Thursday, 12th December 2024

ಪವಾಡದ ಸೇಬು ಹಣ್ಣು

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಜಪಾನ್ ದೇಶದಲ್ಲಿ ಅಕಿನೋರಿ ಕಿಮುರಾ ಎಂಬ ಕೃಷಿಕನಿದ್ದ. ಹಿರಿಯರು ಬೆಳೆಸಿದ್ದ ಸೇಬಿನ ತೋಟವನ್ನು ನೋಡಿಕೊಂಡು,
ಜೀವನ ನಡೆಸುತ್ತಿದ್ದ. ಆ ಸೇಬಿನ ಗಿಡಗಳಿಗೆ ಸಾಕಷ್ಟು ಕ್ರಿಮಿನಾಶಕಗಳನ್ನು ಸಿಂಪಡಿಸಿದರೆ ಮಾತ್ರ ಇಳುವರಿ ಬರುತ್ತಿತ್ತು. ಆತನ ಕಾಲದಲ್ಲಿ ಕ್ರಿಮಿನಾಶಕವನ್ನು ಕೈಯಿಂದಲೇ ಸಿಂಪಡಿಸಬೇಕಾಗಿತ್ತು. ಆ ರೀತಿ ಸಿಂಪ ಡಣೆಯ ಕೆಲಸ ಮುಗಿದಾಗ, ಕೈಯಲ್ಲಿ ದದ್ದುಗಳು ಬರುತ್ತಿದ್ದವು, ಇದನ್ನು ಹೇಗೆ ತಪ್ಪಿಸು ವುದು ಎಂದು ಆ ಕೃಷಿಕ ಯೋಚಿಸಿ, ಕ್ರಿಮಿನಾಶಕಗಳ ಬಳಕೆಯನ್ನು ಕಡಿ ಮಾಡುವ ಯೋಚನೆ ಮಾಡಿದ.

ಕ್ರಿಮಿನಾಶಕಗಳ ಬಳಕೆ ಕಡಿಮೆ ಮಾಡಿದಂತೆಲ್ಲಾ, ಆತನ ಸೇಬಿನ ತೋಟ ಮರಗಳು ಎಲೆಗಳನ್ನು ಉದುರಿಸಿಕೊಂಡು, ನಿಸ್ತೇಜ ವಾಗಿ ಕಾಣಲಾರಂಭಿಸಿದವು. ಸಹಜವಾಗಿ ಮರಗಳನ್ನು ಬೆಳೆಯಲು ಬಿಡಬೇಕು ಎಂಬ ಆತನ ಪ್ರಯೋಗದಿಂದಾಗಿ, ತೋಟ ಒಣಗಲು ಆರಂಭಿಸಿತು. ಅವನ ಬಂಧುಗಳು ಮತ್ತು ಮಿತ್ರರು ಈ ಕೆಲಸವನ್ನು ಈತನಿಗೆ ಹುಚ್ಚು ಹಿಡಿದಿದೆ ಎಂದುಕೊಂಡರು. ಕ್ರಿಮಿನಾಶಕಗಳ ಸಿಂಪಡಣೆ ಇಲ್ಲದೇ ಇದ್ದುದ ರಿಂದ, ಸೇಬಿನ ಮರಗಳ ಎಲೆಗಳನ್ನು ಕೀಟಗಳು ತಿಂದುಹಾಕಿ,ಇಡೀ ತೋಟವನ್ನು ಬೋಳು ಮಾಡಿದವು.

ಅದನ್ನು ಕಂಡು ಊರಿನವರು ನಗತೊಡಗಿದರು. ಆತನ ಇಬ್ಬರು ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟರು! ಏಕೆಂದರೆ, ಮಕ್ಕಳು ಇವರನ್ನು ಅಪಹಾಸ್ಯ ಮಾಡುತ್ತಿದ್ದರು. ಆ ಕೃಷಿಕ ನಷ್ಟಕ್ಕೆ ಬಿದ್ದ. ಹಿರಿಯರು ಬೆಳೆಸಿದ್ದ ಸೇಬಿನ ತೋಟ ಮತ್ತು ಕೃಷಿ ಜಮೀನು ಬರಡು ಭೂಮಿಯಂತೆ ಕಾಣತೊಡಗಿತು. ಹೊಟ್ಟೆ ಪಾಡಿಗಾಗಿ ಕೆಲವು ಕಾಲ ಬಾರ್ ಒಂದರಲ್ಲಿ ಕೆಲಸ ಮಾಡಿದ. ಆದರೆ ಅಲ್ಲಿ ಸರಿಹೊಂದಲಿಲ್ಲ. ಆತನ ತಲೆಯಲ್ಲಿ ತನ್ನ ಜಮೀನನ್ನು ಹೇಗೆ ಅಭಿವೃದ್ಧಿ ಪಡಿಸುವುದು ಎಂಬುದೇ ತುಂಬಿತ್ತು. ಆತನ ಹೆಂಡತಿಗೆ ಗಂಡನ ಕೃಷಿ ಪ್ರಯೋಗಗಳನ್ನು ಕಂಡು ಕುತೂಹಲ ಉಂಟಾದರೂ,ಬೆಳೆ ನಾಶವಾಗಿದ್ದನ್ನು ಕಂಡು ಬೇಸರ ಎನಿಸಿತು.

ಆದರೂ, ಅವಳಿಗೆ ಆತನ ಮೇಲೆ ನಂಬಿಕೆ ಇತ್ತು. ಪ್ರತಿದಿನ ಊಟದ ಡಬ್ಬಿ ಸಿದ್ಧಪಡಿಸಿ, ಆತನ ಕೈಗಿಡುತ್ತಿದ್ದಳು. ಆ ಡಬ್ಬಿಯನ್ನು ಹಿಡಿದು, ಆತ ಪ್ರತಿ ದಿನ ತನ್ನ ಸೇಬಿನ ತೋಟಕ್ಕೆ ಹೋಗಿ, ಎಲೆ ಉದುರಿಸಿಕೊಂಡಿದ್ದ ಮರಗಳನ್ನು ನೋಡುತ್ತಾ ದಿನವಿಡೀ ಕುಳಿತಿರುತ್ತಿದ್ದ. ಪ್ರಕೃತಿಯ ಶಿಶುಗಳಾದ ಈ ಮರಗಳು ಸಹಜವಾಗಿಯೇ ಒಂದಲ್ಲಾ ಒಂದು ದಿನ ಹಣ್ಣುಗಳನ್ನು ಬಿಡುತ್ತವೆ ಎಂದು ನಂಬಿದ್ದ. ಈ ರೀತಿ ಹತ್ತು ವರ್ಷಗಳು ಕಳೆದವು. ಆತನ ತೋಟದ ಸೇಬಿನ ಮರಗಳಲ್ಲಿ ಹಣ್ಣುಗಳಾಗುತ್ತಿರಲಿಲ್ಲ. ತಾನು ಮಾಡು ತ್ತಿರುವ ಪ್ರಯೋಗದ ದಾರಿಯೇ ಸರಿ ಇಲ್ಲ ಎಂದು ಆತನಿಗೆ ಅನಿಸತೊಡಗಿತು.

