ಪ್ರಸ್ತುತ
ಮುರಳಿ ಆರ್.
muraliram@gmail.com
ರಾಜ್ಯವಿಧಾನಸಭೆಗೆ ಇನ್ನನು ಚುನಾವಣೆ ಬಂದೇ ಬಿಟ್ಟಿದೆ. ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಕಳೆದ ಬಾರಿ ಅಧಿಕಾರಕ್ಕೆ ಬರಲು ಕೆಲವೇ ಸೀಟುಗಳ ಕೊರತೆ ಎದುರಿಸಿದ್ಧ ಭಾರತೀಯ ಜನತಾ ಪಕ್ಷ ಈ ಬಾರಿ ಪೂರ್ಣಬಹುಮತ ದೊಂದಿಗೆ ರಾಜಕೀಯ ಚುಕ್ಕಾಣಿ ಹಿಡಿಯಲು ಬಯಸುತ್ತಿದೆ.
ಆದರೆ, ಏನೇ ಹೇಳಿದರೂ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಚುನಾವಣೆ ಎದುರಿಸುವುದಾಗಿ ನಾಯಕರು ಘೋಷಿಸಿದ್ದರೂ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದು ಪಕ್ಷಕ್ಕೆ ಭಾರೀ ಹಿನ್ನಡೆಯೇ. ಈ ಹಿನ್ನೆಲೆಯಲ್ಲಿ, ಕೇಂದ್ರ ನಾಯಕರು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರೇ ಮಂಚೂಣಿಯಲ್ಲಿ ನಿಂತು ಮತಯಾಚನೆ ಮಾಡುವ ಅನಿವಾರ್ಯ ಮೊದಲಿಗಿಂತ ಹೆಚ್ಚಾಗಿದೆ.
ಈಗಾಗಲೇ ಉಭಯ ನಾಯಕರು ಕರ್ನಾಟಕಕ್ಕೆ ಮೇಲಿಂದ ಮೇಲೆ ಭೇಟಿ ನೀಡಿ ಚುನಾವಣಾ ಸಿದ್ಧತೆಗೆ ವೇಗ ನೀಡಿದ್ದಾರೆ. ಮೊನ್ನೆಮೊನ್ನೆ ಮೋದಿಯವರು ಬೆಳಗಾವಿಯಲ್ಲಿ ದಾಖಲೆಯ ರೋಡ್ ಶೋ ಅನ್ನೂ ನಡೆಸಿ ಹವಾ ಎಬ್ಬಿಸಿ ಹೋಗಿದ್ದಾರೆ. ಮುಖ್ಯವಾಗಿ ಅಮಿತ್ ಶಾ ನೇರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಟಕ್ಕರ್ ನೀಡಿ ‘ವಿಜಯ ಸಂಕಲ್ಪ ಯಾತ್ರೆ’ ಆರಂಭಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಕಮಲ ಅರಳಿಸಿ ತಮ್ಮ ತಂತ್ರಗಾರಿಕೆ ಮೆರೆದಿದ್ದ ಅಮಿತ್ ಶಾ, ಕರ್ನಾಟಕದಲ್ಲೂ ಇಂಥದ್ದೊಂದು ಮ್ಯಾಜಿಕ್ಗೆ ತಂತ್ರ ರೂಪಿಸುತ್ತಿದ್ದಾರೆ. ಇತ್ತೀಚೆಗೆ ಮಧ್ಯ ಕರ್ನಾಟಕ, ಕರಾವಳಿ, ಮತ್ತು ಮೈಸೂರು ಕರ್ನಾಟಕ ಭಾಗಗಳಲ್ಲಿ ಪಕ್ಷದ ಸಭೆ ಮತ್ತು ಸಮಾರೋಹಗಳಲ್ಲಿ ಪಾಲ್ಗೊಂಡಿರುವ ರಾಜಕೀಯ ಚಾಣಾಕ್ಷ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿ ಲಾದ ಕರ್ನಾಟಕದಲ್ಲಿ ಶತಾಯಗತಾಯ ಕಮಲವನ್ನು ಅರಳಿಸಲು ಸಂಕಲ್ಪ ಮಾಡಿದ್ದೇನೋ ಸರಿ.
