Thursday, 21st November 2024

ಕೂದಲೆಳೆ ಅಂತರದಲ್ಲಿ ಅಮೃತ ವಿಷವಾಯಿತು !

ಹಿಂದಿರುಗಿ ನೋಡಿದಾಗ

ಮಧ್ಯಯುಗದ ಯೂರೋಪಿನ ಹಲವು ದೇಶಗಳ ಅರಸರು ಮತ್ತು ಸಾಹಸೀ ನಾವಿಕರು ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡು ಹಿಡಿಯಬೇಕೆಂದು ಸ್ಪರ್ಧೆಗಿಳಿದರು. ಭಾರತಕ್ಕೆ ಮಾರ್ಗವನ್ನು ಕಂಡುಹಿಡಿಯುವುದರ ಜತೆಯಲ್ಲಿ ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕವನ್ನು ಕಂಡು ಹಿಡಿದರು. ಅಲ್ಲಿರುವ ಸಂಪತ್ತನ್ನು ದೋಚಿದರು. ಅವರು ದೋಚಿದ ಚಿನ್ನದ ಜತೆಯಲ್ಲಿ, ಚಿನ್ನಕ್ಕಿಂತ ಅಮೂಲ್ಯವಾಗಿದ್ದ ಹಲವು ಸಸ್ಯಗಳಿದ್ದವು.

ಅವುಗಳಲ್ಲಿ ಅರು ಸಸ್ಯಗಳು ಮುಖ್ಯವಾದವು. ಸಿಂಕೋನ ಮರದ ತೊಗಟೆಯಿಂದ ಕ್ವಿನೈನ್ ಔಷಧವನ್ನು ರೂಪಿಸಿ ಮಲೇರಿಯವನ್ನು ನಿಗ್ರಹಿಸಿದೆವು.
ಕಾಂಡ್ರೋಡೆಂಡ್ರಾನ್ ಸಸ್ಯದಿಂದ ಟ್ಯೂಬೋಕ್ಯುರಾರಿನ್ ದೊರೆಯುತ್ತದೆ. ಗಂಭೀರವಾದ ಶಸಚಿಕಿತ್ಸೆಗಳನ್ನು ನಡೆಸಬೇಕಾದರೆ ಒಡಲ ಸ್ನಾಯುಗಳು ಸಡಿಲವಾಗಿರಬೇಕು. ಟ್ಯೂಬೋಕ್ಯುರಾರಿನ್ ಉತ್ತಮ ಸ್ನಾಯು ಸಡಿಲಕ. ನಿಕೋಟಿಯಾನ ಸಸ್ಯ ಅಥವಾ ತಂಬಾಕು ಗಿಡವು ಮನುಷ್ಯನ ಸಪ್ತವ್ಯಸನಗಳಲ್ಲಿ ಒಂದಾದ ಧೂಮಪಾನದ ಚಟವನ್ನು ಉಂಟು ಮಾಡಿತು.

ಎರಿಥ್ರೋಕ್ಸೈಲಾನ್ ಮರದಿಂದ ಕೊಕೇನ್ ತಯಾರಿಸಿದೆವು. ಕೊಕೇನ್ ಚಟವನ್ನು ಉಂಟು ಮಾಡುವ ಮನುಕುಲ ಮಾರಕ ರಾಸಾಯನಿಕ. ಥಿಯೋಬ್ರೋಮೋ ಕಕೋವ ಅಬಾಲವೃದ್ಧರಾದಿಯಾಗಿ ಎಲ್ಲರೂ ಸವಿಯುವ ಚಾಕೊಲೇಟನ್ನು ನಮಗೆ ನೀಡಿದೆ. ಇನ್ನು ಸೊಲಾನಮ್ ಟ್ಯೂಬರೋಸಮ್ ಎನ್ನುವ ಗಿಡವು ಆಲೂಗಡ್ಡೆ ಎಂಬ ಅದ್ಭುತ ತರಕಾರಿಯನ್ನು ನಮಗೆ ನೀಡಿದೆ. ಈ ಉಪಯುಕ್ತ ಹಾಗೂ ಮಾರಕ ಸಸ್ಯಗಳ ನಡುವೆ ಇಪಿಕಾಕುವಾನ ಎಂಬ ಸಸ್ಯವೊಂದು ಒಂದಷ್ಟು
ಅಮೃತವೆಂಬಂತೆ ಒಂದಷ್ಟು ಕಾಲ ಕೀರ್ತಿಯನ್ನು ಗಳಿಸಿ, ಕೊನೆಗೆ ಅದು ಹಠಾತ್ತನೇ ಸಾವನ್ನು ಮಾಡಬಲ್ಲ ಮಹಾವಿಷ ಎಂದು ಗೊತ್ತಾಗಿ ಕಾಲಗರ್ಭದಲ್ಲಿ ಅಡಗಿತು. ದಕ್ಷಿಣ ಅಮೆರಿಕದ ಬುಡಕಟ್ಟು ಜನರು ರಕ್ತಭೇದಿಯನ್ನು ಹಾಗೂ ಜ್ವರವನ್ನು ನಿಲ್ಲಿಸಲು ಬಳಸುತ್ತಿದ್ದ ಈ ಮೂಲಿಕೆಯ ಇತಿಹಾಸವು ಒಂದು ರೋಚಕ ಕಥೆಯಾಗಿದೆ.

