Saturday, 14th December 2024

ಮಹಿಳೆ, ಮಕ್ಕಳಲ್ಲೇ ಜಾಸ್ತಿ ಅನಿಮಿಯಾ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ಬರುವ ರಕ್ತಹೀನತೆಯು ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾದ ಕಾಯಿಲೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ವ್ಯಕ್ತವಾದ ಅಭಿಪ್ರಾಯ. ಒಂದು ಅಂದಾಜಿನ ಪ್ರಕಾರ ಪ್ರಪಂಚಾದ್ಯಂತ ಸುಮಾರು 200 ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಮೂವತ್ತರ ಹರೆಯದ ಈಕೆ ತುಂಬಾ ಚಟುವಟಿಕೆಯುಳ್ಳವಳು. ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾದ ಈಕೆಯ ಪತಿ ಬೆಳಿಗ್ಗೆ 9 ಗಂಟೆಗೇ ಮನೆ ಬಿಡುತ್ತಾರೆ. 9 ವರ್ಷದ ಮಗನನ್ನು ಶಾಲೆಗೆ ಕಳುಹಿಸಿದ ನಂತರ ಮನೆಯಲ್ಲಿ ಹೆಚ್ಚಿನ ಕೆಲಸ ಇಲ್ಲವೆಂದು ಈಕೆ ಹಲವು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದಾಳೆ.

ವಿಧವೆಯರ ಸಮಸ್ಯೆಗಳು, ಕೊಳಗೇರಿ ಮಕ್ಕಳ ಶಿಕ್ಷಣ- ಹೀಗೆ ಹಲವು ಕೆಲಸಗಳನ್ನು ಹಮ್ಮಿಕೊಂಡು ಅನೇಕ ಕಾಯಕದಲ್ಲಿ ತೊಡಗಿದ್ದಾಳೆ. ಒಂದೆರಡು ತಿಂಗಳುಗಳಿಂದ ಒಂದು ರೀತಿಯ ಸುಸ್ತು, ಕೆಲಸವನ್ನು ಮೊದಲಿನಂತೆ ಏಕಾಗ್ರತೆಯಿಂದ ಮಾಡಲಾಗುವುದಿಲ್ಲ, ಸರಿಯಾಗಿ ನಿದ್ದೆ ಬರುವುದಿಲ್ಲವೆಂದು ತನ್ನ ವೈದ್ಯರಲ್ಲಿ ತೋಡಿಕೊಂಡಳು. ದೈಹಿಕವಾಗಿ ವಿವಿಧ ಪರೀಕ್ಷೆಗಳನ್ನು ನಡೆಸಿದ ಅವರು, ರಕ್ತ ಪರೀಕ್ಷೆ ಮಾಡಿಸಿ, ವರದಿಯ ಆಧಾರದ ಮೇಲೆ ನಿಮ್ಮ ರಕ್ತ ದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ಬರುವ ರಕ್ತ ಹೀನತೆ ಅಥವಾ ಅನಿಮಿಯಾ ಇದೆ.

