Thursday, 12th December 2024

ಅಮೆರಿಕ ರಷ್ಯಾ ಜಗಳದಲ್ಲಿ ಯುರೋಪ್ ಬಡವಾಯ್ತು

ವಿದೇಶವಾಸಿ

dhyapaa@gmail.com

ಅಸಲಿಗೆ ಈ ಯುದ್ಧ ನಡೆಯುತ್ತಿರುವುದೇ ಸಾಂಪ್ರದಾಯಿಕ ವಿರೋಽಗಳಾದ ಅಮೆರಿಕ ಮತ್ತು ರಷ್ಯಾ ನಡುವೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲಿ
ಉಕ್ರೇನ್ ಹೆಸರಿಗೆ ಮಾತ್ರ. ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವುದು ಅಮೆರಿಕಕ್ಕೂ ಹೊಸತಲ್ಲ, ರಷ್ಯಾಕ್ಕೂ ಹೊಸತಲ್ಲ.

ದೊಡ್ಡಣ್ಣ… ವಿಶ್ವದ ದೊಡ್ಡಣ್ಣ!
ಹಣ, ತಂತ್ರಜ್ಞಾನ, ಸಾಮಾಜಿಕ ನ್ಯಾಯ… ಯಾವುದರಿಂದಲೋ ಗೊತ್ತಿಲ್ಲ, ಅಥವಾ ಎಲ್ಲದರಿಂದಲೂ ಅಂದುಕೊಳ್ಳಿ. ವಿಶ್ವದ ಬಹುತೇಕ ದೇಶಗಳು, ಸಹಾಯ ಬಯಸಿ ಅಥವಾ ಯುದ್ಧದ ಭೀತಿಯಿಂದಾ ದರೂ ಅಂದುಕೊಳ್ಳಿ. ಅಮೆರಿಕಕ್ಕೆ ಈ ಪಟ್ಟ ಯಾರು ಕೊಟ್ಟರೋ ಅಥವಾ ಎಲ್ಲರೂ ಸೇರಿಯೇ
ಅಂದುಕೊಳ್ಳಿ, ಅಮೆರಿಕ ದೊಡ್ಡಣ್ಣ ಎಂದು ಕರೆಸಿಕೊಳ್ಳುವುದಂತೂ ಹೌದು.

ಅಮೆರಿಕ ಇದುವರೆಗೆ ಸಾಕಷ್ಟು ಯುದ್ಧದಲ್ಲಿ ಭಾಗವಹಿಸಿದೆ. ಯುದ್ಧ ಗೆಲ್ಲುವುದಕ್ಕೆ ಕೆಲವು ಬಾರಿ ಮಾನವೀಯತೆಯ ದಾರಿ ಬಿಟ್ಟು ಅಮಾನುಷ ಕೃತ್ಯಗಳನ್ನೂ ಎಸಗಿದೆ. ಸಾಕಷ್ಟು ಬಾರಿ ರಾಸಾಯನಿಕ ಮತ್ತು ಅಣ್ವಸಗಳನ್ನೂ ಬಳಸಿದೆ. ಇದರ ಪರಿಣಾಮವನ್ನು ಕೆಲವು ಪೀಳಿಗೆಗಳು ಅನುಭವಿಸಿವೆ, ಇನ್ನೂ ಅನುಭವಿಸುತ್ತಿವೆ. ಜಪಾನಿನ ಹಿರೋಷಿಮಾ-ನಾಗಾಸಾಕಿ ಮೇಲೆ ನಡೆಸಿದ ಅಣ್ವಸದ ದಾಳಿ ಯಾರಿಗೆ ತಿಳಿದಿಲ್ಲ ಹೇಳಿ? ಆ ಯುದ್ಧದಲ್ಲಿ ಆದ ನಷ್ಟದಿಂದ ಚೇತರಿಸಿಕೊಳ್ಳುವುದಕ್ಕೂ ಮುನ್ನ, ಸುಟ್ಟ ಹೆಣದ ವಾಸನೆ ಆರುವುದಕ್ಕೂ ಮೊದಲು ವಿಯೆಟ್ನಾಂ ಯುದ್ಧಕ್ಕೆ ತಯಾರಾಗಿ ನಿಂತ ದೇಶ ಅಮೆರಿಕ.

