Saturday, 14th December 2024

ವೈದ್ಯಕೀಯ ತುರ್ತುಸೇವೆಗೆ ಆಂಬ್ಯುಲೆನ್ಸ್

ಹಿಂದಿರುಗಿ ನೋಡಿದಾಗ

ಕುಮಾರವ್ಯಾಸ ಭಾರತದ ಭೀಷ್ಮಪರ್ವ, ೫ನೆಯ ಸಂಧಿಯ ೩೯-೪೨ ಪದ್ಯಗಳು ಯುದ್ಧಭೂಮಿಯಲ್ಲಿ ಕುದುರೆಗಳು, ಆನೆಗಳು ಹಾಗೂ ಯೋಧರಿಗೆ ದೊರೆಯುತ್ತಿದ್ದ ವೈದ್ಯಕೀಯ ಚಿಕಿತ್ಸೆಯ ಅದ್ಭುತ ವಿವರಗಳನ್ನು ನೀಡುತ್ತವೆ. ೩೯ನೆಯ ಪದ್ಯವು ‘ಚರ್ಮಹರಿದ ಕೊರಳನ್ನು ಕಟ್ಟುವ, ಎದೆಯಲ್ಲಿ ಮುರಿದ
ಬಾಣದ ತುದಿಯನ್ನು ಕೀಳುವ, ಹೊಟ್ಟೆಯಲ್ಲಿ ಗಾಯವಾಗಿ ಹೊರಬಂದ ಕರುಳನ್ನು ಒಳಗಿಟ್ಟು ಹೊಲಿಯುವ, ಮದ್ದು ಗಳನ್ನು ಬಾಯೊಳಗೆ ಹಾಕುವ, ಶಾಖವುಂಟುಮಾಡುವ ನಶ್ಯದಿಂದ ರೋಗನಿದಾನವನ್ನು ಮಾಡುವ ಅಶ್ವವಿದ್ಯರು ಆ ರಾತ್ರಿ ಕಾರ್ಯನಿರತರಾಗಿದ್ದರು’ ಎಂಬ ವಿವರವನ್ನು ನೀಡುತ್ತದೆ.

೪೦ನೆಯ ಪದ್ಯವು ‘ಆನೆವೈದ್ಯರು ಆನೆಗಳ ದೇಹದಲ್ಲಿ ನೆಟ್ಟಿದ್ದ ಈಟಿಗಳು, ಒಳಮುರಿಯದಂತೆ ಕೀಳುವ, ಔಷಧ ಗಳನ್ನು ದೇಹದ ಕುಳಿಯೊಳಗೆ ಹಾಕುವ, ತಕ್ಕ ಆಹಾರವನ್ನು ಕೊಟ್ಟು ಆನೆಗಳನ್ನುಳಿಸುವ, ಕೆಟ್ಟ ಗಾಯಗಳಿಗೆ ಔಷಧಿಯನ್ನು ಹಾಕಿ ಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಆಗ ಉಂಟಾದ ಕೋಲಾಹಲವು ಸಮುದ್ರದ ಮೊರೆತದಂತಿತ್ತು’ ಎನ್ನುತ್ತದೆ. ೪೧ ಮತ್ತು ೪೨ನೆಯ ಪದ್ಯಗಳು ‘ಯುದ್ಧದಲ್ಲಿ ಮೈಗೆ ರಂಧ್ರವಾಗಿದ್ದ ವೀರಭಟರ ಗಾಯಗಳಿಗೆ, ಸಮವಾದ ತೆಳು ಚರ್ಮದ ಪಟ್ಟಿಗಳನ್ನಿಟ್ಟು, ಎಡಗೈಯಿಂದ ತೈಲಧಾರೆಗಳನ್ನೆರೆದರು.

