Thursday, 12th December 2024

ಅನಂತಕುಮಾರ್‌ ಕರ್ನಾಟಕ- ಬಿಜೆಪಿಯ ಸ್ಟ್ರಾಟಜಿಸ್ಟ್

ಅವಲೋಕನ

ಜಿ.ಎಂ.ಇನಾಂದಾರ್‌

ಬಿಜೆಪಿ ಈಗ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಪಕ್ಷ ಈ ಮಟ್ಟಕ್ಕೆ ಬೆಳೆಯಲು ಕಾರ್ಯಕರ್ತರು ಹಾಗೂ ನಾಯಕರು ನಿರಂತರ ಶ್ರಮ ವಹಿಸಿದ್ದರಿಂದಲೇ ಪಕ್ಷ ಈ ಮಟ್ಟಕ್ಕೆ ಬೆಳೆದು ನಿಂತಿದೆ, ಜಗನ್ನಾಥ ರಾವ್ ಜೋಶಿ, ಭಾವೂ ರಾವ್ ದೇಶಪಾಂಡೆ, ಹೀಗೆ ಅನೇಕ ಹಿರಿಯರನ್ನು ಸ್ಮರಿಸಬಹುದು.

ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅನಂತಕುಮಾರರ ಕೊಡುಗೆ ಮಹತ್ವದ್ದಿದೆ. ಅನಂತ ಕುಮಾರರು ಬೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎದುರಿಸಿದ ಮೊದಲ ಚುನಾವಣೆ ೧೯೮೯. ಆಗ ಮೊಟ್ಟ ಮೊದಲ ಬಾರಿಗೆ ಬಿಜೆಪಿ ೧೧೮ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಶಿವಮೊಗ್ಗದಿಂದ, ಬಿ.ಬಿ. ಶಿವಪ್ಪನವರ ಸಕಲೇಶಪುರದಿಂದ ಈ ರೀತಿ ಹಿರಿಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಂದ ಸ್ಪರ್ಧಿಸಿ ದ್ದರು. ಆಗ ಅನಂತಕುಮಾರ್ ಇಡೀ ರಾಜ್ಯದ ಚುನಾವಣಾ ಪ್ರಚಾರದ ಜವಾಬ್ದಾರಿ ತೆಗೆದುಕೊಂಡು ೧೮ ದಿನಗಳ ಸತತ ಪ್ರವಾಸ ಮಾಡಿದರು.

ಒಂದು ಅಂಬಾಸಿಡರ್ ಕಾರು ಎರಡು ಚಾಲಕರ ಸಮೇತವಾಗಿ ಸತತ ೧೮ ದಿನ ಕಾರಿ ನಲ್ಲಿಯೇ ರಾತ್ರಿ ಕಳೆದು ಪ್ರಚಾರ ಕೈಗೊಂಡರು. ಮುಂಜಾನೆಯಿಂದ ಆರರಿಂದ ಏಳು ಚುನಾವಣಾ ಪ್ರಚಾರ ಸಭೆಗಳು, ಪ್ರಮುಖ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಯನ್ನು ಭೇಟಿಯಾಗಿ ಪ್ರಚಾರ ನಡೆಸಿದರು. ಪ್ರತಿ ಕ್ಷೇತ್ರದಲ್ಲಿ ವಿದ್ಯಾರ್ಥಿ ಪರಿಷತ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತ ರೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದರು. ಅನಂತಕುಮಾರರ ಬಟ್ಟೆಗಳು ಬಸ್ಸಿನಲ್ಲಿ ಬಂದು ಮಡಿಯಾಗಿ ಮತ್ತು ಅವರನ್ನು ಸೇರು ವಂತೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಈ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಿದ್ದರು.

ಈ ಮಟ್ಟದ ಬದ್ಧತೆ ಪರಿಶ್ರಮ ಅನಂತಕುಮಾರರ ಅಪರೂಪದ ಗುಣವಾಗಿತ್ತು. ಕರ್ನಾಟಕದ ವಿಧಾನ ಸಭೆಯಲ್ಲಿ ನಾಲ್ಕು ಸ್ಥಾನಗಳ ವಿಜಯದಿಂದ ಮುಂದಿನ ಲೋಕಸಭಾ ಚುನಾವಣೆಗೆ ಅನಂತಕುಮಾರ ಅಹರ್ನಿಶಿ ಪ್ರಯತ್ನದಲ್ಲಿ ನಿರತರಾದರು. ಬಿ.
ಎಸ್. ಯಡಿಯೂರಪ್ಪನವರು ಹಾಗೂ ಅನಂತಕುಮಾರರ ನಿರಂತರ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಬಲಗೊಳಿಸ ತೊಡಗಿದರು.

