Sunday, 15th December 2024

24 ಗಂಟೆಗಳಲ್ಲಿ 300 ಅಂಗಗಳನ್ನು ಛೇದಿಸಿದ !

ಹಿಂದಿರುಗಿ ನೋಡಿದಾಗ

ನೋವು!
ನಮ್ಮ ದೈನಂದಿನ ಅನುಭವಗಳಲ್ಲಿ ಒಂದು. ನೋವು ಎನ್ನುವ ಸಂವೇದನೆಯು ಪ್ರಕೃತಿಯು ನಮಗೆ ನೀಡಿರುವ ಒಂದು ವರ. ನೋವು ಎನ್ನುವುದು ಒಂದು ಅಹಿತಕರ ಹಾಗೂ ಅಪಾಯಕಾರಿ ಅನುಭವ. ಕಾಲಿಗೆ ಮುಳ್ಳು ಚುಚ್ಚಿದಾಗ, ವಿಪರೀತ ನೋವಾಗುತ್ತದೆ. ಮುಂದೆ ಹೆಜ್ಜೆಯನ್ನು ಇಡಲು ಆಗುವು
ದಿಲ್ಲ. ಒಂದು ಕಡೆ ಕುಳಿತು, ಮುಳ್ಳನ್ನು ತೆಗೆದು, ಚುಚ್ಚಿದ ಸ್ಥಳವನ್ನು ಚೆನ್ನಾಗಿ ನೀವಿ, ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದು ನಂತರ ನಡೆಯಲು ಆರಂಭಿಸುವುದು ಅನಿವಾರ್ಯ. ಒಂದು ವೇಳೆ ನೋವು ಎನ್ನುವುದು ಇರದೇ ಹೋಗಿದ್ದಲ್ಲಿ, ಕಾಲಿಗೆ ಮುಳ್ಳು ಚುಚ್ಚಿದ್ದರೂ ಸಹಾ, ಹಾಗೆಯೇ ನಡೆ
ದುಕೊಂಡು ಹೋಗುತ್ತಿದ್ದೆವು.

ಆಗ ಮುಳ್ಳು ಮತ್ತಷ್ಟು ಒಳ ನಾಟಿ, ನಂಜೇರಿ, ಕೀವುಗಟ್ಟಿ ಒಳಗೊಳಗೆ ಕಾಲು ಕೊಳೆಯುತ್ತಿತ್ತು. ಅದನ್ನು ಹಾಗೆಯೇ ಬಿಟ್ಟರೆ, ಕಾಲನ್ನು ಛೇದಿಸಿ ತೆಗೆಯ
ಬೇಕಾಗುವಂತಹ ಸಂದರ್ಭವು ಬಂದರೂ ಬರಬಹುದು. ಕಾಲಿಗೆ ಮುಳ್ಳು ಚುಚ್ಚಿಕೊಂಡರೂ, ಆ ನೋವನ್ನು ಅನುಭವಿಸುವುದು ನಮ್ಮ ಮಿದುಳು. ನಮ್ಮ ದೇಹದಲ್ಲಿ ನರಮಂಡಲ ವ್ಯವಸ್ಥೆಯಿದೆ. ನರಮಂಡಲವನ್ನು ಕೇಂದ್ರ ನರಮಂಡಲ ಮತ್ತು ಪರಿಧಿಯ ನರಮಂಡಲ ಎಂದು ವಿಭಜಿಸುವು ದುಂಟು. ಕೇಂದ್ರ ನರಮಂಡಲದಲ್ಲಿ ಮಿದುಳು ಮತ್ತು ಮಿದುಳು ಬಳ್ಳಿಯಿದೆ.