ಗಾಯದಲ್ಲಿ ಇದ್ದ ತೂತನ್ನು ಗುರುತಿಸಿ, ಅಲ್ಲಿದ್ದ ರಕ್ತವನ್ನು ಶೋಧಿಸಿ ಹಳೆಯ ತುಪ್ಪವನ್ನು ಲೇಪಿಸಿ ವೈದ್ಯರು ಚಿಕಿತ್ಸೆ ಮಾಡುತ್ತಿದ್ದರು. ಕತ್ತಿಯ ಹೊಡೆತದಿಂದಾದ ಗಾಯಗಳಲ್ಲಿ ಔಷಧವನ್ನು ತುಂಬಿದರು. ಹಂದಿಯ ತುಪ್ಪವನ್ನು ಲೇಪಿಸಿದರು. ತೈಲಧಾರೆಗಳನ್ನು ಬಿಟ್ಟರು. ಮಂತ್ರಿಸಲ್ಪಟ್ಟ ನೀರನ್ನು ಕುಡಿಸಿದರು. ಹೊರಬಂದ ಕರುಳನ್ನು ಒಳಕ್ಕಿಟ್ಟು ಮಂತ್ರಿಸಿದ ಬಳಿಕ, ಔಷಧಿಗಳನ್ನು ಹಂಚಿದರು. ಹೀಗೆ ಎರಡು ಪಾಳಯಗಳಲ್ಲೂ ರಾತ್ರಿಯೆಲ್ಲಾ ಚಟುವಟಿಕೆಗಳು ನಡೆದವು’ ಎನ್ನುತ್ತವೆ.
ಕುಮಾರವ್ಯಾಸನು ಇಮ್ಮಡಿ ದೇವರಾಯನ ಆಸ್ಥಾನದಲ್ಲಿದ್ದ. ದೇವರಾಯನು ಗಜಪತಿ, ಬಹಮನಿ ಸುಲ್ತಾನರು, ಕೇರಳ ಹಾಗೂ ಸಿಂಹಳಗಳ ಮೇಲೆ ಯುದ್ಧವನ್ನು ಮಾಡಿದ.

ಯುದ್ಧಗಳಲ್ಲಿ ಕೆಲವನ್ನಾದರೂ ಕುಮಾರವ್ಯಾಸ ನೋಡಿರ ಬೇಕು ಇಲ್ಲವೇ ಭಾಗವಹಿಸಿರಬೇಕು. ಹಾಗಾಗಿ ಇತರ ಕವಿ ಗಳಲ್ಲಿ ಕಾಣಲಾಗದ ಯುದ್ಧ ತಯಾರಿಯ ವಿವರಣೆ, ಆಹಾರ ಪೂರೈಕೆ, ವೈದ್ಯಕೀಯ ಚಿಕಿತ್ಸೆ ಇತ್ಯಾದಿಗಳ ವಿವರಣೆಯು ಕುಮಾರವ್ಯಾಸನಲ್ಲಿ ದೊರೆಯುತ್ತದೆ. ವಿಜಯನಗರ ಕಾಲದ ವೈದ್ಯಕೀಯ ಚಿಕಿತ್ಸಾ ವಿವರಗಳನ್ನು ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಅನ್ವಯಿಸಿರುವುದು ಕುತೂಹಲಕರವಾಗಿದೆ. ಇಲ್ಲೊಂದು ಸ್ವಾರಸ್ಯಕರ ಅಂಶ ವೆಂದರೆ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಜತೆಯಲ್ಲಿ ಕುದುರೆ ಮತ್ತು ಆನೆಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ವೈದ್ಯಕೀಯ ಚಿಕಿತ್ಸೆ ಕೊಡುತ್ತಿದ್ದ ವಿವರಣೆ. ಗಾಯಾಳುಗಳನ್ನು
ಎತ್ತಿನ ಗಾಡಿಯಲ್ಲಿಯೋ ರಥದಲ್ಲಿಯೋ ಸಾಗಿಸುವುದು ಸುಲಭ. ಆದರೆ ಗಾಯಗೊಂಡ ಆನೆ-ಕುದುರೆಗಳನ್ನು ಹೇಗೆ ಸಾಗಿಸುತ್ತಿದ್ದಿರಬೇಕು ಎನ್ನುವುದನ್ನು ಓದುಗರಿಗೇ ಬಿಡುವುದೊಳಿತು.

