸಹಾಯ ಮಾಡುತ್ತಿದೆ. ಇಲ್ಲೊಂದು ಸಂಗತಿ ನೆನಪಿಸಿಕೊಳ್ಳಬೇಕು. ಧೀರೂಭಾಯಿ ಅಂಬಾನಿಗೆ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರ ಜತೆಗೂ ಆಪ್ತವಾದ ಸ್ನೇಹವಿತ್ತು. ಅವರಿಬ್ಬರೂ ಪರಸ್ಪರರಿಗೆ ಸಾಕಷ್ಟು ಸಹಾಯ ಮಾಡಿದ್ದರು.

ಉದ್ಯಮಿಗಳು ತಮ್ಮ ಹಿತಾಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಹೊಸತೇನೂ ಅಲ್ಲ.
ಅಷ್ಟೇಕೆ, ಈ ಟ್ರೆಂಡ್ ಭಾರತಕ್ಕೆ ಸೀಮಿತವೂ ಅಲ್ಲ. ಜಪಾನ್ ನಲ್ಲಿ ಪ್ರಧಾನಮಂತ್ರಿಯ ಆಯ್ಕೆಯಲ್ಲೇ ಉದ್ಯಮಿಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದಂತಹ ದೇಶದಲ್ಲಿ ಉದ್ಯಮಿಗಳು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ. ಅದರಲ್ಲಿ ವಿಶೇಷವೇನೂ ಇಲ್ಲ.
ಭಾರತದಲ್ಲಿ ಮಾತ್ರ ಇದನ್ನು ಋಣಾತ್ಮಕ ಸಂಗತಿಯಂತೆ ಬಿಂಬಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಗುಜರಾತಿನವರಾದ್ದರಿಂದ ಗುಜರಾತಿನ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗು
ತ್ತಿದೆ. ವೈಯಕ್ತಿಕವಾಗಿ ನಾನಂತೂ ಅಂತಹ ಆರೋಪಗಳನ್ನು ತಿರಸ್ಕರಿಸುತ್ತೇನೆ.

ಈಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಹೊಸ ಪ್ರಶ್ನೆಯೆತ್ತಿದ್ದಾರೆ. ರಾಹುಲ್ ಗಾಂಽ ಏಕೆ ಇದ್ದಕ್ಕಿದ್ದಂತೆ ಅಂಬಾನಿ ಮತ್ತು ಅದಾನಿ ಬಗ್ಗೆ ಇತ್ತೀಚೆಗೆ
ಮಾತನಾಡುವುದನ್ನು ನಿಲ್ಲಿಸಿದ್ದಾರೆ? ಅವರಿಗೆ ಟೆಂಪೋ ಲೋಡ್‌ಗಳಲ್ಲಿ ಹಣ ಬಂದಿದೆಯೇ ಎಂದು ಪ್ರಧಾನಿ ಕೇಳಿದ್ದಾರೆ. ಪ್ರಧಾನಮಂತ್ರಿಗಳು ಹೀಗೆ, ಈ ರೀತಿಯಲ್ಲಿ, ಈ ಉದ್ಯಮಿಗಳ ಹೆಸರನ್ನು ಪ್ರಸ್ತಾಪಿಸಿರುವುದು ಸಾಕಷ್ಟು ಜನರನ್ನು ಅಚ್ಚರಿಗೆ ತಳ್ಳಿದೆ. ನನಗಂತೂ ಅದರ ಬಗ್ಗೆ ಅಂಕಣವನ್ನೇ ಬರೆಯುವಂತೆ ಪ್ರೇರೇಪಿಸಿದೆ. ಪ್ರಧಾನಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ರಾಹುಲ್ ಗಾಂಧಿ ಮತ್ತು ಅವರ ಪಕ್ಷದಿಂದ ತತ್‌ಕ್ಷಣ ಪ್ರತಿಕ್ರಿಯೆಗಳು ಬಂದಿವೆ. ಈಗಲೂ ಲೋಕಸಭೆ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದೆ.

