Sunday, 24th November 2024

ಅರಬ್‌ ವೈದ್ಯಕೀಯ ಸುವರ್ಣಯುಗ

ಹಿಂದಿರುಗಿ ನೋಡಿದಾಗ

ಅರಬ್ ದೇಶಗಳಲ್ಲಿ ಕ್ರಿ.ಶ.೮ನೇ ಶತಮಾನದಿಂದ 12ನೆಯ ಶತಮಾನದವರೆಗೆ ಕಾಲವನ್ನು ಅರಬ್ ವೈದ್ಯ ಕ್ಷೇತ್ರದ ಸುವರ್ಣ ಯುಗ ಎಂದು ಕರೆಯುವುದುಂಟು.

ಜಗತ್ತಿನ ಯಾವುದೇ ದೇಶಗಳಲ್ಲಿ ನಡೆಯದಂತಹ ಮೂಲಭೂತ ವೈದ್ಯಕೀಯ ಸುಧಾರಣೆಗಳು ಅರಬ್ ದೇಶಗಳಲ್ಲಿ ನಡೆದವು. ಮಧ್ಯಯುಗದ ಅರಬ್ ದೇಶಗಳ ದೊಡ್ದ ನಗರಗಳಲ್ಲಿ ಹಲವು ಕಡೆ ಬೃಹತ್ ಆಸ್ಪತ್ರೆಗಳು ಸ್ಥಾಪನೆಯಾದವು. ಗ್ರಾಮಾಂತರ ಪ್ರದೇಶದಲ್ಲಿ ಸಂಚಾರಿ ಆಸ್ಪತ್ರೆಗಳು ಅಸ್ತಿತ್ವಕ್ಕೆ ಬಂದವು. ಅಂದಿನ ಅರಬ್ ವೈದ್ಯರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಹೊಸ ಅಧ್ಯಯನಗಳನ್ನು ಹಾಗೂ ಸಂಶೋಧನೆಗಳನ್ನು ನಡೆಸಿದರು.

ಅವುಗಳಲ್ಲಿ ಹೊಸ ಹೊಸ ಚಿಕಿತ್ಸಾ ವಿಧಾನಗಳು ರೂಪಿಸಿದರು. ಹೊಸ ಹೊಸ ಔಷಧ ಗಳನ್ನು ಪ್ರಯೋಗಿಸಲು ಕಲಿತರು. ಹಾಗೆಯೇ ಹೊಸ ಹೊಸ ಶಸ್ತ್ರ ವೈದ್ಯಕೀಯ ಉಪಕರಣಗಳನ್ನು ರೂಪಿಸಿದರು. ಇವೆಲ್ಲದರ ಜತೆಯಲ್ಲಿ ತಾವು ರೂಪಿಸಿಕೊಂಡ ನವೀನ ಆವಿಷ್ಕಾರಗಳನ್ನು ಕುರಿತು ಗ್ರಂಥಗಳನ್ನು ಬರೆದರು. ಅರಬ್ ದೇಶಗಳು ಪೂರ್ವ ಮತ್ತು ಪಶ್ಚಿಮಗೋಳಗಳ ನಡುವಿನ ಕೊಂಡಿ ದೇಶವಾಗಿದ್ದ ಕಾರಣ, ಅವರ ಅರಬ್ ಬರಹಗಳು ಯೂರೋಪ್ ಭಾಷೆಗಳಿಗೆ ಅನುವಾದವಾದವು.

