Sunday, 15th December 2024

ಅನ್ನಭಾಗ್ಯದ ಪರದಾಟದಲ್ಲೂ ಹಿಲ್ಲೇಲ್ ನೆನಪಾಗಲಿಲ್ಲವೇ ?

ಸುಪ್ತ ಸಾಗರ

rkbhadti@gmail.com

ಎಲ್ಲರೂ ರೈತರ ಪರವಾಗಿ ಘೋಷಣೆಗಳನ್ನು ಹೊರಡಿಸುವವರೇ. ತಮ್ಮದು ರೈತಪರ ಸರಕಾರ ಎಂದುಕೊಂಡು ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವವರೇ. ಒಂದಿಲ್ಲೊಂದು ಸಮಸ್ಯೆಯಿಂದ ಬಾಧಿಸುವ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಚುನಾವಣೆಗಳಲ್ಲಿ, ಬಜೆಟ್‌ನಲ್ಲಿ ಘೋಷಿಸಿಕೊಂಡು ಅಧಿಕಾರಕ್ಕೇರುವವರೇ.

ಕಳೆದ ಒಂದು ದಶಕದಲ್ಲಿ ರಾಜ್ಯ ಕಂಡ ಎಲ್ಲ ಮುಖ್ಯಮಂತ್ರಿಗಳೂ ಪಕ್ಷಾತೀತವಾಗಿ ‘ರೈತ ಕಲ್ಯಾಣ’ ಕಾರ್ಯಕ್ರಮದ ಹೆಸರಿನಲ್ಲಿ (ಒಂದು ಕೆಲಸವನ್ನೂ ಮಾಡಿರುವುದು ನಿಜ) ಭುಜ ತಟ್ಟಿಕೊಂಡಿದ್ದಾರೆ. ಯಡಿಯೂರಪ್ಪನವರಂತೂ ಹಸಿರುಶಾಲು ಹೊದ್ದು
ಕೊಂಡೇ ಪ್ರಮಾಣವಚನ ಸ್ವೀಕರಿಸಿದ್ದರಲ್ಲದೇ, ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಅನ್ನೂ ಘೋಷಿಸಿದ್ದರು. ಒಟ್ಟಾರೆ ಕೃಷಿ ಕ್ಷೇತ್ರ ಎಂಬುದು ರಾಜಕಾರಣಿಗಳ ಪಾಲಿಗೆ ಜೇನುಗೂಡು. ಭಾರತದಂಥ ಕೃಷಿ ಪ್ರಧಾನ ದೇಶದಲ್ಲಿ ಇದಕ್ಕಿಂತ ಪ್ರಬಲ ಸಮುದಾಯ ಮತ್ತೊಂದಿಲ್ಲ ಎಂಬ ಅರಿವೂ ರಾಜಕಾರಣಿಗಳಿಗೆ ಚೆನ್ನಾಗಿಯೇ ಇದೆ.

ಇರಲಿ, ಮೊನ್ನೆ ತಾನೇ ತಮ್ಮ ದಾಖಲೆಯ ೧೪ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ನವರು ಕೃಷಿ ಕೇತ್ರಕ್ಕೆ ಎಂಟು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಅನುದಾನವನ್ನು ಮೀಸಲಿಟ್ಟು, ಪುನಃ ತಾವೂ ಸಹ ರೈತರ ಪರ ಎಂಬುದನ್ನು ಘೋಷಿಸಿ ಕೊಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅಭಿನಂದನಾರ್ಹರು. ಇವೆಲ್ಲದರೂ ನಡುವೆಯೂ ಸಿದ್ದರಾಮಯ್ಯ ಕೃಷಿ ಕೇತ್ರಕ್ಕೆ ಕೊಟ್ಟಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕಾಣುತ್ತಿದೆ. ಎಲ್ಲೋ ಒಂದು ಕಡೆ ಗ್ಯಾರಂಟಿಗಳನ್ನು ನಿಭಾಯಿಸುವ ಭರದಲ್ಲಿ ಕೃಷಿ ಇಲಾಖೆ ಸೇರಿದಂತೆ ಬೇಸಾಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳಿಗೆ ಕತ್ತರಿ ಹಾಕಿರುವುದು ಸ್ಪಷ್ಟ.

ದೇಶವೇ ಸಿರಿಧಾನ್ಯದ ಬಗ್ಗೆ ಮಾತನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಮಟ್ಟದಲ್ಲಿ ಸಿರಿಧಾನ್ಯವನ್ನು ಪ್ರಮೋಟ್ ಮಾಡಲು ಯತ್ನಿಸುತ್ತಿದ್ದಾರೆ. ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ದ ಘೋಷಣೆಯೂ ಇದರ ಭಾಗವೇ. ಹಾಗಿದ್ದಾಗ್ಯೂ ಸಿರಿಧಾನ್ಯದ ಬಗ್ಗೆ ಪ್ರಸ್ತಾಪವನ್ನೇ ಮಾಡದಿದ್ದುದು ಅಚ್ಚರಿ ತರಿಸಿದೆ. ಸಿರಿಧಾನ್ಯಕ್ಕೆ ಪ್ರೋತ್ಸಾಹಧನ, ಬೆಂಬಲ ಬೆಲೆಯ ಆವರ್ತ ನಿಧಿ, ಬೆಳೆ ನಷ್ಟ ಪರಿಹಾರ ಇತ್ಯಾದಿಗಳ ಬಗ್ಗೆ ಪ್ರಸ್ತಾಪವೇ ಬಂದಿಲ್ಲ.

Read E-Paper click here

‘ಅನ್ನಭಾಗ್ಯ’ಕ್ಕಾಗಿ ಇಷ್ಟೆಲ್ಲ (ರಾಜಕೀಯ ಕಾರಣಗಳೂ ಲ್ಲದಿಲ್ಲ) ಗುದ್ದಾಟ ನಡೆಸುವ ಬದಲಿಗೆ ಸಿರಿಧಾನ್ಯವನ್ನೇಕೆ ಪ್ರೋತ್ಸಾಹ ಬಾರದಿತ್ತು? ರಾಜ್ಯದಲ್ಲಿ ಅಕ್ಕಿಯ ಕೊರತೆ ಎದುರಾಗಿರುವಾಗ ರಾಗಿ, ಜೋಳದ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಯೋಚಿಸ ಬಹುದಿತ್ತು. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ಪ್ರಸ್ತಾಪಗಳೂ ಆಗಿದ್ದವು. ಮುಂದಿನ ತಿಂಗಳಲ್ಲಿ ಬಿತ್ತನೆಯಾಗಲಿರುವ ರಾಗಿ, ಜೋಳಕ್ಕೆ ಪ್ರೋತ್ಸಾಹ ಧನವನ್ನು ಘೋಷಿಸುವ ಕಾರ್ಯವನ್ನು ಮಾಡಬೇಕಿತ್ತು. ಅಲ್ಲದೇ ಈ ಬಾರಿ ಮುಂಗಾರು ತಡವಾಗಿದೆ. ಹೀಗಾಗಿ ಬಿತ್ತನೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಯಾವುದೇ ಪ್ರಸ್ತಾಪವೂ ಬಜೆಟ್‌ನಲ್ಲಿ ಕಾಣಿಸಲೇ ಇಲ್ಲ.

ಇನ್ನು ಕೃಷಿಭಾಗ್ಯ ಯೋಜನೆಯನ್ನು ಉದ್ಯೋಗ ಖಾತರಿಗೆ ಸಂಯೋಜಿಸಿರುವುದು ಭಾರೀ ಪರಿಣಾಮ ಬೀರುವಂತೇನೂ ಕಾಣಿಸದು. ಏಕೆಂದರೆ ಈಗಾಗಲೇ ಜಲನಿಧಿ ಯೋಜನೆಯಡಿ ಇದು ಅನುಷ್ಠಾನಗೊಳ್ಳುತ್ತಿದೆ. ೨೦೦೪ರಲ್ಲಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಸಾವಯವ ಕೃಷಿ ನೀತಿಯ ಬಗೆಗೂಈ ಬಾರಿ ಪ್ರಸ್ತಾಪವಿಲ್ಲ. ಅದನ್ನು ಮುಂದುವರಿಸುವ ನಿರೀಕ್ಷೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯ ಕಣ್ಣಾಮುಚ್ಚಾಲೆಯ ಇಂದಿನ ಸನ್ನಿವೇಶದಲ್ಲಿ ಒಣ ಭೂಮಿ ಅಭಿವೃದ್ಧಿಗೆ ಒಂದಷ್ಟು ಕ್ರಮಗಳು ಅನಿವಾರ್ಯವಾಗಿತ್ತು.

ಇದಕ್ಕೆ ಇಸ್ರೇಲ್ ನಮಗೆ ಮಾದರಿಯಾಗುತ್ತಲೇ ಇಲ್ಲ. ಅದೇಕೆ ಎಂಬುದು ಅರ್ಥವಾಗುತ್ತಿಲ್ಲ. ಇದೇ ಕಾಂಗ್ರೆಸ್ ಬೆಂಬಲ
ದೊಂದಿಗೆ ಕಳೆದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ, ಎಚ್ .ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿದ್ದಾಗ ಇಸ್ರೇಲ್ ಕೃಷಿ ಅಧ್ಯಯನಕ್ಕೆ ತಜ್ಞರ ಸಮಿತಿಯನ್ನೂರಚಿಸಲಾಗಿತ್ತು. ಸರಕಾರದೊಂದಿಗೇ ಅದೂ ಮನೆ ಸೇರಿತ್ತು. ಇದೀಗ ಪುನಃ ಕಾಂಗ್ರೆಸ್ ಅಧಿಕಾರಕ್ಕೇರಿರುವಾಗ ಇಂಥ ಸಂಗತಿಗಳ ಬಗೆಗೆ ಗಮನಹರಿಸುವ ಎಲ್ಲ ಅವಕಾಶಗಳಿದ್ದವು. ಇವತ್ತು ನಮ್ಮ ಅತ್ಯಂತ ಒಣ ಭೂಮಿಯಲ್ಲೂ ಅಲ್ಪ ಸ್ವಲ್ಪ ಬೆಳೆಗಳು ಮೊಳೆಯುತ್ತಿವೆ.

ತೀರಾ ಕಡಿಮೆ ನೀರಾವರಿಯಲ್ಲೂ ಹೆಚ್ಚಿನ ಇಳುವರಿ ಸಾಧ್ಯವಾಗುತ್ತಿದೆ. ನಮ್ಮ ತೀರಾ ಒಣ, ಬಂಜರು ನೆಲದಲ್ಲಿಯೂ ಅತ್ಯಂತ ಜನಪ್ರಿಯವಾಗಿರುವ, ಹನಿ, ತುಂತುರು ನೀರಾವರಿ ಪದ್ಧತಿಯ ಹಿಂದೆ ರೋಚಕ ಯಶೋಗಾಥೆಯೊಂದು ತೆರೆದುಕೊಳ್ಳುತ್ತದೆ. ಆತನನ್ನು ಹನಿ ನೀರಾವರಿಯ ಹರಿಕಾರ ಎನ್ನುತ್ತೀರೋ, ಒಣಭೂಮಿ ಕೃಷಿಕ್ರಾಂತಿಯ ಜನಕ ಎನ್ನುತ್ತೀರೋ; ಹೇಗೆ ಕರೆದರೂ ಹೊಂದುವಂಥ ಸಾಧನೆ ಈತನದ್ದು. ಡಾ.ಡೇನಿಯಲ್ ಹಿಲ್ಲೆಲ್ ಹಾಗೂ ಮೈಕ್ರೋ ಇರಿಗೇಶನ್ ಎಂಬ ಪದಗಳು ಪರಸ್ಪರ ಪರ್ಯಾಯ ವೆನ್ನುವಷ್ಟರ ಮಟ್ಟಿಗೆ ಇಸ್ರೇಲ್ ಈ ತಜ್ಞನ ಕೊಡುಗೆ ವಿಶ್ವಮಾನ್ಯ.

ಎರಡು ವರ್ಷಗಳ ಹಿಂದೆ (೨೦೨೧)ಕಣ್ಮುಚ್ಚಿದ ಡಾ.ಡೇನಿಯಲ್ ೨೦೧೨ ವಿಶ್ವ ಆಹಾರ ಪ್ರಶಸ್ತಿಯ ಗೌರವಕ್ಕೂ ಪಾತ್ರ ರಾದವರು. ಒಣ ಮತ್ತು ಅರೆ ನೀರಾವರಿ ಪ್ರದೇಶದಲ್ಲಿ ಅರ್ಧ ಶತಮಾನದ ಅವಿರತ ಸಾಧನೆ ಅವರದ್ದು. ಒಣ ಭೂಮಿ ಕೃಷಿಯ ಪರಂಪರೆ ಯನ್ನೇ ಹುಟ್ಟುಹಾಕಿದ ಮಹನೀಯನೀತ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಎದುರಿಸುತ್ತಿದ್ದ ಭೀಕರ ನೀರಿನ ಕೊರತೆ ಸಹಜವಾಗಿಯೇ ಕೃಷಿಯ ಮೇಲೆ ಗಂಭೀರ ಪರಿಣಾಮ ವನ್ನು ಬೀರಿತ್ತು. ಅದರ ಫಲವಾಗಿ ಆಹಾರದ ಕೊರತೆ ರಾಷ್ಟ್ರಗಳನ್ನು ಬಾಧಿಸುತ್ತಿದ್ದವು. ಆಗ ಭರವಸೆಯ ಆಶಾಕಿರಣವಾಗಿ ಹೊರ ಹೊಮ್ಮಿದವರು ಡಾ.ಹಿಲ್ಲೆಲ್. ನಿರಾಶಾದಾ ಯಕ ಸನ್ನಿವೇಶದಲ್ಲಿ ಅವರು ಪರಿಚಯಿಸಿದ ಅತ್ಯಂತ ವೈಜ್ಞಾನಿಕ ಪದ್ಧತಿಯೊಂದು ಮಧ್ಯಪ್ರಾಚ್ಯದ ಕೃಷಿಯ ದಿಕ್ಕನ್ನೇ ಬದಲಿಸಿತು.

ಮಾತ್ರವಲ್ಲ ಆಹಾರ ಉತ್ಪಾದನೆಯಲ್ಲಿ ಗಣನೀಯ ಕ್ರಾಂತಿಯೊಂದಕ್ಕೆ ನಾಂದಿಯಾಯಿತು. ಕಳೆದ ಐದು ದಶಕಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರದ ಕೃಷಿಯ ಮೇಲೆ ಡಾ.ಹಿಲ್ಲೆಲ್‌ರ ನೀರಾವರಿ ಪದ್ಧತಿ ಬೀರಿದ ಪ್ರಭಾವ, ಪರಿಣಾಮಗಳು ಅತ್ಯಂತ ಅಗಾಧ ವಾದ್ದು. ಅದಾಗ ಕ್ಯಾಲಿ-ರ್ನಿಯಾದಲ್ಲಿ ಆರ್ಥಿಕ ಸಂಕಷ್ಟ ತನ್ನ ಕರಾಳಬಾಹುವನ್ನು ಚಾಚತೊಡಗಿದ್ದ ಸಮಯ. ಸಣ್ಣ ಕುಟುಂಬಗಳಂತೂ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದ್ದವು.

