Thursday, 12th December 2024

ಅಂಬೇಡ್ಕರ್ ಗೆಲ್ಲಬೇಕಾಗಿತ್ತು !

ಪ್ರಸ್ತುತ

ಮಲ್ಲಿಕಾರ್ಜುನ ಹೆಗ್ಗಳಗಿ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದರು, ಆದರೆ ಗೆಲ್ಲಲಿಲ್ಲ. ಸಂವಿಧಾನ ರಚಿಸಿದ ಮಹಾನ್ ನಾಯಕ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗುವುದು ಸಾಧ್ಯವಾಗಲಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.

ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ಬಾಬಾ ಸಾಹೇಬರ ಸೋಲುಗಳು ಮನ ಕಲಕುತ್ತಿವೆ. ಡಾ ಅಂಬೇಡ್ಕರರು ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಮುಂಬೈ ಮೀಸಲು ಕ್ಷೇತ್ರದಿಂದ ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಒಕ್ಕೂಟ ೧೯೪೫ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ವಿರೋಧ ವಾಗಿ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯೂ ಇತ್ತು.

ಆದರೆ ಕಾಂಗ್ರೆಸ್ ಪಕ್ಷ ನಾರಾಯಣ್ ಸಾಧುಬಾ ಕಾಜರೋಳ್ಕರ್ ಎಂಬವರನ್ನು ಕಣಕ್ಕಿಳಿಸಿತು, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ ಪಾಟೀಲ್, ಕಮ್ಯುನಿ ಪಕ್ಷದ ಎಸ್.ಎ ಡಾಂಗೆ ಒಳ ಒಪ್ಪಂದ ಮಾಡಿಕೊಂಡು ಅಂಬೇಡ್ಕರನ್ನು ಸೋಲಿಸಲು ತಂತ್ರ ರೂಪಿಸಿದರು. ಮತದಾರರಿಗೆ ಹಣ ಹಂಚಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ನಡುವೆ ದ್ವೇಷದ ಬೀಜ ಬಿತ್ತಿದರು . ಅಂಬೇಡ್ಕರ್ ಸೋಲು ಅನುಭವಿಸಿದರು, ಈ ಚುನಾವಣೆಯಲ್ಲಿ ೫೦ಸಾವಿರ ಮತಗಳನ್ನು ತಿರಸ್ಕರಿಸಲಾಯಿತು. ಇವು ಅಂಬೇಡ್ಕರ್ ಪರವಾಗಿಯೇ ಇದ್ದವು.

ಈ ಚುನಾವಣೆಯ ನಂತರ ಅಂಬೇಡ್ಕರ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ಭಾಷಣ ಒಂದು ಐತಿಹಾಸಿಕ  ದಾಖಲೆ ಯಾಗಿದೆ. ನಾವು ಸೋತಿದ್ದೇವೆ, ಏಕೆಂದರೆ ನಾವು ಮಾರಾಟವಾಗಲು ಸಿದ್ಧರಿಲ್ಲ. ನಾವು ಸೋಲುತ್ತೇವೆ, ಏಕೆಂದರೆ ಪಕ್ಷದಿಂದ ಪಕ್ಷಕ್ಕೆ ಹಾರುವುದಿಲ್ಲ.ನಾವು ನಮ್ಮ ತತ್ವ ಮತ್ತು ಆದರ್ಶಕ್ಕೆ ಅಂಟಿಕೊಂಡಿರುವವರು. ಭವಿಷ್ಯದಲ್ಲಿಯೂ ಇ ಉಳಿಯುವವರು. ಗೆಲ್ಲುವುದು ಅಷ್ಟೇ ನಮ್ಮ ಉದ್ದೇಶವಲ್ಲ. ಅದು ಯಾರ ರಕ್ಷಣೆಯ ಸಲುವಾಗಿ ಹುಟ್ಟಿಕೊಂಡಿದೆಯೋ ಅವರ ಪರವಾಗಿ ಹೋರಾಡುವುದು ಮುಖ್ಯ ಗುರಿಯಾಗಿದೆ. ಉತ್ತಮ ಮೌಲ್ಯ, ಉತ್ತಮ ಪ್ರಯತ್ನ, ಶ್ರೇಷ್ಠವಾದ ಅರಿವಿಗಾಗಿ ಕಾದಾಡಲಿದ್ದೇವೆ ಎಂದು ಹೇಳಿದ್ದರು.

ಮುಂದೆ ೧೯೫೪ರಲ್ಲಿ ವಿದರ್ಭ ಭಂಡಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು . ಡಾ ಅಂಬೇಡ್ಕರ್ ಇಲ್ಲಿ ಸ್ಪರ್ಧೆಗೆ ಇಳಿದರು. ಕಾಂಗ್ರೆಸ್ ಅವರ ವಿರುದ್ಧ ಭಾವುರಾವ್ ಬೋಕರರ್ ಅವರನ್ನು ಕಣಕ್ಕೆ ಇಳಿಸಿತು. ಫಲಿತಾಂಶ ಬಂದಾಗ ಡಾ ಅಂಬೇಡ್ಕರರು ೩೦೦೦ ಮತಗಳಿಂದ ಸೋಲು ಅನುಭವಿಸಿದ್ದರು. ವಿಚಿತ್ರ ಎಂದರೆ ಈ ಬಾರಿಯೂ ೫೦,೦೦೦ ಮತಗಳನ್ನು ತಿರಸ್ಕರಿಸಲಾಗಿತ್ತು.

ಅಂಬೇಡ್ಕರ್ ದ್ವಿತೀಯ ಪತ್ನಿ ಡಾ. ಸವಿತಾ ಅಂಬೇಡ್ಕರ್ ಅವರು ಡಾ.ಅಂಬೇಡ್ಕರ್ ಸಹವಾಸದಲ್ಲಿ ಎಂಬ ಆತ್ಮಕಥೆ ಮರಾಠಿ ಯಲ್ಲಿ ಬರೆದಿದ್ದಾರೆ. ಕೃತಿಯನ್ನು ಅನಿಲ್ ಹೊಸಮನಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ ಸವಿತಾ ಅವರು ಬಾಬಾ ಸಾಹೇಬರು ಸ್ಪರ್ಧಿಸಿದ ಈ ಎರಡು ಚುನಾವಣೆಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ್ದರು. ಅವರು ಆಗಿನ ಹಿರಿಯ ರಾಜಕಾರಣಿಗಳು
ಅಂಬೇಡ್ಕರ್‌ ಅವರನ್ನು ಸೋಲಿಸಲು ಹೂಡಿದ ತಂತ್ರಗಾರಿಕೆ, ನಡೆಸಿದ ಭ್ರಷ್ಟಾಚಾರ, ಜಾತೀಯತೆಯ ಸಂಘರ್ಷವನ್ನು ವಿವರ ವಾಗಿ ದಾಖಲಿಸಿದ್ದಾರೆ. ಡಾ ಬಾಬಾ ಸಾಹೇಬರಿಗೆ ಬರ್ಮಾ ದೇಶದ ಮಾದರಿಯಲ್ಲಿ ಭೂ ಸುಧಾರಣೆ ಕಾನೂನುಗಳನ್ನು ಭಾರತ ದಲ್ಲಿ ಕಾರ್ಯರೂಪಕ್ಕೆ ತರಲು ಆಸಕ್ತಿ ಹೊಂದಿದ್ದರು.

ದಲಿತರಿಗೆ ಕಡ್ಡಾಯವಾಗಿ ಭೂ ಒಡೆತನ ನೀಡಲು, ಆರ್ಥಿಕ ಅಸಮಾನತೆ ತಡೆಯಲು, ಜನಪರ ಆರ್ಥಿಕ ನೀತಿ ಜಾರಿಗೊಳಿಸಲು ಎಲ್ಲಕ್ಕಿಂತಲೂ ಮುಖ್ಯವಾಗಿ ದಲಿತರ ಆತ್ಮ ಗೌರವ ಕಾಪಾಡಲು ಅವರು ನಿರ್ಧರಿಸಿದ್ದರು. ಬಾಬಾ ಸಾಹೇಬ್ ಲೋಕಸಭೆ ಪ್ರವೇಶಿಸಿದರೆ ತಮ್ಮ ಆಟ ನಡೆಯುವುದಿಲ್ಲ, ಅವರ ಪ್ರಖರ ವ್ಯಕ್ತಿತ್ವದ ಮುಂದೆ ತಾವು ಕುಬ್ಜರಾಗಿ ಕಾಣುತ್ತೇವೆ ಎಂಬ ಭಯದಿಂದ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು ಎಂದು ತುಂಬ ಕಳವಳದಿಂದ ಡಾ ಸವಿತಾ ಅವರು ಹೇಳಿದ್ದಾರೆ.

ಡಾ ಬಾಬಾ ಸಾಹೇಬ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆ ಯೋಜನೆ ರೂಪಿಸಿದರು. ಅದೇ ವರ್ಷದ ಕೊನೆ ಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಗೆ ೧೭ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಬಂದಿತು. ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ತಮಗೆ ದೊರೆತ ಅಲ್ಪಾವಧಿಯಲ್ಲಿ ಮೌಲಿಕ ಚರ್ಚೆ ನಡೆಸಿದರು. ಸರಕಾರದ ತಪ್ಪು ಆರ್ಥಿಕ ನೀತಿಯನ್ನು ಖಂಡಿಸಿದರು. ಅವರು ಮಾತನಾಡಲು ಎದ್ದು ನಿಂತರೆ ಇಡೀ ರಾಜ್ಯಸಭೆ ಕಿವಿಯಾಗು ತ್ತಿತ್ತು. ಅವರ ಚಿಂತನೆ, ಭಾಷಾ ಪ್ರೌಢಿಮೆ ,ವಿಷಯ ಮಂಡಿಸುವ ಗತ್ತು ಅನನ್ಯವಾಗಿತ್ತು.

ಡಾ ಬಾಬಾ ಸಾಹೇಬ್ ಅಸ್ತಂಗತರಾದ ಮೇಲೆ ಲೋಕಸಭೆ ಎದುರು ಅವರ ಭವ್ಯ ಮೂರ್ತಿ ಸ್ಥಾಪಿಸಲಾಗಿದೆ. ಲೋಕಸಭೆಯ ಒಳಗಡೆ ಅವರ ಭಾವಚಿತ್ರ ಅನಾವರಣಗೊಂಡಿದೆ, ಆದರೆ ಅವರು ಬದುಕಿದ್ದಾಗ ಲೋಕಸಭೆ ಒಳಗಡೆ ಕರೆದುಕೊಂಡು ಬರುವುದು ಆಗಲಿಲ್ಲ. ಇದು ಭಾರತದ ಲೋಕಸಭೆಯ ಕೊರಗು.