ಪ್ರಶ್ನೆ ಇರುವುದು, ಕರ್ನಾಟಕ ಅಖಾಡದಲ್ಲೂ ಗೆಲ್ಲುತ್ತಾರಾ ಶಾ? ಹಲವು ರಾಜ್ಯ ಚುನಾವಣೆಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ, ಗೆಲುವಿನ ದಡ ಸೇರಿಸಿರುವ ಅಮಿತ್ ಶಾ, ಭಾರತೀಯ ರಾಜಕಾರಣದಲ್ಲಿ ಚಾಣಕ್ಷನೆಂದೇ ಖ್ಯಾತಿ ಪಡೆದಿ ರುವುದೇನೋ ನಿಜ. ಆದರೆ ಕರ್ನಾಟಕದ ಸನ್ನಿವೇಶ ಭಿನ್ನ.
ಇಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸಮಬಲದ ಸ್ಪರ್ಧಿಗಳಾದರೆ, ಜಾತ್ಯತೀತ ಜನತಾ ದಳ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಶಕ್ತವಾಗಿಲ್ಲದಿದ್ದರೂ ಎರಡು ಪ್ರಬಲ ಪಕ್ಷಗಳಿಗೆ ಪೂರ್ಣ ಬಹುಮತ ದೊರೆಯದಂತೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುವ ಸಾಮರ್ಥ್ಯವಂತೂ
ಖಂಡಿತ ಇದೆ. ಈ ವಾಸ್ತವ ಅರಿತಿರುವ ಶಾ, ಹಳೇ ಮೈಸೂರು ಭಾಗದಲ್ಲಿ ನೇರವಾಗಿ ಜೆಡಿಎಸ್ಗೆ ನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟ.
ಕಳೆದ ಬಾರಿ ಬೆಂಗಳೂರಿನ ಬೂತ್ ವಿಜಯ ಕಾರ್ಯಕ್ರಮದಲ್ಲಿ ದಳಪತಿಗಳ ಮೇಲೆ ನೇರವಾಗಿ ಹರಿಹಾಯ್ದಿದ್ದ ಶಾ, ಜನತಾ ದಳದ ಇಬ್ಬಂದಿ ನೀತಿಯ ಬಗ್ಗೆ ವ್ಯಂಗವಾಡಿದ್ದರು. ಚುನಾವಣೆ ಪೂರ್ವ ವೈರಿಗಳಂತೆ ಕಚ್ಚಾಡುವ ಕಾಂಗ್ರೆಸ್ ಮತ್ತು ಜೆಡಿಎಸ್, ಚುನಾವಣೆ ಮುಗಿದ ನಂತರ ಒಬ್ಬರನ್ನೊಬ್ಬರು ಆಲಂಗಿಸಲು ಸಜ್ಜಾಗಿಯೇ ಇರುತ್ತಾರೆ ಎಂಬುದರಲ್ಲಿ ಸತ್ಯವೂ ಇದೆ.
ಕರ್ನಾಟಕದೊಂದಿಗೆ ಹಲವು ವರ್ಷಗಳ ಒಡನಾಟವಿರುವ ಅಮಿತ್ ಶಾ ಕರುನಾಡಿನ ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲರು. ಕಲ್ಯಾಣಕರ್ನಾಟಕ, ಹಳೆ ಮೈಸೂರು, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳ ಮತದಾರರ ವಿಭಿನ್ನ ಪ್ರಾಧಾನ್ಯತೆಗಳನ್ನು ಅರಿತಿದ್ದ, ತಾವು ಹೋದೆಡೆಯಲ್ಲೆಲ್ಲಾ
ಅಲ್ಲಿನ ಸ್ಥಳೀಯ ಸಮಸ್ಯೆಗಳು ಮತ್ತು ಬಿಜೆಪಿ ಅಧಿಕಾರವಧಿಯಲ್ಲಿ ಆ ಪ್ರದೇಶದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನ್ನು ಒತ್ತಿ ಹೇಳುವ ಮೂಲಕ ಮತದಾರರ ಮನ ಸೆಳೆಯುತ್ತಿದ್ದಾರೆ.
ಈ ಬಾರಿ ಇನ್ನೊಂದು ಪ್ರಮುಖ ಸಂಗತಿಯೆಂದರೆ ‘ಸಹಕಾರ’. ಸಹಕಾರಿ ರಂಗದ ಕರ್ಮಭೂಮಿಯೆಂದೇ ಕರ್ನಾಟಕ ಖ್ಯಾತ. ಈ ಹಿನ್ನಲೆಯನ್ನು ಅರಿತಿ ರುವ ಅವರು, ಚುನಾವಣೆಗೂ ಆರು ತಿಂಗಳು ಮೊದಲಿಂದಲೇ ಸಹಕಾರಿ ಮಂತ್ರದಿಂದ ಮೈಸೂರು ಭಾಗದ ರೈತರ ಮೇಲೆ ಮೋಡಿ ಮಾಡಲು ಯೋಜಿಸಿ ರುವುದು ಸ್ಪಷ್ಟ. ವಿಶೇಷವೆಂದರೆ, ಇದೇ ಮೊದಲ ಬಾರಿ ನರೇಂದ್ರ ಮೋದಿ ನೇತೃತ್ವದ ಸರಕಾರ ‘ಸಹಕಾರ’ವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ, ಅದಕ್ಕೆ ಬೇರೆಯದೇ ಆದ ಪ್ರತ್ಯೇಕ ಇಲಾಖೆ ಸೃಷ್ಟಿ ಮಾಡಿಕೊಟ್ಟಿತು.
ಈ ಸಹಕಾರ ಸಚಿವಾಲಯದ ಮೊದಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಮಿತ್ ಶಾ, ಭಾರತದ ಸಹಕಾರ ವಲಯಕ್ಕೆ ಹೊಸ ಮಾರ್ಗಸೂಚಿ ರೂಪಿಸುತ್ತಿರುವುದು ಪ್ರಶಂಸನೀಯ. ಇತ್ತೀಚೆಗಷ್ಟೆ ಕೃಷಿ ಉತ್ಪನ್ನಗಳ ರಫ್ತಿಗಾಗಿ ಬಹುರಾಜ್ಯ ರಫ್ತು ಸಂಘ, ಸಾವಯವ ಕೃಷಿ ಉತ್ತೇಜನಕ್ಕಾಗಿ ಬಹು ರಾಜ್ಯ ಸಾವಯವ ಸಂಘ ಮತ್ತು ಅತ್ಯುತ್ತಮ ದೇಶಿಯ ಬೀಜಗಳ ಸಂರಕ್ಷಣೆ ಮತ್ತು ಬಹುರಾಜ್ಯ ಬೀಜ ನಿಗಮಗಳಂಥ ರಾಷ್ಟ್ರವ್ಯಾಪಿ ಸಹಕಾರ
ಸಂಘಗಳನ್ನು ಸ್ಥಾಪಿಸುವ ಮೂಲಕ ದೇಶದ ಕೃಷಿಕರಿಗೆ ಶುಭ ಸುದ್ದಿ ನೀಡಿದ್ದಾರೆ.
ಕಳೆದ ಬಾರಿ ಮಂಡ್ಯದಲ್ಲಿ ಮೆಘಾ ಡೈರಿ ಉದ್ಘಾಟಿಸಿದ್ದ ಅಮಿತ್ ಶಾ, ಕರ್ನಾಟಕದ ನಂದಿನಿ ಮತ್ತು ಗುಜರಾತಿನ ಅಮುಲ್ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಪ್ರಸ್ತಾಪ ಮಾಡಿದರು. ಕರ್ನಾಟಕ ಹಾಲು ಒಕ್ಕೂಟದ ಕಾರ್ಯವೈಖರಿ ಯನ್ನು ಮುಕ್ತ ಕಂಠದಿಂದ ಹೊಗಳಿ, ನಂದಿನಿ ಬ್ರ್ಯಾಂಡ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು, ಕೇಂದ್ರ ಸರಕಾರದ ಸಹಕಾರ ಇಲಾಖೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಿಂದ ಇನ್ನಷ್ಟು ನೆರವು ಕೊಡುವ ಭರವಸೆ ನೀಡಿದ್ದರು. ಇದು ನೇರವಾಗಿ ಈ ಭಾಗದ ರೈತರನ್ನು ಭಾರತೀಯ ಜನತಾ ಪಕ್ಷದ ಕಡೆಗೆ ವಾಲುವಂತೆ ಮಾಡುವುದರಲ್ಲಿ ಅನುಮಾನ ಇಲ್ಲ.
ಹಳೆ ಮೈಸೂರು ವಿಭಾಗದಲ್ಲಿ ಬಿಜೆಪಿ ಮೊದಲಿನಿಂದಲೂ ನೆಲೆ ಕಂಡುಕೊಳ್ಳಲು ಹೆಣಗುತ್ತಿದೆ. ಸಾಮಾನ್ಯವಾಗಿ ವಿಧಾನಸಭೆ ವಿಚಾರಕ್ಕೆ ಬಂದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಮತ ಹಾಕುವ ಈ ಭಾಗದ ಜನರು ಲೋಕಸಭಾ ಚುನಾವಣೆಯಲ್ಲಿ ಭಾಜಪದ ಪ್ರತಾಪ್ ಸಿಂಹರಿಗೆ ಮತ ಹಾಕಿದ್ದು ಮತ್ತು ಮಂಡ್ಯ ಕ್ಷೇತ್ರದಲ್ಲಿ ಪಕ್ಷಭೇದ ಮರೆತು ಸ್ವತಂತ್ರ ಅಭ್ಯರ್ಥಿ ಸುಮಲತಾರನ್ನು ಆಯ್ಕೆ ಮಾಡಿರುವುದು ಈ ಜನರ ಪ್ರಬುದ್ಧತೆಗೆ ಸಾಕ್ಷಿ. ಇದನ್ನು ಅರಿತಿರುವ ಅಮಿತ್ ಶಾ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಕನಿಷ್ಠ ೨೫ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಟಾರ್ಗೆಟ್ ನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ.
ಇನ್ನೂ ಕಾಂಗ್ರೆಸ್ ತುಸು ಬಲಿಷ್ಠವಾಗಿರುವ ಉತ್ತರ ಕರ್ನಾಟಕದ ಒಲವು ಪಡೆಯಲೆಂದೇ ಈ ಚಾಣಾಕ್ಯಮಹದಾಯಿ ಮಂತ್ರ ಪಠಿಸಿದ್ದು. ಕೆಲ ತಿಂಗಳ ಹಿಂದೆ ಹುಬ್ಬಳಿ ಮತ್ತು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ತಮ್ಮ ಭಾಷಣದಲ್ಲಿ ಮಹದಾಯಿ ಸಂಕಷ್ಟಕ್ಕೆ ಗೋವಾ ಮುಖ್ಯಮಂತ್ರಿಗಳ
ಜತೆಗೆ ಸಮಾಲೋಚನೆ ನಡೆಸಿ ಪರಿಹಾರ ಒದಗಿಸುವುದಾಗಿ ಹೇಳಿದ್ದರು. ಮಾತ್ರವಲ್ಲ, ಇದೇ ಸಂದರ್ಭದಲ್ಲಿ, ೨೦೦೭ರಲ್ಲಿ ‘ಕರ್ನಾಟಕದೆಡೆಗೆ ಮಹದಾಯಿ ನೀರನ್ನು ಯಾವುದೇ ಕಾರಣಕ್ಕೂ ಹರಿಯಲು ಬಿಡುವುದಿಲ್ಲ’ ಎಂಬ ಕಾಂಗ್ರೆಸ್ ನಾಯಕಿ ಸೋನಿಯಾ ಹೇಳಿಕೆ ಮತ್ತು ೨೦೨೨ರಲ್ಲಿ ಗೋವಾ ವಿಧಾನಸಭೆ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ವರು ‘ಮಹದಾಯಿಯ ಒಂದು ಹನಿ ನೀರೂ ಕರ್ನಾಟಕಕ್ಕೆ ಸಿಗದ ಹಾಗೇ ಮಾಡುವುದು ಸುನಿಶ್ಚಿತ’ ಎಂದು ಕಾಂಗ್ರೆಸ್ ಹೊರಡಿಸಿದ್ದ ಘೋಷಣಾ ಪತ್ರವನ್ನು ನೆನಪಿಸಿದ್ದರು.
ಈ ವಿಷಯದಲ್ಲಿ ಕಾಂಗ್ರೆಸ್ನ ಇಬ್ಬಂದಿತನವನ್ನು ಪ್ರಶ್ನಿಸಿದ್ದ ಅಮಿತ್ ಶಾ, ಉತ್ತರ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕೊಡುಗೆ ಯನ್ನು ಪ್ರಶ್ನಿಸಿದರು. ಅದಾಗಿ ಕೆಲವೇ ದಿನಗಳಲ್ಲಿ ಮಹದಾಯಿ ಡಿಪಿಆರ್ಗೆ ಕೇಂದ್ರದ ಅನುಮೋದನೆ ಸಿಕ್ಕಿತ್ತು. ಹಾಗೇ ಕಿತ್ತೂರಿನ ವೀರ
ಭೂಮಿಯ ಮೂಲಕ ವಿಜಯ ಸಂಕಲ್ಪ ಯಾತ್ರೆಯನ್ನು ಶಾ ಹೊರಡಿಸಿದ್ದು ವಿಶೇಷ. ಇದನ್ನು ಹೊರತುಪಡಿಸಿ ಕರಾವಳಿ ಬಿಜೆಪಿಯ ಭದ್ರಕೋಟೆ. ಇಲ್ಲಿ
ಅಮಿತ್ ಶಾ ಪ್ರಯೋಗಿಸಿದ್ದು, ಟಿಪ್ಪು ಮತ್ತು ಅಬ್ಬಕ್ಕನ ಹೆಸರುಗಳನ್ನು. ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಪಿಎಫ್ಐನಂತಹ ಉಗ್ರಗಾಮಿ ಸಂಘಟನೆಗಳ ಮೇಲಿನ ೧೭೦೦ ಕೇಸ್ ಗಳನ್ನು ಹಿಂಪಡೆದ ಟಿಪ್ಪುವಿನ ಅನುಯಾಯಿಗಳಿಂದ ದೇಶದ
ಸುರಕ್ಷೆ ನಿರೀಕ್ಷಿಸುವುದು ಮೂರ್ಖತನವೆಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಉದ್ದೇಶಪೂರ್ವಕ.
ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ, ಬಿ.ಎಸ್ .ಯಡಿಯೂರಪ್ಪನವರನ್ನು ಹೊರತು ಪಡಿಸಿ ರಾಜ್ಯವ್ಯಾಪಿ ಪ್ರಭಾವ ಬೀರಬಲ್ಲ ನಾಯಕರಿಲ್ಲ. ಯಡಿಯೂ ರಪ್ಪನವರು ಕೂಡ ಈ ಬಾರಿ ತುಂಬಾ ಬಳಲಿದವರಂತೆ ಕಾಣುತ್ತಿದ್ದು, ಅಷ್ಟು ಚುರುಕಾಗಿ ಕಾಣುತ್ತಿಲ್ಲ. ಬೊಮ್ಮಾಯಿವರಿಗೆ ತಮ್ಮದೇ ಸಮುದಾಯದ ಮೀಸಲಾತಿ ಹೋರಾಟ ತೊಡಕಾಗುತ್ತಿರುವುದು ವಿಷಾದ. ಈ ಸಂದರ್ಭದಲ್ಲಿ ಕೇಂದ್ರ ನಾಯಕರ ಸಾರಥ್ಯ ಅನಿವಾರ್ಯ. ಅದರಲ್ಲೂ ತಮ್ಮ ರಾಜಕೀಯ ತಂತ್ರಗಾರಿಕೆಗಳಿಗೆ ಹೆಸರುವಾಸಿಯಾಗಿರುವ ಅಮಿತ್ ಶಾ ಪ್ರಭಾವ ರಾಜ್ಯದಲ್ಲಿ ಕೆಲಸ ಮಾಡೀತೇ ಎಂಬುದು ಕುತೂಹಲಕಾರಿ ಸಂಗತಿ.