Saturday, 14th December 2024

ಮನುಕುಲದ ಮಹಾಬೆಳಕು ಆ ಮಂಗಳವಾರ ಹೇಳಿದ್ದು…

Dr B R Ambedkar

ತನ್ನಿಮಿತ್ತ

ಸಂತೋಷ ಆನಂದ್ನಳ್ಳಿ

ಅಂಬೇಡ್ಕರ್ ಪರಿನಿಬ್ಬಾಣ ದಿನ ನಾಳೆ(ಡಿ.6). ಅವರ ಕೊನೆ ಸಂದೇಶ ಹೇಗಿತ್ತೆಂದರೆ, ತಂದೆಯೊಬ್ಬ ಮಗನಿಗೆ ಆರ್ದ್ರ ಭಾವನೆ ಯಿಂದ, ತಾನು ಕಷ್ಟಪಟ್ಟು ಗಳಿಸಿದ್ದನ್ನು ಉಳಿಸಿಕೊಂಡು ಹೋಗುವುದು ನಿನ್ನ ಹೊಣೆ ಎಂದಂತಿದೆ. ಇದು ದಲಿತರಿಗೆ ಮಾತ್ರ ವಲ್ಲ ಇಡೀ ಜಗದ ಶೋಷಿತರ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತಿದೆ.

ಆಧುನಿಕ ಭಾರತದ ಚರಿತ್ರೆ ಅಂಬೇಡ್ಕರ್ ಅವರನ್ನು ಬಹಳಕಾಲ ಮರೆಸುವುದಕ್ಕೆ ಪ್ರಯತ್ನ ಪಟ್ಟಿತ್ತು. ಇದು ಇಂದಿಗೂ ಮುಂದು ವರಿದಿದೆ. ಆದಾಗ್ಯೂ ಇವತ್ತು ಭಾರತದ ಮೂಲೆ ಮೂಲೆಗೂ ತಲುಪಿರುವ ಏಕೈಕ ನಾಯಕರೆಂದರೆ ಅದು ನಮ್ಮ ಅಂಬೇಡ್ಕರ್. ಮೇಲ್ನೋಟಕ್ಕೆ ದಲಿತರ ಐಕಾನ್ ಎಂಬಂತೆ ಅವರನ್ನು ಬಿಂಬಿಸಿದ್ದರೂ ಅವರಿಗಿರುವ ರಾಜಕೀಯ ಮಹತ್ವದಿಂದ ಅವರು ಸರ್ವ ಮಾನ್ಯ.

ತೀವ್ರ ಎಡಪಂಥೀಯರಿಂದ ಹಿಡಿದು ತೀವ್ರ ಬಲಪಂಥೀಯರೂ, ಎಲ್ಲ ರಾಜಕೀಯ ಪಕ್ಷಗಳೂ ಬಾಬಾಸಾಹೇಬರನ್ನು ತಮಗೆ ಬೇಕಾದಷ್ಟು ಬಳಸಿಕೊಳ್ಳುತ್ತಿವೆ. ದಲಿತ ಮತ್ತು ಕಾರ್ಮಿಕರನ್ನು ‘ಕಾಯಂ ವೋಟ್ ಬ್ಯಾಂಕ್’ ಮಾಡಿಕೊಳ್ಳಲು ಹಾಗೂ ಇನ್ನು ಕೆಲವರು ತಮಗೆ ಇಷ್ಟವಿಲ್ಲದಿದ್ದರೂ ದಲಿತರ ಓಲೈಕೆಗಾಗಿ ಅನಿವಾರ್ಯವಾಗಿ, ರಾಜಕೀಯ ತುರ್ತಿನ ವಿಷಯವಾಗಿ ಅವರನ್ನು ಪರಿಗಣಿಸಿದ್ದಾರೆ. ಈ ರಾಜಕೀಯ ಹಾವು-ಏಣಿ ಆಟದ ಲೆಕ್ಕಚಾರದ ಆಚೆಗೂ ಅಂಬೇಡ್ಕರ್ ಬೃಹತ್ ಪ್ರಮಾಣದಲ್ಲಿ ಆವರಿಸಿಕೊಂಡಿದ್ದಾರೆ. ಭಾರತವಲ್ಲದೆ ವಿಶ್ವದ ಹಲವು ವಿಶ್ವವಿದ್ಯಾಲಯಗಳು, ವಿದ್ವಾಂಸರು ಅಂಬೇಡ್ಕರರನ್ನು ಗಂಭೀರವಾಗಿ ಅಧ್ಯಯನ ಮಾಡಲು ತೊಡಗಿರುವುದು ಹಾಗೂ ಇತ್ತೀಚೆಗೆ ಬೆಂಗಳೂರಿ ನಲ್ಲಿ ಅಂಬೇಡ್ಕರ್ ಹೆಸರಿನ ವಿಶ್ವವಿದ್ಯಾಲಯವೊಂದು ತಲೆ ಎತ್ತುತ್ತಿರುವುದು ಸಂತಸದ ವಿಷಯ.

ಅದೆಲ್ಲ ಅಂಬೇಡ್ಕರ್ ಅವರನ್ನು ತಂತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಹೊರಗಿನವರ ಮಾತು. ಆದರೆ, ಅಂಬೇಡ್ಕರ್ ಅವರನ್ನು ಒಬ್ಬ ‘ಸಾಂಸ್ಕೃತಿಕ ನಾಯಕನ ನ್ನಾಗಿ’ ಸ್ವತಃ ದಲಿತ ಸಮುದಾಯ ಹೇಗೆ ಸ್ವೀಕರಿಸಿದೆ ಎನ್ನುವುದನ್ನು ಗಮನಿಸುವು ದಾದರೆ ಅಮರಿಮಿತ ಗೌರವವೇನೋ ಇದ್ದರೂ ಅವರನ್ನು ದಲಿತ ಸಮುದಾಯ ಪರಿಭಾವಿಸಿಕೊಂಡಿರುವ ರೀತಿಯಲ್ಲಿ ಹಲವು ಭಿನ್ನತೆಗಳಿವೆ.

ರಾಜಕೀಯ ವಿಜ್ಞಾನಿ ಪ್ರೊಫೆಸರ್ ಗೋಪಾಲ ಗುರು ಅವರು, ದಲಿತ ಸಮುದಾಯ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಮೂರು ವಿಧಗಳಲ್ಲಿ ಸ್ವೀಕರಿಸಿರುವುದನ್ನು ಗುರುತಿಸುತ್ತಾರೆ. ಮಹಾ ಮಾನವನಾಗಿ, ವಿಮೋಚಕನಾಗಿ, ಮತ್ತ ಆಧುನಿಕತಾವಾದಿಯಾಗಿ. ತೀರಾ ಕೆಳಮಟ್ಟದ ದಲಿತರು ಅವರನ್ನು ‘ಮಹಾ ಮಾನವನನ್ನಾಗಿ’ ಸ್ವೀಕರಿಸಿವೆ. ಅಂಬೇಡ್ಕರರ ಅತ್ಯುನ್ನತ ನೈತಿಕ ಮತ್ತು ಬೌದ್ಧಿಕ ಮೌಲ್ಯ ಗಳನ್ನು, ಸಮುದಾಯಕ್ಕಾಗಿ ಅವರು ಮಾಡಿದ ತ್ಯಾಗ, ರಾಜಕೀಯ ವಿರೋಧಿಗಳನ್ನು ಎದುರಿಸಿದ ರೀತಿ, ಛಲ
ಇವರಿಗೆ ಸ್ಫೂರ್ತಿ. ಈ ವರ್ಗದ ಬಹುತೇಕರು ಅಂಬೇಡ್ಕರ್ ಅವರ ಪದವಿಗಳ ಹೆಸರುಗಳನ್ನು ಬಲ್ಲರೆ ವಿನಃ ಅವರ ಬರಹಗಳನ್ನು ಓದುವ, ಚಿಂತನೆಗಳನ್ನು ಬೌದ್ಧಿಕವಾಗಿ ಮುಖಾಮುಖಿಯಾಗಿಸುವ ಸಾಮರ್ಥ್ಯ ಇವರಲ್ಲಿಲ್ಲ.

ಎರಡನೆಯದಾಗಿ ಮಧ್ಯಮವರ್ಗದ ದಲಿತರು. ಇವರು ಅಂಬೇಡ್ಕರರಲ್ಲಿ ‘ವಿಮೋಚಕನನ್ನು’ ಕಾಣುತ್ತಾರೆ. ಯಾವ ಸಮಾಜ ಸುಧಾರಕರು, ಯಾವ ಹಿಂದೂ ದೇವ-ದೇವತೆಗಳು ತರಲಾರದ ಅಮೂಲಾಗ್ರ ಬದಲಾವಣೆಯನ್ನು ಅಂಬೇಡ್ಕರ್ ಸಮಾಜದಲ್ಲಿ ತಂದರು ಎಂದು ನಂಬುವ ಈ ವರ್ಗ ವರ್ತಮಾನದ ರಾಜಕೀಯ ಚಳವಳಿಗಳ ಬಗ್ಗೆ ತೀವ್ರ ಅಸಮಾಧಾನ ತೋರಿಸುತ್ತದೆ. ವೈಚಾರಿಕ ತೆಗೆ ಒತ್ತು ನೀಡುವ ವರ್ಗ ಅಂಬೇಡ್ಕರ್ ಮತ್ತು ಬುದ್ಧನನ್ನು ದೇವರೆಂದು ನಂಬುತ್ತದೆ. ಈ ವರ್ಗದ ವಿದ್ಯಾವಂತ
ಹೆಣ್ಣುಮಕ್ಕಳು ಪುರುಷ ಪ್ರಾಧಾನ್ಯದಿಂದ ಹಾಗೂ ಧರ್ಮದ ಶೋಷಣೆಯಿಂದ ಮುಕ್ತಿ ನೀಡಿದ ವಿಮೋಚಕನನ್ನು ಬಾಬಾ ಸಾಹೇಬರಲ್ಲಿ ಕಾಣುತ್ತಾರೆ.

ಕೊನೆಯದಾಗಿ ಅಂಬೇಡ್ಕರರನ್ನು ‘ಆಧುನಿಕತಾವಾದಿ ಯಾಗಿ’ ಕಾಣುವ ವರ್ಗ. ದಲಿತ ಸಮುದಾಯಕ್ಕೆ ವಿಮೋಚನೆ ದೊರಕಿ ಸಲು ಅಂಬೇಡ್ಕರ್ ಆಧುನಿಕತಾವಾದಿ ಯಾಗಿದ್ದೇ ಕಾರಣ ಎನ್ನುವುದು ಇವರ ನಂಬಿಕೆ. ಇವರು ಅಂಬೇಡ್ಕರ್ ಅವರ ಎದುರು ಭಾರತದ ಬೇರೆ ನಾಯಕರ ವ್ಯಕ್ತಿತ್ವವನ್ನು ಹೋಲಿಸಿ, ಅವರ ಸಾಮರ್ಥ್ಯಕ್ಕೆ, ಸಾಮಾಜಿಕ ಬದ್ಧತೆಗೆ ಸರಿಯಾಗಬಲ್ಲ ಇನ್ನೊಬ್ಬ ನಾಯಕ ಈ ದೇಶದಲ್ಲಿ ಇಲ್ಲವೆಂದು ಅವರು ಪ್ರತಿಪಾದಿಸುತ್ತಾರೆ. ಸಂವಿಧಾನ ರಚನೆಗೆ ಅಂಬೇಡ್ಕರ್ ಪರಿಶ್ರಮ ಮತ್ತು ಅವರ ಸಾವಿರಾರು ಪುಟಗಳ ಬರಹಗಳ ಸಂಪುಟಗಳನ್ನು ಉದಾಹರಿಸುವ ಮೂಲಕ ಹೊಸ ತಲೆಮಾರಿನ ಯುವಕರನ್ನು ಅಂಬೇಡ್ಕರ ರಂತಾಗಲು ಪ್ರೇರೇಪಿಸಲು ಪ್ರಯತ್ನಿಸುತ್ತಾರೆ.

ಈ ಎಲ್ಲ ವರ್ಗಗಳ ಹೊರತಾಗಿಯೂ ಹಲವರು ಅಂಬೇಡ್ಕರರನ್ನು ಕೇವಲ ಮೂರ್ತಿಯಲ್ಲಿ ಅಥವಾ ಪ್ರತಿಮೆಗಳಲ್ಲಿ ಮಾತ್ರ
ಕಾಣುತ್ತಾರೆ. ಅವರು ಬಾಬಾಸಾಹೇಬರು ಹೇಳಿದ ‘ನಾನು ಯಾವುದೇ ಪ್ರತಿಮೆಗಳಲ್ಲಿ ಅಥವಾ ಮೂರ್ತಿಗಳಲ್ಲಿ ಸಿಗುವುದಿಲ್ಲ ಪುಸ್ತಕಗಳಲ್ಲಿ ಸಿಗುತ್ತೇನೆ’ ಎಂಬ ಮಾತುಗಳನ್ನು ಮರೆತು ಬಿಟ್ಟಿರುತ್ತಾರೆ.

ನಿಜವಾಗಿ ಬಾಬಾಸಾಹೇಬರನ್ನು ಅರ್ಥಮಾಡಿಕೊಳ್ಳಲು ಅವರ ಕೊನೆಯ ದಿನಗಳನ್ನು ಅರಿಯಬೇಕು. ಬಾಬಾ ಸಾಹೇಬರ ಕೊನೆಯ ದಿನಗಳ ಬಗ್ಗೆ ಅವರ ನೆಚ್ಚಿನ ಆಪ್ತ ಕಾರ್ಯದರ್ಶಿಯಾಗಿದ್ದ ನಾನಕ್ ಚಂದ್ ರತ್ತು ತಮ್ಮ ‘ಲಾಸ್ಟ್ ಫೈವ್ ಇಯರ್ ಆಫ್ ಡಾ.ಬಿ.ಆರ್. ಅಂಬೇಡ್ಕರ್’ ಎಂಬ ತಮ್ಮ ಕೃತಿಯಲ್ಲಿ ಅತ್ಯಂತ ವಿಸ್ತಾರವಾಗಿ ದಾಖಲಿಸಿದ್ದಾರೆ. ಅದು 1956ರ ಜುಲೈ 31
ಮಂಗಳವಾರದ ಒಂದು ದಿನ ಸಂಜೆ ಐದು ಮೂವತ್ತರ ಸಮಯದಲ್ಲಿ ತಮ್ಮ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರಿಗೆ ಕೆಲವು ಪತ್ರಗಳನ್ನು ಡಿಕ್ಟೇಟ್ ಮಾಡಿದ ಬಾಬಾಸಾಹೇಬರು ಇದ್ದಕ್ಕಿದ್ದಂತೆ ಅಪ್ಸೆಟ್ ಆದರು.

ಕೆಲಹೊತ್ತು ಏನನ್ನೂ ಮಾತನಾಡದ ಅಂಬೇಡ್ಕರರನ್ನು ಕಂಡು ಕಾರ್ಯದರ್ಶಿ ಯವರಿಗೆ ಗಾಬರಿಯಾಯಿತು. ನಂತರ ಎಚ್ಚೆತ್ತುಕೊಂಡ ರತ್ತು ನಿಧಾನವಾಗಿ ಅಂಬೇಡ್ಕರ್ ಅವರ ಬಳಿಗೆ ಬಂದು ಪಕ್ಕದಲ್ಲಿದ್ದ ಒಂದು ಸ್ಟೂಲ್ ಮೇಲೆ ಕುಳಿತುಕೊಂಡು ಅವರ ತಲೆಯನ್ನು ನೇವರಿಸುತ್ತ, ಅವರ ಕಾಲನ್ನು ನಿಧಾನವಾಗಿ ಒತ್ತುತ್ತ, ಧೈರ್ಯದಿಂದ ಕೇಳಿಯೇ ಬಿಟ್ಟರು- ‘ಸರ್ ದಯವಿಟ್ಟು ಕ್ಷಮಿಸಿ, ನನಗೆ ಇಂದು ಸತ್ಯ ತಿಳಿಯಬೇಕು. ಇತ್ತೀಚಿನ ದಿನಗಳಲ್ಲಿ ತಾವು ಬಹಳ ಯೋಚನೆ ಮಾಡುತ್ತಿರುತ್ತೀರಿ, ದುಃಖಿತರಾಗು ತ್ತೀರಿ, ಕೊರಗುತ್ತಿರುತ್ತೀರಿ. ಏಕೆಂದು ನನಗೆ ತಿಳಿಯಬೇಕು‘ ರತ್ತು ಗಾಬರಿ ಅಂಬೇಡ್ಕರ್ ಅವರಿಗೆ ಅರ್ಥವಾಯಿತು ಒಂದಿಷ್ಟು
ಹೊತ್ತು ಸಾವರಿಸಿಕೊಂಡು, ತಮ್ಮ ದುಃಖ ಮತ್ತು ಕಣ್ಣೀರಿಗೆ ಕಾರಣ ಏನೆಂಬುದನ್ನು ಬಿಚ್ಚಿಟ್ಟರು.

ಅಂಬೇಡ್ಕರ್ ನೋವಿನ ಕಾರಣ; ಅವರೇ ವಿವರಿಸಿದಂತೆ: ನನ್ನ ದುಃಖಕ್ಕೆ ಕಾರಣ, ನೋವಿನ ಮೂಲ ಏನೆಂಬುದು ನಿಮಗೆ ಅರ್ಥವಾಗುವುದಿಲ್ಲ. ನನಗೆ ಕಾಡುವ ಅತ್ಯಂತ ದೊಡ್ಡ ಚಿಂತೆಯೆಂದರೆ ಜೀವನದಲ್ಲಿ ನನ್ನ ಗುರಿಯನ್ನು ನಾನು ತಲುಪ ಲಾಗಲಿಲ್ಲ. ಏಕೆಂದರೆ ನನ್ನ ಜೀವಿತಾವಧಿಯಲ್ಲಿಯೇ ನನ್ನ ವರ್ಗದವರು ಈ ದೇಶವನ್ನು ಆಳುವು ದನ್ನು ನಾನು ನೋಡ ಬೇಕೆಂದಿದ್ದೆ. ರಾಜಕೀಯ ಸಮಾನತೆಯನ್ನು ಅವರು ಇತರರೊಂದಿಗೆ ಹಂಚಿಕೊಳ್ಳುವು ದನ್ನು ಕಾಣಬೇಕೆಂದಿದ್ದೆ. ಆ ಯಾವ ಸಾಧ್ಯತೆಗಳೂ ನನಗೀಗ ಕಂಡುಬರುತ್ತಿಲ್ಲ. ಅದು ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣ ವೆಂದರೆ ಅದು
ಸಾಧ್ಯವಾಗುತ್ತಿಲ್ಲ. ಈಗ ಅನಾರೋಗ್ಯದಿಂದ ನಿಶ್ಯಕ್ತ ಮತ್ತು ನಿರಾಸಕ್ತನಾಗಿದ್ದೇನೆ.

ಹಾಗೆ ಹೇಳುವುದಾದರೆ ನಾನು ಇದುವರೆಗೆ ಏನನ್ನು ಸಾಧಿಸಿ ಪಡೆದಿ ದ್ದೇನೋ ಅದನ್ನು, ಅದರ ಪ್ರತಿಫಲವನ್ನು ನನ್ನ ಶಿಕ್ಷಣ ಪಡೆದ ಕೆಲವೇ ಮಂದಿ ಅನುಭವಿಸುತ್ತ ಮಜಾ ಮಾಡುತ್ತಿದ್ದಾರೆ. ಅವರು ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಚಿಂತೆ ಮಾಡುತ್ತಿಲ್ಲ. ವಂಚನೆಯಿಂದ ಅವರು ಭ್ರಷ್ಟರಾಗುತ್ತಿದ್ದಾರೆ. ವೈಯಕ್ತಿಕ ಹಿತಾ ಸಕ್ತಿಯಿಂದ ಸಮುದಾಯದ ಹಿತಾಸಕ್ತಿ ಯನ್ನು ಕಡೆಗಣಿಸಿ ನನ್ನ ಭರವಸೆಯನ್ನು ಹಸಿ ಗೊಳಿಸುತ್ತಿದ್ದಾರೆ.

ಒಟ್ಟಾರೆಯಾಗಿ ಅವರು ವಿನಾಶದತ್ತ ಸಾಗುತ್ತಿzರೆ. ಹಳ್ಳಿಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವ, ಆರ್ಥಿಕ ದುಃಸ್ಥಿತಿಯಲ್ಲಿ ಇರುವ ನನ್ನ ಅನಕ್ಷರಸ್ಥ ಸಮುದಾಯಕ್ಕಾಗಿ ಅವರ ಬಳಿ ಹೋಗಿ ಹೋರಾಟ ಮಾಡಬೇಕೆಂದಿದ್ದೇನೆ. ಆದರೆ ನನಗಿರುವುದು ಇನ್ನು ಕೆಲವೇ ದಿನಗಳು ಮಾತ್ರ…!! ನನ್ನ ಎಲ್ಲ ಕೃತಿಗಳನ್ನು ನನ್ನ ಜೀವಿತಾವಧಿಯಲ್ಲಿಯೇ ಹೊರತರಬೇಕೆಂದುಕೊಂಡಿದ್ದೆ.

ಆದರೆ, ಈ ಪರಿಸ್ಥಿತಿಯನ್ನು ನೋಡಿದರೆ ಅದು ಸಾಧ್ಯವಿಲ್ಲ ಎನಿಸುತ್ತಿದೆ. ಇದೂ ಕೂಡ ನನ್ನ ಅತ್ಯಂತ ದುಃಖಕ್ಕೆ ಕಾರಣ. ನನ್ನ  ಜೀವಿತಾವಧಿಯಲ್ಲಿಯೇ ನನ್ನ ಸಮುದಾಯದಿಂದ ಯಾರಾದರೊಬ್ಬರು ನಮ್ಮ ಈ ಚಳವಳಿಯನ್ನು ಮುಂದುವರಿಸುತ್ತಾರೆ ಎಂದು ನಾನು ನಂಬಿದ್ದೆ. ಆದರೆ, ಈಗಿರುವ ಪರಿಸ್ಥಿತಿ ಆ ರೀತಿ ಕಾಣುತ್ತಿಲ್ಲ. ಏಕೆಂದರೆ ನಾನು ಯಾರ ಮೇಲೆ ಹೆಚ್ಚು ವಿಶ್ವಾಸ
ವ್ಯಕ್ತಪಡಿಸಿzನೋ ಅಂತಹವರು ತಮ್ಮತಮ್ಮ ಕಚ್ಚಾಡಿ ಕೊಳ್ಳುತ್ತಿದ್ದಾರೆ.

ಹಾಗಾಗಿ ಅವರು ತಮ್ಮ ಮೇಲೆ ಬೀಳಬಹು ದಾದ ಅಗಾಧವಾದ ಜವಾಬ್ದಾರಿಯನ್ನು ಹೊರಲು ಇನ್ನೂ ಸಿದ್ದರಿಲ್ಲ. ನಿಜ ಹೇಳಬೇಕೆಂದರೆ ನನ ಗಿನ್ನೂ ಈ ದೇಶಕ್ಕೆ ಹಾಗೂ ನನ್ನ ಜನರಿಗೆ ಅದಮ್ಯ ಸೇವೆ ಮಾಡಬೇಕೆಂಬ ಆಸೆ. ಆದರೆ, ಪೂರ್ವಗ್ರಹಪೀಡಿತ ಜಾತಿವ್ಯವಸ್ಥೆಯನ್ನು ಹೊದ್ದು ಕೊಂಡಿರುವ ಜನರಿರುವ ಈ ದೇಶದಲ್ಲಿ ನನ್ನಂಥವನು ಜನಿಸಿರುವುದು ಮಹಾಪಾಪ…!! ಈಗಿನ ಪರಿಸ್ಥಿತಿಯಲ್ಲಿ ಇಲ್ಲಿನ ಸರಕಾರದ ವಿರುದ್ಧ ಅಥವಾ ವ್ಯವಸ್ಥೆಯ ವಿರುದ್ಧ ಅಥವಾ ಪ್ರಧಾನಿಗಳ ವಿರುದ್ಧ ಮಾತನಾಡುವುದನ್ನು
ಸಹಿಸಲು ಈ ಜನರು ಸಿದ್ಧರಿಲ್ಲ. ಹೀಗೆ ಆದರೆ ಈ ದೇಶ ಇನ್ನೆಲ್ಲಿ ಹೋಗಿ ಮುಳುಗುತ್ತ ದೆಯೋ…!! (ಈ ಮಾತು ಹೇಳುತ್ತ ಅಂಬೇಡ್ಕರ್ ಆಗತಾನೇ ನಡೆಯುತ್ತಿದ್ದ ಕೆಲವು ಕಾನೂನು ಸಂಹಿತೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ).

ಇಲ್ಲಿನ ಕೆಲವರು ನನ್ನನ್ನು ನಿಂದಿಸಿದರೂ, ನನ್ನ ಮೇಲೆ ಟೀಕಾಸಗಳನ್ನು ಪ್ರಯೋಗಿಸಿದರೂ ನಾನು ಹೆದರುವುದಿಲ್ಲ. ನಾನು ಅದೆಷ್ಟೋ ಜನರು ಮೆಚ್ಚುವಂತಹ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ ಮತ್ತು ಸಾಯುವವರೆಗೂ ಮಾಡುತ್ತಲೇ ಇರುತ್ತೇನೆ.
ಇಷ್ಟು ಹೇಳುವಾಗ ಅವರು ಇದ್ದಕ್ಕಿದ್ದಂತೆ ಗದ್ಗದಿತರಾದರು. ಕಣ್ಣಾಲಿಗಳು ತುಂಬಿಕೊಂಡವು, ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ಪಕ್ಕದ ನಿಂತಿದ್ದ ರತ್ತು ಅವರ ಕಣ್ಣಲ್ಲೂ ನಿರೀಕ್ಷಿತ ನೀರು ಧಾರಾಕಾರವಾಗಿತ್ತು.

ಕೊನೆಗೆ ಬಾಬಾಸಾಹೇಬರು ಒಂದಷ್ಟು ಸಾವರಿಸಿಕೊಂಡು, ‘ಧೈರ್ಯ ತಂದುಕೋ ರತ್ತು…ಎದೆಗುಂದಬೇಡ ಈ ಜೀವನ ಒಂದು ದಿನ ಕೊನೆಗೊಳ್ಳಲೇಬೇಕು.. ಹೋಗಿ ನನ್ನ ಜನರಿಗೆ ಹೇಳು, ಇದುವರೆಗೂ ನಾನು ಏನು ಸಾಽಸಿದ್ದೇನೋ ಅದನ್ನು ನನ್ನ ಶತ್ರುಗಳ ವಿರುದ್ಧ ನನ್ನ ಜೀವನಪೂರ್ತಿ ಹೋರಾಡಿ, ಕಠಿಣ ಶ್ರಮವಹಿಸಿ, ನಿರಂತರ ಸಮಸ್ಯೆ ಗಳನ್ನು ಅನುಭವಿಸಿ ಪಡೆದಿದ್ದೇನೆ. ಆ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ.

ಜೀವನದಲ್ಲಿ ಏನೇ ಅಡೆತಡೆಗಳು ಬರಲಿ ಕಷ್ಟಗಳು ಬರಲಿ, ಆ ರಥ ಮುಂದೆ ನಡೆಯಲೇಬೇಕು. ಅಕಸ್ಮಾತ್ ಆ ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ಅದನ್ನು ನನ್ನ ವರ್ಗದವರು ಅಲ್ಲಿಯೇ ಬಿಟ್ಟು ಬಿಡಲಿ. ಆದರೆ, ಯಾವುದೇ ಕಾರಣಕ್ಕೂ,  ಎಂತಹ ಸಂದರ್ಭ ಬಂದರೂ ಅದನ್ನು ಹಿಂದಕ್ಕೆ ಮಾತ್ರ ಎಳೆದುಕೊಂಡು ಹೋಗಬಾರದು ಅಲ್ಲಿಯೇ ಬಿಟ್ಟು ಬಿಡಬೇಕು.
ಇದು ನನ್ನ ಅನಾರೋಗ್ಯದ ಸಂದರ್ಭದಲ್ಲಿ ನಾನು ನನ್ನ ಜನರಿಗೆ ನೀಡುತ್ತಿರುವ ಸಂದೇಶ, ಭವಿಷ್ಯ ಕೊನೆಯ ಸಂದೇಶ…
ಇಷ್ಟು ಹೇಳಿ ರತ್ತು ಅವರನ್ನು ಕಳಿಸಿ ಅಂಬೇಡ್ಕರರು ನಿದ್ರೆಗೆ ಜಾರಿದರು.

(ಆಕರ:’Understanding the Multiple Images of Ambedkar’ Article -ಪ್ರೊ.ಗೋಪಾಲಗುರು)