ಹಾಗಾಗಿ ನಿಮ್ಮ ಆಹಾರದಲ್ಲಿ ಇಂತಹುದ್ದೇ ಅಂಶಗಳನ್ನು ಸೇರಿಸಿ ಮತ್ತು ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಿರಿ ಎಂದು ಆಕೆಗೆ ಸಲಹೆ ಕೊಟ್ಟಾಗ ಅವಳಿಗೊಂದು ರೀತಿಯ ಶಾಕ್. ಸಮಾಜದ ಉನ್ನತ ವರ್ಗದಲ್ಲಿ ಇರುವ ತನಗೆ ಉಣ್ಣಲು ಉಡಲು ಕೊರತೆ ಇಲ್ಲ. ಹಾಗಿದ್ದಾಗ ಈ ಕಾಯಿಲೆ ಬರಲು ಏನು ಕಾರಣ? ಎಂಬ ಸಂದೇಹ ಬಂದಾಗ ಅವಳ ವೈದ್ಯರು ಆ ಕಾಯಿಲೆಯ ಗುಣಲಕ್ಷಣಗಳನ್ನು ವಿವರಿಸಿ ಇದು ಯಾರಲ್ಲಿಯೂ ಬರಬಹುದೆಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಮಹಿಳೆಯರಿಗೆ ರಕ್ತದಲ್ಲಿ ೧೧ ಗ್ರಾಂ ಮತ್ತು ಪುರುಷರಲ್ಲಿ ಹನ್ನೆರಡೂವರೆಯಿಂದ ೧೩ ಗ್ರಾಂ ಹಿಮೋಗ್ಲೋಬಿನ್ ಇರಬೇಕು. ಇದಕ್ಕಿಂತ ಕಡಿಮೆ ಇದ್ದರೆ ಅದು ಅನಿಮಿಯಾ ಎನಿಸಿಕೊಳ್ಳುತ್ತದೆ. ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ಬರುವ ರಕ್ತಹೀನತೆಯು ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾದ ಕಾಯಿಲೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ
ವ್ಯಕ್ತ ವಾದ ಅಭಿಪ್ರಾಯ.

ಒಂದು ಅಂದಾಜಿನ ಪ್ರಕಾರ ಪ್ರಪಂಚಾದ್ಯಂತ ಸುಮಾರು ೨೦೦ ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂಬುದು ತುಂಬಾ ಕಳವಳಕಾರಿ. ಈ ಕಾಯಿಲೆ ಆರಂಭದಲ್ಲಿ ಅಂತಹ
ಗಮನಾರ್ಹವಾದ ಲಕ್ಷಣಗಳನ್ನು ತೋರಿಸುವುದಿಲ್ಲ. ತೀರಾ ಮುಂದುವರಿದಾಗ ಅಂತಹ ವ್ಯಕ್ತಿ ತುಂಬಾ ಸುಸ್ತಾದ ಹಾಗೆ ತೋರುತ್ತಾನೆ. ಹಲವು ಸೋಂಕು ರೋಗಗಳಿಗೆ ತುತ್ತಾಗಬಹುದು.

ಸಾಮಾನ್ಯ ಜನರು ಭಾವಿಸುವ ಹಾಗೆ ಸಮಾಜದ ದುರ್ಬಲರಲ್ಲಿ, ಬಡವರಲ್ಲಿ ಮಾತ್ರ ಈ ವ್ಯಾಧಿ ಕಾಣಿಸಿಕೊಳ್ಳುತ್ತದೆ ಎಂಬುದು ಸತ್ಯವಲ್ಲ. ಈ ಬಗ್ಗೆ ಬರೋಡಾದಲ್ಲಿ ಕೈಗೊಳ್ಳಲಾದ ಒಂದು ಸಮೀಕ್ಷೆಯ ಪ್ರಕಾರ ೨೦೦ ಶ್ರೀಮಂತ ಹುಡುಗಿಯರಲ್ಲಿ ೧೦೦ಕ್ಕೂ ಹೆಚ್ಚು ಹುಡುಗಿಯರ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ೧೨ ಗ್ರಾಂಗಿಂತ ಕಡಿಮೆ ಇರುವುದು ತಿಳಿದು ಬಂದಿದೆ. ಹಾಗಾಗಿ ಈ ಕಾಯಿಲೆ ಸಮಾಜದ ಎಲ್ಲಾ ವರ್ಗದ ಜನರಲ್ಲಿಯೂ ಇದೆ. ಸಾಮಾನ್ಯವಾಗಿ ದೇಹ ಕಬ್ಬಿಣದ ಅಂಶವನ್ನು ವಿಸರ್ಜಿಸುವುದಿಲ್ಲ.

ಆದರೆ ಈ ಕಬ್ಬಿಣದ ಅಂಶ ದೇಹದ ವಿವಿಧ ಅಂಗಾಂಶಗಳಲ್ಲಿಯೂ ಇರುತ್ತದೆ. ಚರ್ಮ ಹಾಗೂ ಕರುಳುಗಳಿಂದ ಜೀವಕೋಶಗಳು ನಿಯಮಿತವಾಗಿ ನಷ್ಟವಾಗುತ್ತಾ ಹೋಗುತ್ತವೆ. ನಷ್ಟವಾದ ಈ ರೀತಿಯ ಜೀವಕೋಶಗಳಿಂದ ಕಬ್ಬಿಣದ ಅಂಶವೂ ನಷ್ಟವಾಗುತ್ತಾ ಹೋಗು ತ್ತದೆ. ಪ್ರತಿದಿನ ಸಾಮಾನ್ಯ ಒಂದು ಮಿ.ಗ್ರಾಂ.ನಷ್ಟು ಕಬ್ಬಿಣ ನಷ್ಟವಾಗುತ್ತದೆ. ಮಹಿಳೆಯರಲ್ಲಿ ಋತುಸ್ರಾವದ ಕಾರಣ ಇನ್ನೊಂದು ಮಿ.ಗ್ರಾಂ.(ದಿವಸಕ್ಕೆ) ನಷ್ಟವಾಗುತ್ತದೆ.

ಹಾಗಾಗಿ ಮಹಿಳೆಯರು ಗಂಡಸರಿಗಿಂತ ಎರಡರಷ್ಟು ಕಬ್ಬಿಣವನ್ನು ಕಳೆದುಕೊಳ್ಳುವುದರಿಂದ ಅವರಲ್ಲಿ ಅನಿಮಿಯಾ ಜಾಸ್ತಿ. ಆಹಾರ ತಜ್ಞರ ಪ್ರಕಾರ ಗಂಡಸರಲ್ಲಿ ಶೇ. ೩೦-೫೦ ಜನರಲ್ಲಿ ಅನಿಮಿಯಾ ಕಾಣಿಸಿಕೊಂಡರೆ ಮಹಿಳೆಯರಲ್ಲಿ ಈ ಪ್ರಮಾಣ ಶೇ. ೫೦-೭೦ರಷ್ಟು
ಹೆಚ್ಚು. ಅದರಲ್ಲಿಯೂ ಗರ್ಭಿಣಿ ಸೀಯರು ಶೇ. ೭೦ಕ್ಕಿಂತ ಹೆಚ್ಚು ಇದರಿಂದ ಬಳಲುತ್ತಾರೆ. ಕಾರಣ ಗರ್ಭಿಣಿ ಸೀಯರಲ್ಲಿ ದೇಹಕ್ಕೆ ಎರಡು ಪಟ್ಟು ಹೆಚ್ಚು ಕಬ್ಬಿಣದ ಅಂಶ ಬೇಕಾಗುತ್ತದೆ. ತಾಯಿಯಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದರಿಂದ ಅದರ ಪರಿಣಾಮ ನೇರವಾಗಿ ಮಗುವಿನ ಮೇಲೂ ಆಗುತ್ತದೆ.

ಅನಿಮಿಯಾ ಗರ್ಭಿಣಿ ಮಹಿಳೆಯರ ಶೇ. ೩೦ರಷ್ಟು ಮರಣಕ್ಕೆ ಕಾರಣವಾಗುತ್ತದೆ ಎಂಬ ಅಂಶ ಗಂಭೀರವಾದುದು. ಹುಟ್ಟುವ ಮಕ್ಕಳ ಮೇಲೆ ಅನಿಮಿಯಾ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾನಿ ಉಂಟುಮಾಡಬಲ್ಲದು. ತಾಯಿಯಲ್ಲಿ ಬಹಳಷ್ಟು ದಿನ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದರಿಂದ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಕ್ಕಳ ಸ್ವಭಾವದ ಬೆಳವಣಿಗೆ ತುಂಬಾ ನಿಧಾನ ಗೊಳ್ಳುತ್ತದೆ. ಆಶ್ಚರ್ಯಕರವಾಗಿ ಕೆಲವೊಮ್ಮೆ ಶ್ರೇಷ್ಠ ಅಥ್ಲೀಟ್‌ಗಳು ಹಾಗೂ ಕ್ರೀಡಾಪಟುಗಳೂ ಅನಿಮಿಯಾದಿಂದ ಬಳಲುತ್ತಿರುತ್ತಾರೆ.

