ವಿದೇಶವಾಸಿ
dhyapaa@gmail.com
ಆಗಿನ್ನೂ ನಾನು ಕೆಲಸಕ್ಕೆ ಸೇರಿ ಒಂದು ವರ್ಷ ಆಗಿತ್ತಷ್ಟೇ. ನಾನು ಕೆಲಸ ಮಾಡುತ್ತಿದ್ದ ‘ಗ್ಯಾನನ್ ಡಂಕರ್ಲಿ’ ಹೆಸರಿನ ಜರ್ಮನ್ ಕಂಪನಿಯವರು ‘ರಿಲಾಯನ್ಸ್ ಇಂಡಸ್ಟ್ರೀಸ್’ಗಾಗಿ ಕಟ್ಟಡ ಮತ್ತು ಇತರ ಸಿವಿಲ್ ಗುತ್ತಿಗೆಯ ಕೆಲಸಗಳನ್ನು ಮಾಡುತ್ತಿದ್ದರು. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪಾತಾಳಗಂಗಾ ಎಂಬ ನದಿಯ ತೀರದಲ್ಲಿ ಈ ನಿರ್ಮಾಣದ ಕೆಲಸ ನಡೆಯುತ್ತಿತ್ತು. ರಿಲಾಯನ್ಸ್, ಅಗರ್ವಾಲ್ಸನಂಥ ದೊಡ್ಡ ದೊಡ್ಡ ಸಂಸ್ಥೆಗಳಿದ್ದರೂ, ಪಾತಾಳಗಂಗಾ ಆಗ ಒಂದು ಕುಗ್ರಾಮವಾಗಿತ್ತು.
ಉಳಿದುಕೊಳ್ಳಲು ಬಾಡಿಗೆಯ ಮನೆ ಕೂಡ ಸಿಗುತ್ತಿರಲಿಲ್ಲ. ನಾವು ಕೆಲಸ ಮಾಡುವ ಸ್ಥಳದಿಂದ ಸುಮಾರು ೮-೧೦ ಕಿಲೋಮೀಟರ್ ದೂರದಲ್ಲಿ ನಾವು ಉಳಿದುಕೊಳ್ಳುತ್ತಿದ್ದೆವು. ರಿಲಾಯನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ಕೂಡ ಅಷ್ಟು ದೂರದಿಂದಲೇ ಬರುತ್ತಿದ್ದರು. ಅವು ೧೯೯೧ರ ಆರಂಭದ ದಿನಗಳು. ಆಗ ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ಧೀರೂಭಾಯಿ ಅಂಬಾನಿಯವರ ಎರಡನೆಯ ಮಗ ಅನಿಲ್ ಅಂಬಾನಿ ಮತ್ತು ಚಿತ್ರನಟಿ ಟೀನಾ ಮುನಿಮ್ ಅವರ ವಿವಾಹ ನಿಕ್ಕಿಯಾಗಿತ್ತು. ೧೯೮೦ರ ದಶಕದ ಆರಂಭದ ೫-೬ ವರ್ಷ ಟೀನಾ ಮುನಿಮ್ ಹೆಸರು ಅಂದಿನ ಖ್ಯಾತ ಚಿತ್ರನಟ ರಾಜೇಶ್ ಖನ್ನಾ ಜತೆಗೆ ಕೇಳಿಬರುತ್ತಿತ್ತು.