ಪರಿಧಿಯ ನರಮಂಡಲದಲ್ಲಿ ೩೧ ಜೊತೆ ಪಾರ್ಶ್ವನರಗಳಿವೆ. ಪಾರ್ಶ್ವನರಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ನರಗಳಿರುತ್ತವೆ. ಮೊದಲನೆಯದು ಸಂವೇದನಾ ನರಗಳು ಹಾಗೂ ಎರಡನೆಯದು ಕಾಯಚಾಲಕ ನರಗಳು. ನಮ್ಮ ಶರೀರಾದ್ಯಂತ ನಾನಾ ರೀತಿಯ ಸಂವೇದನಾ ಗ್ರಾಹಕಗಳಿವೆ. ಅವುಗಳಲ್ಲಿ ನೋವನ್ನು ಗ್ರಹಿಸುವ ವೇದನಾಗ್ರಾಹಕಗಳು ಸಹ ಒಂದು. ಕಾಲು ಮುಳ್ಳನ್ನು ಮೆಟ್ಟಿದಾಗ, ವೇದನಾಗ್ರಾಹಕವು ಪ್ರಚೋದನೆಗೊಂಡು ನರಸಂeಗಳನ್ನು ಸಂವೇದನಾ ನರದ ಮೂಲಕ ಮಿದುಳುಬಳ್ಳಿ ಹಾಗೂ ಮಿದುಳನ್ನು ತಲುಪುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಮಿದುಳು ಅಥವಾ ಮಿದುಳುಬಳ್ಳಿ ಅಗತ್ಯ ಪ್ರತಿಕ್ರಿಯೆಯ ಸ್ವರೂಪವನ್ನು ನಿರ್ಧರಿಸುತ್ತವೆ. ಸಾಮಾನ್ಯವಾಗಿ ಮಿದುಳಿನಲ್ಲಿರುವ ಹೈಪೋಥಲಾಮಸ್ ಮತ್ತು ಕಾರ್ಟೆಕ್ಸ್ ನೋವಿನ ಸ್ವರೂಪವನ್ನು ಅರ್ಥಮಾಡಿಕೊಂಡು ಸೂಕ್ತ ಪ್ರತಿಕ್ರಿಯೆಯನ್ನು ನಿರ್ಧರಿಸುತ್ತವೆ.

ಅದನ್ನು ಕಾಲಿನ ಕಾಯ ನರಕ್ಕೆ ರವಾನಿಸುತ್ತದೆ. ಆಗ ನಾವು ಕಾಲನ್ನು ನೆಲದಿಂದ ಎತ್ತಿ ಹಿಡಿದು, ಕುಂಟುತ್ತಾ ಸೂಕ್ತಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ.
ಮುಳ್ಳನ್ನು ತೆಗೆದು, ಸುಧಾರಿಸಿಕೊಂಡು ಮುನ್ನಡೆಯುತ್ತೇವೆ. ನೋವಿನ ಅನುಭವದ ಸ್ಥೂಲ ವಿವರಣೆಯಲ್ಲಿ ಬಹಳ ಮುಖ್ಯವಾದ ಅಂಶವೆಂದರೆ, ವೇದನಾಗ್ರಾಹಕಗಳು ತಿಳಿಸುವ ನೋವಿನ ನರಸಂವೇದನೆಗಳನ್ನು ನರಗಳು ಮಿದುಳಿಗೆ ತಿಳಿಸುವ ಪರಿ. ಒಂದುವೇಳೆ ನರಗಳು, ಮಿದುಳುಬಳ್ಳಿಯ
ಮೂಲಕ, ಮಿದುಳಿಗೆ ಏನನ್ನೂ ತಿಳಿಸದಿದ್ದರೆ? ಆಗ ನಮಗೆ ನೋವಿನ ಅನುಭವವೇ ಆಗುವುದಿಲ್ಲವಲ್ಲ! ನಮ್ಮ ಪೂರ್ವಜರು ಈ ನೋವಿನ ನರಸಂಜ್ಞೆಗಳು ಮಿದುಳನ್ನು ತಲುಪದಂತೆ ಮಾಡಲು ಕಂಡುಕೊಂಡ ವಿವಿಧ ವಿಧಾನಗಳು ರೋಚಕವಾಗಿವೆ.

ನೋವನ್ನು ನಿಗ್ರಹಿಸಲು ಸಸ್ಯಜನ್ಯ ಮದ್ಯಸಾರ, ಅಪೀಮು, ಗಾಂಜ, ಮಾಂಡ್ರೇಕ್, ಹೆನ್ಬೇನ್, ಬೆಲ್ಲಡೊನ್ನ, ವಿಲ್ಲೋ ತೊಗಟೆ ಇತ್ಯಾದಿಗಳನ್ನು ಬಳಸಿದರು. ಇಂದಿಗೆ ಸುಮಾರು ೪೫೦೦ ವರ್ಷಗಳ ಹಿಂದೆ, ಅಂದರೆ ಕ್ರಿ.ಪೂ.೨೫೦೦ ವರ್ಷಗಳ ಹಿಂದಿನ ಈಜಿಪ್ಷಿಯನ್ ಸಂಸ್ಕೃತಿಗೆ ಸೇರಿದ ಒಂದು ಸಮಾಧಿ ಸಕ್ಕಾರದಲ್ಲಿ ದೊರೆತಿದೆ. ಈ ಸಮಾಧಿಯ ಗೋಡೆಯ ಮೇಲಿರುವ ಒಂದು ವರ್ಣಚಿತ್ರವು ಕುತೂಹಲಕರವಾಗಿದೆ. ಪರಿಧಿಯ ನರಗಳ (ಪೆರಿಫೆರಲ್ ನರ್ವ್ಸ್) ಮೇಲೆ ಸೂಕ್ತ ಸಾಧನದ ಮೂಲಕ ಒತ್ತಡವನ್ನು ಹಾಕಿ ನೋವನ್ನು ಕಡಿಮೆ ಮಾಡುತ್ತಿದ್ದುದನ್ನು ಈ ಚಿತ್ರವು ವಿವರಿಸುತ್ತದೆ. ಇಂತಹ ವಿಧಾನ ದಲ್ಲಿ ಇಡೀ ಕಾಲಿಗೆ ಕಾಲೇ ಸೆಡೆತುಕೊಳ್ಳುತ್ತದೆ. ಈ ವಿಧಾನದಲ್ಲಿ, ಹೆಬ್ಬೆರಳಿಗೆ ನೋವಾಗಿದ್ದರೆ, ಇಡೀ ಕಾಲನ್ನೇ ಸ್ಪರ್ಶರಹಿತವನ್ನಾಗಿ ಮಾಡಬೇಕಾಗುತ್ತಿತ್ತು. ಸಕಾಲದಲ್ಲಿ ಒತ್ತಡವನ್ನು ನಿವಾರಿಸದಿದ್ದರೆ, ನರಕ್ಕೆ ಶಾಶ್ವತವಾಗಿ ಹಾನಿಯಾಗುವ ಸಂಭವವಿರುತ್ತಿತ್ತು.

ಬಹುಶಃ ಎಷ್ಟು ಹೊತ್ತು ಒತ್ತಡವನ್ನು ಹಾಕಬೇಕು ಎನ್ನುವುದನ್ನು ಅವರು ಅನುಭವಜನ್ಯದಿಂದ ಅರಿತಿದ್ದರೆಂದು ಕಾಣುತ್ತದೆ. ಇದನ್ನು ಸಂಪೀಡನ ಅರಿವಳಿಕೆ (ಕಂಪ್ರೆಶನ್ ಅನೆಸ್ತೀಸಿಯ) ಎಂದು ಈಗ ಕರೆಯುತ್ತೇವೆ. ಪ್ರಾಚೀನ ಈಜಿಪ್ಷಿಯನ್ ಸಂಸ್ಕೃತಿಗೆ ಸೇರಿದ ವೈದ್ಯಕೀಯ ದಾಖಲೆಗಳಲ್ಲಿ ಈಬರ್ಸ್ ಪ್ಯಾಪಿರಸ್ (ಕ್ರಿ.ಪೂ.೧೫೫೦) ಮುಖ್ಯವಾದದ್ದು. ಇದರಲ್ಲಿ ಮೀನುಗಳು ಉತ್ಪಾದಿಸುವ ವಿದ್ಯುತ್ತನ್ನು ಬಳಸಿಕೊಂಡು ನೋವನ್ನು ನಿವಾರಿಸುತ್ತಿದ್ದ ಬಗ್ಗೆ
ಮಾಹಿತಿಯಿದೆ. ವಿದ್ಯುತ್ ರೇ (ಟಾರ್ಪೆಡೊ) ಹೆಮ್ಮೀನು (ಎಲೆಕ್ಟ್ರಿಕ್ ಕ್ಯಾಟ್‌ಫಿಶ್) ವಿದ್ಯುತ್ ಹಾವುಮೀನು (ಎಲೆಕ್ಟ್ರಿಕ್ ಈಲ್) ಮುಂತಾದ ಜಲಚರಗಳು ವಿದ್ಯುತ್ತನ್ನು ಉತ್ಪಾದಿಸುತ್ತವೆ. ಸ್ಕ್ರೈಬೋನಿಯಸ್ ಲಾರ್ಗಸ್ (ಕ್ರಿ.ಶ.೧ ಕ್ರಿ.ಶ.೫೦) ರೋಮನ್ ಸಾಮ್ರಾಜ್ಞ ಕ್ಲಾಡಿಯಸ್ ಟೈಬೀರಿಯಸ್‌ನ ವೈದ್ಯನಾಗಿದ್ದ.

