Sunday, 15th December 2024

ಹೊನ್ನಶೂಲದ ತಿವಿತವೂ ಇಲ್ಲ, ಬಗಣಿ ಗೂಟವೂ ಅಲ್ಲ; ಅಂತರಂಗದ ನೇರ ಅಭಿವ್ಯಕ್ತಿ

ಪ್ರತಿಕ್ರಿಯೆ

ಟಿ.ದೇವಿದಾಸ್

ಉಡುಪಿಯ ರಾಜಾಂಗಣದಲ್ಲಿ ನಡೆದ ಬನ್ನಂಜೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ
ವಿಶ್ವಪ್ರಿಯ ತೀರ್ಥರು ಬನ್ನಂಜೆಯವರ ಬಗ್ಗೆ ಆಡಿದ ಮಾತುಗಳನ್ನು ಆರೋಪಿಸುತ್ತ ಶ್ರೀನಿಸುತ ಎಂಬವರು ಮೊದಲು ಹೊನ್ನ ಶೂಲದ ತಿವಿತ, ಕಡೆಗೆ ಬಗಣಿ ಗೂಟ ಎಂದು ಅರ್ಥೈಸಿ ವ್ಯಂಗ್ಯವಾಡಿದ್ದಾರೆ.

ಇದು ಅಸಂಬದ್ಧ ಅಪಾರ್ಥ ಪ್ರಲಾಪವೆಂದು ಕಾಣಿಸುತ್ತದೆ. ಪ್ರಾಯಃ ಶ್ರೀಗಳ ಮಾತುಗಳನ್ನು ಕೇಳಿದ ಯಾರಿಗೂ ಹೀಗೆಯೇ ಎಂದು ಅನಿಸದೆ ಇರಲಾರದು. ಶ್ರೀಗಳ ಮಾತಿನ ಧ್ವನಿಯನ್ನು ಸರಿಯಾಗಿ ಅರ್ಥೈಸದೇ ಬರೆದ ಶ್ರೀನಿಸುತರು ಅಸಂಬದ್ಧ ಅಪಾರ್ಥ ಪ್ರಲಾಪವನ್ನೂ ಅಂತ್ಯದವರೆಗೂ ಭಾವಿಸಿ ದಂತಿದೆ. ಇದು ಅವರ ಬರಹದಲ್ಲಿ ಸ್ಪಷ್ಟ.

ಮೊದಲಾಗಿ ಒಂದು ಮಾತನ್ನು ನೇರವಾಗಿಯೇ ಇಲ್ಲಿ ಹೇಳಿಬಿಡುತ್ತೇನೆ: ನಾನು ಯಾರ ಯಾವ ಮಾತನ್ನೂ ಪರವಹಿಸಿ ವಕಾಲತ್ತನ್ನು ಇಲ್ಲಿ ಮಾಡ ಹೋಗುವುದಿಲ್ಲ.  ಯಾಕೆಂದರೆ ನನಗದು ಅನಿವಾರ್ಯವೂ ಅಲ್ಲ, ಅಗತ್ಯವೂ ಅಲ್ಲ. ಆದರೆ ಶ್ರೀ ವಿಬುಧೇಶ ತೀರ್ಥರು, ವಿಶ್ವಪ್ರಿಯ ತೀರ್ಥರು ಹಾಗೂ ಬನ್ನಂಜೆಯವರ ಬಗ್ಗೆ ಸ್ವಲ್ಪಮಾತ್ರ ಗೊತ್ತಿರುವುದರಿಂದ (ಮೂವರಲ್ಲೂ ಸ್ವಲ್ಪಮಟ್ಟಿಗಿನ ಸಂಪರ್ಕವೂ ಇತ್ತು) ಇಲ್ಲಿ ಮಾತಾಡಬೇಕೆನಿಸಿ ಈ ವಿಚಾರದಲ್ಲಿ ಬರೆಯುತ್ತಿದ್ದೇನೆ.