ಇಪಿಕಾಕುವಾನವು ದಕ್ಷಿಣ ಅಮೆರಿಕದಲ್ಲಿ ಬೆಳೆಯುವ ಸಸ್ಯ. ಯೂರೋಪಿಯನ್ನರು ದಕ್ಷಿಣ ಅಮೆರಿಕಕ್ಕೆ ಬಂದು ತಮಗೆ ಬೇಕಾದುದನ್ನೆಲ್ಲ ಕೊಳ್ಳೆ ಹೊಡೆದುಕೊಂಡು ಹೋಗುವಾಗ, ಕೆಲವರ ಕಣ್ಣು ಗಿಡಮರಗಳ ಮೇಲೆ ಬಿತ್ತು. ಪೆರು ದೇಶದಲ್ಲಿ ಬೆಳೆಯುವ ಸಿಂಕೋನ ಮರದ ತೊಗಟೆಯ ಉಪಯುಕ್ತತೆಯನ್ನು ಮನಗಂಡ ಯೂರೋಪಿಯನ್ನರು ಅಂತಹುದೇ ಸಸ್ಯಗಳ ಅನ್ವೇಷಣೆಯಲ್ಲಿದ್ದರು. ಜಿಯೋರ್ಗ್ ಮಾರ್ಗ್ರಾ- (೧೬೧೦-೧೬೪೪) ಎಂಬ ಜರ್ಮನ್ ನಿಸರ್ಗವಾದಿ ಹಾಗೂ ವಿಲ್ಲಮ್ ಪೈಸೋ (೧೬೧೧-೧೬೭೮) ಎಂಬ ವೈದ್ಯ ಮತ್ತು ನಿಸರ್ಗವಾದಿ ೧೬೩೮ರಲ್ಲಿ ಬ್ರೆಜ಼ಿಲ್ ದೇಶಕ್ಕೆ ಬಂದರು.

೧೦ ವರ್ಷಗಳ ನಂತರ ಬ್ರೆಜ಼ಿಲಿನಲ್ಲಿ ತಾವು ಸಂಗ್ರಹಿಸಿದ ಗಿಡಮರಗಳ ಮಾಹಿತಿಯನ್ನೆಲ್ಲ ಸೇರಿಸಿ ಹಿಸ್ಟೋರಿಯ ನ್ಯಾಚುರಾಲಿಸ್ ಬ್ರೆಜ಼ಿಲಿಯೆ ಎನ್ನುವ ಗ್ರಂಥವನ್ನು ಪ್ರಕಟಿಸಿದರು. ಈ ಗ್ರಂಥವು ಆಧುನಿಕ ವಿಜ್ಞಾನದ ಸರ್ವತೋಮುಖ ಬೆಳವಣಿಗೆಗೆ ನೆರವಾಗಿದೆ. ಇದರಲ್ಲಿ ಮೊದಲ ಬಾರಿಗೆ ಇಪಿಕಾಕುವಾನದ ಪ್ರಸ್ತಾಪವಾಗಿದೆ. ಲೀ ಗ್ರಾಸ್ ಎಂಬ ವೈದ್ಯನು ದಕ್ಷಿಣ ಅಮೆರಿಕದಿಂದ ಪ್ಯಾರಿಸ್ಸಿಗೆ ಅಪಾರ ಪ್ರಮಾಣದ ಇಪಿಕಾಕುವಾನದ ಬೇರನ್ನು ಹೊತ್ತು ತಂದ. ಪ್ಯಾರಿಸ್ಸಿನ ವೈದ್ಯರು ಭೇದಿ ಮತ್ತು ಜ್ವರವನ್ನು ನಿಲ್ಲಿಸಲು ಇಪಿಕಾಕುವಾನ ಪುಡಿಯನ್ನು ಯಶಸ್ವಿಯಾಗಿ ಬಳಸಿದರು.