ಬೌದ್ಧಿಕ ವಿನಿಮಯವು ನಿಸ್ಪೃಹವಾಗಿ ಮುಂದುವರಿಯಿತು. ಈ ಅವಧಿಯಲ್ಲಿ ಅನೇಕ ವೈದ್ಯರು ಅರಬ್ ದೇಶಗಳಲ್ಲಿ ಹುಟ್ಟಿ ಕೊಂಡು, ಅರಬ್ ವೈದ್ಯಕೀಯ ಸುವರ್ಣ ಯುಗವು ಅನ್ವರ್ಥವಾಗಲು ಕಾರಣರಾದರು. ಅಬು ಅಲ್ ಖಾಸೀಂ ಅಮ್ಮರ್ ಇಬ್ನ್ ಅಲ್ ಮಾವಸಿಲಿ 11 ನೆಯ ಶತಮಾನದಲ್ಲಿ ವಾಸವಾಗಿದ್ದ ಅರಬ್ ವೈದ್ಯ. ಈತನು ನೇತ್ರಜ್ಞನೂ ಆಗಿದ್ದ. ಈತನು ಕಣ್ಣಿನ ಪೊರೆ ಯನ್ನು ನಿವಾರಿಸುವುದರಲ್ಲಿ ಸಿದ್ಧಹಸ್ತನೆನಿಸಿಕೊಂಡ. ಒಂದು ವಿಶೇಷ ಸಿರಿಂಜನ್ನು ರೂಪಿಸಿದ. ಸೂಜಿಯನ್ನು ಕಣ್ಣಿನ ಪೊರೆ ಯೊಳಗೆ ಇಳಿಬಿಟ್ಟ.

ಅಪಾರದರ್ಶಕವಾದ, ಗಂಜಿನಂತಹ ಮಸೂರವನ್ನು ನಿಧಾನವಾಗಿ ಸಿರಿಂಜಿನ ಮೂಲಕ ಹೀರಿದ. ಬೆಳಕಿನ ಪ್ರವೇಶಕ್ಕೆ ಅಡ್ಡ ವಾಗಿದ್ದ ಮಸೂರವು ನಿವಾರಣೆಯಾದ ಮೇಲೆ ಈಗ ಬೆಳಕು ಕಣ್ಣಿನೊಳಗೆ ಪ್ರವೇಶಿಸುವುದು ಸುಲಭವಾಗಿತ್ತು. ಹಾಗಾಗಿ ಪರಿಪೂರ್ಣವಾಗಿ ಕುರುಡನಾಗಿದ್ದ ವ್ಯಕ್ತಿಯು ಸ್ವಲ್ಪಮಟ್ಟಿಗೆ ನೋಡಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಅಮ್ಮರ್ ಅಲ್ ಮಾವಸಿಲಿ ರೂಪಿಸಿದ ತಂತ್ರದಲ್ಲಿ ಅನೇಕ ಸುಧಾರಣೆಗಳಾದವು. ಜಗತ್ತಿನ ಇತರ ದೇಶಗಳಿಗೂ ಈ ತಂತ್ರವು ಹರಡಿತು.

ಅಲಿ ಇಬ್ನ್ ಇಸ ಅಲ್ ಕಹ್ಹಾಲ್ (ಮರಣ: ಕ್ರಿ.ಶ.1010) ಎಂಬ ಅರಬ್ ವೈದ್ಯ ಯೂರೋಪಿಯನ್ನರಿಗೆ ಇಬ್ನ್ ಇಸ ಎನ್ನುವ ಹೆಸರಿನಲ್ಲಿ ಹೆಚ್ಚು ಪರಿಚಿತ. ಇವನು ಬಾಗ್ದಾದಿನ ಅಲ್-ಅದೂದಿ ಆಸ್ಪತ್ರೆಯಲ್ಲಿ ನೇತ್ರವೈದ್ಯನಾಗಿದ್ದ. ಈತ ತನ್ನ ಜೀವನಾ ನುಭವದ ಆಧಾರದ ಮೇರೆಗೆ ತದ್ಕಿರಾತ್ ಅಲ್ -ಕಹ್ಹಾಲಿನ್ (ನೇತ್ರವೈದ್ಯನ ಪುಸ್ತಕ) ಎನ್ನುವ ನೇತ್ರವೈದ್ಯಕೀಯ ಗ್ರಂಥವನ್ನು ಬರೆದ. ಇದರಲ್ಲಿ ಕಣ್ಣಿನ ನಾನಾ ಭಾಗಗಳಿಗೆ ಬರುವ ೧೩೦ ನೇತ್ರರೋಗಗಳ ಬಗ್ಗೆ ವಿವರಣೆಯನ್ನು ನೀಡಿದ. ಈ ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಿದ. ಮೊದಲ ಭಾಗದಲ್ಲಿ ಕಣ್ಣಿನ ರಚನೆಗೆ ಸಂಬಂಧಿಸಿದ ನೇತ್ರರಚನಾ ವಿಜ್ಞಾನವಿತ್ತು.

ಎರಡನೆಯ ಭಾಗದಲ್ಲಿ ನಾನಾ ನೇತ್ರರೋಗಗಳು, ಆ ರೋಗಗಳು ಸಂಭವಿಸಲು ಕಾರಣ, ಅವುಗಳ ಲಕ್ಷಣಗಳು ಮತ್ತು ಚಿಕಿತ್ಸೆಯ ವಿವರಗಳಿದ್ದವು. ಮೂರನೆಯ ಭಾಗದಲ್ಲಿ ಅಪ್ರಧಾನ ನೇತ್ರರೋಗಗಳನ್ನು ಕುರಿತು ವಿವರಣೆಯನ್ನು ನೀಡಿದ. ಇಬ್ನ್ ಇಸ ಬರೆದ
ಈ ಗ್ರಂಥವನ್ನು 1497ರಲ್ಲಿ ಲ್ಯಾಟಿನ್ ಭಾಷೆಗೆ ಅನುವಾದವನ್ನು ಮಾಡಿದರು. ಆನಂತರ ಈ ಗ್ರಂಥವು ಹಲವು ಭಾಷೆಗಳಿಗೆ ಅನುವಾದವಾಯಿತು. ಅನೇಕ ಶತಮಾನದವರೆಗೆ ಜಗನ್ಮಾನ್ಯ ನೇತ್ರ ವೈದ್ಯಕೀಯ ಗ್ರಂಥವಾಗಿ ಪ್ರಸಿದ್ಧಿಯನ್ನು ಪಡೆಯಿತು.

ಅಬು ಅಲ್ ಖಾಸೀಂ ಅಥವ ಅಲ್-ಜ಼ಹ್ರಾವಿ ಎಂಬ ಹೆಸರಿನಲ್ಲಿ ಯೂರೋಪ್ ದೇಶದಲ್ಲಿ ಪ್ರಖ್ಯಾತನಾಗಿದ್ದ ಅಬು ಅಲ್ ಖಾಸೀಂ ಖಲಾ- ಇಬ್ನ್ ಅಲಬ್ಬಾಸ್ ಅಲ್ ಜ಼ಹ್ರಾವಿ ಅಲ್ ಅನ್ಸಾರಿ (936-1013) ಅರಬ್ ವೈದ್ಯ, ಶಸ್ತ್ರವೈದ್ಯ ಮತ್ತು ರಸಾಯನಶಾಸ್ತ್ರಜ್ಞ ನಾಗಿದ್ದ. ಈತನ ಹೆಸರನ್ನು ಉಚ್ಚರಿಸುವುದು ಸ್ವಲ್ಪ ಕಷ್ಟವಾಗಿದ್ದ ಕಾರಣ, ರೋಮನ್ನರು ಈತನ ಹೆಸರನ್ನು ಲ್ಯಾಟಿನ್ ಭಾಷೆಗೆ ಅನುವಾದ ಮಾಡಿ ಅಬುಲ್ಕೇಸಿಸ್ ಎಂದು ಕರೆದರು. ಕೆಲವರು ಈತನನ್ನು ಆಧುನಿಕ ಶಸ್ತ್ರವೈದ್ಯಕೀಯದ ಪಿತಾಮಹ ಎಂದೂ ಕರೆಯುವುದುಂಟು. ಈತನು ಸುಮಾರು 200 ಹೊಸ ಹೊಸ ಶಸ್ತ್ರವೈದ್ಯಕೀಯ ಉಪಕರಣಗಳನ್ನು ರೂಪಿಸಿದ.

ಇವನು ಪ್ರತಿಯೊಂದು ಉಪಕರಣದ ಸುಂದರವಾದ ಚಿತ್ರವನ್ನು ಬರೆದು, ಅದನ್ನು ಯಾವ ಯಾವ ಶಸ್ತ್ರಚಿಕಿತ್ಸೆಗಳ ಯಾವ ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಎನ್ನುವ ವಿವರಣೆಯನ್ನೂ ನೀಡಿದ. ಅಲ್ ಜ಼ಹ್ರಾವಿ ಅತ್ ತಸ್ರೀಫ್ ಲಿಮನ್ ಅeಜ಼್
ಅನ್ ಅತ್ ತಾಲೀಫ್ ಅಥವ ಅತ್-ತಸ್ರೀಫ್ ಎಂದು ಹೆಸರುವಾಸಿಯಾಗಿದ್ದ ಪುಸ್ತಕವನ್ನು ಬರೆದ. ಇದು 30 ಸಂಪುಟಗಳ ಬೃಹತ್ ಪುಸ್ತಕವಾಗಿತ್ತು. ಇದರಲ್ಲಿ ಇವನು ಅದುವರೆಗೂ ಮನುಕುಲಕ್ಕೆ ಗೊತ್ತಿದ್ದ ಎಲ್ಲ ರೀತಿಯ ಶಸ್ತ್ರಚಿಕಿತ್ಸಾ ವೈದ್ಯಕೀಯ ಮಾಹಿತಿ ಯನ್ನು ಸಂಗ್ರಹಿಸಿದ.

ಇದರಲ್ಲಿ ಬೈeಂಟೈನ್ ಗ್ರೀಕ್ ವೈದ್ಯನಾಗಿದ್ದ ಪೌಲಸ್ ಏಜಿನೇಟ (625-690) ಬರೆದ ಏಳು ಸಂಪುಟಗಳಲ್ಲಿ ವೈದ್ಯಕೀಯ ಸಂಹಿತೆ (ಮೆಡಿಕಲ್ ಕಾಂಪೆಂಡಿಯಂ ಇನ್ ಸೆವೆನ್ ಬುಕ್ಸ್) ಯನ್ನೂ ಸೇರಿಸಿದ್ದ. ಇದರಲ್ಲಿ ಅನೇಕ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಿದ. ಕುಸುಮ ರೋಗ (ಹೀಮೋಫೀಲಿಯ) ಎನ್ನುವ ರೋಗದ ಮೊದಮೊದಲ ಲಕ್ಷಣಗಳು ಈ ಪುಸ್ತಕದಲ್ಲಿ ದೊರೆಯುತ್ತದೆ. ರೋಗಗಳ ವಿವರಣೆಯ ಜತೆಯಲ್ಲಿ ಶಸ್ತ್ರವೈದ್ಯಕೀಯ ವಿವಿಧ ತಂತ್ರಗಳ ವಿವರಣೆಗಳು, ಬಳಸುವ ಉಪಕರಣಗಳು, ವಿಧಾನಗಳು, ಔಷಧಗಳನ್ನು ತಯಾರಿಸುವ ವಿಧಾನಗಳ ಮಾಹಿತಿಯು ದೊರೆಯುತ್ತವೆ.

ದಾದಿಯರು ನಡೆಸಬಹುದಾದ ಪ್ರಸೂತಿ ತಂತ್ರ ಚಿಕಿತ್ಸೆಗಳು, ಅವರು ನಡೆಸಬಹುದಾದ ಸಣ್ಣ ಪುಟ್ಟ ಶಸ್ತ್ರಕ್ರಿಯೆಗಳು, ಗಾಯ ಗಳನ್ನು ಗುಣಪಡಿಸುವ ಕೆಲವು ಸಲ ಉಪಯೋಗಿಸುವ ಸುಡುಚಿಕಿತ್ಸೆ (ಕಾಟರಿ) ಗಳ ಮಾಹಿತಿಯಿದೆ. ಹೃದ್ರೋಗಗಳು ಹಾಗೂ ಅವುಗಳಿಗೆ ಚಿಕಿತ್ಸೆ, ವಿವಿಧ ರೀತಿಯ ತಲೆನೋವು ಹಾಗೂ ಅವುಗಳಿಗೆ ಸಂಬಂಽಸಿದ ಚಿಕಿತ್ಸಾ ವಿವರಗಳಿವೆ. ಈತನು 30  ಸಂಪುಟ ಗಳು 12ನೆಯ ಶತಮಾನದಲ್ಲಿ ಲ್ಯಾಟಿನ್ ಭಾಷೆಗೆ ಅನುವಾದವಾದವು.

ಯೂರೋಪಿನಾದ್ಯಂತ ಜನಪ್ರಿಯವಾದವು. 10 ಮತ್ತು 11 ನೆಯ ಶತಮಾನದ ಅಬ್ಬಾಸಿದ್ ಖಲೀಫಾರವರ ಆಡಳಿತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಪಾರ ಪ್ರೋತ್ಸಾಹಗಳು ದೊರೆತವು. ಹಾಗಾಗಿ ಹೊಸ ಹೊಸ ಚಿಕಿತ್ಸಾ ವೈವಿಧ್ಯವನ್ನು ರೂಪಿಸಲು ಸಾಧ್ಯವಾಯಿತು. ಈ ಅವಧಿಯ ಬುದ್ಧಿವಂತ ಶಸವೈದ್ಯ ಹಾಗೂ ಬುದ್ಧಿಜೀವಿಗಳಲ್ಲಿ ಅಬು ಬಕ್ರ್ ಮುಹಮ್ಮದ್ ಇಬ್ನ್ ಜ಼ಕಾರಿ ಅಲ್ ರಾಜ಼ಿ (865-925) ಮುಖ್ಯನಾದವನು. ಯೂರೋಪಿನಲ್ಲಿ ರಾಜ಼ೆಸ್ ಎಂದು ಹೆಸರುವಾಸಿಯಾಗಿದ್ದ ಈತನು ಇರಾನಿನ ರಯ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯನಾಗಿ ಕೆಲಸವನ್ನು ಮಾಡುತ್ತಿದ್ದ.

ಇರಾನಿಗೆ ಬರುವ ಮೊದಲು ಬಾಗ್ದಾದಿನ ಆಸ್ಪತ್ರೆಯಲ್ಲಿ ಮುಖ್ಯಸ್ಥನಾಗಿ ಕೆಲಸವನ್ನು ಮಾಡಿದ್ದ. ವೈದ್ಯಕೀಯ ದಾರ್ಶನಿಕತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಕಿತಾಬ್ ಅಲ್-ಮನ್ಸೂರಿ ಮತ್ತು ಕಿತಾಬ್ ಅಲ್-ಹಾವಿ ಎಂಬ ಎರಡು ಗ್ರಂಥಗಳನ್ನು ರಚಿಸಿದ. ಇವುಗಳಲ್ಲಿ ಸಮಕಾಲೀನ ಗ್ರೀಕ್, ಸಿರಿಯನ್ ಮತ್ತು ಅರಬ್ ವೈದ್ಯಕೀಯ ಗ್ರಂಥಗಳ ಸಾರಾಂಶ ಅಡಗಿತ್ತು. ಈತನು ಸುಮಾರು 200 ಉಪಯುಕ್ತ ಗ್ರಂಥಗಳನ್ನು ಬರೆದನಾದರೂ, ಅವುಗಳಲ್ಲಿ ಸಿಡುಬು ಮತ್ತು ದಡಾರದ ರೋಗಲಕ್ಷಣಗಳ ಪುಸ್ತಕವು
ಮುಖ್ಯವಾಗಿತ್ತು.

ಸಿಡುಬಿಗೂ, ದಡಾರಕ್ಕೂ ವ್ಯತ್ಯಾಸವು ತಿಳಿಯದಿದ್ದ ದಿನಗಳಲ್ಲಿ ಇವೆರಡರ ನಡುವಿನ ಲಕ್ಷಣಗಳಲ್ಲಿರುವ ಭಿನ್ನತೆ ಹಾಗೂ ಚಿಕಿತ್ಸಾ ಸ್ವರೂಪದ ವ್ಯತ್ಯಾಸಗಳನ್ನು ಮೊದಲ ಬಾರಿಗೆ ದಾಖಲಿಸಿದ್ದ. ಈತನ ಕೃತಿಗಳು ಲ್ಯಾಟಿನ್, ಬೈeಂಟೈನ್ ಗ್ರೀಕ್ ಹಾಗೂ ಇತರ ಭಾಷೆಗಳಿಗೆ ಅನುವಾದವಾದವು. ಅಲ್-ರಾಜ಼ಿಯ ಹೆಗ್ಗಳಿಕೆಯೆಂದರೆ ಈತನು ವಾರ್ಡ್ ರೌಂಡ್ಸ್ ಎನ್ನುವ್ ಪರಿಕಲ್ಪನೆ ಯನ್ನು ಯಶಸ್ವಿ ಯಾಗಿ ಜಾರಿಗೆ ತಂದದ್ದು. ಬೆಳಗಿನ ಹೊತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆದುಕೊಂಡು, ಪ್ರತಿಯೊಬ್ಬ ರೋಗಿಯ ಬಳಿಗೆ ಹೋಗುತ್ತಿದ್ದ.

ಕಿರಿಯ ವಿದ್ಯಾರ್ಥಿಗಳಿಗೆ ಮೂಲಭೂತ ಪ್ರಶ್ನೆಗಳನ್ನು ಕೇಳಿದರೆ, ಹಿರಿಯ ವಿದ್ಯಾರ್ಥಿಗಳಿಗೆ ಚಿಕಿತ್ಸೆಗೆ ಸಂಬಂಧಿಸಿದ ವಿವರ ಗಳನ್ನು ಕೇಳುತ್ತಿದ್ದ. ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡ ಮೇಲೆ ಮತ್ತಷ್ಟು ಉತ್ತರವಿಲ್ಲದ ಪ್ರಶ್ನೆಗಳು ಉಳಿದರೆ,
ಅವುಗಳ ಬಗ್ಗೆ ಸ್ವಯಂ ಚಿಂತನ-ಮಂಥನವನ್ನು ನಡೆಸಿ, ತನ್ನ ಅನಿಸಿಕೆಗಳನ್ನು ದಾಖಲಿಸುತ್ತಿದ್ದ. ಇಬ್ನ್ ಸಿನ ಅಥವ ಅವಿಸೆನ್ನ (980-1037) ಎಂದು ಖ್ಯಾತನಾಗಿದ್ದ ಈ ಪ್ರತಿಭಾವಂತನು, 18 ವರ್ಷಗಳಾಗುತ್ತಿದ್ದಂತೆಯೇ ವೈದ್ಯನಾಗಿದ್ದ. ಈತನು ಬರೆದ ಅಲ್ ಖಾನೂನ್ ಫಿ ಅಲ್ ತಿಬ್ (ಕ್ಯಾನನ್ ಆಫ್ ಮೆಡಿಸಿನ್) ಎಂಬ ಪುಸ್ತಕವು ಅರಬ್ ಜಗತ್ತಿನ ಅತ್ಯಂತ ಪ್ರಸಿದ್ಧ ವೈದ್ಯಕೀಯ ಗ್ರಂಥವಾಗಿ ಹೆಸರಾಯಿತು.

ಅರಿಸ್ಟಾಟಲ್ ಮತ್ತು ಗ್ಯಾಲನ್ ಸಂಗ್ರಹಿಸಿದ ವೈದ್ಯಕೀಯ ಅರಿವನ್ನು ಪರಿಷ್ಕರಿಸಿದ. ಹಾಗೆಯೇ ಅರಬ್ ವೈದ್ಯಕೀಯದ ಅನ್ವಯ ಸೋಂಕು ರೋಗಗಳಿಗೆಂದು ಹೆಸರಾಗಿದ್ದ ಕುಷ್ಠ, ಸಿಡುಬು, ಲೈಂಗಿಕ ರೋಗಗಳು, ಕ್ಷಯ ಇತ್ಯಾದಿಗಳು ಹೇಗೆ ಒಬ್ಬರಿಂದ ಒಬ್ಬರಿಗೆ ನಿಗದಿತ ಮಾಧ್ಯಮಗಳ ಮೂಲಕ (ನೀರು, ಗಾಳಿ, ಮಣ್ಣು) ಎನ್ನುವುದನ್ನು ವಿವರಿಸಿದ. ಇಬ್ನ್ ಸಿನ ಒಬ್ಬ ರೋಗಿಯನ್ನು ನಾನಾ ಕೋನಗಳಿಂದ ಪರೀಕ್ಷಿಸುತ್ತಿದ್ದ. ರೋಗಿಯ ಆಹಾರ ಪದ್ಧತಿ, ರೋಗಿಯ ಮಾನಸಿಕ ಆರೋಗ್ಯದ ಮಟ್ಟ, ಆತನು ವಾಸಮಾ ಡುತ್ತಿದ್ದ ಪರಿಸರದ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡು, ಅದರ ಹಿನ್ನೆಲೆಯಲ್ಲಿ ಅವನ ರೋಗವನ್ನು ವಿಶ್ಲೇಷಿಸಿ, ಸೂಕ್ತ ಚಿಕಿತ್ಸೆಯನ್ನು ರೂಪಿಸುತ್ತಿದ್ದ.