ನಾನಂತಲ್ಲ, ಈ ಮೂವರ ಬಗ್ಗೆ ಗೊತ್ತಿರುವ ಯಾರೂ ಬರೆಯಬಹುದು. ಶ್ರೀಗಳ ವಿಡಿಯೋವನ್ನು ನಾನು ಕೇಳಿದೆ. ಶ್ರೀನಿಸುತರ
ಅಭಿಪ್ರಾಯಗಳನ್ನು ಓದಿದ ಅನಂತರ. ಸುಮಾರು 16 ನಿಮಿಷ 15 ಸೆಕೆಂಡುಗಳ ಕಾಲ ಶ್ರೀಗಳು ಬನ್ನಂಜೆಯವರ ಬಗ್ಗೆ ನೇರವಾಗಿ, ಸ್ಪಷ್ಟವಾಗಿ, ಹೇಳಬೇಕಾದ ಸಂಗತಿಗಳನ್ನು ಸರಿಯಾದ ರೀತಿಯಲ್ಲಿ ಸಮರ್ಥವಾಗಿ ನಿಷ್ಕಲ್ಮಷವಾಗಿ ಹೇಳಿದ್ದಾರೆ. ಆರಂಭದಿಂದ ಕೊನೆಯವರೆಗೂ ಬನ್ನಂಜೆಯವರ ಬಗ್ಗೆ ಎಲ್ಲಿಯೂ ಯಾವ ವಿಚಾರವನ್ನು ಪ್ರಸ್ತುತಪಡಿಸುವಾಗಲೂ ಶ್ರೀಗಳ ಮಾತಿನಲ್ಲಾಗಲೀ, ಮಾತಿನ ದನಿಯಲ್ಲಾಗಲೀ ಅಪಾರ್ಥ ಕಾಣಿಸುವುದಿಲ್ಲ.

ಅಪಾರ್ಥವನ್ನು ಕಾಣಲೂ ಸಾಧ್ಯವಿಲ್ಲ. ಇದ್ದುದ್ದನ್ನು ಇದ್ದಹಾಗೆ ಹೇಳಿದರೆ ಅಪಾರ್ಥಕ್ಕೆಡೆಯುಂಟೆಲ್ಲಿ? ಆದರೂ ಶ್ರೀನಿಸುತರಿಗೆ ಅಪಾರ್ಥವೇ ಸ್ಫುರಿಸಿದೆ. ಇದು ಯಾಕೆ ಅಂತ ಅರ್ಥವಾಗುವುದಿಲ್ಲ. ಪೂರ್ವಗ್ರಹವೇನಾದರೂ ಇರಬಹುದೆ? ಬನ್ನಂಜೆಯವರ ದೋಷಗಳ ಬಗ್ಗೆ ಯಾರೂ ಏನು ಹೇಳಲೇಬಾರದು ಎಂದೇನೂ ಯಾರು ಫರ್ಮಾನು ಹೊರಡಿಸಲಿಲ್ಲ. ಹಾಗೆ ಫರ್ಮಾನು
ಹೊರಡಿಸಲೂ ಆಗದು. ದೋಷಾನ್ನ ವಾಚಯಿತ್ವಾ ಋಣಮೋಚನಂ – ಅಗಲಿದ ವ್ಯಕ್ತಿಯಲ್ಲಿರುವ ದೋಷಗಳನ್ನು ಹೇಳಲೇ ಬಾರದು ಎಂದೇನಿಲ್ಲ. ಹೇಳಿದರೆ ತಪ್ಪೂ ಅಲ್ಲ. ಬನ್ನಂಜೆಯವರಲ್ಲಿ ಇರುವ ವಿಶೇಷವಾದ ಪ್ರತಿಭೆ, ವಿದ್ವತ್ತು, ಅವರ ಶಕ್ತಿ –
ಸಾಮರ್ಥ್ಯದ ಒಟ್ಟೂ ವಿಸ್ತಾರದ ಬಗ್ಗೆ ಶ್ರೀಗಳು ನೇರವಾಗಿ ಆಡುತ್ತಲೇ ಅವರಲ್ಲಿರುವ ದೋಷವನ್ನೂ ಎಲ್ಲರೆದುರು ಹೇಳಿದ್ದಾರೆ.

ಹಾಗಾದರೆ ಅವರಲ್ಲಿ ಆ ದೋಷವಿರಲಿಲ್ಲವೆ? ಇದ್ದಿರಲೂಬಹುದು. ಇಲ್ಲದಿರಲೂ ಬಹುದು. ಇದ್ದುದ್ದನ್ನು ಮಾತ್ರ ಶ್ರೀಗಳು ಹೇಳುತ್ತಾ ಮತ್ತೆ ಅವರು ಹುಟ್ಟಿಬರಲಿ ಎಂದು ಮನಸಾ ಹಾರೈಸುತ್ತ, ಆಶಿಸುತ್ತ, ಹೊಸ ಅಂಗಿಯನ್ನು ಧರಿಸಿ ಬರುವಾಗ ಅದರಲ್ಲಿ
ಅಹಂಕಾರ ಕಡಿಮೆಯಿರಲಿ ಎಂದು ಹೇಳುವಲ್ಲಿ ಒಳ್ಳೆಯತನವನ್ನೇ ಹಾರೈಸಿದರೆ ತಪ್ಪೆ? ಇದರಲ್ಲೂ ತಪ್ಪೇನು ಬಂತು? ಅವರು ತಮ್ಮ ಕಾರ್ಯವನ್ನು ಮುಂದುವರಿಸಲು ಅವರು ಮತ್ತೆ ಹುಟ್ಟಿ ಬರಲಿ ಎನ್ನುವಾಗ ಅವರ ಪರಿಪೂರ್ಣ ವ್ಯಕ್ತಿತ್ವವನ್ನು ಬಯಸಿ, ಬನ್ನಂಜೆಯವರು ಮತ್ತೆ ಹುಟ್ಟಿ ಬರಲಿ ಎಂಬ ಸದಾಶಯವೂ ಸದಾಗ್ರಹವೂ ಇರಲೆಂಬ ಔನ್ನತ್ಯದ ಹಂಬಲ ಶ್ರೀಗಳ ಮಾತಿನಲ್ಲಿದೆ.

ಇದನ್ನು ಶ್ರೀನಿಸುತರು ಕಾಣದೇ ಹೋದದ್ದು ದುರ್ದೈವ! ಅಷ್ಟಕ್ಕೂ ಇದರಲ್ಲೇನು ಬಂತು ಕೊಂಕು? ಮಹನೀಯನೊಬ್ಬ ಪರಿಪೂರ್ಣ ವ್ಯಕ್ತಿತ್ವವನ್ನು ಪಡೆದು ಈ ನೆಲದಲ್ಲಿ ಮತ್ತೆ ಹುಟ್ಟಿಬಂದು ತನ್ನ ಕಾರ್ಯವನ್ನು ಮುಂದುವರಿಸುವಂತಾಗಲಿ ಎಂದು ಶ್ರೀಕೃಷ್ಣ – ಮುಖ್ಯಪ್ರಾಣರಲ್ಲಿ ಬೇಡಿದ್ದರಲ್ಲಿ ಅಪಾರ್ಥವನ್ನೇ  ಕಾಣುವುದು ಸಹಿಸಲಾಗದ ಅಸಹನೆಯಾಗಿ ಕಾಣುತ್ತದೆ!

ಏಳುನೂರು ವರ್ಷಗಳ ಹಿಂದೆ ಶ್ರೀ ಹೃಷಿಕೇಶ ತೀರ್ಥರು ತಾಳೆಗರಿಯಲ್ಲಿ ಬರೆದಿಟ್ಟ ಸರ್ವಮೂಲ ಗ್ರಂಥದ ಬಗ್ಗೆಯಾಗಲಿ, ಅದನ್ನು ಸಂಶೋಧಿಸಿದ ಬನ್ನಂಜೆಯವರ ಶುದ್ಧಪಾಠದ ಬಗ್ಗೆಯಾಗಲಿ ಶ್ರೀಗಳು ಉಡಾಫೆಯಾಗಿ ಮಾತಾಡಿದಂತೆ ಕಾಣುವುದಿಲ್ಲ. ಹೃಷಿಕೇಶ ತೀರ್ಥರ ಸರ್ವಮೂಲ ಗ್ರಂಥಕ್ಕೆ ನೀಡುವ ಪ್ರಾಶಸ್ತ್ಯದ ಬಗ್ಗೆ ಬನ್ನಂಜೆಯವರಲ್ಲಿ ಕೇಳಿದಾಗ ಇತ್ತೆ ಬರ್ಪೆ ಎಂದು
ಹೇಳಿಹೋದದ್ದರ ಬಗ್ಗೆೆ ಶ್ರೀಗಳು ನೆನಪು ಮಾಡಿಕೊಂಡದ್ದು ಅವರ ಮಾತುಗಳಲ್ಲಿದೆ. (ಈ ವಿಚಾರದಲ್ಲಿ ಶ್ರೀಗಳಲ್ಲೇ ತಾವಾಡಿದ ಮಾತಿನ ಸಂದರ್ಭದ ಬಗ್ಗೆೆ ವಿಚಾರಿಸುವುದೊಳಿತು) ಈ ಸಂದರ್ಭದ ಮಾತುಗಳಲ್ಲಿ ಯಾರನ್ನೂ, ಯಾವುದನ್ನೂ ಕೀಳಂದಾಜಿಸುವ ಕುಯುಕ್ತ ಬುದ್ಧಿ ಕಂಡಿದ್ದು ಶ್ರೀನಿಸುತರಿಗೇ ಹೊರತು ಶ್ರೀಗಳಿಗಲ್ಲ.

ಇನ್ನು ಬನ್ನಂಜೆಯವರು ಅಮೆರಿಕಾಕ್ಕೆ ಹೋದ ವಿಚಾರ. ತಮ್ಮ ಗುರುಗಳು ಅವರಿಗೆ ಸಹಾಯ ಮಾಡಿದ್ದನ್ನು ನೆನಪಿಸುವುದರ ಹಿಂದಿನ ಸಾಂದರ್ಭಿಕತೆಯನ್ನು ಅರ್ಥೈಸಿ ಕೊಂಡರೆ ಶ್ರೀಗಳ ಮಾತು ಯಾಕೆ ಉಸಾಬರಿ ಎಂದು ಶ್ರೀನಿಸುತ ಹೇಳುವಲ್ಲಿ ಉದ್ಧಟತನವೇ ಕಾಣುತ್ತದೆ. ತಮ್ಮ ಮಠ, ತಮ್ಮ ಗುರುಗಳೊಂದಿಗೆ ಬನ್ನಂಜೆಯವರು ಹೊಂದಿದ್ದ ತಾದಾತ್ಮ್ಯ ಹಾಗೂ ಬನ್ನಂಜೆಯವರ ವಿದ್ವತ್ತನ್ನು ತಮ್ಮ ಗುರುಗಳು ಬಹುವಾಗಿ ಮೆಚ್ಚಿ, ಅದು ಅಮೆರಿಕಕ್ಕೂ ಪಸರಿಸಬೇಕೆಂಬ ಸದುದ್ದೇಶ, ಸದಾಗ್ರಹದಿಂದ ಬನ್ನಂಜೆಯವರನ್ನು ಅಲ್ಲಿಗೆ ಕಳಿಸುವಲ್ಲಿ ತೋರಿದ ಕಾಳಜಿ ಮತ್ತು ಜವಾಬ್ದಾರಿಯನ್ನು ಶ್ರೀಗಳು ನೆನಪಿಸಿದರೇ ಹೊರತು ಹೇಳಬಾರದ್ದನ್ನು ಹೇಳುವ ಉಸಾಬರಿಯನ್ನು ಹೊತ್ತು ಕೊಂಡಿಲ್ಲ.

ಅಂಥ ದರ್ದು ಶ್ರೀಗಳಿಗಿಲ್ಲ. ಮುಖ್ಯವಾಗಿ ಬನ್ನಂಜೆಯವರ ಜ್ಞಾನ ಪ್ರಮಾಣದ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸುವಲ್ಲಿ ತಮ್ಮ ಗುರುಗಳ ಶ್ರಮವನ್ನು ಹೇಳಿದ್ದರಲ್ಲಿ ಉಸಾಬರಿಯ ಉಡಾಫೆಯ ಮಾತೇಕೆ ಬಂತು? ಮೇಲಾಗಿ, ತಾನು ಅಮೆರಿಕಾಕ್ಕೆ ಹೋದದ್ದು ವಿಬುಧೇಶ ತೀರ್ಥರ ಒತ್ತಾಯದಿಂದಲೇ ಎಂದು ಬನ್ನಂಜೆಯವರೇ ಹೇಳಿಕೊಂಡಿದ್ದಿದೆಯಲ್ಲ? ಒಟ್ಟಾರೆ ಶ್ರೀಗಳ ಮಾತುಗಳಲ್ಲಿ ಆರಂಭದಿಂದ ಅಂತ್ಯದವರೆಗೂ ಶ್ರೀನಿಸುತರಿಗೆ ಕಂಡದ್ದು ಅಪಾರ್ಥವೇ ಹೊರತು ಸರಿಯಾದ ಅರ್ಥವಂತೂ ಅಲ್ಲ.

ಧ್ವನಿಯಂತೂ ಅಲ್ಲವೇ ಅಲ್ಲ. ಅಷ್ಟಕ್ಕೂ ಶ್ರೀನಿಸುತರು ಮಾತ್ರ ಬನ್ನಂಜೆಯವರ ಅಭಿಮಾನಿಯಲ್ಲ. ಶ್ರೀಗಳ ಮಾತನ್ನು
ಪೂರ್ತಿಯಾಗಿ ಕೇಳಿದವರಿಗೆ ಅವರೂ ಬನ್ನಂಜೆಯವರ ಅಭಿಮಾನಿಯೆಂಬುದು ಸ್ಪಷ್ಟವಾಗುತ್ತದೆ. ನಾನಂತೂ ನಿಮ್ಮ
ಅಭಿಮಾನಿಯೆಂಬುದನ್ನು ಬನ್ನಂಜೆಯವರಲ್ಲೇ ನೇರವಾಗಿ ಹೇಳಿಕೊಂಡವನಿದ್ದೇನೆ. ಶ್ರೀಗಳ ಮಾತಿನಲ್ಲಿ ಬನ್ನಂಜೆಯವರ
ವ್ಯಕ್ತಿತ್ವದ ಬಗ್ಗೆ ಅಲ್ಲಸಲ್ಲದ್ದು ಇದ್ದುದ್ದೇ ಆಗಿದ್ದಲ್ಲಿ ನಾನೇ ಖುದ್ದು ಶ್ರೀಗಳನ್ನು ಪ್ರತಿಕ್ರಿಯೆಗಾಗಿ ಕೇಳುವಷ್ಟು ಅವರ ಹತ್ತಿರದಲ್ಲಿದ್ದವನು.