ಆಡ್ವಾಣಿಯವರ ರಾಮ ರಥಯಾತ್ರೆ ಅನಂತಕುಮಾರರ ಚತುರ ಚುನಾವಣಾ ವ್ಯೂಹ ರಚನೆ ಹಾಗೂ ಯಡಿಯೂರಪ್ಪನವರ ಹೋರಾಟಗಳ ಬಲದಿಂದ ಬಿಜೆಪಿ ನಾಲ್ಕು ಲೋಕಸಭಾ ಸ್ಥಾನ ಗಳಿಸಲು ಯಶಸ್ವಿಯಾಯಿತು. ರಾಜೀವ ಗಾಂಧಿಯವರ ಅಕಾಲಿಕ ನಿಧನವಾಗದೆ ಇದ್ದಿದ್ದರೆ ೪ ಕ್ಕಿಂತ ಇನ್ನೂ ಹೆಚ್ಚು ಲೋಕಸಭಾ ಸ್ಥಾನಗಳು ದೊರೆಯುತ್ತಿದ್ದವು ಎಂದು ಅನಂತಕುಮಾರ್ ಹೇಳು ತ್ತಿದ್ದರು. ೧೯೯೪ ರ ವಿಧಾನಸಭೆಯಲ್ಲಿ ಬಿಜೆಪಿ ೪೦ ಸ್ಥಾನಗಳನ್ನು ಗೆದ್ದು ೧೬.೯೯ ಶೇಕಡಾ ಓಟು ಪಡೆಯಿತು. ೧೯೯೬ ರಲ್ಲಿ
ಮೊದಲ ಬಾರಿ ಅನಂತಕುಮಾರ್ ಲೋಕಸಭೆಗೆ ಆಯ್ಕೆಯಾದರು.

೧೯೯೯ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಕರ್ನಾಟಕದ ಬಿಜೆಪಿ ಒಳ ಜಗಳಗಳಿಂದಾಗಿ ಬಿಜೆಪಿ ಕೇವಲ ೪೪ ಸ್ಥಾನ ಗಳನ್ನು ಗಳಿಸಲು ಶಕ್ತವಾಯಿತು. ಕೇವಲ ೧೪೯ ಸ್ಥಾನ ಸ್ಪರ್ಧಿಸಿದ್ದರಿಂದ ಶೇಕಡವಾರು ಮತಗಳಿಕೆ ವಿಶೇಷವಾಗಿ ಹೆಚ್ಚಲಿಲ್ಲ. ಈ ಚುನಾವಣೆಯಲ್ಲಿ ಜನತಾದಳ (ಯು) ಜೊತೆ ಚುನಾವಣೆ ನಡೆದಿದ್ದರೂ ಯಡಿಯೂರಪ್ಪ ಹಾಗೂ ಜೆ.ಎಚ್. ಪಟೇಲ್ ಸೋತು ಹೋದರು. ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾದರು.

ನಂತರದ ದಿನಗಳಲ್ಲಿ ಅನಂತಕುಮಾರ್ ಕೇಂದ್ರ ಮಂತ್ರಿಯಾಗಿ ಸತತ ಕೆಲಸಗಳಲ್ಲಿ ನಿರತರಾದರು. ಕೇಂದ್ರ ವಿಮಾನಯಾನ, ಯುವಜನ ಸೇವೆ, ಕ್ರೀಡೆ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ನಗರಾಭಿವೃದ್ಧಿ ಸಚಿವರಾಗಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ಕರ್ನಾಟಕದ ಅಭಿವೃದ್ಧಿ ನೆಲ, ಜಲ ಹಾಗೂ ಭಾಷೆ ವಿಷಯಗಳಲ್ಲಿ ಸ್ಪಷ್ಟ ನಿಲುವು ಹೊಂದಿದ್ದರಿಂದ ಅನಂತಕುಮಾರ್ ಬೇಗ ಜನಾನುರಾಗಕ್ಕೆ ಪಾತ್ರರಾದರು. ಬೆಂಗಳೂರಿಗೆ ಸುವರ್ಣ ಚತುಷ್ಪಥ ಹೆದ್ದಾರಿ, ಬೆಂಗಳೂರಿಗೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಕಾವೇರಿ ನಾಲ್ಕನೇ ಹಂತದ ನೀರು ಪೂರೈಕೆ, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವಿಕೆ, ಹಾಗೂ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅನಂತಕುಮಾರ್ ಯಶಸ್ವಿಯಾದರು.

