Friday, 18th October 2024

ಕ್ರೋಧಿಯನ್ನು ಬೋಧಿ ಆಗಿಸಲು ಮೂವತ್ತು ನೀತಿಗುಳಿಗೆಗಳು

ತಿಳಿರುತೋರಣ

srivathsajoshi@yahoo.com

ದಿನಕ್ಕೊಂದು ಸುಭಾಷಿತ ನೀತಿಯನ್ನು ಹೇಳುವ ಪುಸ್ತಕವೊಂದಿದೆ. ಇದನ್ನು ಬರೆದವರು ವೇದಾಂತ ಚಕ್ರವರ್ತಿ ಮಹಾಮಹೋ ಪಾಧ್ಯಾಯ ವಿದ್ವಾನ್ ಡಾ. ಕೆ. ಜಿ. ಸುಬ್ರಾಯಶರ್ಮಾ. ಸಂಸ್ಕೃತ ವಾಙ್ಮಯದ ಅತ್ಯಮೂಲ್ಯ ರತ್ನ ಗಳನ್ನು, ವೇದೋಪನಿಷತ್ತು ಗಳ ಸಾರವನ್ನು, ಅಧ್ಯಾತ್ಮ ಚಿಂತನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಕನ್ನಡದಲ್ಲಿ ಸರಳ ಕೈಪಿಡಿಗಳಂತೆ ಅವರು ಬರೆದಿರುವ ೧೨೦ಕ್ಕೂ ಹೆಚ್ಚು ಪುಸ್ತಕಗಳಲ್ಲಿ ಇದೂ ಒಂದು.

ಅನುಪಮಾ ನಿರಂಜನ ಅವರು ಬರೆದ ‘ದಿನಕ್ಕೊಂದು ಕಥೆ’ ಜನಪ್ರಿಯ ಕಥಾಮಾಲಿಕೆ ನಿಮಗೆ ಗೊತ್ತಿದೆಯೆಂದುಕೊಂಡಿದ್ದೇನೆ. ಕನ್ನಡ ಶಿಶುಸಾಹಿತ್ಯಕ್ಕೆ ಅದೊಂದು ಅನುಪಮ ಕೊಡುಗೆಯೇ ಸೈ. ಚಿಕ್ಕ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೆರವಾಗುವ ಪಂಚತಂತ್ರ-ಹಿತೋಪದೇಶ-ಪುರಾಣೆತಿಹಾಸ ಮೂಲದ ಕಥೆಗಳು, ಈಸೋಪನ ನೀತಿಕಥೆಗಳು, ಜಾನಪದ ಕಥೆಗಳು, ಬೇರೆ ದೇಶಗಳ ಕಥೆಗಳು ಇತ್ಯಾದಿ ಎಲ್ಲವೂ ಸೇರಿದ ಸಮೃದ್ಧ ಸರಕು. ಚೈತ್ರ, ವೈಶಾಖ, ಜ್ಯೇಷ್ಠ… ರೀತಿಯಲ್ಲಿ ಚಾಂದ್ರಮಾನ ತಿಂಗಳುಗಳ ಹೆಸರಿನ ೧೨ ಸಂಪುಟಗಳು. ಒಟ್ಟು ೩೬೫ ಕಥೆಗಳು.

ಹೀಗೆ ದಿನಕ್ಕೊಂದು ಕಥೆ ಇದ್ದಂತೆಯೇ ದಿನಕ್ಕೊಂದು ಸುಭಾಷಿತ ನೀತಿಯನ್ನು ಹೇಳುವ ಪುಸ್ತಕವೊಂದಿದೆ. ಇದನ್ನು ಬರೆದವರು
ವೇದಾಂತ ಚಕ್ರವರ್ತಿ ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಕೆ. ಜಿ. ಸುಬ್ರಾಯಶರ್ಮಾ. ಸಂಸ್ಕೃತ ವಾಙ್ಮಯದ ಅತ್ಯ ಮೂಲ್ಯ ರತ್ನಗಳನ್ನು, ವೇದೋಪನಿಷತ್ತುಗಳ ಸಾರವನ್ನು, ಅಧ್ಯಾತ್ಮ ಚಿಂತನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಕನ್ನಡದಲ್ಲಿ ಸರಳ ಕೈಪಿಡಿಗಳಂತೆ ಅವರು ಬರೆದಿರುವ ೧೨೦ಕ್ಕೂ ಹೆಚ್ಚು ಪುಸ್ತಕಗಳಲ್ಲಿ ಇದೂ ಒಂದು.

ಅಂತೆಯೇ, ದಿನಕ್ಕೊಂದು ಶ್ರೀ ಶಂಕರಾಚಾರ್ಯರ ಉಪದೇಶಾಮೃತ ತಿಳಿಸುವ ‘ಶಾಂಕರ ಸಂವತ್ಸರ’, ದಿನಕ್ಕೊಂದು ವೇದೋ ಪನಿಷತ್ತಿನ ಸಂದೇಶವುಳ್ಳ ‘ವೇದಾಂತ ಸಂವತ್ಸರ’, ಭಗವದ್ಗೀತೆಯಿಂದ ಆರಿಸಿದ ಮನನೀಯ ಶ್ಲೋಕಗಳನ್ನು ದಿನಕ್ಕೊಂದರಂತೆ ತಿಳಿಸುವ ‘ಗೀತಾ ಸಂವತ್ಸರ’ ಪುಸ್ತಕಗಳೂ ಇವೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಪ್ರಕಟವಾದ ಈ ಎಲ್ಲ ಪುಸ್ತಕಗಳು ಈಗ ಪಿಡಿಎಫ್ ರೂಪದಲ್ಲಿ ಅಂತರ್ಜಾಲದಲ್ಲಿ ಉಚಿತವಾಗಿ ಸಿಗುತ್ತವೆ.

ಯಥಾಪ್ರಕಾರ ನನ್ನ ವಿಶೇಷ ಆಸಕ್ತಿ ಸಂಸ್ಕೃತ ಸುಭಾಷಿತಗಳ ಬಗ್ಗೆಯಾದ್ದರಿಂದ ‘ಸುಭಾಷಿತ ಸಂವತ್ಸರ’ ವನ್ನು ನಾನು ಇಳಿಸಿ ಟ್ಟುಕೊಂಡಿದ್ದೇನೆ. ಪ್ರತಿದಿನ ಅಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಕೆಲ ಪುಟಗಳನ್ನೋದಿ ಆನಂದಿಸುವ ಅಭ್ಯಾಸ ಬೆಳೆಸಿಕೊಂಡಿ ದ್ದೇನೆ. ಅಂದಹಾಗೆ ಈ ಪುಸ್ತಕಗಳಲ್ಲಿ ಸುಬ್ರಾಯಶರ್ಮರು ಚಾಂದ್ರಮಾನ ಕಾಲಗಣನೆಯಂತಲ್ಲದೆ ಗ್ರೆಗೋರಿಯನ್ ಕ್ಯಾಲೆಂಡರ್‌ ನ ಜನವರಿ ೧ರಿಂದ ಡಿಸೆಂಬರ್ ೩೧ರವರೆಗೆ ದಿನಗಳ ಅನುಕ್ರಮಣಿಕೆ ಮಾಡಿದ್ದಾರಾದರೂ ಯುಗಾದಿಯಿಂದ ಯುಗಾದಿಗೆ ವರ್ಷವೆಂದು ಪರಿಗಣಿಸುವವರಿಗೂ ಇವು ಪ್ರಸ್ತುತವೇ.

ಮೊನ್ನೆಯಷ್ಟೇ ಕ್ರೋಧಿ ಸಂವತ್ಸರ ಆರಂಭವಾಗಿರುವ ಹಿನ್ನೆಲೆಯಲ್ಲಿ ಸುಭಾಷಿತ ಸಂವತ್ಸರ ಪುಸ್ತಕದಿಂದ ಆಯ್ದ ಕೆಲವು ಅಪರೂಪದ, ಸ್ವಾರಸ್ಯಕರ, ಮತ್ತು ನನ್ನ ನೆಚ್ಚಿನ ನೀತಿಬೋಧೆಗಳು ಈ ವಾರದ ತಿಳಿರುತೋರಣಕ್ಕೂ ಪ್ರಸ್ತುತವೇ ಎಂದು ನನ್ನ ಗ್ರಹಿಕೆ. ೧. ಗೀತಾ ಗಂಗಾ ಚ ಗಾಯತ್ರೀ ಗೋವಿಂದೇತಿ ಹೃದಿ ಸ್ಥಿತೇ| ಚತುರ್ಗಕಾರಸಂಯುಕ್ತೇ ಪುನರ್ಜನ್ಮ ನ ವಿದ್ಯತೇ|| – ಗೀತಾ,
ಗಂಗಾ, ಗಾಯತ್ರೀ, ಮತ್ತು ಗೋವಿಂದ ಎಂಬ ಈ ನಾಲ್ಕು ಗಕಾರಗಳನ್ನು ಸದಾ ಮನಸ್ಸಿನಲ್ಲಿ ಭಕ್ತಿಯಿಂದ ಧ್ಯಾನ ಮಾಡುವವರಿಗೆ
ಪುನರ್ಜನ್ಮವೆಂಬುದಿಲ್ಲ, ಸೀದಾ ಮೋಕ್ಷವೇ.

೨. ಜನನೀ ಜನ್ಮಭೂಮಿಶ್ಚ ಜಾಹ್ನವೀ ಚ ಜನಾರ್ದನಃ| ಜನಕಃ ಪಂಚಮಶ್ಚೈವ ಜಕಾರಾಃ ಪಂಚ ದುರ್ಲಭಾಃ|| – ತಾಯಿ,
ತವರೂರು, ಗಂಗಾನದಿ, ಮಹಾವಿಷ್ಣು, ಮತ್ತು ತಂದೆ- ಎಲ್ಲರೂ ಯಾವಾಗಲೂ ಪೂಜಾರ್ಹರು.

೩. ವಸ್ತ್ರೇಣ ವಪುಷಾ ವಾಚಾ ವಿದ್ಯಯಾ ವಿನಯೇನ ಚ| ವಕಾರ ಪಂಚಭಿರ್ಹೀನೋ ನರೋ ನಾಪ್ನೋತಿ ಗೌರವಮ್|| – ವಸ್ತ್ರ, ಸ್ವಸ್ಥ ಶರೀರ, ಒಳ್ಳೆಯ ಮಾತು, ವಿದ್ಯೆ, ಮತ್ತು ವಿನಯ ಇವಿಲ್ಲದಿದ್ದರೆ ಮನುಷ್ಯನಿಗೆ ಸಮಾಜದಲ್ಲಿ ಗೌರವವಿಲ್ಲ.

೪. ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ| ಪುತ್ರೋ ರಕ್ಷತಿ ವಾರ್ಧಕ್ಯೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ|| – ಮನುಸ್ಮೃತಿ
ಯಲ್ಲಿ ಬರುವ ಈ ಶ್ಲೋಕದ ಕೊನೆಯ ಚರಣವನ್ನಷ್ಟೇ ಹಿಡಿದುಕೊಂಡು ತಪ್ಪಾಗಿ ಅರ್ಥಮಾಡಿಕೊಳ್ಳುವವರ ಸಂಖ್ಯೆಯೇ
ಹೆಚ್ಚು. ಆದರೆ ಶ್ಲೋಕದಲ್ಲಿ ನಿಜವಾಗಿ ಹೇಳಿರುವುದೇನು? ಹೆಣ್ಣನ್ನು ಬಾಲ್ಯದಲ್ಲಿ ತಂದೆಯು ಪೋಷಿಸುತ್ತಾನೆ; ಯೌವನದಲ್ಲಿ ಗಂಡನು ಕಾಪಾಡುತ್ತಾನೆ; ಮುಪ್ಪಿನಲ್ಲಿ ಮಗನು ಆರೈಕೆ ಮಾಡುತ್ತಾನೆ.

ಹೀಗಾದರೆ ಬಾಳಿನುದ್ದಕ್ಕೂ ಹೆಣ್ಣು ಯಾವುದೇ ತೊಂದರೆಗಳಿಲ್ಲದೆ ಜೀವಿಸಬಲ್ಲಳು. ಹೆಣ್ಣನ್ನು ಸದಾ ಸರ್ವದಾ ಗೌರವಿಸಬೇಕೆಂಬ
ಉನ್ನತ ಆಶಯ ಈ ಶ್ಲೋಕದಲ್ಲಿರುವುದು. ಹೆಣ್ಣೆಂದರೆ ಅಬಲೆ, ಸ್ವತಂತ್ರವಾಗಿ ಏನನ್ನೂ ಮಾಡಲಾರಳು ಅಂತೆಲ್ಲ ಅಲ್ಲವೇಅಲ್ಲ!

೫. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ| ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತಾ ನಿಷ್‌ಫಲಾಃ ಕ್ರಿಯಾಃ|| –
ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ಸಂತೋಷದಿಂದ ರಮಿಸುತ್ತಾರೆ. ಎಲ್ಲಿ ಸ್ತ್ರೀಯರನ್ನು ಗೌರವದಿಂದ
ಕಾಣುವುದಿಲ್ಲವೋ ಅಲ್ಲಿ ಮಾಡಿದ ಯಜ್ಞಯಾಗ, ದಾನಧರ್ಮ ಜಪತಪಾದಿ ಕ್ರಿಯೆಗಳೆಲ್ಲ ನಿಷ್ಪ್ರಯೋಜಕ.

೬. ಜಠರಂ ಪೂರಯೇದರ್ಧಂ ತದರ್ಧಂ ತು ಜಲೇನ ಚ| ವಾಯೋಃ ಸಂಚರಣಾರ್ಥಂ ತು ಭಾಗಮೇಕಂ ವಿಸರ್ಜಯೇತ್||
– ಹೊಟ್ಟೆಯ ಅರ್ಧ ಭಾಗವನ್ನು ಮಾತ್ರ ಆಹಾರದಿಂದ ತುಂಬಬೇಕು. ಕಾಲುಭಾಗವನ್ನು ನೀರಿನಿಂದ ತುಂಬಬೇಕು.

ಇನ್ನುಳಿದ ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು. ಹಿತಭುಕ್, ಮಿತಭುಕ್, ಋತಭುಕ್
ಅಂದರೆ ಇದೇ. ಆರೋಗ್ಯಕ್ಕಾಗಿ, ಶಕ್ತಿವರ್ಧನೆಗಾಗಿ, ಸಾರ್ಥಕ ಬಾಳ್ವೆಗಾಗಿ ಊಟ ಮಾಡಬೇಕೇ ಹೊರತು ಜಿಹ್ವಾಚಾಪಲ್ಯಕ್ಕಾಗಿ
ಅಲ್ಲ. ತಿನ್ನುವುದಕ್ಕಾಗಿಯೇ ಬದುಕಿರುವುದು ಎಂಬಂತಲ್ಲ.

೭. ಭೋಜನಾಂತೇ ಶತಪದಂ ಗತ್ವಾ ತಾಂಬೂಲಚರ್ವಣಮ್| ಶಯನಂ ವಾಮಕುಕ್ಷೌ ತು ಭೈಷಜ್ಯಾತ್ ಕಿಂ ಪ್ರಯೋಜನಮ್|| –
ಊಟವಾದ ಮೇಲೆ ನೂರು ಹೆಜ್ಜೆ ನಡಿಗೆ, ತಾಂಬೂಲ ಮೆಲ್ಲುವಿಕೆ, ಆಮೇಲೆ ಎಡಮಗ್ಗುಲಾಗಿ ಮಲಗುವಿಕೆ ಮಾಡುವವನಿಗೆ
ಔಷಽಯ ಅಗತ್ಯವೇ ಇರುವುದಿಲ್ಲ.

೮. ಬಹವೋ ಯತ್ರ ನೇತಾರಃ ಸರ್ವೇ ಪಂಡಿತಮಾನಿನಃ| ಸರ್ವೇ ಮಹತ್ತ್ವಮಿಚ್ಛಂತಿ ತದ್ ವೃಂದಮವಸೀದತಿ|| – ಯಾವ
ಸಂಘಸಂಸ್ಥೆಯಲ್ಲಿ ಅನೇಕರು ಯಜಮಾನರುಗಳು ಇರುತ್ತಾರೋ, ಆ ಎಲ್ಲರೂ ತಮ್ಮನ್ನು ತಾವೇ ಬುದ್ಧಿವಂತರೆಂದೂ ಪಂಡಿತ ರೆಂದೂ ಭಾವಿಸಿಕೊಂಡಿರುತ್ತಾರೋ, ಮತ್ತು ಆ ಎಲ್ಲರೂ ತಮಗೆ ಸ್ಥಾನಮಾನವನ್ನೂ ಪ್ರತಿಷ್ಠೆಯನ್ನೂ ಬಯಸುತ್ತಾರೋ ಅಂಥ
ಸಂಘಸಂಸ್ಥೆಯು ಕ್ಷೀಣವಾಗಿ ನಾಶವಾಗಿಬಿಡುತ್ತದೆ. ಈ ಲೋಕರೂಢಿಯು ಬಹುಶಃ ನಮ್ಮೆಲ್ಲರ ಗಮನಕ್ಕೆ ಒಂದಲ್ಲ ಒಂದು
ನಿದರ್ಶನ ರೂಪದಲ್ಲಿ ಅರ್ಥವಾಗುತ್ತಲೇ ಇರುತ್ತದೆ.

೯. ದೂರತಃ ಪರ್ವತೋ ರಮ್ಯಃ ಬಂಧೂ ರಮ್ಯಃ ಪರಸ್ಪರಮ್| ಯುದ್ಧಸ್ಯ ಚ ಕಥಾ ರಮ್ಯಾ ತ್ರೀಣಿ ರಮ್ಯಾಣಿ ದೂರತಃ|| –
ದೂರದಿಂದ ನೋಡಿದರೆ ಬೆಟ್ಟ ಸುಂದರ. ದೂರದಲ್ಲಿದಾಗಷ್ಟೇ ನೆಂಟರಿಷ್ಟರು ಆತ್ಮೀಯರು. ಯುದ್ಧದ ಕಥೆ ಕೇಳುವುದಕ್ಕಷ್ಟೇ
ರೋಮಾಂಚಕ, ಅನುಭವಿಸಲಿಕ್ಕಲ್ಲ. ದೂರದ ಬೆಟ್ಟ ನುಣ್ಣಗೆ ಎಂದು ಕನ್ನಡದಲ್ಲಿ, ಎZoo ಜಿo ಜ್ಟಛಿಛ್ಞಿಛ್ಟಿ ಟ್ಞ ಠಿeಛಿ ಟಠಿeಛ್ಟಿ oಜಿbಛಿ ಎಂದು ಇಂಗ್ಲಿಷ್‌ನಲ್ಲಿರುವ ನುಡಿಗಟ್ಟುಗಳಂತೆಯೇ ಇದರ ಇಂಗಿತ.

೧೦. ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ| ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ|| – ಪ್ರತಿದಿನವೂ
ಮನುಷ್ಯನು ರಾತ್ರಿ ಮಲಗುವಾಗ ತನ್ನ ಆ ದಿನದ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಬೇಕು: ಇಂದು ನಾನು ಪಶುಗಳಂತೆ
ನಡೆದುಕೊಂಡೆನೋ ಅಥವಾ ಸತ್ಪುರುಷರ ಹಾದಿಯನ್ನು ಸ್ವಲ್ಪವಾದರೂ ಅನುಸರಿಸಿದೆನೋ ಎಂದು. ಡೈರಿ ಬರೆಯುವ ಅಭ್ಯಾಸ ಒಳ್ಳೆಯದೆಂದು ಹೇಳುವ ಸುಭಾಷಿತ ಇದೇ!

೧೧. ದಾನೇನ ಪಾಣಿರ್ನತು ಕಂಕಣೇನ ಸ್ನಾನೇನ ಶುದ್ಧಿರ್ನ ತು ಚಂದನೇನ| ಮಾನೇನ ತೃಪ್ತಿರ್ನ ತು ಭೋಜನೇನ ಜ್ಞಾನೇನ
ಮುಕ್ತಿರ್ನ ತು ಮುಂಡನೇನ|| – ದಾನದಿಂದ ಕೈ ಶೋಭಿಸಬೇಕೇ ಹೊರತು ಚಿನ್ನದ ಕಡಗದಿಂದಲ್ಲ. ಸ್ನಾನದಿಂದ ಶುದ್ಧಿಯೇ ಹೊರತು ಗಂಧಚಂದನದಿಂದಲ್ಲ. ಸ್ವಾಭಿಮಾನದಿಂದ ತೃಪ್ತಿಯೇ ಹೊರತು ಭೋಜನದಿಂದಲ್ಲ. ಆತ್ಮeನದಿಂದ ಮುಕ್ತಿಯೇ ಹೊರತು ಕೇಶಮುಂಡನದಿಂದಲ್ಲ.

೧೨. ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ| ಜ್ಞಾನರತ್ನಾಪಹಾರಾಯ ತಸ್ಮಾದ್ ಜಾಗ್ರತ ಜಾಗ್ರತ|| – ಕಾಮ,
ಕ್ರೋಧ, ಮತ್ತು ಲೋಭ ಎನ್ನುವ ಮೂವರು ಕಳ್ಳರು ನಿಮ್ಮ ದೇಹ ದೊಳಗೇ ವಾಸವಾಗಿರುತ್ತಾರೆ. ಅವರು ನಿಮ್ಮೊಳಗಿರುವ ವಿವೇಕ ಜ್ಞಾನವೆಂಬ ರತ್ನವನ್ನು ಲಪಟಾಯಿಸುವುದಕ್ಕಾಗಿ ಹೊಂಚು ಹಾಕುತ್ತಿರುತ್ತಾರೆ. ಎಚ್ಚರ ಎಚ್ಚರ!

೧೩. ಆಚಾರ್ಯಾತ್ ಪಾದಮಾ ದತ್ತೇ ಪಾದಂ ಶಿಷ್ಯ ಸ್ವಮೇಧಯಾ| ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲೇನ ಪಚ್ಯತೇ|| – ಶಿಷ್ಯನು ಗುರುಗಳಿಂದ ವಿದ್ಯೆಯಲ್ಲಿ ಕಾಲು ಭಾಗವನ್ನು ಕಲಿಯುತ್ತಾನೆ. ತನ್ನ ಮೇಧಾಶಕ್ತಿಯಿಂದ ಇನ್ನೊಂದು ಕಾಲುಭಾಗವನ್ನು ಸಂಪಾದಿಸಿಕೊಳ್ಳುತ್ತಾನೆ. ಸಹಪಾಠಿಗಳ ಸಹವಾಸದಿಂದ ಮತ್ತೊಂದು ಕಾಲುಭಾಗವನ್ನು ಕಲಿಯುತ್ತಾನೆ. ಇನ್ನುಳಿದ ಕಾಲು
ಭಾಗವು ಕಾಲಕಳೆದಂತೆ ತಾನಾಗಿಯೇ ಅವನಿಗೆ ಅರ್ಥವಾಗುತ್ತದೆ.

೧೪. ಉತ್ತಮೇ ತತ್‌ಕ್ಷಣಂ ಕೋಪಂ ಮಧ್ಯಮೇ ಘಟಿಕಾ ದ್ವಯಮ್| ಅಧಮೇ ಸ್ಯಾದಹೋರಾತ್ರಂ ಪಾಪಿಷ್ಠೇ ಮರಣಾಂತಕಮ್|| – ಉತ್ತಮ ಮನುಷ್ಯನಲ್ಲಿ ಕೋಪವು ಕ್ಷಣಿಕವಾದದ್ದು. ಮಧ್ಯಮನಲ್ಲಿ ಒಂದೆರಡು ಗಳಿಗೆ ಇರುವಂಥದ್ದು, ಅಧಮ ಮನುಷ್ಯ ನಲ್ಲಾದರೋ ಕೋಪ ಒಂದು ದಿನ ಇದ್ದರೆ, ಪಾಪಿಷ್ಠರ ಕೋಪವು ಅವರು ಸಾಯುವವರೆಗೂ ಇರುತ್ತದೆ. ಮಾನವನು ಕೋಪಕ್ಕೆ ಅಧೀನನಾಗಬಾರದು.

೧೫. ಜಿಹ್ವೇ ಪ್ರಮಾಣಂ ಜಾನೀಹಿ ಭಾಷಣೇ ಭೋಜನೇ ತಥಾ| ಅತ್ಯುಕ್ತಿಶ್ಚಾತಿಭುಕ್ತಿಶ್ಚ ಸತ್ಯಂ ಪ್ರಾಣಾಪಹಾರಿಣೀ|| – ಎಲೈ ನಾಲಿಗೆಯೇ, ಮಾತನಾಡುವಾಗಲೂ ಮತ್ತು ಊಟ ಮಾಡುವಾಗಲೂ ನಿನ್ನ ಇತಿಮಿತಿಯನ್ನು ನೀನು ತಿಳಿದಿರು. ಮಾತು
ಜಾಸ್ತಿಯಾದರೆ ಮತ್ತು ಊಟ ಜಾಸ್ತಿಯಾದರೆ ಪ್ರಾಣಕ್ಕೇ ಸಂಚಕಾರ ಬರಬಹುದು!

೧೬. ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್| ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್|| – ಒಬ್ಬ
ಮನುಷ್ಯನನ್ನು ಕಂಡಾಗ ಇವನು ನನ್ನವನೋ ಅಥವಾ ಬೇರೆಯವನೋ ಎಂಬ ಭಾವನೆಯು ಸಣ್ಣ ಬುದ್ಧಿಯುಳ್ಳವರಿಗೆ ಬರುತ್ತದೆ. ಆದರೆ ಉದಾರ ಸ್ವಭಾವದ ಮಹಾತ್ಮರಿಗಾದರೋ ‘ಭೂಮಂಡಲವೇ ನಮ್ಮ ಕುಟುಂಬ’ ಎಂಬ ವಿಶಾಲ ಭಾವನೆಯಿರುತ್ತದೆ.

೧೭. ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿಃ ಪರೇಷಾಂ ಪರಪೀಡನಾಯ| ಖಲಸ್ಯ ಸಾಧೋಃ ವಿಪರೀತಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ|| – ದುಷ್ಟ ಮನುಷ್ಯ ನಲ್ಲಿರುವ ವಿದ್ಯೆಯು ವಿವಾದಕ್ಕಾಗಿಯೂ, ಧನವು ಮದಕ್ಕಾಗಿಯೂ, ಶಕ್ತಿಯು ಇತರರನ್ನು ಪೀಡಿಸುವುದಕ್ಕಾಗಿಯೂ ದುರ್ವಿನಿ ಯೋಗವಾಗುತ್ತವೆ. ಸತ್ಪುರುಷರಲ್ಲಿರುವ ಅದೇ ವಿದ್ಯೆಯು ಜ್ಞಾನಕ್ಕಾಗಿಯೂ ಧನವು ದಾನಕ್ಕಾಗಿಯೂ ಮತ್ತು ಶಕ್ತಿಯು ಪರರನ್ನು ಕಾಪಾಡುವುದಕ್ಕಾಗಿಯೂ ಸದ್ವಿನಿಯೋಗವಾಗುತ್ತವೆ.

೧೮. ಶನೈಃ ಪಂಥಾಃ ಶನೈಃ ಕಂಥಾಃ ಶನೈಃ ಪರ್ವತಲಂಘನಮ್| ಶನೈರ್ವಿದ್ಯಾ ಶನೈರ್ವಿತ್ತಂ ಪಂಚೈತಾನಿ ಶನೈಃ ಶನೈಃ|| – ನಿಧಾನ ವಾಗಿ ದಾರಿ ಸಾಗಬೇಕು, ನಿಧಾನವಾಗಿ ಭಾರವನ್ನು ಹೊರಬೇಕು, ನಿಧಾನವಾಗಿ ಪರ್ವತವನ್ನೇರಬೇಕು, ನಿಧಾನವಾಗಿ ವಿದ್ಯೆ ಯನ್ನು ಕಲಿಯಬೇಕು, ನಿಧಾನವಾಗಿ ಹಣ ಗಳಿಸಬೇಕು. ನಿಧಾನವೇ ಪ್ರಧಾನ.

೧೯. ಮೂರ್ಖಸ್ಯ ಪಂಚ ಚಿಹ್ನಾನಿಗರ್ವೀ ದುರ್ವಚನೀ ತಥಾ| ಹಠೀ ಚಾಪ್ರಿಯವಾದೀ ಚ ಪರೋಕ್ತಂ ನೈವ ಮನ್ಯತೇ|| – ಅಹಂಕಾರ, ಒರಟಾದ ಮಾತುಗಳು, ಹಠಮಾರಿ ಸ್ವಭಾವ, ಅಪ್ರಿಯವಾಗಿ ಮಾತನಾಡುವುದು ಮತ್ತು ಗುರುಹಿರಿಯರ ಮಾತನ್ನು
ಗೌರವಿಸದಿರುವುದು- ಈ ಐದು, ಮೂರ್ಖನ ಲಕ್ಷಣಗಳು.

೨೦. ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಮ್| ಅನುಸೃತ್ಯ ಸತಾಂ ಮಾರ್ಗಂ ಯತ್ ಸ್ವಲ್ಪಮಪಿ ತದ್‌ಬಹು|| – ಬೇರೆ
ಯವರಿಗೆ ತೊಂದರೆ ಕೊಡದೆ, ದುಷ್ಟಜನರಿಗೆ ನಮಸ್ಕಾರ ಹಾಕದೆ, ಸತ್ಪುರುಷರ ಮಾರ್ಗವನ್ನೇ ಅನುಸರಿಸುತ್ತ ಮನುಷ್ಯನು ಎಷ್ಟೇ ಹಣವನ್ನು ಸಂಪಾದಿಸಿದರೂ, ಅದು ತುಂಬ ಕಡಿಮೆಯೇ ಆಗಿದ್ದರೂ, ಆ ಹಣವೇ ಅಕ್ಷಯವಾದದ್ದು!

೨೧. ಅರ್ಥಾನಾಮರ್ಜನೇ ದುಃಖಮ್ ಅರ್ಜಿತಾನಾಂ ಚ ರಕ್ಷಣೇ| ನಾಶೇ ದುಃಖಂ ವ್ಯಯೇ ದುಃಖಂ ಽಗರ್ಥಾನ್ ಕ್ಲೇಶಕಾರಿಣಃ|| – ಹಣವನ್ನು ಸಂಪಾದಿಸುವುದೂ ದುಃಖಕರ, ಸಂಪಾದಿಸಿದ ಹಣವನ್ನು ಜೋಪಾನವಾಗಿ ಕಾಪಾಡುವುದೂ ದುಃಖಕರ, ಹಣವು ಕಳವಾದರೂ ದುಃಖ, ಹಣವು ಖರ್ಚಾದರೂ ದುಃಖ. ಹೀಗೆ ಯಾವಾಗಲೂ ದುಃಖಗಳನ್ನೇ ತಂದೊಡ್ಡುವ ಹಣಕ್ಕೆ ಧಿಕ್ಕಾರ!

೨೨. ಅಹಿಂ ನೃಪಂ ಚ ಶಾರ್ದೂಲಂ ವಿಟಂ ಚ ಬಾಲಕಂ ತಥಾ| ಪರಶ್ವಾನಂ ಚ ಮೂರ್ಖಂ ಚ ಸಪ್ತ ಸುಪ್ತಾನ್ನ ಬೋಧಯೇತ್|| – ನಾಗರಹಾವು, ರಾಜ, ಹುಲಿ, ವಿಟ, ಮಗು, ಬೇರೊಬ್ಬರ ನಾಯಿ, ಮತ್ತು ಮೂರ್ಖ- ಇವರು ನಿದ್ದೆ ಮಾಡುತ್ತಿದ್ದರೆ ಎಬ್ಬಿಸಬಾರದು.

೨೩. ವಿದ್ಯಾರ್ಥೀ ಸೇವಕಃ ಪಾಂಥಃ ಕ್ಷುಧಾರ್ತೋ ಭಯಕಾತರಃ| ಭಂಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಭೋದಯೇತ್|| –
ವಿದ್ಯಾರ್ಥಿ, ಸೇವಕ, ಪ್ರಯಾಣಿಕ, ಹಸಿದವನು, ಭಯದಿಂದ ಅಂಜಿದವನು, ಧನರಕ್ಷಕ, ಮತ್ತು ದ್ವಾರಪಾಲಕ- ಈ ಏಳು ಜನ
ನಿದ್ರಿಸುತ್ತಿದ್ದರೆ ಅಂಥವರನ್ನು ಎಬ್ಬಿಸಬೇಕು.

೨೪. ಲಾಲನಾತ್ ಬಹವೋ ದೋಷಾಸ್ತರ್ಜನಾದ್ ಬಹವೋ ಗುಣಾಃ| ತಸ್ಮಾತ್ ಪುತ್ರಂ ಚ ಶಿಷ್ಯಂ ಚ ತರ್ಜಯೇತ್ ನ ತು
ಲಾಲಯೇತ್|| – ಮಕ್ಕಳನ್ನೂ ಶಿಷ್ಯರನ್ನೂ ಅತಿಯಾಗಿ ಮುದ್ದಿಸುವುದರಿಂದ ಅನೇಕ ದೋಷಗಳೂ, ಗದರಿಸುವುದರಿಂದ ಅನೇಕ ಪ್ರಯೋಜನಗಳೂ ಇರುತ್ತವೆ. ಆದ್ದರಿಂದ ಮಕ್ಕಳನ್ನೂ ಶಿಷ್ಯರನ್ನೂ ಶಿಸ್ತಿನಿಂದ ಗದರಿಸಬೇಕೇ ಹೊರತು ಯಾವಾಗಲೂ
ತುಂಬ ಮುದ್ದು ಮಾಡಬಾರದು.

೨೫. ಅಲ್ಪಾನಾಮಪಿ ವಸ್ತೂನಾಂ ಸಂಹತಿಃ ಕಾರ್ಯಸಾಧಿಕಾ| ತೃಣೈರ್ಗುಣತ್ವಮಾಪನ್ನೈಃ ಬಧ್ಯಂತೇ ಮತ್ತದಂತಿನಃ|| – ಅತ್ಯಂತ
ಸಣ್ಣ ವಸ್ತುಗಳೇ ಆಗಿದ್ದರೂ ಅವುಗಳನ್ನೆಲ್ಲ ಒಟ್ಟಿಗೆ ಕೂಡಿಸುವುದರಿಂದ ದೊಡ್ಡ ಕೆಲಸವೇ ಆಗಿಬಿಡುತ್ತದೆ. ಹುಲ್ಲುಗಳನ್ನು ಜೋಡಿಸಿ ಹಗ್ಗವಾಗಿ ಹೆಣೆದಾಗ ಅದರಿಂದ ಮದ್ದಾನೆಗಳನ್ನೂ ಕಟ್ಟಿಹಾಕಬಹುದಲ್ಲವೇ?

೨೬. ಅಸಾರೇ ಖಲು ಸಂಸಾರೇ ಸುಖಭ್ರಾಂತಿಃ ಶರೀರಿಣಾಮ್| ಲಾಲಾಪಾನಮಿವಾಂಗುಷ್ಠೇ ಬಾಲಾನಾಂ ಸ್ತನ್ಯವಿಭ್ರಮಃ|| –
ಬಾಯೊಳಗೆ ಹೆಬ್ಬೆಟ್ಟನ್ನು ಹಾಕಿಕೊಂಡು ಜೊಲ್ಲನ್ನು ಚೀಪುತ್ತ ಮಕ್ಕಳು ತಾಯಿಯ ಸ್ತನ್ಯಪಾನವನ್ನು ಮಾಡುತ್ತಿದ್ದೇವೆ ಎಂದು
ಭ್ರಮಿಸುತ್ತಾರಲ್ಲವೇ? ಹಾಗೆಯೇ ಸಂಸಾರಿಗಳಾದ ಜೀವರುಗಳಿಗೆ ಅಸಾರವಾದ ಸಂಸಾರದಲ್ಲಿ ಸುಖವಾಗಿದ್ದೇವೆ ಎಂಬ ಭ್ರಮೆ
ಇರುತ್ತದೆ.

೨೭. ಶೀಲಂ ಶೌರ್ಯಮ್ ಅನಾಲಸ್ಯಂ ಪಾಂಡಿತ್ಯಂ ಮಿತ್ರಸಂಗ್ರಹಮ್| ಅಚೋರಹರಣೀಯಾನಿ ಪಂಚೈತಾನ್ಯಕ್ಷಯೋ ನಿಧಿಃ|| – ಶೀಲ, ಶೌರ್ಯ, ಚುರುಕುತನ, ಪಾಂಡಿತ್ಯ, ಮತ್ತು ಸನ್ಮಿತ್ರರ ಸಂಗ್ರಹ- ಈ ಐದೂ ಅಕ್ಷಯ ನಿಽಗಳಿದ್ದಂತೆ. ಯಾವ ಕಳ್ಳರೂ ಈ ಸಂಪತ್ತುಗಳನ್ನು ಅಪಹರಿಸಿಕೊಂಡು ಹೋಗಲಾರರು.

೨೮. ಉದ್ಯಮಃ ಸಾಹಸಂ ಧೈರ್ಯಂ ಬುದ್ಧಿಃ ಶಕ್ತಿಃ ಪರಾಕ್ರಮಃ| ಷಡೇತೇ ಯತ್ರ ವರ್ತಂತೇ ತತ್ರ ದೈವಃ ಸಹಾಯಕೃತ್|| – ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಮತ್ತು ಪರಾಕ್ರಮ ಈ ಆರು ಗುಣಗಳಿದ್ದರೆ ಮಾತ್ರ ಅಂಥವರಿಗೆ ದೈವವೂ ಸಹಾಯ
ಮಾಡುತ್ತದೆ.

೨೯. ಇಕ್ಷುದಂಡಸ್ತಿಲಾಃ ಶೂದ್ರಾಃ ಕಾಂತಾ ಹೇಮ ಚ ಮೇದಿನೀ| ಚಂದನಂ ದಧಿ ತಾಂಬೂಲಂ ಮರ್ದನಂ ಗುಣವರ್ಧನಂ||-
ಕಬ್ಬಿನಜಲ್ಲೆ, ಎಳ್ಳು, ಕೆಲಸಗಾರರು, ಹೆಂಡತಿ, ಚಿನ್ನ, ಭೂಮಿ, ಗಂಧ, ಮೊಸರು, ಮತ್ತು ತಾಂಬೂಲ- ಇವಿಷ್ಟನ್ನು ಚೆನ್ನಾಗಿ ಉಜ್ಜಿದಷ್ಟೂ ತೀಡಿದಷ್ಟೂ ಹೆಚ್ಚು ಗುಣವನ್ನುಂಟುಮಾಡುತ್ತವೆ.

೩೦. ದ್ವ್ಯಕ್ಷರಸ್ತು ಭವೇತ್ ಮೃತ್ಯುಃ ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್| ಮಮೇತಿ ತು ಭವೇತ್ ಮೃತ್ಯುಃ ನ ಮಮೇತಿ ತು ಶಾಶ್ವತಮ್|| –
‘ಮಮ’ (ನನ್ನದು) ಎಂಬ ಎರಡಕ್ಷರಗಳೇ ಮೃತ್ಯು. ಹಾಗೂ ‘ನ ಮಮ’ (ನನ್ನದಲ್ಲ) ಎಂಬ ಮೂರು ಅಕ್ಷರಗಳೇ ಶಾಶ್ವತವಾದ
ಪರಬ್ರಹ್ಮವು.

ಆದ್ದರಿಂದ ಇಂದಿನ ಅಂಕಣವನ್ನು ಓದುವಾಗ ನಿಮಗೆ ಅಷ್ಟಿಷ್ಟು ಜ್ಞಾನ ವಿದ್ವತ್ ಬೋಧನೆಗಳು ಕಂಡುಬಂದರೆ ಅವು ಯಾವುವೂ ನನ್ನವಲ್ಲ! ಏಕೆಂದರೆ ಮೇಲಿನ ಸುಭಾಷಿತದ ಪ್ರಕಾರ, ಈ ಪ್ರಪಂಚದಲ್ಲಿ ‘ನನ್ನದು’ ಎನ್ನುವುದು ಯಾವುದೂ ಇಲ್ಲ
ಎಂದುಕೊಂಡು ನಾವು ಬದುಕಬೇಕು. ಕ್ರೋಧಿ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ.