Sunday, 24th November 2024

ತಪ್ಪು ಮಾಡುವಾಗ ಆಗದ ಬೇಸರ, ಕ್ಷಮೆಯಾಚಿಸುವಾಗ ಯಾಕೆ ?

ನೂರೆಂಟು ವಿಶ್ವ

vbhat@me.com

ಕೆಲವು ದಿನಗಳ ಹಿಂದೆ, ನನ್ನ ಪತ್ರಗಳ ಕಡತವನ್ನು ಹರಡಿಕೊಂಡು ನೋಡುತ್ತಿದ್ದೆ. ನಮಗೆ ಬಂದ ಹಳೆ ಪತ್ರಗಳನ್ನು ಓದುವುದು ಒಂದು ಅನೂಹ್ಯ ಅನುಭವ. ಅಷ್ಟು ವರ್ಷ ಹಿಂದಕ್ಕೆ ಹೋಗಿ ಮತ್ತೊಮ್ಮೆ ಆ ದಿನಗಳನ್ನು ಮುಟ್ಟಿ, ಮೈದಡವಿ ಬರಬಹುದು. ನನಗೆ ಬಂದ ಯಾವ ಪತ್ರಗಳನ್ನೂ ನಾನು ಬಿಸಾಡಿದ್ದಿಲ್ಲ. ಓದುಗರು ಬರೆದ ಪತ್ರ, ನನಗೆ ಬಂದ ಆಮಂತ್ರಣ ಪತ್ರಗಳನ್ನೂ ನಾನು ಜೋಪಾನವಾಗಿ ಎತ್ತಿಟ್ಟಿದ್ದೇನೆ.

ಇತ್ತೀಚೆಗೆ ಹಳೆಯ ಕಾಗದಗಳನ್ನು ಓದುವಾಗ, ನಾನು ‘ಕನ್ನಡಪ್ರಭ’ದಲ್ಲಿದ್ದಾಗ, ಓದುಗರಾದ ಚಿಕ್ಕಮಗಳೂರಿನ ಕೆ.ಶಂಕರನಾರಾಯಣ ಎಂಬುವವರು ಬರೆದ ಪತ್ರ ಗಮನ ಸೆಳೆಯಿತು. ಅದು ಆಗ ‘ಪತ್ರಿಕೆಯಲ್ಲಿ (ಕಪ್ರ) ಆರಂಭಿಸಿದ, ತಪ್ಪಾಯ್ತು ತಿದ್ಕೋತೀವಿ’ ಎಂಬ ಅಂಕಣದ ಕುರಿತಾಗಿತ್ತು. ನಾನು ‘ಕನ್ನಡಪ್ರಭ’ ದಲ್ಲಿದ್ದಾಗ, ಪ್ರತಿದಿನ ಪತ್ರಿಕೆಯಗುವ ತಪ್ಪುಗಳನ್ನು ಒಪ್ಪಿಕೊಂಡು, ತಪ್ಪನ್ನು ಸರಿಪಡಿಸಿ, ಓದುಗರಿಗೆ ಸರಿಯಾದ ಮಾಹಿತಿಯನ್ನು ನೀಡಲು, ‘ತಪ್ಪಾಯ್ತು ತಿದ್ಕೋತೀವಿ’ ಎಂಬ ಅಂಕಣವನ್ನು ಮೊದಲ ಬಾರಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಜಾರಿಗೆ ತಂದಿದ್ದೆ.

ಸಣ್ಣ-ಪುಟ್ಟ ತಪ್ಪುಗಳಾದರೂ ಮರುದಿನ ಕ್ಷಮೆಯಾಚಿಸಿ, ಸರಿಯಾದ ಮಾಹಿತಿಯನ್ನು ನೀಡುತ್ತಿದ್ದೆವು. ಓದುಗರು ನಮ್ಮ ತಪ್ಪುಗಳಿಗೆ ಕನ್ನಡಿ ಹಿಡಿದಾಗಲೂ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದೆವು. ಒಟ್ಟಾರೆ ಓದುಗರಿಗೆ ಯಾವ ಕಾರಣಕ್ಕೂ ತಪ್ಪು ಮಾಹಿತಿ ರವಾನೆಯಾಗಬಾರದು ಎಂಬುದು ಉದ್ದೇಶವಾಗಿತ್ತು. ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ತಾನು ಪ್ರಕಟಿಸಿದ ವರದಿಯೊಂದರಲ್ಲಿ ಪ್ರಮಾದವಾಗಿರುವುದು ನಲವತ್ತೇಳು ವರ್ಷಗಳ ನಂತರ ಗೊತ್ತಾದಾಗ, ಅದಕ್ಕೆ ಕ್ಷಮೆ ಯಾಚಿಸಿತ್ತು.