ಕೆಲಸ ಅರಸಿಕೊಂಡು ಗುಳೇ ಹೋಗುವುದನ್ನುಳಿದು ಬೇರೆ ದಿಕ್ಕೇ ತೋಚದಾಗಿತ್ತು. ಲಾಸ್ ಏಂಜಲೀಸ್‌ನ ಅಂಥ ಸಂಕಷ್ಟ
ಪೂರಿತ ಕುಟುಂಬವೊಂದರಲ್ಲಿ ಐವರು ಮಕ್ಕಳಲ್ಲಿ ಕಿರಿಯವನಾಗಿ ೧೯೩೧ರಲ್ಲಿ ಹುಟ್ಟಿದವರು ಡೇನಿಯಲ್ ಹಿಲ್ಲೆಲ್. ಮಗು
ವಿಗಿನ್ನೂ ಒಂದು ವರ್ಷವೂ ತುಂಬಿರಲಿಲ್ಲ; ಪಿತೃವಿಯೋಗದ ಆಘಾತ ಎರಗಿತ್ತು. ಗಂಡ ಸತ್ತ ಮೇಲೆ ಡೇನಿಯಲ್‌ರ ಅಮ್ಮ
ನಿಗೆ ಮಕ್ಕಳನ್ನು ಕಟ್ಟಿಕೊಂಡು ತವರಿನತ್ತ ಮುಖ ಮಾಡುವುದು ಅನಿವಾರ್ಯವಾಯಿತು.

ಅಮ್ಮನ ಜೋಳಿಗೆಯಲ್ಲಿ ಕುಳಿತು ಪ್ಯಾಲೆಸ್ತೀನ್ ಸೇರಿದ್ದ ಮರಿ ವಿಜ್ಞಾನಿ. ಡೇನಿಯಲ್ ಹದಿನೆಂಟನೇ ವಯಸ್ಸಿಗೆ ಕಾಲಿಡುತ್ತಿದ್ದಾಗ ಪ್ಯಾಲೆಸ್ತೀನ್ ಭಾಗವಾಗಿ ಇಸ್ರೇಲ್ ಅಸ್ತಿತ್ವ ಪಡೆದಿತ್ತು. ಆಗಲೇ ಏರು ಜವ್ವನಿಗ ಡೇನಿಯಲ್ ಗಮನ ಸೆಳೆದದ್ದು ಅಲ್ಲಿ ಕೃಷಿಕರು ಎದುರಿಸುತ್ತಿದ್ದ ನೀರಿನ ಸಮಸ್ಯೆ.

ನೀರು, ಕೃಷಿಯ ಬಗ್ಗೆ ಇಷ್ಟರಮಟ್ಟಿಗೆ ತಲೆಕೆಡಿಸಿಕೊಳ್ಳಲು ಇನ್ನೂ ಒಂದು ಕಾರಣವಿತ್ತು. ಒಂಬತ್ತನೇ ವಯಸ್ಸಿನಲ್ಲಿದ್ದಾಗ
ಆತನನ್ನು ಸಮೀಪದ ಹಳ್ಳಿ ಕಿಬ್ಬುಟ್ಜ್‌ಗೆ ಕಳುಹಿಸಲಾಯಿತು. ಅಲ್ಲಿನ ರೈತರು ಎದರಿಸುತ್ತಿದ್ದ ಸಂಕಷ್ಟಗಳ ಸಾಕ್ಷಾತ್‌ದರ್ಶನ
ಆಯಿತು. ಈ ಸಂಬಂಧ ಸಾಸ್ಥಿಕಮಟ್ಟದಲ್ಲಿ ಅಧ್ಯಯನ ಕೈಗೊಳ್ಳುವ ಬಯಕೆ ಬಾಲಕ ಡೇನಿಯಲ್‌ನಲ್ಲಿ ಮೊಳಕೆಯೊಡೆಯಿತು. ಕೃಷಿಗೊಂದು ಔದ್ಯೋಗಿಕ ಸ್ವರೂಪವನ್ನು ನೀಡಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಬಲವಾಗತೊಡಗಿತು.

೧೯೪೬, ಡೇನಿಯಲ್ ಪ್ರೌಢಶಾಲೆಗಾಗಿ ಅಮೆರಿಕಕ್ಕೆ ವಾಪಸಾದ. ಸೌತ್ ಕ್ಯಾರೋಲಿನಾದ ಚಾರ್ಲ್ಸ್‌ಟನ್‌ನಲ್ಲಿ ಬಂಧುವೊಬ್ಬರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಯಿತು. ೧೯೫೦ರಲ್ಲಿ ಜಾರ್ಜಿಯಾ ವಿಶ್ವವಿದ್ಯಾನಿಲಯದಿಂದ ಕೃಷಿ ಆರ್ಥಿಕತೆ ವಿಷಯದಲ್ಲಿ ಪದವಿ ಗಳಿಸಿ ಹೊರಬಂದರು ಡೇನಿಯಲ್. ನಂತರ ಒಂದೇ ವರ್ಷದಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಕೆ. ನಂತರ ಆರು ವರ್ಷಗಳ ಸತತ ಸಂಶೋಧನೆ ನಡೆಸಿ ಪಾರಿಸಾರಿಕ ಮತ್ತು ಭೂ ವಿಜ್ಞಾನದಲ್ಲಿಯೇ ಪಿಎಚ್‌ಡಿಗಳಿಕೆ. ಅಲ್ಲಿಗೇ ಅಧ್ಯಯನದ ಹಂಬಲ ಕೊನೆಗೊಳ್ಳಲಿಲ್ಲ.

ಜಲ ಮತ್ತು ಭೂ ವಿಜ್ಞಾನದಲ್ಲಿನ ಅವರ ಜ್ಞಾನ ದಾಹಕ್ಕೆ ನೀರೆರೆದದ್ದು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ. ಮುಂದಿನದ್ದೆಲ್ಲ ಅವರ ಕನಸಿನ ಮಾರ್ಗದಲ್ಲೇ ಸಾಗಿತು. ಅಲ್ಲಿಯವರೆಗೆ ಮಧ್ಯಪ್ರಾಚ್ಯದಲ್ಲಿ ಬೆಳೆಗಳಿಗೆ ಸಮೃದ್ಧ ನೀರು ಅಗತ್ಯವೆಂದೇ ನಂಬ ಲಾಗಿತ್ತು. ಕನಿಷ್ಠ ನೀರಿನಲ್ಲಿ ಕೃಷಿಯ ಪರಿಕಲ್ಪನೆಯೇ ರೈತರಲ್ಲಿರಲಿಲ್ಲ. ಮಣ್ಣಿನ ಸಂಶೋಧನೆಯ ಹಂತದಲ್ಲಿ ಅದರಲ್ಲಿನ ತೇವಾಂಶವನ್ನು ಹಿಡಿದಿಡುವ ಸಾಮರ್ಥ್ಯ ಮೇಲ್ನೋಟಕ್ಕೆ ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಎಂಬುದು ಡೇನಿಯಲ್‌ರಿಗೆ ಮನವರಿಕೆ ಆಯಿತು.

ಅದೊಂದು ಹುಳಿಭರಿತ ಹಣ್ಣಿನ ಸಸಿಯೊಂದಿಗೆ ಪ್ರಯೋಗ ಶುರುವಿಟ್ಟುಕೊಂಡರು. ಹನಿಹನಿಯಾಗಿ ಸಸಿಗೆ ನೀರು ಹನಿಸಲು ಆರಂಭಿಸಿದರು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಫಲ ದೊರಕಿತ್ತು. ಅದೇ ಮುಂದಿನ ಹನಿ ನೀರಾವರಿ ಪ್ರಯೋಗಕ್ಕೆ ನಾಂದಿ ಯಾಯಿತು. ಆರಂಭದಲ್ಲಿ ಅವರು ನೆಗೇವ್ ಮರುಭೂಮಿಯ ಪುಟ್ಟ ಸಮುದಾಯದಲ್ಲಿ ವಾಸಿಸುತ್ತಿದ್ದಾಗ ನಡೆಸಿದ ಪ್ರಯೋಗ ಗಳೇ ಅವರ ಮುಂದಿನ ಸಾಧನೆಗಳಿಗೆ ಮೆಟ್ಟಿಲು. ಒಣಭೂಮಿಯಲ್ಲಿ ಗುಣಮಟ್ಟದ ನೀರಿನ ಪೂರೈಕೆಯದೇ ಸಮಸ್ಯೆ. ಸಸ್ಯಗಳಿಗೆ
ಕಡಿಮೆ ಪ್ರಮಾಣದ, ಅದಿಕ ಕ್ಷಮತೆಯ ಹಾಗೂ ನಿರಂತರ ನೀರೊದಗಿಸುವಿಕೆಯಲ್ಲಿ ಅವರು ಹೊಸ ವಿಧಾನ ರೂಢಿಸಿದರು.

೨೦ನೇ ಶತಮಾನದ ಮೊದಲರ್ಧ ಭಾಗದಲ್ಲಿ ಚಾಲ್ತಿ ಯಲ್ಲಿದ್ದ ಸಾಂಪ್ರದಾಯಿಕ ನೀರಾವರಿಗೆ ಹಿಲ್ಲೆಲ್‌ರ ವಿಧಾನ ಪ್ರಭಾವಶಾಲಿ ಬದಲಾವಣೆ ತಂದಿತು. ಮೊದಲಿದ್ದ ವಿಧಾನ- ನಿಗದಿತ ಕಾಲದ ಅಂತರದಲ್ಲಿ ಮಣ್ಣನ್ನು ನೀರಿನಿಂದ ಸಾಕಷ್ಟು ತೋಯಿಸಿ, ಬಳಿಕ ದೀರ್ಘ ಸಮಯದ ಅಂತರ ಬಿಟ್ಟು ಕೃತಕ ಬರ ಸೃಷ್ಟಿಸಿ ಮಣ್ಣನ್ನು ಒಣಗಿಸುತ್ತಿದ್ದುದು.

