ಶಶಾಂಕಣ
ಶಶಿಧರ ಹಾಲಾಡಿ
ನಿಜಕ್ಕೂ ಇದು ಒಂದು ನೋವಿನ ಸಂಗತಿ. ವೈದ್ಯವಿಜ್ಞಾನ, ಸಾಮಾಜಿಕ ಸೌಕರ್ಯ, ತಂತ್ರಜ್ಞಾನ, ಪೌಷ್ಟಿಕ ಆಹಾರ ಮೊದಲಾದ ಪ್ರಮುಖ ನಾಗರಿಕ ಸೌಲಭ್ಯಗಳಲ್ಲಿ ಉನ್ನತ ಸ್ಥಾನ ದಲ್ಲಿರುವ ಅಮೆರಿಕವು (ಯುಎಸ್) ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಒಂದು ದುರ್ಭರ ದಾಖಲೆಗೆ ಸಾಕ್ಷಿಯಾಯಿತು.
ಮೊನ್ನೆ ಸೋಮವಾರ ದಂತೆ, ಈ ವೈರಸ್‌ನಿಂದ ಅಮೆರಿಕದಲ್ಲಿ ಒಟ್ಟು 500000 ಜನರು ಮೃತರಾದ ಅಂಕಿಅಂಶ ಹೊರಬಿತ್ತು. ದೈತ್ಯ ಅಮೆರಿಕವೇ ಆಗಲಿ, ಬೇರಾವುದೇ ದೇಶವೇ ಆಗಲಿ, ಒಂದು ರೋಗದಿಂದಾಗಿ 500000 ಜನರನ್ನು ಕಳೆದುಕೊಂಡಿದೆ ಎಂದರೆ ಅದೊಂದು ದುಃಖದ ಸಂಗತಿ. ಜತೆಗೆ ಅತ್ಯುತ್ತಮ ಮತ್ತು ಆಧುನಿಕ ವೈದ್ಯಕೀಯ ಸೇವೆಯನ್ನು ಹೊಂದಿರುವ ಅಮೆರಿಕ ದಂತಹ ಅಮೆರಿಕವೇ ಕೋವಿಡ್-19 ವಿರುದ್ಧ ಹತಾಶನಾಗಿ, ವಿಷಣ್ಣನಾಗಿ, ವಿನೀತನಾಗಿ ನಿಂತಿದೆ ಎಂದರೆ ಅದು ಕೇವಲ ಅಮೆರಿಕದ ಸೋಲು ಮಾತ್ರವಲ್ಲ, ಅದು ಇಂದಿನ ಆಧುನಿಕ ನಾಗರಿಕತೆಯ ಸೋಲು ಎಂದೇ ಹೇಳಬೇಕು.
2020-21 ಅವಧಿಯು ಆಧುನಿಕ ಮಾನವನ ಇತಿಹಾಸದಲ್ಲಿ ನೋವಿನ ದಾಖಲೆಯನ್ನು ಬರೆದ ಅವಧಿ. ವೈರಸ್ ಸೋಂಕಿಗೆ ಔಷಧವಿಲ್ಲದೆ, ಪರಿಣಾಮಕಾರಿ ಚಿಕಿತ್ಸೆ ಇಲ್ಲದೇ, ಎಲ್ಲಾ ದೇಶಗಳು, ಅದರಲ್ಲೂ ಮುಂದುವರಿದ ದೇಶಗಳು ಅಸಹಾಯ ಕತೆ ಯಿಂದ ಕೈ ಕೈ ಹಿಸುಕಿಕೊಳ್ಳುವಂತಾದ ಕಾಲ ಇದು. ಹಿಂದೆಂದೂ ಕೇಳದಂತಹ ಲಾಕ್‌ಡೌನ್, ವಿಮಾನ ಪಯಣದ ನಿರ್ಬಂಧ, ಮನರಂಜನೆ ಮತ್ತು ಪ್ರವಾಸದ ನಿರ್ಬಂಧ ವಿಧಿಸಿದ್ದು ಒಂದೆಡೆಯಾದರೆ, ಇಷ್ಟೆಲ್ಲಾ ಮುಂಜಾಗ್ರತೆ ಕೈಗೊಂಡರೂ, ಈ ವೈರಸ್ ಸೋಂಕಿಗೆ ಇದುವರೆಗೆ ಜಗತ್ತಿನಲ್ಲಿ ಬಲಿಯಾದವರ ಸಂಖ್ಯೆ 2500000 (25.2.2021ರ ಅಂಕಿ ಅಂಶ). ಈಗ ಕೆಲವು ವಾರಗಳಿಂದ ಲಸಿಕೆಯನ್ನು ಜನರಿಗೆ ನೀಡುವ ಅಭಿಯಾನ ಆರಂಭವಾಗಿದ್ದರೂ ಕೋವಿಡ್-19 ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ದೊಡ್ಡಣ್ಣ ಎನಿಸಿರುವ ಅಮೆರಿಕದ ವಿಚಾರಕ್ಕೆ ಬಂದರೆ, ಜಗತ್ತಿನಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆಯ ಶೇ.20 ರಷ್ಟು ಜನರು ಅಮೆರಿಕನ್ನರು. ಜತೆಗೆ, ಅಲ್ಲಿನ ಮೂಲ ನಿವಾಸಿಗಳು, ಆಫ್ರಿಕನ್ ಮೂಲದವರು ಶೇಕಡಾವಾರು ಹೆಚ್ಚಿನ ಹಾನಿ
ಅನುಭವಿಸಿದ್ದಾರೆ. ಇದು ಒಟ್ಟಾರೆ ನೋವಿನ ಸಂಗತಿ ಮತ್ತು ಮುಂದುವರಿದ ದೇಶ ಎನಿಸಿರುವ ಅಮೆರಿಕದವರಿಗೆ ಅರಗಿಸಿ ಕೊಳ್ಳಲು ಆಗದಷ್ಟು ದುಃಖದ ಸಂಗತಿ.
ತಂತ್ರಜ್ಞಾನ ಮತ್ತು ನಾಗರಿಕ ಸೌಲಭ್ಯಗಳ ಕುರಿತು ಸಣ್ಣ ಮಟ್ಟದ ಹೆಮ್ಮೆ ಹೊಂದಿದ್ದ ಯುಎಸ್, ಯುಕೆ, ಇಟಲಿ ಮೊದಲಾದ ದೇಶಗಳ ಹೆಮ್ಮೆಯ ಬಲೂನನ್ನು ಟುಸ್ ಎಂದು ಒಡೆದ ಕುಖ್ಯಾತಿಯೂ ಈ ಕೋವಿಡ್-19 ವೈರಸ್‌ನದು. ಅಮೆರಿಕದಲ್ಲಿ ಕೋವಿಡ್-19 ಗೆ ಬಲಿಯಾದ 500000 ಜೀವಗಳ ಗೌರವಾರ್ಥ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಯಿತು,
ಪ್ರಮುಖ ಚರ್ಚ್‌ನ ಗಂಟೆಯೊಂದನ್ನು 500 ಸಲ ಬಾರಿಸಿದರು, ಅಲ್ಲಿನ ಅಧ್ಯಕ್ಷರು ಮೊಂಬತ್ತಿ ಹಚ್ಚಿ ಮೌನವಾಚರಿಸಿದರು.
ಅಮೆರಿಕದ ಅಧ್ಯಕ್ಷರೂ ಸೇರಿದಂತೆ, ಅಲ್ಲಿನ ವಿಜ್ಞಾನಿಗಳಿಗೆ, ಪ್ರಾಜ್ಞರಿಗೆ, ವೈದ್ಯಕೀಯ ಸೇವೆಯ ತಜ್ಞರಿಗೆ, ಅಧಿಕಾರಿಗಳಿಗೆ ಈ ಪ್ರಮಾಣದ ಸಾವು – ನೋವು ನಿಜಕ್ಕೂ ಶಾಕ್ ನೀಡಿದೆ. ಎಷ್ಟೇ ಉತ್ತಮ, ಆಧುನಿಕ ಚಿಕಿತ್ಸೆ ನೀಡಿದರೂ, ತಮ್ಮ ದೇಶವು ಒಂದೇ
ವರ್ಷದ ಅವಧಿಯಲ್ಲಿ 500000 ಜನರನ್ನು ಕಳೆದುಕೊಳ್ಳುವಂತಾದದ್ದು ಹೇಗೆ ಎಂಬ ಪ್ರಶ್ನೆಯನ್ನು ಅವರೇ ಕೇಳಿ ಕೊಳ್ಳುತ್ತಿದ್ದಾರೆ.