ಏಕೆಂದರೆ ಇವರುಗಳು ಬಹಳಷ್ಟು ದೈಹಿಕ ಶ್ರಮವನ್ನು ಮಾಡುವುದರಿಂದ ಇವರ ದೇಹ ಹೆಚ್ಚಿನ ಕಬ್ಬಿಣದ ಅಂಶವನ್ನು ಉಪಯೋಗಿಸಿ ಕೊಳ್ಳುತ್ತದೆ. ಹಾಗಾದರೆ ಅನಿಮಿಯಾ ಬರದಿರಲು ಏನು ಉಪಾಯ ಎಂದು ನೀವು ಕೇಳಬಹುದು. ನಮ್ಮ ದೇಹ ಕಬ್ಬಿಣದ ಅಂಶ ವನ್ನು ಉತ್ಪಾದನೆ ಮಾಡುವುದಿಲ್ಲ. ನಾವು ಸೇವಿಸುವ ಆಹಾರದ ಮೂಲಕವೇ ಕಬ್ಬಿಣ ದೇಹಕ್ಕೆಪೂರೈಕೆಯಾಗುತ್ತದೆ. ಹಾಗಾಗಿ ಸೇವಿಸುವ ಆಹಾರವು ಕಬ್ಬಿಣ ಇರುವ ಯಾವಯಾವ ಪದಾರ್ಥಗಳನ್ನು ಒಳಗೊಂಡಿರುತ್ತದೆ ಎಂಬ ಅಂಶದ ಮೇಲೆ ಕಬ್ಬಿಣದ ಅಂಶ ಅಗತ್ಯಕ್ಕಿಂತ ಕಡಿಮೆಯಾಯಿತೇ ಅಥವಾ ಸಾಕಾಯಿತೇ ಎಂಬ ಅಂಶ ನಿರ್ಧಾರವಾಗುತ್ತದೆ.

ಮುಂಬೈಯ ಹಿರಿಯ ಆಹಾರ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ರಕ್ತಹೀನತೆಯ ಮುಖ್ಯ ಕಾರಣ ನಮ್ಮ ಜನರ ಆಹಾರದಲ್ಲಿ ಕಬ್ಬಿಣದ ಅಂಶ ಸರಿ ಯಾಗಿ ಪೂರೈಕೆಯಾಗದಿರುವುದೇ ಆಗಿದೆ. ಆಹಾರದಲ್ಲಿರುವ ಕಬ್ಬಿಣ ಎರಡು ರೀತಿಯದ್ದಾಗಿರುತ್ತದೆ. ಹೀಮ್ ಒಳಗೊಂಡ ಕಬ್ಬಿಣದ ಅಂಶ ಮಾಂಸ, ಮೀನುಗಳಲ್ಲಿರುತ್ತದೆ. ಇದು ಬಹಳಷ್ಟು ಬೇಗ ದೇಹದಿಂದ ಹೀರಲ್ಪಡುತ್ತದೆ. ಹೀಮ್ ಒಳಗೊಳ್ಳದ ಕಬ್ಬಿಣದ ಅಂಶ ವಿವಿಧ ಧಾನ್ಯ, ತರಕಾರಿ, ಬೇಳೆ, ಮೊಟ್ಟೆಗಳಲ್ಲಿ ಇರುತ್ತದೆ. ಇವುಗಳು ಬೇಗ ಹೀರಲ್ಪಡುವುದಿಲ್ಲ .

ಸಿ ಅನ್ನಾಂಗ ಹೆಚ್ಚು ಬೇಕಾಗುತ್ತದೆ. ಹಾಗಾಗಿ ತರಕಾರಿಗಳ ಮೇಲೆ ಬಹಳಷ್ಟು ನಿಂಬೆಹುಳಿ ಹಿಂಡಿದರೆ ಹಾಗೂ ಊಟವಾದ ನಂತರ
ಕಿತ್ತಳೆ ಅಥವಾ ನಿಂಬೆಹಣ್ಣಿನ ರಸ ಕುಡಿದರೆ ತುಂಬಾ ಒಳ್ಳೆಯದು. ಮುಖ್ಯ ತೊಂದರೆ ಎಂದರೆ ನಮ್ಮ ಬದಲಾಗುತ್ತಿರುವ ಜೀವನ ಶೈಲಿ. ಪಟ್ಟಣೀಕರಣ ಹಾಗೂ ಅದಕ್ಕೆ ಹೊಂದಿಕೊಂಡಂತೆ ಶ್ರೀಮಂತ ಜೀವನಶೈಲಿ ನಮ್ಮ ಆಹಾರದ ಮೇಲೆ ತುಂಬಾ ಪರಿಣಾಮ ಬೀರಿದೆ.

ಇಂದಿನ ಯಾಂತ್ರಿಕ ಹಾಗೂ ವೇಗದ ಜಗತ್ತಿನಲ್ಲಿ ನಾವು ತಯಾರಾದ ಆಹಾರಕ್ಕೆ ಮೊರೆಹೋಗುತ್ತಿದ್ದೇವೆ. ಉದಾಹರಣೆಗೆ ಗಂಡ ಮತ್ತು
ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಈ ದಿನಗಳಲ್ಲಿ ಊಟಕ್ಕೆ ಚಪಾತಿ ಮಾಡುವ ಬದಲು ಬ್ರೆಡ್ ತಂದು ತಿನ್ನುತ್ತೇವೆ. ಕೆಲಸದಿಂದ ಸುಸ್ತಾಗಿ ಮನೆಗೆ ಬಂದ ಮಹಿಳೆ ಹಿಟ್ಟು ಕಲಸಿ ಚಪಾತಿ ಸೇವಿಸುವುದಕ್ಕಿಂತ ತಯಾರಾಗಿ ಮಾರುಕಟ್ಟೆಯಲ್ಲಿ ಸಿಗುವ ಬ್ರೆಡ್ ತಿನ್ನುವುದು ಸುಲಭ ಎಂದು ತಿಳಿದುಕೊಳ್ಳುತ್ತಾಳೆ.

ಹೆಚ್ಚಾಗಿ ಅಕ್ಕಿಯನ್ನೇ ಉಪಯೋಗಿಸುವವರೂ ಕಬ್ಬಿಣದ ಅಂಶದ ಕೊರತೆಗೆ ಒಳಗಾಗುತ್ತಾರೆ. ಹಾಗಾಗಿ ಸಸ್ಯಾಹಾರಿಗಳು ತರಕಾರಿ ಜಾಸ್ತಿ ಇರುವ, ಚಪಾತಿ, ಅಕ್ಕಿಯನ್ನು ಒಳಗೊಂಡ ಮಿಶ್ರ ಆಹಾರ ಸೇವಿಸುವುದು ತುಂಬಾ ಒಳ್ಳೆಯದು.
ಅನಿಮಿಯಾದ ಪ್ರಭೇದಗಳು: ಮುಖ್ಯವಾಗಿ ೩ ವಿಧಗಳಿವೆ.
೧) ಮೈಕ್ರೋಸೈಟಿಕ್ ಅನಿಮಿಯಾ: ಕೆಂಪು ರಕ್ತ ಕಣಗಳು ಸಾಮಾನ್ಯಕ್ಕಿಂತ ಸಣ್ಣದಿದ್ದಾಗ ಈ ರೀತಿಯ ಅನಿಮಿಯಾ ಕಾಣಿಸಿಕೊಳ್ಳುತ್ತದೆ. ಮುಖ್ಯ ಉದಾಹರಣೆ ಎಂದರೆ – ಕಬ್ಬಿಣ ಕಡಿಮೆಯಾಗಿ ಕಾಣಿಸಿಕೊಳ್ಳುವ ಅನಿಮಿಯಾ ಮತ್ತು ಥಲಸ್ಸೀಮಿಯಾ.
೨) ನಾರ್ಮೋಸೈಟಿಕ್ ಅನಿಮಿಯಾ: ಇದರಲ್ಲಿ ರಕ್ತಕಣಗಳು ಸಣ್ಣದು ಅಥವಾ ದೊಡ್ಡದಾಗಿರುವುದಿಲ್ಲ. ಆದರೆ ಕಡಿಮೆ ಸಂಖ್ಯೆಯಲ್ಲಿರು ತ್ತವೆ. ಉದಾ, ದೇಹದಲ್ಲಿನ ಗಂಭೀರ ಕಾಯಿಲೆಯ ನಂತರ ಕಾಣಿಸಿಕೊಳ್ಳುವ ಅನಿಮಿಯಾ ಹಾಗೂ ಮೂತ್ರಪಿಂಡಕ್ಕೆ ಸಂಬಂಧಪಟ್ಟ ಅನಿಮಿಯಾ.

