ಧರ್ಮ ದೀವಿಗೆ
ಆಮಿರ್ ಅಶ್ ಅರೀ
ಅಬ್ದುಲ್ಲಾ ಮತ್ತು ಅಮಿನಾ ದಂಪತಿಯ ಪುತ್ರರಾಗಿ ಮೆಕ್ಕಾದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು ೬೩ನೇ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಇಂದು ಅವರ ಜನ್ಮದಿನ. ಬಡವರ ಮನೆಯಲ್ಲಿ ಹುಟ್ಟಿ ದವರೂ ಜಾಗತಿಕ ವಿದ್ವಾಂಸರಾಗಬಹುದು ಎಂಬುದಕ್ಕೆ ಇವರು ಅತಿದೊಡ್ಡ ಉದಾಹರಣೆಯಾಗಿದ್ದಾರೆ.
ನಾಳೆ ಪ್ರಳಯವಾಗುವ ಲಕ್ಷಣವಿದ್ದರೂ ಇಂದು ವ್ಯಕ್ತಿಯೊಬ್ಬ ತನ್ನಲ್ಲಿರುವ ಸಸಿಯನ್ನು ನೆಡಬೇಕು ಎಂಬುದನ್ನು ಕಲಿಸಿರುವ ಪ್ರಕೃತಿ- ಸ್ನೇಹಿ ಅವರು. ‘ನೆರೆಹೊರೆಯವರು ಹಸಿದಿರಬೇಕಾದರೆ ತನ್ನ ಹೊಟ್ಟೆ ಮಾತ್ರ ತುಂಬಿಸಿ ಕೊಳ್ಳುವನು ನನ್ನ ಅನುಯಾಯಿಯಾಗಲಾರ’ ಎಂದು ಶಿಷ್ಯರಿಗೆ ಎಚ್ಚರಿಕೆ ಕೊಟ್ಟ ಕಾರುಣ್ಯದ ಗುರು ಅವರು. ಜನಿಸಿದ ಮಗು ಹೆಣ್ಣಾಗಿದ್ದಲ್ಲಿ ಕ್ಷಣಾರ್ಧದಲ್ಲಿ ಗುಂಡಿ ಅಗೆದು ಜೀವಂತ ಹೂತುಬಿಡುತ್ತಿದ್ದ ಅನಾಗರಿಕ ಜನಾಂಗಕ್ಕೆ, ‘ಹೆಣ್ಣು ಮನೆಯ ಬೆಳಕು; ಅವಳು ಬೆಳೆದರೆ ಮನೆಯೂ ಮನಸ್ಸೂ ಪ್ರಕಾಶಗೊಳ್ಳಲು ಸಾಧ್ಯ. ಅವಳನ್ನು ಕೊಲ್ಲದಿರಿ.
ಇದನ್ನೂ ಓದಿ: ನೆನಪಿಡಿ, ಪಂಕ್ಚರ್ ಸಾಬಿ ಯಾವತ್ತೂ ಅಪಾಯಕಾರಿಯಲ್ಲ !
ಅವಳಿಗೂ ಬದುಕುವ ಸ್ವಾತಂತ್ರ್ಯವಿದೆ’ ಎಂದು ಹೇಳಿ ಹಲವಾರು ಹೆಣ್ಣು ಕುಡಿಗಳ ಜೀವರಕ್ಷಿಸಿದ ಮತ್ತು ಮಹಿಳಾ
ಸಬಲೀಕರಣಕ್ಕಾಗಿ ಹೋರಾಡಿದ ಸಾಮಾಜಿಕ ಚಿಂತಕ ಅವರು. ತಮ್ಮ ಮಗಳು -ತಿಮಾರನ್ನು ಜಾಗತಿಕ ಮಹಿಳೆ ಯರಿಗೆ ಆದರ್ಶವಾಗಿ ಬೆಳೆಸಿದ ಅವರು, ತಾವು ಬೋಧಿಸಿದ ಧರ್ಮದ ಜತೆಗೆ ಸುತ್ತಮುತ್ತಲಿರುವ ಅನೇಕ ಧರ್ಮೀ ಯರ ಆಚಾರ- ವಿಚಾರ- ಆರಾಧನೆಗಳಿಗೆ ಭಂಗ ತಾರದೆ, ಅವರ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆಯುಂಟು ಮಾಡದೆ, ಎಲ್ಲರ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಗೌರವಿಸಿ, ಅನುಯಾಯಿಗಳಿಗೂ ಅದನ್ನು ಕಲಿಸಿ ಕೊಟ್ಟ ಸರ್ವಧರ್ಮ ಪ್ರೇಮಿ. ಅವರೇ ಪ್ರವಾದಿ ಮುಹಮ್ಮದರು.