ಜಗತ್ತಿನ ಶೇ.4 ರಷ್ಟು ಜನಸಂಖ್ಯೆ ಹೊಂದಿರುವ ಯು.ಎಸ್., ಕೋವಿಡ್-19 ನಿಂದಾದ ಜಾಗತಿಕ ಸಾವಿನ ಶೇ.20ನ್ನು ತನ್ನ ನೆಲದಲ್ಲಿ ಕಾಣಬೇಕಾಯಿತು. ಅಮೆರಿಕಕ್ಕಿಂತ ನಾಲ್ಕು ಪಟ್ಟು ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಒಟ್ಟು ಸಾವು
157000. ಇಂತಹ ಅಂಕಿ ಅಂಶಗಳನ್ನು ಹೋಲಿಸಿಕೊಳ್ಳುತ್ತಾ, ಅಮೆರಿಕದವರು ತಾವೆಲ್ಲಿ ಎಡವಿದೆವು ಎಂದು ಚಿಂತಿಸುತ್ತಿದ್ದಾರೆ.
ಕೋವಿಡ್-19 ಸಂಬಂಧಿತ ಮೊದಲ ಸಾವು ಅಮೆರಿಕದಲ್ಲಿ ಸಂಭವಿಸಿದ್ದು ಮಾರ್ಚ್ 2020ರಲ್ಲಿ. ಆ ಸಮಯಕ್ಕಾಗಲೇ, ಆ ಅಪಾಯಕಾರಿ ವೈರಸ್‌ನ ಸಾಕಷ್ಟು ಮಾಹಿತಿಯನ್ನು ಆ ಪ್ರಬಲ ದೇಶ ಕಲೆಹಾಕಿತ್ತು. ಅದಕ್ಕೂ ನಾಲ್ಕು ತಿಂಗಳುಗಳ ಮುಂಚೆ ಚೀನಾದಲ್ಲಿ ಮೊದಲ ಬಾರಿ ಕಂಡುಬಂದ ಕೋವಿಡ್-19 ವೈರಸ್, ವಿಶ್ವದ ಎಲ್ಲಾ ದೇಶಗಳಿಗೆ ಅದಾಗಲೇ ಹರಡಲು ಆರಂಭಿಸಿತ್ತು. (28.2.2020 ರಂದು ಅಮೆರಿಕದಲ್ಲಿ ಮೊದಲ ಸಾವು ಕಂಡುಬಂದರೆ, ಭಾರತದಲ್ಲಿ ಮೊದಲ ಬಲಿ ಕಲಬುರಗಿಯಿಂದ 11.3.2020ರಂದು ವರದಿ ಯಾಯಿತು.) ಚೀನಾದಿಂದ ವರದಿಯಾದ ಈ ವೈರಸ್ ವಿರುದ್ಧ ಅಮೆರಿಕದವರಿಗೆ ಮುನ್ನೆಚ್ಚರಿಕೆ ಕೈಗೊಳ್ಳಲು ಮೂರು ತಿಂಗಳುಗಳ ಸಮಯ ದೊರಕಿತ್ತು.
ಆದರೆ, ಅಮೆರಿಕದ ಅಂದಿನ ಅಧ್ಯಕ್ಷ ಟ್ರಂಪ್ ಅವರು, ಕೋವಿಡ್-19ನ್ನು ‘ಚೀನೀ ವೈರಸ್’ ಎಂದು ಬಹಿರಂಗವಾಗಿ ಅಪಹಾಸ್ಯ ಮಾಡುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದರು. ಇದು ಜನಾಂಗೀಯ ತಾರತಮ್ಯ ಎನಿಸುವ ಜತೆಯಲ್ಲೇ, ಆ ವೈರಸ್‌ನ
ಅಪಾಯ ಕಾರಿ ಸ್ವರೂಪವನ್ನು ಡೌನ್‌ಪ್ಲೇ ಮಾಡಲು ಟ್ರಂಪ್ ಯತ್ನಿಸಿದರು. ಇತ್ತ ಜಗತ್ತಿನಾದ್ಯಂತ ವೈರಸ್ ಬಹುವೇಗವಾಗಿ ಹರಡುತ್ತಿರುವಾಗಲೇ, ಅತ್ತ ಅಮೆರಿಕದ ಅಂದಿನ ಅಧ್ಯಕ್ಷರು ಚಿತ್ರಿವಿಚಿತ್ರ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾದರು.
ಟಾಯಿಲೆಟ್ ಕ್ಲೀನ್ ಮಾಡುವ ದ್ರವವನ್ನು ಕುಡಿಯಿರಿ ಎಂದು ಅವರು ಹೇಳಿದ ಮಾತನ್ನು ನಂಬಿ, ಅಮೆರಿಕದ ಕೆಲವು
ನಾಗರಿಕರು ಅದನ್ನು ಕುಡಿದು, ಜೀವಹಾನಿ ಮಾಡಿಕೊಂಡದ್ದೂ ಉಂಟು! ಯಾವುದೇ ವೈಜ್ಞಾನಿಕ ಆಧಾರವಿಲ್ಲದೇ ಇದ್ದರೂ, ಮಲೇರಿಯಾ ಮಾತ್ರೆ ತಿನ್ನಿ, ರೋಗ ಗುಣಮಾಡಿಕೊಳ್ಳಿ ಎಂದು ಟ್ರಂಪ್ ಹೇಳಿದ್ದಂತೂ ಒಂದು ರೀತಿಯಲ್ಲಿ ಅಕ್ಷಮ್ಯ. ಅಷ್ಟು ಮಾತ್ರವಲ್ಲ, ಮಲೇರಿಯಾ ಮತ್ತು ಇತರ ಕೆಲವು ರೋಗಗಳ ವಿರುದ್ಧ ಬಳಸುವ ಹೈಟ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳನ್ನು
ಭಾರೀ ಪ್ರಮಾಣದಲ್ಲಿ ಅಮೆರಿಕಕ್ಕೆ ತರಿಸಿಕೊಂಡರು!
ಯಾವುದೇ ಕ್ಲಿನಿಕಲ್ ಟ್ರಯಲ್ ಮತ್ತು ಅಧ್ಯಯನ ನಡೆಸದೇ ಹೈಟ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಯನ್ನು ಸೇವಿಸಿ ಕೋವಿಡ್-19 ಸೋಂಕನ್ನು ಗುಣಪಡಿಸಬಹುದು ಎಂದು ಟ್ರಂಪ್ ಹೇಳಿದ ಶೈಲಿ ಹೇಗಿತ್ತೆಂದರೆ, ಹಳ್ಳಿ ಮೂಲೆಯಲ್ಲಿ ‘ಕ್ವಾಕ್’ ಡಾಕ್ಟರುಗಳು ಕೈಗೆ ಸಿಕ್ಕಿದ ಮಾತ್ರೆಯನ್ನು ಅಮಾಯಕ ರೋಗಿಗಳಿಗೆ ತಿನ್ನಿಸಿದಂತಿತ್ತು!
ಬಲಾಢ್ಯ ಅಮೆರಿಕವು ಕೋವಿಡ್-19 ವೈರಸ್ ನಿಂದಾಗಿ 500000 ಜೀವ ಕಳೆದುಕೊಂಡ ಈ ನೋವಿನ ಸಂದರ್ಭದಲ್ಲಿ, ಅಲ್ಲಿನ ವರು ಹಿಂದಿನ ಅಧ್ಯಕ್ಷ ಟ್ರಂಪ್ ಮೇಲೆ ಸಾಕಷ್ಟು ಗೂಬೆ ಕೂರಿಸುತ್ತಿದ್ದಾರೆ. ಟ್ರಂಪ್ ಆಡಳಿತವು ಶಿಸ್ತಿನ ಮತ್ತು ಕ್ರಮಬದ್ಧ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೆ ಇಷ್ಟೊಂದು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂದೇ ಹೇಳುತ್ತಿದ್ದಾರೆ.