ಕ್ಲಾಡಿಯಸ್ ಅರೆತಲೆನೋವು ಹಾಗೂ ಕೀಲುವಾತಕಿಯಿಂದ (ಗೌಟ್) ನರಳುತ್ತಿದ್ದ. ಟಾರ್ಪೆಡೊ ವಿದ್ಯುತ್ತನ್ನು ಹಾಯಿಸಿ ಪರಿಧಿಯ ನರಗಳನ್ನು ತಾತ್ಕಾಲಿಕವಾಗಿ ನಿಗ್ರಹಿಸಿ ನೋವನ್ನು ಕಡಿಮೆ ಮಾಡುತ್ತಿದ್ದ. ಇವುಗಳ ಜೊತೆಯಲ್ಲಿ ಅವರು ಅತಿ ಶೀತಲ ಅರಿವಳಿಕೆ ಅಥವಾ ಅತಿ ಶೈತ್ಯ ಅರಿವಳಿಕೆಯು (ಕೋಲ್ಡ್ ಅನೆಸ್ತೀಸಿಯ ಅಥವಾ ಕ್ರಯೋ-ಅನೆಸ್ತೀಸಿಯ) ಮುಖ್ಯವಾದದ್ದು. ಆ ಬಗ್ಗೆ ಒಂದು ಪಕ್ಷಿನೋಟವನ್ನು ಹರಿಸೋಣ. ಹಿಪ್ಪೋಕ್ರೇಟ್ಸ್ ಪ್ರಾಚೀನ ಗ್ರೀಸ್ ದೇಶದ ಮಹಾನ್ ವೈದ್ಯ. ಇವನು ತನ್ನ ಜೀವಮಾನದಲ್ಲಿ ಕಂಡುಕೊಂಡ ವೈದ್ಯಕೀಯ ವಿಚಾರಗಳನ್ನು ತನ್ನ ಶಿಷ್ಯರಿಗೆ ಬೋಧಿಸಿದ.

