Thursday, 12th December 2024

ಸಮಾಜಘಾತುಕರಿಗೆ ಲಗಾಮು ಬೀಳಲಿ

ಸಂವೇದನೆ

ರವೀಂದ್ರ ಸಿಂಗ್ ಕೋಲಾರ

ದೇಶದ ಗಡಿ ಕಾಯಲು ಸಾವಿರಾರು ಯೋಧರಿರಬೇಕಾದರೆ, ನಾಡಿನ ಸೀಯರ ರಕ್ಷಣೆಯಲ್ಲಿ ನಮ್ಮ ವ್ಯವಸ್ಥೆ ಸೋತಿರುವುದನ್ನು ಖಂಡಿಸಬೇಕಾಗುತ್ತದೆ. ತಪ್ಪಿತಸ್ಥರಿಗೆ ಸಾಧಾರಣ ಶಿಕ್ಷೆ ನೀಡುವುದರಿಂದ ಇಂಥ ಅನ್ಯಾಯಗಳು ದಿನಾಲು ನಡೆಯುತ್ತಲೇ ಇರುತ್ತವೆ ಎಂದು ಸಾಮಾನ್ಯರು ಅಂದುಕೊಳ್ಳುವುದರಲ್ಲಿ ಅರ್ಥವಿದೆ.

ರಾಜಾರಾಂ ಮೋಹನ್‌ರಾಯ್ ಅವರು ೧೮೨೮ ರಲ್ಲಿ ಬ್ರಹ್ಮಸಮಾಜವನ್ನು ಸ್ಥಾಪಿಸಿ, ಸತಿ ಸಹಗಮನದಂಥ ಅನಿಷ್ಟ ಪದ್ಧತಿಗಳ ವಿರುದ್ಧ ದನಿಯೆತ್ತಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವಂತೆ ಹೋರಾಟ ನಡೆಸಿದರು. ಮಹಿಳೆಯರ ರಕ್ಷಣೆಗಾಗಿ ಕಾನೂನುಗಳನ್ನು ತರುವಂತೆ ಅಂದಿನ ಬ್ರಿಟಿಷ್ ಸರಕಾರಕ್ಕೆ ಅವರು
ಶಿ-ರಸು ಮಾಡಿದರು. ನಾಗರಿಕತೆ ಬೆಳೆಯುತ್ತಾ ಹೋದಂತೆ ಹೆಣ್ಣಿಗೆ ಸಮಾನಹಕ್ಕು ದೊರೆಯುವಂತಾಯಿತು. ಭಾರತದ ನಾರಿಯರ ಪಾಲಿಗಂತೂ ಇದು ಹಣೆಗೆ ಸಿಂಧೂರ ಇಟ್ಟು ಕೊಂಡಷ್ಟೇ ಹೆಮ್ಮೆಯ ವಿಷಯವಾಯಿತು.

ಮಹಿಳೆಯು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳ ಪಟ್ಟರೆ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ, ೨೦೦೫ರ’ ಅಡಿಯಲ್ಲಿ ಶಿಕ್ಷೆಯೂ ಇದೆ. ಮಹಿಳೆಗೆ ಪ್ರತಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇವೆಲ್ಲಾ ಸರಿ. ಹೆಣ್ಣಿಗೆ ನಮ್ಮಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತಿದೆ ಎಂದು ಭಾವಿಸಿಕೊಳ್ಳುವುದರ ನಡುವೆಯೂ ಮಹಿಳೆಯು ವಿದ್ಯಾವಂತಳಾಗಿ, ಸ್ವತಂತ್ರವಾಗಿ ಒಬ್ಬಂಟಿಯಾಗಿ ಬದುಕು ಕಟ್ಟಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ‘ಮಧ್ಯರಾತ್ರಿಯಲ್ಲಿ
ಒಬ್ಬಂಟಿ ಮಹಿಳೆಯು ನಿರ್ಭೀತಿಯಿಂದ ಯಾವಾಗ ಸಂಚರಿಸುವಳೋ, ಆಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ’ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಅಕ್ಷರಶಃ ನಿಜವಾಗಲು ವರ್ತಮಾನದಲ್ಲೂ ಸಾಧ್ಯವಾಗುತ್ತಿಲ್ಲ.

ಹೆಣ್ಣೊಬ್ಬಳು ತರಕಾರಿ ಕೊಳ್ಳಲು ಅಂಗಡಿಗೆ ಹೋಗಿ ಬರುವಾಗ ದುರುಳರು ರಸ್ತೆಯಲ್ಲಿ ಅವಳನ್ನು ಅಡ್ಡಗಟ್ಟಿ ಕೊರಳಲ್ಲಿರುವ ಮಾಂಗಲ್ಯ ಸರಕ್ಕೆ ಕೈಹಾಕಿ ಕಿತ್ತುಕೊಂಡು ಹೋಗುವಂಥ ಘಟನೆಗಳು ಆಗಾಗ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬರುತ್ತದೆ. ನಮ್ಮ ದೇಶದಲ್ಲಿ ಹೆಣ್ಣು ಅಂದರೆ ಪೂಜ್ಯ ಭಾವನೆಯಿದೆ. ಹೆಣ್ಣು ದೈವಸ್ವರೂಪಿಣಿ, ಶಕ್ತಿ ಸ್ವರೂಪಿಣಿ ಅಂತ ಹೇಳಿಕೊಳ್ಳುವ ಈ ಪುಣ್ಯಭೂಮಿಯಲ್ಲಿ, ಪರಪುರುಷನೊಬ್ಬ ಆಕೆಯ ಕೊರಳಿಗೆ ಕೈಹಾಕಿ ಮಾಂಗಲ್ಯವನ್ನು ಕಿತ್ತುಕೊಳ್ಳುವುದಕ್ಕೆ ಆಸ್ಪದವಿರುವುದು ಎಷ್ಟು ದೊಡ್ಡ ತಪ್ಪು ಎಂಬುದರ ಕುರಿತು ನಾವು ಕೊಂಚ ಆಲೋಚಿಸಬೇಕಿದೆ.

ವಿವಾಹವೆಂಬ ಪವಿತ್ರ ಬಂಧನದಲ್ಲಿ ಮಾಂಗಲ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಇದನ್ನು ಗಂಡನು ಕಾಲವಾದಾಗ ಮಾತ್ರ ತೆಗೆಯಬೇಕಾದ ಸಂದರ್ಭ ಬರುತ್ತದೆ; ಉಳಿದಂತೆ ಮಹಿಳೆಯು ಅದನ್ನು ಸದಾ ಧರಿಸಿರಬೇಕೆಂಬ ನಿಯಮವಿದೆ. ಹೀಗಿರುವಾಗ, ಪರಪುರುಷ ಕಳ್ಳನು ಈ ಮಾಂಗಲ್ಯವನ್ನು ಯಾವುದೇ ಭಯವಿಲ್ಲದೆ ಎಗರಿಸಿಕೊಂಡು ಹೋಗುತ್ತಾನೆ. ಆಗ ಮಹಿಳೆಯು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಅವಳನ್ನು ಕೇಳುವವರಿರುವುದಿಲ್ಲ. ಹೆಣ್ಣಿನ ಇಂಥ ಅಸಹಾಯಕ ಪರಿಸ್ಥಿತಿಯ ಬಗ್ಗೆ ನಾವೆಲ್ಲ ಕ್ಷಣಕಾಲ ಗಂಭೀರವಾಗಿ ಆಲೋಚಿಸಬೇಕಿದೆ. ಚಿನ್ನದ ಜತೆಜತೆಗೆ ತನ್ನ ಕೀರ್ತಿಮಾಂಗಲ್ಯವನ್ನು ದೋಚಿದ್ದರ ಫಲವಾಗಿ ಕೆಲವು ಮಹಿಳೆಯರಂತೂ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ.