ಕೋವಿಡ್-19 ವೈರಸ್ ಜತೆಯಲ್ಲೇ ಅಮೆರಿಕದ ಹಿಂದಿನ ಅಧ್ಯಕ್ಷರು ಅಲ್ಲಿ 2020ರ ಖಳನಾಯಕರಾಗಿ ಹೊರಹೊಮ್ಮಿದ್ದಾರೆ. ಆದರೆ, ಈ ದುರಂತದಲ್ಲಿ ಅಲ್ಲಿನ ನಾಗರಿಕರ ಹೊಣೆಯನ್ನೂ ತಳ್ಳಿಹಾಕುವಂತಿಲ್ಲ. ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಬರುವ ಅಲ್ಲಿನ ಹಬ್ಬಗಳಾದ ಥ್ಯಾಂಕ್ಸ್‌ಗಿವಿಂಗ್ ಡೇ, ಕ್ರಿಸ್‌ಮಸ್ ಸಮಯದಲ್ಲಿ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ, ಬಹುಬೇಗನೆ ವೈರಸ್ ಹರಡುವಂತೆ ಮಾಡಿಕೊಟ್ಟವರು ಅಲ್ಲಿನ ನಾಗರಿಕರು! ಆ ಸಮಯದಲ್ಲಿ ವ್ಯಾಪಕವಾಗಿ ಹರಡಿದ ವೈರಸ್ ಸೋಂಕು, ಚಳಿಯ ದಿನಗಳ ಸಂಕಷ್ಟವನ್ನು ಜತೆಗೂಡಿಸಿಕೊಂಡು, ದಾಖಲೆ ಮರಣಕ್ಕೆ ಕಾರಣವೆನಿಸಿದೆ ಎಂದಿದ್ದಾರೆ ಅಮೆರಿಕದ ತಜ್ಞರು.
19.1.2021ರಂದು ಅಮೆರಿಕದಲ್ಲಿ ಒಟ್ಟು 400000 ಸಾವು ಸಂಭವಿಸಿತ್ತು. 20.20.2021 ರಂದು ಒಟ್ಟು ಸಾವು 500000. ಅಂದರೆ, 32 ದಿನಗಳ ಅವಧಿಯಲ್ಲಿ ಅಮೆರಿಕದಲ್ಲಿ 100000 ಜನರು ವೈರಸ್‌ಗೆ ಬಲಿಯಾಗಿದ್ದಾರೆ. ಇದು ನಿಜಕ್ಕೂ ನೋವಿನ ವಿಷಯ. ಎರಡನೆಯ ಮಹಾಯುದ್ಧ (405000 ಸಾವು), ವಿಯೆಟ್ನಾಂ ಯುದ್ಧ (58000), ಕೊರಿಯಾ ಯುದ್ಧ (36000)ದಲ್ಲಿ ತಮ್ಮ ದೇಶ ಕಳೆದುಕೊಂಡ ಯೋಧರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಈ ರೋಗಕ್ಕೆ ಬಲಿಯಾದರು ಎಂಬ ವಿಚಾರವು ಅಮೆರಿಕದವರಿಗೆ ಮತ್ತೊಂದು ಆಘಾತ ತಂದಿದೆ.
ಯುದ್ಧದಲ್ಲಿ ಸಂಭವಿಸಿದ ಸಾವುಗಳಿಗೆ, ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನು ಹೋಲಿಸುವುದು ಎಷ್ಟು ಸಮಂಜಸ ಎಂಬುದನ್ನು ಅಮೆರಿಕದವರೇ ಉತ್ತರಿಸಬೇಕು. ಅದಿರಲಿ, ಅದೇಕ ಅಮೆರಿಕ ದೇಶವು ಈ ರೋಗದಿಂದ ಈ ಪ್ರಮಾಣದ ಜನರನ್ನು ಕಳೆದುಕೊಂಡಿತು? ಜೀನ್ಸ್ ಕಾರಣವೆ? ಆಹಾರ ಶೈಲಿಯ ಪ್ರಭಾವವೆ? ರೋಗ ನಿರೋಧಕ ಶಕ್ತಿಯ ಕೊರತೆಯೆ? ಅಥವಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದೇ ಮುಖ್ಯ ಕಾರಣವೆ? ಪೌಷ್ಟಿಕ ಆಹಾರವನ್ನು ಬಾಲ್ಯದಿಂದಲೂ ಸೇವಿಸಿ, ಕಾಲದಿಂದ ಕಾಲಕ್ಕೆ ವೈದ್ಯಕೀಯ ತಪಾಸಣೆ ಪಡೆಯುತ್ತಾ, ಶಕ್ತಿವಂತರೆನಿಸಿರುವ ಅಮೆರಿಕದ ಜನರು ಈ ಒಂದು ವೈರಸ್ ದಾಳಿಗೆ ತತ್ತರಿಸಿ ಹೋಗಿರುವ ವಿಷಯವು, ಭಾರತದಲ್ಲಿರುವ ನಮಗಂತೂ ಸಖೇದಾಚ್ಚರಿಯೇ ಸರಿ.