ಅದು ಹಾಗಿರಲಿ, ಇಲ್ಲೊಂದು ಮೂಲಭೂತ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಏಕೆ ನಾವು ಉದ್ಯಮಿಗಳನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದು
ತರುತ್ತಿದ್ದೇವೆ? ಏಕೆ ಅವರಿಗೆ ಭ್ರಷ್ಟ ಉದ್ಯಮಿಗಳು ಎಂದು ಹಣೆಪಟ್ಟಿ ಕಟ್ಟುವುದಕ್ಕೆ ಯತ್ನಿಸುತ್ತಿದ್ದೇವೆ? ದೇಶದಲ್ಲಿ ಉದ್ದಿಮೆಗಳನ್ನು ಕಟ್ಟಿ ಬೆಳೆಸುವುದೇ ಅಪರಾಧವೆ? ಉದ್ದಿಮೆಗಳನ್ನು ಕಟ್ಟಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಬೊಕ್ಕಸಕ್ಕೂ ಹಣ ಹರಿದು ಬರುವಂತೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ತಪ್ಪೆ? ತೀವ್ರ ಪೈಪೋಟಿಯ ಈ ಕಾಲದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದು, ಅವುಗಳನ್ನು ನಡೆಸುವುದು, ವಿಸ್ತರಿಸುವುದು ಹಾಗೂ ಕಂಪನಿಯಲ್ಲಿರುವ ನೀತಿ ನಿರೂಪಕರ ತಂಡವನ್ನು ಒಗ್ಗಟ್ಟಾಗಿ ಇರಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ನಾವು
ಮರೆತು ಬಿಟ್ಟಿದ್ದೇವೆಯೇ? ಧೀರೂಭಾಯಿ ಅಂಬಾನಿಯ ಪರಂಪರೆಯನ್ನು ಮುಕೇಶ್ ಅಂಬಾನಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಅಂಬಾನಿ ಸಮೂಹವನ್ನು ಅವರು ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ದಿದ್ದಾರೆ. ಇನ್ನೊಂದೆಡೆ, ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಈ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಪ್ರತಿಷ್ಠಿತ ಬಿರ್ಲಾ ಸಮೂಹದ ಪರಂಪರೆಯನ್ನು ಯಶಸ್ವಿಯಾಗಿ
ಮುನ್ನಡೆಸುತ್ತಿದ್ದಾರೆ. ಇನ್ನಿತರ ಬಿರ್ಲಾಗಳು ಈ ಕಾರ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ಕೇಶುಬ್ ಮತ್ತು ಹರೀಶ್ ಮಹಿಂದ್ರಾ ಅವರ ಯಶೋಗಾಥೆಯನ್ನು ಆನಂದ ಮಹಿಂದ್ರಾ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಗೌತಮ್ ಅದಾನಿಯವರ ಕ್ಷಿಪ್ರ ಬೆಳವಣಿಗೆಯು ಅವರ ಪರಿಶ್ರಮ, ಬದ್ಧತೆ ಹಾಗೂ ಈ ಕಾಲದ ಉದ್ಯಮಿಗಳ ಜಾಣ್ಮೆಗೆ ಕೈಗನ್ನಡಿಯಂತಿದೆ. ನಾನು ಸಾಕಷ್ಟು ಸುದೀರ್ಘ ಕಾಲದಿಂದ ರಾಜಕೀಯವನ್ನೂ ಉದ್ಯಮ ಕ್ಷೇತ್ರವನ್ನೂ ಅವುಗಳ ಒಳಗೇ ಇದ್ದುಕೊಂಡು ನೋಡುತ್ತಾ ಬಂದಿದ್ದೇನೆ. ಲಾಗಾಯ್ತಿ ನಿಂದಲೂ ನಮ್ಮ ದೇಶವನ್ನು ಆಳಿದ ರಾಜಕಾರಣಿಗಳು ಉದ್ದಿಮೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂಬ ನಿಲುವನ್ನೇ ಹೊಂದಿದ್ದಾರೆ. ಹಿಂದೆ ನಮ್ಮ ದೇಶದ ಉದ್ಯಮ ವಲಯವನ್ನು ಜಾಗತಿಕ ವೇದಿಕೆಯಲ್ಲಿ ಶೋಕೇಸ್ ಮಾಡಬೇಕೆಂದರೆ ಟಾಟಾ ಮತ್ತು ಬಿರ್ಲಾಗಳು ಮಾತ್ರ ಕಣ್ಣಿಗೆ ಕಾಣಿಸು ತ್ತಿದ್ದರು. ಆದರೆ ಇಂದು ಭಾರತದಲ್ಲಿ ನೂರಾರು ದೊಡ್ಡ ದೊಡ್ಡ ಕಂಪನಿಗಳಿವೆ.