ಆಗ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅನಂತಕುಮಾರರ ದೆಹಲಿ ಮನೆಗೆ ಹೋಗಿ ಅಭಿನಂದಿಸಿ ಕರ್ನಾಟಕದ ಆಪತ್ಬಾಂಧವ ಎಂದು ಕೊಂಡಾಡಿದರು. ಆದರೆ, ಕರ್ನಾಟಕದ ಬಿಜೆಪಿ ಒಳಜಗಳಗಳಿಂದ ದುರ್ಬಲವಾಗಿತ್ತು. ಆಂತರಿಕ ಸರ್ವೆಯ ಪ್ರಕಾರ ಕರ್ನಾಟಕದ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಆರಿಸಿ ಬರುವುದಾಗಿಯೂ ಹಾಗೂ ಅನೇಕ ಲೋಕಸಭಾ ಕ್ಷೇತ್ರಗಳು ಕೈಬಿಡುವ ಹಾದಿಯಲ್ಲಿವೆ ಎಂದು ಸರ್ವೆ ತಿಳಿಸಿತ್ತು. ಇದರಿಂದ ಚಿಂತಿತರಾದ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಮೂವರು ದಿಗ್ಗಜ ನೇತಾರರನ್ನು ಸರ್ಕಾರದಿಂದ ಬಿಡುಗಡೆ ಮಾಡಿ ಪಕ್ಷದ ಕೆಲಸಕ್ಕೆ ನಿಯೋಜಿಸಿದರು.

ಮಹಾರಾಷ್ಟ್ರಕ್ಕೆ ಪ್ರಮೋದ್ ಮಹಾಜನ್, ರಾಜಸ್ಥಾನಕ್ಕೆ ಶ್ರೀಮತಿ ವಸುಂಧರಾ ರಾಜೆ, ಹಾಗೂ ಕರ್ನಾಟಕ ರಾಜ್ಯಕ್ಕೆ ಅನಂತ ಕುಮಾರ್ ಪಕ್ಷದ ಬಲವರ್ಧನೆಗಾಗಿ ನಿಯೋಜಿತರಾದರು. ಈ ಮೂವರು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಬಂದರು. ಕರ್ನಾಟಕ ರಾಜ್ಯ ಚುನಾವಣೆಗಳಲ್ಲಿ ಪಕ್ಷದ ಸ್ಥಾನಮಾನಗಳನ್ನು ಬಲಪಡಿಸುವ ಉದ್ದೇಶದಿಂದ
ಕೇಂದ್ರ ಸಚಿವ ಸ್ಥಾನವನ್ನು ತೊರೆದು ಬಂದು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲು, ಅನಂತಕುಮಾರರು ನಾಡಿನ ಬಗೆಗೆ ಹೊಂದಿದ್ದ ಅಭಿಮಾನವೇ ಕಾರಣ ಎಂದರೆ ಯಾವುದೇ ಉತ್ಪ್ರೇಕ್ಷೆಯಲ್ಲ.