ಇದ್ದಕ್ಕಿದ್ದಂತೆ ಅನಿಲ್ ಅಂಬಾನಿಯ ಜತೆ ಆ ಹೆಸರು ಕೇಳಿಬಂದಿದ್ದು ಆ ಕಾಲದಲ್ಲಿ ಬಹುತೇಕ ಎಲ್ಲರಿಗೂ ಆಶ್ಚರ್ಯವಾಗಿತ್ತು. ಮಗನ ಮದುವೆಗೆ
ಕರೆಯಲು ಧೀರೂಭಾಯಿ ಅಂಬಾನಿಯವರು ಪಾತಾಳಗಂಗಾದಲ್ಲಿರುವ ರಿಲಾಯನ್ಸ್ ಇಂಡಸ್ಟ್ರೀಸ್‌ನ ಕಾರ್ಖಾನೆಗೆ ಬಂದಿದ್ದರು. ಆಗ ಅವರು ಪಾರ್ಶ್ವ ವಾಯು ಪೀಡಿತರಾಗಿದ್ದರು. ಆದರೂ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಎದುರಿಗೆ ನಿಂತು, ತಮ್ಮ ಒಂದು ಕೈಯಿಂದ ಪಾರ್ಶ್ವ ವಾಯು ಪೀಡಿತವಾಗಿರುವ ಇನ್ನೊಂದು ಕೈಯನ್ನು ಎತ್ತಿ, ನಮಸ್ಕರಿಸಿ, ತಮ್ಮ ಮಗನ ಮದುವೆಗೆ ಬರಬೇಕು ಎಂದು ಆಮಂತ್ರಣ ನೀಡಿದ್ದರು. ಆ ದೃಶ್ಯ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದಾಗಿ ಒಂದು ತಿಂಗಳಲ್ಲಿಯೇ ಅನಿಲ್ ಅಂಬಾನಿ ಮತ್ತು ಟೀನಾ ಅವರ ಮದುವೆಯೂ ಆಯಿತು. ಆ ಮದುವೆಯ ನಂತರ ಸಿಹಿ ತಿಂಡಿ ಮತ್ತು ಖಾರದ ತಿನಿಸುಗಳನ್ನು ಒಂದು ಸಣ್ಣ ಟ್ರಕ್‌ನಲ್ಲಿ ಕಾರ್ಮಿಕರು ಮತ್ತು ಇತರ ಕೆಲಸಗಾರರಿಗಾಗಿ ಅಂಬಾನಿ ಕಳುಹಿಸಿಕೊಟ್ಟಿದ್ದರು.
ನನಗೆ ನೆನಪಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಎರಡು ದಿನ ಮನೆಯಲ್ಲಿ ಒಲೆಯನ್ನೇ ಹೊತ್ತಿಸಿರಲಿಲ್ಲ. ಧೀರೂಭಾಯಿ ಅಂಬಾನಿ
ಮನೆಯವರು ಕಳಿಸಿಕೊಟ್ಟ ತಿನಿಸುಗಳು ಅಷ್ಟಿದ್ದವು. ಪಾತಾಳಗಂಗಾ ಗ್ರಾಮದ ಕುರಿತು ಹೇಳಿದೆನಲ್ಲ, ಅಲ್ಲಿ ರಿಲಾಯನ್ಸ್ ಕಾರ್ಖಾನೆಗೆ ಹೊಂದಿಕೊಂಡು
ಒಂದು ಪುಟ್ಟ ದೇವಾಲಯವಿದೆ. ಅನಿಲ-ಟೀನಾ ದಂಪತಿ ಮದುವೆಯ ನಂತರ ದೇವರ ಆಶೀರ್ವಾದ ಪಡೆಯಲು ಆ ದೇವಸ್ಥಾನಕ್ಕೆ ಬರಬೇಕಾಗಿತ್ತು.
ಅದಕ್ಕಾಗಿ ಅಂದಿನ ಕಾಲದಲ್ಲಿ ಒಂದೂವರೆ ಲಕ್ಷ ರುಪಾಯಿ ಖರ್ಚು ಮಾಡಿದ್ದರು. ಅಲ್ಲಿ ಅವರು ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ನಿಲ್ಲಲಿಲ್ಲ
ಎನ್ನುವುದು ಬೇರೆ ವಿಚಾರ ಬಿಡಿ. ಆದರೆ, ಬಹುಶಃ ಕಟ್ಟಿದ ನಂತರ ದೇವಸ್ಥಾನಕ್ಕೆಂದು ಅಷ್ಟು ಹಣ ಖರ್ಚಾದದ್ದು ಅದೇ ಮೊದಲ ಬಾರಿ.