ಇಂಥವರ ಅಭಿಮಾನಿ ಎಂದಾಕ್ಷಣ ಅವರ ಬಗ್ಗೆ ಯಾರು ಏನು ಹೇಳಬಾರದೆಂಬ ವಾದವೇ ಅಸಮರ್ಥನೀಯ. ದೌರ್ಬಲ್ಯಗಳಿ ಲ್ಲದ ಮನುಷ್ಯನೇ ಇಲ್ಲ. ತನ್ನನ್ನೂ ಸೇರಿ ಮನುಷ್ಯರೆಲ್ಲರಲ್ಲೂ ದೌರ್ಬಲ್ಯವಿದ್ದೇ  ಇರುತ್ತದೆ, ವಿಶೇಷವಾದ ಪ್ರತಿಭೆಯೂ, ಶಕ್ತಿಯೂ ಇರುತ್ತದೆಂದು ಇತ್ತೀಚೆಗೆ ಶ್ರೀಗಳೇ ನನ್ನಲ್ಲಿ ಹೇಳಿದ್ದರು.

ಮನುಷ್ಯ ಸಹಜವಾದ ತನ್ನೆೆಲ್ಲಾ ದೌರ್ಬಲ್ಯಗಳನ್ನು  ಹಂತಹಂತವಾಗಿ ಮೀರಿ ಎತ್ತರಕ್ಕೇರಿ ನಿಂತ ವಿಬುಧೇಶ ತೀರ್ಥರ
ಸಾಹಸದ ಗಾಥೆ ಮುಂದಿನ ತರುಣ ಜನಾಂಗಕ್ಕೆೆ ಆದರ್ಶವಾಗಲಿ, ದಾರಿದೀಪವಾಗಲಿ – ಎಂದು ವಿಬುಧೇಶ ತೀರ್ಥರ ಬಗ್ಗೆ ನಾನು ಸಂಪಾದಿಸಿದ ಶ್ರೀ ವಿಬುಧೇಶ ತೀರ್ಥರು ಎಂಬ ಅಭಿವಂದನಾ ಗ್ರಂಥದಲ್ಲಿ ಬನ್ನಂಜೆಯವರು ಬರೆಯುತ್ತಾರೆ. ಇದೇ ಭಾವವೇ   ಬನ್ನಂಜೆಯವರ ಬಗ್ಗೆ ಶ್ರೀಗಳು ಆಡಿದ ಮಾತುಗಳಲ್ಲಿ ನಾನು ಗ್ರಹಿಸಬಲ್ಲೆ.

ಮೊದಲಿಂದ ಕೊನೆಯವರೆಗೂ ಬನ್ನಂಜೆಯವರಲ್ಲಿರುವ ವಿಶೇಷ ಪ್ರತಿಭಾ ಶಕ್ತಿಯನ್ನು ಶ್ರೀಗಳು ಮೆಚ್ಚುತ್ತಲೇ ಅವರ
ಸಂಸ್ಮರಣೆಯನ್ನು ಸಾಂದರ್ಭಿಕವಾಗಿ ಮಾಡಿದ್ದಾರೆ. ಖಂಡಿತವಾಗಿಯೂ ಅವರ ಮಾತುಗಳಲ್ಲಿ ಅಪಾರ್ಥ ಕಾಣಲಾಗದು.
ಶ್ರೀನಿಸುತರು ಕಂಡ ವಿಪರೀತಾರ್ಥ ವನ್ನಂತೂ ಕಾಣಲು  ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಶ್ರೀಗಳಾಡಿದ ಮಾತಿನಲ್ಲಿ
ಅಂಥ ಧ್ವನಿಯೂ ಕಾಣುವುದಿಲ್ಲ. ಅಂತರಂಗದ ನೇರ ಅಭಿವ್ಯಕ್ತಿಯಿಂದ ಮಾತಾಡುತ್ತ ಶ್ರೀಗಳು ಬನ್ನಂಜೆಯವರನ್ನು
ಸಾರ್ಥಕವಾಗಿ ಸಂಸ್ಮಣೆ ಮಾಡಿದ್ದಾರೆ. ಇಷ್ಟು ಸಾಕಲ್ಲವೇ ಒಬ್ಬ ಶ್ರೇಷ್ಠವಿದ್ವಾಾಂಸನ ಅಗಲಿಕೆಯ ನೋವನ್ನು ಅಭಿವ್ಯಕ್ತಿಿಸಲು?