ನಮ್ಮಿಂದ ತಪ್ಪುಗಳಾದಾಗ, ಕ್ಷಮೆಯಾಚಿಸಲು ಹಿಂದೆ-ಮುಂದೆ ನೋಡಬಾರದು. ತಕ್ಷಣ ವಿಷಾದ ಅಥವಾ ಕ್ಷಮೆ ಯಾಚಿಸ ಬೇಕು. ಅಷ್ಟಕ್ಕೂ ನಾವು ಹಾಗೆ ಮಾಡುವುದು, ಮತ್ಯಾರ ಮುಂದೆಯೂ ಅಲ್ಲ, ನಮ್ಮ ಓದುಗರ ಮುಂದೆ. ಅದಕ್ಕೆ ಚೌಕಾಶಿ ಮಾಡಬಾರದು. ಪತ್ರಿಕೆಯಲ್ಲಿ ಬರುವ ಮಾಹಿತಿಯೆಲ್ಲ ವಾಸ್ತವ ಮತ್ತು ಸತ್ಯವಾದುದು ಎಂಬುದನ್ನು ದೃಢೀಕರಿಸಲು ಇದು (ಕ್ಷಮೆಯಾಚನೆ) ಒಂದು ಪೂರಕ ಕ್ರಮವಾಗಿತ್ತು.

ಪತ್ರಿಕೆಯ ಗುಣಮಟ್ಟ ಮತ್ತು ವಿಶ್ವಾ ಸಾರ್ಹತೆಯನ್ನು ಹೆಚ್ಚಿಸುವ ದೃಷ್ಟಿಯಿಂದಲೂ ಇದು ಒಂದು ಉತ್ತಮ ನಡೆ ಎಂದು ನಾನು ಭಾವಿಸಿದ್ದೆ. ಇದಕ್ಕೆ ಓದುಗರಿಂದ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಆದರೆ ಚಿಕ್ಕಮಗಳೂರಿನ ಕೆ.ಶಂಕರನಾರಾಯಣ ಅವರು
‘ತಪ್ಪಾಯ್ತು ತಿದ್ಕೋತೀವಿ’ ಅಂಕಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದರು – ‘ಸಂಪಾದಕರೇ, ಪ್ರತಿದಿನ ನಿಮ್ಮ ಪತ್ರಿಕೆಯಲ್ಲಿ ತಪ್ಪಾಯ್ತು ತಿದ್ಕೋತೀವಿ ಎಂಬ ಅಂಕಣ ಪ್ರಕಟಿಸುತ್ತೀರಿ.

ಇದರಿಂದ ನಿಮ್ಮ ಪತ್ರಿಕೆಯಲ್ಲಿ ಪ್ರತಿದಿನವೂ ತಪ್ಪು ಮಾಡುತ್ತೀರಿ ಎಂದಂತಾಯ್ತು. ಅಂದರೆ ನಿಮಗೆ ದೋಷರಹಿತ ಪತ್ರಿಕೆ ಯನ್ನು ಪ್ರಕಟಿಸುವುದು ಸಾಧ್ಯವಿಲ್ಲ ಎಂದಂತಾಯ್ತು. ಇದರಿಂದ ನಿಮ್ಮ ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆಯಾದಂತೆ. ಓದುಗರಿಗೆ ತಾನು ಓದುವ ಪ್ರತಿ ವರದಿಯಲ್ಲೂ ದೋಷವಿರಬಹುದು ಎಂಬ ಅನುಮಾನ ಕಾಡಬಹುದು. ಹೀಗಾಗಿ ಈ ಅಂಕಣವನ್ನು ಕೈಬಿಡುವುದು ಲೇಸು.

ನಾನು ನಿಮ್ಮ ಒಳ್ಳೆಯದಕ್ಕೇ ಈ ಸಲಹೆ ಕೊಡುತ್ತಿದ್ದೇನೆ. ಬೇರೆ ಯಾವ ಪತ್ರಿಕೆಯೂ ಈ ರೀತಿ ಪ್ರಯೋಗ ಮಾಡಿಲ್ಲ. ಅವರೇಕೆ
ಹಾಗೆ ಮಾಡಿಲ್ಲ ಎಂಬುದನ್ನು ಯೋಚಿಸಿ. ಅವರು ಹಾಗೆ ಮಾಡದಿರುವ ಹಿಂದೆ, ನಾನು ಹೇಳಿದ ವಾದ ಅಡಕವಾಗಿದೆ. ಹೀಗಾಗಿ ಯಾರೂ ಅಂಥ ಪ್ರಯೋಗಕ್ಕೆ ಮುಂದಾಗಿಲ್ಲ. ನೀವೇಕೆ ಅನ್ಯಥಾ ಈ ಉಸಾಬರಿಗೆ ಸಿಲುಕುತ್ತೀರಿ?’ ಅದಕ್ಕೆ ನಾನು ಅವರಿಗೆ ಬರೆದೆ – ‘ದೋಷರಹಿತ ಪತ್ರಿಕೆ ಯನ್ನು ಓದುಗರ ಕೈಗಿಡಬೇಕು ಎನ್ನುವುದು ನಮ್ಮ ಆಶಯ.

