ಅವಲೋಕನ
ಪ್ರೊ.ಆರ್.ಜಿ.ಹೆಗಡೆ
ಬ್ರಿಟಿಷ್ ನಾಟಕಕಾರ ಜಾನ್ ಆಸ್ಬನ್ನ ‘Look Back in Anger’ (1956) ಎರಡನೆಯ ಮಹಾಯುದ್ಧೋತ್ತರದ ಜಗತ್ತಿನ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳ ವಿರುದ್ಧ ಯುವಜನರ ತೀವ್ರವಿರೋಧವನ್ನು, ಆಕ್ರೋಶವನ್ನು, ಹತಾಶೆಯನ್ನು,
ಅಸಹಾಯಕತೆಯನ್ನು ರಂಗದ ಮೇಲೆ ತಂದ ನಾಟಕ.
ಸಮಕಾಲೀನ ಸಾಮಾಜಿಕ ಮೌಲ್ಯಗಳು, ಇತಿಹಾಸ, ಆರ್ಥಿಕತೆ ಎಲ್ಲದರ ವಿರುದ್ಧ ಬಂಡೆದ್ದಿ ರುವ ಕೆಂಡದಂತಹ ಯುವಕನೊಬ್ಬನ ಕಥೆಯ ಮೂಲಕ ಒಂದು ಪೀಳಿಗೆಯ ಧ್ವನಿಯಾದ ಕೃತಿ. 1960ರ ದಶಕದ ‘ಆಂಗ್ರಿ ಯಂಗ್ ಮ್ಯಾನ್ ಮೂವ್ ಮೆಂಟ್’ನ (ಕೋಪ ತುಂಬಿದ ಯುವಜನರ ಚಳವಳಿ) ಸಂದರ್ಭದಲ್ಲಿ ಬಂದ ಮತ್ತು ಚಳವಳಿಯನ್ನು ಬಲಪಡಿಸಿದ ಮೇರುಕೃತಿ ಅದು.
Look Back in Anger ಹಿಂದಿರುವುದು ಯುದ್ಧದ ನಂತರ ಸೃಷ್ಟಿಯಾದ ಹಸಿವಿನ, ದುಃಖದ, ಕ್ರೋಧದ ದಳ್ಳುರಿಯಲ್ಲಿ ಬೇಯುತ್ತಿದ್ದ, ಅಲ್ಲೋಲ ಕಲ್ಲೋಲವಾಗಿ ಹೋಗಿದ್ದ ಜಗತ್ತು. ಆಳುವವರ ಅವಿವೇಕಗಳಿಂದಾಗಿ ಎರಡು ಮಹಾಯುದ್ಧಗಳು ಸಂಭವಿಸಿ ಹೋಗಿದ್ದವು. ಲಕ್ಷಗಟ್ಟಲೆ ಜನ ಯುದ್ಧಗಳಿಗೆ, ಕ್ರೌರ್ಯಗಳಿಗೆ ಬಲಿಯಾಗಿದ್ದರು.
ಜಗತ್ತಿನಾದ್ಯಂತ ರಕ್ತದ ಹೊಳೆ ಹರಿದಿತ್ತು. ಸಂಬಂಧವೇ ಇರದವರನ್ನೂ ಯುದ್ಧ ಬಿಟ್ಟಿರ ಲಿಲ್ಲ. ಸಹಸ್ರ ಸಹಸ್ರಜನ ಹಿಟ್ಲರನ ಕಾನ್ಸೆಂಟ್ರೇಷನ್ ಕ್ಯಾಂಪ್ಗಳಲ್ಲಿ ಸತ್ತಿದ್ದರು (ಕಾನ್ಸೆಂಟ್ರೇಷನ್ ಕ್ಯಾಂಪು ಗಳು ಎಂತಹ ನರಕಗಳಾಗಿದ್ದವೆಂದರೆ ಯುದ್ಧಾನಂತರ ಅವನ್ನು ನೋಡಲು ಹೋಗಿದ್ದ Allied Expeditionary Force ದಂಡನಾಯಕ ಐಸೆನ್ ಹೋವರ್ ಅಲ್ಲಿಯ ಸ್ಥಿತಿ ನೋಡಿ ಸಂಕಟ ತಡೆಯಲಾರದೆ ತಲೆತಿರುಗಿ ಬಕಬಕ ಕಾರಿಕೊಂಡಿದ್ದನಂತೆ). ಆರ್ಥಿಕತೆ ನಾಶವಾಗಿತ್ತು. ಕೃಷಿ ವ್ಯವಸ್ಥೆ ಕುಸಿದಿತ್ತು. ಕೋಟಿಗಟ್ಟಲೆ ಜನ ತೀವ್ರ ಬಡತನಕ್ಕೆ ಸಿಲುಕಿದ್ದರು.
ಯುರೋಪ್ನ ಹಲವು ದೇಶಗಳಲ್ಲಿ ಸುಮಾರಾಗಿ ಹದಿನೆಂಟರಿಂದ ಅರುವತ್ತು ವರ್ಷ ವಯಸ್ಸಿನ ಗಂಡಸರೆಲ್ಲರೂ ಸತ್ತು ಹೋಗಿದ್ದರು. ಹೊಟ್ಟೆಗೇ ಇಲ್ಲದ ಸಂದರ್ಭ ನೈತಿಕತೆಯನ್ನುಕೂಡ ಕಿತ್ತೆಸೆದಿತ್ತು. ಇಂತಹ ಘೋರ ದುರಂತದ ಸ್ಥಿತಿಗೆ ಕಾರಣ ರಾದವರ, ಕಾರಣವಾದವುಗಳ ವಿರುದ್ಧ ವಿಶೇಷವಾಗಿ ಯುವಜನತೆ ಕುದಿಯುತ್ತಿತ್ತು. ಯಾರೋ ಮಾಡಿದ ತಪ್ಪು ಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಈ ಪೀಳಿಗೆಯ ಯುವಜನ ಪ್ರಭುತ್ವ, ಇತಿಹಾಸ, ಸಮಾಜ, ಮೌಲ್ಯಗಳ ವ್ಯವಸ್ಥೆ, ಶಿಕ್ಷಣ, ಆರ್ಥಿಕ ವ್ಯವಸ್ಥೆಗಳು ಎಲ್ಲದರ ವಿರುದ್ಧ ಬೆಂಕಿಯ ಕೊಳ್ಳಿಗಳಾಗಿ ನಿಂತಿದ್ದರು. ತೀವ್ರರೋಷಗೊಂಡಿದ್ದರು.
ಆತ್ಮಘಾತಕವಾದರೂ ಸರಿಯೇ, ವಿಪರೀತಕ್ಕೆ ಹೋದರೂ ಸರಿಯೇ, ಎಲ್ಲವನ್ನೂ ದಹಿಸಿಬಿಡಲು ಅವರು ಪ್ರಯತ್ನಿಸಿದರು. ವಿವಿಧ ರೀತಿಗಳಲ್ಲಿ ಬಂಡೆದ್ದರು. ಈ ಚಳವಳಿಯನ್ನು ‘ಆಂಗ್ರಿ ಯಂಗ್ಮ್ಯಾನ್ ಮೂವ್ಮೆಂಟ್’ಎಂದು ಗುರುತಿಸಲಾಗಿದೆ. ಇಂತಹ ಮಾನಸಿಕತೆಯಲ್ಲಿಯೇ ಇದ್ದ ಆಸ್ಬನ್, ವ್ಯವಸ್ಥೆಯ ಕುರಿತು ತನಗಿದ್ದ ಕೋಪವನ್ನು, ಅಸಹಾಯಕತೆಯನ್ನು, ಏಕಾಂಗಿತನವನ್ನು ನಾಟಕದ ಮೂಲಕ ಹೇಳಿದ. ನಾಟಕ ಎಷ್ಟು ಪರಿಣಾಮಕಾರಿಯಾಗಿ, ಹೃದಯ ಕರಗುವಂತೆ ಕಥೆ ಹೇಳಿತು ಎಂದರೆ ಅದು ‘ಆಂಗ್ರಿ ಯಂಗ್ ಮ್ಯಾನ್ ಮೂವ್ಮೆಂಟ್’ನ ‘ಧರ್ಮಗ್ರಂಥ’ವಾಗಿ ಹೋಯಿತು.
ಚಳವಳಿಯನ್ನು ಜಗತ್ತಿನಾದ್ಯಂತ ಹಬ್ಬಿಸಿತು. ಕಥೆ ಹೇಳಲು, ಅಂದಿನ ಯುವಕರ ರೂಪಕವಾಗಿ ಕೇಂದ್ರ ಪಾತ್ರ ಜಿಮ್ಮಿ ಪೋರ್ಟರ್ನನ್ನು ಆಸ್ಬನ್ ಸೃಷ್ಟಿಸಿದ. ಜಿಮ್ಮಿಯ ಪ್ರಚಂಡ ಕ್ರೋಧವನ್ನು ಹೇಳುವ ಕಥೆ ಅದು. ಜಿಮ್ಮಿ ಈಗ ಇಪ್ಪತ್ತರ ಹರೆಯದಲ್ಲಿರುವ, ಸೂಕ್ಷ್ಮ ಮಾನಸಿಕತೆಯ, ಪ್ಯಾಶನೇಟ್ ಆಗಿ ಬದುಕುವ ಯುವಕ. ಆತನೊಳಗೆ ಕನಸುಗಳಿದ್ದವು. ಆದರೆ ಆತನಿಗೆ ಈಗ ತಿಳಿದು ಹೋಗಿದೆ. ಏನೆಂದರೆ- ಅಂತಹ ಬದುಕು ತನಗೆ ಸಿಗು ವುದಿಲ್ಲ. ಸುತ್ತಲಿನ ರಾಜಕೀಯ, ಸಮಾಜ, ಶಿಕ್ಷಣ, ಉದ್ಯೋಗ ಕ್ಷೇತ್ರ ಎಲ್ಲವೂ ತನ್ನನ್ನು ಮೋಸಗೊಳಿಸಿವೆ.
ತನ್ನನ್ನು ಮತ್ತು ತನ್ನಂಥವರನ್ನು ದುರ್ಗತಿಗೆ ತಂದಿರುವುದು ಪ್ರಚಲಿತ ಸಮಾಜ ಮತ್ತು ಪ್ರಭುತ್ವ, ಅದರ ಕ್ರೂರವ್ಯವಸ್ಥೆಗಳು ಮತ್ತು ಅಸಮಾನತೆಗಳು. ಆತನಿಗೆ ಅರಿವಾಗಿರುವುದೆಂದರೆ ಈ ವ್ಯವಸ್ಥೆಗಳು ನೀಚ ಮತ್ತು ದುಷ್ಟ ವ್ಯವಸ್ಥೆಗಳು. ಬದಲಾವಣೆ ಮಾಡುವ ಒಂದೇ ದಾರಿ ಎಂದರೆ ಅವನ್ನು ಸುಟ್ಟುಹಾಕುವುದು. ಸುಟ್ಟುಹಾಕದ ಹೊರತು ತನ್ನಂಥವರ ಬದುಕು ಹಸನಾಗಲು ಸಾಧ್ಯವೇ ಇಲ್ಲ. ಇದನ್ನೆಲ್ಲ ಅರಿತೇ ಜಿಮ್ಮಿ ಕೆಣಕಿದ ಕಾಳಿಂಗ ಸರ್ಪದಂತಹ ರೋಷದಲ್ಲಿರುವುದು- ತನ್ನ ಸುತ್ತಲಿರುವ ಎಲ್ಲದರ ಮೇಲೆ, ಎಲ್ಲರ ಮೇಲೆ.
ತನ್ನನ್ನು ದುಸ್ಥಿತಿಗೆ ತಂದಿರುವ ವಿಶ್ವವಿದ್ಯಾಲಯಗಳ ಕುರಿತು ಆತನಿಗೆ ಸಿಟ್ಟಿದೆ. ಈ ‘ರೆಡ್ ಬ್ರಿಕ್’ ಯೂನಿವರ್ಸಿಟಿಗಳು, ಆಕ್ಸ್-ರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳು ಆತನನ್ನು ಶಿಕ್ಷಣದಿಂದ ಹೊರಗಿಟ್ಟಿವೆ, ವಂಚಿಸಿವೆ. ಆತ ಹೇಳುತ್ತಾನೆ: “ನನಗೊಂದು ಆಸೆಯಿದೆ. ಅದೇನೆಂದರೆ, ಕತ್ತಲ ರಾತ್ರಿಯಲ್ಲಿ ಮೆಲ್ಲಗೆ ಕದ್ದುಮುಚ್ಚಿ ಹೋಗಿ ಈ ವಿಶ್ವವಿದ್ಯಾಲಯಗಳಿಗೆ ಬೆಂಕಿ ಹಚ್ಚಿ ಅವನ್ನು ಸುಟ್ಟುಬಿಡುವುದು. ಭಸ್ಮ ಮಾಡಿಬಿಡುವುದು”. ಜಿಮ್ಮಿಗೆ ಸರಿಯಾದ ಉದ್ಯೋಗವಿಲ್ಲ.