ಕಳೆದ ಸುಮಾರು ೨೫೦ ವರ್ಷಗಳಲ್ಲಿ ಅಮೆರಿಕ ಯಾವುದೇ ಯುದ್ಧದಲ್ಲಿ ಭಾಗವಹಿಸದೆ ತಟಸ್ಥವಾಗಿ ಕುಳಿತದ್ದು ೧೫ ವರ್ಷ ಮಾತ್ರ. ಹೋಗಲಿ, ಭಾಗವಹಿಸಿದ ಯುದ್ಧಗಳೆಲ್ಲ ಬೇಗನೆ ಮುಗಿದು ಒಂದು ಸುಖಾಂತ್ಯ ಕಂಡಿದೆಯಾ ಎಂದರೆ, ಅದೂ ಇಲ್ಲ. ಅಮೆರಿಕ ಕಳೆದ ಸುಮಾರು ೮೦ ವರ್ಷಗಳಲ್ಲಿ ಕೊರಿಯಾ, ವಿಯೆಟ್ನಾಂ, ಗಲ ಯುದ್ಧ, ಇರಾಕ್ ಮತ್ತು ಅಫ್ಘಾನಿಸ್ತಾನ ಹೀಗೆ ೫ ದೊಡ್ಡ ಯುದ್ಧಗಳಲ್ಲಿ ಭಾಗವಹಿಸಿದೆ. ಅದರಲ್ಲಿ ಗಲ್ಫ್ ಯುದ್ಧ ಹೊರತುಪಡಿಸಿ, ಉಳಿದೆಲ್ಲ ಯುದ್ಧಗಳಲ್ಲೂ ಸೋಲನುಭವಿಸಿದೆ ಅಥವಾ ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮಾಡಿದಂತೆ ರಾತ್ರೋರಾತ್ರಿ ಬಿಡಾರ ಕಟ್ಟಿಕೊಂಡು ಹೋಗಿದೆ.

ಅಮೆರಿಕ ಭಾಗವಹಿಸಿದ ೨೦ಕ್ಕೂ ಹೆಚ್ಚು ಯುದ್ಧಗಳು ೧ ವರ್ಷಕ್ಕಿಂತ ಹೆಚ್ಚಿನ ಕಾಲಾವಧಿಯವರೆಗೆ ನಡೆದಿದೆ. ೧೫ಕ್ಕೂ ಹೆಚ್ಚು ಯುದ್ಧ ಎರಡೂವರೆ
ವರ್ಷಕ್ಕೂ ಹೆಚ್ಚು ಕಾಲ ನಡೆದಿವೆ. ಅಮೆರಿಕ ಪಾಲ್ಗೊಂಡ ಯುದ್ಧಗಳಲ್ಲಿ ಅತಿಕಮ್ಮಿ ಸಮಯದಲ್ಲಿ ಮುಗಿದ ಯುದ್ಧವೂ ಸುಮಾರು ೭೦ ದಿನ ನಡೆದಿದೆ. ಆದಾಗ್ಯೂ, ಈ ಯುದ್ಧಗಳ ಪರಿಣಾಮ ಏನು ಎಂಬುದು ಇಂದು ಎಲ್ಲರ ಕಣ್ಣಿಗೂ ಕಾಣುತ್ತಿದೆ.