‘ನಾನು ಕಲಿಸಿದ ಆರಾಧನಾ ಕರ್ಮಗಳಲ್ಲಿ ನಿರತರಾಗಿ ಧರ್ಮನಿಷ್ಠರಾದರೂ, ಒಂದೊಮ್ಮೆ ಮತ್ತೊಬ್ಬರ ಧಾರ್ಮಿಕ
ವಿಚಾರದಲ್ಲಿ ತೊಂದರೆಯನ್ನುಂಟುಮಾಡಿದರೆ ನೀವು ನನ್ನ ಪ್ರಭುವಿಗೂ ಮತ್ತು ನನಗೂ ಆಪ್ತರಾಗಲು ಸಾಧ್ಯ ವಿಲ್ಲ’ ಎಂದು ತಿಳಿಹೇಳಲು ಮರೆಯದ ಈ ಧರ್ಮಪ್ರಬೋಧಕರು, ಅನ್ಯಾಯಗಳನ್ನು ಸದಾಕಾಲ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಮೂಲಕ ಎಚ್ಚರಿಸುತ್ತಾ, ನ್ಯಾಯದ ಪರವಿದ್ದ ಧ್ವನಿಯಾಗಿದ್ದರು. ಸಾಕಷ್ಟು ವರ್ಷಗಳ ಹಿಂದೆ ಅವರು ನೀಡಿದ ಉಪದೇಶಗಳು ಆಧುನಿಕ ಕಾಲದಲ್ಲೂ ಪ್ರಸ್ತುತವಾಗಿವೆ. ಕೊಲೆ, ದರೋಡೆ, ಅಕ್ರಮ, ಅನಾ ಚಾರ, ಅತ್ಯಾಚಾರ ಮತ್ತು ಭಯೋತ್ಪಾದನೆಯ ಕಡುವಿರೋಧಿಯಾಗಿದ್ದ ಪ್ರವಾದಿ ಮುಹಮ್ಮದರು, ಶಿಷ್ಯರನ್ನು ಸದಾಕಾಲ ಜಾಗೃತರನ್ನಾಗಿಡುತ್ತಿದ್ದರು.
ಪ್ರವಾದಿಯವರ ನೈಜ ಅನುಯಾಯಿಗಳದ್ದು ಮೇಲೆ ಉಲ್ಲೇಖಿಸಿರುವ ಸಾಮಾಜಿಕ ತಲ್ಲಣಗಳಿಂದ ಅಜಗಜಾಂತರ ದೂರ; ಆದರೂ ಕೆಲ ಮುಖವಾಡಧಾರಿಗಳಿಂದ, ಆಷಾಢಭೂತಿಗಳಿಂದ ಆಗುತ್ತಿರುವ ಅನ್ಯಾಯಗಳು ಸಮಾಜ ಮತ್ತು ಸಮುದಾಯದ ನಡುವಿನ ಅಶಾಂತಿಗೆ ಕುಮ್ಮಕ್ಕು ನೀಡುತ್ತಿರುವುದು ಖೇದಕರ ಸಂಗತಿ. ಇವರ‍್ಯಾರೂ ಪ್ರವಾದಿಯವರ ಅನುಯಾಯಿಗಳಲ್ಲ ಎಂಬುದೇ ವಾಸ್ತವ.
ಪ್ರವಾದಿಯವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಯಿಂದ ಪ್ರೇರಣೆಗೊಂಡು ಕರ್ಮಶಾಸ ಪಂಡಿತರಾಗಿದ್ದ
ಇಮಾಂ ಶಾಫಿಯವರು ಒಮ್ಮೆ ತಮ್ಮ ಶಿಷ್ಯರಿಗೆ ಪಾಠವನ್ನು ಹೇಳಿಕೊಡುವಾಗ ತಕ್ಷಣ ಎದ್ದು ನಿಂತು, ಕೆಲ ಕ್ಷಣದ ನಂತರ ಕುಳಿತುಕೊಂಡು ಪಾಠವನ್ನು ಮುಂದುವರಿಸಿದರು. ಅವರ ಈ ವರ್ತನೆಯಿಂದ ಅಚ್ಚರಿಗೊಂಡ ಶಿಷ್ಯರು ತರಗತಿ ಮುಗಿದ ಬಳಿಕ, ‘ಗುರುಗಳೇ, ವಿದ್ಯೆಯನ್ನು ಹೇಳಿಕೊಡುವ ಅಥವಾ ಕೇಳಿಸಿಕೊಳ್ಳುವ ಸಮಯದಲ್ಲಿ ಬೇರಾವುದನ್ನೂ ಮಾಡಬಾರ ದೆಂದು ನೀವು ಪದೇಪದೆ ಹೇಳುತ್ತಿದ್ದಿರಿ; ಆದರೆ ತರಗತಿಯ ಮಧ್ಯೆ ತಾವು ಎದ್ದು ನಿಂತಿದ್ದೇಕೆ? ಅದಕ್ಕೊಂದು ಮಹತ್ವಪೂರ್ಣ ಕಾರಣ ಇದ್ದಿರಲೇಬೇಕು, ದಯವಿಟ್ಟು ಅದನ್ನು ತಿಳಿಸುವಿರಾ?’