***

ಇಂದು ಯಾವುದೇ ಅಪಘಾತವಾದರೆ ಅಥವಾ ವೈದ್ಯಕೀಯ ತುರ್ತುಸ್ಥಿತಿ ಒದಗಿದರೆ ನಾವು ನೇರವಾಗಿ ೧೦೮ ನಂಬರಿಗೆ ಫೋನ್ ಮಾಡುತ್ತೇವೆ. ನಾವಿರುವಲ್ಲಿಗೆ
ಆಂಬ್ಯುಲೆನ್ಸ್ ಬಂದು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವ ಸುವ್ಯವಸ್ಥೆಯಿದೆ. ತುರ್ತುವೈದ್ಯಕೀಯ ಹಾಗೂ ಆಂಬ್ಯುಲೆನ್ಸ್ ಸೇವೆಗಳು ಬೆಳೆದುಬಂದ ಇತಿಹಾಸವು ನಿಜಕ್ಕೂ ರೋಚಕವಾಗಿದೆ. ಇತಿಹಾಸಪೂರ್ವ ಕಾಲದಲ್ಲಿ ನಮ್ಮ ಪೂರ್ವಜರು ಅಪಘಾತ ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದುದು ಅಪರೂಪವೇನಲ್ಲ. ಅಂಥ ಸಂದರ್ಭಗಳಲ್ಲಿ ತುರ್ತು ವೈದ್ಯಕೀಯ ನೆರವು ಅವರಿಗೆ ತಕ್ಷಣ ದೊರೆಯುವುದು ಅಸಾಧ್ಯದ ಮಾತಾಗಿತ್ತು. ವೈದ್ಯಕೀಯವನ್ನು ಬಲ್ಲ ಅಭಿಚಾರಿಗಳು ಊರ ದೇವಾಲಯದಲ್ಲಿ ಅಥವಾ ಊರ ಹೊರಗಿನ ವಿಶೇಷ ಸ್ಥಳಗಳಲ್ಲಿ ವಾಸವಾಗಿರುತ್ತಿದ್ದರು. ಹಾಗಾಗಿ ಗಾಯಾಳು/ಅಸ್ವಸ್ಥನನ್ನು ಅವರಿರುವಲ್ಲಿಗೇ ಸಾಗಿಸುವುದು ಅನಿವಾರ್ಯವಾಗಿತ್ತು. ಆದರೆ ಹೇಗೆ ಸಾಗಿಸುತ್ತಿದ್ದರು ಎಂಬುದನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ಗಾಯಾಳು ವನ್ನು ಬೆನ್ನ ಮೇಲೆ ಕೂಸುಮರಿಯ ಹಾಗೆ ಹೊತ್ತುಕೊಂಡು ಹೋಗುತ್ತಿದ್ದಿರಬಹುದು. ಒಂದು ಬಲವಾದ ಬಿದಿರಿಗೆ ಕಂಬಳಿಯ ಜೋಲಿಯನ್ನು ಕಟ್ಟಿ, ಅದರಲ್ಲಿ ಗಾಯಾಳುವನ್ನು
ಮಲಗಿಸಿ, ಇಬ್ಬರು ಹೊತ್ತುಕೊಂಡು ಹೋಗುತ್ತಿದಿರ ಬಹುದು. ಬಿದಿರುಗಳಿಂದ ಮಾಡಿದ ಅಟ್ಟಣೆಯ ಮೇಲೆ ಮಲಗಿಸಿ ಕರೆದೊಯ್ಯುತ್ತಿದ್ದಿರಬಹುದು. ಕತ್ತೆ, ಎತ್ತು,
ಕುದುರೆ ಮುಂತಾದ ಪ್ರಾಣಿಗಳ ಮೇಲೆ ಮಲಗಿಸಿ ಸಾಗಿಸುತ್ತಿದ್ದಿರಬಹುದು.

