Friday, 19th April 2024

ಮೊದಲು ಫೂಲ್ ಆಗೋದು ಮನೇಲೇ ಅಲ್ವೆ ?

ತನ್ನಿಮಿತ್ತ

ತುರುವೇಕೆರೆ ಪ್ರಸಾದ್

ಪ್ರತಿವರ್ಷ ಏ.೧ ಬಂತೆಂದರೆ ಯಾರಾದರೊಬ್ಬರು ನನ್ನನ್ನು ಫೂಲ್ ಮಾಡಿ ಮೂರ್ಖನನ್ನಾಗಿಸುತ್ತಾರೆ ಎಂಬ ಭಯ, ಅಳುಕು ನನ್ನನ್ನು ಕಾಡುತ್ತಲೇ ಇರುತ್ತದೆ. ಚಿಕ್ಕಂದಿನಲ್ಲಿ ಇದೊಂದು ದೊಡ್ಡ ಅವಮಾನದ, ಕೀಳರಿಮೆಯ ಸಂಗತಿಯಾಗಿತ್ತು. ಅಯ್ಯೋ
ಅನ್ಯಾಯವಾಗಿ ಮೂರ್ಖನಾಗಿ ಬಿಟ್ಟೆನಲ್ಲ ಎಂದು ಹಳಹಳಿಸುತ್ತಿದ್ದೆ.

ಈಗ ಕಾಲ ಬದಲಾದಂತೆ ಮೂರ್ಖನಾಗುವುದೂ ಒಂದು ರೀತಿ ಖುಷಿಯ ವಿಷಯವೇ ಎನಿಸಲಾರಂಭಿಸಿತು. ಅದಕ್ಕಿಂತ ಹೆಚ್ಚಾಗಿ ನನ್ನ ಸುತ್ತಲೇ ನನಗಿಂತ ಶತಮೂರ್ಖರಿದ್ದಾರೆ ಎಂಬುದು ಗಮನಕ್ಕೆ ಬಂದಿತು. ಒಂದು ವ್ಯತ್ಯಾಸವೆಂದರೆ ಮೂರ್ಖ ಎಂದು ನನಗೆ ಹಣೆ ಪಟ್ಟಿ ಕಟ್ಟಿದಂತೆ ಅವರಿಗೆ ಲೇಬಲ್ ಹಾಕಲಾಗುತ್ತಿರಲಿಲ್ಲ. ನನಗೆ ಮೂರ್ಖನೆಂಬ ಅರಿವಿತ್ತು. ಆದರೆ ಅರಿವಿಲ್ಲದ ಈ ಮೂರ್ಖರು ಪದೇಪದೆ ಮೂರ್ಖಕೆಲಸ ಮಾಡುವುದನ್ನು ಕಂಡು ಒಳಗೊಳಗೇ ನಗುವುದನ್ನು ಅಭ್ಯಾಸ ಮಾಡಿಕೊಂಡೆ. ಹಾಗೇ ಮೂರ್ಖರಾಗುವುದೂ ಒಂದು ಖುಷಿಯ ವಿಷಯ ಎಂಬ ಸತ್ಯ ಅವಿರ್ಭವಿಸಿತು.

ನಾವು ಮಾಡುವ ಬಹಳಷ್ಟು ಕೆಲಸ ಮತ್ತೊಬ್ಬರ ದೃಷ್ಟಿಯಲ್ಲಿ ಮೂರ್ಖ ಕೆಲಸಗಳೇ! ಈ ಮೂರ್ಖನಾಗುವ ಪ್ರಕ್ರಿಯೆ ಮನೆಯಿಂ
ದಲೇ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಸ್ಕೂಲ್ ಮನೇಲಲ್ವೇ? ಅಂದ ಹಾಗೆ ದೊಡ್ಡವರೂ ಮೊದಲ ಫೂಲ್ ಆಗೋದು ಮನೇಲೇ ಅಲ್ವೇ? ಮೊದಲು ಹೆಂಡತಿ, ನಂತರ ಮಕ್ಕಳು ಹೀಗೆ ಮನೆಯ ಯಾರಾದರೊಬ್ಬರು ನಮ್ಮನ್ನು ಆಗಾಗ್ಗೆ ನಾವು ಮೂರ್ಖರೆಂದು ಜ್ಞಾಪಿಸಲು ಫೂಲ್ ಮಾಡುತ್ತಲೇ ಹೋಗುತ್ತಾರೆ. ಆದರೂ ನಾವು ಅವರ ಮಧ್ಯೆಯೇ ಖುಷಿಯಿಂದ ಇರುತ್ತೇವೆ ಎಂದರೆ ಮೂರ್ಖ ರಾಗುವುದೂ ಒಂದು ರೀತಿಯ ಸಂತೋಷದ ಸಂಗತಿಯೇ ಅಲ್ಲವೇ? ಇನ್ನು ನಮ್ಮ ವ್ಯವಸ್ಥೆ, ರಾಜಕಾರಣಿಗಳು ಎಲ್ಲರೂ ನಮ್ಮನ್ನು ಒಂದಿಂದು ಬಗೆಯಲ್ಲಿ ಮೂರ್ಖರನ್ನಾಗಿಸುತ್ತಲೇ ಇರುತ್ತಾರೆ. ಹಾಗೆಂದು ನಮ್ಮ ಕೆಲವರು ಬುದ್ದಿವಂತ ಮೂರ್ಖರು ನಮ್ಮನ್ನು ಎಚ್ಚರಿಸುತ್ತಲೇ ಇರುತ್ತಾರೆ. ಇದಕ್ಕೆ ನಾವು ಹೊಂದಿಕೊಂಡು ಖುಷಿಯಿಂದಲೇ ಇದ್ದೇವಲ್ಲ!

ನಮ್ಮನ್ನು ಮೂರ್ಖರನ್ನಾಗಿಸಿzರೆ ಎಂದು ಸಿಟ್ಟಿನಿಂದ ಯಾರೂ ಯಾರ ವಿರುದ್ಧವೂ ಪ್ರತಿಭಟನೆಯನ್ನಂತೂ ಮಾಡಿಲ್ಲ.
ಹಾಗಾಗಿ ಹೇಗೆ ರಾಜಕೀಯ ಮಾಡುವುದು, ಆಢಳಿತ ನಡೆಸುವುದು ವಂಶಪಾರಂಪರ್ಯ ಎನಿಸಿದೆಯೋ ಹಾಗೆಯೇ  ಮೂರ್ಖ ರಾಗುವುದು ನಮಗೆ ಜೀನಿನಲ್ಲಿ ಬಂದುಬಿಟ್ಟಿದೆ. ಹೌದಲ್ಲವಾ? ಹೀಗೆ ಮೂರ್ಖತನವನ್ನು ನಮ್ಮೊಳಗೇ ಹುದುಗಿಸಿ ಕೊಂಡಿರುವ, ಅದಕ್ಕೆ ಹೊಂದಿಕೊಂಡಿರುವ, ಅದನ್ನೇ ಒಂದು ಸಹಜ ಸ್ವಭಾವ ಎಂಬುದಾಗಿ ಒಗ್ಗಿಸಿಕೊಂಡಿರುವ ಅದರಿಂದ ನಮಗೆ ಉಪಯೋಗವೇ ಹೆಚ್ಚು! ನಾವು ಮೂರ್ಖರು ಎಂದಾದ ಮೇಲೆ ನಮ್ಮಿಂದ ಯಾರೂ ಹೆಚ್ಚಿನದೇನನ್ನೂ ನಿರೀಕ್ಷಿಸಲಾರರು.

ಹಾಗಾಗಿ ನಾವು ಎಲ್ಲಾ ಒತ್ತಡಗಳಿಂದ ಮುಕ್ತರು. ಬುದ್ದಿವಂತಿಕೆಗೆ ಇರುವಂತೆ ಮೂರ್ಖತನಕ್ಕೆ ಸ್ಪರ್ಧೆಯಿಲ್ಲ, ಗೆಲ್ಲಬೇಕೆಂಬ ಒತ್ತಡವಿಲ್ಲ. ದೇಹದಲ್ಲಿ ಒಂದು ರೋಗ ನಿರೋಧಕ ಶಕ್ತಿ ಇದ್ದೇ ಇರುತ್ತದಂತೆ! ಪದೇ ಪದೆ ಒಂದು ವೈರಸ್ ದಾಳಿ ಮಾಡಿದಾಗ ದೇಹ ಅದಕ್ಕೆ ಇಮ್ಯೂನ್ ಆಗುತ್ತದೆ. ಹಾಗೇ ಮೂರ್ಖತನದ ವೈರಸ್ ನಮ್ಮನ್ನು ಪದೇಪದೆ ಕಾಡಿ ನಾವು ಅದಕ್ಕೆ ಇಮ್ಯೂನ್ ಆಗಿಬಿಟ್ಟಿರುತ್ತೇವೆ. ನಮಗೆ ಬೇರೆಯವರಿಗೆ ಆದಂತೆ ಮೂರ್ಖ ಎಂದೊಡನೆ ನೋವಾಗುವುದಿಲ್ಲ, ಅವರ ವಿರುದ್ಧ ಸೆಟೆದೇಳುವು ದಿಲ್ಲ, ಇದು ಇದ್ದದ್ದೇ ಎಂಬ ಸೋಗಲಾಡಿತನ ಅಲ್ಲಲ್ಲ ನಿರ್ಲಿಪ್ತತೆ ನಮ್ಮನ್ನು ಆವರಿಸಿ ಪ್ರಶಾಂತವಾಗೇ ಇರುತ್ತೇವೆ.

ವ್ಯವಸ್ಥೆಯೇ ನಮಗೆ ಅಂತಹ ಪಾಠ ಕಲಿಸಿದೆ. ಮೂರ್ಖರಾಗಿಯೂ ನಾವು ಆಮಿಶಗಳಿಗೆ ಒದ್ದಾಡುವುದು, ಆಕಳಿಸುತ್ತಲೇ ಪ್ರನಾ ಳಿಕೆಗಳಿಗೆ ಸ್ಪಂದಿಸುವುದು, ನಾವು ಬುದ್ದಿವಂತರ ನೆರಳಲಿದ್ದೇವೆ ಎಂದು ಭ್ರಮಿಸುವುದು, ಎಂದಾದರೊಂದು ದಿನ ಉದ್ಧಾರ ವಾಗುತ್ತೇವೆ ಎಂದು ಒದ್ದಾಡುತ್ತಿರುವುದು ಪರಮ ಮೂರ್ಖರ ಲಕ್ಷಣ ಎಂದರೆ ಯಾರಿಗಾದರೂ ಸಿಟ್ಟು ಬರುತ್ತದೆಯೇ? ನಮ್ಮನ್ನೇ ಮೂರ್ಖರಂತೆ ನೋಡುತ್ತಾರೆ. ಈ ಮೂರ್ಖಕೆಲಸಗಳ ನಿರ್ಲಿಪ್ತತೆಯನ್ನು, ಸಮಾಧಾನವನ್ನು, ನಮ್ಮ ಅಸ್ಮಿತೆಯನ್ನು ಕಂಡು ಕೊಂಡಿರದಿದ್ದರೆ ನಾವು ಸಂತೋಷವಾಗಿರಲು ಹೇಗೆ ಸಾಧ್ಯ? ವೈಎನ್ಕೆ ಒಂದು ಜೋಕ್ ಹೇಳುತ್ತಿದ್ದರು: ಕಿರಿದಾದ ಸೇತುವೆ ಯ ಮೇಲೆ ಎದುರು ಹಾದ ಇಬ್ಬರಲ್ಲಿ ಒಬ್ಬ ಹೇಳಿದನಂತೆ: ನಾನು ಯಾವ ಮೂರ್ಖನಿಗೂ ಜಾಗ ಬಿಡಲ್ಲ ಅಂತ.

ಅದಕ್ಕೆ ಇನ್ನೊಬ್ಬ ಹೇಳಿದನಂತೆ: ನಾನು ಎಲ್ಲಾ ಮೂರ್ಖರಿಗೂ ಜಾಗ ಬಿಡುತ್ತೇನೆ. ಹಾಗೆಯೇ ಯಾವ ಮೂರ್ಖನನ್ನೂ ನಾನು ಬುದ್ದಿವಂತ ಎನ್ನಲಾರೆ. ಯಾವ ಬುದ್ದಿವಂತನೂ ನನ್ನನ್ನು ಮೂರ್ಖ ಎನ್ನಲಾರ! ಮೂರ್ಖರ ಸಂತತಿ ಹೀಗೇ ಮುಂದುವರೆ ಯಲಿ!

Leave a Reply

Your email address will not be published. Required fields are marked *

error: Content is protected !!