ಜಗತ್ತಿನೆದುರು ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ನಮ್ಮ ಔದ್ಯೋಗಿಕ ಕ್ಷೇತ್ರ ಬೆಳೆದಿದೆ. ಬಹುರಾಷ್ಟ್ರೀಯ ಕಂಪನಿಗಳ ಗಾತ್ರಕ್ಕೆ ಸರಿಸಮನಾಗಿ ನಮ್ಮ ದೇಶದ ಹಲವಾರು ಕಂಪನಿಗಳು ವ್ಯವಹಾರವನ್ನು ವಿಸ್ತರಿಸಿವೆ. ಉದ್ದಿಮೆಗಳು ಬೆಳೆಯಬೇಕೆಂದರೆ ಸರಕಾರದ ನೆರವು ಬೇಕೇಬೇಕು. ಹೀಗಾಗಿ
ಯಾವುದೇ ಉದ್ಯಮವೊಂದು ಸರಕಾರದಿಂದ ಪ್ರಯೋಜನ ಪಡೆದಿದೆ ಎಂದಾದರೆ ಅದರಲ್ಲಿ ಯಾವ ತಪ್ಪೂ ಇಲ್ಲ. ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಜಪಾನ್‌ನಿಂದ ಅಲ್ಲಿನ ಸರಕಾರದ ಮುಖ್ಯಸ್ಥರು ಅಥವಾ ಮಂತ್ರಿಗಳು ಬೇರೆ ಬೇರೆ ದೇಶಕ್ಕೆ ಭೇಟಿ ನೀಡುವಾಗ ಉದ್ಯಮಿಗಳ ನಿಯೋಗವನ್ನೂ ಕರೆದೊಯ್ಯುತ್ತಾರೆ. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಉದ್ಯಮಿಗಳನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ!

ನಾನೀಗ ಕೆಲ ದಿನಗಳಿಂದ ಅಮೆರಿಕ ಮತ್ತು ಮೆಕ್ಸಿಕೋ ಪ್ರವಾಸದಲ್ಲಿದ್ದೇನೆ. ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾ ದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿ ವಾಸ್ತವ್ಯ ಹೂಡಿದ್ದೇನೆ. ಇದು ಅಸಂಖ್ಯ ಉದ್ಯಮಿಗಳ ತವರೂರು. ಇಲ್ಲಿರುವ ಅನೇಕ ಉದ್ಯಮಿಗಳು ಎಷ್ಟೋ ದೇಶಗಳ ಜಿಡಿಪಿಗೆ ಸಮನಾದ ಸಂಪತ್ತು ಹೊಂದಿದ್ದಾರೆ. ಈ ದೇಶದಲ್ಲಿ ಉದ್ಯಮಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ಹೇಳುವುದಕ್ಕೆ ನಾನಿದನ್ನು ಪ್ರಸ್ತಾಪಿಸುತ್ತಿದ್ದೇನೆ. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಿದೆ? ಬಬ್ಬ ಉದ್ಯಮಿ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿದ್ದಂತೆ ನಾವು ಅವನನ್ನು ಅನುಮಾನದಿಂದ ನೋಡುತ್ತೇವೆ.