ಅವರು ಮುಖ್ಯಾಂಶಗಳನ್ನು ತಿರುಳ್ನುಡಿಗಳ (ಅ-ರಿಸಮ್) ರೂಪದಲ್ಲಿ ದಾಖಲಿಸಿದರು. ಅವು ನಮ್ಮ ಕಾಲದವರೆಗೆ ಉಳಿದುಬಂದಿವೆ. ಇಂತಹ ತಿರುಳ್ನುಡಿ ಗಳಲ್ಲಿ ಒಂದು ಮಂಜಿನ ನೋವು ಹರಣ ಸಾಮರ್ಥ್ಯವನ್ನು ಸೂಚಿಸುತ್ತದೆ. ಊತಗಳ ಮೇಲೆ ಇಲ್ಲವೇ ಸಂಽವಾತವಾಗಿರುವ ಕೀಲುಗಳ ಮೇಲೆ ತಣ್ಣೀರಿನ ಧಾರೆಯನ್ನು ನಿರಂತರವಾಗಿ ಹರಿಸುವುದರಿಂದ ಊತ ಕಡಿಮೆಯಾಗುತ್ತದೆ ಹಾಗೂ ನೋವು ಶಮನವಾಗುತ್ತದೆ. ತಣ್ಣೀರು ನರಗಳನ್ನು ಮಧ್ಯಮ ಪ್ರಮಾಣದಲ್ಲಿ ನಿಶ್ಚೇತಗೊಳಿಸುವ ಕಾರಣ, ನೋವಿನ ಅನುಭವವಾಗುವುದಿಲ್ಲ ಇದು ಒಂದು ತಿರುಳ್ನುಡಿಯ ಸಾರ. ಆದರೆ ಹಿಪ್ಪೋಕ್ರೇಟ್ಸ್ ನೀರು, ಹಿಮ ಅಥವ ಮಂಜುಗಡ್ಡೆಯನ್ನು ಬಳಸಿ ನೋವನ್ನು ಶಮನಗೊಳಿಸುವ ವಿಧಾನವನ್ನು ಸೂಚಿಸಿದ್ದಾನೆಯೇ ಹೊರತು, ಶೈತ್ಯ ಅರಿವಳಿಕೆಯನ್ನಾಗಿ ಬಳಸಬಹುದು ಎನ್ನುವ ವಿಚಾರವನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಮಧ್ಯಯುಗದ ಇಸ್ಲಾಂ ವೈದ್ಯಕೀಯ ರಂಗದಲ್ಲಿ ಮಿಂಚಿದವನು ಇಬ್ನ್ ಸಿನ ಅಥವ ಅವಿಸೆನ್ನ (೯೮೦-೧೦೩೭) ಈತನು ಹಿಪ್ಪೋಕ್ರೇಟ್ಸ್ ತತ್ತ್ವಗಳನ್ನು ಗಂಭೀರವಾಗಿ ಪರಿಪಾಲಿಸುತ್ತಿದ್ದವ. ಹಾಗಾಗಿ ಹಿಪ್ಪೋಕ್ರೇಟ್ಸ್ ಶೀತಲ ಚಿಕಿತ್ಸೆಯ ಬಗ್ಗೆ ವಿವರಿಸಿದ್ದ ಮಾಹಿತಿಯನ್ನು ಬಳಸಿಕೊಂಡು, ಹುಳುಕುಹಲ್ಲಿನ
ಸುತ್ತಲೂ ಮಂಜುಗಡ್ಡೆಯನ್ನಿಟ್ಟು, ನೋವಿಲ್ಲದಂತೆ ಹಲ್ಲನ್ನು ಕೀಳುವ ಕಲೆಯನ್ನು ಕರಗತಮಾಡಿಕೊಂಡು ಯಶಸ್ವಿಯಾಗಿ ಪ್ರಯೋಗಿಸಿದ.

೧೫೯೫ರಲ್ಲಿ ವೆನಿಸ್ ದೇಶದ ಜೊಹಾನೆಸ್ ಡಿ ಕಾಸ್ಟ ತನ್ನ ಡಿ ಇಗ್ನೆ ಮೆಡಿಸಿನ್ ಪ್ರೆಸಿಡಿಯಮ್ ಕೃತಿಯಲ್ಲಿ ಶೈತ್ಯ ಅರಿವಳಿಕೆಯ ಬಗ್ಗೆ, ಯಾವುದೇ ಶಸ್ತ್ರಚಿಕಿತ್ಸೆಯಲ್ಲಿ ನಡೆಸುವ ಛೇದನದ ನೋವನ್ನು ನೀರು / ಹಿಮ / ಮಂಜುಗಡ್ಡೆಯನ್ನು ಬಳಸಿ ನಿವಾರಿಸಬಹುದು ಎಂಬ ಮೊದಲ ಬಾರಿಗೆ ಬರೆದ.
ಇಟಲಿಯ ಮಾರ್ಕೋ ಔರೀಲಿಯೊ ಸೆವೆರಿನೊ (೧೫೮೦- ೧೬೫೬) ಖ್ಯಾತ ಅಂಗರಚನ ವಿಜ್ಞಾನಿ ಹಾಗೂ ಶಸ್ತ್ರವೈದ್ಯ ನಾಗಿದ್ದ. ಈತನು ಡಿ ಕಾಸ್ಟ ಸೂಚಿಸಿದ ವಿಧಾನದಲ್ಲಿ ಶಸಚಿಕಿತ್ಸೆಗಳನ್ನು ನಡೆಸುತ್ತಿದ್ದ. ೧೬೪೬ರಲ್ಲಿ ಇಟಲಿಗೆ ಭೇಟಿ ನೀಡಿದ ಥಾಮಸ್ ಬಾರ್ಥೊಲಿನ್ (ಭಗದಲ್ಲಿರುವ ಬಾರ್ಥೋಲಿನ್ ಗ್ರಂಥಿಗಳನ್ನು ಕಂಡುಹಿಡಿದ ವೈದ್ಯ) ಸೆವೆರಿನೊ ಶೈತ್ಯ ಅರಿವಳಿಕೆಯನ್ನು ನೀಡಿ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನಡೆಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದ. ೧೫ ವರ್ಷಗಳ ನಂತರ ಡಿ ನಿವಿಸ್ ಉಸು ಮೆಡಿಕೊ ಎನ್ನುವ ಪುಸ್ತಕವನ್ನು ಬರೆದ. ಅದರಲ್ಲಿ ಒಂದು ಇಡೀ ಅಧ್ಯಾಯವನ್ನು ಸೆವೆರಿನೋ ಶೈತ್ಯ ಅರಿವಳಿಕೆಯ ತಂತ್ರದ ಬಗ್ಗೆ ಮೀಸಲಿಟ್ಟ.

ಸೆವೆರಿನೊ ಮತ್ತು ಬಾರ್ಥೊಲಿನ್ ನಂತಹ ವೈದ್ಯರು ಶೈತ್ಯ ಅರಿವಳಿಕೆಯ ಬಗ್ಗೆ ಏನೇ ಬರೆದರೂ, ಉಳಿದ ವೈದ್ಯರು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಶೈತ್ಯ ಅರಿವಳಿಕೆಯು ಎಲ್ಲೆಡೆ ಬಳಕೆಗೆ ಬರಲೇ ಇಲ್ಲ. ವೈದ್ಯಕುಲವು ಹೆಚ್ಚೂ ಕಡಿಮೆ ಈ ವಿಧಾನವನ್ನು ಮರತೇಬಿಟ್ಟಿತು ಎನ್ನಬಹುದು. ೧೮೦೭ರಲ್ಲಿ ಶೈತ್ಯ ಅರಿವಳಿಕೆಯು ಮತ್ತೊಮ್ಮೆ ವೈದ್ಯಕೀಯ ರಂಗದ ಗಮನವನ್ನು ಸೆಳೆಯಿತು. ನೆಪೋಲಿಯನ್ ಬೋನ ಪಾರ್ಟಿಯ ಸೇನಾ ಶಸವೈದ್ಯ ಸರ್ಜನ್ ಜೆನರಲ್ ಬ್ಯಾರನ್ ಡಾಮಿನಿಕ್ ಜೀನ್ ಲಾರಿ (೧೭೬೬-೧೮೪೨). ಇವನು ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದ. ಮೊದಲ ಬಾರಿಗೆ ಕುದುರೆಗಳು ಎಳೆಯುವ ಅಂಬುಲೆನ್ಸ್ ವಾಹನವನ್ನು ಯುದ್ಧರಂಗದಲ್ಲಿ ಬಳಸಿದ. ಯಾವುದೇ ಅವಘಡಗಳು ಸಂಭವಿಸಿದಾಗ ಯಾರಿಗೆ ಮೊದಲು ತುರ್ತು ಚಿಕಿತ್ಸೆಯನ್ನು ನೀಡಬೇಕು, ಯಾರಿಗೆ ನಂತರ ನೀಡಬೇಕು ಎಂಬ ಚಿಕಿತ್ಸಾ ಆದ್ಯತೆಯನ್ನು ನಿರ್ಧರಿಸುವ ಆದ್ಯತಾ ಸರದಿ ವ್ಯವಸ್ಥೆಯನ್ನು (ಟ್ರಯಾಜ್ ಸಿಸ್ಟಮ್) ಜಾರಿಗೆ ತಂದ. ೧೮೦೭ರಲ್ಲಿ ಪ್ರಷ್ಯಾ ದೇಶದ ಏಲೋ ಎಂಬಲ್ಲಿ ಘೋರ ಯುದ್ಧವು ನಡೆಯಿತು.

ಲಾರಿ ಆ ಯುದ್ಧರಂಗದಲ್ಲಿ ಉಪಸ್ಥಿತನಿದ್ದ. ಅದು ಹಿಮಾವೃತ ಪ್ರದೇಶವಾಗಿತ್ತು. ಹಾಗಾಗಿ ಯುದ್ಧದಲ್ಲಿ ಗಾಯಗೊಂಡಿದ್ದ ಅನೇಕ ಸೈನಿಕರು ಮಂಜಿನ ನಡುವೆಯೇ ಹೇಗೋ ಜೀವವನ್ನು ಹಿಡಿದಿಟ್ಟುಕೊಂಡಿದ್ದರು. ಇಂತಹ ಸೈನಿಕರನ್ನು ಬಹಳ ಕಷ್ಟಪಟ್ಟು ಅಂಬುಲೆನ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಲಾರಿ ಸೈನಿಕರ ಜೀವವನ್ನು ಉಳಿಸಲು ಗುಣಪಡಿಸಲಾಗದಂತಹ ಹಾನಿಗೊಳಗಾಗಿದ್ದ ಕೈ ಅಥವ ಕಾಲನ್ನು ಛೇದಿಸಬೇಕಾಗಿತ್ತು. ಹಾಗೆ ಛೇದಿಸುವಾಗ ಅವರಿಗೆ ಅಂತಹ ನೋವೇನೂ ಆಗುತ್ತಿರಲಿಲ್ಲ. ಲಾರಿ ಬಹಳ ಸುಲುಭವಾಗಿ ಅಂಗ ಛೇದನವನ್ನು ಮಾಡುತ್ತಿದ್ದ. ಇದಕ್ಕೆ ಕಾರಣವೇನು ಎಂದು ಯೋಚಿಸಿದ.

ಸೈನಿಕರು ಬಹಳಷ್ಟು ಸಮಯವನ್ನು ಮಂಜಿನಲ್ಲಿ ಕಳೆದಿದ್ದ ಕಾರಣ, ಅತಿ ಶೈತ್ಯವು ಅವರ ನರಗಳು ನಿಶ್ಚೇತಗೊಂಡಿರಬೇಕು, ಆ ಕಾರಣ ಅವರ ಕೈಕಾಲುಗಳು ನೋವನ್ನು ಗ್ರಹಿಸಲು ಅಸಮರ್ಥವಾಗಿದೆ ಎಂದು ಭಾವಿಸಿದ. ೧೮೧೨ರಲ್ಲಿ ಫ್ರಾನ್ಸ್ ದೇಶವು ರಷ್ಯಾ ದೇಶದೊಡನೆ ಬೋರೋಡಿನೊ ಎಂಬಲ್ಲಿ ಯುದ್ಧವನ್ನು ಮಾಡಿತು. ಇದೂ ಸಹ ಹಿಮಾವೃತ ಪ್ರದೇಶವೆ! ಇಲ್ಲಿ ಹೆಚ್ಚುವರಿ ಮಂಜನ್ನು ಬಳಸಿಕೊಂಡು ೨೪ ಗಂಟೆಗಳಲ್ಲಿ ೨೦೦ ಅಂಗಛೇದನಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ. ಬೆರ್ಜ಼ೀನ ಎಂಬಲ್ಲಿ ಯುದ್ಧವು ಮುಂದುವರೆಯಿತು. ಇಲ್ಲಿ ಲಾರಿ ೨೪ ಗಂಟೆಗಳಲ್ಲಿ ೩೦೦ ಯೋಧರ ಅಂಗಛೇದನವನ್ನು ಯಶಸ್ವಿಯಾಗಿ ನಡೆಸಿದ. ಅಂಗಛೇದನ ನಂತರದ ನೋವನ್ನು ಮಂಜುಗಡ್ಡೆಯಿಂದ ನಿಗ್ರಹಿಸಿದ.

ಶೈತ್ಯ ಅರಿವಳಿಕೆಯನ್ನು ಬಹುವಾಗಿ ಮೆಚ್ಚಿಕೊಂಡು ಅದನ್ನು ಪರಿಣಾಮಕಾರಿಯಾಗಿ ಬಳಸಿದವರಲ್ಲಿ ಬ್ರಿಟೀಷ್ ಶಸವೈದ್ಯ ಜೇಮ್ಸ್ ಆರ್ನಾಟ್ (೧೭೯೭-೧೮೮೩) ಮುಖ್ಯ. ಈತನನ್ನು ಅತಿಶೈತ್ಯ ಚಿಕಿತ್ಸೆಯನ್ನು (ಕ್ರಯೋಥೆರಪಿ) ಆರಂಭಿಸಿದ ಮೊದಲಿಗರೆನ್ನಬಹುದು. ಹಾಗೆಯೇ ಈತನನ್ನು ಅತಿಶೈತ್ಯ ಶಸಚಿಕಿತ್ಸೆಯ ಪಿತಾಮಹ (ಫಾದರ್ ಆಫ್ ಕ್ರಯೋಸರ್ಜರಿ) ಎಂದೂ ಕರೆಯುವುದುಂಟು. ಈತನು ತನ್ನ ಅತಿಶೈತ್ಯ ಚಿಕಿತ್ಸೆಯನ್ನು ನಡೆಸುವ ವೇಳೆಗೆ,
ಈಥರ್ ಹಾಗೂ ಕ್ಲೋರೋಫಾರಂಗಳು ಅರಿವಳಿಕೆಗಳಾಗಿ ಯೂರೋಪಿನಲ್ಲಿ ಜನಪ್ರಿಯವಾಗಿದ್ದವು. ಆದರೆ ಈ ರಾಸಾಯನಿಕಗಳನ್ನು ಪ್ರಮಾಣ ಬದ್ಧವಾಗಿ ಬಳಸುವ ಕಲೆ-ವಿಜ್ಞಾನ ಇನ್ನೂ ರೂಪುಗೊಂಡಿರಲಿಲ್ಲ.

ಹಾಗಾಗಿ ಈ ಅರಿವಳಿಕೆಗಳ ದುರುಪಯೋಗದಿಂದ ಹಲವು ಸಾವು ನೋವುಗಳು ಸಂಭವಿಸುತ್ತಿದ್ದವು. ಹಾಗಾಗಿ ಆರ್ನಾಟ್ ಸ್ತನಗಂತಿಗಳನ್ನು ಛೇದಿಸಲು ಗಡ್ಡೆಯ ಸುತ್ತಲೂ ಉಪ್ಪನ್ನು ಬೆರೆಸಿದ ಮಂಜನ್ನು ಇಡುತ್ತಿದ್ದ. ಉಪ್ಪು ಇದ್ದ ಕಾರಣ ಮಂಜು ಬೇಗ ಕರಗಿ ನೀರಾಗುತ್ತಿರಲಿಲ್ಲ. ಮರಗಟ್ಟಿದ ಗಂತಿಯನ್ನು ಹೆಚ್ಚು ನೋವಿಲ್ಲದೆ ಛೇದಿಸುತ್ತಿದ್ದ. ಗರ್ಭಾಶಯ ಕ್ಯಾನ್ಸರಿನಲ್ಲಿ ಇಡೀ ಗರ್ಭಾಶಯವನ್ನು ಛೇದಿಸಲು ಇಂತಹುದೇ ತಂತ್ರವನ್ನು ಯಶಸ್ವಿಯಾಗಿ ಬಳಸುತ್ತಿದ್ದ. ೧೮೪೨ ರಲ್ಲಿ ಸಮಗ್ರ ಅರಿವಳಿಕೆ (ಜನರಲ್ ಅನೆಸ್ತೀಸಿಯ) ಬಳಕೆಗೆ ಬರುವವರಿಗೂ ಈ ರೀತಿಯ ಅರಿವಳಿಕೆಗಳ ಬಳಕೆಗಳು ನಡೆದವು. ಇವು ನೋವನ್ನು ಪೂರ್ಣವಾಗಿ ನಿವಾರಿಸದಿದ್ದರೂ ಸಹನೀಯವಾಗಿಸುತ್ತಿದ್ದವು. ಸಮಗ್ರ ಅರಿವಳಿಕೆಯು ನೋವನ್ನು ಸಂಪೂರ್ಣವಾಗಿ ನಿವಾರಿಸುತ್ತಿದ್ದ ಕಾರಣ, ಗಂಭೀರ ಸ್ವರೂಪದ ಶಸಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಯಿತು.