Thursday, 12th December 2024

ಇವನ ಜಠರದಲ್ಲಿ ಒಂದು ತೂತು ಶಾಶ್ವತವಾಗಿ ಉಳಿಯಿತು !

ಹಿಂದಿರುಗಿ ನೋಡಿದಾಗ

ನಾವು ದಿನನಿತ್ಯ ಸೇವಿಸುವ ಆಹಾರವು ಎಲ್ಲಿ ಜೀರ್ಣವಾಗುತ್ತದೆ? ಹೇಗೆ ಜೀರ್ಣವಾಗುತ್ತದೆ? ಎಷ್ಟೂ ಹೊತ್ತಿನಲ್ಲಿ ಜೀರ್ಣವಾಗುತ್ತದೆ, ಆಹಾರ  ಜೀರ್ಣ ವಾಗುವಿಕೆಯ ಮಹತ್ವವೇನು? ಮನುಷ್ಯನ ಈ ಅನಾದಿಕಾಲದ ಪ್ರಶ್ನೆಗಳಿಗೆ ಪೌರ್ವಾತ್ಯ ಹಾಗೂ ಪಾಶ್ಚಾತ್ಯ ವೈದ್ಯಕೀಯ ವಿಜ್ಞಾನಗಳು ಉತ್ತರವನ್ನು ಕಂಡುಕೊಂಡ ಪರಿಯು ಕುತೂಹಲವಾಗಿದೆ. ಸುಶ್ರುತ ಮಹರ್ಷಿಗಳು ಆರೋಗ್ಯ ಎಂದರೆ ಏನು ಎನ್ನುವುದನ್ನು ಸಮದೋಷ ಸಮ ಅಗ್ನಿಶ್ಚ ಸಮ ಧಾತು ಮಲಕ್ರಿಯಾಃ| ಪ್ರಸನ್ನ ಆತ್ಮ ಇಂದ್ರಿಯ ಮನಃ ಸ್ವಸ್ಥ ಇತಿ ಅಭಿದೀಯತೆ|| ಎನ್ನುವ ಶ್ಲೋಕದಲ್ಲಿ ಕ್ರೋಢೀಕರಿಸಿದ್ದಾರೆ.

ಇದರಲ್ಲಿ ಅಗ್ನಿಶ್ಚ ಎಂಪದವು ಆಹಾರ ಜೀರ್ಣಶಕ್ತಿಗೆ ಸಂಬಂಧಪಟ್ಟಿರುವಂತಹದ್ದು. ಆಯುರ್ವೇದವು ಶರೀರದಲ್ಲಿ ನಡೆಯುವ ಎಲ್ಲ ಉಪಾಪಚಯ ಕಾರ್ಯಗಳಿಗೆ (ಮೆಟಬಾಲಿಕ್ ಪ್ರೋಸೆಸಸ್) ಅಗ್ನಿ ಕಾರಣ ಎನ್ನುತ್ತದೆ. ಶರೀರದಲ್ಲಿ ತೀಕ್ಷ್ಣಾಗ್ನಿಯು ಇರಬಾರದು ಹಾಗೂ ಮಂದಾಗ್ನಿಯೂ ಇರಬಾರದು. ಒಬ್ಬ ವ್ಯಕ್ತಿಯ ಸಮಗ್ರ ಆರೋಗ್ಯವನ್ನು ಸಮಾಗ್ನಿಯು ನಿರ್ಧರಿಸುತ್ತದೆ ಎನ್ನುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನು ಅಹಂ ವೈಶ್ವಾನರೋ ಭೂತ್ವಾ
ಪ್ರಾಣೀನಾಂ ದೇಹಮಾಶ್ರಿತಃ| ಪ್ರಾಣಾಪಾನಾಸಮಾಯುಕ್ತಃ ಪಚಾಮನ್ನಂ ಚತುರ್ವಿಧಮ್|| ನಾನು ವೈಶ್ವಾನರ ರೂಪದಲ್ಲಿ ಪ್ರಾಣಿಗಳ ದೇಹದಲ್ಲಿಟ್ಟು ಕೊಂಡು ಪ್ರಾಣ, ಅಪಾನಗಳ ಜತೆಗೂಡಿ ನಾಲ್ಕು ವಿಧದ ಆಹಾರವನ್ನು ಜೀರ್ಣಮಾಡುತ್ತೇನೆ ಎಂದಿದ್ದಾನೆ.

ಎಲ್ಲ ಜೀವಿಗಳ ಒಳಗೆ ದೇವರು ವೈಶ್ವಾನರನಾಗಿ ಅಸ್ತಿತ್ವದಲ್ಲಿದ್ದಾನೆ. ಜೀರ್ಣಕ್ರಿಯೆಗೆ ಅಗತ್ಯವಾದ ಬೆಂಕಿಯು, ದೇವರ ಕೃಪೆಯಿಂದ ಉರಿಯುತ್ತದೆ ಎನ್ನುತ್ತಾನೆ ಕೃಷ್ಣ. ಬೃಹದಾರಣ್ಯಕ ಉಪನಿಷತ್ತು ಕೂಡ ಹೀಗೆ ಹೇಳಿದೆ: ಅಯಮ್ ಅಗ್ನಿರ್ ವೈಷ್ವಾನರೋ ಯೋಯಂ ಅಂತಃ ಪುರುಷೇ ಯೇನದಂ ಅನ್ನಂ ಅಚ್ಯತೇ (೫.೯.೧) ಎನ್ನುತ್ತದೆ. ದೇವರು ಹೊಟ್ಟೆಯೊಳಗಿನ ಬೆಂಕಿಯಾಗಿದ್ದು ಅದು ಜೀವಿಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಅನುವು
ಮಾಡಿಕೊಡುತ್ತದೆ. ಎಂಬುದು ತಾತ್ಪರ್ಯ. ಪಾಶ್ಚಾತ್ಯ ಜಗತ್ತಿನಲ್ಲಿ ಆಹಾರ ಜೀರ್ಣವಾಗುವಿಕೆಯ ಮೊದಲ ಬಾರಿಗೆ ಯೋಚಿಸಿದವನು ಬಹುಶಃ ಹಿಪ್ಪೋಕ್ರೇಟ್ಸ್ (ಕ್ರಿ.ಪೂ.೪೬೦-ಕ್ರಿ.ಪೂ.೩೭೦) ಆಗಿರಬಹುದು.

ಹಿಪ್ಪೋಕ್ರೇಟ್ಸ್ ರಸ ಸಿದ್ಧಾಂತವನ್ನು (ಹ್ಯೂಮರಲ್ ಥಿಯರಿ) ಮಂಡಿಸುತ್ತಾ, ನಾವು ಆರೋಗ್ಯವಾಗಿರಲು ರಕ್ತ, ಕಫ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತಗಳ ನಡುವೆ ಸಮತೋಲನೆಯಿರಬೇಕು ಎಂದ. ನಾವು ಸೇವಿಸುವ ಆಹಾರವು ಈ ನಾಲ್ಕು ರಸಗಳ ನಡುವೆ ಸಮತೋಲನೆಯನ್ನು ಸಾಧಿಸುತ್ತದೆ ಎನ್ನುವುದು
ಆತನ ಅಭಿಮತ. ರೋಮನ್ ವೈದ್ಯ ಗ್ಯಾಲನ್ (೧೨೯-೨೧೬) ಹಿಪ್ಪೊಕ್ರೇಟ್ಸ್ ಅಭಿಪ್ರಾಯವನ್ನು ಮತ್ತಷ್ಟು ವಿಸ್ತೃತ ಗೊಳಿಸಿ, ನಮ್ಮ ಹೊಟ್ಟೆ ಎನ್ನುವುದು ಒಂದು ಒಲೆ. ಈ ಒಲೆಯು ನಾವು ಸೇವಿಸುವ ಆಹಾರವನ್ನು ಬೇಯಿಸುತ್ತದೆ ಹಾಗೂ ನಮ್ಮ ಬೆಂದ ಆಹಾರದಿಂದ ದೇಹವು ಪೋಷಕಾಂಶಗಳನ್ನು
ಹೀರುತ್ತದೆ ಎಂದು ವರ್ಣಿಸಿದ. ಈ ಅಭಿಪ್ರಾಯವು ೧೫೦೦ ವರ್ಷಗಳಿಗೂ ಹೆಚ್ಚು ಕಾಲ ಪ್ರಚಲಿತದಲ್ಲಿತ್ತು.

ಯೂರೋಪಿನಲ್ಲಿ ಕಂಡಬಂದ ನವೋದಯ ಅಥವ ರಿನೇಸಾನ್ಸ್ ಕಾಲದಲ್ಲಿ ನಾವು ಸೇವಿಸುವ ಸಂಕೀರ್ಣ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಜೀರ್ಣವಾಗಿ ಅನ್ನರಸ (ಕೈಮ್) ವಾಗುತ್ತದೆ; ಈ ಅನ್ನರಸದಲ್ಲಿರುವ ಪೋಷಕಾಂಶಗಳು ರಕ್ತಪ್ರವಾಹದಲ್ಲಿ ಬೆರೆಯುತ್ತದೆ ಎನ್ನುವ ತಿಳಿವು ಪ್ರಸಿದ್ಧ ವಾಯಿತು. ಪ್ಯಾರಾಸೆಲ್ಸಸ್ (೧೪೯೩-೧೫೪೧) ಎಂಬ ಸ್ವಿಸ್ ವೈದ್ಯ ಹಾಗೂ ರಸವಾದಿಯು ಆಹಾರ ಜೀರ್ಣವಾಗುವಿಕೆಯಲ್ಲಿ ಭೌತ ಮತ್ತು ರಾಸಾಯನಿಕ
ಕ್ರಿಯೆಗಳೆರಡೂ ನಡೆಯುತ್ತವೆ ಎಂದ. ಆದರೆ ಎಂತಹ ರಾಸಾಯನಿಕ ಕ್ರಿಯೆಗಳು ಎನ್ನುವುದನ್ನು ವಿವರಿಸಲು ವಿಫಲನಾದ.

ಆಂಡ್ರಿಯಸ್ ವೆಸಾಲಿಯಸ್ (೧೫೧೪-೧೭೯೯) ಮೊದಲ ಬಾರಿಗೆ ಮನುಷ್ಯನ ಶರೀರ ರಚನೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ. ಅನ್ನನಾಳ, ಜಠರ, ಕರುಳು, ಯಕೃತ್ತಿ, ಮಾಂಸಲಿ ಮುಂತಾದ ಜೀರ್ಣಾಂಗಗಳನ್ನು ಕರಾರುವಕ್ಕಾಗಿ ವಿವರಿಸಿದ. ಆದರೆ ಆಹಾರ ಜೀರ್ಣಕ್ರಿಯೆಯ ವಿವರಗಳ ಬಗ್ಗೆ ಆತ
ಆಸಕ್ತಿಯನ್ನು ತಳೆಯಲಿಲ್ಲ. ಹಾಗಾಗಿ ಜೀರ್ಣಾಂಗಗಳ ಸಮಗ್ರ ಪರಿಚಯವಾದರೂ ಸಹ, ಯಾವ ಆಂಗರದಲ್ಲಿ ಯಾವ ರೀತಿಯ ಜೀರ್ಣಕ್ರಿಯೆಯನ್ನು ನಡೆಸುತ್ತದೆ ಎನ್ನುವುದು ಅಜ್ಞಾತವಾಗಿಯೇ ಉಳಿಯಿತು. ಇಟಲಿಯ ವೈದ್ಯ ಮತ್ತು ವಿಜ್ಞಾನಿ ಲಾಜ಼ರೋ ಸ್ಪೆಲಾಂಜ಼ಿನಿ(೧೭೨೯-೧೭೯೯) ಒಂದು ದಿಟ್ಟ ಪ್ರಯೋಗವನ್ನು ಕೈಗೊಂಡ.

ಈತನು ಸಣ್ಣ ಸಣ್ಣ ನಳಿಕೆಗಳಲ್ಲಿ ಆಹಾರ ಪದಾರ್ಥಗಳನ್ನಿರಿಸಿದ. ಅವನ್ನು ಪ್ರಾಣಿಗಳ ಜಠರದ ಒಳಗೆ ತೂರಿಸಿದ. ಸ್ವಲ್ಪ ಹೊತ್ತಿನ ನಂತರ ಅವನ್ನು ಹೊರತೆಗೆದ. ಆಹಾರ ಪದಾರ್ಥಗಳು ಆಮ್ಲ ಮಾಧ್ಯಮದಲ್ಲಿ ಅರೆಬರೆ ಜೀರ್ಣವಾಗಿರುವುದನ್ನು ಗುರುತಿಸಿದ. ಆಹಾರವು ಜೀರ್ಣವಾಗಲು ಜಠರದಲ್ಲಿಯೇ ಉತ್ಪಾದನೆಯಾಗುವ ಜಠರ ರಸವು ಮುಖ್ಯವೆಂದ.

ವಿಲಿಯಂ ಬ್ಯೂಮಾಂಟ್ (ನವೆಂಬರ್ ೨೧, ೧೭೮೫ – ಏಪ್ರಿಲ್ ೨೫, ೧೮೫೩) ಅಮೆರಿಕದ ಸೈನ್ಯದಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ. ಅವನನ್ನು ಇಂದು ಜಠರ ಕ್ರಿಯಾ ವಿಜ್ಞಾನದ ಪಿತಾಮಹ (ಫಾದರ್ ಆಫ್ ಗ್ಯಾಸ್ಟ್ರಿಕ್ ಫಿಸಿಯಾಲಜಿ) ಎಂದು ಗುರುತಿಸುವುದುಂಟು. ಮನುಷ್ಯನ ಜಠರದಲ್ಲಿ ಆಹಾರವು  ಜೀರ್ಣ ವಗುವ ಬಗ್ಗೆ ಮೊದಲ ಬಾರಿಗೆ ಪ್ರಾಯೋಗಿಕ ಪುರಾವೆಯನ್ನು ನೀಡಿದ. ಇವನು ನಡೆಸಿದಂತಹ ಪ್ರಯೋಗವು ಇತಿಹಾಸದಲ್ಲಿ ಹಿಂದೆ ನಡೆದಿರಲಿಲ್ಲ; ಬಹುಶಃ ಮುಂದೆಯೂ ನಡೆಯಲಾರದು.

ವಿಲಿಯಂ ಬ್ಯೂಮಾಂಟನ ತಂದೆ ಸ್ಯಾಮ್ಯುವಲ್ ಬ್ಯೂಮಾಂಟ್. ತಾಯಿ ಲ್ಯೂಕ್ರಿಶಿಯ ಏಬಲ್. ಅಮೆರಿಕದ ಕನೆಕ್ಟಿಕಟ್ ಪ್ರದೇಶದ ಲೆಬನಾನಿನವರು. ತಂದೆ ರೈತ. ವಿಲಿಯಮ್ ತನ್ನ ೨೧ನೆಯ ವರ್ಷದಲ್ಲಿ ಮನೆಯನ್ನು ಬಿಟ್ಟ. ನ್ಯೂಯಾರ್ಕಿನ ಚಾಂಪ್ಲೈನ್ ಎನ್ನುವ ಸ್ಥಳಕ್ಕೆ ಬಂದ. ಅಧ್ಯಾಪಕನಾಗುವ ಆಸೆಯಿತ್ತು ಅವನಿಗೆ. ಆದರೆ ಅಲ್ಲಿ ಸರಿಹೋಗಲಿಲ್ಲ. ೧೮೧೦ರಲ್ಲಿ ವೆರ್ಮೌಂಟ್ ಪ್ರದೇಶದ ಸೈಂಟ್ ಆಲ್ಬನ್ಸ್ ಎನ್ನುವ ಊರಿಗೆ ಹೋದ. ಅಲ್ಲಿ ಡಾ.
ಟ್ರೂಮನ್ ಪಾವೆಲ್ ಎಂಬ ವೈದ್ಯನ ಬಳಿ ಸಹಾಯಕನಾಗಿ ಸೇರಿಕೊಂಡ. ೧೮೧೨, ಜೂನ್ ತಿಂಗಳಿನಲ್ಲಿ ವೈದ್ಯಕೀಯ ಪರೀಕ್ಷೆಯನ್ನು ತೆಗೆದುಕೊಂಡ. ಅವನ ಶರೀರ ವಿಜ್ಞಾನ, ಶಸ್ತ್ರವೈದ್ಯಕೀಯ ಜ್ಞಾನ ಹಾಗೂ ರೋಗಗಳಲ್ಲಿ ಗುರುತಿಸಿ, ಚಿಕಿತ್ಸೆಯನ್ನು ನೀಡುವ ಸಾಮರ್ಥ್ಯವನ್ನು ಪರೀಕ್ಷಿಸಿ, ಇವನು
ವೈದ್ಯನಾಗಬಹುದು ಎಂದು ವೆರ್ಮೌಂಟಿನ ಮೆಡಿಕಲ್ ಸೊಸೈಟಿ ಅನುಮತಿಯನ್ನು ನೀಡಿತು.

೧೮೧೨ ರಲ್ಲಿ ಅಮೆರಿಕ ಹಾಗೂ ಬ್ರಿಟನ್ ನಡುವೆ ಪ್ಲಾಟ್ ಬರ್ಗ್ ಕದನವು ನಡೆಯಿತು. ವಿಲಿಯಂ ಸೈನ್ಯವನ್ನು ಸೇರಿದ. ೧೮೧೨-೧೮೧೫ರವರೆಗೆ ಸೈನ್ಯದಲ್ಲಿ ಅಸಿಸ್ಟಂಟ್ ಸರ್ಜನ್ ಆಗಿ ಸೇವೆಯನ್ನು ಸಲ್ಲಿಸಿದ. ಯುದ್ಧ ಮುಗಿಯಿತು. ಸೈನ್ಯವನ್ನು ಬಿಟ್ಟು ಪ್ಲಾಟ್ಸ್‌ಬರ್ಗ್ ಪ್ರದೇಶದಲ್ಲಿ ಖಾಸಗಿಯಾಗಿ
ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ. ಅವನಿಗೆ ಈ ಖಾಸಗೀ ವೃತ್ತಿಯು ಒಗ್ಗಿ ಬರಲಿಲ್ಲ. ೧೮೨೦ರಲ್ಲಿ ಮತ್ತೆ ಸೈನ್ಯವನ್ನು ಸೇರಿದ. ಡೆಬೋರಾ ಡೆಬ್ಬಿ ಗ್ರಾನ್‌ಪ್ಲಾಟ್ ನ್ನುವವಳನ್ನು ಮದುವೆಯಾದ. ಎರಡು ದಶಕಗಳ ಕಾಲ ನ್ಯೂಯಾರ್ಕ್, ಮಿಷಿಗನ್, ವಿಸ್ಕಾನ್ಸಿನ್ ಮತ್ತು ಮಿಸ್ಸೌರಿ ಪ್ರದೇಶಗಳಲ್ಲಿ ಸೇನೆಯ ವೈದ್ಯನಾಗಿ ಸೇವೆಯನ್ನು ಸಲ್ಲಿಸಿದ.

ಜೂನ್ ೬, ೧೮೨೨. ವಿಲಿಯಂ ಮಿಷಿಗನ್ ಪ್ರದೇಶದಲ್ಲಿ ಫೋರ್ಟ್ ಮ್ಯಾಕಿನಾಕ್ ಎನ್ನುವ ಸ್ಥಳದಲ್ಲಿ ಕೆಲಸವನ್ನುಮಾಡುತ್ತಿದ್ದ. ಅಲ್ಲಿ ಒಂದು  ಅಮೆರಿಕನ್ ಫಾರ್ (ತುಪ್ಪಳ) ಸಂಸ್ಥೆಯಿತ್ತು. ಆ ಸಂಸ್ಥೆಯಲ್ಲಿ ಅಲೆಕ್ಸಿಸ್ ಬಿಡಾಗನ್ ಸೈಂಟ್ ಮಾರ್ಟಿನ್ (೧೮೦೨-೧೮೮೦) ಎಂಬ ಫ್ರೆಂಚ್ ಕೆನಡಿಯನ್,
೨೦ ವರ್ಷದ ಯುವಕ ಕೆಲಸವನ್ನು ಮಾಡುತ್ತಿದ್ದ. ಅಕಸ್ಮಾತ್ತಾಗಿ ಮಸ್ಕೆಟ್ ಬಂದೂಕಿನಿಂದ ಒಂದು ಗುಂಡು ಹಾರಿತು. ಆ ಗುಂಡು ನೇರವಾಗಿ ಸೈಂಟ್ ಮಾರ್ಟಿನ್ನನ ಉದರ ಹಾಗೂ ಎದೆಗೂಡನ್ನು ಗಾಯಗೊಳಿಸಿದವು. ಇವನನ್ನು ವಿಲಿಯಂ ಬ್ಯೂಮಾಂಟನ ಬಳಿಗೆ ಕರೆತಂದರು. ವಿಲಿಯಂ ತನ್ನಿಂದ
ಸಾಧ್ಯವಾದ ಎಲ್ಲ ಚಿಕಿತ್ಸೆಯನ್ನು ನೀಡಿದ. ಬಹುಶಃ ಸೈಂಟ್ ಮಾರ್ಟಿನ್ ಬದುಕಲಾರ ಎಂದ. ಏಕೆಂದರೆ ಗುಂಡೇಟಿನ ಗಾಯವಾದ ನಂತರ, ೧೭ ದಿನಗಳವರೆಗೆ, ಅವನು ಸೇವಿಸಿದ ಎಲ್ಲ ಆಹಾರವು ಈ ಜಠರ ರಂಧ್ರದ ಮೂಲಕ ಹೊರಬರಲಾರಂಭಿಸಿತು.

ಹೊಟ್ಟೆಯೊಳಗೆ ಆಹಾರವು ಹೋಗುತ್ತಲೇ ಇರಲಿಲ್ಲ. ಸೈಂಟ್ ಮಾರ್ಟಿನ್ ಜಠರದಲ್ಲಿ ಒಂದು ದೊಡ್ಡ ರಂಧ್ರವು ಅಂದರೆ ಒಂದು ವ್ರಣನಾಳವು (ಫಿಸ್ಟುಲ್) ಉಳಿದುಕೊಂಡುಬಿಟ್ಟಿತು. ಆ ರಂಧ್ರದ ಮೂಲಕ ಸೈಂಟ್ ಮಾರ್ಟಿನ್ನನ ಜಠರದೊಳಗೆ ಇಣುಕಿ ನೋಡಬಹುದಾಗಿತ್ತು. ಸೈಂಟ್ ಮಾರ್ಟಿನ್ ನಿಃಶ್ಯಕ್ತನಾದ. ಸೈಂಟ್ ಮಾರ್ಟಿನ್ ಉಳಿಯುವುದು ಕಷ್ಟ ಎನ್ನುವ  ತೀರ್ಮಾನಕ್ಕೆ ವಿಲಿಯಂ ಬ್ಯೂಮಾಂಟ್ ಬಂದ. ಆದರೆ
ಚಿಕಿತ್ಸೆಯನ್ನು ಮಾತ್ರ ನಿಲ್ಲಿಸಲಿಲ್ಲ. ಮುಂದುವರೆಸಿದ. ಆದರೆ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಸೈಂಟ್ ಮಾರ್ಟಿನ್ ಪೂರ್ಣ ಚೇತರಿಸಿಕೊಂಡ.
ಅಮೆರಿಕದ ಫಾರ್ ಕಂಪನಿಯು ಅವನನ್ನು ಕೆಲಸದಿಂದ ತೆಗೆದುಹಾಕಿತು.

ಸೈಂಟ್ ಮಾರ್ಟಿನ್ನನಿಗೆ ನಿಲ್ಲಲು ನೆಲೆ ಇಲ್ಲದಂತಾಯಿತು. ಆಗ ವಿಲಿಯಂ ಬ್ಯೂಮಾಂಟ್ ಒಂದು ಸಲಹೆಯನ್ನು ನೀಡಿದ. ನಿನಗೆ ಅನ್ನ ಹಾಗೂ ಆಶ್ರಯವನ್ನು ಕೊಡುತ್ತೇನೆ. ವರ್ಷಕ್ಕೆ ೧೫೦ ಡಾಲರ್ ಸಂಬಳವನ್ನು ಕೊಡುತ್ತೇನೆ. ನನ್ನ ಜತೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಇದ್ದುಬಿಡು. ನಾನು ಒಂದಷ್ಟು ವೈದ್ಯಕೀಯ ಪ್ರಯೋಗಗಳನ್ನು ಮಾಡುತ್ತೇನೆ. ಅವುಗಳಿಗೆ ನೀನು ಸಹಕರಿಸಬೇಕು. ಅಷ್ಟೆ ಎಂದ. ಅದಕ್ಕೆ ಸೈಂಟ್  ರ್ಟಿನ್
ಒಪ್ಪಿಕೊಂಡ. ಈ ಕುರಿತು ಒಂದು ಕಾನೂನು ಬದ್ಧವಾದ ಒಪ್ಪಂದವಾಯಿತು.

ವಿಲಿಯಂ ಬ್ಯೂಮಾಂಟ್, ೧೮೨೩ ರಿಂದ ೧೮೩೩ರವರೆಗೆ, ೧೦ ವರ್ಷಗಳ ಅವಧಿಯಲ್ಲಿ ಸುಮಾರು ೨೦೦ ಪ್ರಯೋಗಗಳನ್ನು ಸೈಂಟ್ ಮಾರ್ಟಿನ್ ಮೇಲೆ ನಡೆಸಿದ. ಆತ ನಡೆಸಿದ ಪ್ರಯೋಗಗಳು ಸರಳವಾಗಿದ್ದವು. ಉದಾಹರಣೆಗೆ ಒಂದು ರೇಷ್ಮೆ ದಾರಕ್ಕೆ ಒಂದು ಮಾಂಸದ ಚೂರನ್ನು ಕಟ್ಟಿದ. ಆ ಮಾಂಸವನ್ನು ಎಚ್ಚರಿಕೆಯಿಂದ ಸೈಂಟ್ ಮಾರ್ಟಿನ್ ಉದರದಲ್ಲಿದ್ದ ರಂಧ್ರದ ಮೂಲಕ ನಿಧಾನವಾಗಿ ಜಠರದೊಳಗೆ ಇಳಿಸಿದ. ಜಠರದಲ್ಲಿ ಆ ಮಾಂಸದ ಚೂರು ಹೇಗೆಲ್ಲ ಬದಲಾವಣೆಗಳಿಗೆ ಒಳಗಾಗುತ್ತದೆ ಎನ್ನುವುದನ್ನು  ಅಧ್ಯಯನ ಮಾಡಿ, ತಾನು ಕಂಡದ್ದೆಲ್ಲವನ್ನು ಕ್ರಮಬದ್ಧವಾಗಿ ದಾಖಲಿಸಿದ. ಜಠರವು ಉತ್ಪಾದಿಸುವ ಜಠರ ರಸವನ್ನು ಬಹಳ ಎಚ್ಚರಿಕೆಯಿಂದ ಹೊರತೆಗೆದ. ಆ ರಸವನ್ನು ವರ್ಜೀನಿಯ ವಿವಿ, ಯೇಲ್ ವಿವಿ, ಸ್ಟಾಕ್ ಹೋಮ್ ವಿವಿ
ಗಳಲ್ಲಿರುವ ರಸಾಯನ ವಿಜ್ಞಾನ ವಿಭಾಗಕ್ಕೆ ಕಳುಹಿಸಿಕೊಟ್ಟ. ಎಲ್ಲ ಪ್ರಯೋಗಗಳು ಜಠರ ರಸದಲ್ಲಿ ಪ್ರಧಾನವಾಗಿ ಹೈಡ್ರೋಕ್ಲೋರಿಕ್ ಆಸಿಡ್ ಇದೆ ಎಂದು ವರದಿಯನ್ನು ನೀಡಿದವು. ಜಠರ ರಸಕ್ಕೆ ಜಠರಾಮ್ಲ ಎಂದು ನಾಮಕರಣವನ್ನು ಮಾಡಿದ. ಅಮೆರಿಕನ್ನರು ಬಳಸುವ ಸರ್ವ ಸಾಮಾನ್ಯ ಆಹಾರ ಪದಾರ್ಥಗಳನ್ನು ಹಾಗೂ ಪಾನೀಯಗಳನ್ನು ಪ್ರಯೋಗಗದಲ್ಲಿ ಬಳಸಿದ.

ವ್ಯಾಯಾಮವನ್ನು ಮಾಡುವಾಗ, ಜ್ವರ ಬಂದಾಗ, ಚಳಿ ಹೆಚ್ಚಾದಾಗ ಹಾಗೂ ಮನುಷ್ಯನ ವಿವಿಧ ಭಾವನೆಗಳಿಗೆ ಅನುಗುಣವಾಗಿ ಜಠರಾಮ್ಲದ ಉತ್ಪಾದನೆಯಲ್ಲಿ ಏರುಪೇರಾಗುವುದನ್ನು ದಾಖಲಿಸಿದ. ಹೀಗೆ ಕ್ರಮ ಬದ್ಧವಾಗಿ ೨೦೦ ಪ್ರಯೋಗಗಳನ್ನು ಮಾಡಿ ಅಧ್ಯಯನ ಮಾಡಿ, ೫೧ ವೈಜ್ಞಾನಿಕ ಫಲಿತಾಂಶಗಳನ್ನು ದಾಖಲಿಸಿದ. ೧೮೩೮. ಆಹಾರ ಜೀರ್ಣಕ್ರಿಯೆಯಲ್ಲಿ ಜಠರಾಮ್ಲದ ಪಾತ್ರದ ಪ್ರಯೋಗಗಳು ಮತ್ತು ಅವಲೋಕನಗಳು (ಎಕ್ಸ್‌ಪೆರಿಮೆಂಟ್ಸ್ ಅಂಡ್ ಅಬ್ಸರ್ವೇಶನ್ಸ್ ಆನ್ ದಿ ಗ್ಯಾಸ್ಟ್ರಿಕ್ ಜ್ಯೂಸ್, ಅಂಡ್ ದಿ ಫಿಸಿಯಾಲಜಿ ಆಫ್ ಡೈಜೆಶನ್) ಎನ್ನುವ ಪುಸ್ತಕವನ್ನು ಬರೆದ.
ಸೈಂಟ್ ಮಾರ್ಟಿನ್ ಜಠರ ರಂಧ್ರದ ಜತೆಯಲ್ಲಿಯೇ ೭೮ ವರ್ಷಗಳ ಕಾಲ ಬದುಕಿದ್ದು ೧೮೮೦ರಲ್ಲಿ ಸಹಜವಾಗಿ ಮರಣಿಸಿದ. ವಿಲಿಯಂ ಬ್ಯೂಮಾಂಟ್ ೧೮೫೩ರಲ್ಲಿ ೬೭ ವರ್ಷಗಳಾಗಿದ್ದಾಗ ಕಾಲು ಜಾರಿ ಬಿದ್ದು ಇಹ ಲೋಕವನ್ನು ತ್ಯಜಿಸಿದ. ಸೈಂಟ್ ಲೂಯಿಸ್ ದ್ವೀಪದ ಬೆಲ್ಲೆ-ಂಟೈನ್ ಸಿಮೆಟ್ರಿಯಲ್ಲಿ ಅವನ ಸಮಾಧಿ ಇಂದಿಗೂ ಇದೆ.

ವಿಲಿಯಂ ಬ್ಯೂಮಾಂಟ್ ಹಾಗೂ ಸೈಂಟ್ ಮಾರ್ಟಿನ್ ಅವರ ಜಂಟೀ ಪ್ರಯೋಗಗಳಿಂದ ಮನುಕುಲಕ್ಕೆ ಮೊದಲ ಬಾರಿಗೆ ಜಠರ ರಸದಲ್ಲಿ ಪ್ರಧಾನವಾಗಿ ಹೈಡ್ರೋಕ್ಲೋರಿಸ್ ಆಸಿಡ್ ಇರುತ್ತದೆ ಎನ್ನುವುದು ತಿಳಿಯಿತು. ಜಠರಾಮ್ಲವನ್ನು ಜಠರವೇ ಉತ್ಪಾದನೆ ಮಾಡುತ್ತದೆ, ಉತ್ಪಾದನಾ ಪ್ರಮಾಣ, ವೇಗ, ಆಮ್ಲೀಯತೆ ಇತ್ಯಾದಿಗಳು ವ್ಯಕ್ತಿಯ ದೈನಂದಿನ ಕೆಲಸ ಕಾರ್ಯಗಳು, ಭಾವನೆಗಳು, ಆಹಾರ ವೈವಿಧ್ಯತೆಗಳನ್ನು ಅನುಸರಿಸಿರುತ್ತದೆ ಎನ್ನುವ ವಿಚಾರಗಳು ತಿಳಿದವು. ಮನುಕುಲದ ವೈದ್ಯಕೀಯ ಇತಿಹಾಸದಲ್ಲಿ ಇಂತಹ ವಿಚಿತ್ರ ಸರಣೀ ಪ್ರಯೋಗಗಳು ನಡೆದ ಮತ್ತೊಂದು ಉದಾಹರಣೆಯು ದೊರೆಯುವುದಿಲ್ಲ.