Tuesday, 17th September 2024

ಅನ್ನದಾತನ ಗೋಳು ಕೇಳುವವರು ಯಾರು ?

ಕೃಷಿರಂಗ

ಮರಿಲಿಂಗ ಮಾಲಿಪಾಟೀಲ್

ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತವರ ಬಳಿ ‘ಸರ್ವರ್ ಡೌನ್’ ಎಂಬ ಒಂದು ಅಸವಿದೆ. ಈ ನೆಪ ಹೇಳಿದರೆ ತಡವಾಗಬಹುದೆಂದು, ತಮ್ಮ ನೋಂದಣಿ ಬೇಗ ಆಗಲಿ ಎಂಬ ಕಾರಣಕ್ಕೆ ರೈತರು ಮಧ್ಯರಾತ್ರಿಯೇ ಕೌಂಟರ್ ಬಳಿ ಚಪ್ಪಲಿ, ಬ್ಯಾಗುಗಳನ್ನಿಟ್ಟು ಸ್ಥಳ ಕಾಯ್ದಿರಿಸುವಂಥ ಪರಿಸ್ಥಿತಿ ಉದ್ಭವವಾಗಿದೆ. ರೈತರಿಗೆ ‘ಡಿಜಿಟಲ್ ಇಂಡಿಯಾ’ ಮೇಲೆ ನಂಬಿಕೆ ಬಂದಿಲ್ಲ ಎಂಬುದಕ್ಕೆ ಇದು ಸಾಕ್ಷಿ.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ. ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದೇವೆ. ವಿದೇಶಗಳ ಲ್ಲಿರುವ ಎಂಜಿನಿಯರ್‌ಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕೃತಕ ಬುದ್ಧಿಮತ್ತೆ ಆಧರಿಸಿದ ಟೀಚರ್ ‘ಐರಿಸ್’ ಭಾರತದಲ್ಲಿ ಪಾಠ ಮಾಡಲು ಆರಂಭಿಸಿಯೂ ಆಯಿತು. ಹೀಗೆ ತಂತ್ರಜ್ಞಾನ ಬೆಳವಣಿಗೆಯ ದಾರಿಯಲ್ಲಿ ಭಾರತ ದಾಪುಗಾಲಿಡುತ್ತಾ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಿತ್ತಿದ ‘ಡಿಜಿಟಲ್ ಇಂಡಿಯಾ’ ಎಂಬ ಕನಸು ಸಾಕಾರವಾಗುವ ಹಾದಿಯಲ್ಲಿದೆ ಎಂದುಕೊಳ್ಳುತ್ತಿದ್ದೇವೆ.

ಆದರೆ ನಮ್ಮ ರೈತರಿಗೆ ಮಾತ್ರ ಡಿಜಿಟಲ್ ಇಂಡಿಯಾದಲ್ಲಿ ಪಾಲುದಾರರಾಗುವ ಅದೃಷ್ಟ ಇನ್ನೂ ಕೂಡಿಬಂದಿಲ್ಲವೆ? ಈ ಪ್ರಶ್ನೆ ಉದ್ಭವವಾಗಿದ್ದು, ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಲು ರೈತರು ಮಧ್ಯರಾತ್ರಿ ಯಲ್ಲಿ ಬಂದು ಸರದಿಯ ಸಾಲಿನಲ್ಲಿ ನಿಂತದ್ದನ್ನು ನೋಡಿದಾಗ. ತೆಂಗು ಹೆಚ್ಚಾಗಿ ಬೆಳೆಯುವ ೭ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ‘ನಾಫೆಡ್’ (ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇ ಷನ್ ಆಫ್ ಇಂಡಿಯಾ ಲಿ.,) ಮೂಲಕ ಆರಂಭಿಸುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿತ್ತು.