೩) ಮ್ಯಾಕ್ರೋಸೈಟಿಕ್ ಅನಿಮಿಯಾ: ಸಾಮಾನ್ಯಕ್ಕಿಂತ ರಕ್ತಕಣಗಳು ದೊಡ್ಡದಿದ್ದರೆ ರೀತಿಯ ಅನಿಮಿಯಾ ಕಾಣಿಸಿಕೊಳ್ಳುತ್ತದೆ. ಉದಾ, ಪರ್ನೀಶಿಯಸ್ ಅನೀಮಿಯಾ ಮತ್ತು ಆಲ್ಕೋಹಾಲ್‌ಗೆ ಸಂಬಂಧ ಪಟ್ಟ ಅನಿಮಿಯಾ.

ಅನಿಮಿಯಾ ಕಾಣಿಸಲು ಕಾರಣಗಳು: ೧. ವಿಪರೀತ ರಕ್ತಸ್ರಾವವಾದಾಗ- ಮಹಿಳೆಯರ ಋತುಚಕ್ರದ ರಕ್ತಸ್ರಾವ ವಿಪರೀತವಾದಾಗ, ಜಠರ – ಕರುಳಿನ ಭಾಗದಲ್ಲಿ ವಿಪರೀತ ರಕ್ತಸ್ರಾವವಾದಾಗ, ದೊಡ್ಡಕರುಳಿನ ಕ್ಯಾನ್ಸರ್‌ನಲ್ಲಿ ವಿಪರೀತ ರಕ್ತ ಸ್ರಾವವಾದಾಗ ಈ ಅನಿಮಿಯಾ ಬರುತ್ತದೆ.

೨. ಕಬ್ಬಿಣದ ಕೊರತೆಯ ಅನಿಮಿಯಾ: ಕೆಂಪುರಕ್ತ ಕಣಗಳನ್ನು ಉತ್ಪಾದಿಸಲು ಅಸ್ಥಿ ಮಜ್ಜೆಗೆ ಕಬ್ಬಿಣದ ಅವಶ್ಯಕತೆ ಇದೆ. ಹಿಮೋಗ್ಲೋಬಿನ್‌ನ ಅಸ್ತಿತ್ವಕ್ಕೆ ಕಬ್ಬಿಣ ಅವಶ್ಯ. ಆಹಾರದಲ್ಲಿ ಕಬ್ಬಿಣದ ಅಂಶ ಸೇವಿಸುವುದು ತೀವ್ರವಾಗಿ ಕಡಿಮೆಯಾದಾಗ ಈ
ರೀತಿಯ ಅನಿಮಿಯಾ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಯ ಭಾಗದಲ್ಲಿ ಅಲ್ಸರ್ ಇದ್ದು ಅಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈ ರೀತಿಯ ಅನಿಮಿಯಾ ಕಾಣಿಸಿಕೊಳ್ಳಬಹುದು.

ಅಲ್ಲದೆ ದೊಡ್ಡ ಕರುಳಿನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಕರುಳಿನ ಭಾಗದಲ್ಲಿನ ಪಾಲಿಪ್ ಕಾಯಿಲೆಯಲ್ಲಿ, ಪೈಲ್ಸ ಕಾಯಿಲೆಯಲ್ಲಿ
ಸಹ ಈ ರೀತಿಯ ಅನಿಮಿಯಾ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ಕಾಯಿಲೆಗಳಲ್ಲಿ ಸಹಜಕ್ಕಿಂತ ಜಾಸ್ತಿ ರಕ್ತದ ನಷ್ಟ ಆಗುವುದರಿಂದ ಕಬ್ಬಿಣದ ಕೊರತೆಯ ಅನಿಮಿಯಾ ಉಂಟಾಗುತ್ತದೆ.

ಸಾಮಾನ್ಯ ರೀತಿಯ ಅನಿಮಿಯಾದ ಲಕ್ಷಣಗಳು: ಬೇಗ ಸುಸ್ತಾಗುವುದು, ದೇಹದಲ್ಲಿ ಶಕ್ತಿ ಕಡಿಮೆ ಎನಿಸುವುದು, ದೇಹವು ಬೇಗ ಬಳಲಿಕೆ ಹೊಂದುವುದು, ಉಸಿರಾಡಲು ತೊಂದರೆಯಾಗುವುದು, ತಲೆಯಲ್ಲಿ ಒಂದು ರೀತಿಯ ಭಾರದ ಅನುಭವ, ಹೃದಯದ ಬಡಿತವು ತೀವ್ರ ರೀತಿಯಲ್ಲಿ ಜಾಸ್ತಿಯಾಗುವುದು, ಮುಖವು ನಿಧಾನವಾಗಿ ಬಿಳಿಯ ಬಣ್ಣಕ್ಕೆ ತಿರುಗುವುದು.

ತೀವ್ರ ರೀತಿಯ ಅನಿಮಿಯಾದ ಲಕ್ಷಣಗಳು: ಎದೆನೋವು, ಎಂಜೈನಾ ರೀತಿಯ ತೀವ್ರ ಸ್ವರೂಪದ ಎದೆನೋವು, ಹಾಗೂ ಕೆಲವೊಮ್ಮೆ ತೀವ್ರ ರೀತಿಯ ಹೃದಯಾಘಾತ, ತಲೆತಿರುಗುವ ಅನುಭವ, ಹೃದಯದ ಬಡಿತದಲ್ಲಿ ತೀವ್ರ ಪ್ರಮಾಣದ ಏರಿಕೆ.

ಸಾಧ್ಯವಾದಷ್ಟು ಬೇಗ ಕಾಯಿಲೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಮಾಡಿದರೆ, ಕಾಯಿಲೆ ತೀವ್ರವಾದ ಹಂತಕ್ಕೆ ಹೋಗುವುದನ್ನು ತಪ್ಪಿಸ ಬಹುದು. ಕಬ್ಬಿಣದ ಕೊರತೆಯ ಅನಿಮಿಯಾಕ್ಕೆ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಿ, ಕಬ್ಬಿಣವನ್ನು ಮಾತ್ರೆಯ ರೂಪ
ದಲ್ಲಿಯೂ ಕೊಡಬೇಕಾಗಬಹುದು. ಅನಿಮಿಯಾ ತೀವ್ರ ಪ್ರಮಾಣದ್ದಾದಾಗ ದೇಹಕ್ಕೆ ರಕ್ತ ಅಥವಾ ರಕ್ತದ ಅಂಶಗಳನ್ನು ಕೊಟ್ಟು ಚಿಕಿತ್ಸೆ ಮಾಡ ಬೇಕಾಗುತ್ತದೆ.