Sunday, 15th December 2024

ಅಮ್ಮನಿಂದ ನಾನು ಕಲಿತ ಬದುಕಿನ ಪಾಠ !

ಸ್ಫೂರ್ತಿಸೆಲೆ

ರೋಹಿಣಿ ನಿಲೇಕಣಿ

ದುರ್ಗಾಬಾಯಿ ನಿಲೇಕಣಿ ಇತ್ತೀಚೆಗೆ ೧೦೦ನೇ ವರ್ಷಕ್ಕೆ ಕಾಲಿಟ್ಟರು. ಅವರು ನನ್ನ ಅತ್ತೆ. ನಾನು ಅಮ್ಮ ಎಂದೇ ಕರೆಯುತ್ತೇನೆ. ತಕ್ಕ ಮಟ್ಟಿಗೆ ಆರೋಗ್ಯ ವಾಗಿದ್ದಾರೆ. ದೈಹಿಕವಾಗಿ ಸಾಕಷ್ಟು ಚಟುವಟಿಕೆಯಿಂದ ಇರುತ್ತಾರೆ. ಮಾನಸಿಕವಾಗಿಯೂ ಪ್ರಶಾಂತವಾಗಿದ್ದಾರೆ. ವಯೋಸಹಜ ಕೆಲ ಸಣ್ಣ ಪುಟ್ಟ ಅನಾರೋಗ್ಯಗಳು ಇವೆ ಎಂಬುದು ನಿಜ. ಸಣ್ಣ ಪ್ರಮಾಣ ದಲ್ಲಿ ಮರೆವು, ಏಕಾಗ್ರತೆಯ ಕೊರತೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲದಂಥ ಸಮಸ್ಯೆಗಳಿವೆ.

ಆದರೆ ‘ಅಮ್ಮಾ ಹೇಗಿದ್ದೀರಿ?’ ಎಂದು ಯಾವಾಗ ಕೇಳಿದರೂ ‘ಓಹ್! ತುಂಬಾ ಚೆನ್ನಾಗಿದ್ದೇನೆ’! ಎನ್ನುತ್ತಾರೆ. ಕೆಲವೊಮ್ಮೆ ‘ಏಕ್‌ದಂ -ನ್’ ಎಂದು ನಗುತ್ತಾರೆ. ಒಮ್ಮೊಮ್ಮೆ ಅವರು ಉಸಿರಾಡಲು ತೊಂದರೆ ಪಡುತ್ತಿರುವಾಗ ಅಥವಾ ಅವರಿಗೇನೋ ನೋವಾಗುತ್ತಿದೆ ಎಂಬುದು ನಮಗೆ ಗೊತ್ತಿದ್ದಾಗಲೂ ‘ಹೇಗಿದ್ದೀರಿ?’ ಎಂದು ಕೇಳಿದರೆ ಹೀಗೇ ಹೇಳುತ್ತಾರೆ.

ಅದು ಅವರು ಗಳಿಸಿಕೊಂಡ ಜೀವನದ ಪಾಠ. ಇಷ್ಟು ವರ್ಷಗಳ ಸುದೀರ್ಘ ಬದುಕಿನಲ್ಲಿ ಅವರು ಹೇಗೆ ಚೆನ್ನಾಗಿ ಬದುಕಬೇಕೆಂಬುದಕ್ಕೆ ಪ್ರಕೃತಿ ಸಹಜ ವಾದ ತರಬೇತಿ ಪಡೆದಿದ್ದಾರೆ ಎಂದೇ ನನ್ನ ಭಾವನೆ. ಕೆಲವೊಮ್ಮೆ ನನಗೇ ಒಂಥರಾ ಖಿನ್ನತೆಯ ಅನುಭವ ಆಗುವಾಗ, ‘ಅಮ್ಮಾ, ಹೇಗೆ ನೀವು
ಇಷ್ಟೊಂದು ಜೀವನೋತ್ಸಾಹದಿಂದ ಇರುತ್ತೀರಿ?’ ಎಂದು ಕೇಳುತ್ತೇನೆ. ‘ತುಂಬಾ ಸಿಂಪಲ್. ನಾನು ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಬದುಕಿನ ಬಗ್ಗೆ ಯೋಚಿಸುತ್ತೇನೆ. ಅದರಿಂದಾಗಿ ಖುಷಿಯಾಗಿರು ತ್ತೇನೆ’ ಎನ್ನುತ್ತಾರೆ.

ನನಗೆ ಅನ್ನಿಸುವುದೇನು ಗೊತ್ತಾ? ತುಂಬಾ ಹಿಂದೆಯೇ ನಾವು ಕಳೆದುಕೊಂಡ ಸರಳ ಹಾಗೂ ತೃಪ್ತ ಸಮಾಜದ ಸಂಸ್ಕೃತಿಗೆ ದುರ್ಗಾಬಾಯಿ ಬಹಳ ಒಳ್ಳೆಯ ಉದಾಹರಣೆ. ಅವರ ತಂದೆ ಅಣ್ಣಾಜಿ ರಾವ್ ಶಿರೂರ್. ಧಾರವಾಡದಲ್ಲಿ ಜನಪ್ರಿಯ ಡಾಕ್ಟರ್ ಆಗಿದ್ದರು. ಅಮ್ಮ ಅಲ್ಲೇ ೧೪ ಮಕ್ಕಳು ಹಾಗೂ ನೆಂಟರಿಷ್ಟರ ದೊಡ್ಡ ಕುಟುಂಬದ ಜತೆಗೆ ಬೆಳೆದರು. ಓಡಾಡಲು ಸಾಕಷ್ಟು ಜಾಗಗಳೇನೋ ಇದ್ದವು. ಆದರೆ ಖರ್ಚು ಮಾಡಲು ಕೈಯಲ್ಲಿ ಬೇಕಾದಷ್ಟಿ
ರಲಿಲ್ಲ. ‘ಏನನ್ನೂ ವೇಸ್ಟ್ ಮಾಡಬೇಡಿ, ಹೆಚ್ಚೇನೂ ಕೇಳಬೇಡಿ’ ಎಂಬುದು ಅವರಿಗೆ ಹಿರಿಯರು ಹೇಳಿಕೊಟ್ಟ ಮಂತ್ರ.

ಅದರ ಜತೆಗೇ, ಯಾವುದನ್ನೂ ಅತಿಯಾಗಿ ಮಾಡದೆ ಮಧ್ಯಮ ವೇಗದಲ್ಲಿ ಸರಳವಾಗಿ ಬದುಕುವ ಕಲೆಯನ್ನು ಅವರಿಗೆ ಕಲಿಸಲಾಗಿತ್ತು. ಬಹುಶಃ ಅವರಿಗೆ ‘ಮಿತವಾಗಿ ಬಳಸಿ, ಮರುಬಳಕೆ ಮಾಡಿ ಹಾಗೂ ರೀಸೈಕಲ್ ಮಾಡಿ’ ಎಂಬ ಉಪದೇಶವೂ ಹಿರಿಯರ ಬದುಕಿನ ಶೈಲಿಯಿಂದಲೇ ದೊರೆತಿತ್ತು ಅನ್ನಿಸು
ತ್ತದೆ. ಅಮ್ಮ ಧಾರವಾಡದಲ್ಲಿ ಮನೆ ನಡೆಸುವಾಗ ಅಲ್ಲಿದ್ದ ಪ್ರತಿ ತ್ಯಾಜ್ಯ ವಸ್ತುವೂ ಹೊಸ ಹುಟ್ಟು ಪಡೆದು, ಇಂದಿನ ಯೂಸ್ ಅಂಡ್ ಥ್ರೋ ಬಳಕೆದಾರ ರಿಗೆ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಪುನರ್ಬಳಕೆಯಾಗುತ್ತಿದ್ದುದನ್ನು ನಾನು ನೋಡಿದ್ದೇನೆ. ‘ಸರಳ ಜೀವನ ಹಾಗೂ ಉದಾತ್ತ ಚಿಂತನೆ’ ಎಂಬ ತತ್ವ ಅವರಿಗೆ ಕೇವಲ ಪದಗಳಾಗಿರಲಿಲ್ಲ, ಬದಲಿಗೆ ಬದುಕಿನ ಧರ್ಮವೇ ಆಗಿತ್ತು. ಎಲ್ಲರ ಬಗ್ಗೆಯೂ ಕರುಣೆ ಹೊಂದಿರಬೇಕು ಎಂಬುದು ಅವರಿಗೆ ಕೇವಲ ಧರ್ಮ ಗ್ರಂಥಗಳಲ್ಲಿ ಬರೆದ ಸಾಲಾಗಿರಲಿಲ್ಲ, ಬದಲಿಗೆ ಸದಾ ತೆರೆದಿರುತ್ತಿದ್ದ ಅವರ ಮನೆಗೆ ಬರುವ ಪ್ರತಿಯೊಬ್ಬರಿಗೂ ಅಮ್ಮ ತೋರುವ ಭಾವನೆ ಅದಾಗಿತ್ತು.

ಒಮ್ಮೆ ಸಂಬಂಧಿಕರೊಬ್ಬರಿಗೆ ತೀವ್ರ ಅನಾರೋಗ್ಯವಾಗಿತ್ತು. ಚಿಕಿತ್ಸೆಗೆ ಬಹಳ ಹಣ ಬೇಕಾಗಿತ್ತು. ಆಗ ಅಮ್ಮ ತಮ್ಮಲ್ಲಿದ್ದ ಹೆಚ್ಚುಕಮ್ಮಿ ಎಲ್ಲವನ್ನೂ ಅವರಿಗೆ ಕೊಟ್ಟುಬಿಟ್ಟಿದ್ದರು. ‘ನನ್ನನ್ನು ನೋಡಿಕೊಳ್ಳಲು ಮಕ್ಕಳಿಲ್ಲವೇ? ಅವರಿರುವಾಗ ನನಗೇಕೆ ಹಣಬೇಕು’ ಎಂದು ಕೇಳಿದ್ದರು. ಮನುಷ್ಯರು
ಮನುಷ್ಯರನ್ನೇ ಕರುಣೆಯಿಂದ ಕಾಣುವ ಬದಲು ಎಲ್ಲರೂ ಎಲ್ಲರನ್ನೂ ಅನುಮಾನದಿಂದ ನೋಡುವ ಹಾಗೂ ಅಕ್ಕ ಪಕ್ಕದ ಮನೆಯವರೇ ಹೆಚ್ಚಿನ ವರಿಗೆ ಅಪರಿಚಿತರಾಗಿರುವ ಇಂದಿನ ಜಗತ್ತಿನಲ್ಲಿ ಅಮ್ಮ ನನಗೆ ತುಂಬಾ ಅಪರೂಪದ ಸರಕಾಗಿ ಕಾಣಿಸುತ್ತಾರೆ.

ಅಮ್ಮ ಬದುಕಿದ ಕಾಲಘಟ್ಟವು ಮನುಷ್ಯನ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಅವಧಿಯೆಂದು ಹೇಳಬಹುದು. ಈ ಅವಧಿಯಲ್ಲಿ ಜಗತ್ತಿನಲ್ಲಿ ಹೆಚ್ಚಿನ ಜನರು ಅವರಿಗಿಂತ ಮುಂಚೆ ಬದುಕಿದ್ದವರಿಗಿಂತ ಎಲ್ಲದನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಅಥವಾ ಅನುಭವಿಸಿದ್ದಾರೆ. ಹೀಗಾಗಿ ಕಳೆದ ೧೦೦ ವರ್ಷಗಳಲ್ಲಿ ಅಮ್ಮ ಬಹು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದ್ದಾರೆ. ಅವರ ಜೀವಿತಾವಧಿಯಲ್ಲೇ ವಿಶ್ವ ಮಹಾಯುದ್ಧ ನಡೆದಿದೆ. ಸ್ವಾತಂತ್ರ್ಯ
ಹೋರಾಟ ನಡೆದಿದೆ. ತಂತ್ರಜ್ಞಾನದಲ್ಲಿ ಅಗಾಧ ಪ್ರಗತಿಯಾಗಿದೆ.