ಭಾರತದ ಎಷ್ಟೋ ಉದ್ಯಮಿಗಳು ಬೇರೆ ಬೇರೆ ದೇಶಗಳಿಗೆ ಹೋಗಿ ನೆಲೆಸಿರುವುದನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಇದು ಕಳವಳಕಾರಿ ಸಂಗತಿ ಯೂ ಹೌದು. ಅವರು ಭಾರತದಲ್ಲಿ ಬಿಸಿನೆಸ್ ನಡೆಸುತ್ತಾರೆ, ಆದರೆ ಭಾರತ ದಲ್ಲಿ ವಾಸಿಸಲು ಬಯಸುತ್ತಿಲ್ಲ. ಉದಾಹರಣೆಗೆ, ಹಿಂದುಜಾ, ಮಿತ್ತಲ್, ಲೋಹಿಯಾ, ಬಾಗ್ರಿ, ಅನಿಲ್ ಅಗರವಾಲ್ ಮತ್ತು ಇನ್ನೂ ಅನೇಕ ಉದ್ಯಮಿಗಳು ಈಗ ಬ್ರಿಟನ್ ಅಥವಾ ದುಬೈನಲ್ಲಿ ಇದ್ದುಕೊಂಡು ಉದ್ದಿಮೆ ನಡೆಸು ತ್ತಿದ್ದಾರೆ. ಇದಕ್ಕೆ ಕಾರಣ ಏನು? ಇದು ಹೀಗೇ ಮುಂದುವರೆಯಬೇಕೇ? ಉದ್ದಿಮೆಗಳೇ ಇಲ್ಲದಿದ್ದರೆ ಉದ್ಯೋಗಾವಕಾಶಗಳು ಹೇಗೆ ಸೃಷ್ಟಿಯಾಗುತ್ತವೆ? ಸರಕಾರಕ್ಕೆ ತೆರಿಗೆ ಆದಾಯ ಎಲ್ಲಿಂದ ಬರುತ್ತದೆ? ನಮ್ಮ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಕ್ಕೆ ಇಲ್ಲಿನ ಉದ್ದಿಮೆಗಳು ಶೇ.೨೭ರಷ್ಟು ಕೊಡುಗೆ ನೀಡುತ್ತಿವೆ ಎಂಬುದನ್ನು ನಾವು ಮರೆಯಬಾರದು.

ತೆರಿಗೆಗಳು ಸಂಗ್ರಹವಾಗದಿದ್ದರೆ ದೇಶ ಹೇಗೆ ಅಭಿವೃದ್ಧಿ ಹೊಂದುತ್ತದೆ? ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ? ಬಡತನ  ನಿರ್ಮೂಲನೆ ಯೋಜನೆಗೆ ಹಣ ಬೇಡವೇ? ಒಂದೆಡೆ, ಉದ್ದಿಮೆಗಳು ಸ್ಥಾಪನೆಯಾದರೆ ನಮ್ಮ ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಭಾಷಣ ಮಾಡುವುದು, ಇನ್ನೊಂದೆಡೆ ಉದ್ಯಮಪತಿಗಳನ್ನು ವ್ಯಂಗ್ಯವಾಡುವುದು, ಈ ವೈರುಧ್ಯ ಏಕೆ? ಉದ್ದಿಮೆಗಳು ಬೆಳೆಯಬೇಕೆಂದರೆ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು. ಅದರ ಬದಲು ಅವರನ್ನು ಮೂಲೆಗುಂಪಾಗಿಸಿ, ಅವರ ಆತ್ಮಸ್ಥೈರ್ಯ ಕುಂದುವಂತೆ ಮಾತನಾಡುತ್ತಿದ್ದರೆ ಉದ್ಯಮಿಗಳು ದೇಶ ಬಿಟ್ಟು ಹೋಗುವುದನ್ನು ತಡೆಯಲು ಸಾಧ್ಯವೇ? ಉದ್ದಿಮೆಗಳು ಬೆಳೆದರೆ ದೇಶ ಬೆಳೆಯುತ್ತದೆ. ಅವುಗಳನ್ನು ಸರಕಾರ ಚೆನ್ನಾಗಿ ನೋಡಿಕೊಳ್ಳಬೇಕು.

(ಲೇಖಕರು : ಹಿರಿಯ ಪತ್ರಕರ್ತರು, ರಾಜ್ಯಸಭಾ ಮಾಜಿ 
ಸದಸ್ಯರು)