ಹಿಲ್ಲೆಲ್‌ರ ವಿಧಾನ ಹೀಗೆ: ಸಸ್ಯಗಳ ಬೇರುಗಳಿಗೆ ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ನೀರೊದಗಿಸುತ್ತಲೇ ಇರುವುದು. ಇದರಿಂದ ಇಳುವರಿ ಮತ್ತು ನೀರಿನ ಸಂರಕ್ಷಣೆಯಲ್ಲಿ ಅದ್ಭುತ ಫಲಿತಾಂಶ ಕಾಣಿಸಿತು. ಈ ಮೊದಲಿನ ನೀರಾವರಿ ಪದ್ಧತಿಯಲ್ಲಿ ರೈತರು, ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಗುಣದ ಮೇಲೆ ಅವಲಂಬಿತರಾಗಿರಬೇಕಾಗಿತ್ತು. ಹಿಲ್ಲೆಲ್‌ರ ವಿಧಾನ, ಇದು ಅಗತ್ಯವಿಲ್ಲೆಂದು ತೋರಿಸಿತು. ಈ ತಂತ್ರಜ್ಞಾನವನ್ನೇ ಹಿಲ್ಲೆಲ್ ಮತ್ತಷ್ಟು ಸುಧಾರಿಸಿ ನಿರಂತರವಾಗಿ ಒದಗುವ ಹನಿ ನೀರಾವರಿ ಯನ್ನು ಆವಿಷ್ಕರಿಸಿದರು.

ಇದು ಮಧ್ಯಪ್ರಾಚ್ಯ ಹಾಗೂ ಇತರೆಡೆಗಳ ಜನಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಿತು. ಹಳೆಯ ನೀರಿನ ಸಿಂಪಡಿಕೆಯ ವಿಧಾನಕ್ಕಿಂತ ಹೊಸ ಹನಿ ನೀರಾವರಿಯಲ್ಲಿ ಬೆಳೆದ ಬೆಳೆಗಳ ಇಳುವರಿ ಅಧಿಕ ಎಂಬುದನ್ನು ಹಿಲ್ಲೆಲ್ ಸಾಧಿಸಿ ತೋರಿಸಿದರು. ಒಣಭೂಮಿಯಲ್ಲಿ ಈ ವಿಧಾನ ಅತ್ಯಮೂಲ್ಯ ನೈಸರ್ಗಿಕ ಸಂಪತ್ತೊಂದನ್ನು ಪರಿಣಾಮಕಾರಿಯಾಗಿ ಉಳಿಸಿ ಬಳಸುವುದನ್ನಷ್ಟೇ ಮಾಡುವುದಿಲ್ಲ. ಅದು ಮರಳು ಹಾಗೂ ನೊರಜುಗಲ್ಲಿನ ನೆಲದಲ್ಲಿ ಹಣ್ಣಿನ ಹಾಗೂ ಇತರ ಬೆಳೆಗಳಲ್ಲಿ ಹೆಚ್ಚಳವನ್ನು ಸಾಧಿಸುವಲ್ಲಿ ಪರಿಣಮಿಸುತ್ತದೆ.

ಡಾ.ಹಿಲ್ಲೆಲ್ ಸೂತ್ರ ನಿಜಕ್ಕೂ ‘ಹೆಲ್ಪ್ ಫುಲ್’ ಎಂದು ವಿಶ್ವಕ್ಕೆ ಮನವರಿಕೆಯಾದದ್ದೇ ಆಗ. HELPFUL (Highfrequency, Efficient, Low-volume, Partial-area, Farm-unit, Low-cost) ಎಂಬುದೇ ಅವರ ಸೂತ್ರವಾಯಿತು. ಗರಿಷ್ಠ ಆವರ್ತನ- ಅಂದರೆ ಒಂದೇ ಬಾರಿಗೆ ಹೆಚ್ಚು ನೀರೊದಗಿಸುವ ಬದಲು ಪದೇಪದೇ ಸ್ವಲ್ಪಸ್ವಲ್ಪವೇ ನೀರುಣಿಸು ವುದು. ದಕ್ಷತೆ- ಅಂದರೆ ಸಸಿಗಳಲ್ಲಿ ರೋಗನಿರೋಧಕ ಗುಣಗಳನ್ನು ವೃದ್ಧಿಗೊಳಿಸುವುದು. ಕನಿಷ್ಠ ಪರಿಮಾಣ-ಅಂದರೆ ಕಡಿಮೆ ನೀರು. ಆಂಶಿಕ ಪ್ರದೇಶ-ಅಂದರೆ ವಿಶಾಲ ಪ್ರದೇಶದ ಬದಲು ವಿಭಾಗವಾರು ಕೃಷಿ ಭೂಮಿಯ ವಿಂಗಡಣೆ.

ಹೊಲಗಳ ವಿಭಜನೆ ಹಾಗೂ ಕಡಿಮೆ ವೆಚ್ಚದ ಸೂತ್ರ ಅಲ್ಪಕಾಲದಲ್ಲೇ ರೈತರಲ್ಲಿ ಜನಪ್ರಿಯವಾಯಿತು. ಇದೇ ಊಇಐPಈUಐ ಸೂತ್ರವಾಗಿ ಪ್ರಖ್ಯಾತವಾಯಿತು. ಇಂದು ವಿಶ್ವಾದ್ಯಂತ ಆರು ದಶಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈ ಸೂತ್ರದನ್ವಯ ಕೃಷಿ ಯಶಸ್ವಿಯಾಗಿದೆ. ಮಾತ್ರವಲ್ಲಿ ಗರಿಷ್ಠ ಉತ್ಪಾದನೆಯೂ ಕೈಗೂಡಿದೆ. ಸುಮಾರು ೩೦ ದೇಶಗಳ ಲಕ್ಷಾಂತರ ಮಂದಿಯನ್ನವರು ಪರಿಣಾಮಕಾರಿಯಾಗಿ ತಲುಪಿದ್ದಾರೆ.

ಅದೂ ಸಂಕೀರ್ಣ ವೈಜ್ಞಾನಿಕ ತತ್ವಗಳನ್ನು ಪ್ರಾಯೋ ಗಿಕವಾಗಿ ಅಳವಡಿಸುವ ಮೂಲಕ. ಅದನ್ನು ರೈತರಿಗೆ, ಅಧ್ಯಯನಕಾ ರರಿಗೆ, ಕೃಷಿ ನೀತಿನಿರೂಪಕರಿಗೆ ತಲುಪಿಸುವ ಮೂಲಕ. ನಂತರದ ದಿನಗಳಲ್ಲಿ ಸುಸ್ಥಿರ ನೀರು ನಿರ್ವಹಣೆ ಪದ್ಧತಿಯಲ್ಲಿ ಅನೇಕ ಪ್ರಯೋಗಗಳನ್ನು ಸಾಧ್ಯವಾಗಿಸಿದ ಕೀರ್ತಿ ಡಾ.ಹಿಲ್ಲೆಲ್‌ರದ್ದು. ಮಳೆ ನೀರು ಕೊಯ್ಲು, ಹೊಲದಲ್ಲಿನ ನೀರಿನ ಓಟಕ್ಕೆ ತಡೆ, ಇಳಿಜಾರಿನ ಹೊಲಗಳ ನಿರ್ವಹಣೆ ಇತ್ಯಾದಿ ಪ್ರಯೋಗಗಳು ಬಂಜರು ಭೂಮಿಯನ್ನೂ ಹಸಿರಾಗಿಸಲು ಸಹಕಾರಿಯಾಯಿತು.

೧೯೫೧ರಲ್ಲಿ ಇಸ್ರೇಲ್‌ಗೆ ಅವರು ಮರಳಿದ ಕೂಡಲೇ ಅವರಿಗೆ ಕೃಷಿ ಸಚಿವಾಲಯದಲ್ಲಿ ಸ್ಥಾನ ಸಿಕ್ಕಿತು. ಕೂಡಲೇ ಅವರು ದೇಶದ ಮಣ್ಣು ಮತ್ತು ನೀರಾವರಿ ವಿಧಾನವನ್ನು ದಾಖಲೀಕರಿಸುವ ಕಾರ‍್ಯದಲ್ಲಿ ತೊಡಗಿದರು. ಸ್ವಲ್ಪ ಸಮಯದಲ್ಲೇ ಪದವಿಯನ್ನು ತೊರೆದರು. ಆ ಸಮಯದಲ್ಲಿ ನೆಗೇವ್ ಮರುಭೂಮಿಯಲ್ಲಿ ಅಲ್ಲಿದ್ದ ಅತ್ಯಲ್ಪ ಸಂಪನ್ಮೂಲದಿಂದಲೇ ಬದುಕು ಕಟ್ಟಿಕೊಳ್ಳುವ ಆದರ್ಶದಲ್ಲಿ ನಂಬಿಕೆಯಿಟ್ಟುಕೊಂಡ ಸಮುದಾಯವೊಂದು ಕಾರ‍್ಯನಿರತ ವಾಗಿತ್ತು. ಹಿಲ್ಲೆಲ್ ಅದನ್ನು ಸೇರಿಕೊಂಡರು. ೧೯೫೨ರಲ್ಲಿ ಸ್ಡೆ ಬೋಕರ್ ಎಂಬ ವಸತಿ ತಾಣವೊಂದನ್ನು ಸ್ಥಾಪಿಸಿದರು. ಆಗ ಪ್ರಧಾನಿಯಾಗಿದ್ದ ಡೇವಿಡ್ ಬೆನ್ ಗುರಿಯನ್ ಅಲ್ಲಿಗೊಮ್ಮೆ ಭೇಟಿ ನೀಡಿದರು. ಹಿಲ್ಲೆಲ್‌ರ ಕಾರ‍್ಯದಿಂದ ಎಷ್ಟು ಪ್ರಭಾವಿತರಾದರೆಂದರೆ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ
ಬಂದು ಸ್ಡೆ ಬೋಕರ್‌ನಲ್ಲಿ ನೆಲೆನಿಂತರು.

ಬೆನ್ ಗುರಿಯನ್ ಮತ್ತು ಹಿಲ್ಲೆಲ್ ಜತೆಗೆ ಕೆಲಸ ಮಾಡುತ್ತಲೇ ನಿಕಟ ಸ್ನೇಹಿತರಾದರು. ಯುವ ವಿಜ್ಞಾನಿಯ ಪ್ರತಿಭೆಯನ್ನು ಗುರುತಿಸಿದ ಗುರಿಯನ್, ಅಭಿವೃದ್ಧಿಶೀಲ ದೇಶಗಳಲ್ಲಿ ಸುಸ್ಥಿರ ಕೃಷಿ ತಂತ್ರಜ್ಞಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರನ್ನು ನಾನಾ ಕಡೆಗೆ ಕಳಿಸಿದರು. ಹೀಗೆ ಮೊದಲ ಬಾರಿಗೆ ಅವರು ಹೋದದ್ದು ಬರ್ಮಾಕ್ಕೆ, ೧೯೫೬ರಲ್ಲಿ. ಇದಾದ ಬಳಿಕ ಜೀವಿತದ ಕೊನೆಯವರೆಗೂ ಹಿಲ್ಲೆಲ್ ಜಗತ್ತಿನಾದ್ಯಂತ ಇಂತಹ ಕೆಲಸದಲ್ಲಿ ಸಕ್ರಿಯವಾಗಿಯೇ ಇದ್ದರು. ವಿಶ್ವ ಬ್ಯಾಂಕ್, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಘಟಕ, ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಮುಂತಾದ ಸಂಸ್ಥೆಗಳ ಮೂಲಕ ಆಫ್ರಿಕಾ, ಏಶ್ಯಾ, ದಕ್ಷಿಣ ಅಮೆರಿಕ ಖಂಡಗಳಲ್ಲಿ ಪರಿಣಾಮಕಾರಿ ನೀರಿನ ಬಳಕೆಯನ್ನು ತಿಳಿಸಲು ದುಡಿದಿದ್ದಾರೆ.

ಈಗ ಅವರು ಕೊಲಂಬಿಯಾ ವಿಶ್ವವಿದ್ಯಾ ಲಯದ ಭೂ ಸಂಸ್ಥೆಯ ಒಂದು ಭಾಗವಾದ ಹವಾಮಾನ ವ್ಯವಸ್ಥೆ ಅಧ್ಯಯನ ಕೇಂದ್ರದಲ್ಲಿ ಹಿರಿಯ ವಿಜ್ಙಾನಿ. ಜತೆಗೆ ಬಾಹ್ಯಾಕಾಶ ಅಧ್ಯಯನ ನಡೆಸುವ ನಾಸಾ/ಗೊಡ್ಡಾರ್ಡ್   ದ್ರದಲ್ಲಿ ಕೃಷಿ ಮತ್ತು ಭೂ ತಾಪಮಾನ ವಿಚಾರದಲ್ಲೂ ಅಧ್ಯಯನ. ಜೆರುಸಲೇಂನ ಹೀಬ್ರೂ ಯೂನಿವರ್ಸಿಟಿ, ಮಸ್ಸಾಚುಸೆಟ್ಸ್ ಯೂನಿವರ್ಸಿಟಿ, ಕೊಲಂಬಿ ಯಾ ವಿಶ್ವವಿದ್ಯಾಲಯ ಮತ್ತಿತರೆಡೆ ಅಧ್ಯಯನಕಾರ ಹಾಗೂ ಬೋಧಕರಾಗಿ ದುಡಿದರು. ಮಣ್ಣು ಹಾಗೂ ಜಲ ವಿಜ್ಞಾನದಲ್ಲಿ ೨೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಪಠ್ಯಗಳು ೧೨ ಭಾಷೆಗಳಿಗೆ ಅನುವಾದಗೊಂಡಿವೆ. ೩೦೦ಕ್ಕೂ ಹೆಚ್ಚು ವೈಜ್ಞಾ ನಿಕ ಪ್ರಬಂಧ, ಅಧ್ಯಯನ ವರದಿಗಳನ್ನು ಪ್ರಕಟಿಸಿದ್ದಾರೆ.

ರಾಜ್ಯವನ್ನು ಕಾಡುತ್ತಿರುವ ‘ಅನ್ನಭಾಗ್ಯ’ ಸವಾಲನ್ನು ಎದುರಿಸುವಲ್ಲಿ ಹಿಲ್ಲೇಲ್‌ನಂಥವರ ಅಧ್ಯಯನ, ಇಸ್ರೇಲ್‌ನಲ್ಲಿ ಅವರು ಮಾಡಿ ಹೋದ ಕ್ರಾಂತಿಯನ್ನು ಕಣ್ಣಾರೆ ನೋಡಿ ಬರುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಮಾನ್ಯ ಮುಖ್ಯಮಂತ್ರಿ ಯವರೇ, ಈಗಾದರೂ ಈ ಬಗ್ಗೆ ಗಮನ ಹರಿಸಿ. ಇನ್ನೂ ಐದು ವರ್ಷಗಳ ಭರಪೂರ ಅವಕಾಶ ನಿಮಗಿದೆ. ಇಂಥ ಉಪಕ್ರಮಗಳನ್ನು ಸಿದ್ದರಾಮಯ್ಯನವರಂಥ ಗ್ರಾಮೀಣ ಪ್ರದೇಶದ ಹಿನ್ನೆಲೆಯ ಮುಖ್ಯಮಂತ್ರಿಗಳಿಂದ ಅನಿರೀಕ್ಷಿಸುವುದು ತಪ್ಪೇನಿಲ್ಲ, ಅಲ್ಲವೇ?