ಇಪಿಕಾಕುವಾನಕ್ಕೆ ರಾಜದೃಷ್ಟಿಯನ್ನು ದೊರಕಿಸಿದ್ದು ಜೀನ್ ಆಡ್ರಿಯನ್ ಹೆವಲೇಟಿಕಸ್ (೧೬೬೧-೧೭೨೭) ಎಂಬ ವೈದ್ಯ. ಫ್ರಾನ್ಸ್ ಸಾಮ್ರಾಜ್ಯದ ರಾಜಕುಮಾರ ಡಾಫಿನ್‌ನನಿಗೆ ತುಂಬ ದಿನಗಳಿಂದ ವಿಪರೀತ ಭೇದಿಯಾಗುತ್ತಿತ್ತು. ಹೆವಲೇಟಿಕಸ್ ಇಪಿಕಾಕುವಾನದ ಬೇರಿನ ಪುಡಿಯನ್ನು ನೀಡಿದ. ಭೇದಿಯು ತಕ್ಷಣ ನಿಂತಿತು. ಆತ ಪೂರ್ಣ ರೂಪದಲ್ಲಿ ಚೇತರಿಸಿಕೊಂಡ. ಫ್ರಾನ್ಸಿನ ಅರಸ ಲೂಯಿ-೧೪ (೧೬೩೮-೧೭೧೫) ನಿಗೆ ಬಹಳ ಸಂತೋಷವಾಯಿತು. ಕೂಡಲೇ ಅರಸನು, ಫ್ರಾನ್ಸ್
ದೇಶದಲ್ಲಿ ಇಪಿಕಾಕುವಾನದ ಬೇರು ಮತ್ತು ಪುಡಿಯನ್ನು ಮಾರುವ ಪರಿಪೂರ್ಣ ಅಽಕಾರವನ್ನು ಹೆವಲೇಟಿಕಸನಿಗೆ ನೀಡಿದ. ಇದರ ಪರಿಪೂರ್ಣ ಲಾಭವನ್ನು ಪಡೆದ ಹೆವಲೇಟಿಕಸ್ ಅತ್ಯಲ್ಪಕಾಲದಲ್ಲಿ ಶ್ರೀಮಂತನಾದ. ಇದನ್ನು ಕಂಡ ಫ್ರೆಂಚ್ ಸರಕಾರಕ್ಕೆ ಹೊಟ್ಟೆ ಉರಿ ಬಂತು.

ಅರಸನು ತಪ್ಪು ತೀರ್ಮಾನವನ್ನು ತೆಗೆದುಕೊಂಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಕೂಡಲೇ ೧೦೦೦ ಚಿನ್ನದ ನಾಣ್ಯಗಳನ್ನು ನೀಡಿ, ಹೆವಲೇಟಿಕಸನಿಗೆ ನೀಡಿದ್ದ ಅನುಮತಿಯನ್ನು ಸರಕಾರವು ಹಿಂದಕ್ಕೆ ಪಡೆಯಿತು. ೧೮ನೆಯ ಶತಮಾನದ ಯೂರೋಪಿನಲ್ಲಿ ಇಪಿಕಾಕುವಾ ನದ ಬೇರಿನ ಪುಡಿಯು ಅಪಾರ ಜನಪ್ರೀತಿಯನ್ನು ಗಳಿಸಿತು. ವೈದ್ಯರು ತಮ್ಮ ಅನುಭವದಿಂದ ಕೆಲವು ಸತ್ಯಗಳನ್ನು ಮನ ಗಂಡಿದ್ದರು. ಪುಡಿಯನ್ನು ಕಡಿಮೆ ಪ್ರಮಾಣದಲ್ಲಿ ನೀಡಿದರೆ ಅದು ಬೆವರನ್ನು ಹರಿಸುತ್ತಿತ್ತು. ಬೆವರು ಹರಿಯುವಾಗ, ಅದು ತನ್ನೊಡನೆ ಸಾಕಷ್ಟು ಶರೀರದ ಉಷ್ಣಾಂಶವನ್ನು ಪರಿಸರದೊಳಗೆ ಹರಿಸುತ್ತಿತ್ತು. ಹಾಗೆಯೇ ಅದು ಶ್ವಾಸಕೋಶಗಳಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ಹೊರಬರಲು ನೆರವಾಗುತ್ತಿತ್ತು.

ಇದೇ ಪುಡಿಯನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ, ಅದು ವಾಂತಿ ಮತ್ತು ಭೇದಿಯನ್ನು ಉಂಟು ಮಾಡುತ್ತಿತ್ತು. ಅಂದಿನ ದಿನಗಳಲ್ಲಿ ಹಿಪ್ಪೋಕ್ರೇಟ್ಸ್ ಮಂಡಿಸಿದ್ದ ರಸ ಸಿದ್ಧಾಂತವನ್ನು (ಹ್ಯೂಮರ ಥಿಯರಿ) ವೈದ್ಯರು ಪರಿಪಾಲಿಸುತ್ತಿದ್ದರು. ನಮ್ಮ ದೇಹದಲ್ಲಿ ರಕ್ತ, ಕಫ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತ ಎಂಬ ರಸಗಳಿವೆ. ಈ ನಾಲ್ಕು ರಸಗಳು ಸಮವಾಗಿದ್ದಾಗ ಆರೋಗ್ಯ; ವಿಷಮವಾಗಿದ್ದಾಗ ಅನಾರೋಗ್ಯ ಉಂಟಾಗುತ್ತದೆ ಎನ್ನುವುದು ಈ ಸಿದ್ಧಾಂತದ ತಿರುಳು. ಹಾಗಾಗಿ ಸಮರಸವನ್ನು ಸಾಽಸಲು ರಕ್ತವಿಮೋಚನವನ್ನು ಮಾಡುತ್ತಿದ್ದರು. ವಾಂತಿ ಮತ್ತು ಭೇದಿಯನ್ನು ಮಾಡಿಸುತ್ತಿದ್ದರು. ಅದಕ್ಕಾಗಿ ಇಪಿಕಾಕುವಾನದ ಪುಡಿಯನ್ನು
ಬಳಸುತ್ತಿದ್ದರು. ೧೮ನೆಯ ಶತಮಾನದ ಪ್ಯಾರಿಸ್ ನಗರವು ವಿಷ ಪ್ರಾಷನಕ್ಕೆ ಪ್ರಸಿದ್ಧವಾಗಿತ್ತು. ಯಾರು ಯಾರಿಗೆ ಯಾವಾಗ ಯಾವ ರೀತಿಯ ವಿಷವನ್ನು ಹಾಕುತ್ತಾರೋ ಎನ್ನುವ ಭೀತಿಯು ಸದಾ ಕಾಡುತ್ತಿತ್ತು.