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಂದ ನೇರವಾಗಿ ಕೊಬ್ಬರಿ ಖರೀದಿಸುವುದು ಈ ನಿರ್ದೇಶನದ ಹಿಂದಿನ ಉದ್ದೇಶವಾಗಿತ್ತು. ನಿರ್ಧಾರ ಸ್ವಾಗತಾರ್ಹವೇ. ಆದರೆ ನಿರ್ಧಾರವನ್ನು ಕಾರ್ಯರೂಪಕ್ಕೆ ಇಳಿಸಿದ್ದು ಮಾತ್ರ ಸಮರ್ಪಕವಾಗಿರಲಿಲ್ಲ. ರೈತರು ಮಧ್ಯರಾತ್ರಿಯೇ ಖರೀದಿ ಕೇಂದ್ರಕ್ಕೆ
ಬಂದು ಸರದಿಯಲ್ಲಿ ಕಾದು ಕುಳಿತದ್ದೇ ಅದಕ್ಕೆ ಸಾಕ್ಷಿ.

ತುರುವೇಕೆರೆ, ತಿಪಟೂರಿನ ಎಪಿಎಂಸಿ ಕೇಂದ್ರ ಗಳಿಗೆ ರೈತರು ರಾತ್ರೋರಾತ್ರಿ ಧಾವಿಸಿ ಬಂದು ಜಮಾಯಿಸಿದ್ದಾರೆ. ಚಪ್ಪಲಿಗಳನ್ನು ಬಿಟ್ಟು ಕ್ಯೂ ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ. ಬಳಿಕ ನಿದ್ರೆ ತಡೆಯಲಾರದೆ ಮಲಗಿದ್ದಾರೆ. ಕೊಬ್ಬರಿ ಬೆಳೆಗೆ ಕೇಂದ್ರ ಘೋಷಿಸಿರುವ ಬೆಂಬಲ ಬೆಲೆಯ ಲಾಭ ತಮಗೇ ಸಿಗಬೇಕೆಂದು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಬಂದಿದ್ದಾರೆ ಎಂದರೆ ಭಾರತವು ‘ಡಿಜಿಟಲ್ ಇಂಡಿಯಾ’ದಲ್ಲಿದೆಯಾ ಅಥವಾ ಇದು ೪೦ ವರ್ಷಗಳ ಹಿಂದಿನ ಭಾರತವಾ? ಎಂದು ಆಶ್ಚರ್ಯವೂ ಆಗುತ್ತದೆ.

ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ರೈತರಿಂದ ನೇರವಾಗಿ ಕೊಬ್ಬರಿ ಖರೀದಿಸಬೇಕೆಂಬ ನಿರ್ಧಾರ ಸಮಂಜಸವಾದದ್ದೇ. ಆದರೆ ರೈತರು ತಮ್ಮ ಮೊಬೈಲ್ ಮೂಲಕ ಮನೆಯಿಂದಲೇ ನೋಂದಣಿ ಮಾಡಿಕೊಳ್ಳುವಂತಾಗಿಲ್ಲ ಯಾಕೆ? ಸುಧಾರಿತ/ಆಧುನಿಕ ಮೊಬೈಲ್‌ಗಳನ್ನು ರೈತರೂ ಇಂದು ಬಳಸುತ್ತಿದ್ದಾರೆ. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಯಾವುದೇ ವಸ್ತು ಬೇಕಿದ್ದರೂ ಮನೆಗೆ ಬಂದು ಬೀಳುತ್ತದೆ. ತೊಗರಿಬೇಳೆ ಖರೀದಿಸಬೇಕಿದ್ದರೂ ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ಸಾಕು. ರೈತರು ಗೊಬ್ಬರವನ್ನು ಸಹ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಸಾಧ್ಯ ವಿದೆ? ಅಷ್ಟೇ ಯಾಕೆ, ವಿಷವನ್ನೂ ಆನ್‌ಲೈನ್‌ನಲ್ಲಿ ಖರೀದಿಸಿದರೂ ಅದು ಮನೆಗೆ ಬಂದು ತಲುಪುತ್ತದೆ.