ಇನ್ನು ವ್ಲಾಡಿಮೇರ್ ಪುತಿನ್. ರಷ್ಯಾದ ಇತಿಹಾಸದಲ್ಲಿ ಯುದ್ಧ ಸೋತ ಇತಿಹಾಸವಿರಬಹುದು, ಆದರೆ ಪುತಿನ್ ಕೈಹಾಕಿದ ಯುದ್ಧದಲ್ಲಿ ಸೋತು ಹಿಂತಿರುಗಿದ ಎಂಬುದಿಲ್ಲ. ಅದು ಸರಿಯೋ ತಪ್ಪೋ ಬೇರೆ ವಿಷಯ. ಆತ ಉದ್ಯೋಗ ಆರಂಭಿಸಿದ್ದೇ ರಾಜ್ಯ ಭದ್ರತಾ ಸಮಿತಿಯಲ್ಲಿ. ೧೬ ವರ್ಷ ಅಲ್ಲಿ ದುಡಿದು ರಾಜಕೀಯ ಪ್ರವೇಶಿಸಿದವ. ಪುತಿನ್ ಮಾಡಿದ್ದೆಲ್ಲ ಸರಿ ಅಲ್ಲದಿರಬಹುದು, ಈ ವಿಷಯದಲ್ಲಿ ಆತ ಅನುಭವಿ ಎನ್ನುವುದನ್ನಂತೂ ಅಲ್ಲಗಳೆ ಯುವಂತಿಲ್ಲ.

ಜಾರ್ಜಿಯಾ, ಸಿರಿಯಾ ಮತ್ತು ಕ್ರಿಮಿಯಾದಲ್ಲಿ ರಷ್ಯನ್ ಪಡೆಗಳು ಯುದ್ಧ ಮಾಡಿದ ರೀತಿ ಇದಕ್ಕೆ ಉದಾಹರಣೆ. ಇದುವರೆಗೆ ಪುತಿನ್ ಒಂದು ಯುದ್ಧವನ್ನೂ ಸೋತಿಲ್ಲ. ಉಕ್ರೇನ್ ಯುದ್ಧ ಸೋತರೆ, ಅದು ಪುತಿನ್ ಮೊದಲ ಸೋಲು. ಅದೆಲ್ಲ ಒಂದೆಡೆ ಇರಲಿ. ಕಳೆದ ಫೆಬ್ರವರಿ ೨೪ರಂದು, ರಷ್ಯಾ-ಉಕ್ರೇನ್ ಯುದ್ಧದ ವಾರ್ಷಿಕೋತ್ಸವ! ಯುದ್ಧ ಆರಂಭವಾಗಿ ವರ್ಷ ಕಳೆದರೆ ಅದನ್ನು ಉತ್ಸವ ಅನ್ನಬೇಕೆ? ಅದು ಸಂಭ್ರಮದ ವಿಷಯವಲ್ಲ ವಾದ್ದರಿಂದ, ಹೇಳಬಾರದು. ಆದರೆ ಈ ಯುದ್ಧ ನಡೆಯುತ್ತಿರುವ ರೀತಿ ನೋಡಿದರೆ ರಷ್ಯಾ ಮತ್ತು ಅಮೆರಿಕ ಇಬ್ಬರಿಗೂ ಇದರಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು ಎನಿಸುವುದಿಲ್ಲವೇ? ಇಲ್ಲವಾದರೆ, ಉಕ್ರೇನ್ ದೇಶವನ್ನು ಮುಗಿಸಲು ೩ ದಿನ ಸಾಕು ಎಂದು ಆರಂಭದಲ್ಲಿ ಹೇಳಿಕೊಂಡಿದ್ದ ರಷ್ಯಾ ೩೬೫ (ಇಂದಿಗೆ ೩೬೮) ದಿನವಾದರೂ ಮುಗಿಸುವ ಮೂಡ್‌ನಲ್ಲೇ ಇಲ್ಲ!

ಯಾಕೆ ಮುಗಿಸಬೇಕು? ಈ ಯುದ್ಧ ರಷ್ಯಾಕ್ಕೆ ಎಣಿಸಿದ್ದಕ್ಕಿಂತ ಹೆಚ್ಚಿನ ಲಾಭ ತಂದುಕೊಡುತ್ತಿದೆ. ಈ ವಿಷಯದಲ್ಲಿ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿದೆ. ವರದಿ ನಿಜವೇ ಆಗಿದ್ದರೆ, ಯುದ್ಧ ಆರಂಭವಾದ ನಂತರದಲ್ಲಿ ರಷ್ಯಾದ ಆದಾಯ ಮೊದಲಿಗಿಂತಲೂ ಹೆಚ್ಚಾಗಿದೆ. ಇದನ್ನು
ನಂಬಲೂಬಹುದು. ಇಲ್ಲವಾದರೆ ಈ ಯುದ್ಧ ಇಷ್ಟು ದಿನ ಮುಂದುವರಿಯುತ್ತಿರಲಿಲ್ಲ. ಜತೆಗೆ, ಮೊನ್ನೆಯಷ್ಟೇ ದೇಶದ ಸೇನಾಬಲವನ್ನು ಶೇ.೫೦ರಷ್ಟು
ಹೆಚ್ಚಿಸಲು ಪುತಿನ್ ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ಅಣ್ವಸದ ತಾಕತ್ತು ಹೊಂದಿರುವ ರಷ್ಯಾ ಆಗಾಗ ಅದನ್ನು ಬಳಸುವ ಧಮಕಿ ಹಾಕುತ್ತದೆಯೇ ಹೊರತು ಬಳಸಿಲ್ಲ (ಬಳಸುವುದೂ ಇಲ್ಲ ಬಿಡಿ). ಅದೊಂದು ರೀತಿಯಲ್ಲಿ, ಅಮ್ಮ ‘ಗುಮ್ಮ ಬರುತ್ತಾನೆ’ ಎಂದು ಹೆದರಿಸುವಂತೆ ಅಷ್ಟೇ.

ರಷ್ಯಾಕ್ಕೆ ಆಗುತ್ತಿರುವ ಇನ್ನೊಂದು ಲಾಭವೆಂದರೆ ಐರೋಪ್ಯ ದೇಶಗಳು ಆರ್ಥಿಕವಾಗಿ ಕುಗ್ಗುತ್ತಿರುವುದು. ಇದನ್ನು ಯುದ್ಧಕ್ಕಿಂತ ಮೊದಲು ಪುತಿನ್ ಸಹ ಊಹಿಸಿರಲಿಕ್ಕಿಲ್ಲ. ಪುತಿನ್‌ಗೆ (ಇನ್ನೂ ಕೆಲವರಿಗೆ) ಇದು ಬಯಸದೇ ಬಂದ ಭಾಗ್ಯ. ಅತ್ತ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೂ ಉಕ್ರೇನ್‌ಗೆ ಭೇಟಿಕೊಡಲು ೧ ವರ್ಷದಲ್ಲಿ ಸಿಗದ ಪುರುಸೊತ್ತು ಈಗ ಸಿಕ್ಕಿದೆ, ಅದೂ ಅಚಾನಕ್ ಆಗಿ! ಅಲ್ಲಿಯೇ ಅಚಾನಕ್ ಆಗಿ ೫೦೦ ಮಿಲಿಯನ್ ಡಾಲರ್‌ನ ಶಸಾಸಗಳನ್ನು ಉಕ್ರೇನ್‌ಗೆ ಕಳಿಸುವ ಘೋಷಣೆಯನ್ನೂ ಮಾಡಿ ಆಗಿದೆ.

ಅಲ್ಲಿಗೆ, ಈ ಯುದ್ಧ ಸದ್ಯಕ್ಕೆ ಮುಗಿಯುವುದಿಲ್ಲ ಎಂಬುದಂತೂ ಖಾತ್ರಿಯಾಯಿತು. ಈ ಯುದ್ಧವೇನಾದರೂ ಇಂದು ಈ ಪಾಟಿ ನಡೆಯುತ್ತಿದ್ದರೆ ಅದಕ್ಕೆ ಕಾರಣ ಇಬ್ಬರೇ. ಒಂದು ಪುತಿನ್, ಇನ್ನೊಂದು ಬೈಡನ್. ಇದನ್ನು ಬೇಕಾದರೆ ರಷ್ಯಾ ಮತ್ತು ಅಮೆರಿಕ ಎಂದೂ ಓದಿಕೊಳ್ಳಬಹುದು. ರಷ್ಯಾಕ್ಕಂತೂ ಯುದ್ಧ ನಿಲ್ಲಿಸುವ ಮನಸ್ಸಿಲ್ಲ, ಅಮೆರಿಕ ಮನಸು ಮಾಡಿದರೆ ಈ ಯುದ್ಧ ನಿಲ್ಲಿಸಬಹುದಿತ್ತು. ಆದರೂ ಮಾಡುತ್ತಿಲ್ಲ. ಯಾವತ್ತೂ ಹಾಗೆಯೇ, ಯುದ್ಧ ಆರಂಭವಾಗುವಾಗ ಇರುವ ಕಾರಣ ಯುದ್ಧ ಮುಂದುವರಿಯುವಾಗ ಇರುವುದಿಲ್ಲ.

‘ಕಾರಣ’ ಕ್ರಮೇಣ ‘ಪ್ರತಿಷ್ಠೆ’ಯಾಗಿ ಬದಲಾಗುತ್ತದೆ. ಅಸಲಿಗೆ ಈ ಯುದ್ಧ ನಡೆಯುತ್ತಿರುವುದೇ ಸಾಂಪ್ರದಾಯಿಕ ವಿರೋಧಿಗಳಾದ ಅಮೆರಿಕ
ಮತ್ತು ರಷ್ಯಾ ನಡುವೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲಿ ಉಕ್ರೇನ್ ಹೆಸರಿಗೆ ಮಾತ್ರ. ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು
ಹೊಡೆಯುವುದು ಅಮೆರಿಕಕ್ಕೂ ಹೊಸತಲ್ಲ, ರಷ್ಯಾಕ್ಕೂ ಹೊಸತಲ್ಲ. ಇಲ್ಲವಾದರೆ, ವಿಶ್ವದ ೨ ಬಲಿಷ್ಠ ರಾಷ್ಟ್ರಗಳು ತಮ್ಮದಲ್ಲದ ವಿಷಯಕ್ಕೆ
ಬೇರೆ ಯದೇ ನೆಪದಿಂದ ಪರೋಕ್ಷವಾಗಿ ಬಡಿದಾಡುತ್ತಿವೆ ಎಂದರೆ ಅದಕ್ಕಿಂತ ದೊಡ್ದ ಜೋಕ್ ಇನ್ನೊಂದಿಲ್ಲ.

ಇದುವರೆಗೂ ಅಮೆರಿಕವಾಗಲಿ, ಈ ಯುದ್ಧಕ್ಕೆ ಕಾರಣವಾದ ನ್ಯಾಟೋ ಆಗಲಿ ಮಾನವೀಯ ನೆರವಿಗಾಗಿ ಜನರನ್ನು ಕಳುಹಿಸಿದರೇ ಶಿವಾಯ್ ಒಬ್ಬೇ ಒಬ್ಬ ಸೈನಿಕನನ್ನು ಈ ಯುದ್ಧದಲ್ಲಿ ಹೊಡೆದಾಡಲು ಕಳುಹಿಸಲಿಲ್ಲ. ಬಹಳಷ್ಟು ದೇಶಗಳು ನೈತಿಕ ಬೆಂಬಲಕ್ಕಷ್ಟೇ ಸೀಮಿತವಾಗಿ ಉಳಿದರೆ ಇನ್ನು ಕೆಲವು ದೇಶಗಳು ಯುದ್ಧಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ಮುಂದುವರಿಯುತ್ತಿವೆ. ದುರಂತವೆಂದರೆ ಉಕ್ರೇನ್ ಆಳುವ ಜೆಲೆನ್ಸ್ಕಿ ಎಂಬ ಜೋಕರ್‌ನಿಗೆ ಈ ಜೋಕ್ ಇನ್ನೂ ಅರ್ಥವಾಗಲಿಲ್ಲ!

ಕಳೆದ ವರ್ಷ ಅಮೆರಿಕ, ಬ್ರಿಟನ್, ಕೆನಡಾ, ಐರೋಪ್ಯ ಒಕ್ಕೂಟ, ಪೋಲೆಂಡ್, ಜರ್ಮನಿ, ಇಟಲಿ ಇತ್ಯಾದಿ ದೇಶಗಳು ಸೇರಿ ಉಕ್ರೇನ್‌ಗೆ
ಸುಮಾರು ೧೫೦ ಬಿಲಿಯನ್ ಡಾಲರ್ ಮೌಲ್ಯದ ಶಸಾಸದ ನೆರವು ನೀಡಿವೆ. ಅದರಲ್ಲಿ ಅಮೆರಿಕದ ಕೊಡುಗೆಯೇ ಸುಮಾರು ೮೦ ಬಿಲಿಯನ್
ಡಾಲರ್‌ನಷ್ಟಿದೆ. ಐರೋಪ್ಯ ಒಕ್ಕೂಟದ ಕೊಡುಗೆ ಸುಮಾರು ೬೦ ಬಿಲಿಯನ್ ಡಾಲರ್‌ನಷ್ಟಿದೆ. ಈಗ ಬ್ರಿಟನ್ ಮತ್ತು ಜರ್ಮನಿ ಯುದ್ಧ ಟ್ಯಾಂಕ್
ಗಳನ್ನು ಉಕ್ರೇನ್‌ಗೆ ಕಳುಹಿಸುವ ಭರವಸೆ ನೀಡಿವೆ. ಗಮ್ಮತ್ತಿನ ವಿಷಯವೆಂದರೆ, ಬ್ರಿಟನ್ ಮುಂದಿನ ೪ ತಿಂಗಳು ಉಕ್ರೇನ್ ಸೈನಿಕರಿಗೆ
ಯುದ್ಧದ ತರಬೇತಿ ನೀಡಲಿದೆಯಂತೆ. ‘ಯುದ್ಧ ಕಾಲದಲ್ಲಿ ಶಸಾಭ್ಯಾಸ’ ಎಂಬ ಮಾತು ಕೇಳಿದ್ದೀರಲ್ಲ. ಅದಕ್ಕೆ ತಾಜಾ ಉದಾಹರಣೆ ಇದು.

ಈ ಯುದ್ಧದ ಒಂದು ವರ್ಷದಲ್ಲಿ ಅತ್ಯಂತ ಹಾನಿಗೊಳಗಾದವರು ಯಾರು? ಉಕ್ರೇನ್ ಅಂತೂ ಹೌದೇ ಹೌದು. ನಾಳೆಯೇ ಯುದ್ಧ ನಿಂತರೂ ಉಕ್ರೇನ್ ಮೊದಲಿನಂತಾಗಲು ದಶಕಗಳೇ ಬೇಕು. ನ್ಯಾಟೊ ಸೇರಿ ತನ್ನ ದೇಶಕ್ಕೆ ರಕ್ಷಣೆ ಪಡೆಯುತ್ತೇನೆ ಎಂದು ಹೊರಟವನ ಕಥೆ ಏನಾಯಿತು? ಸುಮ್ಮನೇ ಇದ್ದಿದ್ದರೆ ಇನ್ನೊಂದು ಹತ್ತಾರು ವರ್ಷ ಸುರಳೀತ ಇರಬಹುದಿತ್ತೋ ಏನೋ, ಈಗ ಅದೂ ಇಲ್ಲದಾಯಿತು. ದೇಶವಂತೂ ಸ್ಮಶಾನವಾಯಿತು, ಇದ್ದ ನಾಲ್ಕೂಕಾಲು ಕೋಟಿ ಜನರಲ್ಲಿ ತಾಕತ್ತಿರುವ ಒಂದೂವರೆ ಕೋಟಿ ಜನ ದೇಶ ಬಿಟ್ಟುಹೋದರು.

ಇನ್ನು ಪರಿಸ್ಥಿತಿ ಸರಿಯಾದರೂ ಅವರಲ್ಲಿ ಎಲ್ಲರೂ ಹಿಂದಿರುಗಿ ಬರುತ್ತಾರೆ ಎಂಬ ಯಾವ ಭರವಸೆಯೂ ಇಲ್ಲ. ಉಕ್ರೇನ್‌ನ ಶೇ.೩೮ ಭೂಭಾಗ ವನ್ನು ರಷ್ಯಾ ಪಡೆದುಕೊಂಡಿತ್ತು, ಈಗ ಉಕ್ರೇನ್ ಅದರಲ್ಲಿ ಅರ್ಧ ಹಿಂಪಡೆದಿದೆ ಎಂದು ಮಾಧ್ಯಮಗಳು ವರದಿಮಾಡುತ್ತಿವೆ. ಅದು ನಿಜವೇ ಆದರೂ, ಶೇ.೨೦ರಷ್ಟು ಈಗಲೂ ರಷ್ಯಾ ಬಳಿ ಇದೆ ಎಂದಾಯಿತು. ಯಾರೇನೇ ಹೇಳಲಿ, ಅಲ್ಲಿಯ ಮಾಧ್ಯಮಗಳು ಏನೇ ವರದಿಮಾಡಲಿ, ಐರೋಪ್ಯ ಒಕ್ಕೂಟ, ಬ್ರಿಟನ್ ಇತ್ಯಾದಿಗಳೆಲ್ಲ ಈ ಯುದ್ಧದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಒಂದು ವೇಳೆ ಲೆಕ್ಕ ಮಾಡಿದರೂ ಅವರು ಕಳೆದುಕೊಂಡಿದ್ದೇ ಹೆಚ್ಚು. ಉಕ್ರೇನ್ ಮತ್ತು ರಷ್ಯಾ ಯುದ್ಧ ಮಾಡಿ ಕಳೆದುಕೊಂಡರೆ, ಇವರೆಲ್ಲ ಯುದ್ಧ ಮಾಡದೆಯೇ ಕಳೆದುಕೊಂಡವರು. ಈ ನಡುವೆ ಕೆಲವು ಸಣ್ಣ ಪುಟ್ಟ ದೇಶಗಳು ದಿವಾಳಿಯಾದರೂ ಆಶ್ಚರ್ಯವಿಲ್ಲ. ಜರ್ಮನ್ ಎಕನಾಮಿಕ್ಸ್ ಇನ್ಸ್ಟಿಟ್ಯೂಷನ್ ವರದಿಯ ಪ್ರಕಾರ ಈ ಯುದ್ಧದಿಂದ ಪಶ್ಚಿಮ ದೇಶಗಳ ಉತ್ಪಾದನೆಯಲ್ಲಿ ಶೇ.೬೦ರಷ್ಟು ಕುಂಠಿತವಾಗಿದೆ. ರಷ್ಯಾದಿಂದ ಅನಿಲ ಮತ್ತು ತೈಲ ಸರಬರಾಜು ನಿಂತಿರುವುದರಿಂದ ಕಾರ್ಖಾನೆಗಳಿಗೆ ಬಳಸುವ ಇಂಧನದ ಬೆಲೆ ಶೇ.೪೦ರಷ್ಟು ಹೆಚ್ಚಿದೆ.

ಜರ್ಮನಿಯೊಂದೇ ಜಿಡಿಪಿಯ ೪ ಪ್ರತಿಶತ ಅಂದರೆ ಸುಮಾರು ೧೭೦ ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ನಷ್ಟ ಅನುಭವಿಸಿದೆ. ಬ್ರಿಟನ್‌ನಲ್ಲಿ ನಿನ್ನೆ ಮೊನ್ನೆಯ ವಿಷಯ ಕೇಳಿದರೆ ಕಂಗಾಲಾಗುವ ಪರಿಸ್ಥಿತಿ ಇದೆ. ಅಲ್ಲಿಯ ಸೂಪರ್ ಮಾರ್ಕೆಟ್‌ಳ ಶೆಲ್‌ಗಳು ಖಾಲಿ ಖಾಲಿ ಕಾಣುತ್ತಿದೆ. ಒಬ್ಬ ವ್ಯಕ್ತಿ ೨
ಟೊಮೇಟೊ, ೨ ಸೌತೇಕಾಯಿಗಿಂತ ಹೆಚ್ಚು ಕೊಳ್ಳುವಂತಿಲ್ಲ ಎಂಬ ಫಲಕಗಳು ಕಾಣುತ್ತಿವೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ. ಕಳೆದ
ವರ್ಷ ಈ ಯುದ್ಧದಿಂದಾಗಿ ವಿಶ್ವದಾದ್ಯಂತ ಒಂದೂವರೆ ಟ್ರಿಲಿಯನ್ ಡಾಲರ್ ನಷ್ಟವಾಗಿದೆಯಂತೆ. ಹೀಗೇ ಮುಂದುವರಿದರೆ ಈ ವರ್ಷ ಇದು ೩ ಟ್ರಿಲಿಯನ್ ಡಾಲರ್ ಗಡಿ ದಾಟಲಿದೆಯಂತೆ. ಪಾಪ ಯುರೋಪ್… ಅಮೆರಿಕ ಮತ್ತು ರಷ್ಯಾ ಜಗಳದಲ್ಲಿ ತಾನು ಬಡವಾಯ್ತು…

೨೦೨೧ರಲ್ಲಿ ವಿಶ್ವದಾದ್ಯಂತ ಶೇ.೩.೫ರಷ್ಟಿದ್ದ ಹಣದುಬ್ಬರ ೨೦೨೨ರಲ್ಲಿ ಶೇ.೯ರಷ್ಟಾಗಿದೆ. ವಿಶ್ವದಾದ್ಯಂತ ಒಂಭತ್ತಾದರೂ ಭಾರತದಲ್ಲಿ ಶೇ.೭ರಷ್ಟಿದೆ. ಈ ನಿಟ್ಟಿನಲ್ಲಿ ಭಾರತ ವಾಸಿ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂಬ ಮಾತು ಆಗಾಗ ಕೇಳಿಬರುತ್ತಿತ್ತು, ಈಗಲೂ ಇದೆ. ಈ ವಿಷಯದಲ್ಲಿ ಮಧ್ಯಸ್ಥಿಕೆಗೆ ಹೋದರೂ, ಹೋಗದಿದ್ದರೂ ಭಾರತಕ್ಕೆ ಲಾಭವೇ. ಭಾರತದ ಮಧ್ಯಸ್ಥಿಕೆಯಿಂದ ಯುದ್ಧ ನಿಂತರೆ, ಎರಡು ದೊಡ್ಡ ರಾಷ್ಟ್ರಗಳ ನಡುವೆ ಸಂಧಾನ ಮಾಡಿಸಿ ನಾವು ದೊಡ್ಡವರಾಗಬಹುದು. ತಟಸ್ಥವಾಗಿದ್ದು, ಮುಂದುವರಿದ ದೇಶಗಳ ಆರ್ಥಿಕತೆ ಕುಸಿದು, ಭಾರತದ ಆರ್ಥಿಕತೆ ಸುಧಾರಿಸಿದರೆ (ಸ್ಥಿರವಾಗಿದ್ದರೂ ಸಾಕು) ಆರ್ಥಿಕವಾಗಿ ಕೆಲವು ದೇಶಗಳಿಗಿಂತ ಮುಂದೆ ಹೋಗಬಹುದು. ಎರಡನೆಯದು ಅಪವಿತ್ರ, ಪರ್ಯಾಯಮಾರ್ಗ, ಋಣಾತ್ಮಕ ಚಿಂತನೆ ಎನ್ನಬೇಡಿ. ಯುದ್ಧ ಎಂಬ ಪದವೇ ಅಪವಿತ್ರ. ಈಗಿನ ಕಾಲದ ಯುದ್ಧದ ವಿಚಾರದಲ್ಲಿ ಯಾವ ಪಾವಿತ್ರ್ಯವೂ ಇಲ್ಲ. ಅಲ್ಲಿ ಲಾಭವೇ ಪ್ರಧಾನ.