ಅಂದಿನ ದಿನಗಳಲ್ಲಿ ಶಂಖಪಾಷಾಣ (ಅರ್ಸೆನಿಕ್) ಆಂಟಿಮನಿ, ಹೆನ್ಬೇನ್‌ಗಳನ್ನು ವಿಷವಸ್ತುಗಳನ್ನಾಗಿ ಬಳಸುತ್ತಿದ್ದರು. ಆಹಾರದ ಮೂಲಕ ಹಾಕಿದ ವಿಷವನ್ನು ಹೊರತೆಗೆಯಲು ವಮನವೇ ಪ್ರಧಾನ ಮಾರ್ಗವಾಗಿತ್ತು. ಹಾಗಾಗಿ ವಾಂತಿಯನ್ನು ಮಾಡಿಸಲು ಇಪಿಕಾಕುವಾನವನ್ನು ಧಾರಾಳವಾಗಿ ಬಳಸುತ್ತಿದ್ದರು.
ಥಾಮಸ್ ಡೋವರ್ (೧೬೬೦-೧೭೪೨) ಓರ್ವ ಇಂಗ್ಲಿಷ್ ವೈದ್ಯ. ಡೋವರ್ ಪಲ್ವಿಸ್ ಇಪಿಕಾಕುವನ ಅಥವ ಡೋವರ್ಸ್ ಪೌಡರ್ ತಯಾರಿಸಿದ. ಇದು ಸುಮಾರು ೨೦೦ ವರ್ಷಗಳವರೆಗೆ ತನ್ನ ಖ್ಯಾತಿಯನ್ನು ಉಳಿಸಿಕೊಂಡಿತು. ಅಂದಿನ ಯೂರೋಪಿನಲ್ಲಿ, ಕಾಲ್ಚಿಸಿನ್ ಎಂಬ ಔಷಧವು ಬರುವವರಿಗೂ, ಕೀಲುವಾತಕಿ ಅಥವ ಗೌಟ್ ಗುಣಪಡಿಸಲು ಡೋವರ್ಸ್ ಪೌಡರ್ ಬಳಸುತ್ತಿದ್ದರು.

ಡೋವರ್ಸ್ ಪೌಡರಿನಲ್ಲಿ ಇಪಿಕಾಕುವಾನ, ಅಪೀಮು, ಸಾಲ್ಟ್ ಪೀಟರ್ (ಪೊಟಾಷಿಯಂ ನೈಟ್ರೇಟ್) ಮತ್ತು ಕ್ರೀಮ್ ಆಫ್ ಟಾರ್ಟರ್ (ಪೊಟಾಷಿಯಂ ಬೈಟಾರ್ಟ್ರೇಟ್) ಗಳಿದ್ದವು. ಡೋವರ್, ಸಣ್ಣಪುಟ್ಟ ಜ್ವರಗಳನ್ನು ಗುಣಪಡಿಸಲು ಅಲ್ಪ ಪ್ರಮಾಣದ ಪುಡಿಯನ್ನು ನೀಡುತ್ತಿದ್ದ. ರಕ್ತಭೇದಿ (ಅಮೀಬಿಯಾಸಿಸ್) ಅಥವ ಕೀಲುವಾತಕಿಯಲ್ಲಿ ಅಧಿಕ ಪ್ರಮಾಣದ ಪೌಡರನ್ನು ನೀಡುತ್ತಿದ್ದ. ೧೮ನೆಯ ಶತಮಾನವು ಮುಗಿದು, ೧೯ನೆಯ ಶತಮಾನವು ಆರಂಭವಾಗುವ ವೇಳೆಗೆ ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ ಹಾಗೂ ಔಷಧ ವಿಜ್ಞಾನ ಹೊಸ ಪರಿಕಲ್ಪನೆಗಳು ಉದಯಿಸಿದವು. ಅವುಗಳ ನೇರ ಪರಿಣಾಮವು ವೈದ್ಯಕೀಯ ಚಿಕಿತ್ಸೆಯ ಸ್ವರೂಪವನ್ನೇ ಬದಲಿಸಿದವು. ಈ ಬದಲಾವಣೆಗೆ ಮೂವರು ಕಾರಣರಾಗಿದ್ದರು.

ಅಂಗಕ್ರಿಯಾ ವಿಜ್ಞಾನಿ ಫ್ರಾಂಕೋಯಿಸ್ ಮೆಗಂಡಿ (೧೭೮೩-೧೮೫೫), ಆಲ್ಕಲಾಯ್ಡ್ ಗಳನ್ನು ಆವಿಷ್ಕರಿಸಿದ ಪಿಯರಿ ಜೋಸೆಫ್ ಪೆಲ್ಲೆಟಿಯರ್ (೧೭೮೮- ೧೮೪೨) ಮತ್ತು ಔಷಧ ತಯಾರಿಕಾ ವಿಜ್ಞಾನಿಯಾಗಿದ್ದ ಜೋಸೆ- ಬಿಯಾನಮಿ ಕೆವೆಂಟು (೧೭೯೫-೧೮೭೭). ಈ ತ್ರಿಮೂರ್ತಿಗಳ ತಂಡವು ಸಸ್ಯದಲ್ಲಿ ನಿಗದಿತ ಗುಣಲಕ್ಷಣಗಳಿಗೆ ಕಾರಣವಾಗುವ ಆಲ್ಕಲಾಯ್ಡುಗಳನ್ನು ಪತ್ತೆಹಚ್ಚಿದರು. ಅವರು ಪತ್ತೆ ಹಚ್ಚಿದ ಆಲ್ಕಲಾಯ್ಡುಗಳಲ್ಲಿ ಎಮೆಟಿನ್, ಬ್ರೂಸಿನ್, ಸ್ಟ್ರಿಕ್ನಿನ್ ಮತ್ತು ಕ್ವಿನೈನ್ ಮುಖ್ಯವಾದವು. ಇವರ ಜತೆಯಲ್ಲಿ ಮ್ಯಾಥ್ಯೂ ಜೋಸೆಫ್ ಬೊನಾವೆಂಚರ್ ಆರ್ಫಿಲ (೧೭೮೭-೧೮೫೩) ಸೇರಿಕೊಂಡ. ಈತ ನನ್ನು ಆಧುನಿಕ ವಿಷವಿಜ್ಞಾನದ ಪಿತಾಮಹ ಎಂದು ಕರೆಯುವುದುಂಟು.