ಎತ್ತಿನಗಾಡಿ, ಕುದುರೆಗಾಡಿ, ರಥಗಳು ಅತ್ಯುತ್ತಮ ಆಂಬ್ಯುಲೆನ್ಸ್‌ಗಳಾಗಿ ತುರ್ತು ಸಂದರ್ಭದಲ್ಲಿ ನೆರವಾಗಿರಬಹುದು. ಆಂಬ್ಯುಲೆನ್ಸ್ ಸೇವೆಗಳ ಅಗತ್ಯವು
ಸಾರ್ವಜನಿಕ ಬದುಕಿಗಿಂತ ಮಿಲಿಟರಿ ಬದುಕಿಗೇ ಹೆಚ್ಚು ಅಗತ್ಯವಿತ್ತು. ಹಾಗಾಗಿ ಕ್ರಿ.ಪೂ. ೯ನೆಯ ಶತಮಾನದ ಗ್ರೀಕ್ ಸಾಮ್ರಾಜ್ಯದಲ್ಲಿ, ಗಾಯಗೊಂಡ ಯೋಧರನ್ನು ಗುಲಾಮರು ಜೋಲಿಗಳಲ್ಲಿ ಮಲಗಿಸಿ ಸಾಗಿಸುತ್ತಿದ್ದರು. ಅಽಕಾರಿಗಳನ್ನು ಸಾಗಿಸಲು ರಥಗಳ ವ್ಯವಸ್ಥೆಯೂ ಇತ್ತು. ಹಾಗಾಗಿ ಮಿಲಿಟರಿಯ ಜತೆಜತೆಯಲ್ಲಿ ಆಂಬ್ಯುಲೆನ್ಸ್ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಳು ಬೆಳೆದುಬಂದವು.

ಕ್ರಿ.ಶ. ೬ನೆಯ ಶತಮಾನದಲ್ಲಿ ಪೋಪ್ ಗ್ರೆಗೊರಿ-೧ ಮೊದಲ ಆಸ್ಪತ್ರೆಯನ್ನು ಜೆರುಸಲೇಮ್‌ನಲ್ಲಿ ಕಟ್ಟಿಸಿದ. ಜೆರುಸಲೇಮ್‌ಗೆ ಬರುವ ಕ್ರೈಸ್ತರ ವೈದ್ಯಕೀಯ ಅಗತ್ಯಗಳನ್ನು ಈ ಆಸ್ಪತ್ರೆಯು ಪೂರೈಸುತ್ತಿತ್ತು. ಕ್ರಿ.ಶ. ೧೦೫೦-೧೩೦೦ರ ನಡುವೆ ಕ್ರೈಸ್ತರು ಹಾಗೂ ಮುಸ್ಲಿಮರ ನಡುವೆ, ಧಾರ್ಮಿಕ ಯುದ್ಧಗಳ ಒಂದು ಸರಣಿ ನಡೆಯಿತು. ಮುಸ್ಲಿಮರು ದಿನೇ ದಿನೆ ಪ್ರಬಲರಾಗುತ್ತಿದ್ದರು, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರು ಹಾಗೂ ಕ್ರೈಸ್ತಧರ್ಮಕ್ಕೆ ಸಂಬಂಧಿಸಿದ ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಹಾಗಾಗಿ ಯುರೋಪಿಯನ್ ಚರ್ಚ್ ಹೇಗಾದರೂ ಮಾಡಿ ಮುಸ್ಲಿಮರನ್ನು ಸೋಲಿಸಿ, ಕ್ರೈಸ್ತಧರ್ಮಕ್ಕೆ ಮುಖ್ಯವೆನಿಸುವ ಪ್ರದೇಶವನ್ನು ಅವರಿಂದ ವಶಪಡಿಸಿಕೊಳ್ಳಲು, ಐದು ಧರ್ಮಯುದ್ಧಗಳನ್ನು ನಡೆಸಿತು.