೨೦೦೩ ರಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಅನಂತಕುಮಾರ್ ಪಕ್ಷದ ಬಲವರ್ಧನೆಯಲ್ಲಿ ನಿರತರಾದರು. ಅವರ ಅಸಾಧಾರಣ
ಸಂಘಟನಾ ಚಾತುರ್ಯ, ಚುನಾವಣಾ ವ್ಯೂಹ ರಚನಾ ಸಾಮರ್ಥ್ಯ ಮತ್ತು ನಿರಂತರ ಪರಿಶ್ರಮ ಬಿಜೆಪಿ ಬೆಳವಣಿಗೆಗೆ ಕಾರಣ ವಾಯಿತು. ನಂತರ ೧೦ ತಿಂಗಳ ನಿರಂತರ ಪ್ರವಾಸ ಮಾಡಿದ ಅನಂತಕುಮಾರ್ ಪಕ್ಷವನ್ನು ಬಲಗೊಳಿಸ ತೊಡಗಿದರು. ಪಕ್ಷವು ಕೇವಲ ಒಂದು ಸಮುದಾಯದ ಪ್ರತಿನಿಧಿಯಾಗದೆ ಸರ್ವಸಮುದಾಯಗಳಿಂದ ಬೆಂಬಲ ಪಡೆಯುವ ಪಕ್ಷವಾಗ ಬೇಕು ಎಂದು ಸ್ಪಷ್ಟತೆ ಹೊಂದಿದ್ದ ಅನಂತಕುಮಾರ ವಿವಿಧ ಶೋಷಿತ ಸಮುದಾಯಗಳ ನಾಯಕರನ್ನು ಪಕ್ಷಕ್ಕೆ ಕರೆ ತಂದರು. ಶ್ರೀ ಗೋವಿಂದ ಕಾರಜೋಳ, ಎಸ್. ಬಂಗಾರಪ್ಪ, ಕೆ.ಬಿ. ಶಾಣಪ್ಪ, ಸಿ.ಎಂ. ಉದಾಸಿ, ಪ್ರಭಾಕರ್ ಕೋರೆ (೨೦೦೮) ಉಮೇಶ್ ಕತ್ತಿ (೨೦೦೬) ಹೀಗೆ ಅನೇಕ ನಾಯಕರು ಬಿಜೆಪಿ ಸೇರಿದರು.

೨೦೦೪ ರ ಚುನಾವಣೆ ಫಲಿತಾಂಶ ಹೊರ ಬಂದಾಗ ೭೯ (ಬಿಜೆಪಿ) +೦೫ ಜನತಾದಳ ಶಾಸಕರು ಸೇರಿ ಬಿಜೆಪಿ ೮೪ ಶಾಸಕರನ್ನು ಹೊಂದಿದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಹಾಗೂ ಮತಗಳಿಕೆಯಲ್ಲಿ ಶೇ. ೨೮.೩೩ ಮತ ಪಡೆಯಲು ಯಶಸ್ವಿ ಯಾಯಿತು. ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತು. ಅಲ್ಲಿಯವರೆಗೆ ಬಿಜೆಪಿಯನ್ನು ಒಂದು ಫ್ರಿಂಜ್ ಪಾರ್ಟಿ ಎಂದು ಭಾವಿಸುತ್ತಿದ್ದ ಜನರಿಗೆ ಬಿಜೆಪಿ ಒಂದು ಸರ್ಕಾರ ಮಾಡಬಲ್ಲ ಪಕ್ಷ ಎಂದು ವಿಶ್ವಾಸ ಮೂಡಿತು. ಅದೇ ಭಾವನೆ ೨೦೦೮ ರಲ್ಲಿ ಬಿಜೆಪಿ ೧೧೦ ಸೀಟು ಗೆಲ್ಲಲು ಕಾರಣವಾಯಿತು.

೨೦೧೩ ರ ಚುನಾವಣೆ ಬಿಜೆಪಿಗೆ ಅತ್ಯಂತ ಪರೀಕ್ಷಾ ಕಾಲ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರಿಂದ ಮತ್ತು ಶ್ರೀರಾಮುಲು ಹಾಗೂ ಇತರರ ನಿರ್ಗಮನದಿಂದ ಕೇವಲ ೪೦ ಸೀಟು ಗಳಿಸಿ ಕುಸಿಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಕಂಡುಕೊಂಡ ನಾಯಕರ
ಪುನರಾಗಮನದಿಂದ ಪುನಃ ಬಿಜೆಪಿ ೧೦೪ ಸೀಟುಗಳೊಂದಿಗೆ ಅಧಿಕಾರಕ್ಕೇರಲು ಸಮರ್ಥ ಪಕ್ಷವಾಯಿತು. ೧೯೯೬ ರಿಂದ
ನಡೆದ ಪ್ರತಿ ಚುನಾವಣೆಯಲ್ಲೂ ತೇಜಸ್ವಿನಿ ಅನಂತಕುಮಾರ್ ಹೊಸ ಹೊಸ ಉಪಾಯಗಳಿಂದ ಅನಂತಕುಮಾರರ ಚುನಾವಣಾ ಪ್ರಚಾರ ರಂಗೇರುವಂತೆಯೂ ಹಾಗೂ ಯಶಸ್ವಿಯಾಗುವಂತೆಯೂ ನೋಡಿಕೊಂಡರು.

೧೯೯೬ ರಲ್ಲಿ ಪ್ರಥಮ ಬಾರಿಗೆ ಟೆಲಿಫೋನ್ ಕ್ಯಾಂಪೇನ್ ರೂಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಈ ಮಾತು ಅನಂತಕುಮಾರ್ ಮಟ್ಟಿಗೆ ಖಂಡಿತ ನಿಜ. ಎಲೆಯ ಮರೆಯ ಕಾಯಿಯಂತೆ ಇದ್ದು ಅನಂತಕುಮಾರ್ ಅವರ ಬೆಂಗಳೂರು ಹಾಗೂ ದಿಲ್ಲಿಯ ಮನೆ ಜವಾಬ್ದಾರಿ ವಹಿಸಿ ಕೊಂಡಿದ್ದರು. ಅನಂತ ಕುಮಾರ್ ಅವರ ಬಟ್ಟೆ ಬರೆ ಔಷಧಿ ಎಲ್ಲಾ ಕಾಲ ಕಾಲಕ್ಕೆ ದೊರೆಯುವಂತೆ ಅಚ್ಚುಕಟ್ಟಾದ ವ್ಯವಸ್ಥೆ ತೇಜಸ್ವಿನಿ ಅವರದು.

ಅನಂತಕುಮಾರ್ ರಾಷ್ಟ್ರ ರಾಜಕೀಯದಲ್ಲಿ ನಿಶ್ಚಿಂತೆಯಿಂದ ಕೆಲಸ ಮಾಡಲು ಅವರ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ
ಯವರು ನಡೆಸುತ್ತಿದ್ದ ಸೇವಾ ಕಾರ್ಯಗಳು ಜನ ಬೆಂಬಲ ಅವರಿಗೆ ಸದಾ ಇರುವಂತೆ ಮಾಡಿದ್ದವು. ಇದಲ್ಲದೆ ಕಾರ್ಯಕರ್ತರ ಮನೆಯ ಮದುವೆ, ಮುಂಜಿಯಂಥ ಶುಭ ಕಾರ್ಯಗಳಿಗೆ ಅನಂತಕುಮಾರ್ ಅನುಪಸ್ಥಿತಿ ಎದ್ದು ಕಾಣದಂತೆ ತೇಜಸ್ವಿನಿ ಹಾಜರ್. ಕಾರ್ಯ ಕರ್ತರಿಗೆ ಇದರಿಂದ ತುಂಬಾ ಸಮಾಧಾನ.

ಇದಲ್ಲದೆ ಅನಂತಕುಮಾರ್ ಅವರ ಸಾಮಾಜಿಕ ಜಾಲತಾಣ ಇತ್ಯಾದಿಗಳ ಮೇಲೆ ಸದಾ ತೇಜಸ್ವಿನಿ ಗಮನ ಹರಿಸುತ್ತಿದ್ದರು.  ಇದಲ್ಲದೆ ಅವರ ಚುನಾವಣಾ ಪ್ರಚಾರದಲ್ಲಿ ಕೂಡ ಮಹಿಳೆಯರ ತಂಡ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದರು. ಅನಂತ ಕುಮಾರ್ ಯಶಸ್ಸಿನಲ್ಲಿ ತೇಜಸ್ವಿನಿಯವರದು ಸಿಂಹ ಪಾಲು. ಆದರೆ ಎಂದೂ ಯಾವುದೇ ವಿವಾದಗಳಿಗೆ ಗುರಿಯಾಗದ ಗಂಭೀರ ವರ್ತನೆ ತೇಜಸ್ವಿನಿ ಯವರದು. ಅವರು ಎಂದೂ ಪತಿಯ ರಾಜಕೀಯ ನಿರ್ಧಾರಗಳಲ್ಲಿ ತಲೆ ಹಾಕಲಿಲ್ಲ.