ಎಂದು ಕೋರಿಕೊಂಡರು.
ಇಮಾಂ ಶಾಫಿಯವರು ಇದಕ್ಕೆ ಉತ್ತರಿಸುತ್ತಾ, ‘ತರಗತಿಯ ಸಮಯದಲ್ಲಿ ಗಮನವನ್ನು ಮತ್ತೆಲ್ಲಿಗೂ ಹರಿಸಬಾರ ದೆಂದು ನಾನು ನಿಮ್ಮಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಹೇಳಿರುವೆ; ಆದರೆ, ನಾನು ಪಾಠ ಮಾಡುವಾಗ ಒಬ್ಬರು ನಡೆದುಕೊಂಡು ಹೋಗುವುದನ್ನು ಗಮನಿಸಿದೆ…’ ಎಂದರು.
ಈ ಮಾತಿಗೆ ಮತ್ತಷ್ಟು ಗೊಂದಲಗೊಂಡ ವಿದ್ಯಾರ್ಥಿಗಳು, ‘ಆದರೆ ಅವರು ಹೋಗುವಾಗ ತಾವು ಎದ್ದು ನಿಂತಿದ್ದೇಕೆ?
ಅವರು ಯಾರು?‘ ಎಂದು ಮರುಪ್ರಶ್ನಿಸಿದರು. ಆಗ ಇಮಾಂ ಶಾಫಿಯವರು, ‘ಅವರು ನನ್ನ ಗುರುಗಳಲ್ಲೊಬ್ಬರು. ಅವರು ನಮ್ಮ ಮಸೀದಿಯ ಸಮೀಪದ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ’ ಎಂದು ಉತ್ತರಿಸಿದರು. ‘ಆ ಸ್ವಾಮೀಜಿ ಹೇಗೆ ತಮ್ಮ ಗುರು?’ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಂದ ತೂರಿಬಂತು. ಆಗ ಇಮಾಂ ಶಾಫಿಯವರು, ‘ಹೌದು, ಅವರು ನನಗೆ ಸ್ವಾಮೀಜಿ ಮಾತ್ರವಲ್ಲ, ಒಂದು ಸೂಕ್ಷ್ಮ ವಿಚಾರದ ಬಗೆಗಿನ ಸಂಶಯವನ್ನು ನಿವಾರಿಸಿ, ಅದಕ್ಕೆ ಸಂಬಂಽಸಿದ ಸಂಪೂರ್ಣ ಮಾಹಿತಿಯನ್ನು ಕಲಿಸಿಕೊಟ್ಟು ನನ್ನ ಪಾಲಿನ ಗುರುಗಳಾಗಿದ್ದಾರೆ.
ಹೀಗಾಗಿ, ತರಗತಿ ನಡೆಯುತ್ತಿರುವಾಗ ಅವರು ಹೋಗುವುದು ಗಮನಕ್ಕೆ ಬರುತ್ತಿದ್ದಂತೆ ಎದ್ದು ನಿಂತು ಗೌರವವನ್ನು ಸೂಚಿಸಿದೆ’ ಎಂದರು. ಈ ಉತ್ತರಕ್ಕೆ ತೃಪ್ತಿಯಾಗದ ಶಿಷ್ಯರು, ‘ಗುರುಗಳೇ, ತಮಗೆ ತಿಳಿಯದ ಒಂದು ವಿಷಯವನ್ನು ಹೇಳಿಕೊಟ್ಟ ಕಾರಣಕ್ಕಾಗಿ ಇಷ್ಟೊಂದು ಗೌರವ ನೀಡುವ ಅಗತ್ಯವಿದೆಯೇ?‘ ಎಂದು ಪ್ರಶ್ನಿಸಿದಾಗ ಇಮಾಂ ಶಾಫಿ ಯವರು, ‘ಯಾರನ್ನಾದರೂ ಗುರುವೆನ್ನಲು ಅವರ ಬಳಿ ಸುಮಾರು ವರ್ಷಗಳ ಕಾಲ ಕಲಿಯಬೇಕೆಂದೇನೂ ಇಲ್ಲ; ಕೇವಲ ಅಕ್ಷರಗಳನ್ನು ಹೇಳಿಕೊಟ್ಟಿದ್ದರೂ ಅವರನ್ನು ಗುರುವಾಗಿ ಕಂಡು, ಅವರಿಗೆ ಗೌರವವನ್ನು ಸಲ್ಲಿಸಬೇಕು.
ಇಸ್ಲಾಮಿನ ಕರ್ಮಶಾಸ್ತ್ರ ಕ್ಷೇತ್ರದಲ್ಲಿ ಜಗತ್ತು ನನ್ನನ್ನು ಅನುಕರಿಸಿದರೂ, ನನಗಿದ್ದ ಸಣ್ಣ ಸಂಶಯಕ್ಕೆ ಉತ್ತರವನ್ನು
ಕೊಟ್ಟ ಆ ಸ್ವಾಮೀಜಿಗೂ ನನ್ನ ಬದುಕಿನ ಆಜೀವ ಗುರುಗಳ ಸ್ಥಾನ ನೀಡಬಲ್ಲೆ. ಕಾರಣ, ಇಂಥ ಮಹತ್ವಪೂರ್ಣ ನಿರ್ಧಾರಕ್ಕೆ ಪ್ರವಾದಿ ಪೈಗಂಬರ್ ಮುಹಮ್ಮದ್ ಅವರೇ ನನಗೆ ಪ್ರೇರಣೆ’ ಎಂದು ಶಿಷ್ಯರಿಗೆ ತಿಳಿ ಹೇಳಿದರು.
ಪ್ರವಾದಿ ಮುಹಮ್ಮದರದ್ದು ಎಲ್ಲರಿಗೂ ಆಪ್ತವೆನಿಸುವ ವ್ಯಕ್ತಿತ್ವ, ಅನುಕರಣೆಗೆ ಯೋಗ್ಯವಾದ ಚಿಂತನೆ ಮತ್ತು ಯಾರನ್ನೂ ನೋಯಿಸದ ಪ್ರವೃತ್ತಿ. ಒಮ್ಮೆ ಅವರು ಸಭೆಯಲ್ಲಿರಬೇಕಾದರೆ ವೃದ್ಧರೊಬ್ಬರು ಒಂದು ದ್ರಾಕ್ಷಿಯ ಗೊಂಚಲನ್ನು ಅವರಿಗೆ ಕಾಣಿಕೆಯಾಗಿ ತಂದರು. ಅದನ್ನು ಸ್ವೀಕರಿಸಿದ ಪ್ರವಾದಿಯವರು ಒಂದೊಂದರಂತೆ ಎಲ್ಲವನ್ನೂ ತಾವೇ ತಿಂದು ಮುಗಿಸಿದರು. ಆ ವೃದ್ಧರು ತೃಪ್ತಭಾವನೆಯೊಂದಿಗೆ, ಹೃದಯ ತುಂಬಿದ ಖುಷಿಯೊಂದಿಗೆ ಹಿಂದಿರುಗಿದರು.
ಬಳಿಕ ಶಿಷ್ಯರೊಂದಿಗೆ ಮಾತಿಗಿಳಿದ ಪ್ರವಾದಿಯವರು, ‘ಯಾವುದೇ ಒಂದು ತಿನಿಸನ್ನು, ಹಣ್ಣನ್ನು ಅಥವಾ ಆಹಾರ ವನ್ನು ಪರಸ್ಪರ ಹಂಚಿ ತಿನ್ನಬೇಕು; ಅದು ಉತ್ತಮ ಸ್ವಭಾವ ಉಳ್ಳವನ ಗುಣವಾಗಿದೆ. ಆದರೆ ಆ ದ್ಧರು ತಂದ ದ್ರಾಕ್ಷಿ ಯನ್ನು ನಾನು ಯಾರಿಗೂ ಹಂಚದೆ ಒಬ್ಬನೇ ತಿಂದು ಮುಗಿಸಿದ್ದಕ್ಕೆ ಕಾರಣ, ಅದು ವಿಪರೀತ ಹುಳಿಯಾಗಿತ್ತು. ಅದನ್ನು ನಾನೇನಾದರೂ ನಿಮಗೆ ಹಂಚಿದ್ದಿದ್ದರೆ ನಿಮ್ಮ ಮುಖದಲ್ಲಿ ಹುಳಿಯ ಭಾವನೆ ವ್ಯಕ್ತವಾಗುತ್ತಿತ್ತು, ಅದರಿಂದಾಗಿ ಆ ವೃದ್ಧರಿಗೆ ನೋವುಂಟಾಗುತ್ತಿತ್ತು.
ಇದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಆ ಹುಳಿದ್ರಾಕ್ಷಿಯೆಲ್ಲವನ್ನೂ ನಗುನಗುತ್ತಲೇ ತಿಂದುಮುಗಿಸಿಬಿಟ್ಟೆ’ ಎಂದರು.
ಹೀಗೆ ಪ್ರವಾದಿಯವರು ಪ್ರತಿಯೊಬ್ಬ ವ್ಯಕ್ತಿ ಹಾಗೂ ಪ್ರತಿಯೊಂದು ವಸ್ತು-ವಿಷಯಗಳ ಕುರಿತೂ ಸೂಕ್ಷ್ಮತೆಯನ್ನು
ಹೊಂದಿದ್ದರು. ಯಾವುದೇ ಮಾಹಿತಿಯನ್ನು ತಮಗಿಂತ ಹಿರಿಯರಿಗೆ ಮುಟ್ಟಿಸಬೇಕಾದರೆ, ಅದನ್ನು ಹೇಳಿ ಕೊಡುವು ದಕ್ಕಿಂತ ಮಾಡಿ ತೋರಿಸಿ ಮನವರಿಕೆ ಮಾಡಿಕೊಡುತ್ತಿದ್ದರು. ಕಿರಿಯರೊಂದಿಗೆ ವಿಶೇಷ ಕರುಣೆ ತೋರುತ್ತಿದ್ದರು, ಮಕ್ಕಳನ್ನು ಪ್ರೀತಿಯಿಂದ ಮುದ್ದಿಸುತ್ತಿದ್ದರು. ಪ್ರವಾದಿ ಮುಹಮ್ಮದರ ಯಾವುದೇ ಭಾವಚಿತ್ರವಿಲ್ಲದೆ, ಕೇವಲ ಅವರು ಸಾರಿದ ಸಂದೇಶಗಳಿಂದ ಜನರು ಪ್ರಭಾವಿತರಾಗಿ ಅವರನ್ನು ಗುರುವಾಗಿ, ನಾಯಕನನ್ನಾಗಿ ಸ್ವೀಕರಿಸಿದ್ದಾರೆ. ಪ್ರವಾದಿಯವರನ್ನು ಅರಿತ ಯಾರೂ ಅವರ ಮೇಲೆ ಕಪ್ಪುಚುಕ್ಕಿಯನ್ನು ತೋರಿಸಲಿಕ್ಕಿಲ್ಲ.
ಅಬ್ದುಲ್ಲಾ ಮತ್ತು ಅಮಿನಾ ದಂಪತಿಯ ಪುತ್ರರಾಗಿ ಮೆಕ್ಕಾದಲ್ಲಿ ಜನಿಸಿದ ಅವರು ತಮ್ಮ ಬದುಕಿನ ೬೩ನೇ ವಯಸ್ಸಿ ನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಇಂದು ಅವರ ಜನ್ಮದಿನ. ಬಡವರ ಮನೆಯಲ್ಲಿ ಹುಟ್ಟಿದವರೂ ಜಾಗತಿಕ ವಿದ್ವಾಂಸರಾಗಬಹುದು ಎಂಬುದಕ್ಕೆ ಪ್ರವಾದಿ ಮುಹಮ್ಮದ್ ಪೈಗಂಬರರು ಅತಿದೊಡ್ಡ ಉದಾಹರಣೆ ಯಾಗಿದ್ದಾರೆ. ವ್ಯಕ್ತಿಗಿಂತ, ಆತ ಪ್ರತಿಪಾದಿಸಿದ ತತ್ವ ಮತ್ತು ಸಿದ್ಧಾಂತಕ್ಕೆ ಮೌಲ್ಯವಿದ್ದರೆ ಇಡೀ ಜಗತ್ತು ಅವರನ್ನು ಒಪ್ಪಿಕೊಳ್ಳು ತ್ತದೆ ಎಂಬುದನ್ನು ಪ್ರವಾದಿಯವರು ತಮ್ಮ ಸಾಮಾಜಿಕ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ. ಇದು ಎಲ್ಲರಿಗೂ ಆದರ್ಶ ಮತ್ತು ಪ್ರೇರಣೆಯಾಗಲಿ.
(ಲೇಖಕರು ಹವ್ಯಾಸಿ ಬರಹಗಾರರು)