ಅದಕ್ಕೆ ನಾವು ನಿರಂತರ ಶ್ರಮಿಸುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ, ಕಣ್ತಪ್ಪಿನಿಂದ ಪ್ರಮಾದಗಳು ಆಗುತ್ತವೆ. ಇದು ತೀರಾ ಸಹಜ ಕೂಡ. ಹೀಗಾಗಿ ಓದುಗರಿಗೆ ತಪ್ಪು ಮಾಹಿತಿ ರವಾನೆಯಾಗಬಾರದು ಎಂಬ ಕಾರಣದಿಂದ ಈ ಅಂಕಣವನ್ನು ಆರಂಭಿ ಸಿದ್ದೇವೆ. ಓದುಗರ ಮುಂದೆ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಯಾಕೆ ಹಿಂದೇಟು ಹಾಕಬೇಕು? ಅಷ್ಟಕ್ಕೂ ತಪ್ಪು ಮಾಡಿದಾಗ ಕ್ಷಮೆಯಾಚಿಸುವುದು ಧರ್ಮ. ಅದೇ ಸರಿಯಾದ ಕ್ರಮ.

ಇದರಿಂದ ಓದುಗರಿಗೆ ಪತ್ರಿಕೆಯ ವರದಿಯ ಬಗ್ಗೆ ಮತ್ತಷ್ಟು ವಿಶ್ವಾಸ ಮೂಡುತ್ತದೆ. ಯಾವ ಕಾರಣಕ್ಕೂ ಪತ್ರಿಕೆಯಲ್ಲಿ ತಪ್ಪು
ಬರುವುದಿಲ್ಲ, ಒಂದು ವೇಳೆ ಪ್ರಕಟವಾದರೂ, ಮರುದಿನ ನಿಖರವಾದ ಸಂಗತಿ ಪ್ರಕಟವಾಗುತ್ತದೆ ಎಂದು ಭಾವಿಸುತ್ತಾರೆ.
ತಪ್ಪಾಗಿದ್ದು ಗೊತ್ತಾದರೂ, ಅದನ್ನು ಓದುಗರಿಗೆ ಹೇಳದಿರುವುದು, ಅವರಿಗೆ ಮಾಡುವ ದ್ರೋಹವಲ್ಲವೇ? ಹೀಗಾಗಿ ತಪ್ಪು ಗಳಾದಾಗ, ಯಾವ ಸಂಕೋಚ, ಮುಜುಗರವಿಲ್ಲದೇ ಕ್ಷಮೆಯಾಚಿಸಿ, ಸರಿಯಾದ ಮಾಹಿತಿ ಕೊಡುವುದು ಸರಿಯಾದ ಕ್ರಮ. ಅಮೆರಿಕ ಮತ್ತು ಬ್ರಿಟನ್ ಪತ್ರಿಕೆಗಳಲ್ಲೂ ಈ ಸಂಪ್ರದಾಯವಿದೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಷಯಗಳೆಲ್ಲ ನಿಖರವಾಗಿರಬೇಕು, ದೋಷರಹಿತವಾಗಿರಬೇಕು. ಈ ನಿಟ್ಟಿನಲ್ಲಿನ ‘ತಪ್ಪಾಯ್ತು ತಿದ್ಕೋತೀವಿ’ ಒಂದು ದಿಟ್ಟ ಕ್ರಮ. ಪತ್ರಿಕೆ ಅಂತಲ್ಲ, ಯಾರೇ ತಪ್ಪು ಮಾಡಿದರೂ ಕ್ಷಮೆ ಯಾಚಿಸುವುದು ಒಳ್ಳೆಯ ನಡತೆ. ಕ್ಷಮೆಯಾಚಿಸುವುದಕ್ಕೂ ಒಳ್ಳೆಯ ಹೃದಯ ಬೇಕು. ಅದೊಂದು ಉತ್ತಮ ಗುಣ. ಮನುಷ್ಯನಲ್ಲಿ ಶರಣಾಗತಿಯ ಭಾವವಿರ ಬೇಕು. ಅಷ್ಟಕ್ಕೂ ಓದುಗರ ಮುಂದೆ ತಪ್ಪನ್ನು ನಿವೇದಿಸಿಕೊಳ್ಳಲು ಹಿಂಜರಿಕೆಯೇಕೆ?’ ಇದಕ್ಕೆ ಶಂಕರನಾರಾಯಣ ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ಆ ಅಂಕಣಕ್ಕೆ ಸಾವಿರಾರು ಉತ್ತಮ ಅಭಿಪ್ರಾಯಗಳು ಬಂದರೂ, ಆಗಾಗ ಅಂದು- ಇಂದು ಶಂಕರನಾರಾಯಣ ಅವರು ವ್ಯಕ್ತಪಡಿಸಿದ ರೀತಿಯ ಅಭಿಪ್ರಾಯಗಳು ಬರುತ್ತಿದ್ದವು. ನನಗೆ ಇದಕ್ಕಿಂತ ತಮಾಷೆಯಾಗಿ ಕಂಡಿದ್ದು ಬೆಂಗಳೂರಿನ ಕತ್ರಿ ಗುಪ್ಪೆಯ ವಾದಿರಾಜ ಆಚಾರ್ಯರ ಅಭಿಪ್ರಾಯವನ್ನು ಓದಿ. ‘ಮಠಾಧಿಪತಿಗಳು, ಸಂಪಾದಕರು, ಧಾರ್ಮಿಕ ಮುಖಂಡರು ಕ್ಷಮೆ ಕೇಳಬಾರದು.

ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇವರ ಬಗ್ಗೆ ಜನ ಉತ್ತಮ ಅಭಿಪ್ರಾಯ ಹೊಂದಿರುತ್ತಾರೆ. ಅವರಿಂದ ತಪ್ಪುಗಳು ಆಗುವುದಿಲ್ಲ ಎಂದು ಜನ ನಿರೀಕ್ಷಿಸುತ್ತಾರೆ. ಆದರೆ ಅವರೇ ಕ್ಷಮೆಯಾಚಿಸಿ ಬಿಟ್ಟರೆ, ಜನರಿಗೆ ಭ್ರಮನಿರಸನ ವಾಗುತ್ತದೆ. ಹೀಗಾಗಿ ನೀವು ಎಂದೂ ಕ್ಷಮೆ ಯಾಚಿಸಬಾರದು’ ಎಂದು ಆಚಾರ್ಯರು ಬರೆದಿದ್ದರು. ನಾನು ಅದಕ್ಕೆ, ‘ಆಚಾರ್ಯರೇ, ನೀವು ಹೇಳಿದ್ದನ್ನು ಒಂದು ಕ್ಷಣ ಒಪ್ಪೋಣ. ಒಂದು ವೇಳೆ ನೀವು ಹೇಳಿದ ಜನರೇನು ದೇವಮಾನವರಲ್ಲ. ದೇವಮಾನವರೂ ತಪ್ಪು ಮಾಡುತ್ತಾರೆ.

ತಪ್ಪು ಯಾರಿಂದ ಬೇಕಾದರೂ ಆಗಬಹುದು. ಹೀಗಿರುವಾಗ, ತಪ್ಪನ್ನು ಯಾರೇ ಮಾಡಿರಲಿ, ಕ್ಷಮೆ ಯಾಚಿಸಲು ಹಿಂಜರಿಕೆ ಏಕೆ? ಬೇರೆಯವರದ್ದನ್ನು ಬಿಡಿ, ಸಂಪಾದಕರೇನು ಮೇಲಿಂದ ಇಳಿದು ಬಂದವರಾ? ಅವರು ಸಹ ತಪ್ಪು ಮಾಡುತ್ತಾರೆ. ತಪ್ಪು ಮಾಡಿದವರು ಯಾರೇ ಇರಲಿ, ಅವರು ಕ್ಷಮೆ ಯಾಚಿಸಲೇಬೇಕು. ಅದು ಸರಿಯಾದ ಕ್ರಮವಲ್ಲವೇ?’ ಎಂದು ಬರೆದೆ. ಆಚಾರ್ಯರು ವಾಪಸ್ ಪ್ರತಿಕ್ರಿಯಿಸಲಿಲ್ಲ.

ನಮ್ಮಲ್ಲಿ ತಪ್ಪು ಮಾಡಿದಾಗ, ಅದು ತಪ್ಪು ಎಂಬುದು ಅನುಭವವೇದ್ಯವಾದರೂ ಯಾರೂ ಸುಲಭವಾಗಿ ಕ್ಷಮೆ ಯಾಚಿಸಲು ಸಿದ್ಧರಿರುವುದಿಲ್ಲ.  sorry ಎಂದು ಹೇಳಲು ಯಾರೂ ಸಿದ್ಧರಿರುವುದಿಲ್ಲ. ತಪ್ಪು ಮಾಡಿದ್ದಕ್ಕಿಂತ, ಕ್ಷಮೆ ಯಾಚಿಸುವುದೇ ಒಂದು ಅಪರಾಧ ಎಂದು ಅನೇಕರು ಭಾವಿಸಿದ್ದಾರೆ. ತಪ್ಪು ಮಾಡಿದಾಗ ಆಗುವ ಬೇಸರಕ್ಕಿಂತ ಕ್ಷಮೆ ಯಾಚಿಸುವಾಗ ಮತ್ತಷ್ಟು ಬೇಸರವಾಗುತ್ತದೆ.

ಕ್ಷಮೆಯಾಚಿಸುವಾಗ ಕರುಳು ಕಿತ್ತು ಬಂದಂತೆನಿಸುತ್ತದೆ. ಮಾನ- ಮರ್ಯಾದೆ ಹೋದಂತೆನಿಸುತ್ತದೆ. ಸೋಜಿಗವೆಂದರೆ, ತಪ್ಪು ಮಾಡುವಾಗ ಹಾಗೆ ಅನಿಸುವುದಿಲ್ಲ. ಸಂಪಾದಕರಾದವರು ತಪ್ಪು ಮಾಡಿದ್ದಕ್ಕೆ ತಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು
ಹೇಳುತ್ತಾರೆಯೇ ಹೊರತು ಕ್ಷಮೆಯಾಚಿಸುತ್ತಿದ್ದೇವೆ ಎಂದು ಹೇಳುವುದಿಲ್ಲ.

Yes, We have committed a mistake ಎಂದು ಹೇಳಲು ಏನೋ ಸಂಕೋಚ. ತಪ್ಪು ಮಾಡುವಾಗ ಸಂಕೋಚ ಇರದಿದ್ದರೆ, ಕ್ಷಮೆಯಾಚಿಸುವಾಗಲೂ ಅದು ಅಡ್ಡಿಯಾಗಬಾರದು. ಆದರೆ ಅದೇಕೋ ಗೊತ್ತಿಲ್ಲ, ‘ತಪ್ಪಾಯ್ತು…. ಸ್ಸಾರಿ’ ಅನ್ನುವಾಗ ಎಲ್ಲಿಲ್ಲದ ಬಡಿವಾರ, ಅಹಂ ಕಟ್ಟಿಹಾಕುತ್ತದೆ. ಅಷ್ಟಕ್ಕೂ ಕ್ಷಮೆಯಾಚಿಸುವುದು ಹೀನ ನಡೆಯಲ್ಲ. ಅದೂ ಸಹ ದೊಡ್ಡ ಮತ್ತು ಶ್ರೇಷ್ಠ ನಡೆಯೇ. ಆದರೆ ಯಾರೂ ಹಾಗೆ ಭಾವಿಸುವುದಿಲ್ಲ. ತಪ್ಪು ಮಾಡಿದವರೆಲ್ಲ ಕ್ಷಮೆಯಾಚಿಸುವುದಿಲ್ಲ.

ತಪ್ಪು ಮಾಡಿದ್ದು ಮನವರಿಕೆಯಾದರೂ, ತಮ್ಮ ವಾದ ಅಥವಾ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ತಾವೇ ಸರಿ ಎಂದು ವಾದಿಸುತ್ತಾರೆ. ಆದರೆ ಒಳಮನಸ್ಸು ಮಾತ್ರ ನೀನು ತಪ್ಪು ಮಾಡಿದ್ದೀಯಾ ಎಂದು ಹೇಳುತ್ತಿರುತ್ತದೆ. ಕ್ಷಮೆ ಯಾಚಿಸಿದರೆ ತಾನು ಸಣ್ಣವನಾಗಿಬಿಡುವೆನೋ ಎಂಬ ಭಾವ ಕಾಡುತ್ತಿರುತ್ತದೆ. ಹೀಗಾಗಿ ತಮ್ಮ ನಿಲುವನ್ನು ಏನೇನೋ ಸಬೂಬು ಹೇಳಿ ಸಮರ್ಥಿಸಿಕೊಳ್ಳುತ್ತಾರೆಯೇ ಹೊರತು, ಮುಕ್ತ ಮನಸ್ಸಿನಿಂದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದಿಲ್ಲ.

ಕ್ಷಮೆ ಕೇಳುವುದಕ್ಕೂ ಹೃದಯ ವೈಶಾಲ್ಯ ಬೇಕು. ‘ಸಣ್ಣವರು ಕ್ಷಮೆಯಾಚಿಸುವುದಿಲ್ಲ. ಕ್ಷಮೆಯಾಚಿಸಿದವರೆಲ್ಲ ದೊಡ್ಡವ ರಾಗುತ್ತಾರೆ’ ಎಂದು ಹೇಳೋದು ಅದಕ್ಕೇ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಕ್ಷಮೆಯಾಚಿಸಿದ ಮಾತ್ರಕ್ಕೆ ನೀವು ತಪ್ಪು, ಬೇರೆವವರು ಸರಿ ಎಂದಷ್ಟೇ ಅಲ್ಲ. ನೀವು ಸಂಬಂಧವನ್ನು ಕಾಪಾಡುವುದಕ್ಕೆ ಮಹತ್ವವನ್ನು ಕೊಡುತ್ತೀರಿ, ನಿಮ್ಮ ಅಹಂನ್ನು ಮೀರಿ ನಡೆದುಕೊಳ್ಳಬಲ್ಲಿರಿ ಎಂದೂ ಅರ್ಥ.

ಇನ್ನು ಕೆಲವರು sorry ಕೇಳುತ್ತಾರೆ. ಆದರೆ ಅದರಲ್ಲೂ ತಾವು ಹೇಳಿದ್ದೇ ಸರಿ ಎಂಬ ಇಂಗಿತ ಬರುವಂತೆ ಕ್ಷಮೆಯಾಚಿಸು ತ್ತಾರೆ. I am probably not as sorry as you think I should be ಅಂತಾರೆ. ಕ್ಷಮೆ ಕೇಳುವುದರಲ್ಲಿ ಹೆಂಡತಿ ಯನ್ನು ಮೀರಿಸುವವರಿಲ್ಲ. ಕ್ಷಮೆ ಕೇಳಿಯೂ ಅವಳು ತಾನೇ ಸರಿ ಎಂದು ಹೇಳುತ್ತಾಳೆ. ಅದು ಹೇಗೆಂದರೆ I am
sorry, but it was your mistake ಎಂದು ಹೇಳಿದಂತೆ.

ನಿಮಗೆ ನೂರಕ್ಕೆ ನೂರು ಗೊತ್ತಿರುತ್ತದೆ, ನೀವು ತಪ್ಪು ಮಾಡಿಲ್ಲ ಎಂದು. ಆದರೂ ಯಾವುದೋ ಕಾರಣಕ್ಕೆ ಕ್ಷಮೆಯಾಚಿಸಿದರೆ
ಅದು ಒಳ್ಳೆಯ ನಡೆಯಲ್ಲ. ಇದಕ್ಕೆ ಇಂಗ್ಲೀಷಿನಲ್ಲಿ Never say sorry for being honest ಎಂದು ಹೇಳುವುದುಂಟು. ಆದರೆ ಈ ಮಾತು ಹೆಂಡತಿಯ ಮುಂದೆ ನಡೆಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಗಂಡನಾದವನು ಎಷ್ಟೋ ಸಲ, Whether I am right or wrong, thats not important. I am sorry. Our love is too precious to let a quarrel to keep us apart. I am sorry ಎಂದು ಹೇಳುವುದನ್ನು ಕೇಳಿರಬಹುದು.

ನಾನು ಕೆಲವು ವರ್ಷಗಳ ಹಿಂದೆ, ಅಮೆರಿಕದ ಸ್ಯಾನ್ ಹೋಸೆಯಲ್ಲಿರುವ ‘ದಿ ಮರ್ಕ್ಯುರಿ ನ್ಯೂಸ್’ ಪತ್ರಿಕಾ ಕಚೇರಿಗೆ ಹೋಗಿದ್ದೆ. ಅಲ್ಲಿನ ಸಂಪಾದಕರ ಕೋಣೆಯಲ್ಲಿ, Perhaps, after all, the most beautiful words in the language are I’m sorry ಎಂದು ಬರೆದಿರುವುದನ್ನು ನೋಡಿ, ‘ಈ ಫಲಕವನ್ನೇಕೆ ನೇತು ಹಾಕಿಕೊಂಡಿದ್ದೀರಿ?’ ಎಂದು ಕೇಳಿದ್ದಕ್ಕೆ, ಅವರು, ‘ಸಂಪಾದಕನಾದವನು sorry ಎಂದು ಹೇಳುವುದಕ್ಕೆ ಹಿಂದೇಟು ಹಾಕಬಾರದು. ಕಾರಣ ನಾವು ದಿನವೂ ತಪ್ಪು ಮಾಡುವ ವೃತ್ತಿಯಲ್ಲಿದ್ದೇವೆ’ ಎಂದು ಹೇಳಿದ್ದು ನೆನಪಾಗುತ್ತದೆ.