ಇವನ ಗ್ರಂಥವು 18 ನೆಯ ಶತಮಾನದ ಯೂರೋಪಿನಲ್ಲಿಯೂ ಜನಪ್ರಿಯವಾಗಿತ್ತು. ಹುನಾಯ್ನ ಇಬ್ನ್ ಇಷಕ್ ಅಲ್ ಅಬಾದಿ (809-873) ಬಹುಭಾಷಾ ಕೋವಿದನಾಗಿರುವುದರ ಜತೆಯಲ್ಲಿ ವೈದ್ಯನು ವಿಜ್ಞಾನಿಯೂ ಆಗಿದ್ದ. ಗ್ರೀಕ್ ವೈದ್ಯಕೀಯ ಮತ್ತು ಅರಬ್ ವೈದ್ಯಕೀಯದ ನಡುವಿನ ಕೊಂಡಿಯಾಗಿದ್ದ. ವೈದ್ಯಕೀಯ ಗ್ರಂಥಗಳನ್ನು ಎರಡೂ ಭಾಷೆಗಳಿಗೆ ಅನುವಾದಿ ಸುತ್ತಿದ್ದ. ಹಾಗಾಗಿ ಈತನು ಜ್ಞಾನವಿನಿಮಯದ ಮಹಾ ಸೇತುವಾಗಿದ್ದ. ಇಬ್ನ್ ಅಲ್-ನಫೀಸ್ ಬಹುಭಾಷಾ ಹಾಗೂ ಬಹುವಿಜ್ಞಾನಗಳ ವಿದ್ವಾಂಸನಾಗಿದ್ದ.

ವೈದ್ಯಕೀಯದಲ್ಲಿ ಶ್ವಾಸಕ ಪರಿಚಲನೆಯನ್ನು (ಪಲ್ಮನರಿ ಸರ್ಕ್ಯುಲೇಶನ್) ಅಸ್ತಿತ್ವದ ಬಗ್ಗೆ ಮೊದಲು ಪ್ರಸ್ತಾಪಿಸಿದ. ಮುಹಮ್ಮದ್ ಮುಮಿನ್ ಇಬ್ನ್ ಮಿರ್ ಮುಹಮ್ಮದ್ ಜ಼ಮಾನ್ ತುನಕಾಬುನಿ 17 ನೆಯ ಶತಮಾನದ ಪರ್ಷಿಯನ್ ವಿದ್ವಾಂಸನಾಗಿದ್ದ ಯೋಗ ಮತ್ತು ಪ್ರಾಣಾಯಾಮದ ಬಗ್ಗೆ ಅರಬ್ಬರಿಗೆ ಪರಿಚಯವನ್ನು ನೀಡುವುದರ ಜೊತೆಯಲ್ಲಿ, ಉಸಿರಾಟದ ಮೂಲಕ ನಾಲ್ಕು
ರಸಗಳನ್ನು (ಗ್ರೀಕ್ ವೈದ್ಯಕೀಯದ ಅನ್ವಯ ಶರೀರದಲ್ಲಿ ನಾಲ್ಕು ರಸಗಳು ಇವೆಯೆಂದು, ಅವುಗಳ ನಡುವೆ ಸಮತೋಲನೆಗಳು ತಪ್ಪಿದಾಗ, ಕಾಯಿಲೆಗಳು ಬರುತ್ತವೆ ಎನ್ನುವ ಸಿದ್ಧಾಂತ) ನಿಯಂತ್ರಿಸುವುದರ ಬಗ್ಗೆ ಪ್ರಸ್ತಾಪಿಸಿದ.

ತೋ-ತ್ ಅಲ್ ಮುಮೇನಿನ್ ಎಂಬ ಗ್ರಂಥವನ್ನು ಬರೆದ. ಅದನ್ನು ಪರ್ಷಿಯನ್ ಅರಸ ಷಾ ಸುಲೇಮಾನನಿಗೆ (ಆಡಳಿತ 1666-1694) ಅರ್ಪಿಸಿದ.