ಆ ಮುಂದುವರಿದ ದೇಶದಲ್ಲಿರುವ ಸುಸಜ್ಜಿತ ವೈದ್ಯಕೀಯ ಸೌಕರ್ಯ, ಅಲ್ಲಿನ ತಂತ್ರಜ್ಞಾನ, ವೈದ್ಯಕೀಯ ಇನ್ಸೂರೆನ್ಸ್ ವ್ಯಾಪ್ತಿ ಸಹ ಅಲ್ಲಿನ ದುರಂತವನ್ನು ತಪ್ಪಿಸಲಾಗದೇ ಇದ್ದದ್ದು ಆಘಾತಕಾರಿ ವಿಷಯ. ಮೇಲುಮೇಲಿನಿಂದ ನೋಡಿದರೆ, ಕೋವಿಡ್-19
ಸೋಂಕಿನ ವಿಚಾರದಲ್ಲಿ, ಶ್ರೀಮಂತ ರಾಷ್ಟ್ರಗಳಿಗಿಂತ ಬಡ ರಾಷ್ಟ್ರಗಳೇ ಎಷ್ಟೋ ಮೇಲು. ಇದಕ್ಕೇನು ಕಾರಣ ಎಂದು ತಜ್ಞರು ಇನ್ನಷ್ಟೇ ಹುಡುಕಬೇಕಾಗಿದೆ. ತಲಾವಾರು ಸೋಂಕು ಮತ್ತು ಬಲಿಯಾದವರ ಸಂಖ್ಯೆಯನ್ನು ಹೋಲಿಸಿದರೆ, ಅಮೆರಿಕಕ್ಕಿಂತ ಭಾರತದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ. ಅಮೆರಿಕದ ಒಂದು ಲಕ್ಷ ಜನರ ಪೈಕಿ 152 ಜನ ಈ ಸೋಂಕಿಗೆ ಬಲಿಯಾಗಿ ದ್ದಾರೆ.
ಯುಕೆ (182), ಇಟಲಿ (158), ಬ್ರೆಜಿಲ್ (118), ಮೆಕ್ಸಿಕೋ (143) ದೇಶಗಳ ತಲಾವಾರು ಸಾವು ಸಹ ಜಾಸ್ತಿಯೇ. ನಮ್ಮ ದೇಶದ ಒಂದು ಲಕ್ಷ ಜನಸಂಖ್ಯೆಯಲ್ಲಿ ಕೇವಲ 12 ಜನ ಮಾತ್ರ ಕೋವಿಡ್-19 ವೈರಸ್‌ಗೆ ಬಲಿಯಾಗಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ಈ ಸೋಂಕು ಮೊದಲು ಕಂಡುಬಂದದ್ದು ಸರಿಸುಮಾರು ಕಳೆದ ವರ್ಷದ ಇದೇ ಸಮಯದಲ್ಲಿ. ಈ ಒಂದು ವರ್ಷದ ಅವಧಿ ಯಲ್ಲಿ ಅಮೆರಿಕ 500000 ಜೀವಗಳನ್ನು ಕಳೆದುಕೊಂಡರೆ, ನಮ್ಮ ದೇಶ 157000 ಜೀವಗಳನ್ನು ಕಳೆದು ಕೊಂಡಿದೆ.