ಕೊಳೆಗೇರಿಯಂತಲ್ಲಿ ಬದುಕಿದ್ದಾನೆ- ಹೆಂಡತಿ ಮತ್ತು ಗೆಳೆಯನೊಬ್ಬನೊಂದಿಗೆ. ಪ್ರತ್ಯೇಕ ಮನೆ ಮಾಡಲು ದುಡ್ಡಿಲ್ಲ. ಮಧ್ಯಮ
ವರ್ಗದ ಮೇಲೂ ಅವನಿಗೆ ಸಿಟ್ಟಿದೆ. ಮುಖ್ಯವಾಗಿ ಅದರ ಜಡತೆಯ ಮೇಲೆ, ಮಾನಸಿಕ ಅಸೂಕ್ಷ್ಮತೆಯ ಮೇಲೆ, ತನ್ನಂಥವರ ಸಿಟ್ಟನ್ನು ಅವರು ಅರ್ಥ ಮಾಡಿಕೊಳ್ಳದ್ದರ ಕುರಿತು, ಬಂಡೇಳದೆ ಎಲ್ಲವನ್ನೂ ಮೌನವಾಗಿ ಸಹಿಸುವ ಸಂಸ್ಕೃತಿಯ ಕುರಿತು. ಹಾಗಾಗಿಯೇ ಮಧ್ಯಮ ವರ್ಗದ ಮೌಲ್ಯಗಳನ್ನು ಹೊಂದಿ ಬದುಕುತ್ತಿರುವ ತನ್ನ ಹೆಂಡತಿಯ ಮೇಲೂ ಅವನಿಗೆ ಕೋಪವಿದೆ.
ಏಕೆಂದರೆ ಅವಳು ಎಲ್ಲವನ್ನೂ ತಣ್ಣಗೆ ತೆಗೆದುಕೊಳ್ಳುವವಳು. ಸಿಟ್ಟಿಗೇಳುವ ಪ್ರವೃತ್ತಿ ಅವಳಿಗಿಲ್ಲ. ವಿರುದ್ಧ ನಿಲ್ಲುವ ಬೆನ್ನೆಲಬು ಅವಳಿಗಿಲ್ಲ. ಹೀಗಾಗಿ ಅವಳ ಮೇಲೆ ಸಿಟ್ಟು. ತನ್ನ ಅಸಹಾಯಕತೆಗಳನ್ನು, ಆಕ್ರೋಶವನ್ನು, ಕ್ರೋಧವನ್ನು ಆಕೆ ಅರ್ಥಮಾಡಿ ಕೊಳ್ಳುತ್ತಲೇ ಇಲ್ಲವೆಂಬ ಸಿಟ್ಟು. ಎಂತಹ ಸಿಟ್ಟೆಂದರೆ ಆತ ಅವಳಿಗೆ ಹೇಳುತ್ತಾನೆ: “ನೀನು ಗರ್ಭಿಣಿಯಾಗಿ, ಮಗು ಹುಟ್ಟಿ, ಆ ಮಗು ಸಾಯುವುದನ್ನು ನೋಡುವ ಆಸೆ ನನಗಿದೆ. ಆಗಲಾದರೂ ನಿನಗೆ ದುಃಖವೆಂದರೆ, ಸಿಟ್ಟೆಂದರೆ ಏನೆಂಬ ಅರಿವಾಗಬಹುದು”. ಆತ ಅವಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾನೆ.
ಹೆಂಡತಿಗೆ ಆತನ ಕುರಿತು ಭಯವಿದೆ. ತಾನು ಗರ್ಭಿಣಿ ಎಂಬುದನ್ನು ತಿಳಿಸಲು ಕೂಡ ಆಕೆ ಅಂಜುತ್ತಾಳೆ. ಏಕೆಂದರೆ ಜಿಮ್ಮಿಗೆ ಈ ಜಗತ್ತಿನ ವ್ಯಾಪಾರಗಳೊಳಗೆ, ವ್ಯವಸ್ಥೆಗಳೊಳಗೆ, ಸಂಬಂಧಗಳೊಳಗೆ ಕಟ್ಟುಬೀಳುವುದು ಇಷ್ಟವಿಲ್ಲ. ಸುಟ್ಟು ಬಿಡುವುದು ಮಾತ್ರ ಅವನ ಉದ್ದೇಶ. ಅಪ್ಪನಾಗಲೂ ಅವನಿಗೆ ಇಷ್ಟವಿಲ್ಲ. ಒಂದು ಮಗುವನ್ನೂ ತಂದು ಈ ‘ದರಿದ್ರ’ ವ್ಯವಸ್ಥೆಯೊಳಗೆ ಸಿಕ್ಕಿಸಿ ಹಾಕಲು ಅವನಿಗೆ ಮನಸ್ಸಿಲ್ಲ. ಹಳೆಯ ಮೌಲ್ಯಗಳೆಲ್ಲವುಗಳ ಕುರಿತೂ ಅವನಿಗೆ ತಿರಸ್ಕಾರವಿದೆ. ಗೆಳೆಯ ಕ್ಲಿಫ್ಟ್ ಮತ್ತು ಆತನ ಹೆಂಡತಿಯ ನಡುವೆ ಒಂದು ರೀತಿಯ ಸಂಬಂಧ ಬೆಳೆಯುತ್ತದೆ.
ಒಂದು ದಿನ ಅವರು ಮುತ್ತಿನ ಮತ್ತಿನಲ್ಲಿರುವಾಗ ಆತ ಬರುತ್ತಾನೆ. ಅವರನ್ನು ನೋಡುತ್ತಾನೆ. ಗಂಡ ಹೆಂಡತಿಯ ನಡುವಿನ
ಸಂಬಂಧದ ಪವಿತ್ರತೆ ಇತ್ಯಾದಿ ವಿಚಾರಗಳ ಕುರಿತು ಕೂಡ ಆತನಿಗೆ ಸಿಟ್ಟಿದೆ. ಹಾಗಾಗಿ ಅವರಿಬ್ಬರನ್ನು ನೋಡಿ ಏನೂ ಆಗಿಲ್ಲ ವೆಂಬಂತೆ ಉಪೇಕ್ಷಿಸುತ್ತಾನೆ. ಆತ ಅವಳನ್ನು ‘ಮದುವೆ’ಯಾಗಿದ್ದು ಪ್ರೀತಿಗಾಗಿ ಅಲ್ಲ, ಅವಳ ತಂದೆ- ತಾಯಿಗೆ ಬುದ್ಧಿ ಕಲಿಸಲು. ಬಹುಶಃ ನಮ್ಮ ಈ ಸಮಕಾಲೀನ ಜಗತ್ತು ಈ ‘ಯಂಗ್ ಮ್ಯಾನ್ ಮೂವ್ಮೆಂಟ್’ನ ಎರಡನೆಯ ಅಲೆಯಲ್ಲಿದೆ. ಹಾಸ್ಯದಂತೆ ಕಾಣುವ ದುರಂತ ಚಿತ್ರಗಳು ಪದೇಪದೆ ಮುಂದೆ ಬರುತ್ತಿವೆ. ಅದು ಆರಂಭವಾಗಿರುವುದು ಅಫ್ಘಾನಿಸ್ತಾನದಿಂದ.
ಅಲ್ಲಿ ಯುವಕರು ತಾಲಿಬಾನ್ ಜತೆ ನಿಂತರು (ಅಂದರೆ, ಅಲ್ಲಿಯ ಸ್ಥಿತಿ ಎಲ್ಲಿಗೆ ತಲುಪಿದೆ ಎಂದು ಊಹಿಸಬೇಕು). ಯುವಕರ ಪಡೆ ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿತು. ಅಧ್ಯಕ್ಷರು ಓಡಿಹೋದರು, ಯುವಕರು ಒಳಗೆ ನುಗ್ಗಿದರು. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಫೋಟೋ ತೆಗೆಸಿಕೊಂಡರು. ಅವರ ಸೋ-ಗಳ ಮೇಲೆ ಕಾಲು ಹಾಕಿ ಕುಳಿತು ಊಟ ಮಾಡಿದರು. ಹಾಸಿಗೆಯ ಮೇಲೆ
ಮಲಗಿ ದರು.
ಇಂತಹುದೇ ಘಟನೆ ಶ್ರೀಲಂಕಾದಲ್ಲಿ ಪುನರಾವರ್ತನೆಯಾಗಿದೆ. ಯುವಕರು ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿದರು. ಅಧ್ಯಕ್ಷರು ಓಡಿಹೋದರು. ಯುವಕರು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಫೋಟೋ ತೆಗೆಸಿಕೊಂಡರು. ಈಜುಕೊಳದಲ್ಲಿ ಮನಸೋ ಇಚ್ಛೆ ಈಜಾಡಿದರು. ಅಲ್ಲಿದ್ದ ಮದ್ಯವನ್ನು ಹೊಟ್ಟೆತುಂಬ ಕುಡಿದರು. ಪ್ರಧಾನಿಯವರ ಮನೆಯನ್ನು ಸುಟ್ಟುಹಾಕಿದರು. ಇದೇ ಘಟನೆ ಕೆಲವೇ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಬಹುದು. ಏಕೆಂದರೆ ಪಾಕಿಸ್ತಾನದ ಆರ್ಥಿಕ ಸ್ಥಿತಿ ಶ್ರೀಲಂಕಾದ ಸ್ಥಿತಿಗಿಂತ ಭಿನ್ನವಾಗಿ ಯೇನೂ ಇಲ್ಲ. ಹಾಗೆಯೇ ಇಂದಿನ ಜಗತ್ತಿನ ಹಲವು ದೇಶಗಳು ಜ್ವಾಲಾಮುಖಿಯ ಮೇಲೆ ಕುಳಿತಿವೆ.
ಯುವಜನರಿಗೆ ಇರುವ ಸಿಟ್ಟು ಯಾವ ದೇಶದಲ್ಲಿಯಾದರೂ ಭಗ್ಗೆಂದು ಹೊತ್ತಿಕೊಂಡು ಬಿಡಬಹುದು. ಸುಡಾನ್ನಲ್ಲಿ ನಡೆಯ ಬಹುದು. ವೆನೆಜುವೆಲಾದಲ್ಲಿ ನಡೆಯಬಹುದು. ಬೆಂಕಿಯ ಕೆಂಡದ ಮೇಲೆ ಕುಳಿತಿರುವ ರಷ್ಯಾದಲ್ಲಿ ನಡೆಯ ಬಹುದು. ಅಮೆರಿಕ ದಲ್ಲಿಯೂ ಇಂತಹ ಘಟನೆಯೊಂದರ ಪ್ರಾಥಮಿಕ ಹಂತ ನಡೆದುಹೋಗಿತ್ತು.
ಕಳೆದ ಚುನಾವಣೆಗಳ ಸಮಯದಲ್ಲಿ ಯುವಕರು ಶ್ವೇತಭವನಕ್ಕೆ ಲಗ್ಗೆಯಿಟ್ಟು ದಾಂಧಲೆ ನಡೆಸಿದರು. ಅಂದರೆ ಇಂದಿನ ಜಗತ್ತು ಕೂಡ ಕುದಿಯುತ್ತಿದೆ. ಯುವಜನರು ಮತ್ತೆ ಆಕ್ರೋಶದಲ್ಲಿದ್ದಾರೆ, ಜಿಮ್ಮಿ ಪೋರ್ಟರ್ನ ಹಾಗೆ. ಹಳೆಯದೆಲ್ಲವನ್ನೂ ಸುಟ್ಟು
ಹಾಕಿ ಹೊಸದನ್ನು ಸೃಷ್ಟಿಸುವ ತವಕ ಇಂದಿನ ಯುವಜನತೆಯ ಮನಸ್ಸಿನಲ್ಲಿ ಉರಿಯುತ್ತಿರುವಂತೆ ಕಂಡುಬರುತ್ತಿದೆ. ಅದು ಅರಾಜಕತೆಗೆ ದಾರಿ ನೀಡಿದರೂ ಸರಿಯೇ.
ಸಾಮಾಜಿಕ, ಆರ್ಥಿಕ ವಿಷಯಕ್ಕೆ ಸಂಬಂಽಸಿದಂತೆ ಎಲ್ಲ ಥಿಯರಿಗಳ/ಇಸಮ್ಗಳ ಸಾವು. ಅಂದರೆ ಸಿದ್ಧಾಂತೋತ್ತರ ಜಗತ್ತಿನಲ್ಲಿ ನಾವು ಬದುಕಿರುವುದು. ಅಂದರೆ ಎಲ್ಲ ರಾಜಕೀಯ, ಆರ್ಥಿಕ ಥಿಯರಿಗಳು ಅಪ್ರಸ್ತುತವಾಗಿ ಹೋಗಿರುವುದು. ಉದಾಹರಣೆಗೆ ಇಂದಿನ ಶತಮಾನ ರೂಪಿಸಿದ್ದ ಸೋಷಲಿಸ್ಟ್, ಗಾಂಧಿಯನ್, ಕ್ಯಾಪಿಟಲಿಸ್ಟ್ ಸಿದ್ಧಾಂತಗಳೆಲ್ಲವೂ ಇಂದು ತಮ್ಮ ಸಾವನ್ನು ನಿರೀಕ್ಷಿಸುತ್ತ ಕುಳಿತಂತೆ ಅನಿಸುತ್ತಿದೆ. ಅವುಗಳನ್ನು ಬೆಂಬಲಿಸುವವರು, ಅನುಕರಿಸುವವರು ಕಡಿಮೆಯಾಗುತ್ತಿದ್ದಾರೆ. ಕುತೂ ಹಲದ ವಿಷಯವೆಂದರೆ, ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳಶಾಹಿ ವ್ಯವಸ್ಥೆ ಕೂಡ ಈಗ ಕುಸಿದು ಕುಳಿತಂತಿದೆ.
ಏಕೆಂದರೆ ಇದೇ ಮುಕ್ತ ವ್ಯಾಪಾರವೇ ಶ್ರೀಲಂಕಾದಂತಹ ದೇಶಗಳನ್ನು ದಿವಾಳಿತನಕ್ಕೆ ದೂಡಿರುವುದು. ಥಿಯರಿಗಳು ಅಪ್ರಸ್ತುತ ವಾಗಿರುವುದು ಇಂದಿನ ರಾಜಕೀಯ, ಆರ್ಥಿಕ ಗೊಂದಲಗಳಿಗೆ ಕಾರಣ. ತತ್ವಗಳೇ ಇಲ್ಲದೆ ಹೋದಾಗ ತತ್ವಾಧಾರಿತ ರಾಜಕೀಯ ಹುಟ್ಟಿಕೊಳ್ಳುವುದಾದರೂ, ಇರುವುದಾದರೂ ಹೇಗೆ? ತತ್ವಾಧಾರಿತ ರಾಜಕೀಯ ಮರೆಯಾಗುತ್ತಿರುವುದರ ಕಾರಣ ಇದು. ಹಾಗೆಯೇ ಜಾಗತಿಕ ಆರ್ಥಿಕತೆ ರಿಸೆಶನ್ಗೆ, ಸ್ಲೋಡೌನ್ಗೆ ಹೋಗುತ್ತಿರುವ ಕಾರಣವೂ ಬಹುಶಃ ಇದೇ. ಕೃಷಿ ವ್ಯವಸ್ಥೆ ಕುಸಿದಂತಿದೆ, ಆಹಾರಧಾನ್ಯಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಉದ್ಯೋಗಗಳು ಕಡಿಮೆಯಾಗುತ್ತಿವೆ. ರಾಜಕೀಯವಾಗಿಯೂ ಜಗತ್ತು ತಲ್ಲಣದಲ್ಲಿದೆ. ಅತಿ ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾಗಿ ನಿಜವಾದ ಪ್ರಜಾಪ್ರಭುತ್ವ ಕುಸಿಯುತ್ತಿರುವಂತಿದೆ. ಯುವಜನತೆ ಮತ್ತೆ ಕುದಿಯುತ್ತಿದೆ. ‘ಆಂಗ್ರಿ ಯಂಗ್ಮ್ಯಾನ್’ ಆಂದೋಲನ ಮತ್ತೆ ಹುಟ್ಟಿಕೊಂಡಂತಿದೆ.