ಆಲ್ಕಲಾಯ್ಡುಗಳು ಯಾವ ರೀತಿಯ ವಿಷ ದುಷ್ಪರಿಣಾಮಗಳನ್ನು ಬೀರಬಹುದು ಎನ್ನುವ ಬಗ್ಗೆ ಪ್ರಾಣಿಗಳಲ್ಲಿ ಅಧ್ಯಯನವನ್ನು ಮಾಡಿ ಉಪಯುಕ್ತ ಆಲ್ಕ ಲಾಯ್ಡುಗಳು ಮನುಕುಲಕ್ಕೆ ದೊರೆಯುವಂತೆ ಮಾಡಿದ. ೧೮೫೦ ರಿಂದ ೧೯೦೦ರವರೆಗೆ ಐವತ್ತು ವರ್ಷಗಳು ಸೂಕ್ಷ್ಮಜೀವಿವಿಜ್ಞಾನ ಹಾಗೂ ರೋಗ ವಿಜ್ಞಾನಗಳ ಪಾಲಿಗೆ ಸುವರ್ಣಯುಗವೆನಿಸಿತು. ಈ ಅವಧಿಯು ವೈದ್ಯಕೀಯ ವಿಜ್ಞಾನವನ್ನು ಆಧುನಿಕತೆಯತ್ತ ಕರೆದೊಯ್ದಿತು. ಈ ವೇಳೆಗೆ ಸಂಯುಕ್ತ ಸೂಕ್ಷ್ಮದರ್ಶಕ (ಕಾಂಪೌಂಡ್ ಮೈಕ್ರೋಸ್ಕೋಪ್) ನಿರ್ಮಾಣವಾಗಿತ್ತು. ಸೂಕ್ಷ್ಮಜೀವಿಗಳನ್ನು ವರ್ಗೀಕರಿಸಲು ನೆರವಾಗುವ ಬಣ್ಣಗಟ್ಟುವಿಕೆಯ ತಂತ್ರಜ್ಞಾನವು (ಸ್ವೇಯ್ನಿಂಗ್) ಅಸ್ತಿತ್ವಕ್ಕೆ ಬಂದಿತ್ತು. ಸೂಕ್ಷ್ಮಜೀವಿಗಳನ್ನು ಪ್ರಯೋಗಾಲದಲ್ಲಿ ಬೆಳೆಸುವ ಕೃಷಿಕೆಯ (ಕಲ್ಚರ್) ತಂತ್ರಜ್ಞಾನವು ಅಭಿವೃದ್ಧಿಗೊಂಡಿತು.

೧೯೭೫. ರಷ್ಯನ್ ರೋಗಶಾಸ್ತ್ರಜ್ಞ -ದೋರ್ ಅಲೆಗ್ಸಾಂಡ್ರೋವಿಚ್ ಲೆಶ್ (೧೮೪೦- ೧೯೦೩) ಮಾರ್ಕೋ- ಎನ್ನುವ ರೋಗಿಯು ರಕ್ತಭೇದಿಯಿಂದ ನರಳುತ್ತಿದ್ದ. ಅವನ ಮಲವನ್ನು ಪರೀಕ್ಷಿಸುತ್ತಿರುವಾಗ ಒಂದು ಅಮೀಬದಂತಹ ಜೀವಿಯು ಅದರಲ್ಲಿ ಕಂಡುಬಂದಿತು. ಮುಂದೆ ಈ ಅಮೀಬ ರೀತಿಯ ಜೀವಿಗೆ ಎಂಟಮೀಬ ಹಿಸ್ಟೋಲೈಟಿಕ ಎಂದು ನಾಮಕರಣವನ್ನು ಮಾಡಿದರು. ಈ ಆದಿಜೀವಿಯು ಅಮೀಬಿಕ ಆಮಶಂಕೆ ಅಥವ ರಕ್ತಭೇದಿಗೆ ಕಾರಣವಾಗಿತ್ತು.

ಇಪಿಕಾಕುವಾನಕ್ಕೆ ಕ್ಯಾರಾಪೀಕಿಯ ಇಪಿಕಾಕುವಾನ ಎಂದು ವೈಜ್ಞಾನಿಕವಾಗಿ ನಾಮಕರಣವನ್ನು ಮಾಡಿದರು. ಇಪಿಕಾಕುವಾನದ ಬೇರಿನಲ್ಲಿ ಎಮೆಟಿನ್ ಮತ್ತು ಸೆ-ಲಿನ್ ಎಂಬ ಎರಡು ಮುಖ್ಯ ಆಲ್ಕಲಾಯ್ಡುಗಳು ದೊರೆತವು. ಲಂಡನ್ನಿನ ವೈದ್ಯ ಲಿಯೋನಾರ್ಡ್ ರೋಗರ್ಸ್ (೧೮೬೮-೧೯೬೨) ಅಂದಿನ ಕೋಲ್ಕತಾದಲ್ಲಿ
ಕೋಲ್ಕತಾ ಉಷ್ಣವಲಯದ ರೋಗಗಳ ವೈದ್ಯಕೀಯ ವಿದ್ಯಾಲಯವನ್ನು ಸ್ಥಾಪನೆಯಲ್ಲಿ ಪ್ರಧಾನ ಪಾತ್ರವಹಿಸಿದ್ದ. ಕಾಲ ಅಜ಼ರ್, ಹಾವಿನ ಕಡಿತ, ಕಾಲರ,
ಕುಷ್ಠ ಮುಂತಾದ ರೋಗಗಳ ನಿಯಂತ್ರಣಕ್ಕೆ ಕ್ರಮಬದ್ಧ ಚಿಕಿತ್ಸೆಯನ್ನು ರೂಪಿಸಿದ್ದ. ಇವನು ಪರಿಶುದ್ಧ ಎಮಿಟಿನ್ ನನ್ನು ಅಮೀಬಿಕ್ ಆಮಶಂಕೆಯ ರೋಗಿಗಳ ಮೇಲೆ ಪ್ರಯೋಗಿಸಿದ. ಎಮೆಟಿನ್‌ನನ್ನು ಇಂಜಕ್ಷನ್ ಮೂಲಕ ನೀಡಿದರೆ, ಅದು ರಕ್ತಭೇದಿಯನ್ನು ತಕ್ಷಣವೇ ನಿಲ್ಲಿಸುತ್ತದೆ ಎಂದ.

ಆದರೆ ಎಮೆಟಿನ್ ಅಮೃತವಾಗುವ ಇಲ್ಲವೇ ವಿಷವಾಗುವ ಅಂತರವು ಕೂದಲೆಳೆಯಷ್ಟು ಸೂಕ್ಷ್ಮವಾಗಿದೆ ಎನ್ನುವುದನ್ನು ಗಮನಿಸಿದ. ಎಮೆಟಿನ್ ಹಲವರ ಹೃದಯದ ಮೇಲೆ ತೀವ್ರ ಪಾರ್ಶ್ವಪರಿಣಾಮವನ್ನು ಉಂಟು ಮಾಡಿ ಹಠಾತ್ ಸಾವಿಗೆ ಕಾರಣವಾಗುವುದನ್ನು ಮನಗಂಡ. ಹಾಗಾಗಿ ಎಮೆಟಿನ್ ಖ್ಯಾತಿಯು ಅತ್ಯಲ್ಪಕಾಲದಲ್ಲಿಯೇ ಧರೆಗಿಳಿಯಿತು. ೧೯೫೦ರ ದಶಕದಲ್ಲಿ ಡೈಲಾಕ್ಸನಾಯ್ಡ್ ಮತ್ತು ಮೆಟ್ರೋನಿಡಜ಼ೋಲ್ ಎಂಬ ಸುರಕ್ಷಿತ ಔಷಧಗಳು ಮಾರುಕಟ್ಟೆಗೆ ಬಂದವು.

ಹಾಗಾಗಿ ರಕ್ತಭೇದಿಗೆ ಎಮೆಟಿನ್ ಕೊಡುವ ಪದ್ಧತಿಯು ಪೂರ್ಣವಾಗಿ ನಿಂತುಹೋಯಿತು. ಇಪಿಕಾಕುವಾನವು ವಮನವನ್ನು ಉಂಟು ಮಾಡುವ ಪ್ರಬಲ ಔಷಧ. ವಮನಕ್ಕೆ ಕಾರಣ ಎಮೆಟಿನ್ ಮತ್ತು ಸೆ-ಲಿನ್. ಸೆ-ಲಿನ್ ಎಮೆಟಿನ್‌ಗಿಂತಲೂ ಶಕ್ತಿಶಾಲಿಯಾದದ್ದು. ಇದು ನೇರವಾಗಿ ಅನ್ನನಾಳ ಮತ್ತು ಜಠರವನ್ನು
ಕೆರಳಿಸಿ ವಾಂತಿಯನ್ನು ಉಂಟು ಮಾಡುವುದರ ಜತೆಯಲ್ಲಿ, ಕರುಳಿನ ಮೂಲಕ ರಕ್ತಪ್ರವಾಹದಲ್ಲಿ ಬೆರೆತು ಮಿದುಳಿನ ಮೆಡುಲ್ಲಾ ಅಬ್ಲಾಂಗಟವನ್ನು ತಲುಪಿ ಅಲ್ಲಿರುವ ವಮನ ಕೇಂದ್ರವನ್ನು ಕೆರಳಿಸುತ್ತದೆ. ಹಾಗಾಗಿ ವಾಂತಿಯಾಗುತ್ತದೆ.

ವಿಷಪ್ರಾಶನವಾದ ಪ್ರಕರಣಗಳಲ್ಲಿ ಇಪಿಕಾಕ್ ಸಿರಪ್ ಕೊಡುತ್ತಿದ್ದರು. ಔಷಧವನ್ನು ಸೇವಿಸಿದ ೨೦ ನಿಮಿಷಗಳಲ್ಲಿ ವಾಂತಿಯಾಗುತ್ತಿತ್ತು. ಇದು ಶೇ.೯೦ರಷ್ಟು ಪ್ರಕರಣಗಳಲ್ಲಿ ಸುರಕ್ಷಿತವಾಗಿ ಕೆಲಸ ಮಾಡುತ್ತಿತ್ತು. ಆದರೆ ಕೆಲವರಲ್ಲಿ ಮಾತ್ರ ಅನ್ನನಾಳ ಅಥವ ಜಠರವನ್ನು ಛಿದ್ರ ಛಿದ್ರಗೊಳಿಸುತ್ತಿತ್ತು. ಹಾಗಾಗಿ ಈಗ ಇಪಿಕಾಕುವಾನವನ್ನು ವಮನಕಾರಿಯಾಗಿ ಬಳಸುವ ಪದ್ಧತಿಯೂ ನಿಂತು ಹೋಗಿದೆ. ಆಕ್ಟಿವೇಟೆಡ್ ಚಾರ್ಕೋಲ್‌ನ್ನು ಬಳಸಲಾಗುತ್ತಿದೆ. ಇಂದು ಇಪಿಕಾಕುವಾನದ ಬಳಕ್ಕೆ ಪೂರ್ಣ ನಿಂತಿದೆ. ಆದರೆ ಉಷ್ಣವಲಯದ ರೋಗಗಳ ಚಿಕಿತ್ಸಾ ಇತಿಹಾಸದಲ್ಲಿ ಇಪಿಕಾಕುವಾನಕ್ಕೆ ಅಚ್ಚಳಿಯದ ಸ್ಥಾನವು ಸ್ಥಿರವಾಗಿದೆ.