‘ಸಂಪಾದಕರ ಸಂಪಾದಕ’ ಎಂದೇ ಹೆಸರಾದ ಹೆರಾಲ್ಡ್ ಇವಾ ಹೇಳಿದ ಒಂದು ಮಾತನ್ನು ಪತ್ರಕರ್ತರೆಲ್ಲ ನೆನಪಿಟ್ಟು ಕೊಳ್ಳಬೇಕು. ‘ನಿಮ್ಮಿಂದ ತಪ್ಪಾಗಿದೆ ಎಂಬ ಸಣ್ಣ ಯೋಚನೆ ಮನದೊಳಗೆ ಸುಳಿದರೆ, ತಕ್ಷಣ ಕ್ಷಮೆ ಯಾಚಿಸಬೇಕಂತೆ. ಕಾರಣ An apology is a good way to have the last word’ಎಂದು ಅವರು ಹೇಳುತ್ತಿದ್ದರು. ಒಮ್ಮೆ ನೀವು ಸ್ಸಾರಿ ಎಂದು ಹೇಳಿದ ನಂತರ ಮುಗಿಯಿತು. ಎಲ್ಲರ ಬಾಯಿಗಳನ್ನೂ ಮುಚ್ಚಿಸಿದಂತೆ. ಸ್ಸಾರಿ ಹೇಳಿದ ಬಳಿಕ ಎ ವಾದ-ವಿವಾದ ಖತಂ!

ನೀವು ತಪ್ಪು ಮಾಡಿದಾಗ, ಅದು ನಿಮಗೊಂದೇ ಅಲ್ಲ, ಕನಿಷ್ಠ ಮತ್ತೊಬ್ಬನಿಗಾದರೂ ಇಂದಲ್ಲ ನಾಳೆ, ಗೊತ್ತಾಗಿಯೇ ಗೊತ್ತಾ
ಗುತ್ತದೆ. ಬೇರೆ ಯಾರೂ ಆಗ್ರಹಿಸದಿದ್ದರೂ ನೀವಾಗಿಯೇ ಮುಂದೆ ನಿಂತು, ‘ಹೌದು ನನ್ನಿಂದ ತಪ್ಪಾಗಿದೆ’ ಎಂದರೆ ನಿಮ್ಮ ಗೌರವ ವೃದ್ಧಿಸುತ್ತದೆ. ಇಲ್ಲದಿದ್ದರೆ ನೀವೇ ವಿವಾದ ಹುಟ್ಟಲು, ಬೆಳೆಯಲು ಆಸ್ಪದ ನೀಡಿದಂತಾಗುತ್ತದೆ. ಬೆಕ್ಕು ಹೊಲಸು
ಮಾಡಿ, ತಕ್ಷಣ ಅದನ್ನು ಬೂದಿಯಿಂದ ಮುಚ್ಚಿ, ಬೇರೆಂi ವರಿಗೆ ಗೊತ್ತಾಗುವುದಿಲ್ಲ ಎಂದು ಭಾವಿಸುತ್ತದೆ.

ತಪ್ಪು ಮಾಡಿದಾಗ ಅನೇಕರು ಬೆಕ್ಕಿನ ಬುದ್ಧಿಯನ್ನು ಪ್ರದರ್ಶಿಸುವುದುಂಟು. ಆದರೆ ಅದು ಬೇರೆಯವರಿಗೆ ಗೊತ್ತಾಗದೇ ಹೋಗು ವುದಿಲ್ಲ. ಅದರಲ್ಲೂ ಈ ಇಂಟರ್ನೆಟ್, ಗೂಗಲ್ ಜಮಾನದಲ್ಲಿ, ನಮ್ಮ ತಪ್ಪುಗಳು ಯಾರ ನಜರಿನಿಂದಲೂ ತಪ್ಪಿಸಿಕೊಳ್ಳ ದಿರಲು ಸಾಧ್ಯವೇ ಇಲ್ಲ. ಯಾರಾದರೂ ಒಬ್ಬರು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದೇ ಹೋಗು ವುದಿಲ್ಲ. ಆಗ ಅದು ಇಡೀ ಜಗತ್ತಿಗೇ ಗೊತ್ತಾಗುತ್ತದೆ. ನೀವು ಓಪನ್ ಆಗಿರುವುದನ್ನು, ಪ್ರಾಮಾಣಿಕರಾಗಿರುವುದನ್ನು ಜನ ಇಷ್ಟಪಡುತ್ತಾರೆ. ಓದುಗರ ಅಥವಾ ಗ್ರಾಹಕರ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಆಗುವುದಿಲ್ಲ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಷ್ಯ ಎಂದು ಭಾವಿಸುವಂತಿಲ್ಲ.

ಮರುದಿನವೇ ಮರ್ಯಾದೆ ಮಣ್ಣುಪಾಲಾಗಬಹುದು. Rework ಎಂಬ ಕೃತಿಯಲ್ಲಿ ಪ್ರಸ್ತಾಪಿಸಿದ ಎರಡು ಪ್ರಸಂಗಗಳು ನೆನಪಾಗುತ್ತಿವೆ. 1989 ರಲ್ಲಿ ಎಕ್ಸಾನ್ ಕಂಪನಿಯ ಹಡಗಿನಿಂದ ಅಲಸ್ಕಾ ಸನಿಹದ ಪ್ರಿ ವಿಲಿಯಂ ಸೌಂಡ್ ಕೊಲ್ಲಿ ತೀರದಲ್ಲಿ ತೈಲ ಸೋರಿಕೆಯಾಯಿತು. ಅಮೆರಿಕದ ದಕ್ಷಿಣ ಕಡಲ ತೀರದಲ್ಲಿ ತೈಲ ಸೋರಿಕೆಯಾದರೆ, ಅದು ಯಾರಿಗೂ ಗೊತ್ತಾಗು ವುದಿಲ್ಲ, ಅಷ್ಟರೊಳಗೆ ಹಡಗು ಬಂದರು ಸೇರಿರುತ್ತದೆ ಎಂದು ಕಂಪನಿ ಭಾವಿಸಿತು.