ಇದು ಆಕೆಯ ಮರ್ಯಾದೆಯ ಪ್ರಶ್ನೆ ಮಾತ್ರವೇ ಅಲ್ಲ, ದೇಶದ ಘನತೆಯ ಪ್ರಶ್ನೆಯೂ ಹೌದು. ದೇಶದ ಗಡಿ ಕಾಯಲು ಸಾವಿರಾರು ಯೋಧರಿರಬೇಕಾದರೆ, ನಾಡಿನಲ್ಲಿರುವ ಸ್ತ್ರೀಯರಿಗೆ ರಕ್ಷಣೆ ನೀಡಲು ನಮ್ಮ ವ್ಯವಸ್ಥೆ ಸೋತಿರುವುದನ್ನು ಖಂಡಿಸಬೇಕಾಗುತ್ತದೆ. ತಪ್ಪಿತಸ್ಥರಿಗೆ ಸಾಧಾರಣ ಶಿಕ್ಷೆ ನೀಡುವುದರಿಂದ ಇಂಥ ಅನ್ಯಾಯಗಳು ದಿನಾಲು ನಡೆಯುತ್ತಲೇ ಇರುತ್ತವೆ ಎಂದು ಸಾಮಾನ್ಯರು ಅಂದುಕೊಳ್ಳುವುದರಲ್ಲಿ ಅರ್ಥವಿದೆ. ಶಿಕ್ಷೆ ಕಠೋರವಾಗಿದ್ದರೆ ಅದಕ್ಕೆ ಹೆದರಿಯಾದರೂ
ಕಳ್ಳರು ಮಹಿಳೆಯ ಕೊರಳಿಗೆ ಕೈಹಾಕುವುದನ್ನು ನಿಲ್ಲಿಸುತ್ತಾರೆ ಎಂಬುದು ಇಲ್ಲಿನ ವಾದದಲ್ಲಿರುವ ತರ್ಕವಾಗಿದೆ.

ಭಯ ಹುಟ್ಟಿಸುವ ಇಂಥ ಹಿಂಸಾತ್ಮಕ ಕೃತ್ಯಗಳಿಗೆ ಮಹಿಳೆ ಯರು ಮಾತ್ರವಲ್ಲದೆ ವಯೋವೃದ್ಧರೂ ಬಲಿಪಶುಗಳಾಗುತ್ತಿದ್ದಾರೆ. ಕಳ್ಳರು ಬಹುತೇಕ ೨೦ರಿಂದ ೫೦ರ ಹರೆಯದವರೇ ಆಗಿರುತ್ತಾರಾದ್ದರಿಂದ, ಹೆಂಗಸರು ಮತ್ತು ವಯೋವೃದ್ಧರು ಅವರೊಂದಿಗೆ ಸೆಣಸಲಾಗದೆ ಕೈಚೆಲ್ಲಿ ಕುಳಿತುಬಿಡುತ್ತಾರೆ. ಮನ ಕಲಕುವ ಇಂಥ ಪ್ರಸಂಗಗಳು ಹಾಡುಹಗಲೇ ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಬೀದಿಯಲ್ಲಿ ೧೦, ರಸ್ತೆಯ ತಿರುವಿನಲ್ಲಿ ೫ ಎನ್ನುವಂತೆ ಸಿಸಿ ಕ್ಯಾಮರಾಗಳಿದ್ದರೂ ಇಂಥ
ಆಕ್ರಮಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯ ವಾಗುತ್ತಿಲ್ಲ ಎಂಬುದೇ ದುರದೃಷ್ಟಕರ ಸಂಗತಿ.

ಮೇಲ್ನೋಟಕ್ಕೆ ವಿಷಯ ಸಣ್ಣದಾ ದರೂ, ಮುಂದಿನ ದಿನಗಳಲ್ಲಿ ಚಿನ್ನದ ಸರವನ್ನು ಕಸಿದು ಕೊಂಡು ಪರಾರಿಯಾಗುವುದು ಕಳ್ಳರಿಗೆ ಆಟದ ರೀತಿ ಆಗುವು ದರಲ್ಲಿ ಸಂದೇಹವಿಲ್ಲ. ಕೆಲವು ಟಿವಿ/ಯೂಟ್ಯೂಬ್ ಚಾನಲ್‌ಗಳು ಇಂಥ ದೃಶ್ಯಾವಳಿಯನ್ನು ಬಿತ್ತರಿಸಿ ವಿಷಾದ ವ್ಯಕ್ತಪಡಿಸಿ ಎಚ್ಚರಿಸುತಿದ್ದರೂ, ಪದೇಪದೆ ಇದರ ಪ್ರಸಾರವು ಪ್ರಚಾರಕ್ಕೋ ಪರಿಹಾರಕ್ಕೋ? ಎಂದು ಅನುಮಾನಿಸುವಂತಾಗುತ್ತದೆ. ಇಂಥ ದೃಶ್ಯ ವೀಕ್ಷಿಸುವ ನೆಟ್ಟಿಗರು ಕುಳಿತಲ್ಲೇ ಒಂದೆರಡು ನಿಮಿಷ  ಆಕ್ರೋಶವನ್ನು ವ್ಯಕ್ತಪಡಿಸಿ ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಮನ ರಂಜನೆಯ ದೃಷ್ಟಿಯಲ್ಲಿ ನೋಡಿ ‘ಇವೆಲ್ಲ ಮಾಮೂಲು’ ಎಂಬಂತೆ ವೀಕ್ಷಣಾ ಮಾಧ್ಯಮವನ್ನು ಆ- ಮಾಡಿ ಇಡುತ್ತಾರೆ. ಇವೆಲ್ಲ ಹಗುರ ಚರ್ಚೆಗಳಾಗಿಬಿಟ್ಟರೆ, ಮಾನವೀಯತೆಯ ಉಳಿವಿಗಾಗಿ ನಾವೆಲ್ಲ ಒಂದು ದಿನ ಚಡಪಡಿಸಬೇಕಾಗು
ತ್ತದೆ. ಮನುಷ್ಯತ್ವವೆಂದರೆ ಏನು ಎಂಬುದನ್ನು ಓದಿ ತಿಳಿದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಸಮಸ್ಯೆಗಳು ಸಂಕೀರ್ಣ ಅಥವಾ ಗಂಭೀರ ಸ್ವರೂಪ ಪಡೆಯುವವರೆಗೆ ಕಾಯದೆ, ಆಗಿಂದಾಗಲೇ ಅದಕ್ಕೆ ಸರಿಯಾದ ಮತ್ತು ಕಠೋರವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಕಡಿವಾಣ ಹಾಕದಿದ್ದರೆ ಇಂಥ ಅಪರಾಧ ಕೃತ್ಯಗಳು ಮರುಕಳಿಸುತ್ತಲೇ ಇರುತ್ತವೆ. ಸಂಬಂಧಿತ ಇಲಾಖೆಗಳೇ ಇವುಗಳ ಬಗ್ಗೆ ಅಸಡ್ಡೆ
ತೋರಿದರೆ, ‘ಇದಕ್ಕೂ ನಮಗೂ ಸಂಬಂಧವಿಲ್ಲ’ ಎನ್ನುವಂತೆ ಜನರೂ ಸುಮ್ಮನಿದ್ದು ಬಿಡುವುದರಲ್ಲಿ ಅಚ್ಚರಿಯೇನಿಲ್ಲ. ತಮ್ಮ ತಮ್ಮ ಅಸ್ತಿತ್ವಗಳನ್ನು/ಪಕ್ಷಗಳನ್ನು ಉಳಿಸಿಕೊಳ್ಳುವ ಧಾವಂತದಲ್ಲಿರುವ ಸರಕಾರಗಳಿಗೂ ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ‘ಬಡವನ ಕೋಪ ದವಡೆಗೆ ಮೂಲ’ ಎನ್ನುವಂತೆ ಮಾನ ಮತ್ತು ಹಣವನ್ನು ಕಳೆದುಕೊಂಡವರ ಅಳಲು ಅಲ್ಲಿಗೇ ಮುಗಿದುಹೋಗಿರುತ್ತದೆ.

ಸ್ಟೇಷನ್‌ನಲ್ಲಿ ದೂರು ದಾಖಲಾಗಿದ್ದರೆ ಅಲ್ಲೊಬ್ಬ ಇಲ್ಲೊಬ್ಬ ಸಿಗುತ್ತಾನೆ, ಸಾಧಾರಣ ಶಿಕ್ಷೆ ಅನುಭವಿಸಿ ವಾಪಸು ಬರುತ್ತಾನೆ! ಕೆಲವರು ಅದೇ ಹಳೇ ಚಾಳಿಯನ್ನು ಮತ್ತೆ ಶುರುಮಾಡುತ್ತಾರೆ. ಹೀಗಾದರೆ ನ್ಯಾಯಾಲಯದ, ಕಾನೂನಿನ ಭಯವಿರಲು ಸಾಧ್ಯವೇ? ಸ್ವತಃ ಗಂಡನಾದವನಿಗೇ ತನ್ನ ಹೆಂಡತಿಯ ಕುತ್ತಿಗೆಗೆ ಕೈಹಾಕಿ ಸರ ಅಥವಾ ತಾಳಿಯನ್ನು ಕೀಳುವ ಅಧಿಕಾರವಿಲ್ಲದಿರುವಾಗ, ಪರಪುರುಷನೊಬ್ಬ ರಸ್ತೆಯಲ್ಲಿ ಆಕೆಯನ್ನು ಅಡ್ಡಗಟ್ಟಿ ಮಾಂಗಲ್ಯ ಸರವನ್ನು ಕಸಿದುಕೊಳ್ಳುವ ಕೃತ್ಯವಿದೆಯಲ್ಲಾ, ಅದು ಹೇಯವೂ ಹೌದು ಘನಘೋರವೂ ಹೌದು.

ಇಂಥ ಸಣ್ಣಪುಟ್ಟ ಬೀದಿಕಳ್ಳರೇ ಮುಂದೆ ದರೋಡೆಕೋರರಾಗಿ, ಡಾನ್‌ಗಳಾಗಿ ಬೆಳೆಯುವ ಸಂಭವವಿದೆ. ಇಂಥ ಕುಕೃತ್ಯಗಳನ್ನು ಮೊಳಕೆಯಲ್ಲೇ ಕಾನೂನು ರೀತ್ಯಾ ಹೊಸಕಿ ಹಾಕುವುದರಿಂದ ಶಾಂತಿ-ಸುವ್ಯವಸ್ಥೆ ನೆಲೆಗೊಳ್ಳುವುದು ಸಾಧ್ಯವಾಗುತ್ತದೆ. ದೇಶದಲ್ಲಿ ಕಳ್ಳತನ, ಅತ್ಯಾಚಾರದಂಥ ಪ್ರಕರಣಗಳು ದಿನೇ
ದಿನೆ ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗುವ ಲಕ್ಷಣ ಗಳೇ ಕಾಣುತ್ತಿಲ್ಲ. ಅಪರಾಽಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಯಿರುವುದೇ ಇದಕ್ಕೆಲ್ಲ ಕಾರಣ ಅಂತ ಒಂದು ಕಡೆ ಅನಿಸಿ ದರೂ, ಪ್ರಭಾವಿಗಳ ಸಹಕಾರ, ಪೋಷಕರು ಸರಿಯಾದ ಮಾರ್ಗದರ್ಶನ ನೀಡದಿರುವುದು ಅಥವಾ ತಮ್ಮ ಮಕ್ಕಳ ಕುರಿತು ನಿಗಾ ವಹಿಸದಿರುವುದು, ಗುಂಪು ಕಟ್ಟಿಕೊಂಡು ಓಡಾಡುವಿಕೆ, ಮದ್ಯಪಾನದ ಚಟ, ದುಡಿಯದೆ ಮೈಗಳ್ಳರಾಗಿ ಅಡ್ಡದಾರಿ ಹಿಡಿದು ಸುಲಭವಾಗಿ ಸಂಪಾದಿಸುವ ಧೋರಣೆ, ಐಷಾರಾಮಿ ಜೀವನ ನಡೆಸಬೇಕೆಂಬ ದುರಾಸೆ ಇವು ಸಮಾಜ ದಲ್ಲಿ ನಡೆಯುತ್ತಿರುವ ಕಳ್ಳತನ, ದರೋಡೆ, ಅತ್ಯಾಚಾರದಂಥ ಕೃತ್ಯಗಳಿಗೆ ಕಾರಣವಾಗಿವೆ ಎಂದು ಸುಲಭವಾಗಿ ಹೇಳಿಬಿಡ ಬಹುದು.

ಇಂಥ ಕುಕೃತ್ಯಗಳಲ್ಲಿ ತೊಡಗುವವರು ಮುಂದೆ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುವುದನ್ನು ಕಾನೂನು ಹೋರಾಟದ ಮೂಲಕ ಸದೆಬಡಿಯಬೇಕಾಗಿದೆ. ಅದೇ ಸಮಯಕ್ಕೆ ಭಾರತನಾರಿಯ ಗೌರವವನ್ನು ಕಾಪಾಡಬೇಕಾದ ಅನಿವಾರ್ಯವೂ ಇದೆ.

(ಲೇಖಕರು ಹವ್ಯಾಸಿ ಬರಹಗಾರರು)