ಇದರಲ್ಲಿ ಗಾಯಗೊಂಡ ಕ್ರೈಸ್ತ ಸೈನಿಕರನ್ನು, ಯುದ್ಧರಂಗ ದಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ವೈದ್ಯಕೀಯ ಚಿಕಿತ್ಸೆ ನೀಡುವ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಬಹುಶಃ ಇದುವೇ ಮೊದಲ ವ್ಯವಸ್ಥಿತ ಆಂಬ್ಯುಲೆನ್ಸ್ ಸೇವೆ ಅನ್ನಬಹುದು. ಆಂಬ್ಯುಲೆನ್ಸ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದ ದಾಖಲೆ ಸ್ಪೇನ್ ದೇಶದ ಇಸಬೆಲ್ಲ-೧ ಹೆಸರಲ್ಲಿದೆ. ಎಮಿ ರೇಟ್ ಆಫ್ ಗ್ರಾನಡ ಮುಸ್ಲಿಮರ ಸಾಮ್ರಾಜ್ಯ. ೧೪೮೭ರಲ್ಲಿ ಈ ಸಾಮ್ರಾಜ್ಯದ ಮಾಲಗ ನಗರವನ್ನು ಸ್ಪೇನ್ ದೇಶದವರು ವಶಪಡಿಸಿಕೊಂಡರು. ಯುದ್ಧವು ೪ ತಿಂಗಳವರೆಗೆ ನಡೆಯಿತು. ಈ ಅವಽಯಲ್ಲಿ ರಾಣಿ ಇಸಬೆಲ್ಲ ವಿಶೇಷ ಕುದುರೆಯ ಗಾಡಿಗಳಲ್ಲಿ ಮೆತ್ತನೆಯ ಹಾಸಿಗೆ ಹಾಸಿ, ಅದರಲ್ಲಿ ಗಾಯಾಳುಗಳನ್ನು ಮಲಗಿಸಿ, ರಣರಂಗದಿಂದ ದೂರದ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಅಲ್ಲಿದ್ದ ಮಿಲಿಟರಿ ಆಸ್ಪತ್ರೆಗಳಲ್ಲಿ (ಆಂಬ್ಯುಲ್ಯಾನ್ಸಿಯ) ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದಳು. ಈ ವ್ಯವಸ್ಥೆಯು ಸೈನ್ಯದಲ್ಲಿ ಆಕೆಯ ಬಗ್ಗೆ ಪ್ರೀತಿ-ಗೌರವಗಳನ್ನು ಹೆಚ್ಚಿಸಿದವು.

ಡಾಮಿನಿಕ್ ಜೀನ್ ಲಾರಿ ಓರ್ವ ಫ್ರೆಂಚ್ ಸರ್ಜನ್ ಹಾಗೂ ಮಿಲಿಟರಿ ವೈದ್ಯನಾಗಿದ್ದ. ಫ್ರಾನ್ಸಿನ ಕ್ರಾಂತಿ ಮತ್ತು ನೆಪೋಲಿಯನ್ ಯುದ್ಧಗಳಲ್ಲಿ ಈತ ನೇರವಾಗಿ ಪಾಲುಗೊಂಡ. ಇವನು ಸ್ಪೈರ್ ಕದನದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ. ಈ ಕದನವು ಫ್ರೆಂಚ್ ಮತ್ತು ಪ್ರಶ್ಯನ್ನರ ನಡುವೆ ನಡೆಯಿತು. ಅಂದಿನ ದಿನಗಳಲ್ಲಿ ಈ ಕುದುರೆಗಳಿಗೆ ಜೋಲಿಯನ್ನು ಕಟ್ಟಿ ಗಾಯಾಳುಗಳನ್ನು ದೂರಕ್ಕೆ ಒಯ್ಯುವ ಸೇವಾ ವ್ಯವಸ್ಥೆಗಳೆಲ್ಲ ರಣರಂಗದಿಂದ ಎರಡೂವರೆ ಮೈಲಿಗಳ ದೂರದಲ್ಲಿ ಇರ
ಬೇಕಾಗಿತ್ತು. ಯುದ್ಧವೆಲ್ಲ ಮುಗಿದ ಮೇಲೆ, ಜೋಲಿ ಕುದುರೆಗಳು ರಣರಂಗಕ್ಕೆ ಬಂದು ಗಾಯಾಳುಗಳನ್ನು ಸಾಗಿಸ ಬೇಕಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅನೇಕ ಜನರು ಸತ್ತುಹೋಗುತ್ತಿದ್ದರು. ಲಾರಿಗೆ ಬಹಳ ಬೇಸರವಾಯಿತು.

ಅಂದಿನ ದಿನಗಳಲ್ಲಿ ೪ ಚಕ್ರಗಳ ಫಿರಂಗಿ ವಾಹನಕ್ಕೆ ಕುದುರೆ ಯನ್ನು ಕಟ್ಟಿ ಯುದ್ಧರಂಗಕ್ಕೆ ಕರೆದೊಯ್ಯುತ್ತಿದ್ದರು. ಲಾರಿ ಅದೇ ಫಿರಂಗಿ ವಾಹನವನ್ನು ತಂದ. ಫಿರಂಗಿಯನ್ನು ತೆಗೆದು ಅದರ ಸ್ಥಳದಲ್ಲಿ ಒಂದು ವ್ಯಾಗನ್ ಇರಿಸಿದ. ಒಳಗೆ ಮೆತ್ತನೆಯ ಹಾಸನ್ನು ಹಾಸಿದ, ಕುದುರೆಗಳನ್ನು ಕಟ್ಟಿದ. ಯುದ್ಧ ನಡೆಯುತ್ತಿರುವಾಗಲೇ ಗಾಯಾಳುಗಳನ್ನು ಈ ‘ಹಾರುವ ಆಂಬ್ಯುಲೆನ್ಸ್’ ಮೂಲಕ ದೂರಕ್ಕೆ ಸಾಗಿಸುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸಿದ. ೧೭೯೩ರ ರೈನ್ ಯುದ್ಧದಲ್ಲಿ ಇದನ್ನು ಬಳಸಿದ. ಲಾರಿ ನೆಪೋಲಿಯನ್ ಸೈನ್ಯವನ್ನು ಸೇರಿ ಅಲ್ಲಿಯೂ ಉತ್ತಮ ವ್ಯವಸ್ಥೆಯನ್ನು ರೂಪಿಸಿದ.

ಫ್ರೆಂಚ್ ಸೈನ್ಯವು ೧೭೯೮-೧೮೦೧ರ ನಡುವೆ ಈಜಿಪ್ಟಿನ ಮೇಲೆ ಆಕ್ರಮಣ ಮಾಡಿತು. ಆಗ ಒಂಟೆಗಳು ಎಳೆಯುವ ಆಂಬ್ಯುಲೆನ್ಸ್ ಅನ್ನು ಲಾರಿ ರೂಪಿಸಿದ.
೧೮೩೨ರಲ್ಲಿ ಲಂಡನ್ ನಗರವನ್ನು ಕಾಲರಾ ಕಾಡಿತು. ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳು ನೆರವಾದವು. ಅಂದು ಈ ತುರ್ತು ಆಂಬ್ಯುಲೆನ್ಸ್ ಸೇವೆಯ ಮಹತ್ವದ ಬಗ್ಗೆ ‘ದಿ ಟೈಮ್’ ಪತ್ರಿಕೆಯು ‘ಕಾಲರಾ ಪೀಡಿತನನ್ನು ಆಂಬ್ಯುಲೆನ್ಸ್‌ನಲ್ಲಿ ಮಲಗಿಸುತ್ತಿದ್ದ ಹಾಗೆಯೇ ಚಿಕಿತ್ಸೆಯನ್ನು ಆರಂಭಿಸುತ್ತಿದ್ದರು. ಇದರಿಂದ ಅಮೂಲ್ಯ ಸಮಯವು ಉಳಿಯುತ್ತಿತ್ತು.

ರೋಗಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಇದು ವೈದ್ಯಕೀಯ ನೆರವು ದೊರೆಯುವ ಮೊದಲೇ ನೀಡುತ್ತಿದ್ದ ತುರ್ತು ಪ್ರಥಮ ಚಿಕಿತ್ಸೆಯೆನಿಸಿ ಕೊಂಡು ಹಲವು ಜೀವಗಳನ್ನುಳಿಸಿತು’ ಎಂದು ಬರೆಯಿತು. ಅಮೆರಿಕದಲ್ಲಿ ಅಂತರ್ಯುದ್ಧವು ೧೮೬೧-೧೮೬೫ರವರೆಗೆ ನಡೆಯಿತು. ಯೂನಿಯನ್ ಮಿಲಿಟರಿ ವೈದ್ಯರಾದ ಜೋಸೆಫ್ ಬಾರ್ನ್ಸ್ ಮತ್ತು ಜೊನಾಥನ್ ಲೆಟರ್ಮನ್, ಲಾರಿ ರೂಪಿಸಿದ ಹಾರುವ ಆಂಬ್ಯುಲೆನ್ಸ್ ಪರಿಕಲ್ಪನೆಯನ್ನು ಸ್ವೀಕರಿಸಿ ತಮ್ಮದೇ ಆದ ‘ರುಕರ್ ಆಂಬ್ಯುಲೆನ್ಸ್’ ರೂಪಿಸಿ ದರು. ೪ ಚಕ್ರಗಳ ಗಾಡಿಯ ಒಳಗೆ ೩-೪ ಗಾಯಾಳುಗಳನ್ನು ಮಲಗಿಸಬಹುದಾಗಿತ್ತು. ಒಂದರ್ಥದಲ್ಲಿ ಅದು ಸಂಚಾರಿ
ಆಸ್ಪತ್ರೆಯ ಹಾಗೆಯೇ ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತಿತ್ತು. ಇದೇ ಅವಽಯಲ್ಲಿ ಗಾಯಾಳುಗಳನ್ನು ಸ್ಟೀಮ್ ಬೋಟ್‌ಗಳಲ್ಲಿ ಮಲಗಿಸಿ ಆಸ್ಪತ್ರೆಗೆ ಸಾಗಿಸಿದರು.

ಬೋಟ್ ಆಂಬ್ಯುಲೆನ್ಸ್ ಎಂಬ ಪರಿಕಲ್ಪನೆ ಜಾರಿಗೆ ಬಂತು. ಹಾಗೆಯೇ ರೈಲಿನ ಮೂಲಕವೂ ಗಾಯಾಳುಗಳನ್ನು ಸಾಗಿಸುವ ವ್ಯವಸ್ಥೆಯನ್ನು ಆರಂಭಿಸಿದರು.
೧೮೬೫. ಅಮೆರಿಕದ ಒಹಾಯೋ ಪ್ರಾಂತದ ಸಿನ್ಸಿನಾಟಿ ಆಸ್ಪತ್ರೆ. ಮೊದಲ ಆಸ್ಪತ್ರೆ ಸಂಬಂಽತ ಆಂಬ್ಯುಲೆನ್ಸ್ ಸೇವೆಯು ಆರಂಭವಾಯಿತು. ನಂತರ ನ್ಯೂಯಾರ್ಕಿನ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಎಡ್ವರ್ಡ್ ಡಾಲ್ಟನ್ ಎಂಬ ಮಾಜಿ ಮಿಲಿಟರಿ ಸರ್ಜನ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ. ಇವನು ಮೊದಲ ಬಾರಿಗೆ ಆಂಬ್ಯುಲೆನ್ಸ್‌ನಲ್ಲಿ ಮಾರ್ಫಿನ್ ಮತ್ತು ಬ್ರಾಂಡಿಯನ್ನಿರಿಸಿದ. ನೋವನ್ನು ತಕ್ಷಣ ಶಮನಗೊಳಿಸಲು ಇವು ಉಪಯುಕ್ತವಾಗಿದ್ದವು. ಮುರಿದ ಮೂಳೆಗಳನ್ನು ಸ್ಥಿರವಾಗಿಡಲು ದಬ್ಬೆಗಳನ್ನು ಇರಿಸಿದ. ವಾಂತಿ ಮಾಡಿಸಲು ಪಂಪ್ ಇರಿಸಿದ. ೧೮೭೦ನೆಯ ವರ್ಷವೊಂದ ರಲ್ಲಿ ಈತ ೧೪೦೧ ತುರ್ತು ಕರೆಗಳನ್ನು ಸ್ವೀಕರಿಸಿ, ರೋಗಿಗಳಿಗೆ ತುರ್ತುಚಿಕಿತ್ಸೆ ನೀಡಿ, ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿದ.

ಕೊನೆಗೆ ಆಸ್ಪತ್ರೆಯ ಆಡಳಿತ ವರ್ಗವು ರಾಬರ್ಟ್ ಟೇಲರ್ ಎಂಬ ಪೂರ್ಣಾವಧಿ ವೈದ್ಯರನ್ನು ನೇಮಿಸಿಕೊಂಡಿತು. ಅವರ ಸೇವೆಯನ್ನು ವಿಶೇಷವಾಗಿ ಆಂಬ್ಯುಲೆನ್ಸ್‌ಗೆ ನಿಗದಿಗೊಳಿಸಿತು. ೧೮೬೭ರಲ್ಲಿ ಲಂಡನ್ನಿನ ಮೆಟ್ರೋಪಾಲಿಟನ್ ಅಸೈಲಮ್ ಬೋರ್ಡ್ ೬ ಕುದುರೆಗಾಡಿಗಳನ್ನು ಆಂಬ್ಯುಲೆನ್ಸ್ ಆಗಿ
ಬಳಸಲು ಆರಂಭಿಸಿತು. ಅಂದಿನ ದಿನಗಳಲ್ಲಿ ಸಿಡುಬು ತೀವ್ರ ವಾಗಿದ್ದ ಕಾರಣ, ಸಿಡುಬು ರೋಗಿಗಳು ಈ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸೇರಲಾ ರಂಭಿಸಿದರು. ಈ ವಾಹನ ಗಳಲ್ಲಿ ರೋಗಿಯ ಜತೆ ಸಂಬಂಧಿಕರೊಬ್ಬರು ಪ್ರಯಾಣ ಮಾಡುವ ವ್ಯವಸ್ಥೆಯಿತ್ತು. ಇದುವರೆಗೂ ದೊರೆಯುತ್ತಿದ್ದ ನಾನಾ ರೀತಿಯ ಆಂಬ್ಯುಲೆನ್ಸ್ ಸೇವೆಯು ಉಚಿತವಾಗಿತ್ತು. ಈಗ ಮೊದಲ ಬಾರಿಗೆ ಶ್ರೀಮಂತರು ಟೆಲಿಗ್ರಾಮ್ ನೀಡಿ ಆಂಬ್ಯುಲೆನ್ಸ್ ಸೇವೆಯನ್ನು ತಮ್ಮ ಮನೆಗೆ ತರಿಸಿಕೊಳ್ಳುತ್ತಿ ದ್ದರು. ಸೂಕ್ತ ಹಣ ನೀಡಿ, ಆಂಬ್ಯುಲೆನ್ಸ್ ಮೂಲಕ ಸಕಾಲದಲ್ಲಿ ಆಸ್ಪತ್ರೆ ಸೇರುವ ಹೊಸ ಪದ್ಧತಿಯು ಲಂಡನ್ನಿನಲ್ಲಿ ಜನಪ್ರಿಯವಾಯಿತು.