ನಮ್ಮ ದೇಶದ ಬಡತನ, ಗ್ರಾಮೀಣ ಹಿನ್ನೆಲೆ, ಅಪೌಷ್ಟಿಕತೆ, ಪರಿಶುದ್ಧವಲ್ಲದ ವಾತಾವರಣ ಇವೆಲ್ಲವುಗಳನ್ನು ಕಂಡು, ಈ ಸೋಂಕು ಇಲ್ಲಿ ಭಾರೀ ಅನಾಹುತವನ್ನು ಮಾಡಬಹುದು ಎಂದು ವಿದೇಶಿ ತಜ್ಞರು ಹೆದರಿದ್ದರು. ನಮ್ಮ ದೇಶದವರೂ ಬೆದರಿ ದ್ದರು. ಮುಂಬಯಿಯ ಧಾರಾವಿ ಸ್ಲಂನಲ್ಲಿ ಸಾಕಷ್ಟು ಜನರಿಗೆ ಸೋಂಕು ಕಾಣಿಸಿಕೊಂಡಾಗ, ಮುಂದೆ ಅಲ್ಲಿ ಅನಾಹುತವಾಗ ಬಹುದು ಎಂದು ತಲ್ಲಣಗೊಂಡಿದ್ದರು.
ನಮ್ಮ ದೇಶದಲ್ಲೂ ಈ ವೈರಸ್ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಾವು ನೋವು ತಂದಿದೆ. ಆದರೂ, ಅಮೆರಿಕ, ಯುಕೆ ಮೊದಲಾದ ದೇಶಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಕಡಿಮೆ ಇದೆ. ಇದಕ್ಕೆ ಹಲವು ಕಾರಣಗಳಿರಬಹುದು. ಕಳೆದ ಮಾರ್ಚ್ ನಲ್ಲಿ ಬಿಗಿ ಎನಿಸುವ ಲಾಕ್‌ಡೌನ್‌ನ್ನು ನಮ್ಮ ದೇಶದಲ್ಲಿ ಹೇರಲಾಗಿತ್ತು. ಸಾರ್ವಜನಿಕ ರೈಲುಗಳನ್ನು, ಬಸ್‌ಗಳನ್ನು ಸ್ಥಗಿತ ಗೊಳಿಸಿದ ಆ ನಡೆಯು ಬಹು ಕಠಿಣ ಎನಿಸಿದರೂ, ವೈರಸ್ ಹರಡುವಿಕೆಯನ್ನು ಕಡಿಮೆಗೊಳಿಸಲು ಸಹಕರಿಸಿದ್ದಂತೂ ನಿಜ. ಲಾಕ್‌ಡೌನ್ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ನಮ್ಮ ದೇಶ ಕೈಗೊಂಡ ಕಠಿಣ ಕ್ರಮಗಳಿಂದಾಗಿ, ಜನಸಾಮಾನ್ಯರಿಗೆ ಸಾಕಷ್ಟು ಕಷ್ಟಗಳು ಎದುರಾಗಿದ್ದು ನಿಜ, ಆಥಿಕತೆಗೆ ಹೊಡೆತ ಬಿದ್ದದ್ದೂ ನಿಜ, ಅದೆಷ್ಟೋ ಜನರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಸಹ ನಿಜ.
ಆದರೂ, ಈ ವೈರಸ್ ಕಾಟ ಆರಂಭವಾಗಿ ಒಂದು ವರ್ಷದ ನಂತರ ಇಂದು ಸಿಂಹಾವಲೋಕನ ಮಾಡಿದರೆ, ಅಮೆರಿಕ, ಯುಕೆ,
ಬ್ರೆಜಿಲ್, ಮೆಕ್ಸಿಕೊ ಮೊದಲಾದ ದೇಶಗಳ ಸಾವಿನ ಪ್ರಮಾಣವನ್ನು ನೋಡಿದರೆ, ನಮ್ಮ ದೇಶದ ಸ್ಥಿತಿ ಇದ್ದುದರಲ್ಲೇ ಪರವಾಗಿಲ್ಲ ಎಂಬಂತಿರುವುದು ತುಸು ಸಮಾಧಾನದ ಸಂಗತಿ.
ಅಮೆರಿಕ, ಯುಕೆ ಮೊದಲಾದ ದೇಶಗಳ ಶೇಕಡಾವಾರು ಸಾವಿನ ಪ್ರಮಾಣಕ್ಕೆ ಹೋಲಿಸಿದರೆ, ನಮ್ಮ ದೇಶದಲ್ಲಿ ಈ ವೈರಸ್‌ನಿಂದ ಉಂಟಾದ ಸಾವಿನ ಪ್ರಮಾಣ ಕಡಿಮೆಯಾಗಲು ಕಾರಣವೇನು? ಬಹುಷಃ ಇದಕ್ಕೆ ಸಮರ್ಪಕ ಉತ್ತರ ಹುಡುಕಲು ಸಾಕಷ್ಟು ಕಾಲ ಬೇಕಾಗಬಹುದು. ಲಾಕ್‌ಡೌನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇವೆಲ್ಲವನ್ನೂ ನಮ್ಮಲ್ಲಿ ಬಿಗಿಯಾಗಿ ಜಾರಿಗೊಳಿಸಿದ್ದು ಒಂದೆಡೆ. ಜತೆಗೆ ನಮ್ಮ ನಾಡಿನ ಪಾರಂಪರಿಕ ಆಹಾರ ಪದ್ಧತಿ, ಕಷಾಯ ಸೇವನೆ, ಆಯುರ್ವೇದ ಪದ್ಧತಿಯ ಬಳಕೆ ಇವೆಲ್ಲವೂ ವೈರಸ್ ಸೋಂಕನ್ನು ತಡೆಯಲು ಸಹಕಾರಿ ಎನಿಸಿದೆ ಎಂಬ ವಿಚಾರವೂ ಚರ್ಚೆಗೆ ಬಂದಿದೆ.
ಈ ವೈರಸ್ ವಿರುದ್ಧ ಹೋರಾಡಲು ಜೈವಿಕವಾಗಿ ನಮ್ಮ ದೇಶದವರು ಸನ್ನದ್ಧ (ಜೀನ್ಸ್) ಎಂಬ ವಿಷಯವೂ ಕೇಳಿಬಂದಿದೆ. ಬಾಲ್ಯದಲ್ಲಿ ಪಡೆದ ಬಿಸಿಜಿ ಚುಚ್ಚುಮದ್ದು ಸಹಾಯ ಮಾಡಿದೆ ಎಂಬ ವಾದವಿದೆ. ಈ ನಿಟ್ಟಿನಲ್ಲಿ ಹೋಲಿಸಿದರೆ, ನಮ್ಮ ದೇಶವೂ ಸೇರಿದಂತೆ, ಹೆಚ್ಚ ಬಿಸಿಲು ಬೀಳುವಂತಹ ಪ್ರದೇಶಗಳಲ್ಲಿ ವೈರಸ್ ಸೋಂಕು ತುಸು ಕಡಿಮೆ ಎಂಬುದನ್ನು ಗಮನಿಸಬಹುದು. ಅಮೆರಿಕ, ಯುಕೆ ಮೊದಲಾದ ದೇಶಗಳ ಚಳಿ ವಾತಾವರಣ ಸಹ ಅಲ್ಲಿ ವೈರಸ್‌ನ ರೌದ್ರಾವತಾರವನ್ನು ಕೆರಳಿಸಿರಬಹುದು.
ಅದೇನೇ ಇದ್ದರೂ, ಕೋವಿಡ್-19 ವಿರುದ್ಧ ನಾವು ಎಚ್ಚರ ತಪ್ಪವಂತಿಲ್ಲ, ಜಾಗ್ರತೆಯನ್ನು ವಹಿಸುವುದನ್ನು ಮುಂದುವರಿಸ ಬೇಕು.
ಮುಖಗವಸು, ಸೋಪಿನಿಂದ ಕೈತೊಳೆಯುವುದ, ದೈಹಿಕ ಅಂತರ ಪಾಲಿಸುವುದನ್ನು ಮುಂದುವರಿಸಬೇಕು. ಈಗ ಲಸಿಕೆ ಅಭಿಯಾನ ಆರಂಭವಾಗಿದ್ದು, ಸದ್ಯದಲ್ಲೇ ಎಲ್ಲರಿಗೂ ಲಸಿಕೆಯ ಸುರಕ್ಷಾ ಕವಚ ದೊರೆಯಲಿ ಎಂದು ಹಾರೈಸೋಣ.