ಹೀಗಾಗಿ ತೈಲ ಸೋರಿಕೆ ಬಗ್ಗೆ ಕಳ್ಳಬೆಕ್ಕಿನಂತೆ ಸುಮ್ಮನಿತ್ತು. ತೈಲ ಸೋರಿಕೆಯಾಗಿರುವ ವಾಲ್ಡೆಜ್ ಎಂಬ ಪುಟ್ಟ ಪಟ್ಟಣಕ್ಕೆ ಯಾರೂ ಹೋಗಲಾರರು ಎಂದು ಎಕ್ಸಾನ್ ಸಂಸ್ಥೆ ಮುಖ್ಯಸ್ಥ ಭಾವಿಸಿದ. ಹೀಗಾಗಿ ಆತ ಮುಗುಮ್ಮಾಗಿದ್ದ. ಆದರೆ ಈ ಸುದ್ದಿ ‘ನ್ಯೂಯಾರ್ಕ್ ಟೈಮ್ಸ್’ ವರದಿಗಾರನಿಗೆ ಗೊತ್ತಾಯಿತು. ಆ ಪತ್ರಿಕೆ ಅದನ್ನೇ ದೊಡ್ಡ ಸುದ್ದಿ ಮಾಡಿತು. ಆಗ ಎಕ್ಸಾನ್ ಸಂಸ್ಥೆ
ಮುಖ್ಯಸ್ಥ ಕ್ಷಮೆಯಾಚಿಸಿದ. ಈ ಘಟನೆ ನಡೆದ ಕೆಲ ದಿನಗಳ ನಂತರ, ಪಿಟ್ಸ್‌ಬರ್ಗ್ ಸನಿಹ ಆಶ್ ಲ್ಯಾಂಡ್ ಹಡಗಿನಿಂದ
ತೈಲ ಸೋರಿ ನದಿ ನೀರು ಮಲಿನವಾಯಿತು. ಆ ಸಂಸ್ಥೆಯ ಮುಖ್ಯಸ್ಥ ಈ ಘಟನೆಯನ್ನು ಖುದ್ದಾಗಿ ಘೋಷಿಸಿದ.

ಅಷ್ಟೇ ಅಲ್ಲ, ಕಂಪನಿ ವತಿಯಿಂದ ನದಿ ನೀರನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ. ಎಲ್ಲಾ ಪತ್ರಿಕಾ ಕಚೇರಿಗಳಿಗೆ ತೆರಳಿ ತಾನು ಕೈಗೊಂಡ ಕ್ರಮಗಳನ್ನು ವಿವರಿಸಿದ. ಅಷ್ಟೇ ಅಲ್ಲ, ‘ನಮ್ಮಿಂದ ಪ್ರಮಾದವಾಗಿದೆ, ನಾವು ಇನ್ನೂ ಎಚ್ಚರಿಕೆ ತೆಗೆದುಕೊಳ್ಳ ಬೇಕಿತ್ತು, ಇನ್ನು ಮುಂದೆ ಹೀಗಾಗುವುದಿಲ್ಲ, ಆದ ಘಟನೆಗೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿ, ಜಗತ್ತಿನ ಕಣ್ಣಲ್ಲಿ ದೊಡ್ಡವನಾದ! ಪ್ರಮಾದವಾದಾಗ ಯಾರಿಗೂ ಗೊತ್ತಾಗಿಲ್ಲ ಎಂದುಕೊಳ್ಳುವುದು, ಗೊತ್ತಾದ ನಂತರವೇ ಬಾಯ್ಬಿಡುವುದು ಸಹ ಸರಿಯಾದ ಮಾರ್ಗವಲ್ಲ.

ಇಡೀ ಜಗತ್ತು ನಮ್ಮನ್ನು ನೋಡುತ್ತಲೇ ಇರುತ್ತದೆ. ಆಕಾಶದಲ್ಲಿರುವ ನಕ್ಷತ್ರ, ಕ್ಷುದ್ರಗ್ರಹಗಳನ್ನೂ ಜನ ದಿಟ್ಟಿಸದೇ ಬಿಡುವುದಿಲ್ಲ!