ಹೋಗಲಿ, ರೈತರು ಆನ್‌ಲೈನ್ ವ್ಯವಹಾರದಲ್ಲಿ ಪಳಗಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೂ ಮಧ್ಯರಾತ್ರಿಯಲ್ಲಿ ಬಂದು ಕ್ಯೂ ನಿಲ್ಲುವ ಪದ್ಧತಿ ಬೇಕೇ? ಹೆಚ್ಚು ಕೌಂಟರ್‌ಗಳನ್ನು ತೆರೆದು ರೈತರನ್ನು ಅವರು ಬಂದ ಒಂದೆರಡು ಗಂಟೆಗಳಲ್ಲಿ ಕಳುಹಿಸುವುದು ಸಾಧ್ಯವಿಲ್ಲವೆ? ಸಾಧ್ಯವಿದೆ ಎಂಬ ನಂಬುಗೆ ಇನ್ನೂ ಅನೇಕರಿಗೆ ಬಂದಿಲ್ಲ. ಯಾಕೆಂದರೆ ಯಾವುದೇ ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತವರ ಬಳಿ ಒಂದು ಅತಿದೊಡ್ಡ ಅಸವಿದೆ. ಅದೇ ಸರ್ವರ್ ಡೌನ್. ಈ ನೆಪ ಹೇಳಿದರೆ ನೋಂದಣಿ ತಡವಾಗಬಹುದು. ಹಾಗಾಗಿ ತಮ್ಮ ನೋಂದಣಿ ಬೇಗ ಆಗಲಿ ಎಂಬ ಕಾರಣಕ್ಕೆ ರೈತರು ರಾತ್ರಿಯೇ ಬಂದು ಚಪ್ಪಲಿ, ಬ್ಯಾಗ್ ಇಟ್ಟು ನಿದ್ರೆ ಮಾಡುವಂಥ ಪರಿಸ್ಥಿತಿ ಉದ್ಭವವಾಗಿದೆ.

ರೈತರಿಗೆ ‘ಡಿಜಿಟಲ್ ಇಂಡಿಯಾ’ ಮೇಲೆ ನಂಬಿಕೆ ಬಂದಿಲ್ಲ ಎಂಬುದನ್ನಷ್ಟೇ ಇದು ಸೂಚಿಸುತ್ತದೆ. ರೈತರಿಗೆ ಮೊದಲು ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಬರಬೇಕು. ಖರೀದಿಯ ನೋಂದಣಿ ನ್ಯಾಯಬದ್ಧವಾಗಿ ಇರುತ್ತದೆ ಎಂಬ ವಿಶ್ವಾಸ ಮೂಡಬೇಕು. ರೈತ ಮನೆಯಿಂದಲೇ ರಿಜಿಸ್ಟ್ರೇಷನ್ ಮಾಡು ವುದು ಸಾಧ್ಯವಾಗದಿದ್ದರೆ ಕನಿಷ್ಠಪಕ್ಷ ಖರೀದಿ ಕೇಂದ್ರಕ್ಕೆ ಹೋದರೆ ಒಂದೆರಡು ಗಂಟೆಗಳಲ್ಲಿ ಕೆಲಸ ಮುಗಿಸಿ ಬರುತ್ತೇವೆ ಎಂಬ ಭರವಸೆ ಹುಟ್ಟಬೇಕು. ಆ ಭರವಸೆ ಇಲ್ಲದಿದ್ದಾಗ, ತಡವಾಗಬಹುದು ಎಂಬ ಅಪನಂಬಿಕೆ ಹುಟ್ಟಿದಾಗ ರಾತ್ರೋರಾತ್ರಿ ಬಂದು ಕ್ಯೂ ನಿಲ್ಲುವ ದುರವಸ್ಥೆ ಸಂಭವಿಸುತ್ತದೆ. ರಾತ್ರಿ ಬಂದು ಕ್ಯೂ ನಿಂತರು ಎಂಬುದನ್ನು ಕೇಳಿ ಅಚ್ಚರಿ ಪಡುವವರಿಗೆ ರೈತರ ಆತಂಕ ಅರ್ಥವಾಗುವುದಿಲ್ಲ.

ಡಿಜಿಟಲ್ ಜಗತ್ತಿನ ಮೇಲೆ ಗುಮಾನಿ ಪಡುವವರನ್ನು ಸಮರ್ಥಿಸುವಂತೆ ತುಮಕೂರಿ ನಲ್ಲಿ ಮೊದಲ ದಿನವೇ ಸರ್ವರ್ ಡೌನ್ ಎಂಬ ಗುಮ್ಮ ಕಾಡಿತು.
ರೈತರ ಆತಂಕಕ್ಕೆ ಇಂಬು ಕೊಡುವಂಥ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ! ನಾಫೆಡ್ ಕೇಂದ್ರ ಗಳ ಮೂಲಕ ಖರೀದಿಸುವ ಆದೇಶ ಹೊರ ಬಿದ್ದದ್ದೇ ಮಧ್ಯವರ್ತಿಗಳ ಹಾವಳಿ ತಪ್ಪಿಸಲು. ಆದರೆ ಚಿಕ್ಕಮಗಳೂರಿನಲ್ಲಿ ಮಧ್ಯವರ್ತಿಗಳು ರಂಗೋಲಿ ಕೆಳಗೆ ನುಸುಳಿದ್ದಾರೆ. ವರ್ತಕರು ಈಗಾಗಲೇ ರೈತರಿಗೆ ಹಣವನ್ನು ಮುಂಗಡವಾಗಿ ನೀಡಿ ಕೊಬ್ಬರಿ ಖರೀದಿಸಿ ಸಂಗ್ರಹಿಸಿ ಇಟ್ಟು ಕೊಂಡಿದ್ದಾರೆ.

ಬೆಂಬಲ ಬೆಲೆಯ ಘೋಷಣೆ ಹೊರಬಿದ್ದ ತಕ್ಷಣ ರೈತರನ್ನು ಖರೀದಿ ಕೇಂದ್ರಕ್ಕೆ ಕರೆತಂದು ನೋಂದಣಿ ಮಾಡಿಸಿ ಕಾರ್ಡ್ ಪಡೆದಿದ್ದಾರೆ. ಈಗ ಹಣ ರೈತರ ಹೆಸರಿಗೆ ಬಂದರೂ ಬಳಿಕ ಅದನ್ನು ವರ್ತಕರಿಗೆ ಕೊಡ ಬೇಕಿದೆ. ಚಿಕ್ಕಮಗಳೂರಿನಲ್ಲಿ ರೈತರೂ ನೋಂದಾ ಯಿಸಿಕೊಂಡಿದ್ದಾರೆ. ಆದರೆ ಬಹುಪಾಲು ನೋಂದಣಿ ಮಾಡಿದವರು ಮಧ್ಯವರ್ತಿಗಳೇ ಎಂದು ಹೇಳಲಾಗಿದೆ. ಇಂಥ ಘಟನೆಗಳಾದಾಗ ಜನರಿಗೆ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟುವುದು ಸತ್ಯ. ಜತೆಗೆ ಸರಕಾರ ಖರೀದಿಗೆ ಒಂದಷ್ಟು ಮಿತಿಯನ್ನು ಹೇರಿ ರುತ್ತದೆ. ಆ ಮಿತಿ ತಲುಪಿದಾಗ ಖರೀದಿ ನಿಲ್ಲಿಸಿ ದರೆ ಸರದಿಯಲ್ಲಿ ನಿಂತಿರುವ ರೈತ ಕಂಗಾ ಲಾಗುತ್ತಾನೆ. ಹೀಗಾಗಿ ತನ್ನ ಸರದಿ ಬೇಗ ಬರಬೇಕೆಂದಾದರೆ ತಾನು ಮೊದಲು ಸರದಿಯಲ್ಲಿ ನಿಲ್ಲಬೇಕು ಎಂಬ ಕಾತರದಲ್ಲಿ ರಾತ್ರಿಯೇ ಬಂದು ಸರದಿಯ ಸಾಲಿನಲ್ಲಿ ಚಪ್ಪಲಿ ಇಟ್ಟು ಮಲಗು ತ್ತಾನೆ.