ಅದಾಗಿ ಇಂದಿಗೆ ಸುಮಾರು ಮೂರು ದಶಕಗಳೇ ಕಳೆದವು. ಇತ್ತೀಚಿಗಷ್ಟೇ ಧೀರೂಭಾಯಿ ಅಂಬಾನಿಯ ಹಿರಿಯ ಪುತ್ರ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ಮದುವೆ ಆಯಿತು. ಈ ಮದುವೆಯ ವಿಷಯ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶಗಳಲ್ಲೂ ಸದ್ದು ಮಾಡಿತು. ಕಾರಣ ಇಷ್ಟೇ, ಭಾರತದಲ್ಲಿ ಇದುವರೆಗೆ ಇಂಥ ಅದ್ದೂರಿಯ ಮದುವೆ ಈ ಮೊದಲು ಆಗಿರಲಿಲ್ಲ. ಎಷ್ಟು ಸತ್ಯ, ಎಷ್ಟು ಸುಳ್ಳು ಗೊತ್ತಿಲ್ಲ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ತಗುಲಿದ ವೆಚ್ಚ ಸುಮಾರು ೧,೨೦೦ ಕೋಟಿ ರುಪಾಯಿ.
ಇರಲೂಬಹುದು, ಇಲ್ಲದೆಯೂ ಇರಬಹುದು, ಅದಕ್ಕಿಂತ ಹೆಚ್ಚೂ ಆಗಿರಬಹುದು. ಏಕೆಂದರೆ ಈ ವಿಷಯದಲ್ಲಿ ಯಾರೂ ನಿಖರವಾದ ಲೆಕ್ಕವನ್ನು ಕೊಡುವುದಿಲ್ಲ. ಅಲ್ಲದೆ, ಭಾರತ ಮಾತ್ರವಲ್ಲ, ಏಷ್ಯಾದ ಅತಿ ಶ್ರೀಮಂತರ ಮಗನ ಮದುವೆ. ಎಲ್ಲಕ್ಕಿಂತಲೂ, ಅಂಬಾನಿ ಮನೆಯವರ ಕಾರ್ಯಕ್ರಮ. ಅಂಬಾನಿ ಮನೆಯ ಕಾರ್ಯಕ್ರಮಗಳು ಹೇಗಿರುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕೆಂದಿಲ್ಲ ಅಲ್ಲವೇ? ಭಾರತದಲ್ಲಿ ನಡೆದ ಅದ್ದೂರಿ ಮದುವೆಗಳ
ಪಟ್ಟಿಯನ್ನು ತೆಗೆದರೆ ಮೊದಲ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳು ಮುಖೇಶ್ ಅಂಬಾನಿಯ ಮಕ್ಕಳ ಮದುವೆ ಸೇರಿರುತ್ತದೆ.
ಅನಂತ್ ಅಂಬಾನಿಯ ಮದುವೆಗಿಂತ ಮೊದಲು ಭಾರತದಲ್ಲಿ ನಡೆದ ಅದ್ದೂರಿ ಮದುವೆಗಳ ಪಟ್ಟಿಯನ್ನು ಒಮ್ಮೆ ನೋಡಿದರೆ, ಮುಖೇಶ್ ಅಂಬಾನಿಯ ಮಗಳು ಇಶಾ ಅಂಬಾನಿ ಮತ್ತು ಆನಂದ್ ಪರಿಮಲ್ ಅವರ ಮದುವೆಗೆ ಏಳು ನೂರು ಕೋಟಿ ರುಪಾಯಿ ಖರ್ಚಾಗಿತ್ತಂತೆ. ಸಹಾರ ಗ್ರೂಪ್‌ನ ಸುಬ್ರತೊ
ರಾಯ್ ಅವರ ಮಕ್ಕಳಾದ ಸುಶಾಂತ್ ಮತ್ತು ಸೀಮಂತೋ ರಾಯ್ ಅವರ ಮದುವೆಗೆ ೫೫೦ ಕೋಟಿ ರುಪಾಯಿ ಖರ್ಚಾಗಿತ್ತಂತೆ. ಕರ್ನಾಟಕದ ಗಣಿಧಣಿ ಎಂದು ಕರೆಸಿಕೊಂಡಿದ್ದ ಗಾಲಿ ಜನಾರ್ದನ್ ರೆಡ್ಡಿ ತಮ್ಮ ಮಗಳ ಮದುವೆಗೆ ೫೦೦ ಕೋಟಿ ರುಪಾಯಿ ಖರ್ಚು ಮಾಡಿದ್ದರಂತೆ. ಖ್ಯಾತ ಉದ್ಯಮಿ ಪ್ರಮೋದ್ ಮಿತ್ತಲ್ ಕೂಡ ತಮ್ಮ ಮಗಳಾದ ಸೃಷ್ಟಿ ಮಿತ್ತಲ್ ಮದುವೆಗೆ ಅಷ್ಟೇ ಹಣ ಖರ್ಚು ಮಾಡಿದ್ದಾರಂತೆ ಎಂಬ ವರದಿ ಇದೆ. ಈ ನಡುವೆ ಮುಖೇಶ್ ಅಂಬಾನಿಯ ಹಿರಿಯ ಮಗ ಆಕಾಶ್ ಮತ್ತು ಶ್ಲೋಕಾ ಮೆಹತಾ ಅವರ ಮದುವೆಗೆ ಕೂಡ ಅಷ್ಟೇ ಖರ್ಚಾಯಿತು ಎಂಬ ಸುದ್ದಿ ಇದ್ದರೂ, ನಿಜವಾಗಿ ಎಷ್ಟು ಖರ್ಚಾಯಿತು ಎಂಬ ನಿಖರವಾದ ಮಾಹಿತಿ ಯಾರಿಗೂ ತಿಳಿದಿಲ್ಲ.
ಅನಂತ್ ಅಂಬಾನಿಯ ವಿಷಯಕ್ಕೆ ಬಂದರೆ, ಮದುವೆ ಅಷ್ಟೇ ಅಲ್ಲ ಜಾಮ್‌ನಗರದಲ್ಲಿ ನಡೆದ ವಿವಾಹಪೂರ್ವ ಸಮಾರಂಭ (ಪ್ರಿ-ವೆಡ್ಡಿಂಗ್) ಕೂಡ ಅಷ್ಟೇ ಅದ್ದೂರಿಯಾಗಿತ್ತು. ಭಾರತ ಭಾರಿ ವಿಚಿತ್ರ ದೇಶ. ಇಲ್ಲಿ ಶ್ರೀಮಂತರ ಮಕ್ಕಳ ಅದ್ದೂರಿ ಮದುವೆಯೂ ಸದ್ದುಮಾಡುತ್ತದೆ, ಹೆಸರಾಂತ ವ್ಯಕ್ತಿಗಳ ಸರಳ ಮದುವೆಯೂ ಸುದ್ದಿಯಾಗುತ್ತದೆ. ಈ ವಿಷಯದಲ್ಲಿ ಜನರ ಮನಃಸ್ಥಿತಿ ಅರ್ಥವೇ ಆಗುವುದಿಲ್ಲ.
ಅನಂತ್ ಅಂಬಾನಿಯ ಮದುವೆಯ ಸಂದರ್ಭದಲ್ಲಿ ನಾನು ಗುಜರಾತ್‌ನಲ್ಲಿದ್ದೆ. ಗುಜರಾತ್ ನಿವಾಸಿಯೇ ಆದ ನನ್ನ ಕಾರಿನ ಚಾಲಕನೊಂದಿಗೆ
ಮಾತನಾಡುತ್ತಿದ್ದೆ. ಆತ ಜಾಮ್‌ನಗರದದ ಅನಂತ್ ಅಂಬಾನಿಯ ಮದುವೆಯ ಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದನಂತೆ. ಆತ ಅಹಮದಾ ಬಾದ್‌ನಲ್ಲಿ ನೆಲೆಸಿದರೂ ಮೂಲತಃ ಜಾಮ್‌ನಗರದವನೇ ಆಗಿದ್ದರಿಂದ, ಆತನಲ್ಲಿ ಅಂಬಾನಿ ಪರಿವಾರದವರ ಕುರಿತು ಸಾಕಷ್ಟು ವಿಷಯಗಳಿದ್ದವು. ಆತನ ಪ್ರಕಾರ, ಅನಂತ್ ಅಂಬಾನಿ ಮದುವೆಯ ಪೂರ್ವ ಸಮಾರಂಭದ ಮೂರು ದಿನಗಳವರೆಗೆ ಜಾಮ್‌ನಗರ, ಗಾಂಧಿನಗರ ಮತ್ತು ಅಹಮದಾಬಾದ್ ನಲ್ಲಿ ಬಾಡಿಗೆಗೆ ಕಾರುಗಳು ಸಿಗುತ್ತಿರಲಿಲ್ಲವಂತೆ.
ಇದ್ದ ಬಿದ್ದ ಎಲ್ಲ ಐಷಾರಾಮಿ ಅಥವಾ ದೊಡ್ಡ ವಾಹನಗಳು ಮತ್ತು ಒಳ್ಳೆಯ ಹೋಟೆಲ್‌ಗಳು ಅಂಬಾನಿ ಮನೆಯ ಸಮಾರಂಭಕ್ಕೆ ನಿಗದಿಯಾಗಿದ್ದ ವಂತೆ. ದೇಶ ವಿದೇಶಗಳಿಂದ ಬರುವ ಸಾವಿರಾರು ಗಣ್ಯ ಅತಿಥಿಗಳಿಗಾಗಿ ಅವರ ಸೇವೆಗಾಗಿ ಇವುಗಳನ್ನು ಮೀಸಲಿಡಲಾಗಿತ್ತಂತೆ. ನಮಗೆ ಗೊತ್ತಿದ್ದ ವಿಷಯವೇ, ಮದುವೆಯ ದಿನವೂ, ಮದುವೆಯ ನಂತರದ ಒಂದು ವಾರವೂ ದೇಶದ ತುಂಬೆಲ್ಲ ಅನಂತ್ ಅಂಬಾನಿಯ ಮದುವೆಯ ವಿಷಯವೇ ಚರ್ಚೆಯಲ್ಲಿತ್ತು.
ಉಳಿದ ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲ ವಿಷಯಗಳೂ ನಗಣ್ಯವಾಗಿದ್ದವು. ಆಯಾ ಕ್ಷೇತ್ರದ ಎಲ್ಲ ಗಣ್ಯರೂ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು
ಎನ್ನುವುದೂ ಸತ್ಯ. ಅನಂತ್ ಅಂಬಾನಿಯ ಮದುವೆಯಾಗಿ ಒಂದು ವಾರದವರೆಗೂ ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬೇರೆ ಯಾವ ಸುದ್ದಿಯೂ ಓಡಲೇ ಇಲ್ಲ. ಅಂಬಾನಿ ಮನೆಯ ಮದುವೆಗೆ ಬಂದ ಖ್ಯಾತ ಗಾಯಕ ಜಸ್ಟಿನ್ ಬೇಬರ್‌ನ ಬನಿಯನ್, ಒಳಉಡುಪು, ಪೈಜಾಮದ ಬೆಲೆ ಚರ್ಚೆಯಲ್ಲಿತ್ತು.