ತನ್ನ ಜೀವನವೇ ವಿಫಲಗೊಂಡಿತು ಎಂದನ್ನಿಸಿ, ಒಂದು ಬೆಳದಿಂಗಳ ರಾತ್ರಿ ತೋಟದಾಚೆ ಇದ್ದ ಬೆಟ್ಟದ ತುದಿಯ ಒಂದು ಕೋಡುಗಲ್ಲಿನ ಮೇಲೆ ನಿಂತುಕೊಂಡ. ತನಗಿನ್ನು ಆತ್ಮಹತ್ಯೆ ಒಂದೇ ದಾರಿ ಎಂದು ನೆಗೆಯಲು ಸಿದ್ಧನಾದ. ಫಕ್ಕನೆ ಆ ಬೆಟ್ಟದ ತುದಿಯಲ್ಲಿ ಆತನಿಗೊಂದು ಸೇಬು ಮರ ಕಾಣಿಸಿತು. ಕೋಡುಗಲ್ಲಿನಿಂದ ಇಳಿದು, ಮರದ ಹತ್ತಿರ ಹೋಗಿ ನೋಡಿದ. ಅದರಲ್ಲಿ ಒಂದು ಹಣ್ಣಿತ್ತು. ಆದರೆ ಅದು ಸೇಬುಮರವಾಗಿರಲಿಲ್ಲ. ಆ ಮರವನ್ನು ಕಂಡು, ಆತನಲ್ಲಿ ಒಂದು ಪ್ರಶ್ನೆ ಉದ್ಭವವಾಯಿತು ‘ಈ ಬೆಟ್ಟದಲ್ಲಿ ಒಂದೇ ಒಂದು ಮರ ಏಕಿದೆ? ಅದು ಹೇಗೆ ಬೆಳೆಯಿತು? ಆ ಮರ ಹಣ್ಣು ಬಿಡಲು ಪೋಷಕಾಂಶಗಳು ಎಲ್ಲಿಂದ ಬಂತು?’
ಮರುದಿನ ಆತ ಎಂದಿನಂತೆ ತನ್ನ ಸೇಬಿನ ತೋಟಕ್ಕೆ ಹೋಗಿ, ಮರದ ಬುಡದಲ್ಲಿ ಕುಳಿತು ಯೋಚಿಸತೊಡಗಿದ.

‘ಈ ಎಲ್ಲಾ ಸೇಬು ಮರಗಳನ್ನು ನರ್ಸರಿಗಳಲ್ಲಿ, ಕೃತಕವಾಗಿ, ಕಸಿಮಾಡಿ ಬೆಳೆಸಲಾಗಿದೆ. ಅವುಗಳಿಗೆ ತಾಯಿಬೇರೇ ಇಲ್ಲ. ಆದ್ದರಿಂದ, ಕ್ರಿಮಿನಾಶಕ ಮತ್ತೊ ಕೃತಕ ಗೊಬ್ಬರ ಹಾಕಿದಾಗ ಮಾತ್ರ ಅವು ಬೆಳೆಯುತ್ತವೆ. ಮೂಲ ಬೇರು ಇಲ್ಲದೇ ಅವು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ?’ ಮರುದಿನವೇ, ಸಹಜವಾಗಿ ಬೆಳೆದ, ತಾಯಿ ಬೇರು ಹೊಂದಿದ ಸೇಬುಗಿಡಗಳನ್ನು ಹುಡುಕಿ ನಾಟಿ ಮಾಡಿದ. ಕೊಟ್ಟಿಗೆ ಗೊಬ್ಬರ ಹಾಕಿದ. ಕ್ರಿಮಿನಾಶಕದ ಬದಲು ವಿನೆಗರ್ ಸಿಂಪಡಿಸಿದ. ವಿಶೇಷ ಎಂದರೆ, ಈ ಗಿಡಗಳನ್ನು ಕೀಟ ಗಳು ಹೆಚ್ಚು ಬಾಧಿಸಲಿಲ್ಲ. ಗಿಡಗಳು ಬೆಳೆದವು. ಸೇಬು ಹಣ್ಣಾಯಿತು.ಆತನ ಜೀವನ ಹಸನಾಯಿತು.

ಈತನ ಯಶಸ್ಸನ್ನು ಕಂಡು, ಸಹಜವಾಗಿ ಬೆಳೆದ ಸೇಬನ್ನು ಖರೀದಿಸಲು ಹೆಚ್ಚು ಹೆಚ್ಚು ಜನರು ಮುಂದೆ ಬಂದರು. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣ್ಣುಗಳನ್ನು ಆತ ಬೆಳೆಸಲಿಲ್ಲ. ಈ ಜಗತ್ತಿನಲ್ಲಿ ಎಲ್ಲವೂ ಸಹಜವಾಗಿ ಬೆಳೆಯಬೇಕು, ಒತ್ತಾಯಪೂರ್ವಕ ವಾಗಿ ಕೃತಕ ಗೊಬ್ಬರ ತಿನ್ನಿಸಿ ಹಣ್ಣುಗಳನ್ನು ಬೆಳೆಯುವುದು ಸರಿಯಲ್ಲ ಎಂದು ಆತ ಎಲ್ಲರಿಗೆ ಹೇಳಿದ.