ನಮ್ಮ ದೇಶ ಶ್ರೀಮಂತವಾಗಿದೆ. ಅವರು ಕೊರತೆಯನ್ನೂ ನೋಡಿದ್ದಾರೆ, ಸಮೃದ್ಧಿಯನ್ನೂ ಕಂಡಿದ್ದಾರೆ. ಬದುಕು ಮತ್ತು ಸಾವು ಎರಡನ್ನೂ ನೋಡಿ ದ್ದಾರೆ. ತಮ್ಮ ಪತಿ ಮೋಹನರಾವ್ ನಿಲೇಕಣಿ ಹಾಗೂ ಅನೇಕ ಸಹೋದರ ಸಹೋದರಿಯರ ಸಾವನ್ನು ಕಂಡಿದ್ದಾರೆ. ಅದೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಕಬ್ಬಿಣದ ಹೆಂಚಿನ ಮೇಲೆ ಕಟ್ಟಿಗೆ ಒಲೆಯಲ್ಲಿ ಜೋಳದ ರೊಟ್ಟಿ ಮಾಡಿದಷ್ಟೇ ಸಹಜವಾಗಿ ಅವರು ಮೈಕ್ರೋವೇವ್ ಓವನ್ ಕೂಡ ಬಳಸಬಲ್ಲರು. ಅಂಚೆ ಕಾರ್ಡ್‌ನಲ್ಲಿ ಪತ್ರ ಬರೆಯುತ್ತಿದ್ದಷ್ಟೇ ಸುಲಭವಾಗಿ ಜೂಮ್ ಕಾಲ್‌ಗಳಲ್ಲೂ ಮಾತನಾಡ ಬಲ್ಲರು. ‘ನಾವು ಎಲ್ಲದಕ್ಕೂ ಅಡ್ಜಸ್ಟ್ ಆಗಬೇಕು ಅಲ್ವಾ?’ ಎಂಬುದು ಅವರ ಸರಳವಾದ ಚಿಂತನೆ.

ಆದರೆ ಒಂದು ವಿಷಯದ ಜತೆಗೆ ಮಾತ್ರ ಅವರಿಗೆ ಅಡ್ಜಸ್ಟ್ ಮಾಡಿಕೊಳ್ಳಲು ಆಗುವುದಿಲ್ಲ. ಅದು ಹಣದುಬ್ಬರ! ಅರ್ಥಾತ್ ಬೆಲೆಯೇರಿಕೆ. ಈಗೇನೂ ಅವರು ಶಾಪಿಂಗ್‌ಗೆ ಹೋಗುವುದಿಲ್ಲ ಅಥವಾ ಮನೆಗೆ ಬೇಕಾದ ದಿನಸಿ ವಸ್ತು ಹಾಗೂ ತರಕಾರಿಗಳನ್ನು ತರುವುದಿಲ್ಲ. ಆದರೆ ನಾನು ದಿನಬಳಕೆ ವಸ್ತುಗಳ ಬೆಲೆಯ ಬಗ್ಗೆ ಹೇಳಿದಾಗ ಅವರ ಮುಖದಲ್ಲಿ ಅಸಹನೆ ಕಾಣಿಸುತ್ತದೆ. ‘ಪಾಪ, ಬಡವರು ಹೇಗೆ ಜೀವನ ಮಾಡ್ತಾರೆ?’ ಎಂದು ಕೇಳುತ್ತಾರೆ. ಎಲ್ಲವೂ ಇಷ್ಟೊಂದು ದುಬಾರಿ ಹೇಗಾಗಿದೆ ಎಂದು ಅವರಿಗೆ ಆಶ್ಚರ್ಯ. ಬಡವರ ಕಷ್ಟ ನೆನೆದು ಮರುಗುತ್ತಾರೆ.

ತಮಗೆ ಎಷ್ಟೊಂದು ವಯಸ್ಸಾಗಿಬಿಟ್ಟಿದೆ ಎಂಬುದನ್ನು ನೆನೆದರೂ ಅವರಿಗೆ ಆಶ್ಚರ್ಯವಾಗುತ್ತದೆ. ‘ದೇವರು ನನ್ನನ್ನು ಕರೆದುಕೊಂಡು ಹೋಗಲು ಮರೆತೇಬಿಟ್ಟಿದ್ದಾನಾ ಹೇಗೆ?’ ಎಂದು ಜೋಕ್ ಮಾಡುತ್ತಾರೆ. ಆಗೆಲ್ಲ ನಾನು, ‘ನೀವು ೯೯ ಬಾರಿಸಿ ನಾಟ್ ಔಟ್ ಆಗಿರುವುದರಿಂದ ಸೆಂಚುರಿ ಹೊಡೆದೇ ಹೊಡೆಯುತ್ತೀರಿ’ ಎಂದು ಹೇಳುತ್ತೇನೆ. ಅದನ್ನು ಅವರೂ ಒಪ್ಪಿಕೊಂಡು ತಮ್ಮ ಎಂದಿನ ಶೈಲಿಯಲ್ಲಿ ಜೋರಾಗಿ ನಗುತ್ತಾರೆ. ೧೯೨೫ರಲ್ಲಿ ದುರ್ಗಾಬಾಯಿ ಜನಿಸಿದರು. ಆ ಸಮಯ ದಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ ೨೭.೬ ವರ್ಷ ಇತ್ತು!

ಇಂದು ಅದು ದುಪ್ಪಟ್ಟಿಗಿಂತ ಹೆಚ್ಚಾಗಿ ೬೭.೨ ವರ್ಷ ವಾಗಿದೆ. ಇದರರ್ಥ, ಮುಂದಿನ ಕೆಲ ದಶಕಗಳಲ್ಲಿ ಭಾರತಕ್ಕೆ ಬಹಳ ಬೇಗವಾಗಿ ವಯಸ್ಸಾಗುತ್ತದೆ. ಇಂಡಿಯಾ ಏಜಿಂಗ್ ರಿಪೋರ್ಟ್-೨೦೨೩ರ ಪ್ರಕಾರ, ೨೦೫೦ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟವರೇ ಶೇ.೨೦.೮ ರಷ್ಟು ಜನರಿರುತ್ತಾರೆ. ಅಂದರೆ ಹೆಚ್ಚುಕಮ್ಮಿ ೩೫ ಕೋಟಿ ವೃದ್ಧರು ನಮ್ಮ ದೇಶದಲ್ಲಿರುತ್ತಾರೆ. ಇದು ಇಡೀ ಅಮೆರಿಕದ ಜನಸಂಖ್ಯೆಗೆ ಸಮ! ೨೦೨೨ರಲ್ಲಿ ನಮ್ಮ ದೇಶದಲ್ಲಿ ಒಟ್ಟು ೧೪.೯ ಕೋಟಿ, ಅಂದರೆ ಒಟ್ಟು ಜನಸಂಖ್ಯೆಯ ಶೇ.೧೦.೫ರಷ್ಟು ವೃದ್ಧರಿದ್ದರು. ಆ ಪ್ರಮಾಣ ಬಹಳ ವೇಗವಾಗಿ ಬೆಳೆಯುತ್ತಿದೆ. ಇಂದು ಭಾರತ ಯುವಕರ ದೇಶ. ಹೀಗಾಗಿ ಉತ್ಸಾಹ ದಿಂದ ಅಭಿವೃದ್ಧಿ ಹೊಂದುತ್ತಿದೆ.

ಇದನ್ನೇ ನಾವು ಯುವ ದೇಶದ ಡೆಮಾಗ್ರಫಿಕ್ ಡಿವಿಡೆಂಡ್ ಎಂದು ಮಾತನಾಡು ತ್ತೇವೆ. ೨೦೨೫ರ ಹೊತ್ತಿಗೆ ಇದೊಂದು ಕನಸಿನಂತೆ ತೋರು ತ್ತದೆ. ಆಗ ನಮ್ಮ ದೇಶವು ಆರೋಗ್ಯದ ಬಗ್ಗೆ, ಸ್ವಾಸ್ಥ್ಯದ ಬಗ್ಗೆ, ಕುಸಿದ ಕಾರ್ಮಿಕ ವರ್ಗದ ಬಗ್ಗೆ, ನಿವೃತ್ತರಿಗೆ ಪಿಂಚಣಿ ನೀಡುವುದಕ್ಕಿರುವ ಆರ್ಥಿಕ ಸವಾಲು
ಗಳ ಬಗ್ಗೆ ಹಾಗೂ ಎಲ್ಲರಿಗೂ ಪಿಂಚಣಿ ನೀಡುವುದರ ಬಗ್ಗೆ ಯೋಚನೆ ಮಾಡುತ್ತಿರುತ್ತದೆ. ಭಾರತ ಮಾತ್ರವಲ್ಲ, ಬಹಳಷ್ಟು ದೇಶಗಳು ಇಂಥದ್ದೇ ಸವಾಲುಗಳನ್ನು ಎದುರಿಸಲಿವೆ. ಇನ್ನು ಕೆಲವು ವರ್ಷಗಳಲ್ಲಿ ಮನುಕುಲವು ಮೊಟ್ಟಮೊದಲ ಬಾರಿಗೆ ‘ಸಾಮೂಹಿಕ ವೃದ್ಧಾಪ್ಯದ ಸಮಸ್ಯೆ’ಯನ್ನು ಎದುರಿಸಬೇಕಾಗುತ್ತದೆ. ಕೆಲ ಅಂದಾಜುಗಳ ಪ್ರಕಾರ ಈಗಾಗಲೇ ಜಗತ್ತಿನಲ್ಲಿ ೫ ಲಕ್ಷಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ.

ಮೇಲಾಗಿ, ಮನುಷ್ಯರ ಜೀವಿತಾವಧಿ ಹೆಚ್ಚಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳು ಕೂಡ ನಡೆಯುತ್ತಿವೆ. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಜನರನ್ನು ಹೆಚ್ಚು ವರ್ಷಗಳ ಕಾಲ ಹೇಗೆ ಬದುಕಿಸಬೇಕು ಎಂಬುದರ ಕುರಿತ ಸಂಶೋಧನೆಗಳು ವೇಗವಾಗಿ ಪ್ರಗತಿ ಕಾಣುತ್ತಿವೆ. ಸಿಲಿಕಾನ್ ವ್ಯಾಲಿಯ ಬಿಲಿಯ ನೇರ್‌ ಗಳು ಅಮ್ಮನಂತೆ ‘ದೇವರು ನನ್ನನ್ನು ಕರೆದುಕೊಂಡು ಹೋಗಲು ಮರೆತಿರಬೇಕು’ ಎಂದು ಯೋಚಿಸುವುದಿಲ್ಲ, ಬದಲಿಗೆ ಅವರಿಗೆಲ್ಲ ತಮ್ಮ ಜೀವಿತಾವಧಿ ಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಖಯಾಲಿ ಅಂಟಿಕೊಂಡಿದೆ. ಅವರಲ್ಲೊಬ್ಬರಂತೂ ‘ಸಾವು ಎಂಬುದು ತಾತ್ಕಾಲಿಕ ಸಮಸ್ಯೆಯಷ್ಟೆ, ಅದು ಬದುಕಿನ ಲಕ್ಷಣವಲ್ಲ!’ ಎಂದು ಹೇಳಿದ್ದಾರಂತೆ. ೨೦೩೦ರ ವೇಳೆಗೆ ೯೦ ವರ್ಷವೆಂಬುದು ಹೊಸ ೫೦ ವರ್ಷವಾಗಬೇಕು ಎಂದು ಮೆತುಸೆಲಾ ಹೆಸರಿನ ಫೌಂಡೇಷನ್ ಒಂದು ಕೆಲಸ ಮಾಡುತ್ತಿದೆ. ಅವರ ಪ್ರಾಜೆಕ್ಟ್ ವಿಫಲವಾಗುವ ಸಾಧ್ಯತೆಯೇ ಹೆಚ್ಚು ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ.

ಅದು ವಿಫಲವಾದರೂ ಮರೆಗುಳಿತನ ಹಾಗೂ ಇತರೆ ವಯೋಸಹಜ ಅನಾರೋಗ್ಯಗಳಿಗೆ ಒಂದಷ್ಟು ಪರಿಹಾರ ಸಿಗುವ ಸಾಧ್ಯತೆಯಂತೂ ಹೆಚ್ಚಿದೆ.
ಇಂಥ ವೈದ್ಯಕೀಯ ಸಂಶೋಧನೆಗಳಿಗೆ ಅಮ್ಮ ಕೂಡ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರು ನಿಮ್ಹಾನ್ಸ್ ನಲ್ಲಿ ನಡೆಯುತ್ತಿರುವ ಸಂಶೋಧನೆಗೆ ರಕ್ತದಾನ ಮಾಡಲು ಒಪ್ಪಿದ್ದಾರೆ. ವಯಸ್ಸಾದ ಜನರಲ್ಲಿ ಹೇಗೆ ಜೀವಕೋಶಗಳು ಸಾಯುತ್ತವೆ ಮತ್ತು ಮರುಹುಟ್ಟು ಪಡೆಯುತ್ತವೆ ಎಂಬುದರ ಬಗ್ಗೆ ಅಲ್ಲಿ ಸಂಶೋಧನೆ ನಡೆಯುತ್ತಿದೆ. ಹಾಗೆಯೇ, ಯಾರಿಗಾದರೂ ಅನುಕೂಲವಾಗುತ್ತದೆ ಎಂದಾದರೆ ಅವರು ದೇಹದಾನ ಮಾಡಲು ಕೂಡ ಸಿದ್ಧರಿದ್ದಾರೆ.

೧೦೦ನೇ ಹುಟ್ಟುಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ನಾನು ಅಮ್ಮನ ಬಳಿ, ‘ನಿಮ್ಮ ಪ್ರಕಾರ ಜನರು ಎಷ್ಟು ವರ್ಷ ಬದುಕಬೇಕು?’ ಎಂದು ಕೇಳಿದೆ. ಅದಕ್ಕವರು, ‘ಎಲ್ಲಿಯ ವರೆಗೆ ಬೇರೆಯವರಿಗೆ ಹೊರೆಯಾಗುವುದಿಲ್ಲವೋ ಅಲ್ಲಿಯವರೆಗೆ ಬದುಕಬೇಕು. ಆದರೆ ಅದು ನಮ್ಮ ಕೈಲಿ ಇಲ್ಲ ಅಲ್ವಾ’ ಎಂದರು. ಸರಳ ಹಾಗೂ ಕರುಣೆಯ ಬದುಕು ನಡೆಸಿದ ಶತಾಯುಷಿಯ ಬಾಯಿಯಲ್ಲಿ ಬರುವ ಅನುಭವದ ಮಾತುಗಳಿವು. ಅವರು ತಮ್ಮ ಬದುಕಿಗೆ ಕೇವಲ ವರ್ಷ ಗಳನ್ನು ಸೇರಿಸುತ್ತಾ ಬಂದವರಲ್ಲ, ಬದಲಿಗೆ ಆ ವರ್ಷಗಳಿಗೆ ಬದುಕನ್ನು ಸೇರಿಸುತ್ತಾ ಬಂದವರು. ಅವರ ಜೀವನಾನುಭವವೇ ನಮಗೆ ಚೆನ್ನಾಗಿ ಬದುಕುವು ದಕ್ಕೆ ಬಹಳ ಒಳ್ಳೆಯ ಪಾಠ.

(ಲೇಖಕಿ ಸಮಾಜ ಸೇವಕಿ)