ಅಂತೆಯೇ ಅನಂತಕುಮಾರ್ ಯಾವಾಗಲೂ ನಿರಾಳ. ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷಕ್ಕೆ ರಾಜೀನಾಮೆ ಕೊಡುತ್ತಿರುವವರ ಮಧ್ಯದಲ್ಲಿ, ಕೇಂದ್ರದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷ ಕಟ್ಟುವುದಕ್ಕೆ ಕಟಿಬದ್ಧರಾದ ಅನಂತಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. ಅವರ ಉದಾಹರಣೆ ಎಲ್ಲರಿಗೂ ಅನುಕರಣೀಯ. ೧೯೮೮ರ ನಂತರ ಚುನಾವಣೆಗೆ ಟಿಕೆಟ್ ಹಂಚುವ ಪ್ರಕ್ರಿಯೆಯಲ್ಲಿದ್ದ ಅನಂತಕುಮಾರ್ ಯಾವತ್ತೂ ತಮಗೆ ತಾವೇ ಟಿಕೆಟ್ ಕೊಟ್ಟುಕೊಳ್ಳಲಿಲ್ಲ.

೧೯೯೬ ರಲ್ಲಿ ಅವರ ತಾಯಿಯವರ ವೈಕುಂಠ ಸಮಾರಾಧನೆಯ ದಿನ ಬಿಜೆಪಿ ಹಿರಿಯ ನಾಯಕರೆಲ್ಲ ಹುಬ್ಬಳ್ಳಿಗೆ ಬಂದಿದ್ದರು. ಅವರೆಲ್ಲ ಸರ್ವಾನುಮತದಿಂದ ಬೆಂಗಳೂರು ಲೋಕಸಭಾ ಚುನಾವಣೆಗೆ ಸ್ಪಽಸಿ ಎಂದು ಒತ್ತಾಯಿಸಿದ ಮೇಲೆ ಅನಂತಕುಮಾರ್ ಲೋಕಸಭೆಗೆ ಪ್ರಥಮ ಬಾರಿ ಸ್ಪರ್ಧಿಸಿ ವಿಜೇತರಾದರು. ನಂತರ ಅವರು ಎದುರಿಸಿದ ಎಲ್ಲ ಚುನಾವಣೆಗಳಲ್ಲಿ ವಿಜೇತರಾಗಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದರು. ಬೆಂಗಳೂರಿನಂಥ ಪ್ರತಿಷ್ಠಿತ ಸುಶಿಕ್ಷಿತ ಮತದಾರರನ್ನು ಪ್ರತಿನಿಧಿಸಲು ಅನಂತಕುಮಾರ್ ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ಸತತವಾಗಿ ಆರು ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಒಂದು ಬಾರಿಯೂ ಸೋಲದೆ ಪ್ರತಿನಿಧಿಸಿದ್ದು ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

ಬೆಂಗಳೂರು ಮತ್ತು ಕರ್ನಾಟಕಕ್ಕೆ ಅವಿರತವಾಗಿ ಶ್ರಮಿಸಿದ ಭಾರತೀಯ ಜನತಾ ಪಾರ್ಟಿಯನ್ನು ಬೇರು ಮಟ್ಟದಿಂದ ಬೆಳೆಸಿದ, ಯ ಡಿಯೂರಪ್ಪನವರಿಗೆ ಭುಜಕ್ಕೆ ಭುಜ ಜೋಡಿಸಿ ಕೆಲಸ ಮಾಡಿದ, ಕೇಂದ್ರ ಹಾಗೂ ರಾಜ್ಯಗಳಿಗೆ ಕೊಂಡಿಯಾಗಿ ಚತುರತೆ ಯಿಂದ ರಾಜಕಾರಣ ಮಾಡಿದ ಅನಂತಕುಮಾರ್ ಅವರಿಗೆ ಸೂಕ್ತ ಸ್ಮಾರಕವೊಂದನ್ನು ಬೆಂಗಳೂರಿನಲ್ಲಿ ನಿರ್ಮಿಸುವ ಅವಶ್ಯಕತೆಯಿದೆ.