ಕೆಲವೇ ಸಾವಿರ ಮೌಲ್ಯದ ಬಟ್ಟೆ ತೊಟ್ಟಿದ್ದ ಬೇಬರ್, ತಾನು ನೀಡಿದ ಪ್ರದರ್ಶನಕ್ಕೆ ೮೩ ಕೋಟಿ ರುಪಾಯಿ ಪಡೆದನಂತೆ, ಮದುವೆಗೆ ಬಂದ ಗಣ್ಯ ಅತಿಥಿಗಳಿಗೆ ೨ ಕೋಟಿ ರುಪಾಯಿ ಮೌಲ್ಯದ ವಾಚುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತಂತೆ ಎನ್ನುವ ವಿಷಯ ಮಹತ್ವ ಪಡೆದುಕೊಂಡಿತ್ತು. ಅನಂತ್ ತೊಟ್ಟ ಅಂಗಿಗೆ ಎಷ್ಟು ಬೆಲೆ, ರಾಧಿಕಾ ತೊಟ್ಟ ಲಂಗಕ್ಕೆ ಏನು ದರ, ಮದುವೆಗೆ ಯಾರೆಲ್ಲ ಬಂದಿದ್ದರು ಎನ್ನುವುದರ ಜತೆಗೆ ಯಾರೆಲ್ಲ ಬರಲಿಲ್ಲ ಎನ್ನುವ ವಿಷಯವೂ ಚರ್ಚೆಯಾಗಿತ್ತು.
ಇದೆಲ್ಲ ಒಂದು ಕಡೆಯಾದರೆ, ಒಂದು ಮದುವೆಗೆ ಇಷ್ಟು ಖರ್ಚು ಮಾಡಬೇಕಿತ್ತೇ? ಬದಲಾಗಿ ಅದೇ ಹಣವನ್ನು ಬೇರೆ ಎದರೂ ವಿನಿಯೋಗಿಸಬಹುದಿತ್ತು, ಬಡವರಿಗೆ ಸಹಾಯ ಮಾಡಬಹುದಿತ್ತು ಇತ್ಯಾದಿ ಮಾತುಗಳೂ ಕೇಳಿಬಂದವು. ಅಂಬಾನಿ ಇಷ್ಟು ಶ್ರೀಮಂತ ಹೌದು, ಆದರೆ ತಾನು ಹುಟ್ಟಿದ ಊರಿಗೆ ಏನನ್ನೂ ಮಾಡಲಿಲ್ಲ. ಶಾಲೆ, ಆಸ್ಪತ್ರೆ ಕಟ್ಟಿಸಲಿಲ್ಲ, ರಸ್ತೆ ಮಾಡಿಸಲಿಲ್ಲ. ಅದೇ ಅದಾನಿಯಾದರೆ ತನ್ನ ಊರಿನ ಜನರಿಗಾಗಿ ಶಾಲೆ-ಕಾಲೇಜು, ಆಸ್ಪತ್ರೆ ಕಟ್ಟಿಸಿದ್ದಾನೆ. ತನ್ನ ಊರಿನವರಿಗೆ ಅಲ್ಲಿ ಉಚಿತವಾಗಿ ಶಿಕ್ಷಣ, ಅರೋಗ್ಯ ನೀಡುತ್ತಿದ್ದಾನೆ ಎಂದು ಗುಜರಾತಿನ ಕಾರು ಚಾಲಕನೇ ಹೇಳಿದ್ದ.
ಒಬ್ಬರು ಮನೆಯಲ್ಲಿ ಮಾಡುವ ಮದುವೆಗೂ, ಅವರ ಊರಿನಲ್ಲಿ ಆಗುವ ಅಭಿವೃದ್ಧಿಗೂ ಏನು ಸಂಬಂಧ ಎಂದು ನನಗಂತೂ ಅರ್ಥವಾಗುವುದಿಲ್ಲ.
ಮದುವೆ ಎನ್ನುವುದು ಒಂದು ಮನೆಯ ಕೌಟುಂಬಿಕ ಕಾರ್ಯಕ್ರಮ. ಅದಕ್ಕೂ ಸಮಾಜಸೇವೆಗೂ ತಾಳೆ ಹಾಕಿ ನೋಡಬಾರದು ಅಲ್ಲವೇ? ಅಂಬಾನಿಯ ಮನೆಯ ಮದುವೆಯ ಬಗ್ಗೆ ಮಾತನಾಡುವವರು ಒಮ್ಮೆ ತಮ್ಮ ಮನೆಯ ಮದುವೆಯ ಬಗ್ಗೆ ಯೋಚಿಸಬೇಕು. ಮುಖೇಶ್ ಅಂಬಾನಿ ಒಟ್ಟು ಆದಾಯ ೧೨೦ ಬಿಲಿಯನ್ ಡಾಲರ್, ಒಂದು ದಿನದ ಆದಾಯ ೧೬೫ ಕೋಟಿ. ಅದರಲ್ಲಿ ಅಂಬಾನಿ ಖರ್ಚು ಮಾಡಿದ್ದು ೧,೨೦೦ ಕೋಟಿ ಎಂದೇ ಇಟ್ಟುಕೊಳ್ಳಿ, ಹೆಚ್ಚಾಯಿತೇ? ನಮ್ಮಲ್ಲಿ ಜೀವನಪೂರ್ತಿ ಕೂಡಿಟ್ಟ ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಉದಾಹರಣೆಗಳಿಲ್ಲವೇ? ಅಥವಾ ಮಕ್ಕಳ ಮದುವೆಗೆ ಎಂದೇ ಜೀವನಪೂರ್ತಿ ದುಡಿದ ಉದಾಹರಣೆಗಳಿಲ್ಲವೇ? ಕೆಲವೇ ಸಾವಿರ ರುಪಾಯಿ ಸಂಬಳ ಪಡೆಯುವವರು ಕೂಡ ಸಾಲ ಮಾಡಿಯಾದರೂ ಲಕ್ಷ ಗಟ್ಟಲೆ ಖರ್ಚು ಮಾಡಿ ಮದುವೆ ಮಾಡುವುದಿಲ್ಲವೇ? ಒಂದು ಮದುವೆಗೆ ಇಷ್ಟೇ ಖರ್ಚು ಮಾಡಬೇಕು ಎಂದು ಯಾರೂ ಷರಾ ಬರೆದಿಲ್ಲವಲ್ಲ? ಒಂದು ಮಿತಿಯ ನಂತರ ಅದು ಹೆಚ್ಚು ಅಥವಾ ಇಷ್ಟು ಕಡಿಮೆ ಖರ್ಚಿನಲ್ಲಿ ಮದುವೆಯಾಗಬಾರದು ಎಂದು ನಿರ್ಣಯಿಸಲು ಬೇರೆಯವರು ಯಾರು? ಅದು
ಅವರವರ ಇಷ್ಟಕ್ಕೆ ಸಂಬಂಧಪಟ್ಟದ್ದು. ದುಡ್ಡಿದ್ದವರೆಲ್ಲರೂ ಐಷಾರಾಮಿ ಮಾರ್ಗದಲ್ಲಿಯೇ ಮದುವೆ ಮಾಡಬೇಕೆಂದೇನೂ ಇಲ್ಲ. ಮಾಡಿದರೆ
ತಪ್ಪೇನೂ ಇಲ್ಲವಲ್ಲ.
ಇನ್ನೊಂದು ದೃಷ್ಟಿಯಲ್ಲಿ ವಿಚಾರ ಮಾಡಿ ನೋಡಿದರೆ, ಐಷಾರಾಮಿ ಮದುವೆಯಲ್ಲಿ ದುಡ್ಡು ಖರ್ಚಾಗುವುದು ಎಲ್ಲಿ? ಆ ಖರ್ಚಾದ ಹಣ ಯಾವುದೋ ಒಂದು ಕಡೆ ಸೇರಲೇಬೇಕು ಅಲ್ಲವೇ? ಒಂದು ಮದುವೆಯಿಂದ ಎಷ್ಟೋ ಜನರಿಗೆ ಉದ್ಯೋಗ ದೊರಕುತ್ತದೆ. ಹೂವು ಮಾರುವವರಿಂದ ಹಿಡಿದು ಕಿರಾಣಿ ಸಾಮಾನು ಮಾರುವವರವರೆಗೆ, ರೈತನಿಂದ ಹಿಡಿದು ಆ ಸಮಾರಂಭವನ್ನು ಶಿಸ್ತುಬದ್ಧವಾಗಿ ನಡೆಸಿಕೊಡುವ ಕಂಪನಿಯವರೆಗೆ ಸಾಕಷ್ಟು ಜನ ಇದರಿಂದ ಲಾಭ ಪಡೆಯುತ್ತಾರೆ. ಮಂಟಪ ತಯಾರಿಸುವವವನಿಂದ ಹಿಡಿದು ದರ್ಜಿಯವರೆಗೆ, ವಾದ್ಯದವರಿಂದ ಹಿಡಿದು ಷಾಮಿಯಾನ ಹಾಕುವವರವರೆಗೆ ಮದುವೆಯಲ್ಲಿ ಶಾಮೀಲಾಗುತ್ತಾರೆ. ಆದ್ದರಿಂದ ಮದುವೆಯಲ್ಲಿ ಹಣ ಪೋಲಾಯಿತು ಎನ್ನುವ ತರ್ಕ ಸಮಂಜಸ ಅನಿಸುವುದಿಲ್ಲ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದಂತೆ ಎಂಬ ಮಾತಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ನಂಬಿದರೆ, ಮದುವೆಯ ಖರ್ಚು ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ ಎಂದು ನಂಬಬೇಕು. ಅವರವರ ಭಾವಕ್ಕೆ, ಅವರವರ ಸತ್ತ್ವಕ್ಕೆ ಅನುಗುಣವಾಗಿ ಮದುವೆಗಳು ನಡೆಯುತ್ತವೆ.
ಮುಂದೆ ಸಂಸಾರ ನಡೆಯುವುದು ಕೂಡ ಅವರವರ ಭಾವಕ್ಕೆ, ಅವರವರ ಸತ್ತ್ವಕ್ಕೆ ತಕ್ಕಂತೆಯೇ! ಹೆಚ್ಚು ಖರ್ಚು ಮಾಡಿದ ಲೆಕ್ಕಕ್ಕೆ ಸಂಸಾರ ಸುಖವಾಗಿ
ನಡೆಯಬೇಕೆಂದೇನೂ ಇಲ್ಲ, ಖರ್ಚಿಲ್ಲದೇ ಮದುವೆಯಾದವರ ಸಂಸಾರ ಮೂರೇ ದಿನಕ್ಕೆ ಮುಳುಗಿ ಹೋಗಬೇಕೆಂದೂ ಇಲ್ಲ!
ಅಷ್ಟಕ್ಕೂ ಮದುವೆ ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ನಡೆಯುವ ಕಾರ್ಯಕ್ರಮವಲ್ಲ, ಜೀವನದಲ್ಲಿ ಒಂದು ಬಾರಿ ನಡೆಯುವಂಥದ್ದು.
ಮದುವೆಯಾಗುವಾಗ ಯಾರೂ ತಾನು ಎರಡನೇ ಮದುವೆ ಆಗುತ್ತೇನೆ ಎಂಬ ಕನಸನ್ನು ಕಾಣುತ್ತಿರುವುದಿಲ್ಲ. ಆ ಕಲ್ಪನೆಯೂ ಅವರಲ್ಲಿ ಇರುವುದಿಲ್ಲ.
ಹಾಗಿರುವಾಗ ಜೀವನದಲ್ಲಿ ಒಮ್ಮೆ ನಡೆಯಬೇಕಾದ ಮಹತ್ತರವಾದ ಘಟನೆ ಹೇಗೆ ನಡೆಯಬೇಕು, ಎಷ್ಟು ಖರ್ಚು ಮಾಡಬೇಕು ಎನ್ನುವುದು ಅವರವರ
ವೈಯಕ್ತಿಕಕ್ಕೆ ಬಿಟ್ಟ ವಿಷಯ. ಇಲ್ಲಿ ಅಂಬಾನಿ ಮನೆಯ ಮದುವೆ ಒಂದು ಉದಾಹರಣೆ ಅಷ್ಟೇ.