ಈ ವಿಷಯ ಕೇಳಿದಾಗ ನನ್ನ ಸ್ನೇಹಿತ ರೊಬ್ಬರು ೪೦ ವರ್ಷಗಳ ಹಿಂದಿನ ಸ್ಥಿತಿಯ ಬಗ್ಗೆ ಹೇಳಿದರು. ಆಗ ದಕ್ಷಿಣ ಕನ್ನಡದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಅಡಕೆ ಖರೀದಿ ಕೇಂದ್ರಗಳು ಕಡಿಮೆ ಸಂಖ್ಯೆಯಲ್ಲಿದ್ದವು. ಅಡಕೆ ಬೆಳೆಗಾರರು ಖಾಸಗಿ ವರ್ತಕರಿಗೆ ಮಾರಿದರೆ ಸರಿಯಾದ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಕ್ಯಾಂಪ್ಕೋ ಸಂಸ್ಥೆಯ ಮೂಲಕವೇ ಮಾರಾಟ ಮಾಡಲು ಬಯಸು ತ್ತಿದ್ದರು. ಸಾವಕಾಶವಾಗಿ ಹಣ ಬಂದರೆ ಸಾಕು ಎನ್ನುವ ದೊಡ್ಡಮಟ್ಟದ ಬೆಳೆಗಾರರು ಕ್ಯಾಂಪ್ಕೋ ಸಂಸ್ಥೆಗೆ ಅಡಕೆ ತಲುಪಿಸಿ ಹಣ ಖಾತೆಗೆ ಬಂದರೆ ಸಾಕು ಎಂದುಕೊಳ್ಳುತ್ತಿದ್ದರು. ಆದರೆ ತುರ್ತಾಗಿ ಹಣ ಬೇಕಿರುವ ಚಿಕ್ಕ ಹಿಡುವಳಿದಾರರು ಕ್ಯಾಂಪ್ಕೋ ಸಂಸ್ಥೆಯೊಂದರ ಮಾರಾಟ ಕೇಂದ್ರದ ಆವರಣಕ್ಕೆ ಮುಂಜಾನೆ ೬ ಗಂಟೆಗೆ ಬಂದು ಕ್ಯೂ ನಿಲ್ಲುತ್ತಿದ್ದರು.

ಅಧಿಕಾರಿಗಳು ಬೆಳಗ್ಗೆ ೧೦ ಗಂಟೆಗೆ ಬಂದು ಗುಣಮಟ್ಟ ಪರೀಕ್ಷಿಸಿ ಖರೀದಿ ಆರಂಭಿಸುವ ವೇಳೆಗೆ ೨೫೦ಕ್ಕೂ ಅಧಿಕ ರೈತರು ಕ್ಯೂನಲ್ಲಿ ಜಮಾಯಿಸಿರು ತ್ತಿದ್ದರು. ಅಂದರೆ ೮ ಗಂಟೆಗೆ ಬಂದು ಸರದಿಯ ಸಾಲಿನಲ್ಲಿ ನಿಂತವರು ಅಡಕೆ ಬೆಳೆ ಮಾರಿ ಹಣ ಪಡೆದು ಹೊರ ಬರುವಾಗ ಸಂಜೆ ನಾಲ್ಕು ಗಂಟೆ  ಆಗು ತ್ತಿತ್ತು. ನಂತರದ ದಿನ ಗಳಲ್ಲಿ ಖರೀದಿ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಇದು ಅಂದೇ ಪ್ರದೇಶದಲ್ಲಿ ಅದೇ ಕೆಲಸವನ್ನು ಒಬ್ಬ ರೈತ ಅರ್ಧ ಗಂಟೆಯಲ್ಲಿ ಮುಗಿಸುತ್ತಾನೆ.

ಆಧುನಿಕತೆ ಬಂದು ಖರೀದಿ ಕೇಂದ್ರಗಳು ಹೆಚ್ಚುತ್ತಿವೆ. ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಕುಳಿತಲ್ಲಿಗೇ ಪ್ರಪಂಚದ ಯಾವ ಮೂಲೆಯಿಂದಲೂ ಏನನ್ನಾದರೂ ತರುವ ಪರಿಸ್ಥಿತಿ ಉದ್ಭವವಾಗುತ್ತಿದೆ. ಆದರೆ ತುಮಕೂರಿನಲ್ಲಿ ಮಾತ್ರ ರೈತ ಮಧ್ಯರಾತ್ರಿಯಲ್ಲಿ ಬಂದು ಸರದಿಯ ಸಾಲಿನಲ್ಲಿ ನಿಲ್ಲುತ್ತಾನೆ. ಡಿಜಿಟಲ್ ಜಗತ್ತಿನ ಪರಿಕಲ್ಪನೆ ಸಾಕಾರವಾಗಬೇಕಿದ್ದರೆ ಕ್ರಮಿ ಸಬೇಕಿರುವ ದಾರಿ ದೂರವಿದೆ!

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *